Friday 15 August 2014

dhaniya sutta in kannada

. ಧನಿಯ ಸುತ್ತ
(ಈ ಸುತ್ತವನ್ನು ಭಗವಾನರು ವಿದೇಹ ರಾಷ್ಟ್ರದಲ್ಲಿರುವ ಪರ್ವತರಾಷ್ಟ್ರದ ಧರ್ಮಕೌಂಡಿನ್ಯ ನಗರದ ಶ್ರೇಷ್ಠಿ ಧನಿಯನಿಗೆ ಮಹಾನದಿಯ ದಡದಲ್ಲಿ ವರ್ಷಕಾಲದಲ್ಲಿ ಸಾಂಸಾರಿಕ ಆಸಕ್ತಿ ತ್ಯಜಿಸಲು ಉಪದೇಶಿಸಿದರು. ಅದನ್ನು ಆಲಿಸಿ ಧನಿಯ ತನ್ನ ಪತ್ನಿಸಹಿತ ಭಿಕ್ಷುವಾದನು ಹಾಗು ಅರಹತ್ವವನ್ನು ಸಾಕ್ಷಾತ್ಕರಿಸಿದನು. ಸಂಪೂರ್ಣ ಸುತ್ತವು ಈಗ ನಡೆದಂತಿದೆ.)
1. ಧನಿಯ ಗೊಲ್ಲ - ಅನ್ನವು ಸಿದ್ಧವಾಗಿದೆ, ನಾವು ಹಾಲನ್ನು ಸೇರಿಸಿದ್ದೇವೆ, ನಮ್ಮ ಪರಿಜನರ ಸಹಿತ ನಾನು ಮಹಾನದಿಯ ದಡದಲ್ಲಿ ವಾಸಿಸುತ್ತೇನೆ. ಮನೆಯು ಸಹಾ ಚೆನ್ನಾಗಿ ಶೋಭಿಸುತ್ತಿದೆ, ಬೆಂಕಿಯು ಉರಿಯುತ್ತಿದೆ. ಹೇ ವರುಣದೇವ, ನೀವು ಇಚ್ಛಿಸಿದರೆ ಸುರಿಸಿ.
2. ಭಗವಾನ್ ಬುದ್ಧ - ನಾನು ಕ್ರೋಧರಹಿತನಾಗಿದ್ದೇನೆ, ನನ್ನ ಚಿತ್ತದ ಮುಳ್ಳುಗಳು ತೆಗೆಯಲ್ಪಟ್ಟಿವೆ. ಈ ಮಹಾನದಿಯ ಹತ್ತಿರ ಒಂದು ರಾತ್ರಿ ವಾಸಿಸುತ್ತೇನೆ. ನನ್ನ ಕುಟೀರವು ತೆರೆದಿದೆ (ರಾಗ, ದ್ವೇಷ ಮೋಹದಿಂದ ಕೂಡಿದ), ಅಗ್ನಿಗಳು ಶಾಂತವಾಗಿದೆ. ಹೇ ವರುಣದೇವ, ನೀನು ಇಚ್ಛಿಸಿದರೆ ಸುರಿಸು.
3. ಧನಿಯ ಗೊಲ್ಲ - ಇಲ್ಲಿ ಸೊಳ್ಳೆಗಳಿಲ್ಲ, ನೆಲದಲ್ಲಿ ಸಿಗುವ ಹುಲ್ಲನ್ನು ಹಸುಗಳು ಮೇಯುತ್ತವೆ. ಬರುವ ಮಳೆಯನ್ನು ಸಹಿಸಿಕೊಳ್ಳತ್ತವೆ. ಹೇ ದೇವ, ನೀವು ಇಚ್ಛಿಸಿದರೆ ಸುರಿಸಿ.
4. ಭಗವಾನರು - ನಾನು ಒಂದು ಉತ್ಕೃಷ್ಟವಾದ ತೆಪ್ಪವನ್ನು ಸಿದ್ಧಪಡಿಸಿದ್ದೇನೆ, ಸಂಸಾರದ ಪ್ರವಾಹವನ್ನು ಈಜಿ ಪಾರಾಗಿದ್ದೇನೆ. ನನಗೀಗ ತೆಪ್ಪದ ಅವಶ್ಯಕತೆಯಿಲ್ಲ, ಹೇ ವರುಣದೇವ! ನೀನು ಇಚ್ಛಿಸಿದರೆ ಸುರಿಸು.
5. ದನಿಯ ಗೊಲ್ಲ - ನನ್ನ ಗೋಪಿಕೆಯು ಆಜ್ಞಾಕಾರಿಣಿ ಹಾಗು ಚಂಚಲರಹಿತಳಾಗಿದ್ದಾಳೆ. ಆಕೆಯು ದೀರ್ಘಕಾಲದಿಂದ ಪ್ರೇಮಯುತವಾಗಿ ಹೊಂದಿಕೊಂಡು ಬಾಳಿದ್ದಾಳೆ. ನಾನು ಆಕೆಯಲ್ಲಿ ಯಾವರೀತಿಯ ಪಾಪವನ್ನು ಕೇಳಿಲ್ಲ. ಹೇ ವರುಣದೇವ ನೀವು ಇಚ್ಛಿಸಿದರೆ ಸುರಿಸಿ.
6. ಭಗವಾನರು - ನನ್ನ ಚಿತ್ತವು ಪೂರ್ಣವಾಗಿ ನನ್ನ ವಶದಲ್ಲಿದೆ ಹಾಗು ವಿಮುಕ್ತವಾಗಿದೆ. ಅದು ದೀರ್ಘ ಕಾಲದಿಂದ ಸುರಕ್ಷಿತವಾಗಿ ಹಾಗು ದಮನಯುತವಾಗಿದೆ, ನನ್ನ ಆಂತರ್ಯದಲ್ಲಿ ಪಾಪವಿಲ್ಲ. ಹೇ ವರುಣದೇವ! ನೀನು ಇಚ್ಛಿಸಿದರೆ ಸುರಿಸು.
7. ದನಿಯ ಗೊಲ್ಲ - ನಾನು ಸ್ವಯಂ ದುಡಿದು ತಿನ್ನುತ್ತೇನೆ, ನನ್ನ ಪುತ್ರರು ಸಹಾ ಅನುಕೂಲಕರವಾಗಿದ್ದಾರೆ ಹಾಗು ನಿರೋಗಿಗಳಾಗಿದ್ದಾರೆ, ನಾನು ಅವರಲ್ಲಿ ಯಾವುದೇ ದೋಷ ಕೇಳಿಲ್ಲ. ಹೇ ವರುಣದೇವ ! ನೀವು ಇಚ್ಛಿಸಿದರೆ ಸುರಿಸಿ.
8. ಭಗವಾನರು - ನಾನು ಯಾರ ದಾಸನೂ ಅಲ್ಲ, ನನಗೆ ಯಾವುದೇ ವ್ಯಕ್ತಿಯ ಅವಶ್ಯಕತೆಯೂ ಇಲ್ಲ, ಹೇ ವರುಣದೇವ, ನೀನು ಇಚ್ಛಿಸಿದರೆ ಸುರಿಸು.
9. ಧನಿಯ ಗೊಲ್ಲ - ನನ್ನ ಹತ್ತಿರ ಕರುಗಳಿವೆ, ಹಾಲುಳ್ಳ ಹಸುಗಳಿವೆ, ಗಭರ್ಿಣಿ ಹಾಗು ತಾರುಣ್ಯವುಳ್ಳ ಹಸುಗಳಿವೆ, ಹಸುಗಳ ಪತಿ ವೃಷಭನು ಇದ್ದಾನೆ. ಹೇ ವರುಣದೇವ. ನೀವು ಇಚ್ಛಿಸಿದರೆ ಸುರಿಸಿ.
10. ಭಗವಾನರು - ನನ್ನ ಹತ್ತಿರ ಕರುಗಳಿಲ್ಲ, ಅತಿ ಹಾಲುಳ್ಳ ಹಸುಗಳೂ ಇಲ್ಲ, ತಾರುಣ್ಯ ಹಾಗು ಗರ್ಭವತಿಯಾದ ಹಸುಗಳೂ ಇಲ್ಲ, ಹಸುಗಳ ಪತಿ ವೃಷಭನೂ ಇಲ್ಲ. ಹೇ ವರುಣದೇವ! ನೀನು ಇಚ್ಛಿಸಿದರೆ ಸುರಿಸು.
11. ದನಿಯ ಗೊಲ್ಲ - ಅಚಲವಾದ ಹುಲ್ಲಿನ ಮೈದಾನವಿದೆ, ಮುಂಜಾಹುಲ್ಲಿನ ಹಗ್ಗಗಳಿವೆ, ಅದನ್ನು ತರುಣ ಕರುಗಳು ಸಹಾ ಮುರಿಯಲಾರವು. ಹೇ ವರುಣದೇವಾ, ನೀವು ಇಚ್ಛಿಸಿದರೆ ಸುರಿಸಿ.
12. ಭಗವಾನರು - ಮಹಾಗೂಳಿಯ ರೀತಿ ಬಂಧನಗಳನ್ನು ಕತ್ತರಿಸಿ, ಸಲಗದ ರೀತಿ ಪೂತಿಲತೆಯನ್ನು ನಷ್ಟಮಾಡಿ, ನಾನು ಮತ್ತೆ ಜನ್ಮ ಪಡೆಯಲಾರೆ. ಹೇ ವರುಣದೇವ ನೀನು ಇಚ್ಛಿಸಿದರೆ ಸುರಿಸು.
13. ಅದೇ ಕ್ಷಣದಲ್ಲಿ ಹಳ್ಳ-ಕೊಳ್ಳದ ಭೂಮಿಯನ್ನು ತುಂಬುವ ಹಾದಿಯಲ್ಲಿ ಮಳೆಯು ಸುರಿಯಿತು. ಸುರಿಯುತ್ತಿರುವ ಮಳೆ ಹಾಗು ಮೇಘ ಘರ್ಜನೆಯನ್ನು ಕೇಳಿ ಧನಿಯನು ಈ ಮಾತನ್ನು ಹೇಳಿದನು-
14. ಅಹೋ ನಮಗೆ ಬಹಳ ಲಾಭವಾಯಿತು. ಏಕೆಂದರೆ ನಾವು ಭಗವಾನರನ್ನು ದಶರ್ಿಸುತ್ತಿದ್ದೇವೆ. ನಾವು ಚಕ್ಷುವಂತರ ಶರಣು ಹೋಗುತ್ತೇವೆ. ಹೇ ಮಹಾಮುನಿ! ತಾವು ನಮ್ಮ ಶಾಸ್ತರಾಗಿದ್ದೀರಿ.
15. ನಾನು ಹಾಗು ನನ್ನ ಅಜ್ಜಾಕಾರಿಣಿ ಗೋಪಿಕೆ ಬುದ್ಧರ ಧಮ್ಮವನ್ನು ಪಾಲಿಸುತ್ತೇವೆ ಹಾಗು ಜನನ ಹಾಗು ಮೃತ್ಯುವನ್ನು ದಾಟಿ ದುಃಖವನ್ನು ಅಂತ್ಯಮಾಡುವವರಾಗುತ್ತೇವೆ.
16. ಮಾರ - ಪುತ್ರರಿಂದ ಕೂಡಿರುವವನು ಪುತ್ರರಿಂದ ಆನಂದಿತನಾಗುತ್ತಾನೆ, ಅದರಂತೆಯೇ ಗೊಲ್ಲನು ಹಸುಗಳಿಂದ ಆನಂದಿತನಾಗುತ್ತಾನೆ. ವಿಷಯ ಭೋಗವೇ ಮನುಷ್ಯನ ಆನಂದದ ಕಾರಣವಾಗಿದೆ, ಯಾರು ವಿಷಯ ಭೋಗರಹಿತರೋ ಅವರು ಎಂದಿಗೂ ಆನಂದಿತರಲ್ಲ.
17. ಭಗವಾನರು - ಪುತ್ರರನ್ನು ಹೊಂದಿರುವವನು ಪುತ್ರರಿಂದ ಶೋಕಿಸುತ್ತಾನೆ. ಅದರಂತೆಯೇ ಗೊಲ್ಲನು ಗೋವುಗಳಿಂದ ಶೋಕಿಸುತ್ತಾನೆ. ವಿಷಯ ಭೋಗವೇ ಶೋಕದ ಕಾರಣವಾಗಿದೆ. ಯಾರು ವಿಷಯ ಭೋಗದಿಂದ ಮುಕ್ತನೋ ಅವನು ಎಂದಿಗೂ ಶೋಕಿಸುವುದಿಲ್ಲ.
ಇಲ್ಲಿಗೆ ಧನಿಯ ಸುತ್ತ ಮುಗಿಯಿತು

No comments:

Post a Comment