Friday 12 September 2014

suchiloma sutta in kannada (where does the greed and hatred arise etc.?)

5. ಸೂಚಿಲೋಮ ಸುತ್ತ
(ತೃಷ್ಣೆಯೇ ಸರ್ವ ವಾಸನೆಗಳ ಮೂಲವಾಗಿದೆ)
                ಹೀಗೆ ನಾನು ಕೇಳಿದ್ದೇನೆ, ಒಮ್ಮೆ ಭಗವಾನರು ಗಯಾದ ಟಂಕಿತ ಮಂಚದಲ್ಲಿ ಸೂಚಿಲೋಮ ಯಕ್ಷನ ಭವನದಲ್ಲಿ ವಿಹರಿಸುತ್ತಿದ್ದರು. ಆ ಸಮಯದಲ್ಲಿ ಖರಯಕ್ಷ ಹಾಗು ಸೂಚಿಲೋಮ ಯಕ್ಷರು ಭಗವಾನರ ಸಮೀಪದಲ್ಲೇ ಹೋಗುತ್ತಿದ್ದರು. ಆಗ ಖರಯಕ್ಷನು ಸೂಚಿಲೋಮ ಯಕ್ಷನಿಗೆ ಈ ರೀತಿ ಹೇಳಿದನು- ಇವರು ಶ್ರಮಣರಾಗಿದ್ದಾರೆ.

                ಸೂಚಿಲೋಮನು ಈ ರೀತಿ ಹೇಳಿದನು- ಈತನು ಶ್ರಮಣನಲ್ಲ, ಶ್ರಮಣಕ (ಚಿಕ್ಕ ಶ್ರಮಣ) ನಾಗಿದ್ದಾನೆ. ಇರು ನಾನು ಪತ್ತೆಹಚ್ಚುತ್ತೇನೆ. ಈತನು ಶ್ರಮಣನೇ ಅಥವಾ ಶ್ರಮಣಕನೇ.
                ಆಗ ಸೂಚಿಲೋಮನು ಭಗವಾನರು ಇರುವೆಡೆಗೆ ಬಂದನು. ಆತನು ಭಗವಾನರ ಸಮೀಪ ತನ್ನ ಶರೀರವನ್ನು ತೆಗೆದುಕೊಂಡು ಹೋದನು. ಆಗ ಭಗವಾನರು ತಮ್ಮ ಶರೀರವನ್ನು ಪಕ್ಕಕ್ಕೆ ತೆಗೆದುಕೊಂಡರು. ಆಗ ಸೂಚಿಲೋಮ ಭಗವಾನಿಗೆ ಹೀಗೆ ಹೇಳಿದನು- ಶ್ರಮಣ ನೀನು ಹೆದರುತ್ತಿದ್ದೀಯೆ?
                ಆಯುಷ್ಮಂತನೇ ನಾನು ಹೆದರುತ್ತಿಲ್ಲ, ಆದರೆ ನಿನ್ನ ಸಂಸ್ಪರ್ಶವು ಪಾಪಯುತವಾಗಿದೆ (ಅಸಹ್ಯವಾಗಿದೆ).
                ಶ್ರಮಣ ನಾನು ನಿನ್ನಲ್ಲಿ ಪ್ರಶ್ನೆ ಕೇಳುತ್ತೇನೆ, ನೀನು ಉತ್ತರ ಹೇಳದಿದ್ದರೆ ನಿನ್ನ ಚಿತ್ತವನ್ನು ವಿಕ್ಷಿಪ್ತವನ್ನಾಗಿ ಮಾಡುವೆನು. ನಿನ್ನ ಹೃದಯವನ್ನು ಹರಿದು ಹಾಕುವೆನು. ಅಥವಾ ಕಾಲುಗಳನ್ನು ಹಿಡಿದು ಗಂಗಾತೀರಕ್ಕೆ ಎಸೆದುಬಿಡುವೆನು.
                ಆಯುಷ್ಮಂತನೇ ನಾನು ದೇವತಾ, ಮಾರ, ಬ್ರಹ್ಮ, ಶ್ರಮಣ ಹಾಗು ಬ್ರಾಹ್ಮಣ ಸಹಿತ, ರಾಜ-ಮನುಷ್ಯರು ಇಡೀ ಲೋಕಗಳಲ್ಲಿ ನನ್ನ ಚಿತ್ತವವನ್ನು ವಿಕ್ಷಿಪ್ತವಾಗುವಂತಹ, ಹೃದಯವನ್ನು ಸೀಳುವಂತಹ ಅಥವಾ ಕಾಲುಗಳನ್ನು ಹಿಡಿದು ಗಂಗಾತೀರಕ್ಕೆ ಎಸೆದುಬಿಡುವಂತಹ ಇಂಥಹ ಯಾರನ್ನೂ ಕಾಣುತ್ತಿಲ್ಲ, ಅಂತಹವರಾರು ಇಲ್ಲ. ಆದರೂ ನೀನು ಏನನ್ನು ಕೇಳಬಯಸುವೆಯೋ ಅದನ್ನು ಕೇಳು.
                ಆಗ ಸೂಚಿಲೋಮ ಈ ಗಾಥೆಗಳಿಂದ ಪ್ರಶ್ನಿಸಿದನು -
1.            ರಾಗ ಮತ್ತು ದ್ವೇಷವು ಎಲ್ಲಿಂದ ಉತ್ಪನ್ನವಾಗುತ್ತದೆ? ಪುಣ್ಯಕರ್ಮಗಳಲ್ಲಿ ಮನವನ್ನು ಹರಿಸದಿರುವುದು (ಅರತಿ), ಪಾಪಕರ್ಮಗಳಲ್ಲಿ ಮನವನ್ನು ಹರಿಸುವುದು (ರತಿ) ಹಾಗು ಭಯವು ಎಲ್ಲಿಂದ ಉತ್ಪನ್ನವಾಗುತ್ತದೆ? ಮನದಲ್ಲಿ ಕೆಟ್ಟ ವಿತರ್ಕ ಎಲ್ಲಿಂದ ಉತ್ಪನ್ನವಾಗಿ ತುಂಟ ಮಕ್ಕಳಿಂದಾಗಿ ಕಾಗೆ ಹಾರುವಂತೆ ಚಿಂತೆಯುಂಟುಮಾಡುತ್ತದೆ.
2.            ರಾಗ ಮತ್ತು ದ್ವೇಷವು ಇಲ್ಲಿಂದಲೇ (ಅಂತರಂಗ) ಉತ್ಪನ್ನವಾಗುತ್ತದೆ. ಹಾಗು ಪುಣ್ಯಕರ್ಮಗಳಲ್ಲಿ ಮನವನ್ನು ಹರಿಸದಿರುವುದು ಹಾಗು ಪಾಪಕರ್ಮಗಳಲ್ಲಿ ಮನವನ್ನು ಹರಿಸುವುದು. ಮತ್ತು ಭಯವು ಸಹಾ ಇಲ್ಲಿಂದಲೇ ಉತ್ಪನ್ನವಾಗುತ್ತದೆ. ಮನದಲ್ಲಿ ಕೆಟ್ಟ ವಿತರ್ಕವೂ ಸಹಾ ಇಲ್ಲಿಂದಲೇ ಉತ್ಪನ್ನವಾಗಿ ತುಂಟ ಮಕ್ಕಳಿಂದಾಗಿ ಕಾಗೆ ಹಾರುವಂತೆ ಚಿಂತೆಯುಂಟುಮಾಡುತ್ತದೆ.
3.            ಹೇಗೆ ಆಲದ ಮರದಿಂದ ಬಿಳಿಲುಗಳು ಹೊರಬರುವುವು, ಹಾಗೆಯೇ ಅವು ಸ್ನೇಹ (ರಾಗ) ಮತ್ತು ಆತ್ಮದೃಷ್ಟಿಯಿಂದ ಉತ್ಪನ್ನವಾಗುತ್ತವೆ. ಅರಣ್ಯದಲ್ಲಿ ಹರಡಿರುವ ಮಾಲುವಾ ಬಳ್ಳಿಯಂತೆ ವಿಭಿನ್ನ ಪ್ರಕಾರದಿಂದ ಕಾಮಗಳಲ್ಲಿ ಆಸಕ್ತಿ ತಾಳುತ್ತಾರೆ.
4.            ಹೇ ಯಕ್ಷ, ಕೇಳು, ಯಾರು ಉತ್ಪತ್ತಿ ಸ್ಥಾನವನ್ನು ಅರಿಯುವರೋ, ಅವರು ಅದರ ಅಂತ್ಯ ಮಾಡುತ್ತಾರೆ. ಅವರು ಹಿಂದೆ ದಾಟದ ದುಷ್ಕರವಾದ ಪ್ರವಾಹವನ್ನು ದಾಟುತ್ತಾರೆ. ಅವರಿಗೆ ಪುನರ್ಜನ್ಮ ಆಗುವುದಿಲ್ಲ.

ಇಲ್ಲಿಗೆ ಸೂಚಿಲೋಮ ಸುತ್ತ ಮುಗಿಯಿತು.

No comments:

Post a Comment