Friday 31 October 2014

maagha sutta (5. ಮಾಘ ಸುತ್ತ)

5. ಮಾಘ ಸುತ್ತ
                ಹೀಗೆ ನಾನು ಕೇಳಿದ್ದೇನೆ. ಒಮ್ಮೆ ಭಗವಾನರು ರಾಜಗೃಹದಲ್ಲಿ ಗೃದ್ಧಕೂಟ ಪರ್ವತದಲ್ಲಿ ವಾಸವಾಗಿದ್ದರು. ಆಗ ಮಾಘ ಮಾಣವಕನು ಎಲ್ಲಿ ಭಗವಾನರು ಇದ್ದರೊ ಅಲ್ಲಿಗೆ ಬಂದನು. ಬಂದು ಭಗವಾನರೊಡನೆ ಕುಶಲ ಮಂಗಳವನ್ನು ಕೇಳಿದನು. ಕುಶಲ ಮಂಗಳವನ್ನು ಕೇಳಿ ಒಂದುಕಡೆ ಕುಳಿತನು. ಒಂದುಕಡೆ ಕುಳಿತ ಮಾಘ ಮಾಣವಕನು ಭಗವಾನರೊಂದಿಗೆ ಹೀಗೆ ಹೇಳಿದರು.

                ಹೇ ಗೋತಮರೇ, ನಾನು ದಾಯಕನಾಗಿದ್ದೇನೆ. ದಾನಪತಿಯಾಗಿದ್ದೇನೆ. ಯಾಚಕರ ಕೇಳುವಿಕೆಯಿಂದಲೇ ಅರಿಯುವವನಾಗಿದ್ದೇನೆ. ನಾನು ಯಾಚನೆಗೆ ಯೋಗ್ಯನಾಗಿದ್ದೇನೆ. ಧರ್ಮದಿಂದ ಧನವನ್ನು ಸಂಪಾದಿಸುತ್ತೇನೆ. ಧರ್ಮದಿಂದ ಧನವನ್ನು ಸಂಪಾದಿಸಿ ಹೀಗೆ ಧರ್ಮದಿಂದ ಹಸ್ತಗತವಾದ ಧನದಿಂದ ಒಬ್ಬರಿಗೆ ದಾನ ನೀಡುತ್ತೇನೆ. ಇಬ್ಬರಿಗೂ ನೀಡುತ್ತೇನೆ. ಮೂವರಿಗೂ ದಾನ ನೀಡುತ್ತೇನೆ. ನಾಲ್ವರಿಗೂ ನೀಡುತ್ತೇನೆ. ಐವರು, ಆರು ವ್ಯಕ್ತಿಗಳಿಗೂ ನೀಡುತ್ತೇನೆ ಏಳು ವ್ಯಕ್ತಿಗಳಿಗೂ ನೀಡುತ್ತೇನೆ. ಎಂಟು ವ್ಯಕ್ತಿಗಳಿಗೂ ನೀಡುತ್ತೇನೆ. ಒಂಬತ್ತು ವ್ಯಕ್ತಿಗಳಿಗೂ, ಹತ್ತು ವ್ಯಕ್ತಿಗಳಿಗೂ ನೀಡುತ್ತೇನೆ. ಇಪ್ಪತ್ತು ವ್ಯಕ್ತಿಗಳಿಗೂ, ಮೂವತ್ತು ವ್ಯಕ್ತಿಗಳಿಗೂ, ನಲವತ್ತು ವ್ಯಕ್ತಿಗಳಿಗೂ, ಐವತ್ತು ವ್ಯಕ್ತಿಗಳಿಗೂ ನೀಡುತ್ತೇನೆ. ನೂರು ವ್ಯಕ್ತಿಗಳಿಗೂ ನೀಡುತ್ತೇನೆ. ಇದಕ್ಕಿಂತ ಹೆಚ್ಚಿನ ಸಂಖ್ಯೆಗೂ ನೀಡುತ್ತೇನೆ. ಏನು ಈ ಗೋತಮರೇ, ಈ ರೀತಿ ದಾನ ನೀಡುತ್ತಾ ಈ ರೀತಿ ಹೆಚ್ಚಿಸುತ್ತಾ ಬಹಳಷ್ಟು ಪುಣ್ಯವನ್ನು ಸಂಪಾದಿಸುವೆನೇ?
                ಹಾಗಾದರೆ ನೀನು ಮಾಣವಕನೇ, ಈ ರೀತಿ ನೀಡುತ್ತಾ, ಈ ರೀತಿ ಹೆಚ್ಚಿಸುತ್ತಾ ಬಹಳ ಪುಣ್ಯವನ್ನು ಸಂಪಾದಿಸುತ್ತಿಯೆ. ಮಾಣವಕನೇ, ಯಾವ ದಾಯಕನೂ, ದಾನಪತಿಯೂ (ಯಾಚಕರ) ಹೇಳುವಿಕೆಯಿಂದಲೇ ಅರಿಯುವಂತಹವನೂ, ಯಾಚನೆ ಯೋಗ್ಯಕ್ಕಾಗಿಯೇ ಧರ್ಮದಿಂದ ಧನವನ್ನು ಸಂಪಾದಿಸುವನೊ, ಧರ್ಮದಿಂದ ಸಂಪಾದಿಸಿ, ಪ್ರಾಪ್ತವಾದ ಹಣದಿಂದ ಒಬ್ಬರಿಗೆ ನೀಡುತ್ತಾನೆ. ನೂರು ಜನರಿಗೆ ನೀಡುತ್ತಾನೆ. ಇದಕ್ಕಿಂತ ಅಧಿಕ ಸಂಖ್ಯೆಯು ನೀಡುತ್ತಾನೆ. ಆತನು ಪುಣ್ಯವನ್ನು ಸಂಪಾದಿಸುತ್ತಾನೆ.
                ಆಗ ಮಾಘ ಮಾಣವಕನು ಭಗವಾನರಿಗೆ ಗಾಥೆಯಿಂದ ಈ ರೀತಿ ನುಡಿದನು-
1.            ಕಾಷಾಯ ವಸ್ತ್ರಧಾರಿಯು, ಯಾಚಕರಿಗೆ ಅರಿಯುವಂತಹ ಗೋತಮರಿಗೆ ನಾನು ಕೇಳುವುದು ಏನೆಂದರೆ ಪುಣ್ಯಾಥರ್ಿಗಾಗಿ, ಪುಣ್ಯದ ಅಪೇಕ್ಷೆಗೆ, ಬೇರೆಯವರಿಗೆ ಅನ್ನಪೇಯಗಳಿಂದ ದಾನ ನೀಡುವವನು, ಯಾಚನೆಗೆ ಯೋಗ್ಯನಾಗಿರುವವನ, ದಾನಪತಿ ಗೃಹಸ್ಥನು ಯಾರಿಗೆ ದಾನ ನೀಡುವುದರಿಂದ ಅತನ ದಾನವು ಸಫಲವಾಗುತ್ತದೆ.
2.            ಭಗವಾನ್ - ಯಾರು ಯಾಚಿಸುವವರಿಗೆ ಯೋಗ್ಯನೋ, ದಾನಪತಿ, ಗೃಹಸ್ಥನು ಪುಣ್ಯವನ್ನು ಅಪೇಕ್ಷಿಸುವವನು, ಪುಣ್ಯಾಕಾಂಕ್ಷೆಯಿಂದ ಪರರಿಗೆ ಅನ್ನ ಮತ್ತು ಪೇಯವನ್ನು ನೀಡುತ್ತಾನೋ, ಆತನು ಉತ್ತಮ ಜ್ಞಾನಿಗೆ ದಕ್ಷಿಣೆಯಿಂದ (ದಾನ) ಪ್ರಸನ್ನ ಮಾಡಲಿ.
3.            ಮಾಘ - ಯಾರು ಯಾಚಿಸುವವರಿಗೆ ಯೋಗ್ಯನು, ದಾನಪತಿ ಗೃಹಸ್ಥನೋ, ಪುಣ್ಯಾಕಾಂಕ್ಷೆಯಿಂದ ದಾನವನ್ನು ನೀಡುತ್ತಿರುವವನೋ, ಇಲ್ಲಿ ಪರರಿಗೆ ಅನ್ನಪೇಯಗಳಿಂದ ದಾನ ಮಾಡುತ್ತಿರುವರು. ಹಾಗಾದರೆ ಭಗವಾನ್, ದಾನಕ್ಕೆ ಯೋಗ್ಯವಾದ ಪಾತ್ರರಾದ ವ್ಯಕ್ತಿಯ ಬಗ್ಗೆ ತಿಳಿಸಿರಿ.
4.            ಭಗವಾನರು - ಯಾವ ಬ್ರಾಹ್ಮಣನು ಪುಣ್ಯದ ಕಾಮನೆಯಿಂದ ದಾನ ನೀಡುವನೊ, ಆತನಿಗೆ ಬೇಕಾಗಿರುವುದು ಏನೆಂದರೆ, ಸಮಯಾನುಸಾರವಾಗಿ ದಾನವನ್ನು ನೀಡಲಿ. ಯಾರಿಗೆಂದರೆ, ಯಾರು ಅನಾಸಕ್ತರಾಗಿ ಲೋಕದಲ್ಲಿ ಸಂಚರಿಸುತ್ತಿರುವರೋ, ಯಾರು ಅಕಿಂಚನರೋ (ಏನೂ ಇಲ್ಲದವರು), ಜ್ಞಾನಿ ಹಾಗು ಸಂಯಮಿಗಳೋ ಅವರಿಗೆ.
5.            ಯಾವ ಬ್ರಾಹ್ಮಣನು ಪುಣ್ಯಕಾಮನೆಯಿಂದ ದಾನ ನೀಡುತ್ತಿರುವವನೋ, ಆತನು ದಾಂತರಿಗೆ, ವಿಮುಕ್ತರಿಗೆ, ನಿಷ್ಪಾಪಿಗಳಿಗೆ, ತೃಷ್ಣಾರಹಿತರಿಗೆ ಹಾಗು ಸರ್ವ ಸಂಯೋಜನೆಗಳನ್ನು ಕತ್ತರಿಸಿದವರಿಗೆ ಸಮಯಾನುಸಾರ ದಾನ ನೀಡಬೇಕು.
6.            ಯಾವ ಬ್ರಾಹ್ಮಣನು ಪುಣ್ಯಕಾಮನೆಯಿಂದ ದಾನ ನೀಡುತ್ತಿರುವನೋ, ಆತನು ದಾಂತರಿಗೆ, ವಿಮುಕ್ತರಿಗೆ, ನಿಷ್ಪಾಪಿಗಳಿಗೆ, ತೃಷ್ಣಾರಹಿತರಿಗೆ ಹಾಗು ಲೋಕ ಬಂಧನಗಳಿಂದ ಮುಕ್ತರಾದವರಿಗೆ ಸಮಯಾನುಸಾರ ದಾನ ನೀಡಬೇಕು.
7.            ಯಾವ ಬ್ರಾಹ್ಮಣನು ಪುಣ್ಯ ಕಾಮನೆಯಿಂದ ದಾನ ನೀಡುತ್ತಿರುವನೋ, ಆತನು ರಾಗ, ದ್ವೇಷ ಮತ್ತು ಮೋಹಗಳನ್ನು ತ್ಯಾಗ ಮಾಡಿರುವವರಿಗೆ, ಕ್ಷೀಣಾಸವರಿಗೆ ಹಾಗು ಬ್ರಹ್ಮಚರ್ಯವಾಸವನ್ನು ಪೂರ್ಣ ಮಾಡಿರುವವರಿಗೆ ಸಮಯಾನುಸಾರವಾಗಿ ದಾನವನ್ನು ನೀಡಬೇಕು.
8-9.        ಯಾವ ಬ್ರಾಹ್ಮಣನು ಪುಣ್ಯ ಕಾಮನೆಯಿಂದ ದಾನ ನೀಡುತ್ತಿರುವನೋ ಆತನು ಮಾಯಾವಿತನವಿಲ್ಲದ, ಅಭಿಮಾನವಿಲ್ಲದ, ಲೋಭರಹಿತರಾದ, ಮಮತಾರಹಿತರಾದ ಹಾಗು ತೃಷ್ಣಾರಹಿತರಿಗೆ ಸಮಯಾನುಸಾರವಾಗಿ ದಾನವನ್ನು ನೀಡಬೇಕು.
10.          ಯಾವ ಬ್ರಾಹ್ಮಣನು ಪುಣ್ಯ ಕಾಮನೆಯಿಂದ ದಾನ ನೀಡುತ್ತಿರುವನೋ, ಆತನು ತೃಷ್ಣೆಯಲ್ಲಿ ಸಿಲುಕದ ಹಾಗು ಸಂಸಾರ ರೂಪದ ಪ್ರವಾಹವನ್ನು ದಾಟಿ ಆಸಕ್ತಿರಹಿತರಾಗಿ ಸಂಚರಿಸುತ್ತಿರುವರೋ ಅವರಿಗೆ ಸಮಯಕ್ಕೆ ಅನುಸಾರವಾಗಿ ದಾನವನ್ನು ನೀಡಬೇಕು.
11.          ಯಾವ ಬ್ರಾಹ್ಮಣನು ಪುಣ್ಯಕಾಮನೆಯಿಂದ ದಾನ ನೀಡುತ್ತಿರುವವನೊ, ಆತನು ಯಾರಿಗೆ ಈ ಲೋಕದ ಅಥವಾ ಪರಲೋಕದಲ್ಲಿ ಎಲ್ಲಿಯೂ, ಯಾವುದರಲ್ಲೂ, ಉತ್ಪತ್ತಿ ಹಾಗು ನಾಶದ ಬಗ್ಗೆ ತೃಷ್ಣೆಯಿಲ್ಲವೊ, ಅಂತಹವರಿಗೆ ಸಮಯಾನುಸಾರವಾಗಿ ದಾನ ನೀಡಬೇಕು.
12.          ಯಾವ ಬ್ರಾಹ್ಮಣನು ಪುಣ್ಯ ಕಾಮನೆಯಿಂದ ದಾನ ನೀಡುತ್ತಿರುವನೋ, ಆತನು ಕಾಮಭೋಗಗಳನ್ನು ತ್ಯಜಿಸಿದವರಿಗೆ, ಅನಿಕೇತನರಾಗಿ ಲಾಳಿಯ ರೀತಿ ಸಂಯಮಿಯಾಗಿ ಸಂಚರಿಸುವರೋ ಅವರಿಗೆ ಸಮಯಕ್ಕೆ ಅನುಸಾರವಾಗಿ ದಾನ ನೀಡಬೇಕು.
13.          ಯಾವ ಬ್ರಾಹ್ಮಣನು ಪುಣ್ಯ ಕಾಮನೆಯಿಂದ ದಾನ ನೀಡುತ್ತಿರುವನೋ, ಆತನು ರಾಹುಮುಕ್ತ ಚಂದ್ರನಂತೆ ವೀತರಾಗರಾಗಿರುವ ಹಾಗು ಸುಸಂಯಮಿತ ಇಂದ್ರಿಯವುಳ್ಳವರಿಗೆ ಸಮಯಕ್ಕೆ ಅನುಸಾರವಾಗಿ ದಾನವನ್ನು ಮಾಡಲಿ.
14.          ಯಾವ ಬ್ರಾಹ್ಮಣನು ಪುಣ್ಯಕಾಮನೆಯಿಂದ ದಾನ ನೀಡುತ್ತಿರುವನೊ, ಆತನು ವಾಸನಾರಹಿತರಿಗೆ, ರಾಗರಹಿತರಿಗೆ, ಕ್ರೋಧರಹಿತರಿಗೆ ಹಾಗು ಪುನರ್ಜನ್ಮ ಪಡೆಯದವರಿಗೆ ಸಮಯಕ್ಕೆ ಅನುಸಾರವಾಗಿ ದಾನ ನೀಡಬೇಕು.
15.          ಯಾವ ಬ್ರಾಹ್ಮಣನು ಪುಣ್ಯಕಾಮನೆಯಿಂದ ದಾನ ನೀಡುತ್ತಿರುವವನೋ ಆತನು ಜನ್ಮ-ಮೃತ್ಯುವಿಗೆ ಸಂಪೂರ್ಣವಾಗಿ ಬಿಟ್ಟವರಿಗೆ ಹಾಗು ಸರ್ವ ಸಂಶಯಗಳನ್ನು ಪರಿಹರಿಸಿಕೊಂಡವರಿಗೆ ಸಮಯಕ್ಕೆ ಅನುಸಾರವಾಗಿ ದಾನ ನೀಡಬೇಕು.
16.          ಯಾವ ಬ್ರಾಹ್ಮಣು ಪುಣ್ಯಕಾಮನೆಯಿಂದ ದಾನ ನೀಡುತ್ತಿರುವನೋ, ಆತನು ಯಾರು ಈ ಲೋಕದಲ್ಲಿಯೆ ತನಗಾಗಿ ದ್ವೀಪ ಮಾಡಿಕೊಂಡು ಸಂಚರಿಸುತ್ತಿರುವರೋ, ಅಕಿಂಚನರೊ, ಹಾಗು ಸರ್ವರೀತಿಯಲ್ಲೂ ಮುಕ್ತರಾಗಿರುವವರಿಗೆ ಸಮಯಕ್ಕೆ ಅನುಸಾರವಾಗಿ ದಾನ ಮಾಡಲಿ.
17.          ಯಾವ ಬ್ರಾಹ್ಮಣನು ಪುಣ್ಯ ಕಾಮನೆಯಿಂದ ದಾನ ನೀಡುತ್ತಾನೋ, ಆತನು ಯಾರಿಗೆ ತಮ್ಮ ಜನ್ಮ ಅಂತಿಮವಾದುದು ಮತ್ತು ಪುನರ್ಜನ್ಮ ಆಗಲಾರದು ಎಂದು ಯಥಾರ್ಥವಾಗಿ ಅರಿತಿರುವನೋ ಅಂತಹವರಿಗೆ ಸಮಯಕ್ಕೆ ಅನುಸಾರವಾಗಿ ದಾನ ನೀಡಲಿ.
18.          ಯಾವ ಬ್ರಾಹ್ಮಣನು ಪುಣ್ಯ ಕಾಮನೆಯಿಂದ ದಾನ ನೀಡುತ್ತಿರುವನೋ, ಆತನು ಜ್ಞಾನಿಗಳಿಗೆ, ಧ್ಯಾನರತರಿಗೆ, ಸ್ಮೃತಿವಂತರಿಗೆ, ಸಂಬೋಧಿಪ್ರಾಪ್ತರಿಗೆ ಹಾಗು ಯಾರಿಗೆ ಬಹು ಸಂಖ್ಯಾತರು ಶರಣಾಗಿರುವವರೋ ಅಂತಹವರಿಗೆ ಸಮಯಕ್ಕೆ ಅನುಸಾರವಾಗಿ ದಾನ ನೀಡಲಿ.
19.          ಮಾಘ - ನಿಶ್ಚಿತವಾಗಿಯೂ ನನ್ನ ಪ್ರಶ್ನೆ ನಿರರ್ಥಕವಾಗಲಿಲ್ಲ. ಭಗವಾನರು ದಾನಕ್ಕೆ ಪಾತ್ರರಾದ ವ್ಯಕ್ತಿಯನ್ನು ತಿಳಿಸಿದರು. ತಾವು ಇದನ್ನು ಯಥಾರ್ಥವಾಗಿ ಅರಿತಿರುವಿರಿ. ತಮಗೆ ಈ ಕರ್ಮ ಯಥಾರ್ಥವಾಗಿ ತಿಳಿದಿದೆ.
20.          ಯಾರು ಯಾಚನೆಗೆ ಯೋಗ್ಯರಾದ ದಾನಪತಿ ಗೃಹಸ್ಥನು ಪುಣ್ಯಾಪೇಕ್ಷೆಯಿಂದ ಯಜ್ಞ ಮಾಡುವನೋ (ದಾನ) ಪರರಿಗೆ ಅನ್ನ ಹಾಗು ಪೇಯದಿಂದ ಆದರಿಸುವನೋ, ಭಗವಾನ್, ನನಗೆ ಅದರಿಂದ ದೊರಕುವ ದಾನಸಂಪದವನ್ನು ತಿಳಿಸಿ.
21.          ಭಗವಾನ್ - ದಾನವನ್ನು ಮಾಡು ಮತ್ತು ದಾನ ನೀಡುವ ಸಮಯದಲ್ಲಿ ಸರ್ವರ ಬಗ್ಗೆ ಮನವನ್ನು ಪ್ರಸನ್ನವಾಗಿಡು (ಮೈತ್ರಿ). ದಾನವೇ ದಾಯಕನ ಅವಲಂಬನೆ ಆಗಿದೆ. ಇದರಿಂದ ಸುಪ್ರತಿಷ್ಠನಾದ ದಾಯಕನ ಮನವು ದ್ವೇಷದಿಂದ ದೂರವಾಗುತ್ತದೆ.
22.          ಆತನು ರಾಗರಹಿತನಾಗಲಿ, ದ್ವೇಷವನ್ನು ದಮನಮಾಡಿ ಅಪ್ರಮಾಣಯುತವಾಗಿ, ಅಪರಿಮಿತ, ಅಗಾಧ ಮೈತ್ರಿ ಭಾವನೆ (ಧ್ಯಾನ) ಮಾಡುತ್ತಾ, ರಾತ್ರಿ-ಹಗಲು ಜಾಗರೂಕನಾಗಿ, ಸರ್ವ ದಿಕ್ಕುಗಳಲ್ಲಿ ಅಸೀಮವಾದ ಮೈತ್ರಿಯನ್ನು ಪ್ರಸರಿಸುತ್ತಾನೆ.
23.          ಮಾಘ - ಅಜ್ಞಾನಿಯಾದ ನನಗೆ ಮುನಿಯು ಈ ಪ್ರಶ್ನೆಗಳಿಗೆ ಉತ್ತರಿಸಿ, ಯಾರು ಶುದ್ಧನು ಆಗುವನು ಹಾಗು ಮುಕ್ತನು ಯಾರು ಆಗುವನು, ಬಂಧನದಲ್ಲಿ ಹೇಗೆ ಸಿಲುಕುವನು ಮತ್ತು ಸ್ವಯಂ ಬ್ರಹ್ಮಲೋಕಕ್ಕೆ ಯಾರು  ಹೋಗುವರು? ಭಗವಾನರಂತು ನಾನು ನೋಡಿದ ಸಾಕ್ಷಾತ್ ಬ್ರಹ್ಮರಾಗಿರುವರು. ಇದು ಸತ್ಯವೇ ಆಗಿದೆ. ತಾವು ನಮಗಾಗಿ ಬ್ರಹ್ಮರಾಗಿರುವಿರಿ. ಧೃತಿವಂತರೇ, ಬ್ರಹ್ಮಲೋಕದಲ್ಲಿ ಉತ್ಪತ್ತಿ ಯಾವರೀತಿ ಆಗುವುದು?
24.          ಭಗವಾನ್ - ಯಾರು ಮೂರು ಬಗೆಯ ದಾನ (ಆಮಿಷ, ಅಭಯ, ಧಮ್ಮದಾನ) ನೀಡುವನೋ, ಯಾರು ಯಾಚಿಸುವವರಿಗೆ ಪ್ರಚನ್ನವಾಗಿಡುವನೋ, ಈ ರೀತಿ ಶ್ರೇಷ್ಠವಾಗಿ ದಾನ ನೀಡಿದಾತನು ಬ್ರಹ್ಮಲೋಕದಲ್ಲಿ ಉದಯಿಸುವನು. ಹೀಗೆ ನಾನು ಹೇಳುತ್ತೇನೆ.
                ಹೀಗೆ ನುಡಿದ ನಂತರ ಮಾಘ ಮಾಣವಕನು ಭಗವಾನರಿಗೆ ಹೀಗೆ ನುಡಿದನು- ಆಶ್ಚರ್ಯವಾಗಿದೆ ಗೋತಮರೇ, ಆಶ್ಚರ್ಯವಾಗಿದೆ. ಹೇಗೆಂದರೆ ಗೋತಮರೇ, ತಲೆಕೆಳಕಾಗಿದ್ದನ್ನು ಸರಿಯಾಗಿ ನಿಲ್ಲಿಸುವಂತೆ, ಅಡಗಿರುವುದನ್ನು ಅಗೆದು ತೋರಿಸುವಂತೆ, ದಾರಿತಪ್ಪಿದವರಿಗೆ ಮಾರ್ಗದಶರ್ಿಯಾಗಿ, ಅಂಧಕಾರದಲ್ಲಿದ್ದವರಿಗೆ ಬೆಳಕು ತೋರಿಸಿದಂತೆ, ಚಕ್ಷುವುಳ್ಳವರು ವಸ್ತುಗಳನ್ನು ಕಾಣುವ ಹಾಗೆ ಗೌತಮರಿಂದ ಅನೇಕ ರೀತಿಯಿಂದ ಧರ್ಮವು ಪ್ರಕಾಶಿಸಿತು. ಹೇ ಭಗವಾನ್, ನಾನು ಇಂದಿನಿಂದ ಬುದ್ಧರಲ್ಲಿ ಶರಣು ಹೋಗುತ್ತೇನೆ, ಧಮ್ಮಕ್ಕೆ ಹಾಗೂ ಸಂಘಕ್ಕೂ ಸಹಾ ಶರಣು ಹೋಗುತ್ತೇನೆ. ಭಗವಾನರು ನನ್ನನ್ನು ಜೀವನಪರ್ಯಂತ ಶರಣಾಗತ ಉಪಾಸಕನೆಂದು ಧಾರಣೆ ಮಾಡಿಕೊಳ್ಳಿ.

ಇಲ್ಲಿಗೆ ಮಾಘ ಸುತ್ತ ಮುಗಿಯಿತು.

No comments:

Post a Comment