Saturday 30 August 2014

AaLavaka sutta in kannada ( the Buddha tamed the powerful yakkha )


10. ಆಳವಕ ಸುತ್ತ
(ಬುದ್ಧರ ಮಹಿಮೆ)
ಹೀಗೆ ನಾನು ಕೇಳಿದ್ದೇನೆ. ಒಮ್ಮೆ ಭಗವಾನರು ಅಳವಿಯಲ್ಲಿ ಆಳವಕ ಯಕ್ಷನ ಭವನದಲ್ಲಿ ವಿಹರಿಸುತ್ತಿದ್ದರು. ಆಗ ಆಳವಕ ಯಕ್ಷನು ಎಲ್ಲಿ ಭಗವಾನರು ಇದ್ದರೋ ಅಲ್ಲಿಗೆ ಬಂದನು. ಬಂದು ಭಗವಾನರಿಗೆ ಹೀಗೆ ಹೇಳಿದನು- ಶ್ರಮಣ! ಹೊರಗೆ ಹೋಗು. ಒಳ್ಳೆಯದು ಆಯುಷ್ಮಂತನೇ ಎಂದು ಹೇಳಿ ಭಗವಾರು ಹೊರಗೆ ಬಂದರು. ಶ್ರಮಣ ಒಳಗೆ ಬಾ. ಒಳ್ಳೆಯದು ಆಯುಷ್ಮಂತನೇ ಎಂದು ಹೇಳಿ ಭಗವಾನರು ಒಳಬಂದರು.
ಎರಡನೆಯಬಾರಿ ಆಳವಕನು ಭಗವಾನರಿಗೆ ಮತ್ತೆ ಶ್ರಮಣ ಹೊರಗೆ ಹೋಗು ಎಂದನು. ಒಳ್ಳೆಯದು ಆಯುಷ್ಮಂತನೇ ಎಂದು ಹೇಳಿ ಭಗವಾರು ಹೊರಗೆ ಬಂದರು. ಶ್ರಮಣ ಒಳಗೆ ಬಾ. ಒಳ್ಳೆಯದು ಆಯುಷ್ಮಂತನೇ ಎಂದು ಹೇಳಿ ಭಗವಾನರು ಒಳಬಂದರು.
ಮೂರನೆಯಬಾರಿ ಆಳವಕನು ಭಗವಾನರಿಗೆ ಮತ್ತೆ ಶ್ರಮಣ ಹೊರಗೆ ಹೋಗು ಎಂದನು. ಒಳ್ಳೆಯದು ಆಯುಷ್ಮಂತನೇ ಎಂದು ಹೇಳಿ ಭಗವಾರು ಹೊರಗೆ ಬಂದರು. ಶ್ರಮಣ ಒಳಗೆ ಬಾ. ಒಳ್ಳೆಯದು ಆಯುಷ್ಮಂತನೇ ಎಂದು ಹೇಳಿ ಭಗವಾನರು ಒಳಬಂದರು.
ನಾಲ್ಕನೆಯಬಾರಿ ಆಳವಕನು ಭಗವಾನರಿಗೆ ಮತ್ತೆ ಶ್ರಮಣ ಹೊರಗೆ ಹೋಗು ಎಂದನು. ಆಗ ಭಗವಾನರು ಇಂತೆಂದರು : ಆಯುಷ್ಮಂತ ನಾನು ಹೊರಗೆ ಹೋಗುವುದಿಲ್ಲ, ನೀನು ಏನು ಮಾಡುತ್ತೀಯೋ ಮಾಡು.
ಆಳವಕನು ಶ್ರಮಣ ನಾನು ಪ್ರಶ್ನೆ ಕೇಳುತ್ತೇನೆ, ನೀನು ಉತ್ತರ ಹೇಳದಿದ್ದರೆ ನಿನ್ನ ಚಿತ್ತವನ್ನು ವಿಕ್ಷಿಪ್ತವನ್ನಾಗಿ ಮಾಡುವೆನು. ನಿನ್ನ ಹೃದಯವನ್ನು ಹರಿದು ಹಾಕುವೆನು. ಅಥವಾ ಕಾಲುಗಳನ್ನು ಹಿಡಿದು ಗಂಗಾತೀರಕ್ಕೆ ಎಸೆದುಬಿಡುವೆನು.
ಭಗವಾನರು ಆಯುಷ್ಮಂತನೇ ನಾನು ದೇವತಾ, ಮಾರ, ಬ್ರಹ್ಮ, ಶ್ರಮಣ ಹಾಗು ಬ್ರಾಹ್ಮಣ ಸಹಿತ, ದೇವ-ಮನುಷ್ಯರು ಇಡೀ ಲೋಕಗಳಲ್ಲಿ ಇಂಥಹ ಯಾರನ್ನೂ ನಾನು ಕಾಣುತ್ತಿಲ್ಲ, ಆತನಿಂದ ನನ್ನ ಚಿತ್ತವು ವಿಕ್ಷಿಪ್ತವಾಗುವಂತಹ, ಹೃದಯವನ್ನು ಸೀಳುವಂತಹ ಅಥವಾ ಕಾಲುಗಳನ್ನು ಹಿಡಿದು ಗಂಗಾತೀರಕ್ಕೆ ಎಸೆದುಬಿಡುವಂತಹ ಯಾರನ್ನೂ ಕಾಣುತ್ತಿಲ್ಲ. ಅಂತಹವರಾರು ಇಲ್ಲ. ಆದರೂ ನೀನು ಏನನ್ನು ಕೇಳಬಯಸುವೆಯೋ ಅದನ್ನು ಕೇಳು.
ಆಗ ಆಳವಕನು ಗಾಥೆಗಳಲ್ಲಿ ಈ ರೀತಿ ಕೇಳಿದನು-
1. ಆಳವಕ ಯಕ್ಷ - ಈ ಸಂಸಾರದಲ್ಲಿ ಪುರುಷನ ಯಾವ ಧನವು ಶ್ರೇಷ್ಠ? ಯಾವ ಅಭ್ಯಾಸವು ಸುಖದಾಯಕ ವಾಗಿರುತ್ತದೆ? ರಸಗಳಲ್ಲಿ ಯಾವ ರಸವು ಸ್ವಾದಿಷ್ಟಕರವಾಗಿರುತ್ತದೆ? ಯಾರ ಜೀವನವು ಶ್ರೇಷ್ಠವೆಂದು ಹೇಳಲ್ಪಡುತ್ತದೆ?
2. ಭಗವಾನರು - ಈ ಲೋಕದಲ್ಲಿ ಪುರುಷನ ಶ್ರದ್ಧಾ ಧನವೇ ಶ್ರೇಷ್ಠ. ಬಹಳ ವಿಧದಿಂದ ಅಭ್ಯಾಸ ಮಾಡಿದ ಧರ್ಮಪಾಲನೆಯೇ ಸುಖದಾಯಕ, ಸತ್ಯವೇ ರಸಗಳಲ್ಲಿ ಸ್ವಾದಿಷ್ಟಕರ. ಪ್ರಜ್ಞಾ ಜೀವಿಯ ಜೀವನವೇ ಶ್ರೇಷ್ಠವೆಂದು ಹೇಳಲ್ಪಡುತ್ತದೆ.
3. ಆಳವಕ ಯಕ್ಷ - ಮಾನವನು ಹೇಗೆ ಸಂಸಾರದ ಪ್ರವಾಹವನ್ನು ದಾಟುತ್ತಾನೆ? ಹೇಗೆ ಭವಸಾಗರವನ್ನು ಹಾರುತ್ತಾನೆ? ದುಃಖವನ್ನು ಮುಕ್ತಾಯ ಹೇಗೆ ಮಾಡುತ್ತಾನೆ? ಹಾಗು ಪರಿಶುದ್ಧ ಹೇಗೆ ಆಗುತ್ತಾನೆ?
4. ಭಗವಾನರು - ಮಾನವನು ಶ್ರದ್ಧೆಯಿಂದ ಸಂಸಾರದ ಪ್ರವಾಹ ದಾಟುತ್ತಾನೆ. (ಸಮ್ಯಸ್ಮೃತಿ) ಜಾಗರೂಕತೆಯಿಂದ ಭವಸಾಗರವನ್ನು ಹಾರುತ್ತಾನೆ. ಪ್ರಯತ್ನದಿಂದ ದುಃಖದ ಮುಕ್ತಾಯ ಮಾಡುತ್ತಾನೆ ಹಾಗು ಪ್ರಜ್ಞೆಯಿಂದ ಪುರುಷ ಪರಿಶುದ್ಧನಾಗುತ್ತಾನೆ.
5. ಆಳವಕ ಯಕ್ಷ - ಮಾನವ ಪ್ರಜ್ಞೆಯನ್ನು ಹೇಗೆ ಪ್ರಾಪ್ತಿಮಾಡುತ್ತಾನೆ? ಹೇಗೆ ಧನವನ್ನು ಗಳಿಸುತ್ತಾನೆ, ಯಶಸ್ಸನ್ನು ಹೇಗೆ ಪ್ರಾಪ್ತಿ ಮಾಡುತ್ತಾನೆ. ಮಿತ್ರರನ್ನು ಹೇಗೆ ಒಂದುಗೂಡಿಸಿ ಇಟ್ಟಿರುತ್ತಾನೆ? ಹೇಗೆ ಈ ಲೋಕದಿಂದ ಪರಲೋಕಕ್ಕೆ ಹೋದಮೇಲೆ ಶೋಕಪಡುವುದಿಲ್ಲ.
6. ಭಗವಾನರು - ನಿಬ್ಬಾಣ ಪ್ರಾಪ್ತಿಗಾಗಿ ಅರಹಂತರ ಧಮ್ಮದಲ್ಲಿ ಶ್ರದ್ಧೆಯಿಡುವ ಅಪ್ರಮಾದಿ ಹಾಗು ಚತುರ ವ್ಯಕ್ತಿ ಶ್ರದ್ಧಾಪೂರ್ವಕವಾಗಿ ಧಮ್ಮವನ್ನು ಕೇಳಿ ಪ್ರಜ್ಞೆ ಗಳಿಸುತ್ತಾನೆ.
7. ಉಚಿತ ಕಾರ್ಯಗಳನ್ನು ಮಾಡುವವನು, ಧೈರ್ಯವಂತನೂ ಹಾಗು ಪರಿಶ್ರಮವುಳ್ಳವನು ಧನ ಗಳಿಸುತ್ತಾನೆ. ಸತ್ಯದಿಂದ ಯಶಸ್ಸನ್ನು ಪ್ರಾಪ್ತಿಮಾಡುತ್ತಾನೆ ಹಾಗು ದಾನದಿಂದ ಮಿತ್ರರನ್ನೆಲ್ಲಾ ಒಂದುಗೂಡಿಸಿ ಇಟ್ಟಿರುತ್ತಾನೆ.
8. ಹೇಗೆ ಶ್ರದ್ಧೆಯುಳ್ಳ ಗೃಹಸ್ಥನಲ್ಲಿ ಸತ್ಯ, ಧರ್ಮ, ಧೈರ್ಯ ಹಾಗು ತ್ಯಾಗ ಈ ನಾಲ್ಕು ಇರುವವೋ ಆತನು ಈ ಲೋಕದಿಂದ ಪರಲೋಕಕ್ಕೆ ಹೋದಮೇಲೆ ಶೋಕಪಡುವುದಿಲ್ಲ.
9. ನೀನೇ ಅನ್ಯ ಶ್ರಮಣರಲ್ಲಿ ಹೋಗಿ ಕೇಳು. ಸತ್ಯ, ಧರ್ಮ, ತ್ಯಾಗ ಹಾಗು ಕ್ಷಾಂತಿಗಿಂತ (ಕ್ಷಮಾಯುತ ಸಹನೆ) ಹೆಚ್ಚಾಗಿ ಇನ್ನೂ ಯಾವುದಾದರೂ ಇದೆಯೇ ಎಂದು.
10. ಆಳವಕ ಯಕ್ಷ - ನಾನು ಈಗ ಆರ್ಯ ಶ್ರಮಣ ಬ್ರಾಹ್ಮಣರಲ್ಲಿ ಏಕೆ ಕೇಳಲಿ? ಇಂದು ನಾನು ಸ್ವಯಂ ತಮ್ಮಿಂದ ಪರಲೋಕದ ಅರ್ಥವನ್ನು ಅರಿತಿದ್ದೇನೆ.
11. ಅಹೋ! ನನ್ನ ಒಳ್ಳೆಯದಕ್ಕಾಗಿಯೇ ಬುದ್ಧ ಭಗವಾನರು ಆಳವಿಯಲ್ಲಿ ನನ್ನ ನಿವಾಸ ಸ್ಥಾನಕ್ಕೆ ಬಂದಿರುವನು. ನಾನು ಇಂದು ಇಲ್ಲಿ ತಮಗೆ ನೀಡುವುದರಿಂದ ಮಹಾ ಫಲವಿದೆ ಎಂದು ಅರಿತಿದ್ದೇನೆ.
12. ಇಂದಿನಿಂದ ನಾನು ಗ್ರಾಮದಿಂದ ಗ್ರಾಮಕ್ಕೆ ನಗರದಿಂದ ನಗರಕ್ಕೆ ಸಂಚರಿಸಿ, ಸಮ್ಯಕ್ ಸಂಬುದ್ಧರಿಗೆ ಹಾಗು ಧಮ್ಮದ ಸುಧರ್ಮತೆಗೆ ವಂದಿಸುತ್ತಾ ಸಂಚರಿಸುವೆನು.
ಹೀಗೆ ನುಡಿದ ನಂತರ ಆಳವಕನು ಭಗವಾನರೊಂದಿಗೆ ಹೀಗೆ ಹೇಳಿದನು- ನಿಜಕ್ಕೂ ಆಶ್ಚರ್ಯ ಗೋತಮರೆ ! ಆಶ್ಚರ್ಯವಾಯಿತು ! ಹೇಗೆಂದರೆ ತಲೆಕೆಳಗಿರುವ ಪಾತ್ರೆಯನ್ನು ಸರಿಯಾಗಿಸುವಂತೆ, ಮುಚ್ಚಿರುವುದನ್ನು ತೆಗೆದು ತೋರಿಸುವಂತೆ, ದಾರಿ ತಪ್ಪಿರುವವರಿಗೆ ದಾರಿ ತೋರಿಸುವಂತೆ, ಅಂಧಕಾರದಲ್ಲಿರುವವರಿಗೆ ದೀಪ ಪ್ರಕಾಶಿಸುವಂತೆ, ಯಾವುದರಿಂದ ಚಕ್ಷುಧಾರಿಗಳು ರೂಪಗಳನ್ನು (ವಸ್ತು) ನೋಡುವರೋ ಹಾಗೆಯೇ ಭಗವಾನ್ ಬುದ್ಧರಿಂದ ಅನೇಕ ರೀತಿಯಿಂದ ಧಮ್ಮವು ಪ್ರಕಾಶಿತವಾಯಿತು. ನಾನು ಇಂದಿನಿಂದ ಬುದ್ಧರ ಶರಣು ಹೋಗುತ್ತೇನೆ, ಧಮ್ಮ ಹಾಗು ಸಂಘಕ್ಕೂ ಶರಣು ಹೋಗುತ್ತೇನೆ. ನನಗೆ ಜೀವನಪರ್ಯಂತ ಉಪಾಸಕನಾಗಿ ಮಾಡಿಕೊಳ್ಳಿ ಭಗವಾನ್.
ಇಲ್ಲಿಗೆ ಆಳವಕ ಸುತ್ತ ಮುಗಿಯಿತು

No comments:

Post a Comment