Friday 31 October 2014

sela sutta (7. ಸೇಲ ಸುತ್ತ)

7. ಸೇಲ ಸುತ್ತ
(ಮುನ್ನೂರು ಶಿಷ್ಯರ ಸಹಿತ ಸೇಲನ ಪ್ರವಜ್ರ್ಯ)
                ಹೀಗೆ ನಾನು ಕೇಳಿದ್ದೇನೆ, ಒಮ್ಮೆ ಭಗವಾನರು ಒಂದು ಸಾವಿರದ ಇನ್ನೂರು ಐವತ್ತು ಮಹಾಭಿಕ್ಷುಗಳ ಸಂಘದ ಸಮೇತ ಅಂಗುತ್ತರಾಪ ಜನಪದದಲ್ಲಿ ಚಾರಿಕಾ ಮಾಡುತ್ತಾ ಅಂಗುತ್ತಾರಾಪದ ಆಪಣಹಳ್ಳಿಗೆ ಹೋದರು.

                ಆಗ ಕೇಣಿಯ ಜಟಿಲನು ಈ ರೀತಿ ಕೇಳಿದನು: ಶಾಕ್ಯ ಕುಲದಿಂದ ಪ್ರವಜರ್ಿತರಾದ ಶಾಕ್ಯಪುತ್ರ ಸಮಣ ಗೋತಮರು ಸಾವಿರದ ಇನ್ನೂರು ಐವತ್ತು ಮಹಾಭಿಕ್ಷು ಸಂಘದ ಸಮೇತ ಅಂಗುತ್ತರಾಪದಲ್ಲಿ ಚಾರಿಕಾ ಮಾಡುತ್ತಾ ಅಪಣದಲ್ಲಿ ಬಂದಿದ್ದಾರೆ. ಆ ಭಗವಾನರ ಕಲ್ಯಾಣ ಕೀತರ್ಿಯು ಈ ರೀತಿ ಹಬ್ಬಿದೆ. ಆ ಭಗವಾನರು ಅರಹಂತರಾಗಿದ್ದಾರೆ, ಸಮ್ಯಕ್ ಸಂಬುದ್ಧರಾಗಿದ್ದಾರೆ, ವಿದ್ಯಾಚರಣಸಂಪನ್ನರಾಗಿದ್ದಾರೆ. ಸುಗತರು, ಲೋಕವಿದರು, ಅನುಪಮ ಪುರುಷಧಮ್ಮ ಸಾರಥಿಯಾಗಿದ್ದಾರೆ. ದೇವತೆಗಳಿಗೆ ಹಾಗು ಮಾನವರಿಗೆ ಶಾಸ್ತರಾಗಿದ್ದಾರೆ. ಅವರು ಈ ಲೋಕದಲ್ಲಿ ದೇವ, ಮಾರ, ಬ್ರಾಹ್ಮಣ, ಸಮಣ, ಬ್ರಾಹ್ಮಣ ಸಹಿತ ದೇವ-ಮನುಷ್ಯರಿಗೆ ಸ್ವಯಂ ಜ್ಞಾನದಿಂದ ಸಾಕ್ಷಾತ್ಕರಿಸಿ ಉಪದೇಶಿಸುತ್ತಾರೆ. ಅವರು ಆರಂಭದಲ್ಲಿ, ಮಧ್ಯದಲ್ಲಿ ಮತ್ತು ಅಂತ್ಯದಲ್ಲಿ ಸರ್ವ ಸ್ಥಿತಿಯಲ್ಲೂ ಹಿತವಾಗುವಂತಹ ಧಮ್ಮದ (ಶುದ್ಧಿ ಹಾಗು ಭಾವ ಸಹಿತ) ಉಪದೇಶ ಮಾಡುತ್ತಾರೆ. ಸರ್ವ ವಿಶ್ವದಲ್ಲಿ ಅವರು ಪರಿಪೂರ್ಣ ಹಾಗು ಪರಿಶುದ್ಧವಾದ ಬ್ರಹ್ಮಚರ್ಯವನ್ನು ಪ್ರಕಾಶಿಸಿದ್ದಾರೆ. ಈ ರೀತಿ ಅರಹಂತರ ದರ್ಶನವು ಅತ್ಯುತ್ತಮ ಫಲವನ್ನು ನೀಡುತ್ತದೆ.
                ನಂತರ ಕೇಣಿಯ ಜಟಿಲನು ಎಲ್ಲಿ ಭಗವಾನರು ಇದ್ದರೋ ಅಲ್ಲಿಗೆ ಬಂದನು. ಬಂದು ಭಗವಾನರೊಂದಿಗೆ ಸಂಭೋದನೆ ಮಾಡಿದನು. ಕುಶಲ ಹಿತವನ್ನು ಕೇಳಿ ಒಂದುಕಡೆ ಕುಳಿತ ಜಟಿಲನಿಗೆ ಭಗವಾನರು ಧಮ್ಮದ ಉಪದೇಶದಿಂದ ಸುದರ್ಶನ, ಸ್ಫೂತರ್ಿ, ಸಮಾದಪನ, ಸಮುತ್ತೇಜನ, ಸುಪ್ರಸನ್ನ ಮಾಡಿದರು. ಆಗ ಆಹ್ಲಾದದಿಂದ ಕೇಣಿಯನು ಭಗವಾನರೊಂದಿಗೆ ಈ ರೀತಿ ಹೇಳಿದನು-
                ಪೂಜ್ಯ ಗೌತಮರು ತಮ್ಮ ಭಿಕ್ಖು ಸಂಘದ ಸಮೇತ ನಾಳೆ ನನ್ನಿಂದ ಭೋಜನವನ್ನು ಸ್ವೀಕರಿಸಲು ಒಪ್ಪಿಗೆಯನ್ನು ನೀಡಬೇಕು. ಹೀಗೆ ಹೇಳಿದ ಮೇಲೆ ಭಗವಾನರು ಕೇಣಿಯ ಜಟಿಲನಿಗೆ ಇಂತೆಂದರು- ಕೇಣಿಯ, ಭಿಕ್ಖು ಸಂಘವು ದೊಡ್ಡದಾಗಿದೆ, ಹನ್ನೆರಡನೂರ ಐವತ್ತು ಭಿಕ್ಖುಗಳಿದ್ದಾರೆ. ನೀನು ಬ್ರಾಹ್ಮಣರಲ್ಲಿ (ದಾನ ಕಾರ್ಯದಲ್ಲಿ ಸಹಕರಿಸಬಹುದೆಂದು) ಪೂರ್ಣ ನಂಬಿಕೆಯನ್ನಿಟ್ಟಿರುವೆ.
                ಎರಡನೆಯಸಲ ಕೇಣಿಯ ಜಟಿಲನು ಭಗವಾನರಿಗೆ ಹೀಗೆ ಹೇಳಿದನು- ಪೂಜ್ಯ ಗೌತಮರೇ, ದೊಡ್ಡದಾದ ಈ ಭಿಕ್ಖು ಸಂಘವು ಹನ್ನೆರಡನೂರ ಐವತ್ತು ಭಿಕ್ಷುಗಳನ್ನು ಹೊಂದಿದ್ದರೂ, ನಾನು ಬ್ರಾಹ್ಮಣರಲ್ಲಿ ಪೂರ್ಣ ನಂಬಿಕೆ ಇಟ್ಟಿದ್ದರೂ ಏನಂತೆ; ಪೂಜ್ಯ ಗೌತಮರು ತಮ್ಮ ಭಿಕ್ಖು ಸಂಘದ ಸಮೇತ ನಾಳೆ ನನ್ನಿಂದ ಭೋಜನವನ್ನು ಸ್ವೀಕರಿಸಲು ಒಪ್ಪಿಗೆಯನ್ನು ನೀಡಬೇಕು. ಎರಡನೆಯ ಸಲವೂ ಭಗವಾನರು ಕೇಣಿಯ ಜಟಿಲನಿಗೆ ಇಂತೆಂದರು- ಕೇಣಿಯ, ಭಿಕ್ಖು ಸಂಘವು ದೊಡ್ಡದಾಗಿದೆ, ಹನ್ನೆರಡನೂರ ಐವತ್ತು ಭಿಕ್ಖುಗಳಿದ್ದಾರೆ. ನೀನು ಬ್ರಾಹ್ಮಣರಲ್ಲಿ ಪೂರ್ಣ ನಂಬಿಕೆಯನ್ನಿಟ್ಟಿರುವೆ.
                ಮೂರನೆಯಸಲ ಕೇಣಿಯ ಜಟಿಲನು ಭಗವಾನರಿಗೆ ಹೀಗೆ ಹೇಳಿದನು- ಪೂಜ್ಯ ಗೌತಮರೇ, ದೊಡ್ಡದಾದ ಈ ಭಿಕ್ಖು ಸಂಘವು ಹನ್ನೆರಡನೂರ ಐವತ್ತು ಭಿಕ್ಷುಗಳನ್ನು ಹೊಂದಿದ್ದರೂ, ನಾನು ಬ್ರಾಹ್ಮಣರಲ್ಲಿ ಪೂರ್ಣ ನಂಬಿಕೆ ಇಟ್ಟಿದ್ದರೂ ಏನಂತೆ; ಪೂಜ್ಯ ಗೌತಮರು ತಮ್ಮ ಭಿಕ್ಖು ಸಂಘದ ಸಮೇತ ನಾಳೆ ನನ್ನಿಂದ ಭೋಜನವನ್ನು ಸ್ವೀಕರಿಸಲು ಒಪ್ಪಿಗೆಯನ್ನು ನೀಡಬೇಕು. ಮೂರನೆಯಬಾರಿಯೂ ಹೀಗೆ ಜಟಿಲನು ನುಡಿದ ನಂತರ ಭಗವಾನರು ಮೌನದಲ್ಲೇ ಸಮ್ಮತಿಯನ್ನು ಸೂಚಿಸಿದರು.
                ಆಗ ಕೇಣಿಯ ಜಟಿಲ ಭಗವಾನರ ಸ್ವೀಕೃತಿಯನ್ನು ಅರಿತು ಆಸನದಿಂದ ಎದ್ದನು. ನಂತರ ಎಲ್ಲಿ ಆತನ ಆಶ್ರಮವಿತ್ತೋ ಅಲ್ಲಿ ಹೊರಟನು. ಅಲ್ಲಿ ಹೋಗಿ ತನ್ನ ಗೆಳೆಯರಿಗೆ, ಸಹಯೋಗಿಗಳಿಗೆ, ಬಂಧುಗಳಿಗೆ ಹೀಗೆ ಹೇಳಿದನು- ಪ್ರಿಯರೇ, ಗೆಳೆಯರೆ, ಸಹಯೋಗಿಗಳೇ, ಬಂಧುಗಳೇ, ನಾನು ಮಹಾ ಭಿಕ್ಷು ಸಂಘ ಸಹಿತ ಶ್ರಮಣ ಗೋತಮರಿಗೆ ನಾಳೆ ಭೋಜನಕ್ಕಾಗಿ ಆಹ್ವಾನಿಸಿದ್ದೇನೆ. ಆದ್ದರಿಂದ ತಾವೆಲ್ಲರೂ ಸೂಕ್ತ ಖರೀದಿಗಳನ್ನು ಮತ್ತು ತಯಾರಿಗಳನ್ನು ಮಾಡಿ.
                ಒಳ್ಳೆಯದು ಹಾಗೆಯೇ ಆಗಲಿ ಎಂದು ಆತನ ಗೆಳೆಯರು, ಸಹಯೋಗಿಗಳು, ಬಂಧುಗಳು ಉತ್ತರಿಸಿದರು. ಅವರಲ್ಲಿ ಕೆಲವರು ಒಲೆಯನ್ನು ಅಗಿಯಲು ಪ್ರಾರಂಭಿಸಿದರು, ಕೆಲವರು ಸೌದೆಯನ್ನು ಕತ್ತರಿಸಲು ಪ್ರಾರಂಭಿಸಿದರು. ಕೆಲವರು ಪಾತ್ರೆಗಳನ್ನು ತೊಳೆಯಲು ಪ್ರಾರಂಭಿಸಿದರು. ಕೆಲವರು ನೀರನ್ನು ಪಾತ್ರೆಗೆ ಸುರಿಯಲಾರಂಭಿಸಿದರು. ಕೆಲವರು ಆಸನವನ್ನು ಸಿದ್ಧಪಡಿಸತೊಡಗಿದರು. ಕೇಣಿಯ ಜಟಿಲನು ಸಹಾ ಸ್ವಯಂ ಪಟ-ಮಂಡಪವನ್ನು ಸಿದ್ಧಪಡಿಸತೊಡಗಿದನು.
                ಆಗ ಸೇಲನೆಂಬ ಬ್ರಾಹ್ಮಣ ಆಪಣದಲ್ಲಿ ವಾಸವಾಗಿದ್ದನು. ಆತನು ತ್ರಿವೇದ ಪಾರಂಗತನು, ಅವುಗಳ ಶಬ್ದಭಂಡಾರವನ್ನು, ಪೂಜಾಪದ್ಧತಿಯನ್ನು ಹಾಗು ಮಹಾಪುರುಷ ಲಕ್ಷಣ (ಸಾಮುದ್ರಿಕಾ) ಶಾಸ್ತ್ರದಲ್ಲಿ ನಿಪುಣನು ಆದಂತಹ ಆತನು ಮುನ್ನೂರು ವಿದ್ಯಾಥರ್ಿಗಳಿಗೆ ಮಂತ್ರ ಕಲಿಸುತ್ತಿದ್ದನು. ಆಗ ಸೇಲನು ಕೇಣಿಯ ಜಟಿಲನಲ್ಲಿ ಅತ್ಯಂತ ಶ್ರದ್ಧಾಳುವಾಗಿದ್ದನು. ಆಗ ಸೇಲನು ತನ್ನ ಮುನ್ನೂರು ಮಾಣವಕರೊಂದಿಗೆ ವಿಹರಿಸಲು ಹೊರಟಿದ್ದನು. ಆಗ ಕೇಣಿಯ ಜಟಿಲನ ಆಶ್ರಮದ ಹತ್ತಿರ ಆತನು ಹೊರಟನು. ಆಗ ಸೇಲನು ಕೇಣಿಯ ಬ್ರಾಹ್ಮಣನ ಜಟಿಲಧಾರಿ ಶಿಷ್ಯರು ನಾನಾ ಕೆಲಸಗಳನ್ನು ಮಾಡುತ್ತಿರುವುದು ಹಾಗು ಸ್ವಯಂ ಕೇಣಿಯ ಜಟಿಲನು ಮಂಡಪವನ್ನು ಸಿದ್ಧಪಡಿಸುತ್ತಿರುವುದನ್ನು ಕಂಡನು. ಇದನ್ನು ಕಂಡು ಸೇಲನು ಈ ರೀತಿ ಕೇಳಿದನು:
                ಏನು ಕೇಣಿಯರ ಹತ್ತಿರ ಇಂದು ಅವಾಹವಾಗುತ್ತಿದೆಯೆ (ಕನ್ಯಾಗ್ರಹಣ), ವಿವಾಹವಾಗುತ್ತಿದೆಯೆ (ಕನ್ಯಾದಾನ) ಅಥವಾ ಮಹಾಯಜ್ಞ ಹತ್ತಿರ ಬಂದಿದೆಯೆ? ಏನು ಬಲಕಾಯ (ಸೈನ್ಯ) ಸಹಿತ ಮಗಧ ರಾಜನಾದ ಸೇನಿಯ ಬಿಂಬಸಾರನು ನಾಳೆ ಭೋಜನಕ್ಕಾಗಿ ಆಮಂತ್ರಿತನಾಗಿದ್ದಾನೆಯೇ?
                ಇಲ್ಲ ಸೇಲ ಇಲ್ಲ, ನನ್ನಲ್ಲಿ ಆವಾಹವಾಗಲಿ, ವಿವಾಹವಾಗಲಿ ನಡೆಯುತ್ತಿಲ್ಲ. ಅಥವಾ ಬಲಕಾಯದ ಸಹಿತ ಸೇನಿಯ ಬಿಂಬಸಾರನು ನಿಮಂತ್ರಿತನಾಗಿಲ್ಲ ಅಥವಾ ಮಹಾ ಯಜ್ಞವು ನಡೆಯುತ್ತಿಲ್ಲ. ಶಾಕ್ಯ ಕುಲದಿಂದ ಪ್ರವಜರ್ಿತರಾದ ಶಾಕ್ಯಪುತ್ರ ಸಮಣ ಗೋತಮರು ಒಂದುಕಾಲು ಸಾವಿರ ಮಹಾ ಭಿಕ್ಷು ಸಂಘದ ಸಮೇತ ಅಂಗುತ್ತರಾಪದಲ್ಲಿ ಚಾರಿಕಾ ಮಾಡುತ್ತಾ ಅಪಣದಲ್ಲಿ ಬಂದಿರುವರು. ಆ ಮಹಾ ಭಗವಾನರ ಮಂಗಳ ಕೀತರ್ಿಯು ಈ ಶುಭ ಶಬ್ದಗಳಿಂದ ಹರಡಿದೆ. ಅವರು ಅರಹಂತರಾಗಿದ್ದಾರೆ, ಸಮ್ಯಕ್ ಸಂಬುದ್ಧರಾಗಿದ್ದಾರೆ, ವಿದ್ಯಾಚರಣಸಂಪನ್ನರಾಗಿದ್ದಾರೆ. ಸುಗತರು, ಲೋಕವಿದು, ಜನರನ್ನು ಪಳಗಿಸುವುದರಲ್ಲಿ ಅನುಪಮ ಮಾರ್ಗದಶರ್ಿಯಾಗಿದ್ದಾರೆ. ದೇವತೆಗಳಿಗೆ ಹಾಗು ಮಾನವರಿಗೆ ಗುರುಗಳಾಗಿದ್ದಾರೆ, ಬುದ್ಧರು ಹಾಗು ಭಗವಾನರಾಗಿದ್ದಾರೆ. ಆ ಮಹಾನುಭಾವರು ನಾಳೆ ಭಿಕ್ಷು ಸಂಘದ ಸಮೇತ ನನ್ನಲ್ಲಿ ನಿಮಂತ್ರಿತರಾಗಿರುವರು. ಹೇ ಕೇಣಿಯೆ, ಬುದ್ಧರೆಂದು ಹೇಳುತ್ತಿರುವೆಯಾ? ಹಾ, ಬುದ್ಧರೆಂದು ಹೇಳುತ್ತಿರುವೆ. ಹೇ ಕೇಣಿಯ, ಬುದ್ಧರೆಂದು ಹೇಳುತ್ತಿರುವೆಯಾ? ಹೌದು, ಬುದ್ಧರೆಂದೇ ಹೇಳುತ್ತಿರುವೆ. ಏನು ನೀನು ಬುದ್ಧರೆಂದು ಹೇಳುತ್ತಿರುವೆಯಾ? ಹೌದು, ಬುದ್ಧರೆಂದೇ ಹೇಳುತ್ತಿರುವೆ.
                ಆಗ ಸೇಲ ಬ್ರಾಹ್ಮಣನಿಗೆ ಹೀಗೆನ್ನಿಸಿತು- ಬುದ್ಧ ಎಂಬ ಮಹಾನ್ ಘೋಷ (ಶಬ್ದ)ವೇ ಲೋಕದಲ್ಲಿ ದುರ್ಬಲವಾಗಿದೆ. ನಮ್ಮ ಮಂತ್ರಗಳಲ್ಲಿ ಮಹಾಪುರುಷರ ಮೂವತ್ತೆರಡು ಲಕ್ಷಣಗಳು ಬಂದಿವೆ. ಅವುಗಳಿಂದ ಯುಕ್ತವಾದ ಮಹಾಪುರುಷನಿಗೆ ಕೇವಲ ಎರಡು ಗತಿಗಳು ಬರುತ್ತದೆ, ಅನ್ಯವಲ್ಲ. ಆತನು ಗೃಹಸ್ಥನಾಗಿದ್ದರೆ ನಾಲ್ಕು ದಿಕ್ಕುಗಳ ಪರಮಸೀಮೆಯವರೆಗೂ ರಾಜ್ಯಗಳನ್ನು ಪಡೆದಿರುವಂತಹ ಧಾಮರ್ಿಕ ಧರ್ಮರಾಜ ಚಕ್ರವತರ್ಿ ಆಗುತ್ತಾನೆ. ಆತನು ಸಾಗರ ಪರ್ಯಂತ ಈ ಪೃಥ್ವಿಯನ್ನು ದಂಡಶಸ್ತ್ರವಿಲ್ಲದ ಧರ್ಮದಿಂದಲೇ ವಿಜಯಗೊಳಿಸಿ, ಧರ್ಮದಿಂದ ಶಾಸನ ಮಾಡುತ್ತಾನೆ. ಏಳು ರತ್ನಗಳಿಂದ ಕೂಡಿರುತ್ತಾನೆ. ಆ ಏಳು ರತ್ನಗಳಾವುವು ಎಂದರೆ: ಚಕ್ರರತ್ನ, ಹಸ್ತಿರತ್ನ, ಆಶ್ವರತ್ನ, ಮಣಿರತ್ನ, ಸ್ತ್ರೀರತ್ನ, ಗೃಹಪತಿರತ್ನ, ಏಳನೆಯದು ಪರಿಣಾಯಕ ರತ್ನ, ಸಾವಿರಕ್ಕೂ ಹೆಚ್ಚು ಶೂರರು, ವೀರಾಂಗರು ಹಾಗು ಪರರ ಸೈನ್ಯವನ್ನು ಮದಿಸುವಂತಹ ಆತನಿಗೆ ಪುತ್ರರಿರುತ್ತಾರೆ. ಆತನು ಈ ಪೃಥ್ವಿಯನ್ನು ಸಾಗರದವರೆಗೂ ದಂಡಶಾಸ್ತ್ರದ ಸಹಾಯವಿಲ್ಲದೆ, ಬಳಸದೆಯೆ, ಧರ್ಮದಿಂದ ಗೆದ್ದು, ನಿವಾಸಿಸುತ್ತಾನೆ ಮತ್ತು ಆತನು ಏನಾದರೂ ಗೃಹವನ್ನು ತ್ಯಜಿಸಿ ಅನಿಕೇತನನಾಗಿ ಪ್ರವಜರ್ಿತನಾದರೆ ಲೋಕದಲ್ಲಿ ಆವರಣರಹಿತ ಅರಹಂತರು, ಸಮ್ಮಾಸಂಬುದ್ಧರಾಗುತ್ತಾರೆ.
                ಹೇ, ಕೇಣಿಯ, ಹಾಗಾದರೆ ಆ ಗೋತಮ ಸಮ್ಮಾಸಂಬುದ್ಧರು, ಅರಹಂತರು ಈಗ ಎಲ್ಲಿ ವಾಸಿಸುತ್ತಿರುವರು.
                ಹೀಗೆ ಹೇಳಿದ ನಂತರ ಕೇಣಿಯ ಜಟಿಲನು ಬಲಬಾಹುವನ್ನು ಎತ್ತಿ ಸೇಲ ಬ್ರಾಹ್ಮಣನಿಗೆ ಹೀಗೆ ಹೇಳಿದನು- ಅದೇ ಸೇಲ, ಆ ನೀಲ ಕಾಡುಗಳ ಪಂಕ್ತಿಯಲ್ಲಿ.
                ಆಗ ಸೇಲನು ಮುನ್ನೂರು ಮಾಣವಕರೊಂದಿಗೆ ಎಲ್ಲಿ ಭಗವಾನರಿದ್ದರೋ ಅಲ್ಲಿಗೆ ಬಂದನು. ಆಗ ಸೇಲನು ತನ್ನ ಆ ಮಾಣವಕರಿಗೆ ಹೀಗೆ ಹೇಳಿದನು: ತಾವೆಲ್ಲರೂ ನಿಶ್ಶಬ್ದದಿಂದಿರಿ, ಹೆಜ್ಜೆಗಳ ನಂತರ ಹೆಜ್ಜೆಯನ್ನಿಡುತ್ತಾ ಶಬ್ದರಹಿತರಾಗಿ ಬನ್ನಿ. ಸಿಂಹದ ರೀತಿ ತಥಾಗತರು ಏಕಾಂಗಿಯಾಗಿ ಸಂಚರಿಸುವವರಾಗಿರುತ್ತಾರೆ. ಹಾಗು ಅವರು ದುರ್ಲಭವಾಗಿರುತ್ತಾರೆ. ನಾನು ಸಮಣ ಗೋತಮರೊಂದಿಗೆ ಸಂವಾದ ಮಾಡುತ್ತಿರುವಾಗ ತಾವುಗಳು ನನ್ನ ಮಧ್ಯೆ ಮಾತು ಅಡಬೇಡಿ. ತಾವು ನನ್ನ ಕಥನ ಮುಗಿಯುವವರೆಗೂ ಸುಮ್ಮನಿರಿ.
                ಆಗ ಸೇಲ ಬ್ರಾಹ್ಮಣನು ಎಲ್ಲಿ ಭಗವಾನರಿದ್ದರೋ ಅಲ್ಲಿಗೆ ಬಂದನು. ಭಗವಾನರೊಡನೆ ಸಂಬೋಧನೆ ಮಾಡಿ ಕುಶಲ ವಿಚಾರಿಸಿ, ಒಂದುಕಡೆ ಕುಳಿತನು. ಒಂದುಕಡೆ ಕುಳಿತ ಸೇಲ ಬ್ರಾಹ್ಮಣನು ಭಗವಾನರ ಶರೀರದಲ್ಲಿ 32 ಮಹಾಪುರುಷ ಲಕ್ಷಣಗಳನ್ನು ಹುಡುಕತೊಡಗಿದನು. ಸೇಲ ಬ್ರಾಹ್ಮಣ 2 ಮಹಾಪುರುಷ ಲಕ್ಷಣದ ಹೊರತು ಮತ್ತೆಲ್ಲಾ ಮಹಾಪುರುಷ ಅಧಿಕಾಂಶವನ್ನು ಭಗವಾನರಲ್ಲಿ ವೀಕ್ಷಿಸಿದನು. ಹಾಗೆ ಉಳಿದ ಆ ಮಹಾಪುರುಷ ಲಕ್ಷಣಗಳೆಂದರೆ ಕೋಶದಿಂದ ಆವೃತವಾದ ಪುರುಷ ಗುಪ್ತೇಂದ್ರಿಯ ಹಾಗು ಅತಿ ದೀರ್ಘವಾದ ನಾಲಿಗೆ. ಈ ಎರಡು ಲಕ್ಷಣದಲ್ಲಿ ಆತನು ಸಂದೇಹಿತನಾಗಿದ್ದನು. ಆಗ ಭಗವಾನರು ಈ ರೀತಿ ಋದ್ಧಿಬಲವನ್ನು ಪ್ರಕಟಪಡಿಸಿದರು. ಅದರಿಂದ ಸೇಲ ಬ್ರಾಹ್ಮಣನು ಭಗವಾನರ ಕೋಶದಿಂದ ಆವೃತವಾದ ಪುರುಷೇಂದ್ರಿಯವನ್ನು ಕಂಡನು. ನಂತರ ಭಗವಾನರು ತಮ್ಮ ಉದ್ದವಾದ ನಾಲಿಗೆಯನ್ನು ತೆರೆದು ಅದನ್ನು ಎರಡು ಕಿವಿಗಳ ಮೇಲ್ಭಾಗಕ್ಕೆ ತಾಗಿಸಿದರು. ಮೂಗಿಗೂ ಹಾಗು ಸಂಪೂರ್ಣ ಲಲಾಟ ಮಂಡಲಕ್ಕೆ (ಹಣೆ) ನಾಲಿಗೆಯಿಂದ ಮುಚ್ಚಿದರು.
                ಆಗ ಸೇಲ ಬ್ರಾಹ್ಮಣನಿಗೆ ಈ ರೀತಿ ಅನಿಸಿತು- ಗೋತಮ ಸಮಣರು ಅಪರಿಪೂರ್ಣರಾಗಿಲ್ಲ, ಪರಿಪೂರ್ಣ ಸಂಪನ್ನರು. ಮೂವತ್ತೆರಡು ಮಹಾಪುರುಷ ಲಕ್ಷಣಗಳಿಂದ ಯುಕ್ತರಾದವರು. ಆದರೂ ಸಹಾ ಅವರು ಬುದ್ಧರೋ ಅಲ್ಲವೋ ತಿಳಿಯಲಾರೆನು. ವೃದ್ಧ ಮಹಲ್ಲಕ ಬ್ರಾಹ್ಮಣರು, ಆಚಾರ್ಯ ಪ್ರಾಚಾರ್ಯರು ಈ ರೀತಿ ಹೇಳಿರುವುದನ್ನು ಕೇಳಿದ್ದೇನೆ- ಯಾರು ಅರಹಂತರು, ಸಮ್ಮಾಸಂಬುದ್ಧರು ಆಗಿರುತ್ತಾರೋ, ಅವರು ತಮ್ಮ ಶ್ರೇಷ್ಠ ಗುಣಗಳನ್ನು ಕೇಳಿದರೆ (ಅಪೇಕ್ಷಿಸಿದರೆ) ಪ್ರಕಾಶಪಡಿಸುವಂತಹವರಾಗಿರುತ್ತಾರೆ. ಏಕೆ ನಾನು ಅವರಿಗೆ ಸಮ್ಯಕ್ ಉಪಯುಕ್ತ ಗಾಥೆಗಳಿಂದ ಅವರ ಸ್ತುತಿ ಮಾಡಬಾರದು. ಆಗ ಸೇಲ ಬ್ರಾಹ್ಮಣನು ಭಗವಾನರ ಮುಂದೆ ಉಪಯುಕ್ತ ಗಾಥೆಗಳಿಂದ ಸ್ತುತಿಸಹತ್ತಿದನು.
1.            ಪರಿಪೂರ್ಣ ಸುಂದರ ಕಾಯವನ್ನು, ಸುಂದರವಾದ ತೇಜವನ್ನು ಹೊಂದಿರುವರೆ, ಶ್ರೇಷ್ಠ ಹುಟ್ಟನ್ನು ಪಡೆದಿರುವವರೆ, ಅತ್ಯಂತ ಪ್ರಿಯವಾದ ದರ್ಶನ ಸಂಪನ್ನರೇ, ಸುವರ್ಣ ವರ್ಣದವರೇ, ಹೇ ಭಗವಾನ್, ಸುಶುಕ್ಷ ದಂತದವರೆ ಹಾಗು ವೀರ್ಯವಂತರೇ.
2.            ನರರಲ್ಲಿ ಸುಂದರ ಜನ್ಮಪ್ರಾಪ್ತಿಯುಳ್ಳವನಲ್ಲಿ ಯಾವ ವ್ಯಂಜನ (ಲಕ್ಷಣ) ವಿರುವುದೋ ಅವೆಲ್ಲ ಮಹಾಪುರುಷ ಲಕ್ಷಣಗಳು ನಿಮ್ಮ ಕಾಯದಲ್ಲಿವೆ.
3.            ಪ್ರಸನ್ನ ನೇತ್ರದವರೇ, ಸುಮುಖರೆ, ಪರಮಶ್ರೇಷ್ಠ ಋಜುವುಳ್ಳವರೇ, ಪ್ರಜ್ಞಾವಂತರೇ, ತಾವು ಸಮಣ ಸಂಘ ಮಧ್ಯದಲ್ಲಿ ಆದಿತ್ಯನ ರೀತಿ ವಿರಾಜಮಾನರಾಗಿರುವಿರಿ.
4.            ಕಲ್ಯಾಣ ದರ್ಶನವುಳ್ಳ ಭಿಕ್ಷುಗಳೇ, ಕಂಚನ (ಸ್ವರ್ಣ) ಸಮಾನವಾದ ಶರೀರದವರೇ, ಇಂತಹ ಅತ್ಯುತ್ತಮ ವರ್ಣವನ್ನು ನಿಮಗೆ ಸಮಣಭಾವ ಏತರದು?
5.            ನೀವು ನಾಲ್ಕು ದಿಕ್ಕುಗಳಲ್ಲೂ ರಾಜ್ಯ ಪಡೆಯುವಂತಹವರು, ಜಂಬುದ್ವೀಪದ (ಭಾರತ) ಸ್ವಾಮಿ, ತಾವು ಚಕ್ರವತರ್ಿ ರಾಜರಾಗುವಂತವರಾಗಿದ್ದೀರಿ.
6.            ಕ್ಷತ್ರಿಯ ಭೋಜರಾಜರು (ಮಾಂಡಲಿಕ ರಾಜರು) ನಿಮ್ಮ ಅನುಯಾಯಿಗಳಾಗುವರು. ಹೇ ಗೋತಮರೇ, ರಾಜಾಧಿರಾಜ ಮನುಜೇಂದ್ರರಾಗಿ ರಾಜ್ಯಭಾರ ಮಾಡಿ.
7.            ಭಗವಾನರು - ಸೇಲ, ನಾನು ರಾಜನಾಗಿರುವೆನು, ಅನುಪಮ ಧರ್ಮರಾಜ. ನಾನು ಹಿಂತಿರುಗದ (ನಿಲ್ಲದ) ಧರ್ಮಚಕ್ರವನ್ನು ಚಲಿಸುತ್ತಿದ್ದೇನೆ.
8.            ಸೇಲ ಬ್ರಾಹ್ಮಣ - ಅನುಪಮ ಧಮ್ಮರಾಜರೆಂದು, ಧಮ್ಮದಿಂದ ಚಕ್ರವನ್ನು ಚಲಿಸುತ್ತಿರುವೆ ಎಂದು ಹೇಳುವ ಗೋತಮರೇ,
9.            ತಮ್ಮ ಶಾಸನದ ಶ್ರೇಷ್ಠ ಸೇನಾಪತಿ ಶ್ರಾವಕನಾರು? ಯಾರು ಈ ಚಲಿಸುತ್ತಿರುವ ಧಮ್ಮಚಕ್ರವನ್ನು ಅನುಚಾಲನೆ ಮಾಡುವವ?
10.          ಭಗವಾನರು - ಸೇಲ, ನನ್ನಿಂದ ಸಂಚಲಿತವಾಗುತ್ತಿರುವ ಈ ಅನುಪಮ ಧಮ್ಮಚಕ್ರವನ್ನು ತಥಾಗತರ ಅನುಜಾತ (ಹಿಂದೆಯೇ ಉತ್ಪನ್ನವಾದ) ಸಾರಿಪುತ್ರ ಅನುಚಾಲನೆ ಮಾಡುವವನಾಗಿರುವನು.
11.          ಅಭಿಜ್ಞೆಯನ್ನು (ಅರಿಯಬೇಕಾದ ಶ್ರೇಷ್ಠತ್ವವನ್ನು) ಅರಿತಿರುವೆನು (ಜ್ಞಾನಿಯಾಗಿರುವೆನು), ಭಾವನವನ್ನು (ವೃದ್ಧಿಸಬೇಕಾದುದೆಲ್ಲವನ್ನು / ಪರಿಪೂರ್ಣತೆಗೊಳಿಸಬೇಕಾಗಿರುವುದನ್ನು) ಸುಸಂವೃದ್ಧಿಗೊಳಿಸಿರುವೆನು. ತ್ಯಜಿಸಬೇಕಾಗಿರುವುದೆಲ್ಲಾ ಪರಿತ್ಯಜಿಸಿರುವೆನು. ಆದ್ದರಿಂದ ಹೇ ಬ್ರಾಹ್ಮಣನೇ, ನಾನು ಬುದ್ಧನಾಗಿರುವೆನು.
12.          ಬ್ರಾಹ್ಮಣನೇ, ನನ್ನ ವಿಷಯದಲ್ಲಿ ಸಂಶಯವನ್ನು ದೂರೀಕರಿಸು, ಬಿಟ್ಟುಬಿಡು, ಬಾರಿ ಬಾರಿ ಸಂಬುದ್ಧರ ದರ್ಶನ ದುರ್ಲಭವಾಗಿದೆ.
13.          ಲೋಕದಲ್ಲಿ ಮತ್ತೆ ಮತ್ತೆ ಯಾರ ಪ್ರಾದುಬರ್ಾವ ದುರ್ಲಭವೋ ಅಂತಹ ನಾನು (ರಾಗಾದಿ) ಶಲ್ಯ (ಶಸ್ತ್ರ) ವನ್ನು ಛೇದಿಸುವ ಅನುಪಮ ಸಂಬುದ್ಧನಾಗಿದ್ದೇನೆ.
14.          ಬ್ರಹ್ಮರಲ್ಲಿಯೂ ತುಲನೆಗೆ ರಹಿತನಾದ (ಮೀರಿದ) ಮಾರನ ಸೈನ್ಯದ ಪ್ರಮರ್ದಕನಾದ ಸರ್ವಶತ್ರು ವಶೀಕೃತನಾಗಿ ನಿರ್ಭಯನಾಗಿ ಪ್ರಮುದಿತನಾಗಿದ್ದೇನೆ.
15.          ತಾವೆಲ್ಲರೂ ಚಕ್ಷುವಂತ ಹೇಳುವಂತೆ ಕೇಳಿರಿ. ಶಲ್ಯಕರ್ತನಾದ ಮಹಾವೀರರು ವನದಲ್ಲಿ ಸಿಂಹದ ಘರ್ಜನೆಯಂತೆ ಘೋಷಿಸುತ್ತಿದ್ದಾರೆ.
16.          ಬ್ರಹ್ಮ ಜೀವಿಗಳಲ್ಲೂ ತುಲನಾರಹಿತರಾದ (ಮೀರಿದ) ಮಾರನ ಸೇನೆಯನ್ನು ಮದರ್ಿಸುವಂತಹವರನ್ನು ನೋಡಿ ಯಾರು ತಾನೇ ಪ್ರಸನ್ನನಾಗುವುದಿಲ್ಲ. ಆತನು ಕೃಷ್ಣಾಭಿಜಾತಕನಾಗಿದ್ದರೂ ಸಹಾ ಪ್ರಸನ್ನನಾಗುವನು.
17.          ಸೇಲ - ಯಾರು ನನ್ನನ್ನು ಬಯಸುವರೋ ಅವರು ನನ್ನನು ಹಿಂಬಾಲಿಸಲಿ. ಯಾರು ನನ್ನನ್ನು ಬಯಸುವುದಿಲ್ಲವೋ ಅವರು ಹೋಗಲಿ. ನಾನು ಅತ್ಯುತ್ತಮ ಪ್ರಜ್ಞಾವಂತ ಬುದ್ಧರ ಬಳಿ ಪ್ರವಜರ್ಿತನಾಗುತ್ತೇನೆ.
18.          ಸೇಲನ ಶಿಷ್ಯರು - ತಮಗೆ ಈ ಸಮ್ಮಾಸಂಬುದ್ಧರ ಶಾಸನ ರುಚಿಸಿದ್ದರೆ, ನಾವು ಸಹಾ ವರ-ಪ್ರಜ್ಞಾರ ಬಳಿ ಪ್ರವಜರ್ಿತರಾಗುವೆವು.
19.          ಇದನ್ನು ಮುನ್ನೂರು ಬ್ರಾಹ್ಮಣರು ಕೈಜೋಡಿಸಿ ಯಾಚಿಸುತ್ತಿದ್ದರು ಭಗವಾನ್ ನಾವು ಸಹಾ ನಿಮ್ಮ ಬಳಿ ಬ್ರಹ್ಮಚರ್ಯದ ಪಾಲನೆ ಮಾಡುವೆವು.
20.          ಭಗವಾನರು - ಸೇಲ, ಇದು ಪ್ರತ್ಯಕ್ಷ ಫಲದಾಯಕವಾದ, ಕಾಲವನ್ನು ಮೀರಿದ, ಪೂರ್ಣತರವಾಗಿ ವ್ಯಾಖಿತಗೊಂಡ ಬ್ರಹ್ಮಚರ್ಯವಾಗಿದೆ. ಇಲ್ಲಿ ಪ್ರಮಾದಶೂನ್ಯ ಕಲಿಯುವವರ ಪ್ರವಜ್ರ್ಯ ಅಮೋಘವಾಗಿರುತ್ತದೆ.
                ಸೇಲ ಬ್ರಾಹ್ಮಣನು ಪರಿಷತ್ತಿನ ಸಹಿತ ಭಗವಾನರಿಂದ ಪ್ರವಜ್ರ್ಯ ಹಾಗು ಉಪಸಂಪದ ಪಡೆದನು. ಆಗ ಕೇಣಿಕ ಜಟಿಲನು ರಾತ್ರಿ ಕಳೆದನಂತರ ತನ್ನ ಆಶ್ರಮದಲ್ಲಿ ಉತ್ತಮೋತ್ತಮವಾದ ಖಾದ್ಯ ಭೋಜನವನ್ನು ತಯಾರಿಸಿದನು. ಭಗವಾನರಿಗೆ ಕಾಲದ ಸೂಚನೆ ನೀಡಲಾಯಿತು. ಆಗ ಭಗವಾನರು ಪೂವರ್ಾಹ್ನ ಸಮಯದಲ್ಲಿ ಚೀವರ ಧರಿಸಿ, ಪಾತ್ರೆ ತೆಗೆದುಕೊಂಡು ಎಲ್ಲಿ ಕೇಣಿಯ ಜಟಿಲನ ಆಶ್ರಮವಿತ್ತೋ ಅಲ್ಲಿ ಹೊರಟರು. ಹಿಂದೆಯೇ ಭಿಕ್ಷುಸಂಘವು ಹೊರಟು ಅವರ ಹಿಂದಿನ ಆಸನಗಳಲ್ಲಿ ಕುಳಿತರು. ಆಗ ಕೇಣಿಯ ಜಟಿಲನು ಬುದ್ಧ ಪ್ರಮುಖ ಭಿಕ್ಷು ಸಂಘಕ್ಕೆ ತನ್ನ ಕೈಯಾರೆ ಸಂತರ್ಪಣೆ ಮಾಡಿ ಪೂರ್ಣಗೊಳಿಸಿದನು. ಕೇಣಿಯ ಜಟಿಲನು ಭಗವಾನರಿಗೆ ಭೋಜನ ಮಾಡಿಸಿ ಕೈಯನ್ನು ಕೆಳಗೆ ಮಾಡಿದ ನಂತರ ಕೆಳಗಿನ ಆಸನ ಸಿದ್ಧಪಡಿಸಿ ಒಂದುಕಡೆ ಕುಳಿತನು. ಒಂದುಕಡೆ ಕುಳಿತ ಕೇಣಿಯ ಜಟಿಲನಿಗೆ ಭಗವಾನರು ಈ ಗಾಥೆಗಳಿಂದ ಅನುಮೋದಿಸಿದರು.
21.          ಯಜ್ಞಗಳಲ್ಲಿ ಅಗ್ನಿಹೋತ್ರವು ಮುಖ್ಯವಾಗಿರುವಂತೆ, ಛಂದಸ್ಸುಗಳಲ್ಲಿ ಸಾವಿತ್ರಿಯು ಮುಖ್ಯವಾಗಿರುವಂತೆ, ಮಾನವರಲ್ಲಿ ರಾಜನು ಮುಖ್ಯವಾಗಿದ್ದಾನೆ. ನದಿಗಳಲ್ಲಿ ಮುಖ್ಯವಾದದು ಸಾಗರ.
22.          ನಕ್ಷತ್ರಗಳಲ್ಲಿ ಮುಖ್ಯ ಚಂದಿರನಾಗಿರುವಂತೆ ಸುಡುವವರಲ್ಲಿ ಆದಿತ್ಯನಾಗಿದ್ದಾನೆ. ಇಚ್ಚಿತರ ಮುಖ್ಯ ಅಭಿಲಾಷೆ ಪೂರ್ಣವಾಗಿರುವಂತೆ ಹಾಗೆಯೇ ಪೂಜೆ ಆತಿಥ್ಯಕ್ಕೆ ಪ್ರಾಮುಖ್ಯರೂ ಸಂಘವಾಗಿದೆ.
                ಭಗವಾನರು ಕೇಣಿಯ ಜಟಿಲನಿಗೆ ಈ ಗಾಥೆಗಳಿಂದ ಅನುಮೋದಿಸಿ ಆಸನದಿಂದ ಎದ್ದು ಹೊರಟರು.
                ಆಗ ಆಯುಷ್ಮಂತ ಸೇಲನು ಪರಿಷತ್ತಿನ ಸಹಿತ ಏಕಾಂತದಲ್ಲಿ ಪ್ರಮಾದರಹಿತನಾಗಿ, ಪರಿಶ್ರಮಶೀಲನಾಗಿ,
ಸ್ವ-ನಿಗ್ರಹವುಳ್ಳವನಾಗಿ, ವಿಚಾರಿಸುತ್ತಿದ್ದನು. ಯಾವುದಕ್ಕಾಗಿ ಕುಲಪುತ್ರರು ಗೃಹವನ್ನು ತ್ಯಜಿಸಿ ಅನಿಕೇತನರಾಗಿ, ಪ್ರವಜರ್ಿತರಾಗುವರೋ, ಅಂತಹ ಅನುಪಮ ಬ್ರಹ್ಮಚರ್ಯದ ಪೂರ್ಣತೆ (ನಿಬ್ಬಾಣ)ಯನ್ನು ಈ ಜನ್ಮದಲ್ಲೇ ಸ್ವಯಂ ಸಾಕ್ಷಾತ್ಕರಿಸಿ, ಪ್ರಾಪ್ತಿಮಡಿ, ಜನ್ಮ ಕ್ಷೀಣಿಸಿತು, ಬ್ರಹ್ಮಚರ್ಯವು ಪೂರ್ಣವಾಯಿತು, ಮಾಡಬೇಕಾದ್ದು ಮಾಡಿಯಾಯಿತು ಮತ್ತು ಇಲ್ಲಿ ಮಾಡುವುದು ಏನೂ ಉಳಿದಿಲ್ಲ ಎಂದು ಅರಿತನು. ಪರಿಷತ್ತಿನ ಸಹಿತ ಆಯುಷ್ಮಂತ ಸೇಲನು ಅರಹಂತನಾದನು.
                ನಂತರ ಆಯುಷ್ಮಂತ ಸೇಲನು ಶಾಸ್ತರ ಬಳಿ ಹೋಗಿ ಚೀವರವನ್ನು ಒಂದು ಹೇಗಲಮೇಲೆ ಹಾಕಿಕೊಂಡು ಎಲ್ಲಿ ಭಗವಾನರಿದ್ದರೋ ಅಲ್ಲಿ ಅಂಜಲಿ ಬದ್ಧನಾಗಿ ಭಗವಾನರಿಗೆ ಈ ಗಾಥೆಗಳನ್ನು ಹೇಳಿದನು.
23.          ಹೇ ಚಕ್ಷುವಂತರೇ! ಯಾವ ನಾನು ಎಂಟು ದಿನದ ಹಿಂದೆ ತಮ್ಮಲ್ಲಿ ಶರಣು ಬಂದೆನೋ, ಹೇ ಭಗವಾನ್! ನಿಮ್ಮ ಶಾಸನದಲ್ಲಿ ಏಳನೇ ರಾತ್ರಿಯಲ್ಲೇ ದಾಂತ (ಅರಹಂತ) ನಾದೆನು.
24.          ನೀವೇ ಬುದ್ಧರಾಗಿರುವಿರಿ, ನೀವೇ ಪರಮಶ್ರೇಷ್ಠ ಶಾಸ್ತರಾಗಿರುವಿರಿ. ನೀವೇ ಮಾರವಿಜಯಿ ಮುನಿಯಾಗಿರುವಿರಿ. ನೀವು ರಾಗಾದಿ ಅನುಶಯಗಳನ್ನು ಛಿದ್ರ ಛಿದ್ರ ಮಾಡಿ ಸ್ವಯಂ ಉತ್ತೀರ್ಣರಾಗಿ ಈ ಪ್ರಜೆಗಳನ್ನು ದಾಟಿಸುತ್ತಿದ್ದೀರಿ.
25.          ನಿಮ್ಮ ಉಪಾದಿಗಳೆಲ್ಲವೂ ದೂರವಾಗಿದೆ. ಆಸವಗಳೆಲ್ಲವೂ ನಿಶ್ಶೇಷ ನಾಶವಾಗಿದೆ. ಸಿಂಹ ಸಮಾನವಾಗಿ ಭವದ ಭೀಷಣತೆಯಿಂದ ರಹಿತರಾಗಿ, ತಾವು ಉಪಾದಿತರಹಿತರಾಗಿರುವಿರಿ.
26.          ಈ ಮುನ್ನೂರು ಭಿಕ್ಷುಗಳು ಕೈಜೋಡಿಸಿ ನಿಂತಿರುವರು. ಹೋ ಪರಮವೀರರೇ, ಪಾದವನ್ನು ಪ್ರಸಾರಿತ ಮಾಡಿ, ಈ ನಾಗರ (ಪಾಪರಹಿತ) ಶಾಸ್ತರ ವಂದನೆ ಮಾಡಿ.
ಇಲ್ಲಿಗೆ ಸೇಲ ಸುತ್ತ ಮುಗಿಯಿತು.



sabhiya sutta (6. ಸಭಿಯ ಸುತ್ತ)

6. ಸಭಿಯ ಸುತ್ತ
                (ಸಭಿಯ ಪರಿವ್ರಾಜಕನು ತತ್ಕಾಲಿನ ಆರು ಶಾಸ್ತರುಗಳ ಉತ್ತರಗಳಿಂದ ಸಂತುಷ್ಟನಾಗದೆ ಭಗವಾನರ ಬಳಿಗೆ ಹೋದನು ಮತ್ತು ಅವರ ಉತ್ತರಗಳಿಂದ ಪ್ರಸನ್ನನಾಗಿ ಭಿಕ್ಷುವಾದನು.)

                ಹೀಗೆ ನಾನು ಕೇಳಿದ್ದೇನೆ. ಒಮ್ಮೆ ಭಗವಾನರು ರಾಜಗೃಹದಲ್ಲಿ ವೇಣುವನದ ಕಲಂದಕ ನಿವಾಪದಲ್ಲಿ ವಾಸವಾಗಿದ್ದರು. ಆಗ ಸಭಿಯ ಪರಿವ್ರಾಜಕನ ಹಿತೈಷಿ ದೇವತೆಯು ಕೃಪೆಯಿಂದ ಕೆಲವು ಪ್ರಶ್ನೆಗಳನ್ನು ಹೇಳಿ ಹೀಗೆ ಹೇಳಿದಳು- ಸಭಿಯ ಯಾವ ಶ್ರಮಣ ಅಥವಾ ಬ್ರಾಹ್ಮಣ ಈ ಪ್ರಶ್ನೆಗಳಿಗೆ ಕೇಳಿದಾಗ ಉತ್ತರಿಸುವರೋ ಅವರ ಬಳಿ ಬ್ರಹ್ಮಚರ್ಯದ ಪಾಲನೆ ಮಾಡು.
                ಆಗ ಸಭಿಯ ಪರಿವ್ರಾಜಕನು ಆ ದೇವತೆಯಿಂದ ಪ್ರಶ್ನೆಗಳನ್ನು ಕಲಿತು, ಯಾರು ಶ್ರಮಣ ಬ್ರಾಹ್ಮಣ ಗಣದವರೋ, ಗಣಾಚಾರ್ಯರೋ, ಪ್ರಸಿದ್ಧರೋ, ಯಶಸ್ವಿ ತೀರ್ಥಂಕರರೋ, ಬಹಳ ಜನರಿಂದ ಉತ್ತಮರೆಂದು ಪರಿಗಣಿಸಲ್ಪಟ್ಟವರೋ, ಅಂತಹವರಾದ ಪೂರ್ಣಕಸ್ಸಪ, ಮಕ್ಕಲಿ ಗೋಸಾಲ, ಅಜಿತ ಕೇಸಕಂಬಳಿ, ಪ್ರಕೃಧ ಕಾತ್ಯಯಾನ, ಸಂಜಯ ಬೆಲಟ್ಟಪುತ್ತ, ನಿಗಂಠನಾಥಪುತ್ತ (ವರ್ಧಮಾನ ಮಹಾವೀರ) ಅವರ ಬಳಿಗೆ ಹೋಗಿ ಪ್ರಶ್ನೆಗಳನ್ನು ಕೇಳಿದನು. ಅವರುಗಳು ಸಭಿಯನ ಪ್ರಶ್ನೆಗಳಿಗೆ ಉತ್ತರಿಸಲು ಆಗಲಿಲ್ಲ. ಉತ್ತರ ನೀಡಲಾರದೆ ಕ್ರೋಧ, ದ್ವೇಷ ಮತ್ತು ಬೇಸರ ವ್ಯಕ್ತಪಡಿಸುತ್ತಿದ್ದರು. ಅವರಂತೂ ಸಭಿಯನಿಗೆಯೇ ಪ್ರಶ್ನೆಗಳನ್ನು ಕೇಳುತ್ತಿದ್ದರು.
                ಆಗ ಸಭಿಯನಿಗೆ ಮನದಲ್ಲಿ ಈ ರೀತಿ ಆಯಿತು- ಈ ಗೋತಮ ಶ್ರಮಣರು ಸಹಾ ಸಂಘವುಳ್ಳವರಾಗಿದ್ದಾರೆ, ಗಣವುಳ್ಳವರು, ಗಣಾಚಾರ್ಯರು, ಪ್ರಸಿದ್ಧರು, ಯಶಸ್ವಿಗಳು, ತೀರ್ಥಂಕರರು ಹಾಗು ಬಹು ಜನಗಳಿಂದ ಪರಮಶ್ರೇಷ್ಠರೆಂದು ಪರಿಗಣಿಸಲ್ಪಟ್ಟಿದ್ದಾರೆ. ಏಕೆ ನಾನು ಅವರಲ್ಲಿಗೆ ಹೋಗಿ ಈ ಪ್ರಶ್ನೆಗಳನ್ನು ಪ್ರಶ್ನಿಸಬಾರದು ಎಂದು ಯೋಚಿಸಿ ನಂತರ ಸಭಿಯನ ಮನದಲ್ಲಿ ಹೀಗೂ ಸಂಶಯ ಉತ್ಪತ್ತಿಯಾಯಿತು-
                ಯಾವ ಶ್ರಮಣ ಬ್ರಾಹ್ಮಣರು ವೃದ್ಧರಾಗಿದ್ದಾರೋ, ಜೀರ್ಣರಾಗಿದ್ದಾರೋ, ಅವಸ್ಥೆ ದಾಟಿದವರಾಗಿದ್ದಾರೊ, ಸ್ಥವಿರರು, ದೀರ್ಘ ಜೀವಿಗಳೂ, ಬಹಳ ದಿನಗಳಿಂದಲೂ ಪ್ರವಜ್ರ್ಯರಾಗಿರುವವರು, ಸಂಘದವರು, ಗಣದವರು, ಗಣಾಚಾರ್ಯರು, ಪ್ರಸಿದ್ಧರು, ಯಶಸ್ವಿಗಳು, ತೀರ್ಥಂಕರರು ಹಾಗು ಬಹು ಜನಗಳಿಂದ ಉತ್ತಮರೆಂದು ಪರಿಗಣಿಸಲ್ಪಟ್ಟವರೇ ಉತ್ತರ ನೀಡಲಾರದೆ ಹೋದರು. ಉತ್ತರ ನೀಡದೆ ಕ್ರೋಧ, ದ್ವೇಷ ಹಾಗು ಬೇಸರ ವ್ಯಕ್ತಪಡಿಸಿದರು. ಅವರಂತೂ ನನಗೆ ಪ್ರಶ್ನೆಗಳನ್ನು ಹಾಕುತ್ತಿದ್ದರು. ಹೀಗಿರುವಾಗ ಶ್ರಮಣ ಗೋತಮರು ನನ್ನ ಪ್ರಶ್ನೆಗಳಿಗೆ ಉತ್ತರಿಸುವರೇ? ಶ್ರಮಣ ಗೋತಮರಂತು ತರುಣರಾಗಿದ್ದಾರೆ. ಪ್ರವಜ್ರ್ಯವು ಸಹಾ ಹೊಸದಾಗಿದೆ.
                ಆಗ ಸಭಿಯ ಪರಿವ್ರಾಜಕನಿಗೆ ಹೀಗೂ ಸಂಶಯ ಉತ್ಪತ್ತಿಯಾಯಿತು- ಶ್ರಮಣರು ತರುಣರಾಗಿದ್ದಾರೆ ಎಂದು ತಿಳಿದು ಅವರ ಅನಾಧಾರಣೆ ಮಾಡಕೂಡದು. ಶ್ರಮಣರು ತರುಣರಾಗಿದ್ದಾರೆ, ಅವರು ಮಹಾ ವೃದ್ಧಿಶಕ್ತಿಯುಳ್ಳವರು ಹಾಗು ಮಹಾ ಪ್ರತಾಪಿಯೂ ಆಗಿದ್ದಾರೆ. ನಾನು ಏಕೆ ಅವರಲ್ಲಿಗೆ ಹೋಗಿ ಪ್ರಶ್ನಿಸಬಾರದು? ಎಂದು ನಿರ್ಧರಿಸಿ ಅಲ್ಲಿಗೆ ಸಭಿಯ ಪರಿವ್ರಾಜಕನು ರಾಜಗೃಹಕ್ಕೆ ಚಾರಿಕೆಯಿಂದ ಹೊರಟನು.
                ಆತನು ಅಲ್ಲಿಂದ ರಾಜಗೃಹದ ವೇಣುವನದ ಕಲಂದಕ ನಿವಾಪದಲ್ಲಿ ಭಗವಾನರು ಇರುವ ಕಡೆ ಹೋಗಿ, ಭಗವಾನರೊಂದಿಗೆ ಕುಶಲ ಕ್ಷೇಮ ಕೇಳಿದನು. ಕುಶಲ ಕ್ಷೇಮ ಕೇಳಿದ ನಂತರ ಸ್ಮರಣೆ ಮಾಡಬೇಕಾದ ವಿಷಯ ತೆಗೆದುಕೊಂಡು ಒಂದುಕಡೆ ಕುಳಿತನು. ಒಂದುಕಡೆ ಕುಳಿತ ಸಭಿಯ ಪರಿವ್ರಾಜಕನು ಭಗವಾನರೊಂದಿಗೆ ಗಾಥೆಗಳಿಂದ ಈ ರೀತಿ ಹೇಳಿದನು-
1.            ನಾನು ಸಂಶಯ ಹಾಗು ದ್ವಂದ್ವವುಳ್ಳವನಾಗಿ ಪ್ರಶ್ನೆ ಕೇಳಲು ತಮ್ಮ ಬಳಿಗೆ ಬಂದಿದ್ದೇನೆ. ಭಗವಾನರೇ, ನನ್ನ ಪ್ರಶ್ನೆಗಳಿಗೆ ಉತ್ತರವನ್ನು ಧಾಮರ್ಿಕ ರೀತಿಯಿಂದ ನೀಡಿ, ಆ ಪ್ರಶ್ನೆಗೆ ಸಮಾಧಾನ ನೀಡಿರಿ.
2.            ಭಗವಾನರು - ನೀನು ದೂರದಿಂದ ಪ್ರಶ್ನೆಗಳನ್ನು ಕೇಳುವ ಇಚ್ಛೆಯಿಂದ ಬಂದಿರುವೆ. ನಿನ್ನ ಕೇಳುವಿಕೆಯ ನಂತರ ಧಾಮರ್ಿಕ ರೀತಿಯಿಂದ ಅವುಗಳನ್ನು ಸಮಾಧಾನ ಮಾಡುವೆ.
3.            ಸಭಿಯ ನಿನ್ನ ಮನದಲ್ಲಿ ಯಾವುದೆಲ್ಲವೂ ಇದೆಯೋ ಅದನ್ನು ನನ್ನಲ್ಲಿ ಕೇಳು. ನಾನು ನಿನ್ನ ಆ ಪ್ರಶ್ನೆಗಳ ಅಂತ್ಯವನ್ನು ಮಾಡುತ್ತೇನೆ.
                ಆಗ ಸಭಿಯ ಪರಿವ್ರಾಜಕನಿಗೆ ಮನದಲ್ಲಿ ಈ ರೀತಿ ಆಯಿತು- ಇದು ಆಶ್ಚರ್ಯವಾಗಿದೆ! ಇದು ನಿಜಕ್ಕೂ ಅದ್ಭುತವಾಗಿದೆ! ಇಲ್ಲಿಯತನಕ ಅನ್ಯ ಶ್ರಮಣ ಬ್ರಾಹ್ಮಣರು ನನಗೆ ಸಮಯವನ್ನು ಸಹಾ ನೀಡುತ್ತಿರಲಿಲ್ಲ. ಆದರೆ ಶ್ರಮಣ ಗೋತಮರು ನನಗೆ ಪ್ರಶ್ನಿಸಲು ಸಮಯವನ್ನು ನೀಡಿದ್ದಾರೆ. ಹೀಗೆ ಯೋಚಿಸಿ ಪ್ರಸನ್ನ ಮನದಿಂದ ಪ್ರಮೋದಿತನಾಗಿ, ಹಷರ್ಿತನಾಗಿ, ಆನಂದ ಹಾಗು ಪ್ರಸನ್ನತೆಯಿಂದ ತುಂಬಿದವನಾಗಿ ಆತನು ಭಗವಾನರಿಗೆ ಪ್ರಶ್ನೆ ಕೇಳಿದನು.
4.            ಸಭಿಯ - ಯಾವ ಪ್ರಕಾರದ ಪ್ರಾಪ್ತಿ ಸಾಧಿಸಿರುವವನನ್ನು ಭಿಕ್ಷು ಎನ್ನುತ್ತಾರೆ? ಶಾಂತ ಹಾಗು ದಾಂತ (ದಮವಂತ) ಎಂದು ಯಾರಿಗೆ ಹೇಳುತ್ತಾರೆ? ಬುದ್ಧರೆಂದು ಯಾರಿಗೆ ಹೇಳುತ್ತಾರೆ? ಭಗವಾನರೇ, ನನ್ನ ಈ ಪ್ರಶ್ನೆಗಳಿಗೆ ಉತ್ತರಿಸಿರಿ.
5.            ಭಗವಾನರು - ಯಾರು ಸ್ವಯಂ ತನ್ನದೇ ರೀತಿಯಲ್ಲಿ ನಿಮರ್ಿತವಾದ ಮಾರ್ಗದಲ್ಲಿ ಶ್ರಮಿಸಿ ಸಂಶಯರಹಿತನಾಗಿರುವನೋ, ಪರಿನಿಬ್ಬಾಣವನ್ನು ಪ್ರಾಪ್ತಿಮಾಡಿರುವನೋ, ಯಾರು ಜನ್ಮ-ಮೃತ್ಯುಗಳನ್ನು ತ್ಯಾಗ ಮಾಡಿರುವನೋ, ಯಾರು ಬ್ರಹ್ಮಚರ್ಯವನ್ನು ಪೂರ್ಣ ಮಾಡಿರುವನೋ ಮತ್ತು ಯಾರ ಪುನರ್ಜನ್ಮ ಇಲ್ಲವಾಗಿದೆಯೋ ಆತನು ಭಿಕ್ಷು ಎಂದು ಕರೆಯಲ್ಪಡುತ್ತಾನೆ.
6.            ಯಾರು ಸರ್ವ ಪ್ರಕಾರದ ಉಪೇಕ್ಷೆ ಸಿದ್ಧಿಸಿರುವನೋ (ಅಂಟಿಕೊಳ್ಳದವನು), ಸ್ಮೃತಿವಂತನೋ, ಇಡೀ ಲೋಕದಲ್ಲಿ ಯಾರಿಗೂ ಹಿಂಸೆ ಮಾಡದವನೋ, ಯಾರು ಲೋಕಸಾಗರವನ್ನು ದಾಟಿರುವನೋ, ಯಾರು ಶ್ರಮಣ ಹಾಗು ನಿರ್ಮಲನಾಗಿರುವವನೋ, ಯಾರ ಆಸಕ್ತಿಗಳು ಇಲ್ಲವಾಗಿವೆಯೋ ಆತನೇ ಶಾಂತನಾಗಿರುತ್ತಾನೆ.
7.            ಯಾರ ಇಂದ್ರಿಯಗಳು ಸರ್ವಲೋಕದಲ್ಲಿ ಆಂತರ್ಯದಲ್ಲಿ ಹಾಗು ಬಾಹ್ಯದಲ್ಲಿ ಸರ್ವ ರೀತಿಯಿಂದ ವಶವಾಗಿವೆಯೋ, ಯಾರು ಈ ಲೋಕ ಹಾಗು ಪರಲೋಕ ಅರಿತು ಸಮಯದ ಪ್ರತೀಕ್ಷೆಯಲ್ಲಿರುವರೋ, ಆತನೇ ಸಂಯಮಿ, ಆತನು ದಾಂತನು ಆಗಿದ್ದಾನೆ.
8.            ಯಾರು ಸಂಪೂರ್ಣ ತೃಷ್ಣೆಯನ್ನು ಮನನ ಮಾಡಿರುವರೋ, ಲೋಕದ ಉತ್ಪತ್ತಿ ಹಾಗು ಲಯವನ್ನು ಸ್ಪಷ್ಟವಾಗಿ ಅರಿತಿರುವರೋ, ತೃಷ್ಣಾ ಇತ್ಯಾದಿ ಮಲಗಳಿಂದ ರಹಿತರೋ, ವಿಶುದ್ಧರೋ, ಯಾರು ಪೂರ್ಣವಾಗಿ ಜನ್ಮ ಕ್ಷಯರೋ, ಅವರನ್ನು ಬುದ್ಧರೆಂದು ಹೇಳುವರು.
                ಆಗ ಸಭಿಯ ಪರಿವ್ರಾಜಕನು ಭಗವಾನರ ಕಥನವನ್ನು ಆನಂದಿಸುತ್ತಾ, ಅನುಮೋದಿಸುತ್ತಾ, ಪ್ರಸನ್ನ ಪ್ರಮೋದನಾಗಿ ಹಷರ್ಿತ ಆನಂದವುಳ್ಳವನಾಗಿ, ಆಹ್ಲಾದತೆಯಿಂದ ಭಗವಾನರೊಡನೆ ಮುಂದಿನ ಪ್ರಶ್ನೆ ಕೇಳಿದನು.
9.            ಸಭಿಯ - ಯಾವ ರೀತಿಯ ಪ್ರಾಪ್ತಿಯವನನ್ನು ಬ್ರಾಹ್ಮಣ ಎನ್ನುತ್ತಾರೆ? ಶ್ರಮಣ ಹಾಗು ಸ್ಮಾತಕನೆಂದು ಯಾರಿಗೆ ಹೇಳುತ್ತಾರೆ? ನಾಗನೆಂದು ಯಾರಿಗೆ ಹೇಳುತ್ತಾರೆ? ಭಗವಾನರೇ, ನನ್ನ ಪ್ರಶ್ನೆಗೆ ಉತ್ತರಿಸಿ.
10.          ಭಗವಾನರು - ಯಾರು ಸರ್ವ ಪಾಪಗಳನ್ನು ತೊರೆದು ನಿರ್ಮಲ, ಸಾಧು, ಏಕಾಗ್ರಚಿತ್ತನು, ಸ್ಥಿರತೆಯುಳ್ಳವನು, ಸಂಸಾರ ಪಾರಂಗತನು, ಕೇವಲಿಯು (ಜ್ಞಾನಿ), ಅನಾಸಕ್ತನು ಹಾಗು ಸ್ಮಿತನಾಗಿರುವನೋ ಆತನನ್ನು ನಾನು ಬ್ರಾಹ್ಮಣ ಎನ್ನುತ್ತೇನೆ.
11.          ಯಾರು ಪುಣ್ಯ ಹಾಗು ಪಾಪಗಳನ್ನು ದೂರೀಕರಿಸಿ ಶಾಂತನಾಗಿರುವನೋ, ಈ ಲೋಕವನ್ನು ಹಾಗು ಪರಲೋಕವನ್ನು ಸ್ಪಷ್ಟವಾಗಿ ಅರಿತು ಮಲರಹಿತನಾಗಿರುವನೋ, ಜನ್ಮ ಹಾಗು ಮೃತ್ಯುವಿನಿಂದ ಮೀರಿ ಹೋಗಿರುವನೋ, ಅಂತಹ ಸ್ಥಿರ ಹಾಗು ಸ್ಥಿತ ಚಿತ್ತವುಳ್ಳವನೇ ಶ್ರಮಣ ಎಂದು ಕರೆಯಲ್ಪಡುತ್ತಾನೆ.
12.          ಯಾರು ಸರ್ವ ಲೋಕದಲ್ಲಿ ಆಂತರ್ಯದಲ್ಲಾಗಲಿ, ಬಾಹ್ಯದಲ್ಲಾಗಲಿ ಸರ್ವ ಪಾಪಗಳನ್ನು ತೊಳೆದು ಶುದ್ಧನಾಗಿರುವನೋ ಮತ್ತು ಅವಗಮನದಲ್ಲಿ ಬಿದ್ದಿರುವ ದೇವತೆಗಳಲ್ಲಿ ಹಾಗು ಮಾನವರಲ್ಲಿ ಜನ್ಮ ಗ್ರಹಣ ಮಾಡುವುದಿಲ್ಲವೋ ಆತನೇ ಸ್ಮಾತಕ ಎಂದು ಕರೆಯಲ್ಪಡುತ್ತಾನೆ.
13.          ಯಾರು ಸಂಸಾರದಲ್ಲಿ ಯಾವ ರೀತಿಯ ಪಾಪವನ್ನು ಮಾಡುವುದಿಲ್ಲವೋ, ಯಾರು ಸರ್ವ ಬಂಧನವನ್ನು ಮುರಿದಿರುವನೋ, ಯಾರು ಎಲ್ಲಿಯೂ ಆಸಕ್ತಿ ಹೊಂದುವುದಿಲ್ಲವೋ, ಅಂತಹ ವಿಮುಕ್ತ ಸ್ಥಿರ ಸ್ಮಿತಾಚಿತ್ತನೇ ನಾಗನೆಂದು ಹೇಳಲ್ಪಡುತ್ತಾನೆ.
                ಆಗ ಸಭಿಯ ಪರಿವ್ರಾಜಕನು ಭಗವಾನರ ಕಥನವನ್ನು ಆನಂದಿಸುತ್ತಾ, ಅನುಮೋದಿಸುತ್ತಾ, ಪ್ರಸನ್ನ ಪ್ರಮೋದನಾಗಿ ಹಷರ್ಿತ ಆನಂದವುಳ್ಳವನಾಗಿ, ಆಹ್ಲಾದತೆಯಿಂದ ಭಗವಾನರೊಡನೆ ಮುಂದಿನ ಪ್ರಶ್ನೆ ಕೇಳಿದನು.
14.          ಸಭಿಯ - ಬುದ್ಧರೇ, ಯಾರಿಗೆ ಕ್ಷೇತ್ರಜಿತನೆಂದು ಕರೆಯುವರು? ಕುಶಲನು ಯಾರು? ಪಂಡಿತನೆಂದು ಯಾರಿಗೆ ಕರೆಯುವರು ಮತ್ತು ಮುನಿಯು ಯಾರು? ಭಗವಾನರೇ, ನನ್ನ ಪ್ರಶ್ನೆಗಳಿಗೆ ಉತ್ತರಿಸಿ.
15.          ಭಗವಾನರು - ಯಾರು ಸಂಪೂರ್ಣವಾಗಿ ಸ್ವಗರ್ಿಯ, ಮಾನವೀಯ ಮತ್ತು ಬ್ರಹ್ಮಲೋಕವನ್ನು ಗೆದ್ದು ಸರ್ವ ಲೋಕಗಳ ಬಂಧನದಿಂದ ಮುಕ್ತನಾಗಿರುವನೋ, ಅಂತಹ ಸ್ಥಿರ ಹಾಗು ಸ್ಥಿತಾಚಿತ್ತನೇ ಕ್ಷೇತ್ರಜಿತನೆಂದು ಕರೆಯಲ್ಪಡುತ್ತಾನೆ.
16.          ಯಾರು ಸಂಪೂರ್ಣವಾಗಿ ಸ್ವಗರ್ಿಯ, ಮಾನವೀಯ ಮತ್ತು ಬ್ರಹ್ಮಲೋಕದ ಒಳ್ಳೆಯ-ಕೆಟ್ಟ ಕರ್ಮಗಳನ್ನು ಜಯಿಸಿ, ಸರ್ವ ಕರ್ಮ ಬಂಧನಮುಕ್ತನೋ ಅಂತಹ ಸ್ಥಿರ ಹಾಗು ಸ್ಮಿತಚಿತ್ತನೇ ಕುಶಲನೆಂದು ಕರೆಯಲ್ಪಡುತ್ತಾನೆ.
17.          ಯಾರು ಶುದ್ಧ ಪ್ರಾಜ್ಞನು, ಆಂತರ್ಯದ ಹಾಗು ಬಾಹ್ಯದ ವಿಷಯಗಳಲ್ಲಿ ವಿಜಯಿಯಾಗಿ ಪಾಪ ಪುಣ್ಯಗಳಿಂದ ಮೀರಿ ಹೋಗಿರುವನೋ ಅಂತಹ ಸ್ಥಿತ ಹಾಗು ಸ್ಥಿರಚಿತ್ತನೇ ಪಂಡಿತನೆಂದು ಕರೆಯಲ್ಪಡುತ್ತಾನೆ.
18.          ಯಾರು ಇಡೀ ಸಂಸಾರದಲ್ಲಿ ಆಂತರ್ಯ ಹಾಗು ಬಾಹ್ಯದಲ್ಲಿ ಸತ್ ಹಾಗು ಅಸತ್ಗಳನ್ನು ಅರಿತು ದೇವ-ಮಾನವರಿಂದ ಪೂಜಿತನಾಗಿರುವನೋ ಮತ್ತು ಆಸಕ್ತರೂಪಿ ಜಲದಿಂದ ಆಚೆ ಇರುವನೋ, ಅವನೇ ಮುನಿ ಎನಿಸಿಕೊಳ್ಳುತ್ತಾನೆ.
                ಆಗ ಸಭಿಯ ಪರಿವ್ರಾಜಕನು ಭಗವಾನರ ಕಥನವನ್ನು ಆನಂದಿಸುತ್ತಾ, ಅನುಮೋದಿಸುತ್ತಾ, ಪ್ರಸನ್ನ ಪ್ರಮೋದನಾಗಿ ಹಷರ್ಿತ ಆನಂದವುಳ್ಳವನಾಗಿ, ಆಹ್ಲಾದತೆಯಿಂದ ಭಗವಾನರೊಡನೆ ಮುಂದಿನ ಪ್ರಶ್ನೆ ಕೇಳಿದನು.
19.          ಸಭಿಯ - ಯಾವ ಪ್ರಕಾರದ ಪ್ರಾಪ್ತಿಯವನನ್ನು ವೇದಜ್ಞ ಎನ್ನುವರು? ಅನುವಿಜ್ಞ ಯಾರು? ವೀರ್ಯವಂತನು ಯಾರು? ಅಜನಿಯ ಯಾರ ಹೆಸರಾಗಿದೆ? ಭಗವಾನರು ನನ್ನ ಪ್ರಶ್ನೆಗೆ ಉತ್ತರಿಸಿ.
20.          ಭಗವಾನರು - ಯಾರು ಇಲ್ಲಿ ಶ್ರಮಣ ಮತ್ತು ಬ್ರಾಹ್ಮಣರ ಸಂಪೂರ್ಣ ಸ್ಥಿತಿಗಳನ್ನು (ಅವಸ್ಥೆ) ಅರಿತಿರುವನೋ, ಯಾರು ಎಲ್ಲಾರೀತಿಯ ವೇದನೆಗಳಲ್ಲಿ ರಾಗರಹಿತನೋ, ಯಾರು ಸರ್ವ ವೇದನೆಗಳಿಂದ ದೂರವಿರುವನೋ, ಆತನೇ ವೇದಜ್ಞ ಎಂದು ಕರೆಯಲ್ಪಡುತ್ತಾನೆ.
21.          ಯಾರು ಆಂತರ್ಯದ ಮತ್ತು ಬಾಹ್ಯದ ರೋಗ ಮೂಲವಾದ ದೇಹ-ಮನಸ್ಸಿನ ಬಂಧನವನ್ನು ಅರಿತಿರುವನೋ ಮತ್ತು ಯಾರು ಸರ್ವ ರೋಗದ ಮೂಲ ಬಂಧನದಿಂದ ಮುಕ್ತನೋ ಅಂತಹ ಸ್ಥಿರ ಹಾಗು ಸ್ಥಿರಚಿತ್ತನೇ ಅನುವಿಜ್ಞನೆಂದು ಕರೆಯಲ್ಪಡುತ್ತಾನೆ.
22.          ಯಾರು ಸರ್ವ ಪಾಪಿಗಳಿಂದ ವಿರತನೋ, ನರಕದ ದುಃಖದಿಂದ ಮುಕ್ತನೋ, ಅಂತಹವನು ವೀರ್ಯವಂತನಾಗಿದ್ದಾನೆ. ಅಂತಹ ಸ್ಥಿತ ಹಾಗು ಸ್ಥಿರಚಿತ್ತನೇ ವೀರ್ಯವಂತನೂ, ಪರಾಕ್ರಮಿಯು ಹಾಗು ಧೀರನೂ ಎಂದು ಕರೆಯಲ್ಪಡುತ್ತಾನೆ.
23.          ಯಾರು ಆಂತರ್ಯದ ಹಾಗು ಬಾಹ್ಯದ ಸರ್ವ ಬಂಧನಗಳೂ ಕತ್ತರಿಸಿ ಹೋಗಿವೆಯೋ, ಯಾರು ಸರ್ವ ತೃಷ್ಣೆಗಳ ಮೂಲ ಬಂಧನದಿಂದ ಮುಕ್ತನೋ, ಅಂತಹ ಸ್ಥಿತ ಹಾಗು ಸ್ಥಿರಚಿತ್ತನೇ ಆಜನೀಯ (ಉತ್ತಮ) ಎಂದು ಹೇಳಲ್ಪಡುತ್ತಾನೆ.
                ಆಗ ಸಭಿಯ ಪರಿವ್ರಾಜಕನು ಭಗವಾನರ ಕಥನವನ್ನು ಆನಂದಿಸುತ್ತಾ, ಅನುಮೋದಿಸುತ್ತಾ, ಪ್ರಸನ್ನ ಪ್ರಮೋದನಾಗಿ ಹಷರ್ಿತ ಆನಂದವುಳ್ಳವನಾಗಿ, ಆಹ್ಲಾದತೆಯಿಂದ ಭಗವಾನರೊಡನೆ ಮುಂದಿನ ಪ್ರಶ್ನೆ ಕೇಳಿದನು.
24.          ಸಭಿಯ - ಯಾವ ಪ್ರಕಾರದ ಪ್ರಾಪ್ತಿಯವನನ್ನು ಶ್ರೋತ್ರಯ ಎನ್ನುತ್ತಾರೆ? ಆರ್ಯನು ಯಾರು? ಆಚಾರವಂತನು ಯಾರು? ಪರಿವ್ರಾಜಕ ಯಾರ ಹೆಸರು? ಭಗವಾನರೇ ನನ್ನ ಪ್ರಶ್ನೆಗಳಿಗೆ ಉತ್ತರಿಸಿ.
25.          ಭಗವಾನರು - ಈ ಸಂಸಾರದಲ್ಲಿ ಯಾವ ಸದೋಷ ಹಾಗು ನಿದರ್ೊಷ ಮಾತುಗಳಿವೆಯೋ ಅವುಗಳನ್ನು ಸರಿಯಾಗಿ ಅರಿತು ಯಾರು ವಿಜಯಿ, ಸಂಶಯರಹಿತ ಹಾಗು ವಿಮುಕ್ತನಾಗಿರುವನೋ ಮತ್ತು ಯಾರು ಸರ್ವ ಪ್ರಕಾರದಿಂದ ರಾಗರಹಿತನೋ ಆತನನ್ನು ಶ್ರೋತ್ರಿಯ ಎನ್ನುತ್ತಾರೆ.
26.          ಯಾವ ವಿಜ್ಞನು ಆಸವಗಳ ಆಲಯವನ್ನು ಅಂತ್ಯ ಮಾಡಿದ್ದಾನೋ, ಮತ್ತೆ ಜನ್ಮಿಸಲಾರನೋ, ಯಾರು ಸರ್ವ ತ್ರಿವಿಧ ಕಾಮಗಳನ್ನು ತ್ಯಜಿಸಿ ಮತ್ತು ಕಾಮಭೋಗದಲ್ಲಿ ಬೀಳಲಾರನೋ, ಆತನನ್ನು ಆರ್ಯ ಎನ್ನುತ್ತಾರೆ.
27.          ಯಾರು ಶೀಲಗಳ ಪಾಲನೆಯಲ್ಲಿ ನಿಪುಣನೋ, ಕುಶಲನೋ, ಸದಾ ಧರ್ಮವನ್ನು ಅರಿಯುವುವವನೋ, ಸರ್ವತ್ರ ಅನಾಸಕ್ತನೊ, ವಿಮುಕ್ತನೋ ಮತ್ತು ಯಾರಲ್ಲಿ ದ್ವೇಷಭಾವವಿಲ್ಲವೋ ಆತನೇ ಆಚಾರವಂತನಾಗಿದ್ದಾನೆ.
28.          ಯಾರು ಹಿಂದಿನ, ಇಂದಿನ ಮತ್ತು ಮುಂದಿನ ಕರ್ಮವನ್ನು ಮತ್ತು ಮಾಯಾ, ಅಭಿಮಾನ, ಲೋಭ, ಹಾಗು ಕ್ರೋಧವನ್ನು ದೂರೀಕರಿಸಿರುವನೋ, ವಿಚಾರಪೂರ್ವಕವಾಗಿ ಸಂಚರಿಸುವನೋ, ಯಾರು ದೇಹ-ಮನಸ್ಸಿನ ಅಂತ್ಯ ಮಾಡಿರುವನೋ, ಪ್ರಾಪ್ತಿ (ಶ್ರೇಷ್ಠ) ಮಾಡುವುದನ್ನು ಪ್ರಾಪ್ತಿ ಮಾಡಿರುವನೋ ಆತನೇ ಪರಿವ್ರಾಜಕನಾಗಿದ್ದಾನೆ.
                ಆಗ ಸಭಿಯನು ಭಗವಾನರ ಬೋಧನೆಗೆ ಅಭಿನಂದಿಸುತ್ತ, ಅನುಮೋದಿಸುತ್ತಾ, ಪ್ರಸನ್ನನಾಗಿ, ಪ್ರಮುದಿತನಾಗಿ, ಹಷರ್ಿತನಾಗಿ, ಆನಂದಿತನಾಗಿ ಮತ್ತು ಆಹ್ಲಾದವುಳ್ಳವನಾಗಿ ಆಸನದಿಂದ ಎದ್ದು ಉತ್ತರಾಸಂಗ (ಮೇಲ್ಭಾಗದ ಚೀವರ)ವನ್ನು ಒಂದು ಹೆಗಲಿಗೆ ಹೊದ್ದುಕೊಂಡು, ಎಲ್ಲಿ ಭಗವಾನರು ಇದ್ದರೋ ಅಲ್ಲಿ ಎರಡು ಹಸ್ತಗಳನ್ನು ಜೋಡಿಸಿ ವಂದಿಸಿದನು, ಪ್ರಣಾಮ ಮಾಡಿದನು. ನಂತರ ಭಗವಾನರ ಮುಂದೆ ಸಮಯೋಚಿತ ಗಾಥೆಗಳಿಂದ ಸ್ತುತಿ ಮಾಡಿದನು-
29.          ಸಭಿಯ - ಹೇ ಮಹಾಪ್ರಾಜ್ಞರೇ, ಯಾವೆಲ್ಲಾ ಶ್ರಮಣರ ಮಿಥ್ಯಾದೃಷ್ಟಿಗಳಿವೆಯೋ ಅವೆಲ್ಲವೂ ಕಲ್ಪನೆಯನ್ನು ಆಶ್ರಯಿಸಿದೆ, ಆದರೆ ತಾವು ಅವೆಲ್ಲಾ ಮಿಥ್ಯಾದೃಷ್ಟಿಗಳ ಪ್ರವಾಹವನ್ನು ದಾಟಿರುವಿರಿ.
30.          ತಾವು ದುಃಖದ ಅಂತ್ಯ ಮಾಡಿರುರಿರಿ, ದುಃಖವನ್ನು ಮೀರಿರುವಿರಿ, ತಾವು ಅರಹಂತರಾಗಿದ್ದೀರಿ. ಸಮ್ಯಕ್ ಸಂಬುದ್ಧರಾಗಿರುವಿರಿ, ಕ್ಷೀಣಾಸವರೂ ಆಗಿದ್ದೀರಿ. ಹೀಗೆ ನಾನು ಒಪ್ಪುತ್ತೇನೆ (ಶ್ರದ್ಧೆಯುಳ್ಳವನಾಗಿದ್ದೇನೆ). ಹೇ ಜೋತಿಷ್ಮಾನರೇ, ಮಹಾಪ್ರಾಜ್ಞರೇ, ದುಃಖಾಂತವನ್ನು ಮಾಡುವವರೇ, ತಾವು ನನ್ನ ಉದ್ದಾರ ಮಾಡಿರುವಿರಿ.
31.          ತಾವು ನನಗೆ ಸಂಶಯದಲ್ಲಿರುವುದನ್ನು ಅರಿತು ಸಂಶಯರಹಿತನನ್ನಾಗಿ ಮಾಡಿದಿರಿ. ಅದಕ್ಕಾಗಿ ತಮಗೆ ಕೃತಜ್ಞತಾಪೂರ್ವಕ ನಮಸ್ಕರಿಸುತ್ತೆನೆ. ಜ್ಞಾನದ ಮಾರ್ಗದಿಂದ ನಡೆದು ನಿಬ್ಬಾಣ ಪ್ರಾಪ್ತಿಗೈದ, ದ್ವೇಷರಹಿತರಾದ, ಆದಿತ್ಯ ಬಂಧು, ಮುನಿಯಾಗಿರುವ ತಾವು ಶಾಂತ ಸ್ವರೂಪಿಗಳಾಗಿದ್ದೀರಿ.
32.          ಚಕ್ಷುವಂತರೇ, ನನಗೆ ಮೊದಲು ಏನೆಲ್ಲಾ ಸಂಶಯಗಳಿದ್ದವೋ, ತಾವು ಅದನ್ನೆಲ್ಲಾ ಸಮಾಧಾನ ಮಾಡಿದಿರಿ. ಸಂಬುದ್ಧರೇ, ತಾವು ಸ್ವಯಂ ಮಹಾಮುನಿಗಳಾಗಿರುವಿರಿ. ತಮ್ಮಲ್ಲಿ ನಿವರಣಗಳೇ ಇಲ್ಲ.
33.          ತಮ್ಮ ಎಲ್ಲಾ ಉಪದ್ರವಗಳೂ ನಷ್ಟವಾಗಿವೆ, ವಿನಷ್ಟಗೊಂಡಿದೆ. ತಾವು ಶಾಂತರಾಗಿದ್ದೀರಿ, ದಾಂತರಾಗಿದ್ದೀರಿ, ಧೃತಿವಂತರಾಗಿರುವಿರಿ ಮತ್ತು ಸತ್ಯವಾದಿಗಳಾಗಿರುವಿರಿ.
34.          ಶ್ರೇಷ್ಠೋತ್ತಮರಲ್ಲಿ ಪರಮಶ್ರೇಷ್ಠರಾಗಿರುವ ಮಹಾವೀರರೇ, ಇಬ್ಬರಾದ ನಾರದ ಮತ್ತು ಪರ್ವತ; ಇನ್ನಿತರ ಮತ್ತೆಲ್ಲಾ ದೇವತೆಗಳು ತಮ್ಮ ಬೋಧನೆಯನ್ನು ಅನುಮೋದಿಸುತ್ತಾರೆ.
35.          ಹೇ ಶ್ರೇಷ್ಠ ಪುರುಷರೇ, ತಮಗೆ ವಂದಿಸುವೆ. ಹೇ ಉತ್ತಮ ಪುರುಷರೇ, ತಮಗೆ ನಮಸ್ಕರಿಸುವೆ. ದೇವತೆಗಳು ಹಾಗು ಮಾನವರ ಸಹಿತ ಸರ್ವ ಲೋಕಗಳಲ್ಲಿ ತಮ್ಮ ಸಮಾನರು ಯಾರೂ ಇಲ್ಲ.
36.          ತಾವು ಬುದ್ಧರಾಗಿರುವಿರಿ, ತಾವು ಶಾಸ್ತರಾಗಿರುವಿರಿ, ತಾವು ಮಾರವಿಜಯಿ ಮುನಿಯಾಗಿರುವಿರಿ, ತಾವು ಸಮಸ್ತ ವಾಸನೆಗಳ ಮೂಲಗಳನ್ನು ನಾಶಗೊಳಿಸಿ, ಭವಸಾಗರವನ್ನು ದಾಟಿರುವಿರಿ ಮತ್ತು ಈ ಮಾನವರನ್ನು ದಾಟಿಸಿರುವಿರಿ.
37.          ತಾವು ವಾಸನಾ-ಬಂಧನಗಳನ್ನು ಮೀರಿರುವಿರಿ, ವಾಸನೆಗಳನ್ನು ನಷ್ಟಗೊಳಿಸಿರುವಿರಿ, ತಾವು ಅನಾಸಕ್ತರೂ, ಭಯ ಹಾಗು ಭಯಾನಕತೆಯಿಂದ ರಹಿತರಾದ ಸಿಂಹವಾಗಿದ್ದೀರಿ.
38.          ಹೇಗೆ ಸುಂದರ ಕಮಲವು ಜಲದಿಂದ ಲಿಪ್ತವಾಗುವುದಿಲ್ಲವೋ, ಹಾಗೆಯೇ ತಾವು ಪುಣ್ಯ ಹಾಗು ಪಾಪಗಳೆರಡರಲ್ಲೂ ಲಿಪ್ತರಾಗಿಲ್ಲ. ಹೇ ವೀರರೇ, ಸಭಿಯನು ಶಾಸ್ತರಿಗೆ ಸಾಷ್ಟಾಂಗ ನಮಸ್ಕಾರ ಮಾಡುತಿರುವನು.
                ಆಗ ಸಭಿಯ ಪರಿವ್ರಾಜಕನು ಭಗವಾನರ ಪಾದ ಪದ್ಮದಲ್ಲಿ ಶಿರವನ್ನಿಟ್ಟು ಭಗವಾನರಿಗೆ ಹೀಗೆ ಹೇಳಿದನು- ಆಶ್ಚರ್ಯವಾಗಿದೆ ಗೋತಮರೇ, ಆಶ್ಚರ್ಯವಾಗಿದೆ. ಹೇಗೆಂದರೆ ಗೋತಮರೇ, ತಲೆಕೆಳಕಾಗಿದ್ದನ್ನು ಸರಿಯಾಗಿ ನಿಲ್ಲಿಸುವಂತೆ, ಅಡಗಿರುವುದನ್ನು ಅಗೆದು ತೋರಿಸುವಂತೆ, ದಾರಿತಪ್ಪಿದವರಿಗೆ ಮಾರ್ಗದಶರ್ಿಯಾಗಿ, ಅಂಧಕಾರದಲ್ಲಿದ್ದವರಿಗೆ ಬೆಳಕು ತೋರಿಸಿದಂತೆ, ಚಕ್ಷುವುಳ್ಳವರು ವಸ್ತುಗಳನ್ನು ಕಾಣುವ ಹಾಗೆ ಗೌತಮರಿಂದ ಅನೇಕ ರೀತಿಯಿಂದ ಧರ್ಮವು ಪ್ರಕಾಶಿಸಿತು. ಹೇ ಭಗವಾನ್, ನಾನು ಇಂದಿನಿಂದ ಬುದ್ಧರಲ್ಲಿ ಶರಣು ಹೋಗುತ್ತೇನೆ, ಧಮ್ಮಕ್ಕೆ ಹಾಗೂ ಸಂಘಕ್ಕೂ ಸಹಾ ಶರಣು ಹೋಗುತ್ತೇನೆ. ಭಗವಾನರು ನನಗೆ ಪ್ರವಜ್ರ್ಯವನ್ನು ನೀಡುವಂತಾಗಲಿ, ಉಪಸಂಪದವು ದೊರೆಯುವಂತಾಗಲಿ.
                ಭಗವಾನರು - ಸಭಿಯ! ಯಾರು ಅನ್ಯತೀರ್ಥಕನಾಗಿ ಇಲ್ಲಿ ಪಬ್ಬಜ್ಜ ಸ್ವೀಕರಿಸುವನೋ, ಉಪಸಂಪದ ಬಯಸುವನೋ, ಆತನು ನಾಲ್ಕು ಮಾಸ ಪರಿಕ್ಷಾರ್ಥ ನಿವಾಸ ಮಾಡಬೇಕಾಗುತ್ತದೆ. ನಾಲ್ಕು ಮಾಸದ ನಂತರ ಭಿಕ್ಷುಗಳು ಪ್ರಸನ್ನತೆಯಿಂದ ಆತನಿಗೆ ಪಬ್ಬಜ್ಜ ನೀಡುವರು, ಉಪಸಂಪದ ಕೊಡುವರು. ಆದರೂ ಸಹಾ ನನಗೆ ಇಲ್ಲಿ ವ್ಯಕ್ತಿಯ ವಿಭಿನ್ನತೆಯ ಜ್ಞಾನವಿದೆ.
                ಸಭಿಯ - ಹಾಗಾದರೆ ಭಂತೆ, ಹಿಂದೆ ಅನ್ಯತೀರ್ಥಕನಾಗಿ, ಪಬ್ಬಜ್ಜ ಅಪೇಕ್ಷಿಸಿದರೆ, ಉಪಸಂಪದ ಅಪೇಕ್ಷಿಸಿದರೆ ನಾಲ್ಕು ಮಾಸ ಪರಿಕ್ಷಾರ್ಥ ನಿವಾಸ ಮಾಡಬೇಕಾದರೆ, ಅನಂತರ ಭಿಕ್ಷು ಪ್ರಸನ್ನತೆಯಿಂದ ಪಬ್ಬಜ್ಜ, ಉಪಸಂಪದ ನೀಡುವದಿದ್ದರೆ ನಾನು ನಾಲ್ಕು ಮಾಸಗಳೇನು, ನಾಲ್ಕು ವರ್ಷಗಳಷ್ಟು ಕಾಲ ಪರವಾಸ ಮಾಡುತ್ತೇನೆ. ಆನಂತರವೇ ಬೇಕಾದಲ್ಲಿ ನನಗೆ ಭಿಕ್ಷುಗಳು ಪ್ರಸನ್ನತೆಯಿಂದ ಪಬ್ಬಜ್ಜ ನೀಡಲಿ, ಉಪಸಂಪದ ನೀಡಲಿ.
                ಸಭಿಯ ಪರಿವ್ರಾಜಕನು ಭಗವಾನರಿಂದ ಪ್ರವಜ್ರ್ಯ ಪಡೆದನು, ಉಪಸಂಪದ ಪಡೆದನು. ಉಪಸಂಪದ ಪಡೆದ ಕೆಲವೇ ದಿನಗಳಲ್ಲಿ ಆಯುಷ್ಮಂತ ಸಭಿಯನು ಏಕಾಂತದಲ್ಲಿ ವಾಸಿಸಿ, ಸಂಯಮಿ, ಅಪ್ರಮಾದಿ ಧ್ಯಾನ ವಿಧಿಗಳಲ್ಲಿ ಮಗ್ನನಾದನು. ನಂತರ ಯಾವ ಪರಮ ಅರ್ಥವನ್ನು ಪಡೆಯಲು ಕುಲಪುತ್ರರು ಮನೆ ತ್ಯಜಿಸಿ ಪ್ರವಜರ್ಿತರಾಗಿ ಸಾಧನಶೀಲರಾಗುವರೋ, ಅಂತಹ ಅನುತ್ತರ ಬ್ರಹ್ಮಚರ್ಯದ ಅಂತಿಮ ಫಲವನ್ನು ಸ್ವಯಂ ಜ್ಞಾನವನ್ನು ಸಾಕ್ಷಾತ್ಕರಿಸಿದನು. ಹಾಗೆಯೇ ವಿಮುಕ್ತಿ ಜ್ಞಾನವು ಲಭಿಸಿತು- ಜನ್ಮವು ಕ್ಷೀಣವಾಯಿತು, ಬ್ರಹ್ಮಚರ್ಯವು ಪೂರ್ಣವಾಯಿತು, ಮಾಡಬೇಕಾದ್ದನ್ನು ಮಾಡಿದೆ, ಯಾವ ಶೇಷವೂ ಉಳಿದಿಲ್ಲ. ಆಯುಷ್ಮಂತ ಸಭಿಯನು ಅರಹಂತರಲ್ಲಿ ಒಬ್ಬನಾದನು.

ಇಲ್ಲಿಗೆ ಸಭಿಯ ಸುತ್ತ ಮುಗಿಯಿತು.