Saturday 17 October 2015

parayana sutta of suttanipata in kannada ಪಾರಾಯಣ ಸುತ್ತ

ಪಾರಾಯಣ ಸುತ್ತ

                ಭಗವಾನರು ಮಗಧದಲ್ಲಿ ಪಾಸಾಣ ಚೈತ್ಯದಲ್ಲಿ ವಿಹರಿಸುತ್ತಿರುವ ಸಮಯದಲ್ಲಿ ಇದನ್ನು ಬೋಧಿಸಿದ್ದರು. ಬಾವರಿಯ ಹದಿನಾರು ಶಿಷ್ಯರಿಂದ ಕೇಳಲ್ಪಟ್ಟ ಪ್ರಶ್ನೆಗಳಿಗೆ ಉತ್ತರಿಸಿದ್ದರು. ಯಾವುದೇ ಒಂದೇ ಒಂದು ಪ್ರಶ್ನೆಯ ಅರ್ಥ ಹಾಗು ಅದಕ್ಕೆ ಪ್ರತಿಯಾಗಿ ನೀಡಿದ ಧಮ್ಮೋಪದೇಶದ ಉತ್ತರ ಅರಿತರೂ ಹಾಗು ಧಮ್ಮಾನುಧಮ್ಮವನ್ನು ಅರಿತು ಅದರಂತೆ ಜೀವಿಸಿದರೂ ಖಂಡಿತವಾಗಿಯೂ ಜನ್ಮ ಹಾಗು ಮುದಿತನದಿಂದ ಪಾರಾಗಿಬಿಡುತ್ತಾರೆ. ಇನ್ನು ಎಲ್ಲರ ಪ್ರಶ್ನೆಗೆ ಹೇಳುವುದೇನಿದೆ? ಇದು ಪಾರುಮಾಡುವಂತಹ ಧಮ್ಮವಾಗಿದೆ. ಈ ತೀರದಿಂದ ಆ ತೀರಕ್ಕೆ ಇರುವ ನಿಬ್ಬಾಣಕ್ಕೆ ಕೊಂಡೊಯ್ಯುವ ಧಮ್ಮವಾಗಿದೆ. ಆದ್ದರಿಂದಾಗಿ ಈ ಧಮ್ಮೋಪದೇಶಕ್ಕೆ ಪಾರಾಯಣ ಸುತ್ತ ಎಂಬ ಹೆಸರಿದೆ.
1-3. ಅಜೀತ, ತಿಸ್ಸಮೆತ್ತೆಯ್ಯ, ಪುಣ್ಣಕ, ಮೆತ್ತಗೂ, ದೋತಕ, ಉಪಸೀವ, ನಂದ, ಹೇಮಕ, ತೊದೆಯ್ಯ, ಕಪ್ಪ ಹಾಗು ಪಂಡಿತ ಜಾತುಕಣ್ಣಿ, ಭದ್ರಾವುಧ, ಉದಯ ಹಾಗು ಪೋಸಾಲ ಬ್ರಾಹ್ಮಣ ಬುದ್ಧಿವಂತ ಮೋಘರಾಜ ಹಾಗು ಮಹಷರ್ಿ ಪಿಂಗಿಯ - ಇವರೆಲ್ಲಾ ಋಷಿಗಳಲ್ಲೇ ಶ್ರೇಷ್ಠರಾದ ಸದಾಚಾರಿ ಋಷಿಯಾದ ಬುದ್ಧರ ಬಳಿಗೆ ಸಮೀಪಿಸುತ್ತಾರೆ. ನಿಪುಣವಾದ ಪ್ರಶ್ನೆಗಳಿಂದ ಶ್ರೇಷ್ಠರಾದ ಬುದ್ಧರಿಗೆ ಸಮೀಪವಾಗುತ್ತಾರೆ.
4.            ಬುದ್ಧ ಭಗವಾನರು ಸಹಾ ಅವರು ಕೇಳಿದ ಪ್ರಶ್ನೆಗಳಿಗೆ ಯತಾರ್ಥವಾಗಿ ಉತ್ತರಿಸಿದರು. ಮಹಾಮುನಿಯಾದ ಬುದ್ಧರು ಆ ಪ್ರಶ್ನೆಗಳಿಗೆ ಸಮರ್ಪಕವಾದ ಉತ್ತರ ನೀಡಿ, ಆ ಬ್ರಾಹ್ಮಣರಿಗೆ ಸಂತುಷ್ಟಗೊಳಿಸುತ್ತಾರೆ.
5.            ಆದಿತ್ಯಬಂಧು ಚಕ್ಷುವಂತರಾಗಿರುವ ಬುದ್ಧರಿಂದ ಸಂತುಷ್ಟರಾದ ಮೇಲೆ, ಅವರೆಲ್ಲಾ ಶ್ರೇಷ್ಠ ಪ್ರಾಜ್ಞರಾದ ಬುದ್ಧರ ಬಳಿ ಬ್ರಹ್ಮಚರ್ಯದ ಪಾಲನೆ ಮಾಡಿದರು.
6.            ಒಂದೊಂದು ಪ್ರಶ್ನೆಗೂ ಹೇಗೆ ಬುದ್ಧರು ಉತ್ತರಿಸಿದರೋ ಹಾಗೇ ಆಚರಿಸಿದವರೆಲ್ಲಾ ಈ ತೀರದಿಂದ ಆ ತೀರಕ್ಕೆ (ನಿಬ್ಬಾಣ) ಹೋಗಿಬಿಡುವರು.
7.            ಉತ್ತಮ ಮಾರ್ಗವನ್ನು ಅಭ್ಯಸಿಸುತ್ತಿರುವ ಆತನು ಈ ತೀರದಿಂದ ಆ ತೀರಕ್ಕೆ ಹೋಗಿಬಿಡುವನು. ಇದು ದಾಟಲು, ಪಾರಾಗುವಂತಹ ಮಾರ್ಗವಾಗಿದೆ. ಆದ್ದರಿಂದ ಇದಕ್ಕೆ ಪಾರಾಯಣ ಎಂದು ಹೆಸರಿಸಲಾಗಿದೆ.
8.            ಪಿಂಗಿಯ- ನಾನು ಈ ಪಾರಾಯಣದ (ದಾಟಲು ಸಮರ್ಥವಾದ) ಧಮ್ಮದ ವರ್ಣನೆ ಮಾಡುವೆನು. ಯಾವ ವಿಮಲವಾದ ಭೂರಿಮೇದಸ್ಸಿ (ಮಹಾಪ್ರಾಜ್ಞರು) ರವರು ಹೀಗೆ ವೀಕ್ಷಿಸಿದರೋ ಹಾಗೆಯೇ ಬೋಧಿಸಿದರು. ಮಹಾಮಹಿಮರಾದಂತಹ ಶಾಸ್ತರು ನಿಷ್ಕಾಮಿಗಳಾಗಿದ್ದಾರೆ, ತೃಷ್ಣಾರಹಿತರಾಗಿದ್ದಾರೆ, ಅಂತಹವರು ಅಸತ್ಯವನ್ನಾದರೂ ಹೇಗೆತಾನೆ ನುಡಿಯಲು ಸಾಧ್ಯ?
9.            ಮೋಹ ಮಲರಹಿತರಾದ, ಅಹಂಕಾರರಹಿತರೂ ಹಾಗು ಮಾಯಾವಿತನವಿಲ್ಲದವರೂ ಆದ ಭಗವಾನರ ಮಧುರ ಸ್ವರದ ವರ್ಣನೆಯನ್ನು ನಾನು ಮಾಡುವೆ.
10.          ಹೇ ಬ್ರಾಹ್ಮಣರೇ ! ಅಂಧಕಾರವನ್ನು ದೂರಮಾಡುವಂತಹ ಬುದ್ಧರು, ಸರ್ವವನ್ನು ವೀಕ್ಷಿಸುವಂತ ಸಮಂತ ಚಕ್ಷುವಂತರು, ಲೋಕದ ಅಂತ್ಯವನ್ನು ಅರಿತು ಸರ್ವ ಭವಗಳನ್ನು ದಾಟಿ ಹೋಗಿರುವರು, ಅನಾಸವರಾದಂತಹ, ಸರ್ವ ದುಃಖಗಳಿಗೆ ಪ್ರಹಾರ ಮಾಡುವಂತಹ, ಅಂತಹ ಸತ್ಯದ ನಾಮಧೇಯರಾದಂತಹ ಅವರು ನನ್ನಿಂದ ಆರಾಧಿಸಲ್ಪಟ್ಟಿದ್ದಾರೆ.
11.          ಹೇಗೆ ಪಕ್ಷಿಯು ಚಿಕ್ಕ ವನವನ್ನು ಬಿಟ್ಟು, ಅಪಾರ ಫಲಾವೃತವಾಗಿರುವ ಅರಣ್ಯದಲ್ಲಿ ನೆಲೆಸುವುದೋ, ಅದೇರೀತಿ ನಾನು ಅಲ್ಪ ದಾರ್ಶನಿಕರನ್ನು ಬಿಟ್ಟು ಮಹಾ ಜಲಾಶಯವಾದ ಸರೋವರದತ್ತ ಹೋಗುವ ಹಂಸದ ರೀತಿ ಬುದ್ಧರ ಬಳಿಗೆ ಬಂದೆನು.
12.          ಗೋತಮ ಬುದ್ಧರ ಶಾಸನ ಬಗ್ಗೆ ಹೊರಗೆ ಮೊದಲು ಹೀಗೆ ಹೇಳಲಾಗುತ್ತಿತ್ತು- ಹೀಗಿತ್ತು, ಹೀಗಾಗುವುದು. ಆದರೆ ಅವೆಲ್ಲಾ ದಾರ್ಶನಿಕತ್ವವು ಕಾಲ್ಪನಿಕವಾಗಿತ್ತು. ಅವೆಲ್ಲವೂ ತಕರ್ಾಧಾರಿತವಾಗಿತ್ತು.
13.          ಅಂಧಕಾರವನ್ನು ದೂರ ಮಾಡುವಂತಹ ಪರಮಶ್ರೇಷ್ಠರು ಅವರೊಬ್ಬರೇ ಆಗಿದ್ದರು. ಅವರು ಪ್ರಕಾಶ ನೀಡುವ ಪ್ರಚಾರಕರು. ಗೋತಮರು ಮಹಾ ಜ್ಞಾನಿಯಾಗಿದ್ದಾರೆ (ಭೂರಿಪನ್ಯಾನೋ). ಗೋತಮರು ಮಹಾ ಪ್ರಜ್ಞಾವಂತರಾಗಿದ್ದಾರೆ (ಭೂರಿಮೇಧನೋ).
14.          ಅವರು ನನಗೆ ಈಗಲೇ ಇಲ್ಲಿಯೇ ತಕ್ಷಣವೇ ಫಲ ನೀಡುವಂತಹ, ಪ್ರತ್ಯಕ್ಷವಾಗಿಯೇ ಮುಂದೆ ಇರುವಂತಹ, ತೃಷ್ಣಾದ ನಾಶ ಮಾಡುವಂತಹ ಹಾಗು ದುಃಖವನ್ನು ದೂರ ಮಾಡುವಂತಹ ಧಮ್ಮದ ಉಪದೇಶ ನೀಡಿದರು. ಅಂತಹುದರ ಉಪಮೆಯನ್ನು ಯಾವುದರಿಂದಲೂ ಹೋಲಿಸಲು ಆಗದು.
15.          ಬಾವರಿ- ಹೇ ಪಿಂಗಿಯಾ! ನೀನು ಅಂತಹ ಮಹಾಜ್ಞಾನಿ ಗೋತಮರ, ಮಹಾಪ್ರಜ್ಞಾವಂತರಾದ ಗೋತಮರಿಂದ ಕ್ಷಣಮಾತ್ರವೂ ದೂರ ಇರಬಲ್ಲೆಯಾ?
16.          ಯಾರು ನಿನಗೆ ಕಣ್ಣ ಮುಂದೆಯೇ, ತಕ್ಷಣವೇ ಫಲಕಾರಿಯಾದ, ತೃಷ್ಣೆಯನ್ನು ನಾಶಗೊಳಿಸುವಂತಹ, ದುಃಖವನ್ನು ದೂರಗೊಳಿಸುವಂತಹ ಉಪದೇಶವನ್ನು ನೀಡಿದ್ದಾರೆ. ಅಂತಹವರ ಸಾಮ್ಯತೆ ಎಲ್ಲಿಯೂ ಸಿಗದು. ಯಾವುದರಿಂದಲೂ ಹೋಲಿಸಲು ಆಗದು.
17.          ಪಿಂಗಿಯಾ- ಓ ಬ್ರಾಹ್ಮಣ, ನಾನು ಅಂತಹ ಮಹಾಪ್ರಾಜ್ಞ ಗೋತಮರ, ಅಂತಹ ಮಹಾಮೇಧಾವಿ ಗೋತಮರನ್ನು ಅಗಲಿ ಕ್ಷಣಮಾತ್ರವೂ ಇರಲಾರೆ.
18.          ಅವರು ನನ್ನ ಚಕ್ಷುಗಳ ಮುಂದೆಯೇ ಕಾಲವಿಳಂಬವಿಲ್ಲದೆ ಫಲ ನೀಡುವ, ತೃಷ್ಣಾ ನಾಶಕಾರಿಯಾದ, ದುಃಖ ನಿರೋಧಗೊಳಿಸುವ, ಧಮ್ಮೋಪದೇಶ ನೀಡಿದ್ದಾರೆ. ಅದರ ತುಲನೆಯನ್ನು ಯಾವುದರಿಂದಲೂ ಮಾಡಲಾಗದು.
19.          ಹೇ ಬ್ರಾಹ್ಮಣ! ನಾನು ಅಹೋರಾತ್ರಿ ಅಪ್ರಮತ್ತನಾಗಿ ಚಿತ್ತ ಚಕ್ಷುವಿನಿಂದಲೇ ಅವರನ್ನು ಕಾಣುತ್ತಿದ್ದೇನೆ. ನಾಮ ಸ್ಮರಿಸುತ್ತಲೇ ನಾನು ರಾತ್ರಿಯನ್ನು ಕಳೆಯುತ್ತಿದ್ದೇನೆ. ಹೀಗಾಗಿ ನಾನು ಅವರಿಂದ ಬೇರೆ ಇದ್ದೇನೆಂದು ತಿಳಿಯುತ್ತಿಲ್ಲ.
20.          ನನ್ನ ಶ್ರದ್ಧೆಯಾಗಲಿ, ಭಕ್ತಿಯಾಗಲಿ, ಆನಂದವಾಗಲಿ, ಮನಸ್ಸಾಗಲಿ, ಸ್ಮೃತಿಯೇ ಆಗಲಿ, ಗೋತಮರ ಶಿಕ್ಷಣದಿಂದ ಅಣುಮಾತ್ರವೂ ದೂರ ಹೋಗದು. ಎಲ್ಲಿ ಯಾವ ದಿಕ್ಕಿನೆಡೆಗೆ ಆ ಮಹಾಪ್ರಾಜ್ಞರು ಹೋಗುತ್ತಾರೋ, ಆ ದಿಕ್ಕಿನೆಡೆಗೆಲ್ಲಾ ಶಿರಬಾಗಿ ನಮಸ್ಕರಿಸುತ್ತೇನೆ.
21.          ಜೀರ್ಣಗೊಂಡಿರುವ, ಬಲಹೀನವಾದ ನನ್ನ ಶರೀರವು ಅವರಿರುವೆಡೆಯಲ್ಲಿ ಹೋಗಲಾರದು. ಆದರೂ ಮಾನಸಿಕವಾಗಿ ನಿತ್ಯವೂ ಅವರಿರುವೆಡೆಗೆ ಹೋಗುತ್ತೇನೆ. ಹೀಗಾಗಿ ಹೇ ಬ್ರಾಹ್ಮಣ, ನನ್ನ ಮನಸ್ಸು ಅವರ ಜೊತೆಯಲ್ಲೇ ಇದೆ.
22.          ಕಾಮ ಭೋಗಗಳ ಕೆಸರಿನಲ್ಲಿ ಹೊರಳಾಡುತ್ತಿದ್ದ ನಾನು ಒಂದು ದ್ವೀಪದಿಂದ ಇನ್ನೊಂದು ದ್ವೀಪದೆಡೆಗೆ ಗುರುವನ್ನು ಅರಸುತ್ತಾ ಹೋಗುತ್ತಿದ್ದೆನು. ಆಗ ನಾನು ಲೋಕದ ಬೃಹತ್ ಪ್ರವಾಹವನ್ನು ದಾಟಿರುವ, ಅನಾಸವರಾದ ಸಮ್ಮಾಸಂಬುದ್ಧರನ್ನು ಕಂಡೆನು.
23.          ಆಗ ಅಲ್ಲಿ ಪ್ರತ್ಯಕ್ಷರಾದ ಭಗವಾನರು ಹೀಗೆ ನುಡಿದರು- ಯಾವರೀತಿಯಲ್ಲಿ ವಕ್ಕಲಿ, ಭದ್ರಾವುಧ ಹಾಗು ಆಳವಿಯು ತಥಾಗತರ ಮೇಲಿನ ಶ್ರದ್ಧೆಯಿಂದಲೇ ಮುಕ್ತರಾದರೋ, ಅದೇರೀತಿಯಲ್ಲಿ ನೀನು ಸಹಾ ಶ್ರದ್ಧೆಯನ್ನು ವೃದ್ಧಿಗೊಳಿಸು ಪಿಂಗಿಯಾ! ಆಗ ನೀನು ಸಹ ಮೃತ್ಯುರಾಜನಿಂದ ದೂರವಾಗುವೆ.
24.          ಮುನಿಗಳ ಈ ವಚನವನ್ನು ಆಲಿಸಿ ನಾನು ಅತ್ಯಧಿಕವಾಗಿ ಪ್ರಸನ್ನಗೊಂಡೆನು. ಓ ತೆರೆದ ಜ್ಞಾನವಂತರೇ, ಸಮ್ಮಾಸಂಬುದ್ಧರೇ, ತಾವು ನಿಜಕ್ಕೂ ನಿರ್ಮಲಚಿತ್ತದವರಾಗಿದ್ದೀರಿ ಹಾಗು ಮಹಾಜ್ಞಾನಿಗಳಾಗಿದ್ದೀರಿ.
25.          ತಾವು ದೇವತೆಗಳಿಂದ ಅತೀತ ಶ್ರೇಷ್ಠ ಧಮ್ಮವನ್ನು ಸಾಕ್ಷಾತ್ಕರಿಸಿ ಯಾವುದನ್ನೂ ಬಿಡದೆ ಸರ್ವವನ್ನೂ, ಸರ್ವ ಲೋಕಗಳನ್ನು ಅರಿತಿರುವಿರಿ. ಸಂದೇಹಸ್ಥರ ಹಾಗು ಜ್ಞಾನಿಗಳ ಸರ್ವ ಪ್ರಶ್ನೆಗಳನ್ನು ತಮ್ಮ ಉತ್ತರದಿಂದ ಅಂತ್ಯ ಮಾಡುವವರಾಗಿದ್ದೀರಿ.
26.          ನಿಬ್ಬಾಣವು ಅಕಂಪನಮಯವೂ ಅಜೇಯವಾಗಿದೆ! ಸ್ಥಿರವಾಗಿದೆ, ಯಾವುದರಿಂದಲೂ ಅದರ ಉಪಮೆ ನೀಡಲಾಗದು. ನಾನು ಖಂಡಿತವಾಗಿ ಆ ಅಚಲತೆಯ ಪ್ರಾಪ್ತಿಮಾಡುವೆ. ಈ ವಿಷಯದಲ್ಲಿ ನನಗೆ ಯಾವ ಸಂದೇಹವೂ ಇಲ್ಲ. ಈ ರೀತಿಯಾಗಿ ನನ್ನನ್ನು ಧಾರಣೆ ಮಾಡಿಕೊಳ್ಳಿ, ಓ ಪೂರ್ಣ ಚಿತ್ತವಿಮುಕ್ತ ಭಗವಾನರೇ!
ಇಲ್ಲಿಗೆ ಪಾರಾಯಣ ಸುತ್ತ ಮುಗಿಯಿತು.
ಎಂಟು ಬಾಣವಾರಗಳಿಗೆ ಸಮನಾದ ಸುತ್ತನಿಪಾತವು ಮುಗಿಯಿತು.
ಐದು ವರ್ಗಗಳ, ಎಂಟು ಬಾಣವಾರಗಳ ಹಾಗು 72 ಸುತ್ತಗಳಲ್ಲಿ ಸಂಗ್ರಹಿತವಾದ

ಖುದ್ದಕನಿಕಾಯದಲ್ಲಿ ಅಂತರ್ಗತವಾಗಿರುವ ಸುತ್ತನಿಪಾತವು ಮುಗಿಯಿತು

pingiya manava pucca of suttanipata in kannada 16. ಪಿಂಗಿಯ ಮಾಣವ ಪುಚ್ಛಾ (ಪಿಂಗಿಯ ಮಾಣವನ ಪ್ರಶ್ನೆಗಳು)

16. ಪಿಂಗಿಯ ಮಾಣವ ಪುಚ್ಛಾ (ಪಿಂಗಿಯ ಮಾಣವನ ಪ್ರಶ್ನೆಗಳು)

1.            ಪಿಂಗಿಯಾ- ನಾನು ಜೀಣರ್ಾವಸ್ಥೆಯಲ್ಲಿಹೆನು, ದುರ್ಬಲನೂ ಹೌದು. ನನ್ನ ಸುಂದರತೆ ಹೋಗುತ್ತಲಿದೆ. ನನ್ನ ಕಂಗಳು ಸರಿಯಾಗಿ ಕಾಣಿಸುತ್ತಿಲ್ಲ. ಕಿವಿಗಳು ಸಹಾ ಸ್ಪಷ್ಟವಾಗಿ ಆಲಿಸದು. ನನಗೆ ಧಮ್ಮೋಪದೇಶ ನೀಡಿ. ಅದರಿಂದಾಗಿ ನಾನು ಜನ್ಮ ಜರಾ ಬಂಧನದಿಂದ ಪಾರಾಗುವಂತಾಗಲಿ. ಹಾಗು ಮಧ್ಯದಲ್ಲಿ ಮೋಹದ ಜೊತೆಯಲ್ಲಿಯೇ ಸಾಯದೆ ಹೋಗುವಂತಾಗಲಿ.
2.            ಭಗವಾನರು- ದೇಹದ ಕಾರಣದಿಂದಾಗಿ ಚಿಂತಿತರಾಗಿರುವ, ದೇಹದ ಕಾರಣದಿಂದಲೇ ನಾಶವಾಗುತ್ತಿರುವ ಅಜಾಗರೂಕ ಜನತೆಯನ್ನು ನೋಡುತ್ತಾ ಓ ಪಿಂಗಿಯಾ! ಅಪ್ರಮತ್ತನಾಗು, ಜಾಗರೂಕನಾಗಿ ದೇಹದ ಮೋಹವನ್ನು ಅಂತ್ಯಗೊಳಿಸು. ಅದರಿಂದಾಗಿ ಭವ ಅಂತ್ಯವಾಗಲಿ.
3.            ಪಿಂಗಿಯ- ನಾಲ್ಕು ದಿಕ್ಕುಗಳು, ಮತ್ತೆ ನಾಲ್ಕು ಅನು ದಿಕ್ಕುಗಳು (ಮೂಲೆ ದಿಕ್ಕುಗಳು) ಊದ್ರ್ವ ಹಾಗೂ ಅಧೋ ದಿಕ್ಕು. ಹೀಗೆ ಯಾವೆಲ್ಲಾ ಲೋಕಗಳಲ್ಲಿ ದಿಕ್ಕುಗಳಿವೆಯೋ, ಅವುಗಳಲ್ಲೆಲ್ಲಾ ಯಾವುದು ಸಹಾ ತಮ್ಮಿಂದ ಅದೃಷ್ಯವಾಗಿಲ್ಲ (ಎಲ್ಲವನ್ನು ನೋಡಿದ್ದೀರಿ), ಅಶ್ರುತವಾಗಿಲ್ಲ (ಎಲ್ಲವನ್ನು ಅರಿತಿದ್ದೀರಿ), ಅಪರಿಚಿತವಾಗಿಲ್ಲ ಅಥವಾ ಅಜ್ಞಾತವಾಗಿಲ್ಲ. ಆದ್ದರಿಂದ ತಾವು ನನಗೆ ಧಮ್ಮ ತಿಳಿಸಿ. ಅದನ್ನು ಅರಿತು ನಾನು ಜನ್ಮ ಹಾಗು ಜರಾಗಳ ಅಂತ್ಯ ಮಾಡುವಂತಾಗಲಿ.
4.            ಭಗವಾನರು- ಹೇ ಪಿಂಗಿಯಾ! ತೃಷ್ಣೆಗೆ ವಶೀಭೂತರಾಗಿರುವ ಹೀಗೆಯೇ ಸಾಗಿ ದುಃಖಿತರಾಗಿರುವ, ವೃದ್ಧಾಪ್ಯದಿಂದಾಗಿ ಚಿಂತಾಕ್ರಾಂತರಾಗಿರುವ ಈ ಮನುಜರನ್ನು ನೋಡಿ, ನೀನು ಪಿಂಗಿಯಾ! ಅಪ್ರಮತ್ತನಾಗು. ಪುನಃ ಪುನಃ ಜನ್ಮ ತಾಳದಿರಲು ಈ ತೃಷ್ಣೆಯನ್ನು ತ್ಯಾಗ ಮಾಡಿಬಿಡು.

ಇಲ್ಲಿಗೆ ಪಿಂಗಿಯ ಮಾಣವ ಪ್ರಶ್ನೆಗಳು ಮುಗಿಯಿತು.

mogharaja manava pucca of suttanipata in kannada 15. ಮೋಘರಾಜ ಮಾಣವ ಪುಚ್ಛಾ (ಮೋಘರಾಜ ಮಾಣವನ ಪ್ರಶ್ನಾವಳಿ)

15. ಮೋಘರಾಜ ಮಾಣವ ಪುಚ್ಛಾ (ಮೋಘರಾಜ ಮಾಣವನ ಪ್ರಶ್ನಾವಳಿ)

1.            ಮೋಘರಾಜ- ಹೇ ಶಕ್ರರೇ! ನಾನು ಎರಡುಬಾರಿ ವಿಭಿನ್ನ ಸನ್ನಿವೇಶದಲ್ಲಿ ತಮ್ಮಲ್ಲಿ ಪ್ರಶ್ನಿಸಿದೆನು. ಆದರೆ ಚಕ್ಷುವಂತರೇ, ತಾವು ಉತ್ತರವನ್ನು ನೀಡಲಿಲ್ಲ. ದೇವಷರ್ಿಗಳು 3ನೇ ಬಾರಿ ಖಂಡಿತವಾಗಿ ಉತ್ತರಿಸುವರು ಎಂದು ಕೇಳಿದ್ದೇನೆ.
2.            ಈ ಲೋಕ, ಪರಲೋಕ ಹಾಗು ದೇವತೆಗಳ ಸಹಿತ ಬ್ರಹ್ಮಲೋಕಗಳಿವೆ. ಇವುಗಳ ಬಗ್ಗೆ ಯಶಸ್ವಿಗಳಾದ ಗೋತಮರ ದೃಷ್ಟಿಕೋನ ಏನು ಎಂಬುದು ನನಗೆ ತಿಳಿದಿಲ್ಲ.
3.            ಹೇ ಪರಮಪ್ರಜ್ಞಾದ ವಿಶುದ್ಧಿದಶರ್ಿಗಳೆ, ನಾನು ತಮ್ಮಲ್ಲಿ ಈ ಪ್ರಶ್ನೆ ಕೇಳಲೇ ಬಂದಿರುವೆನು. ಲೋಕವನ್ನು ಯಾವರೀತಿ ನೋಡುವುದರಿಂದಾಗಿ (ಗ್ರಹಿಸುವುದರಿಂದ) ಅಂತಹನಿಗೆ ಮೃತ್ಯುರಾಜ ನೋಡಲಾಗುವುದಿಲ್ಲ.
4.            ಭಗವಾನರು- ಹೇ ಮೋಘರಾಜ! ಸದಾ ಸ್ಮೃತಿವಂತನಾಗಿ, ಶೂನ್ಯಭಾವದಿಂದ ನೋಡುವಂತಾಗು, ಈ ರೀತಿಯಾಗಿ ಆತ್ಮ-ದೃಷ್ಟಿಗಳ ನಾಶ ಮಾಡಿದರೆ ಮೃತ್ಯುರಾಜನನ್ನು ದಾಟಿಹೋಗುವೆ. ಈ ರೀತಿಯಾಗಿ (ಶೂನ್ಯಭಾವದಿಂದ) ಲೋಕವನ್ನು ನೋಡುವವನಿಗೆ ಮೃತ್ಯುರಾಜ ನೋಡಲಾಗುವುದಿಲ್ಲ.

ಇಲ್ಲಿಗೆ ಮೋಘರಾಜ ಮಾಣವ ಪ್ರಶ್ನಾವಳಿ ಮುಗಿಯಿತು.

posala manava pucca of suttanipata in kannada 14. ಪೋಸಾಲ ಮಾಣವ ಪುಚ್ಛಾ (ಪೋಸಾಲ ಮಾಣವನ ಪ್ರಶ್ನಾವಳಿ)

14. ಪೋಸಾಲ ಮಾಣವ ಪುಚ್ಛಾ (ಪೋಸಾಲ ಮಾಣವನ ಪ್ರಶ್ನಾವಳಿ)

1.            ಪೋಸಾಲ- ಯಾವ ಭಗವಾನರು ಅತೀತದಲ್ಲಿ ನಡೆದ ಎಲ್ಲವನ್ನೂ ಹೇಳುವರೋ, ಯಾರು ಚಾಂಚಲ್ಯರಹಿತರೋ, ಯಾರು ಸಂಶಯಗಳನ್ನು ಛಿದ್ರಗೊಳಿಸಿರುವರೋ, ಸರ್ವ ಧರ್ಮಗಳಲ್ಲಿ ಪಾರಂಗತರೋ, ಅಂತಹ ತಮ್ಮಲ್ಲಿ ನಾನು ಪ್ರಶ್ನಿಸಲು ಬಂದಿರುವೆನು.
2.            ಹೇ ಶಕ್ರರೇ, ರೂಪ (ದೇಹ) ಸಂಜ್ಞೆಗಳಿಂದ ರಹಿತರಾಗಿರುವ ಸರ್ವರೀತಿ ದೇಹಭಾವಗಳನ್ನು ತೊರೆದಿರುವ ಸರ್ವ ಅರೂಪಿ (ದೇಹಾತೀತ) ಸಂಜ್ಞೆಗಳಿಂದ ಮುಕ್ತರಾಗಿರುವ, ಆಂತರ್ಯದಲ್ಲೂ ಹಾಗು ಬಾಹ್ಯದಲ್ಲೂ ಏನೂ ಇಲ್ಲ ಎಂದು ವೀಕ್ಷಿಸುವ ಜ್ಞಾನದ ಬಗ್ಗೆ ಕೇಳುತ್ತಿರುವೆ. ಅಂತಹ ವ್ಯಕ್ತಿಯು ಮುಂದೆ ಎಂತಹ ಜ್ಞಾನವನ್ನು ಉತ್ಪನ್ನಗೊಳಿಸಬೇಕು.
3.            ಭಗವಾನರು- ವಿಞ್ಞಾನದ (ಮನಸ್ಸಿನ/ಅರಿವಿನ) ಸರ್ವ ಅವಸ್ಥೆಯ ಸ್ಥಿತಿಗಳನ್ನು ಅರಿತಿರುವಂತಹ ತಥಾಗತರು ಸ್ಥಿರವಿಮುಕ್ತ ಹಾಗು ವಿಮುಕ್ತಿಯೆಡೆಗೆ ಧಾವಿಸುತ್ತಿರುವ ವ್ಯಕ್ತಿಗಳನ್ನು ಅರಿತಿದ್ದಾರೆ.
4.            ಅಕಿಂಚಾಯತನವನ್ನು ಉತ್ಪನ್ನಗೊಳಿಸುವಂತಹುದು ಎಂದರಿತು, ರಾಗವನ್ನು ಬಂಧನವೆಂದು ಪರಿಗಣಿಸಿ ಇಂತಹ ಜ್ಞಾನಿಯು ಇದನ್ನು ಮೀರಿ ವಿಪಶ್ಶನ ಧ್ಯಾನ ಮಾಡುತ್ತಾನೆ. ಅಂತಹ ಪೂರ್ಣತೆಯನ್ನು ಪ್ರಾಪ್ತಿಗೊಳಿಸಿದ ಬ್ರಾಹ್ಮಣನ ಜ್ಞಾನವು ಯಥಾರ್ಥವಾಗಿರುತ್ತದೆ.
ಇಲ್ಲಿಗೆ ಪೋಸಾಲ ಮಾಣವ ಪುಚ್ಛಾ ಮುಗಿಯಿತು

udaya manava pucca of suttanipata in kannada 13. ಉದಯ ಮಾಣವ ಪುಚ್ಛಾ (ಉದಯ ಮಾಣವನ ಪ್ರಶ್ನಾವಳಿ)

13. ಉದಯ ಮಾಣವ ಪುಚ್ಛಾ (ಉದಯ ಮಾಣವನ ಪ್ರಶ್ನಾವಳಿ)

1.            ಉದಯ- ಧ್ಯಾನಿಯು, ರಜರಹಿತರಾಗಿ ಆಸೀನರಾದ, ಕರ್ತವ್ಯಗಳನ್ನು ಪೂರೈಸಿದ, ಆಸವರಹಿತರಾದ, ಸರ್ವಧರ್ಮ ಪಾರಂಗತರಾದ, ಭಗವಾನರೇ ತಮ್ಮಲ್ಲಿ ಪ್ರಶ್ನಿಸಲು ಬಂದಿದ್ದೇನೆ, ಪ್ರಜ್ಞಾವಿಮೋಕ್ಷ ಹಾಗು ಅವಿದ್ಯೆಯ ನಾಶದ ಬಗ್ಗೆ ತಿಳಿಸಿ.
2.            ಭಗವಾನರು- ಕಾಮರಾಗಗಳನ್ನು ಮತ್ತು ದುರ್ಮನಸ್ಸು (ದುಃಖ/ವಿರೋಧ ಛಾಯೆಯ ಚಿತ್ತಸ್ಥಿತಿ) ವಜರ್ಿಸು, ಸೋಮಾರಿತನದ ಜಡತೆಗಳನ್ನೆಲ್ಲಾ ನಷ್ಟಗೊಳಿಸು. ಸಂದೇಹ ಹಾಗು ಅನಿಧರ್ಾರಗಳನ್ನು ನಿವಾರಿಸಿಕೋ.
3.            ಉಪೇಕ್ಷಾಯುತ ಸ್ಮೃತಿವಂತನಾಗು, ಅದರಿಂದ ಉಂಟಾಗುವ ಪರಿಶುದ್ಧತೆಯಿಂದ ಹಾಗು ಧಾಮರ್ಿಕ ವಿಚಾರಗಳಿಂದ ಉತ್ಪನ್ನತೆಯಿಂದಲೇ ಪ್ರಜ್ಞಾ ವಿಮೋಕ್ಷ ಹಾಗು ಅವಿದ್ಯೆಯ ನಾಶವೆಂದು ಹೇಳುತ್ತೇನೆ.
4.            ಉದಯ- ಲೋಕವು ಯಾವುದರಿಂದ ಸಂಯೋಜನಗೊಂಡಿದೆ (ಬಂಧಿತವಾಗಿದೆ), ಯಾವುದರಲ್ಲಿ ಲೋಕವು ವಿಹರಿಸುವುದು (ಆನಂದಿಸುವುದು), ಯಾವುದನ್ನು ತ್ಯಾಗ ಮಾಡುವುದರಿಂದ ನಿಬ್ಬಾಣವು ಪ್ರಾಪ್ತಿಯಾಗುವುದು?
5.            ಭಗವಾನರು- ಲೋಕವು ರಾಗದಿಂದ ಬಂಧಿತವಾಗಿದೆ, ಅದರ ಬಗ್ಗೆ ತಕರ್ಿಸುತ್ತಿರುವುದರಲ್ಲಿಯೇ ಅದು ವಿಹರಿಸುವುದು. ತೃಷ್ಣೆಯನ್ನು ತ್ಯಾಗ ಮಾಡುವುದರಿಂದಲೇ ನಿಬ್ಬಾಣ ಪ್ರಾಪ್ತಿಯಾಗುತ್ತದೆ (ತೃಷ್ಣಾ ತ್ಯಾಗವೇ ನಿಬ್ಬಾಣವೆಂದು ಹೇಳಲಾಗುತ್ತದೆ).
6.            ಉದಯ- ಯಾವರೀತಿಯ ಎಚ್ಚರಿಕೆಯಿಂದ ಸ್ಮೃತಿ ನೆಲೆಸಿದಾಗ, ವಿಞ್ಞಾನದ (ಮನಸ್ಸಿನ/ಅರಿವಿನ) ನಿರೋಧವಾಗುವುದು? ಭಗವಾನರ ಬಳಿ ಪ್ರಶ್ನಿಸಲು ಬಂದಿರುವೆನು. ತಮ್ಮ ಉತ್ತರವನ್ನು ಆಲಿಸಲು ಇಚ್ಛಿಸುತ್ತೇನೆ.
7.            ಭಗವಾನರು- ಅಂತರಂಗದಲ್ಲಾಗಲಿ ಅಥವಾ ಬಾಹ್ಯದಲ್ಲಾಗಲಿ, ಯಾವುದೇ ರೀತಿಯ ವೇದನೆ (ಸಂವೇದನೆ)ಗಳಲ್ಲಿ ಆನಂದಿಸಬೇಡ (ಅಭಿನಂದಿಸಬೇಡ). ಹೀಗೆ ಸ್ಮೃತಿವಂತನಾಗಿ ವೇದನೆಗಳಿಗೆ ಅತೀತನಾದರೆ ವಿಞ್ಞಾನದ ನಿರೋಧವಾಗುವುದು.

ಇಲ್ಲಿಗೆ ಉದಯ ಮಾಣವ ಪ್ರಶ್ನಾವಳಿ ಮುಗಿಯಿತು.

bhadravudha manava pucca of suttanipata in kannada 12. ಭದ್ರಾವುಧ ಮಾಣವ ಪುಚ್ಛಾ (ಭದ್ರಾವುಧ ಮಾಣವನ ಪ್ರಶ್ನಾವಳಿ)

12. ಭದ್ರಾವುಧ ಮಾಣವ ಪುಚ್ಛಾ (ಭದ್ರಾವುಧ ಮಾಣವನ ಪ್ರಶ್ನಾವಳಿ)

1.            ಭದ್ರಾವುಧ- ಗೃಹತ್ಯಾಗಿ, ತೃಷ್ಣಾವನ್ನು ಛಿದ್ರಗೊಳಿಸಿದಂತಹ ರಾಗ ತ್ಯಾಗಿಗಳೇ, ಪ್ರವಾಹ ದಾಟಿದವರೇ, ವಿಮುಕ್ತರೇ ಹಾಗು ಲೋಕ ತ್ಯಜಿಸಿದಂತಹ ಸುಮೇಧರಲ್ಲಿ ನಾನು ಯಾಚಿಸುತ್ತಿರುವೆ. ತಮ್ಮಂತಹ ಶ್ರೇಷ್ಠರ (ನಾಗ) ಉಪದೇಶ ಆಲಿಸಿದವರು ಇಲ್ಲಿಂದ (ಲೋಕದಿಂದ) ಹೊರಟು ವಿಮುಕ್ತರಾಗುತ್ತಾರೆ.
2.            ಹೇ ವೀರರೇ! ತಮ್ಮ ಅಮೃತ ವಚನ ಆಲಿಸಲು ಆಕಾಂಕ್ಷಿತರಾಗಿ ಅನೇಕ ಜನಪದಗಳಿಂದ ಅನೇಕ ಪ್ರಕಾರದ ಜನರು ಏಕತ್ರಿತರಾಗಿದ್ದಾರೆ, ತಾವು ಅವರಿಗೆ ಸರ್ವರೀತಿಯಲ್ಲಿ ಬೋಧಿಸಿ, ಏಕೆಂದರೆ ತಮಗೆ ಧಮ್ಮ ಸಾಕ್ಷಾತ್ಕಾರವಾಗಿದೆ.
3.            ಭಗವಾನರು- ಮೇಲೆ, ಕೆಳಗೆ, ಸುತ್ತಲೂ ಅಥವಾ ಮಧ್ಯೆಯಲ್ಲಿಯೂ ಆಸಕ್ತ ರೂಪವಾದ ತೃಷ್ಣೆಯನ್ನು ತ್ಯಾಗಮಾಡಿ, ಲೋಕದಲ್ಲಿ ಜನರು ಯಾವ ಯಾವುದಕ್ಕೆ ಹಂಬಲಿಸಿ ಪಡೆಯುತ್ತಾರೋ, ಅದೇ ಕಾರಣಕ್ಕೆ ಮಾರನು ಮನುಷ್ಯರ ಹಿಂದೆ ಬೀಳುತ್ತಾನೆ.
4.            ಆದ್ದರಿಂದ ತೃಷ್ಣೆಯಲ್ಲಿ ಆಸಕ್ತರಾದ, ಮೃತ್ಯು ರಾಜ್ಯದಲ್ಲಿ ಲೀನವಾದ ಈ ಪ್ರಜೆಗಳನ್ನು ನೋಡುತ್ತಾ ಸ್ಮೃತಿವಂತನಾದ ಭಿಕ್ಷುವು ಲೋಕದ ಯಾವುದರ ಮೇಲೆಯೂ ಆಸಕ್ತಿ ತಾಳದಿರಲಿ.

ಇಲ್ಲಿಗೆ ಭದ್ರಾವುಧ ಮಾಣವ ಪ್ರಶ್ನಾವಳಿ ಮುಗಿಯಿತು.

jatukanni manava pucca of suttanipata in kannada 11. ಜತುಕಣ್ಣಿ ಮಾಣವ ಪುಚ್ಛಾ (ಜತುಕಣ್ಣಿ ಮಾಣವನ ಪ್ರಶ್ನಾವಳಿ)

11. ಜತುಕಣ್ಣಿ ಮಾಣವ ಪುಚ್ಛಾ (ಜತುಕಣ್ಣಿ ಮಾಣವನ ಪ್ರಶ್ನಾವಳಿ)

1.            ಜತುಕಣ್ಣಿ- ಹೇ ಸರ್ವಜ್ಞರೇ, ನಾನು ತಮ್ಮನ್ನು ನಿಷ್ಕಾಮಿಗಳು ಹಾಗು ಜನ್ಮ ಪ್ರವಾಹವನ್ನು ದಾಟಿದವರು ಎಂದು ಕೇಳಿ ಪ್ರಶ್ನಿಸಲು ಬಂದಿರುವೆ. ಭಗವಾನರು ನನಗೆ ಶಾಂತಿಪಥದ ಕುರಿತು ಯತಾರ್ಥವಾಗಿ ತಿಳಿಸಿ.
2.            ಹೇಗೆ ಸೂರ್ಯನು ತನ್ನ ತೇಜಸ್ಸಿನಿಂದ ಪೃಥ್ವಿಯನ್ನು ಪ್ರಕಾಶಿಸುವನೋ, ಅದೇರೀತಿಯಲ್ಲಿ ಭಗವಾನರು ಸಹಾ ಕಾಮವಿಜೇತರಾಗಿ ಪ್ರಕಾಶಮಾನರಾಗಿ ವಿಹರಿಸುವರು. ಹೇ ಮಹಾಪ್ರಜ್ಞಾರೇ, ನನ್ನಂತ ಅಲ್ಪ ಪ್ರಜ್ಞನಿಗೆ ಧಮ್ಮವನ್ನು ತಿಳಿಸಿ, ಅದರಿಂದಾಗಿ ನಾನು ಜನ್ಮ ಹಾಗು ಜರಾದಿಂದ ಪಾರಾಗುವುದಕ್ಕೆ ತಿಳಿಯುವಂತಾಗಲಿ.
3.            ಭಗವಾನರು- ನಿಷ್ಕಾಮವನ್ನೇ ಕಲ್ಯಾಣಕಾರಕವೆಂದು ನೋಡುತ್ತಾ, ಕಾಮ ಭೋಗಗಳ ಬಗ್ಗೆ ಆಸಕ್ತಿಯನ್ನು ತ್ಯಾಗಮಾಡು. ನಿನ್ನಲ್ಲಿ ಪಡೆಯಲು ಅಥವಾ ತ್ಯಾಗಮಾಡಲು ಏನೂ ಉಳಿಯದಿರಲಿ.
4.            ಈ ಹಿಂದೆ ಯಾವ ಪೂರ್ವ ವಾಸನೆಗಳಿದ್ದವೋ ಅವೆಲ್ಲವನ್ನು ನಷ್ಟಗೊಳಿಸು, ಕ್ಷಯಗೊಳಿಸು ಹಾಗು ಅದರ ಹಿಂದೆ ಯಾವುದನ್ನೂ (ಭವಿಷ್ಯದಲ್ಲಿಯೂ ಯಾವ ಹೊಸ ವಾಸನೆಯನ್ನು) ಹಿಡಿಯಬೇಡ. ಹೀಗೆ ಯಾವುದರಲ್ಲಿಯೂ (ಈಗಲೂ) ಯಾವ ಗ್ರಹಣವನ್ನು ಮಾಡದೆ ಹೋದಾಗ ಉಪಶಾಂತನಾಗಿ ವಿಹರಿಸುವೆ.
5.            ಹೇ ಬ್ರಾಹ್ಮಣನೇ, ಯಾರು ಸರ್ವಪ್ರಕಾರದ ನಾಮರೂಪದ (ದೇಹ ಮನಸ್ಸಿನ) ಬಗ್ಗೆ ತೃಷ್ಣಾರಹಿತನೋ, ಅಂತಹವನಲ್ಲಿ ಮೃತ್ಯುವಿಗೆ ವಶನಾಗುವಂತಹ ವಾಸನೆಗಳು ಇರುವುದಿಲ್ಲ.

ಇಲ್ಲಿಗೆ ಜತುಕಣ್ಣಿ ಮಾಣವ ಪ್ರಶ್ನಾವಳಿ ಮುಗಿಯಿತು.

kappa manava pucca of suttanipata in kannada 10. ಕಪ್ಪ ಮಾಣವ ಪುಚ್ಛಾ (ಕಪ್ಪ ಮಾಣವನ ಪ್ರಶ್ನಾವಳಿ)

10. ಕಪ್ಪ ಮಾಣವ ಪುಚ್ಛಾ (ಕಪ್ಪ ಮಾಣವನ ಪ್ರಶ್ನಾವಳಿ)

1.            ಕಪ್ಪ- ಹೇ ಮಾರ್ಷರೇ! ಜಲಾಶಯ ರೂಪದ ಲೋಕದ ಮಧ್ಯೆ ಇರುವಂತಹವರಿಗೆ ಜರಾ ಹಾಗೂ ಮೃತ್ಯುರೂಪಿ ಮಹಾ ಭಯಾನಕ ಪ್ರವಾಹ ಬರುವಾಗ ಸುರಕ್ಷೆಗಾಗಿ ದ್ವೀಪವನ್ನು ತಿಳಿಸಿ ಹಾಗು ಇಂತಹ ದ್ವೀಪದ ಬಗ್ಗೆ ತಿಳಿಸಿ, ಅದರಿಂದಾಗಿ ಪುನಃ ದುಃಖ ಸಿಗದಿರಲಿ.
2.            ಭಗವಾನರು- ಹೇ ಕಪ್ಪ ! ಜಲಾಶಯ ರೂಪದ ಲೋಕದ ಮಧ್ಯೆ ಇರುವಂತಹನಿಗೆ ಜರಾ ಹಾಗು ಮೃತ್ಯುರೂಪಿ ಮಹಾ ಭಯಾನಕ. ಪ್ರವಾಹ ಬರುವಾಗ ಸುರಕ್ಷೆಗಾಗಿ ದ್ವೀಪವನ್ನು ನಿನಗೆ ತಿಳಿಸುತ್ತಿದ್ದೇನೆ ಆಲಿಸು.
3.            ಅದು ಅಕಿಂಚನ (ಶೂನ್ಯತೆ) ಹಾಗು ಅನಾಸಕ್ತಿಯೇ ಆ ಮಹಾ ದ್ವೀಪವಾಗಿದೆ, ಬೇರ್ಯಾವುದೂ ಅಲ್ಲ. ಜರಾ ಹಾಗು ಮರಣಗಳ ಅಂತ್ಯದ ನಿಬ್ಬಾಣವನ್ನು ಹೀಗೆ ತಿಳಿಸುತ್ತಿದ್ದೇನೆ.
4.            ಇದನ್ನು ಅರಿತಂಥ ಸ್ಮೃತಿವಂತರ ಚಿತ್ತವು/ಜನ್ಮವು ಶಾಂತವಾಗುವುದು. ಅವರು ಮಾರನ ವಶೀಭೂತಿಗಳಾಗುವುದಿಲ್ಲ. ಹಾಗು ಮಾರನ ಗುಲಾಮರು (ಅನುಗಾಮಿಗಳು) ಆಗುವುದಿಲ್ಲ.

ಇಲ್ಲಿಗೆ ಕಪ್ಪ ಮಾಣವ ಪ್ರಶ್ನಾವಳಿ ಮುಗಿಯಿತು.

todeyya manava pucca of suttanipata in kannada 9. ತೋದೆಯ್ಯಾ ಮಾಣವ ಪುಚ್ಛಾ (ತೋದೆಯ್ಯಾ ಮಾಣವನ ಪ್ರಶ್ನಾವಳಿ)

9. ತೋದೆಯ್ಯಾ ಮಾಣವ ಪುಚ್ಛಾ (ತೋದೆಯ್ಯಾ ಮಾಣವನ ಪ್ರಶ್ನಾವಳಿ)

1.            ತೋದೆಯ್ಯಾ- ಯಾರಲ್ಲಿ ವಾಸನೆಗಳಿಲ್ಲವೋ, ಯಾರಲ್ಲಿ ತೃಷ್ಣೆ ಇಲ್ಲವೋ ಹಾಗು ಯಾರು ಸಂದೇಹದೂರನೋ, ಅಂತಹವನ ವಿಮೋಕ್ಷ ಯಾವರೀತಿ ಇರುತ್ತದೆ ?
2.            ಭಗವಾನರು- ಯಾರಲ್ಲಿ ವಾಸನೆಗಳು ಇಲ್ಲವೋ, ಯಾರಲ್ಲಿ ತೃಷ್ಣೆಯು ಇಲ್ಲವೋ ಹಾಗು ಯಾರು ಸಂದೇಹಾತೀತನೋ, ಅಂತಹವನಿಗೆ ಬೇರೆ ಯಾವ ವಿಮೋಕ್ಷವೂ ಇಲ್ಲ. (ಅಂದರೆ ಆತನಾಗಲೇ ವಿಮೋಕ್ಷ ಸಾಧಿಸಿದ್ದಾನೆ ಎಂದರ್ಥ.)
3.            ತೋದೆಯ್ಯಾ- ಆತನು ತೃಷ್ಣಾರಹಿತನೋ ಅಥವಾ ತೃಷ್ಣಾಯುಕ್ತನೋ? ಆತನು ಪ್ರಜ್ಞಾವಂತನೋ ಅಥವಾ ಪ್ರಜ್ಞಾದ ಪ್ರಾಪ್ತಿಯಲ್ಲಿ ತೊಡಗಿದ್ದಾನೋ ಹೇ ಸಮಂತಚಕ್ಷರೇ, ತಾವೇ ತಿಳಿಸಿ, ಇಂತಹವರಲ್ಲಿ ನಾನು ಮುನಿಯನ್ನು ಹೇಗೆ ಕಂಡುಹಿಡಿಯಲಿ.
4.            ಭಗವಾನರು- ಹೇ ತೊದೆಯ್ಯಾ, ಯಾರು ಅಕಿಂಚನನೋ (ಏನನ್ನೂ ಹೊಂದಿಲ್ಲವೋ), ಇಂದ್ರಿಯಗಳಲ್ಲಿ ಅನಾಸಕ್ತನಾಗಿರುತ್ತಾನೋ ಅಂತಹವನಿಗೆ ಮುನಿಯೆಂದು ಭಾವಿಸು. ಆಗ ನಿನಗೆ ತೃಷ್ಣಾರಹಿತನ್ಯಾರು, ತೃಷ್ಣಾಸಹಿತನ್ಯಾರು, ಪ್ರಜ್ಞಾವಂತನ್ಯಾರು, ಪ್ರಜ್ಞೆಗೆ ಪ್ರಯತ್ನಶಾಲಿಪಡುವವನ್ಯಾರು ಎಂದು ತಿಳಿದು ಹೋಗುವುದು.
ಇಲ್ಲಿಗೆ ತೋದೆಯ್ಯಾ ಮಾಣವ ಪ್ರಶ್ನಾವಳಿ ಮುಗಿಯಿತು

hemaka manava pucca of suttanipata in kannada 8. ಹೇಮಕ ಮಾಣವ ಪುಚ್ಛಾ (ಹೇಮಕ ಮಾಣವನ ಪ್ರಶ್ನಾವಳಿ)

8. ಹೇಮಕ ಮಾಣವ ಪುಚ್ಛಾ (ಹೇಮಕ ಮಾಣವನ ಪ್ರಶ್ನಾವಳಿ)

1.            ಹೇಮಕ- ಓ ಭಗವಾನ್, ತಮ್ಮ ಶಾಸನದ ಬಗ್ಗೆ ಈ ಮೊದಲು ಹಲವಾರು ಜನರು ತಿಳಿಸಿದ್ದರು. ಅವರೆಲ್ಲಾ ಹೀಗೆ ಹೇಳಿದ್ದರು- ಹೀಗಿತ್ತು, ಹೀಗಾಗುವುದು. ಇವೆಲ್ಲಾ ಮಾತುಗಳು ಕಲ್ಪಿತ ಹಾಗು ತರ್ಕಗಳನ್ನು ಹೆಚ್ಚಿಸುವಂತಾಗಿತ್ತು, ಸಂಶಯಗಳನ್ನು ವೃದ್ಧಿಸುವಂತಿತ್ತು. ಹೀಗಾಗಿ ಅದರಲೆಲ್ಲಾ ನನ್ನ ಮನಸ್ಸು ಆನಂದಿಸಲಿಲ್ಲ.
2.            ಹೇ ಮುನಿಗಳೇ, ತಾವು ನನಗೆ ತೃಷ್ಣೆಯನ್ನು ನಷ್ಟಗೊಳಿಸುವಂತಹ ಧಮ್ಮವನ್ನು ತಿಳಿಸಿ. ಯಾವ ಜ್ಞಾನದ ಹಾಗೂ ಸ್ಮೃತಿಯ ರೀತಿಯಲ್ಲಿ ಜೀವಿಸುವುದರಿಂದಾಗಿ ಲೋಕದಲ್ಲಿ ತೃಷ್ಣೆಯಿಂದ ಮುಕ್ತನಾಗುತ್ತಾನೆ.
3.            ಭಗವಾನರು- ಹೇ ಹೇಮಕ, ಯಾವುದೆಲ್ಲಾ ನೋಡಿದ್ದೀಯೋ, ಕೇಳಿರುವೆಯೋ, ಯೋಚಿಸಿರುವೆಯೋ, ಅನುಭವಿಸಿರುವೆಯೋ ಅವೆಲ್ಲಾ ಇಂದ್ರಿಯ ವಿಷಯಗಳ ಬಗ್ಗೆ ಆಸಕ್ತಿ ದೂರೀಕರಿಸು. ಪ್ರಿಯವಾದವುಗಳಿಗೆ ಅಂಟದೆ ಹೋಗು, ಈ ರೀತಿಯಲ್ಲಿ ಯಾವುದಕ್ಕೂ ಅಂಟದ ಸ್ಥಿತಿಯೇ ಅದ್ಭುತವಾದ ನಿಬ್ಬಾಣದ ಪದವಾಗಿದೆ.
4.            ಇದನ್ನು ಅರಿತ ಸ್ಮೃತಿವಂತರ ಜನ್ಮವು ಶಾಂತವಾಗಿದೆ, ಸದಾ ಉಪಶಾಂತರಾದ ಅವರೆಲ್ಲಾ ಲೋಕದಲ್ಲಿ ತೃಷ್ಣೆಗೆ ಅತೀತರಾಗಿ ಹೋಗಿರುವರು.

ಇಲ್ಲಿಗೆ ಹೇಮಕ ಮಾಣವ ಪ್ರಶ್ನಾವಳಿ ಮುಗಿಯಿತು.

nanda manava pucca of suttanipata in kannada 7. ನಂದ ಮಾಣವ ಪುಚ್ಚ (ನಂದ ಮಾಣವನ ಪ್ರಶ್ನಾವಳಿ)

7. ನಂದ ಮಾಣವ ಪುಚ್ಚ (ನಂದ ಮಾಣವನ ಪ್ರಶ್ನಾವಳಿ)

1.            ನಂದ- ಲೋಕದಲ್ಲಿ ಮುನಿಗಳಿದ್ದಾರೆ ಎನ್ನುವರು, ಹಾಗಿದ್ದರೆ ತಮಗೆ ತಿಳಿದಂತೆ ಜ್ಞಾನದ ಕಾರಣದಿಂದಾಗಿ ಮುನಿ ಎನ್ನುವರೋ ಅಥವಾ ಜೀವನ ಶೈಲಿಯಿಂದ ಮುನಿ ಎನ್ನುವರೋ ಭಗವಾನರು ತಿಳಿಸಬೇಕು.
2.            ಭಗವಾನರು- ನಂದಾ ! ದೃಷ್ಟಿಕೋನಗಳಿಂದಾಗಲಿ, ಶ್ರುತಿಗಳಿಂದಾಗಲಿ (ಕಲಿಕೆ), ಜ್ಞಾನದಿಂದಾಗಲಿ ಕುಶಲರು ಮುನಿಯೆಂದು ಕರೆಯಲಾರರು. ಯಾರು ನಿಶಸ್ತ್ರರೋ, ದ್ವೇಷರಹಿತರೋ, ಶೋಕರಹಿತರೋ, ಪಾಪರಹಿತರೋ ಹಾಗು ಆಸೆಯಿಲ್ಲದವರೋ ಅವರನ್ನು ನಾನು ಮುನಿ ಎನ್ನುವೆನು.
3.            ನಂದ- ಯಾರೆಲ್ಲಾ ಶ್ರಮಣ ಬ್ರಾಹ್ಮಣರು ಇಲ್ಲಿರುವರೋ, ಅವರು ದಶರ್ಿಸುವುದರಿಂದಾಗಿಯು ಹಾಗು ಆಲಿಸುವಿಕೆಯಿಂದಲೂ ಶುದ್ಧಿಯಾಗುವುದು ಎನ್ನುವರು. ಶೀಲವ್ರತಗಳಿಂದಲೂ ಶುದ್ಧಿಯಾಗುವುದು ಎನ್ನುವರು. ಹೀಗೆ ಅನೇಕ ವಿಧವಾಗಿ ಶುದ್ಧಿಯಾಗುವುದು ಎನ್ನುವರು. ಹೇ ಪೂಜ್ಯರೇ, ಈ ರೀತಿಯಾದ ಆಚರಣೆಗಳಿಂದಾಗಿಯೇ ಅವರೆಲ್ಲಾ ಜನ್ಮ ಹಾಗು ಜರಾದಿಂದ ಮುಕ್ತರಾದರೆ? ಭಗವಾನ್ ತಮ್ಮಲ್ಲಿ ವಿನಂತಿಸಿಕೊಂಡು ಕೇಳುತ್ತಿರುವೆ, ಉತ್ತರಿಸಿ.
4.            ಭಗವಾನರು- ಯಾವೆಲ್ಲಾ ಶ್ರಮಣ ಬ್ರಾಹ್ಮಣರು ಇದ್ದಾರೆಯೋ, ಯಾರೆಲ್ಲಾ ನೋಡುವುದರಿಂದ (ದಶರ್ಿಸುವುದರಿಂದ) ಹಾಗು ಕೇಳುವುದರಿಂದ ಶುದ್ಧಿಯಾಗುವುದೆಂದು ಹೇಳುತ್ತಾರೋ, ಹಾಗು ಅನೇಕ ಪ್ರಕಾರದಿಂದ ಶುದ್ಧಿಯಾಗುವುದೆಂದು ಹೇಳುತ್ತಾರೋ, ಅವರು ಕೆಲವು ಹಂತದಲ್ಲಿ ಸಂಯಮಿಗಳಾಗಿದ್ದರೂ ಸಹಾ ಅವರು ಜನ್ಮ ಹಾಗು ಜರಾದಿಂದ ದಾಟಿಹೋಗಿಲ್ಲವೆಂದು ನಾನು ಹೇಳುತ್ತಿದ್ದೇನೆ.
5.            ನಂದ- ಯಾವ ಹಲವಾರು ಶ್ರಮಣ ಬ್ರಾಹ್ಮಣರಿದ್ದಾರೋ, ಅವರಲ್ಲಿ ಕೆಲವರು ದೃಷ್ಟಿಗಳಿಂದ, ಆಲಿಸುವುದರಿಂದಾಗಿ ಶುದ್ಧವೆಂದು ಹೇಳುತ್ತಿದ್ದಾರೆ. ಕೆಲವರು ಶೀಲಾದಿವ್ರತಗಳಿಂದ (ಮೂಢಾಚರಣೆ) ಶುದ್ಧಿಯಾಗುವುದೆಂದು ಹೇಳುತ್ತಿದ್ದಾರೆ ಹಲವರು ಅನೇಕ ವಿಧಗಳಿಂದ ಶುದ್ಧಿಯಾಗುವುದೆಂದು ಹೇಳುತ್ತಿದ್ದಾರೆ. ಆದರೆ ಓ ಮುನಿಗಳೇ! ತಾವು ಅವರೆಲ್ಲಾ ಜನ್ಮ ಹಾಗು ಜರಾದ ಪ್ರವಾಹದಿಂದ ಮುಕ್ತಿಯಾಗಿಲ್ಲ ಎಂದು ಹೇಳುತ್ತಿದ್ದೀರಿ. ಹಾಗಿದ್ದರೆ ಹೇ ಪರಮಪೂಜ್ಯರೇ, ಈ ದೇವಮನುಷ್ಯ ಲೋಕದಲ್ಲಿ ಯಾರು ಜನ್ಮ ಜರಾಗಳನ್ನು ದಾಟಿದ್ದಾರೆ. ಹೇ ಭಗವಾನ್, ನನಗೆ ದಯವಿಟ್ಟು ಉತ್ತರಿಸಿ, ನಾನು ಕೇಳುತ್ತಿದ್ದೇನೆ.
6.            ಭಗವಾನರು- ನಾನು ಸರ್ವ ಶ್ರಮಣ ಬ್ರಾಹ್ಮಣರಿಗೆ ಜನ್ಮ ಹಾಗು ಜರಾದಿಂದ ಕೂಡಿದ್ದಾರೆ ಎಂದು ಹೇಳುವುದಿಲ್ಲ. ಆದರೆ ದೃಷ್ಟಿಸುವುದರಿಂದಾಗಿ, ಕೇಳುವುದರಿಂದಾಗಿ, ಮೂಢಾಚರಣೆಗಳನ್ನು ಯಾರೆಲ್ಲಾ ತ್ಯಾಗ ಮಾಡಿದ್ದಾರೋ, ಸರ್ವ ರೂಪಗಳನ್ನು ದಾಟಿರುವರೋ, ತೃಷ್ಣೆಯೇ ದುಃಖದ ಪ್ರತಿರೂಪವೆಂದು ಅರಿತು ಆಸವರಹಿತರಾಗಿರುವರೋ ಅಂತಹ ಶ್ರಮಣ ಬ್ರಾಹ್ಮಣರನ್ನು ನಾನು ಪ್ರವಾಹವನ್ನು ದಾಟಿದ್ದಾರೆ ಎನ್ನುತ್ತೇನೆ.
7.            ನಂದ- ಮಹಷರ್ಿಯೇ, ಈ ಮಾತಿಗೆ ನಾನು ಅಭಿನಂದನೆ ಮಾಡುವೆನು. ಹೇ ಗೋತಮರೇ, ತಾವು ನಿಬ್ಬಾಣವನ್ನು ಅತಿ ಸುಂದರವಾಗಿ ನಿರೂಪಿಸಿದ್ದೀರಿ. ಯಾರೆಲ್ಲಾ ಇಲ್ಲಿ ದೃಷ್ಟಿಸುವುದರಿಂದ, ಆಲಿಸುವುದರಿಂದ ಎಲ್ಲಾ ರೀತಿಯ ಮೌಡ್ಯದ ಆಚರಣೆಗಳನ್ನು ತ್ಯಾಗ ಮಾಡಿದ್ದಾರೋ, ಅಂತಹ ಅನೇಕ ರೂಪಗಳನ್ನು ತ್ಯಾಗ ಮಾಡಿರುವರೋ, ಅವರು ತೃಷ್ಣೆಯನ್ನು ಅರ್ಥಮಾಡಿಕೊಂಡು ಆಸವರಹಿತರಾಗಿರುವರೋ ಅವರೇ ಜನ್ಮದ ಪ್ರವಾಹವನ್ನು ದಾಟಿದ್ದಾರೆ ಇದು ಅತಿ ಸುಂದರವಾದ ನಿರೂಪಣೆಯಾಗಿದೆ.

ಇಲ್ಲಿಗೆ ನಂದ ಮಾಣವ ಪ್ರಶ್ನಾವಳಿ ಮುಗಿಯಿತು.