Saturday 30 August 2014

vasala sutta in kannada (the discussion about who is mean fellow)



7. ವಸಲ ಸುತ್ತ
(ವಸಲ (ನೀಚ) ಯಾರು?)
ನಾನು ಹೀಗೆ ಕೇಳಿದ್ದೇನೆ. ಒಮ್ಮೆ ಭಗವಾನರು ಶ್ರಾವಸ್ತಿಯಲ್ಲಿ ಅನಾಥಪಿಂಡಿಕನ ಜೇತವನ ಆರಾಮದಲ್ಲಿ ವಿಹರಿಸುತ್ತಿದ್ದರು. ಆಗ ಭಗವಾನರು ಪೂವರ್ಾಹ್ನ ಸಮಯದಲ್ಲಿ ಚೀವರ ಧರಿಸಿ, ಪಾತ್ರೆ ಎತ್ತಿಕೊಂಡು ಶ್ರಾವಸ್ತಿಯಲ್ಲಿ ಆಹಾರದ ಅನ್ವೇಷಣೆಗೆ ಹೊರಟರು. ಆ ಸಮಯದಲ್ಲಿ ಅಗ್ನಿ ಭಾರದ್ವಾಜ ಬ್ರಾಹ್ಮಣನ ಮನೆಯಲ್ಲಿ ಅಗ್ನಿಯು ಉರಿಯುತ್ತಿತ್ತು. ಅದರಲ್ಲಿ ಆಹುತಿಯ ಸಾಮಗ್ರಿಗಳನ್ನು ಹಾಕುತ್ತಿದ್ದನು. ಆಗ ಭಗವಾನರು ಭಿಕ್ಷಾಟನೆ ಮಾಡುತ್ತಾ ಅಗ್ನಿ ಭಾರದ್ವಾಜನ ಮನೆಗೆ ಬಂದರು. ಅಗ್ನಿ ಭಾರದ್ವಾಜನು ಭಗವಾನರು ಬರುತ್ತಿರುವುದನ್ನು ದೂರದಿಂದಲೇ ಕಂಡು ಹೀಗೆ ಕಿರುಚಿದ.

ಹೇ ಮುಂಡಕ, ಹೇ ಶ್ರಮಣ, ಹೇ ವೃಷಲ (ನೀಚ) ಅಲ್ಲೇ ನಿಲ್ಲು. ಹೀಗೆ ನುಡಿದಂತಹ ಬ್ರಾಹ್ಮಣನಿಗೆ ಭಗವಾನರು ಹೀಗೆ ಹೇಳಿದರು-
ಬ್ರಾಹ್ಮಣನೇ, ನೀನು ವೃಷಲ (ನೀಚ) ಆಗುವಂತಹ ಮಾತುಗಳನ್ನು ಅರಿತಿದ್ದೀಯೇನು?
ಹೇ ಗೋತಮ, ನಾನು ನೀಚ ಆಗುವಂತಹ ಮಾತುಗಳನ್ನು ಒಪ್ಪುವುದಿಲ್ಲ. ಸರಿ ಗೋತಮರೇ, ನನಗೆ ಧಮ್ಮೋಪದೇಶ ನೀಡಿ, ಅದರಿಂದ ವೃಷಲ (ನೀಚ) ಅಥವಾ ನೀಚನಾಗುವ ಮಾತುಗಳನ್ನು ಅರಿಯುತ್ತೇನೆ.
ಹಾಗಾದರೆ ಬ್ರಾಹ್ಮಣ ಏಕಾಗ್ರತೆ ವಹಿಸಿ ಕೇಳು, ಅರಿತುಕೋ ಹೇಳುತ್ತೇನೆ.
ಹಾಗೇ ಆಗಲಿ ಎಂದು ಅಗ್ನಿ ಭಾರದ್ವಾಜನು ಉತ್ತರಿಸಿದನು.
ಭಗವಾನರು ಹೀಗೆ ಹೇಳಿದರು-
1. ಯಾವ ಮನುಷ್ಯನು ಕ್ರೋಧಿ, ವೈರ್ಯ ಹಾಗು ಅತಿ ಮಾತ್ಸರ್ಯದಿಂದ ಕೂಡಿರುವನೋ, ಮಿಥ್ಯಾದೃಷ್ಟಿವಂತನೊ ಹಾಗು ಮಾಯಾವಿಯೋ ಆತನನ್ನು ವಸಲ (ನೀಚ) ನೆಂದು ಭಾವಿಸು.
2. ಯಾರು ಮಾನವ ಪ್ರಾಣಿ ಹಾಗು ಅಂಡಜ (ಮೊಟ್ಟೆ ಒಡೆದು ಜನ್ಮಿಸುವ) ಗಳಿಗೆ ಹಿಂಸಿಸುವನೋ, ಯಾರಿಗೆ ಪ್ರಾಣಿಗಳ ಬಗ್ಗೆ ದಯೆಯೇ ಇಲ್ಲವೋ ಅವನನ್ನು ನೀಚನೆಂದು ಭಾವಿಸು.
3. ಯಾರು ಗ್ರಾಮಗಳನ್ನು, ಹಳ್ಳಿಗಳನ್ನು ನಷ್ಟ ಮಾಡುವನೋ ಹಾಗು ಆಕ್ರಮಣ ಮಾಡುವನೋ, ಯಾರು ಕುಖ್ಯಾತನಾಗಿರುವ ಅತ್ಯಾಚಾರಿಯೋ, ಆತನನ್ನು ನೀಚನೆಂದು ಭಾವಿಸು.
4. ಯಾರು ಗ್ರಾಮ ಅಥವಾ ಅರಣ್ಯದಲ್ಲಿ ಪರರ ಸಂಪತ್ತನ್ನು ಅಪಹರಿಸುವನೋ, ಆತನನ್ನು ನೀಚನೆಂದು ಭಾವಿಸು.
5. ಯಾರು ಸಾಲವನ್ನು ಸ್ವೀಕರಿಸಿ, ಕೇಳಿದಾಗ ನಿನ್ನದು ಯಾವ ಸಾಲವೂ ಇಲ್ಲ ಎಂದು ಹೇಳುವನೋ ಹಾಗು ನೀಡುವುದಿಲ್ಲವೋ ಆತನನ್ನು ನೀಚನೆಂದು ಭಾವಿಸು.
6. ಯಾರು ವಸ್ತುಗಳ ದುರಾಸೆಯುಳ್ಳವನೋ, ಜನರಿಗೆ ಹೊಡೆದು ಅದನ್ನು ದೋಚಿಕೊಳ್ಳುವನೋ, ಅವನನ್ನು ನೀಚನೆಂದು ಭಾವಿಸು.
7. ಯಾರು ತನ್ನ ಅಥವಾ ಪರರ ಹಣಕ್ಕಾಗಿ ಸುಳ್ಳು ಸಾಕ್ಷಿ ಹೇಳುವನೋ ಆತನನ್ನು ನೀಚನೆಂದು ಭಾವಿಸು.
8. ಯಾರು ಬಲತ್ಕಾರದಿಂದ ಅಥವಾ ಪ್ರೇಮದಿಂದ ಸೋದರ ಸಂಬಂಧಿಗಳ ಅಥವಾ ಮಿತ್ರರ ಸ್ತ್ರೀಯರೊಂದಿಗೆ ಕಾಣುವನೋ ಆತನನ್ನು ನೀಚನೆಂದು ತಿಳಿದುಕೊ.
9. ಯಾರು ಸಮರ್ಥನಾಗಿದ್ದರೂ ತನ್ನ ವೃದ್ಧ ತಾಯಿ-ತಂದೆಯರನ್ನು ಪೋಷಣೆ ಮಾಡುವುದಿಲ್ಲವೋ ಆತನನ್ನು ನೀಚನೆಂದು ತಿಳಿದುಕೊ.
10. ಯಾರು ತಾಯಿ-ತಂದೆ, ಸೋದರ, ಸೋದರಿ ಅಥವಾ ಅತ್ತೆಯರೊಂದಿಗೆ ಕ್ರೋಧಯುತ ಕಟು ವಚನದಿಂದ ನೋಯಿಸುವನೋ, ಹೊಡೆಯುವನೋ ಆತನನ್ನು ನೀಚನೆಂದು ತಿಳಿದುಕೊ.
11. ಯಾರು ಒಳ್ಳೆಯ ವಿಷಯವನ್ನು ಕೇಳಿದಾಗಲೂ ಕೆಟ್ಟ ಮಾರ್ಗವನ್ನು ತಿಳಿಸುತ್ತಾನೋ ಹಾಗು ಮಾತನ್ನು ತಿರುಗಿಸಿ ಸುತ್ತಾಡಿಸಿ ಆಡುತ್ತಾನೆಯೋ ಆತನನ್ನು ನೀಚನೆಂದು ತಿಳಿದುಕೊ.
12. ಯಾರು ಪಾಪಕರ್ಮವನ್ನು ಮಾಡಿ ನನ್ನನ್ನು ಹೀಗೆ ಭಾವಿಸದಿರಲಿ ಎಂದು ಇಚ್ಚಿಸುವನೋ ಹಾಗು ರಹಸ್ಯವಾಗಿ ಪಾಪಕರ್ಮ ಮಾಡುವವನೋ ಅವನನ್ನು ನೀಚನೆಂದು ಪರಿಗಣಿಸಲಿ.
13. ಯಾರು ಪರರ ಮನೆಗೆ ಹೋಗಿ ಸ್ವಾದಿಷ್ಟ ಭೋಜನ ಮಾಡಿ ಆತನು ಮನೆಗೆ ಬಂದರೆ ಆದರ, ಸತ್ಕಾರ ಮಾಡುವುದಿಲ್ಲವೋ ಆತನನ್ನು ನೀಚನೆಂದು ತಿಳಿಯಲಿ.
14. ಯಾರು ಬ್ರಾಹ್ಮಣ, ಸಮಣ ಅಥವಾ ಬೇರೆ ಯಾವುದೇ ಭಿಕ್ಷುವಿಗೆ ಸುಳ್ಳು ಹೇಳಿ ವಂಚಿಸುವನೋ ಆತನನ್ನು ನೀಚನೆಂದು ತಿಳಿಯಲಿ.
15. ಯಾರು ಭೋಜನದ ಸಮಯದಲ್ಲಿ ಬಂದಿರುವ ಬ್ರಾಹ್ಮಣ ಅಥವಾ ಸಮಣರಿಗೆ ಕ್ರೋಧದಿಂದ ನುಡಿಗಳನ್ನಾಡುವನೋ ಹಾಗು ಏನ್ನನ್ನೂ ನೀಡುವುದಿಲ್ಲವೋ ಆತನನ್ನು ನೀಚನೆಂದು ತಿಳಿಯಲಿ.
16. ಯಾರು ಮೋಹದಿಂದ ಮೋಹಿತನಾಗಿ ಯಾವುದೇ ವಸ್ತುವನ್ನು ಬಯಸುವನೋ, ಅದಕ್ಕಾಗಿ ಸುಳ್ಳು ಹೇಳುವನೋ ಆತನನ್ನು ನೀಚನೆಂದು ತಿಳಿದುಕೋ.
17. ಯಾರು ತನ್ನ ಪ್ರಶಂಸೆ ಮಾಡುತ್ತಾ, ಪರರ ನಿಂದೆ ಮಾಡುವನೋ ಹಾಗು ತನ್ನ ಅಭಿಮಾನದಿಂದ ಬೀಗಿ ಬಿಟ್ಟಿರುವನೋ ಆತನನ್ನು ನೀಚನೆಂದು ತಿಳಿದುಕೊ.
18. ಯಾರಲ್ಲಿ ಕ್ರೋಧ, ಜಿಪುಣತನ, ಕೆಟ್ಟ ಇಚ್ಛೆಗಳು ಸ್ವಾರ್ಥ, ಮೂರ್ಖತನ, ನಿರ್ಲಜ್ಜತೆ ಹಾಗು ಸಂಕೋಚವಿಲ್ಲದಿರುವಿಕೆ ಇದೆಯೋ ಆತನನ್ನು ನೀಚನೆಂದು ಬಾವಿಸು.
19. ಯಾರು ಬುದ್ಧರನ್ನು ಮತ್ತು ಅವರ ಭಿಕ್ಷುಗಳನ್ನು ಅಥವಾ ಗೃಹಸ್ಥ ಉಪಾಸಕರನ್ನು ನಿಂದಿಸುವನೋ ಆತನನ್ನು ನೀಚನೆಂದು ತಿಳಿದುಕೋ.
20. ಯಾರು ಅರಹಂತನಾಗದಿದ್ದರೂ ತನ್ನನ್ನು ಅರಹಂತನೆಂದು ಹೇಳಿಕೊಳ್ಳುವನೋ, ಆತನು ಬ್ರಹ್ಮಸಹಿತ ಸರ್ವ ಲೋಕದಲ್ಲಿ ಕಳ್ಳನಾಗಿದ್ದಾನೆ ಹಾಗೂ ಅವನು ಅಧಮನಾದ ನೀಚನಾಗಿರುತ್ತಾನೆ. ನಾನು ಇಷ್ಟು ನೀಚರನ್ನು ನಿನಗೆ ಹೇಳಿದ್ದೇನೆ.
21. ಯಾರು ಸಹಾ ಜನ್ಮ (ಜಾತಿ) ದಿಂದ ನೀಚರಾಗುವುದಿಲ್ಲ ಅಥವಾ ಬ್ರಾಹ್ಮಣನೂ ಆಗುವುದಿಲ್ಲ. ಕರ್ಮದಿಂದಲೇ ನೀಚನಾಗುತ್ತಾನೆ ಮತ್ತು ಕರ್ಮದಿಂದಲೇ ಬ್ರಾಹ್ಮಣ ಆಗುತ್ತಾನೆ.
22. ಈ ಉದಾಹರಣೆಯಿಂದ ತಿಳಿದುಕೋ, ಚಂಡಾಲಪುತ್ರ ಸೋಣಕನು ಮಾತಂಗ ಹೆಸರಿನಿಂದ ಪ್ರಸಿದ್ಧನಾಗಿದ್ದನು.
23. ಯಾವ ಮಹಾ ಯಶಸ್ಸನ್ನು ಮಾತಂಗನು ಪಡೆದಿದ್ದನೊ, ಅದು ಪರರಿಗಾಗಿ ಅತಿ ದುರ್ಲಭವಾಗಿತ್ತು. ಆತನಿಗೆ ಸೇವೆ ಮಾಡಲು ಅನೇಕ ಕ್ಷತ್ರಿಯರು ಹಾಗು ಬ್ರಾಹ್ಮಣರು ಬರುತ್ತಿದ್ದರು.
24. ಮಾತಂಗನು ಕಾಮರಾಗವನ್ನು ತ್ಯಜಿಸಿ ದಿವ್ಯರಥದಲ್ಲಿ ಸವಾರನಾಗಿ, ಶುದ್ಧ ಮಹಾಪಥದಿಂದ ಬ್ರಹ್ಮಲೋಕದಲ್ಲಿ ಜನಿಸಿದನು. ಅವನು ಬ್ರಹ್ಮಲೋಕದಲ್ಲಿ ಜನಿಸಲು ಯಾವ ಜಾತಿಯು ಅಡ್ಡಿಯಾಗಲಿಲ್ಲ.
25. ಯಾರು ಶಾಸ್ತ್ರಪಾಠಗಳನ್ನು, ಮಂತ್ರಗಳನ್ನು ಮನೆಯಲ್ಲಿ ಅರಿತು ಬ್ರಾಹ್ಮಣರಾಗಿದ್ದಾರೋ, ಅವರು ಸಹಾ ನಿತ್ಯ ಪಾಪಕರ್ಮಗಳಲ್ಲಿ ಮಗ್ನರಾಗಿರುವುದು ಕಂಡುಬರುತ್ತದೆ.
26. ಈ ಜನ್ಮದಲ್ಲಿಯೇ ಅವರಿಗೆ ನಿಂದೆ ಪ್ರಾಪ್ತಿಯಾಗುತ್ತದೆ ಹಾಗು ಪರಲೋಕದಲ್ಲಿ ದುರ್ಗತಿ ಪ್ರಾಪ್ತಿಯಾಗುವುದು. ಅವರ ದುರ್ಗತಿ ಹಾಗು ನಿಂದೆಯನ್ನು ಜಾತಿ ತಪ್ಪಿಸಲಾರದು.
27. ಜಾತಿಯಿಂದ ಯಾರು ಸಹಾ ವಸಲ (ನೀಚ) ನಾಗುವುದಿಲ್ಲ. ಜಾತಿಯಿಂದ ಯಾರು ಸಹಾ ಬ್ರಾಹ್ಮಣನಾಗುವುದಿಲ್ಲ. ಕರ್ಮದಿಂದಲೇ ವಸಲ (ನೀಚ) ನಾಗುತ್ತಾನೆ ಮತ್ತು ಕರ್ಮದಿಂದಲೇ ಬ್ರಾಹ್ಮಣನಾಗುತ್ತಾನೆ.
ಹೀಗೆ ಹೇಳಿದ ನಂತರ ಅಗ್ನಿ ಭಾರದ್ವಾಜನು ಬುದ್ಧ ಭಗವಾನರಿಗೆ ಈ ರೀತಿ ಹೇಳಿದನು- ನಿಜಕ್ಕೂ ಆಶ್ಚರ್ಯ ಗೋತಮರೆ ! ಆಶ್ಚರ್ಯವಾಯಿತು ! ಹೇಗೆಂದರೆ ತಲೆಕೆಳಗಿರುವ ಪಾತ್ರೆಯನ್ನು ಸರಿಯಾಗಿಸುವಂತೆ, ಮುಚ್ಚಿರುವುದನ್ನು ತೆಗೆದು ತೋರಿಸುವಂತೆ, ದಾರಿ ತಪ್ಪಿರುವವರಿಗೆ ದಾರಿ ತೋರಿಸುವಂತೆ, ಅಂಧಕಾರದಲ್ಲಿರುವವರಿಗೆ ದೀಪ ಪ್ರಕಾಶಿಸುವಂತೆ, ಯಾವುದರಿಂದ ಚಕ್ಷುಧಾರಿಗಳು ರೂಪಗಳನ್ನು (ವಸ್ತು) ನೋಡುವರೋ ಹಾಗೆಯೇ ಭಗವಾನ್ ಬುದ್ಧರಿಂದ ಅನೇಕ ರೀತಿಯಿಂದ ಧಮ್ಮವು ಪ್ರಕಾಶಿತವಾಯಿತು. ನಾನು ಇಂದಿನಿಂದ ಬುದ್ಧರ ಶರಣು ಹೋಗುತ್ತೇನೆ, ಧಮ್ಮ ಹಾಗು ಸಂಘಕ್ಕೂ ಶರಣು ಹೋಗುತ್ತೇನೆ. ನನಗೆ ಜೀವನಪರ್ಯಂತ ಉಪಾಸಕನಾಗಿ ಮಾಡಿಕೊಳ್ಳಿ ಭಗವಾನ್.
ಇಲ್ಲಿಗೆ ವಸಲ ಸುತ್ತ ಮುಗಿಯಿತು.

No comments:

Post a Comment