Friday, 15 August 2014

khagga visaana sutta in kannada

ಖಗ್ಗವಿಸಾಣ ಸುತ್ತ
(ಈ ಸುತ್ತದಲ್ಲಿ ಏಕಾಂಗಿಯಾಗಿ ಸಂಚರಿಸುವುದರ ಮಹತ್ವವನ್ನು ಹೇಳಲಾಗಿದೆ.)
1. ಸರ್ವ ಜೀವಿಗಳ ಹಿತಕ್ಕಾಗಿ ದಂಡಶಸ್ತ್ರಗಳನ್ನು ತ್ಯಜಿಸಿ, ಜೀವಿಗಳಲ್ಲಿ ಒಂದನ್ನು ಸಹಾ ಪೀಡಿಸದೆ ಪುತ್ರರ ಇಚ್ಛೆಯಿಲ್ಲದೆ, ನಿಷ್ಕಾಮನಾಗು, ಮತ್ತೆ ಸಂಗಾತಿಯ ಬಗ್ಗೆ ಏನು ಹೇಳುವುದು? ಖಡ್ಗಮೃಗದ ರೀತಿ ಏಕಾಂಗಿಯಾಗಿ ಸಂಚರಿಸು.
2. ಸಂಸರ್ಗದಿಂದ ಇರುವವನಿಗೆ ಸ್ನೇಹ ಉತ್ಪನ್ನವಾಗುವುದು. ಸ್ನೇಹದ ಕಾರಣದಿಂದ ದುಃಖ ಉತ್ಪತ್ತಿಯಾಗುವುದು. ಆದ್ದರಿಂದ ಸ್ನೇಹದ ದುಷ್ಪರಿಣಾಮಗಳನ್ನು ಅರಿತು ಖಡ್ಗಮೃಗದ ರೀತಿ ಏಕಾಂಗಿಯಾಗಿ ಸಂಚರಿಸು.
3. ಆಸಕ್ತಚಿತ್ತನಾದ ವ್ಯಕ್ತಿಯು ಮಿತ್ರರಲ್ಲಿ ಹಾಗು ಸೋದರ ಬಾಂಧವರಲ್ಲಿ ಅನುಕಂಪಪಡುತ್ತಾ, ತನ್ನ ಹಿತಾರ್ಥವನ್ನು ಕಳೆದುಕೊಳ್ಳುತ್ತಾನೆ. ಬೆರೆಯುವುದರಿಂದಾಗುವ ಈ ಅಪಾಯ ಅರಿತು ಖಡ್ಗಮೃಗದ ರೀತಿ ಏಕಾಂಗಿಯಾಗಿ ಸಂಚರಿಸು.
4. ಸ್ತ್ರೀ ಪುತ್ರರ ಪ್ರತಿಯಾಗಿ ಯಾವ ಆಸಕ್ತಿ ಇರುತ್ತದೆಯೋ ಅದು ವಿಶಾಲವಾಗಿ ಹರಡಿರುವ ಬಿದಿರಿನಂತಿರುತ್ತದೆ. ಬಿದಿರಿನ ಬೊಂಬು ಯಾವುದಕ್ಕೂ ಅಂಟದಿರುವುದನ್ನು ಕಂಡು ಖಡ್ಗಮೃಗದ ರೀತಿ ಏಕಾಂಗಿಯಾಗಿ ಸಂಚರಿಸು.
5. ಕಾಡಿನಲ್ಲಿ ಬಂಧನವಿಲ್ಲದಿರುವ ಮೃಗವು ಆಹಾರಕ್ಕಾಗಿ ಇಚ್ಛೆಬಂದಲ್ಲಿ ಹೋಗುತ್ತದೆ. ಆದ್ದರಿಂದ ಬುದ್ಧಿವಂತನು ಸ್ವತಂತ್ರತೆಯ ಲಾಭ ಅರಿತು ಖಡ್ಗಮೃಗದ ರೀತಿ ಏಕಾಂಗಿಯಾಗಿ ಸಂಚರಿಸು.
6. ಎಲ್ಲಾದರೂ ನಿವಾಸಿಸಬೇಕಾದರೆ ಅಥವಾ ಒಂದುಕಡೆ ಇರಬೇಕಾದರೆ, ನಡೆದು ಹಾಗು ಯಾತ್ರೆ ಮಾಡುವುದರಿಂದ ಮಿತ್ರರೊಂದಿಗೆ ವಿಚಾರಣೆ ಮಾಡಬೇಕಾಗುತ್ತದೆ. ಆದ್ದರಿಂದ ವಿಚಾರಣೆಯ ಅನಾವಶ್ಯಕತೆ ಅರಿತು ಸ್ವತಂತ್ರವಾಗಿ ಖಡ್ಗಮೃಗದ ರೀತಿ ಏಕಾಂಗಿಯಾಗಿ ಸಂಚರಿಸು.
7. ಸ್ನೇಹಿತರ ಮಧ್ಯೆ ಕ್ರೀಡೆ ಹಾಗು ಆನಂದಿಸುವಿಕೆ ಇರುತ್ತದೆ. ಸ್ತ್ರೀ ಪುತ್ರರೊಂದಿಗೆ ಅಧಿಕ ಪ್ರೇಮವಿರುತ್ತದೆ. ಆದರೆ ಪ್ರಿಯರ ವಿಯೋಗದ ಶೋಕ ಅರಿತು ಅದರಿಂದ ವಿರಾಗ ಹೊಂದಿ ಖಡ್ಗಮೃಗದ ರೀತಿ ಏಕಾಂಗಿಯಾಗಿ ಸಂಚರಿಸು.
8. ಏನು ಸಿಕ್ಕರೂ ಅಷ್ಟರಲ್ಲೇ ಸಂತೃಪ್ತಿ ಹೊಂದುವವನು ನಾಲ್ಕು ದಿಕ್ಕುಗಳಲ್ಲೂ ನಿರ್ಭಯನಾಗಿರುತ್ತಾನೆ. ಸರ್ವ ವಿಘ್ನಗಳನ್ನು-ಕಷ್ಟಗಳನ್ನು ಸಹಿಸುವನು ಹಾಗು ಧೈರ್ಯವಂತನಾಗು. ಹೀಗೆಯೇ ಖಡ್ಗಮೃಗದ ರೀತಿ ಏಕಾಂಗಿಯಾಗಿ ಸಂಚರಿಸು.
9. ಕೆಲವು ಪ್ರವಜರ್ಿತರು ಸಂತುಷ್ಠರಾಗಿರುವುದಿಲ್ಲ. ಕೆಲವು ಗೃಹಸ್ಥರು ಸಹಾ ಹೀಗಿರುತ್ತಾರೆ. ಇಬ್ಬರಲ್ಲಿಯೂ ಅನಾಸಕ್ತನಾಗಿ ಖಡ್ಗಮೃಗದ ರೀತಿ ಏಕಾಂಗಿಯಾಗಿ ಸಂಚರಿಸು.
10. ಗೃಹಸ್ಥನ ವೇಷಭೂಷಣವನ್ನು ತೆಗೆದು, ಹೇಗೆ ಕೋವಿಲಾರದ ವೃಕ್ಷವು ಎಲೆರಹಿತವಾಗುವುದೋ ಹಾಗೆ ಗೃಹಸ್ಥ ಜೀವನದ ಬಂಧನಗಳನ್ನು ಮುರಿದು ಖಡ್ಗಮೃಗದ ರೀತಿ ಏಕಾಂಗಿಯಾಗಿ ಸಂಚರಿಸು.
11. ಒಂದುವೇಳೆ ಸಹೃದಯ ಜ್ಞಾನಿಯಾದ ಮಿತ್ರನು ದೊರೆತರೆ ಸರ್ವ ವಿಘ್ನಗಳನ್ನು ಮೀರಿ ಅವನ ಜೊತೆ ಪ್ರಸನ್ನತೆಯಿಂದ, ಎಚ್ಚರಿಕೆಯಿಂದ ಜೀವಿಸು, ಸಂಚರಿಸು.
12. ಒಂದುವೇಳೆ ಸಂಚರಿಸುವಂತಹ ಸಹೃದಯಿ ಜ್ಞಾನಿ ಮಿತ್ರನು ದೊರೆಯದಿದ್ದರೆ ರಾಜನು ಪರಾಜಿತ ರಾಜ್ಯವನ್ನು ತ್ಯಜಿಸುವಂತೆ, ಖಡ್ಗಮೃಗದ ರೀತಿ ಏಕಾಂಗಿಯಾಗಿ ಸಂಚರಿಸು.
13. ನಾವು ನಿದರ್ಿಷ್ಟವಾದ ರೀತಿಯಲ್ಲಿ ಬಹಳ ಮಿತ್ರರನ್ನು ಹೊಂದಿರುವುದಕ್ಕೆ ಪ್ರಶಂಶಿಸುತ್ತೇವೆ. ಆದರೆ ತನಗಿಂತ ಶ್ರೇಷ್ಠ ಅಥವಾ ಸಮಾನರೊಡನೆ ಮಿತ್ರತ್ವ ಮಾಡಬೇಕು. ಆ ರೀತಿ ದೊರೆಯದಿದ್ದರೆ ಖಡ್ಗಮೃಗದ ರೀತಿ ಏಕಾಂಗಿಯಾಗಿ ಸಂಚರಿಸಲಿ.
14. ಅಕ್ಕಸಾಲಿಗನಿಂದ ನಿಮರ್ಿತವಾದ ಹೊಳೆಯುವ ಆಭೂಷಣಗಳು ಎರಡು ಕೈಗಳಲ್ಲಿ ಒಂದಕ್ಕೊಂದು ತಾಗಿ ಶಬ್ದ ಮಾಡುವುದನ್ನು ಕಂಡು ಖಡ್ಗಮೃಗದ ರೀತಿ ಏಕಾಂಗಿಯಾಗಿ ಸಂಚರಿಸು.
15. ಈ ರೀತಿಯಾಗಿ ಇನ್ನೊಬ್ಬರಲ್ಲಿ ಮಾತುಕತೆ ಅಥವಾ ಆಸಕ್ತಿ ಉಂಟಾಗುವುದನ್ನು ಕಂಡು, ಭವಿಷ್ಯದ ಅಪಾಯ ಅರಿತು ಖಡ್ಗಮೃಗದ ರೀತಿ ಏಕಾಂಗಿಯಾಗಿ ಸಂಚರಿಸು.
16. ಸಂಸಾರದ ಕಾಮಭೋಗಗಳು ವಿಚಿತ್ರ, ಮಧುರ ಹಾಗು ಮನೋಹರವಾಗಿದೆ. ಅವು ನಾನಾರೀತಿಯಿಂದ ಚಿತ್ತವನ್ನು ಚಂಚಲಗೊಳಿಸುತ್ತದೆ. ಕಾಮಭೋಗದ ಅಪಾಯವನ್ನು ಅರಿತು ಖಡ್ಗಮೃಗದ ರೀತಿ ಏಕಾಂಗಿಯಾಗಿ ಸಂಚರಿಸು.
17. ಇದು ಮಹಾವಿಪತ್ತಿದಾಯಕ, ಹುಣ್ಣು, ಉಪದ್ರವ, ರೋಗ, ಮುಳ್ಳು ಹಾಗು ಅಪಾಯಕಾರಿ. ಕಾಮಬೋಗದಲ್ಲಿರುವ ಇಂತಹ ಅಪಾಯವನ್ನು ಕಂಡು ಖಡ್ಗಮೃಗದ ರೀತಿ ಏಕಾಂಗಿಯಾಗಿ ಸಂಚರಿಸು.
18. ಶೀತ ಹಾಗು ಉಷ್ಣ, ಹಸಿವು ಬಾಯಾರಿಕೆ, ಚಳಿ-ಬಿಸಿಲು, ಸೊಳ್ಳೆ ಹಾಗು ಸರ್ಪ ಇವೆಲ್ಲವನ್ನು ಸಹಿಸುತ್ತಾ ಖಡ್ಗಮೃಗದ ರೀತಿ ಏಕಾಂಗಿಯಾಗಿ ಸಂಚರಿಸು.
19. ಹೇಗೆ ಪದ್ಮಕುಲದಲ್ಲಿ ಜನಿಸಿದ ಗಜರಾಜನು ತನ್ನ ದಳವನ್ನು ತ್ಯಜಿಸಿ ಇಚ್ಛೆಯಾನುಸಾರವಾಗಿ ಅರಣ್ಯದಲ್ಲಿ ವಿಹರಿಸುವನೋ ಅದೇರೀತಿಯಾಗಿ ಖಡ್ಗಮೃಗದ ರೀತಿ ಏಕಾಂಗಿಯಾಗಿ ಸಂಚರಿಸು.
20. ಭಗವಾನ ಬುದ್ಧರ ಸತ್ಯವಾಣಿ ಆಲಿಸು ಗುಂಪಿನಲ್ಲಿರುವವನಿಗೆ ಪೂರ್ಣ ವಿಮುಕ್ತಿ ಅಸಂಭವ ಇದನ್ನು ಅರಿತು ಖಡ್ಗಮೃಗದ ರೀತಿ ಏಕಾಂಗಿಯಾಗಿ ಸಂಚರಿಸು.
21. ನಾನು ಮಿಥ್ಯಾದೃಷ್ಟಿಗಳನ್ನು ಮೀರಿಹೋಗಿದ್ದೇನೆ. ನಾನು ಗುರಿಯನ್ನು ಪ್ರಾಪ್ತಿ ಮಾಡಿದ್ದೇನೆ, ಮಾರ್ಗವನ್ನು ಕ್ರಮಿಸಿದ್ದೇನೆ. ಜ್ಞಾನೋದಯವಾಗಿದೆ. ನನಗೆ ಪರರ ಸಹಾಯತೆ ಅನಾವಶ್ಯಕ. ಆದ್ದರಿಂದ ಖಡ್ಗಮೃಗದ ರೀತಿ ಏಕಾಂಗಿಯಾಗಿ ಸಂಚರಿಸು.
22. ಲೋಭ, ಮೋಸ, ತೃಷ್ಣ, ಬಾಯಾರಿಕೆ, ಚಿತ್ತಮಲಿನತೆ ಹಾಗು ಮೋಹದಿಂದ ರಹಿತನಾಗು. ಯಾವುದೇ ಪ್ರಕಾರದ ಇಚ್ಛೆ ಮಾಡದೆ ಸಂಸಾರದ ಸರ್ವ ಆಸಕ್ತಿಯನ್ನು ತ್ಯಜಿಸಿ ಖಡ್ಗಮೃಗದ ರೀತಿ ಏಕಾಂಗಿಯಾಗಿ ಸಂಚರಿಸು.
23. ಅನರ್ಥವನ್ನು ಬಯಸುವುದು, ಕೆಟ್ಟ ಕಾರ್ಯಗಳಲ್ಲಿ ಮಗ್ನವಾಗುವುದು, ಕೆಟ್ಟ ಮಿತ್ರರೊಂದಿಗೆ ಕೂಡಿರುವುದು ಇವೆಲ್ಲವನ್ನು ತ್ಯಜಿಸಿ ಖಡ್ಗಮೃಗದ ರೀತಿ ಏಕಾಂಗಿಯಾಗಿ ಸಂಚರಿಸಿ.
24. ಬಹುಶೃತ, ಧರ್ಮದರ, ಉದಾರಿ ಹಾಗು ಪ್ರತಿಭಾವಂತ ಮಿತ್ರನ ಜೊತೆ ಸೇರು. ಅರ್ಥವನ್ನು ಅರಿತುಕೋ, ಸಂದೇಹವನ್ನು ದೂರೀಕರಿಸಿ, ಖಡ್ಗಮೃಗದ ರೀತಿ ಏಕಾಂಗಿಯಾಗಿ ಸಂಚರಿಸು.
25. ಕ್ರೀಡೆ, ರತಿ ಹಾಗು ಸಾಂಸಾರಿಕ ಕಾಮಸುಖಗಳನ್ನು ಇಚ್ಛಿಸದೆ, ಅದರ ಪ್ರತಿ ಅನಾಸಕ್ತನಾಗಿ ಶೃಂಗಾರ ವಸ್ತುಗಳಿಂದ ವಿರತನಾಗಿ ಸತ್ಯಸಂಧನಾಗು, ನಂತರ ಖಡ್ಗಮೃಗದ ರೀತಿ ಏಕಾಂಗಿಯಾಗಿ ಸಂಚರಿಸು.
26. ಪುತ್ರ, ಸ್ತ್ರೀ, ಪಿತ, ಮಾತ, ಧನ, ಧಾನ್ಯ ಹಾಗು ಬಂಧುಗಳ ಜೊತೆಗೆ ಸರ್ವ ಕಾಮಭೋಗವನ್ನು ವಜರ್ಿಸಿ ಖಡ್ಗಮೃಗದ ರೀತಿ ಏಕಾಂಗಿಯಾಗಿ ಸಂಚರಿಸು.
27. ಇದು ಬಂಧನಕಾರಿ, ಇದರಲ್ಲಿ ಅಲ್ಪಸುಖವಿದೆ. ಇದರಲ್ಲಿ ಅತ್ಯಲ್ಪ ಸ್ವಾದವಿದೆ ಹಾಗು ದುಃಖ ಅಪಾರವಿದೆ. ಬುದ್ಧಿವಂತ ಪುರುಷ ಇದು ಹುಣ್ಣು ಎಂದು ಅರಿತು ಖಡ್ಗಮೃಗದ ರೀತಿ ಏಕಾಂಗಿಯಾಗಿ ಸಂಚರಿಸುತ್ತಾನೆ.
28. ಯಾವರೀತಿ ಮೀನು ಜಾಲವನ್ನು ಛೇದಿಸಿ ಹೊರಬರುವುದೋ, ಅದೇರೀತಿ ಬಂಧನಗಳನ್ನು ನಷ್ಟಮಾಡಿ, ನಿಲ್ಲದ ಅಭಂಗ ಅಗ್ನಿಯಾಗಿ ಸರ್ವ ಬಂಧನಗಳನ್ನು ಸುಟ್ಟು (ಕತ್ತರಿಸಿ) ಖಡ್ಗಮೃಗದ ರೀತಿ ಏಕಾಂಗಿಯಾಗಿ ಸಂಚರಿಸು.
29. ನಯನಗಳನ್ನು ಕೆಳಗೆ ನೆಟ್ಟು, ವೇಗವಾಗಿ ನಡಿಯದ, ಇಂದ್ರಿಯಗಳನ್ನು ಸಂಯಮಗೊಳಿಸಿದ ಮನವನ್ನು ವಶಗೊಳಿಸಿರುವ, ತೀವ್ರ ಬಯಕೆ ಹಾಗು ಕಾಮ ವಾಸನೆಯಿಂದ ದೂರಾಗಿ ಖಡ್ಗಮೃಗದ ರೀತಿ ಏಕಾಂಗಿಯಾಗಿ ಸಂಚರಿಸು.
30. ಎಲೆರಹಿತ ಪಾರಿಜಾತ ವೃಕ್ಷದ ರೀತಿ ಗೃಹಸ್ಥ ವೇಷಭೂಷಣವನ್ನು ವಜರ್ಿಸಿ, ಕಾಷಾಯ ವಸ್ತ್ರಧಾರಿಯಾಗು, ಗೃಹ ತ್ಯಜಿಸಿ ಖಡ್ಗಮೃಗದಂತೆ ಏಕಾಂಗಿಯಾಗಿ ಸಂಚರಿಸು.
31. ನಾಲಿಗೆಯಲ್ಲಿ ರಸತೃಷ್ಣೆಯಿಲ್ಲದೆ, ಲೋಭರಹಿತನಾಗಿ, ಚಂಚಲತೆಯಿಲ್ಲದೆ, ಪರರನ್ನು ಪೋಷಿಸದಿರುವ, ಮನೆ ಮನೆಗಳಲ್ಲಿ ಭಿಕ್ಷಾಟನೆ ಮಾಡುವವ, ಯಾವ ಕುಲದಲ್ಲಿಯೂ ಆಸಕ್ತಿ ತಾಳದ ಅವನು, ಖಡ್ಗಮೃಗದ ರೀತಿ ಏಕಾಂಗಿಯಾಗಿ ಸಂಚರಿಸಲಿ.
32. ಚಿತ್ತದ ಐದು ತಡೆಗಳನ್ನು ತ್ಯಜಿಸಿ ಚಿತ್ತದಿಂದ ಉಪಕ್ಲೇಶಗಳು ದೂರವಾಗಿ ಅನಾಸಕ್ತನಾಗಲಿ, ಸ್ನೇಹವನ್ನು (ಅಂಟುವಿಕೆ) ಬಿಟ್ಟು ಖಡ್ಗಮೃಗದ ರೀತಿ ಏಕಾಂಗಿಯಾಗಿ ಸಂಚರಿಸಲಿ.
33. ಸುಖ ಹಾಗು ದುಃಖಗಳನ್ನು ತ್ಯಾಗಮಾಡಿ, ಮೊದಲೇ ಸೋಮನಸ್ಸು ಹಾಗು ದೋಮನಸ್ಸುಗಳನ್ನು ದೂರಮಾಡಿ, ವಿಶುದ್ಧವಾದ ಸಮಚಿತ್ತತೆಯ (ಶಾಂತಿ) ಶ್ರೇಷ್ಠ ಸಮಾಧಿಯನ್ನು ಪ್ರಾಪ್ತಿಮಾಡಿ ಖಡ್ಗಮೃಗದ ರೀತಿ ಏಕಾಂಗಿಯಾಗಿ ಸಂಚರಿಸು.
34. ಪರಮಾರ್ಥದ ಪ್ರಾಪ್ತಿಗಾಗಿ ಸತತ ಪ್ರಯತ್ನಶೀಲನಾಗು, ಜಾಗರೂಕನಾಗು, ಆಲಸ್ಯವನ್ನು ತ್ಯಜಿಸು, ದೃಢಸಂಕಲ್ಪ ತಾಳು, ಸ್ಥೈರ್ಯ ಹಾಗು ಬಲದಿಂದ ಖಡ್ಗಮೃಗದ ರೀತಿ ಏಕಾಂಗಿಯಾಗಿ ಸಂಚರಿಸು.
35. ಸಮಾಧಿಸ್ಥನಾಗು, ಧ್ಯಾನದಲ್ಲಿ ತಲ್ಲೀನನಾಗು, ನಿತ್ಯವು ಧರ್ಮಕ್ಕೆ ಅನುಸಾರವಾಗಿ ನಡೆ, ಸಂಸಾರದ ದುಷ್ಪರಿಣಾಮಗಳನ್ನು ಮನನ ಮಾಡುತ್ತಾ ಖಡ್ಗಮೃಗದ ರೀತಿ ಏಕಾಂಗಿಯಾಗಿ ಸಂಚರಿಸು.
36. ತೀವ್ರ ಬಯಕೆಯನ್ನು ಕ್ಷಯಿಸು, ಎಚ್ಚರಿಕೆಯಿಂದಿರು, ಧ್ಯಾನ ನೈಪುಣ್ಯನಾಗು, ಶೃತವಂತನಾಗು ಹಾಗು ಜಾಗರೂಕನಾಗಿ ಧರ್ಮವನ್ನು ಅರಿತುಕೋ, ತಪಸ್ಸಿನಲ್ಲಿ ನಿರತನಾಗು, ಖಡ್ಗಮೃಗದ ರೀತಿ ಏಕಾಂಗಿಯಾಗಿ ಸಂಚರಿಸು.
37. ಶಬ್ದಕ್ಕೆ ಹೆದರದ ಸಿಂಹದ ಸಮಾನನಾಗು, ವಾಯುವಿನಂತೆ ಬಲೆಯಲ್ಲಿ ಬೀಳದಿರುವನಾಗು, ಜಲದಿಂದ ಲಿಪ್ತವಾಗದ ಕಮಲದ ಸಮಾನನಾಗು, ಖಡ್ಗಮೃಗದಂತೆ ಏಕಾಂಗಿಯಾಗಿ ಸಂಚರಿಸು.
38. ಹೇಗೆ ಸಶಕ್ತ ಮೃಗರಾಜ ಸಿಂಹ ಸರ್ವ ಪ್ರಾಣಿಗಳನ್ನು ದಮನಮಾಡಿ ಇರುತ್ತದೋ, ಹಾಗೆಯೇ ಏಕಾಂತದ ಶಯನಾಸನವನ್ನು ಸೇವಿಸಲಿ ಹಾಗು ಖಡ್ಗಮೃಗದಂತೆ ಏಕಾಂಗಿಯಾಗಿ ಸಂಚರಿಸಲಿ.
39. ಸಮಯಕ್ಕೆ ಅನುಸಾರವಾಗಿ ಮೈತ್ರಿ, ಕರುಣಾ, ಮುದಿತಾ, ಉಪೇಕ್ಷಾ ಹಾಗು ವಿಮುಕ್ತಿಯ ಧ್ಯಾನ ಅಭ್ಯಾಸವನ್ನು ಮಾಡು, ಸರ್ವ ಸಂಸಾರದ ಮೇಲೆ ವಿರೋಧಭಾವ ತಾಳದೆ, ಖಡ್ಗಮೃಗದಂತೆ ಏಕಾಂಗಿಯಾಗಿ ಸಂಚರಿಸು.
40. ರಾಗ, ದ್ವೇಷ ಹಾಗು ಮೋಹವನ್ನು ತ್ಯಾಗಮಾಡು, ಬಂಧನಗಳನ್ನು ನಷ್ಟಮಾಡು, ಮೃತ್ಯುವಿಗೂ ಹೆದರದೆ, ಖಡ್ಗಮೃಗದಂತೆ ಏಕಾಂಗಿಯಾಗಿ ಸಂಚರಿಸು.
41. ಜನರು ಸ್ವಾರ್ಥಕ್ಕಾಗಿ ಸ್ನೇಹ ಮಾಡುವರು (ಸಂಗಡ ಇರುವರು), ನಿಸ್ವಾರ್ಥ ಮಿತ್ರರು ದುರ್ಲಭ, ಬಹುಪಾಲು ಮಾನವರು ಸ್ವಾರ್ಥ ಹಾಗು ಕೆಟ್ಟ ಸ್ವಭಾವದವರಾಗಿದ್ದಾರೆ. ಆದ್ದರಿಂದ ಖಡ್ಗಮೃಗದ ರೀತಿ ಏಕಾಂಗಿಯಾಗಿ ಸಂಚರಿಸು.
ಇಲ್ಲಿಗೆ ಖಗ್ಗವಿಸಾಣ ಸುತ್ತ ಮುಗಿಯಿತು.

No comments:

Post a Comment