Saturday 30 August 2014

metta sutta in kastnnada (the great sutta about purest universal love and meditation )


8. ಮೆತ್ತಾ ಸುತ್ತ
(ಸರ್ವ ಜೀವಿಗಳ ಬಗ್ಗೆ ಮೈತ್ರಿ ಅಭಿವೃದ್ಧಿಯು ಬ್ರಹ್ಮವಿಹಾರ ಎಂದೆನಿಸುತ್ತದೆ)
1. ಯಾರು ಕುಶಲ ಕಾರ್ಯಗಳಲ್ಲಿ ನಿಪುಣನೋ ಹಾಗು ಪರಮ ಶಾಂತಿಪದವನ್ನು ಅಪಾರ ಇಚ್ಛಿಸುವನೋ, ಆತನು ಸಮರ್ಥನೂ, ಋಜುವಂತನೂ, ಪರಮ ಪರಿಶುದ್ಧನೂ ಆಗಲಿ. ಆತನ ಮಾತು ಶ್ರೇಷ್ಠ ಸುಂದರವಾಗಲಿ. ಆತನು ಮೃದುವೂ, ವಿನೀತನೂ, ಗಾಂಭೀರ್ಯನೂ ಆಗಲಿ
.
2. ಆತನು ಸಂತೃಪ್ತಿ ಸಂತೋಷಿಯು, ಸುಲಭವಾಗಿ ಸಾಕಲ್ಪಡುವವನೂ ಆಗಲಿ, ಲೌಕಿಕತೆಯ ಅಲ್ಪ ಕಾರ್ಯವುಳ್ಳವನೂ, ಸರಳ ಜೀವಿಯೂ ಆಗಲಿ. ಶಾಂತೇಂದ್ರಿಯನೂ, ವಿಚಾರಶೀಲನೂ, ಲಜ್ಜೆಯುಳ್ಳವನೂ, ಕುಲಗಳಲ್ಲಿ ಅನಾಸಕ್ತನೂ ಆಗಲಿ.
3. ಅತಿ ಚಿಕ್ಕದಾದ ಕಾರ್ಯವೇ ಆಗಲಿ, ಜ್ಞಾನಿಗಳು ದೂಷಿಸುವಂತಹದ್ದಾಗಿದ್ದರೆ ಅದನ್ನು ಮಾಡದಿರಲಿ (ಈ ರೀತಿ ಮಹತ್ತಾಗಿ ಭಾವಿಸಲಿ). ಸುಖಿಯಾಗಿರಲಿ ಹಾಗು ಕ್ಷೇಮವಾಗಿರಲಿ ಸರ್ವಜೀವಿಗಳು, ಸರ್ವಜೀವಿಗಳು ಸುಖಕರವಾದ ಚಿತ್ತದಿಂದಿರಲಿ.
4-5. ಯಾವುದೇ ಪ್ರಕಾರದ ಜೀವಿಗಳು ಅವು ದುರ್ಬಲವಾಗಿರಲಿ ಅಥವಾ ಬಲಿಷ್ಠವಾಗಿರಲಿ, ಉದ್ದವಾಗಿಯೇ ಇರಲಿ, ಮಧ್ಯಮವಾಗಿರಲಿ ಅಥವಾ ಚಿಕ್ಕದಾಗಿಯೇ ಇರಲಿ, ಪುಟ್ಟದಾಗಿರಲಿ ಅಥವಾ ವಿಶಾಲವಾಗಿರಲಿ (ಅಣುವಾಗಿರಲಿ ಅಥವಾ ಸ್ಥೂಲವಾಗಿರಲಿ) ಕಾಣಿಸುವಂತಿರಲಿ ಅಥವಾ ಅದೃಶ್ಯವಾಗಿರಲಿ, ಹತ್ತಿರವೇ ವಾಸಿಸಲಿ ಅಥವಾ ದೂರವೇ ವಾಸಿಸಲಿ, ಹುಟ್ಟಿರುವುದಾಗಲಿ, ಮುಂದೆ ಹುಟ್ಟುವಂತದ್ದು ಆಗಿರಲಿ, ಸರ್ವ ಜೀವಿಗಳು ಸುಖಿಯಾಗಿರಲಿ.
6. ಯಾರೂ ಪರರಿಗೆ ವಂಚಿಸದಿರಲಿ ಯಾರೂ ಪರರನ್ನು ಕೀಳಾಗಿ ಕಾಣದಿರಲಿ (ಅಪಮಾನಿಸದಿರಲಿ), ಕೋಪದಿಂದಾಗಲಿ, ದ್ವೇಷದಿಂದಾಗಲಿ ಪರರ ದುಃಖವನ್ನು ಇಚ್ಛಿಸದಿರಲಿ.
7. ಮಹಾಮಾತೆಯೊಬ್ಬಳು ಯಾವರೀತಿ ತನ್ನ ಪ್ರಾಣವನ್ನು ಲೆಕ್ಕಿಸದೆ ತನ್ನ ಏಕೈಕ ಮಗುವನ್ನು (ಪುತ್ರನನ್ನು) ರಕ್ಷಿಸುವಳೋ, ಅದೇರೀತಿಯಾಗಿ ಸರ್ವ ಜೀವಿಗಳೂ ಅಪರಿಮಿತವಾದ, ಅಸೀಮವಾದ, ಅಗಾಧ ಹೃದಯದಿಂದ (ಕರುಣೆ) ಕೂಡಿರಲಿ.
8. ಎಲ್ಲಾ ತಡೆಗಳನ್ನು ಮೀರಿ, ದ್ವೇಷರಹಿತವಾಗಿ, ವಿರೋಧರಹಿತವಾಗಿ ತನ್ನ ಮಹಾನ್ ಮೈತ್ರಿಯ ಸಹೃದಯದಿಂದ ಮೇಲೆ, ಕೆಳಗೆ, ಸುತ್ತಲೂ ಇಡೀ ವಿಶ್ವಕ್ಕೆ ಕ್ಷೇಮ ಸುಖ ಭಾವವನ್ನು ಪ್ರಬಲವಾಗಿ ಪ್ರಸರಿಸಲಿ.
9. ಒಬ್ಬನು ನಿಂತಿರುವಾಗ, ನಡೆಯುತ್ತಿರುವಾಗ, ಕುಳಿತಿರುವಾಗ ಅಥವಾ ಮಲಗಿರುವಾಗ ಇದೇ ಪ್ರಕಾರದ ಶ್ರೇಷ್ಠ ಎಚ್ಚರಿಕೆಯಲ್ಲಿರಲಿ, ಇದನ್ನೇ ಬ್ರಹ್ಮವಿಹಾರ ಎನ್ನುತ್ತಾರೆ.
10. ಇಂತಹವನು ಮಿಥ್ಯಾದೃಷ್ಟಿಯನ್ನು ಮೀರಿ, ಶೀಲವಂತನಾಗಲಿ, ವಿಶುದ್ಧ ದರ್ಶನವುಳ್ಳವನಾಗಲಿ, ಹಾಗೆಯೇ ಕಾಮಗಳಲ್ಲಿ ಆಸಕ್ತಿರಹಿತನಾಗಿರುವವನು ಮತ್ತೆ ಗರ್ಭದಲ್ಲಿ ಜನ್ಮಿಸಲಾರ, ಮುಕ್ತನಾಗುತ್ತಾನೆ.
ಇಲ್ಲಿಗೆ ಮೆತ್ತಾ ಸುತ್ತ ಮುಗಿಯಿತು

No comments:

Post a Comment