Sunday 26 April 2015

suddhuttaka sutta in kannada 4. ಸುದ್ಧುಟ್ಠಕ ಸುತ್ತ (ಅನಾಸಕ್ತಿಯಿಂದಲೇ ಮುಕ್ತಿ ಸಾಧ್ಯ)

4. ಸುದ್ಧುಟ್ಠಕ ಸುತ್ತ
(ಅನಾಸಕ್ತಿಯಿಂದಲೇ ಮುಕ್ತಿ ಸಾಧ್ಯ)

1.            ನಾನು ಶುದ್ಧ, ಪರಮಶ್ರೇಷ್ಠ, ಆರೋಗ್ಯ ನೋಡುತ್ತಿದ್ದೇನೆ. ಈ ಬಗೆಯ ದೃಷ್ಠಿಯಿಂದಲೂ ಸಹಾ ವ್ಯಕ್ತಿಯು ಶುದ್ಧನಾಗಲಾರ. ನಾನು ಯಾವುದನ್ನು ಅರಿಯುತ್ತೇನೆಯೋ ಅದೇ ಸರ್ವಶ್ರೇಷ್ಠ. ಹೀಗೆ ಶುದ್ಧತೆಯನ್ನು ನೋಡುವವನು ಅದನ್ನೇ ಪರಮಜ್ಞಾನ ಎಂದು ಅಥರ್ೈಸಿಕೊಳ್ಳುತ್ತಾನೆ.
2.            ಒಂದುವೇಳೆ ದೃಷ್ಟಿಯಿಂದ ಮನುಷ್ಯ ಶುದ್ಧಿ ಆಗುವ ಹಾಗಿದ್ದರೆ ಅಥವಾ ಜ್ಞಾನದಿಂದಲೇ ಆತನ ದುಃಖ ತ್ಯಾಗವಾಗುವ ಹಾಗಿದ್ದರೆ ಆಸಕ್ತ ಪುರುಷನ ಶುದ್ಧಿಯು ಬೇರೆ ರೀತಿಯೇ ಆಗುತ್ತಿತ್ತು. ಆದರೆ ಹೀಗೆ ಆಗುವುದಿಲ್ಲ. ಆತನಂತೂ ಆತನ ದೃಷ್ಠಿಕೋನದಂತೆ ಮಾತನಾಡುತ್ತಾನೆ.
3.            ದೃಷ್ಠಿ, ಶ್ರುತಿ, ಶೀಲವ್ರತ ಮತ್ತು ವಿಚಾರಶೀಲತೆಯಿಂದಲೇ (ಅಥವಾ ಯಾವುದಾದರೂ ಒಂದರಿಂದಲೇ) ಬ್ರಾಹ್ಮಣನೊಬ್ಬನು ಶುದ್ಧಿಯಾಗಲಾರ. ಯಾರು ಪುಣ್ಯ ಮತ್ತು ಪಾಪಗಳಲ್ಲಿ ಲಿಪ್ತನಾಗುವುದಿಲ್ಲವೋ, ಯಾರು ಸ್ವ-ತ್ಯಾಗಿಯೋ ಮತ್ತು ಪುಣ್ಯ ಪಾಪಗಳನ್ನು ಮಾಡದವನೋ ಅವನೇ ಶುದ್ಧನಾಗಿರುವನು.
4.            ಯಾವ ವ್ಯಕ್ತಿಯು ಮೊದಲಿನ ದೃಷ್ಟಿಯನ್ನು ತ್ಯಜಿಸಿ ಮತ್ತೊಂದು ದೃಷ್ಟಿಯನ್ನು ಗ್ರಹಣ ಮಾಡುವನೋ ಅಂತಹ ತೃಷ್ಣಾ ವಶೀಭೂತರೂ ಆಸಕ್ತಿಯನ್ನು ದಾಟುವುದಿಲ್ಲ. ಹೇಗೆ ಮಂಗವು ಮರದ ಒಂದು ರೆಂಬೆಯಿಂದ ಮತ್ತೊಂದು ರೆಂಬೆ ಹಿಡಿಯುವುದೋ ಹಾಗೆಯೇ ಒಂದು ದೃಷ್ಟಿಯನ್ನು ತ್ಯಜಿಸಿ ಮತ್ತೊಂದನ್ನು ಗ್ರಹಣ ಮಾಡುವನು.
5.            ವ್ಯಕ್ತಿಯು ಸ್ವಯಂ ವ್ರತಗಳನ್ನು ಧಾರಣೆ ಮಾಡಿ ಆಸಕ್ತಿಗಳು ಇರುವ ಬೇರೆ ಬೇರೆಯ ಉಚ್ಚ ನೀಚ ದೃಷ್ಟಿಗಳಲ್ಲಿ ಬೀಳುತ್ತಾನೆ. ಆದರೆ ಯಾರು ಚೆನ್ನಾಗಿ ಧರ್ಮವನ್ನು ಅರಿತಿರುವರೋ, ಅಂತಹ ಮಹಾಪ್ರಾಜ್ಞರು ಉಚ್ಚ-ನೀಚ ದೃಷ್ಟಿಗಳ ಜಾಲದಲ್ಲಿ ಬೀಳುವುದಿಲ್ಲ.
6.            ಆ ಮಹಾಪ್ರಾಜ್ಞನು ಯಾವುದೆಲ್ಲದರಲ್ಲಿ ದೃಷ್ಟಿ, ಶ್ರುತ ಅಥವ ವಿಚಾರತೆಯಿರುವುದೋ, ಆ ಎಲ್ಲಾ ಧರ್ಮಗಳಲ್ಲಿ ಬೀಳುವುದಿಲ್ಲ. ಆತನು ಸತ್ಯವನ್ನು ನೋಡುತ್ತಾ ಸ್ವತಂತ್ರವಾಗಿ ಸಂಚರಿಸುತ್ತಾನೆ. ಹಾಗಿರುವಾಗ ಈ ಲೋಕದಲ್ಲಿ ಆತನಿಗೆ ಯಾವುದು ತಾನೇ ವಿಚಲಿತನನ್ನಾಗಿ ಮಾಡುತ್ತದೆ.
7.            ಅವರು ಯಾವುದೇ ವಿಷಯವನ್ನು ಕಲ್ಪನೆ ಆಗಲಿ ಅಥವಾ ಗ್ರಹಣ ಆಗಲಿ ಮಾಡುವುದಿಲ್ಲ. ಲೋಕದ ಆಸಕ್ತಿಗಳು ಬಂಧನವನ್ನು ತ್ಯಜಿಸಿ ಲೋಕದಲ್ಲಿ ಎಲ್ಲಿಯೂ ತೃಷ್ಣೆಯಿಡುವುದಿಲ್ಲ.
8.            ಯಾವ ಬ್ರಾಹ್ಮಣನು ಪಾಪವನ್ನು ತ್ಯಾಗಮಾಡಿ ಸೀಮೆಯನ್ನು ದಾಟಿರುವನೋ ಮತ್ತು ಯಾರು ಅರಿತು ದೃಷ್ಟಿಗ್ರಾಹ್ಯವನ್ನು ತ್ಯಜಿಸಿರುವನೋ ಯಾರು ರಾಗದಲ್ಲಿ ಲಿಪ್ತನಾಗುವುದಿಲ್ಲವೋ ಮತ್ತು ವೈರಾಗ್ಯದಲ್ಲೂ ಸಹಾ ಯೋಚನಾತೀತನಾದ ಆತನಿಗೆ ಇಲ್ಲಿ ಕಲಿಯಬೇಕಾಗಿರುವುದು ಉಳಿದಿಲ್ಲ.

ಇಲ್ಲಿಗೆ ಸುದ್ಧುಟ್ಠಕ ಸುತ್ತ ಮುಗಿಯಿತು.

duttattaka sutta in kannada 3. ದುಟ್ಠಟ್ಠಕ ಸುತ್ತ (ಮುನಿಯು ಯಾವುದೇ ದೃಷ್ಟಿ ವಿಶೇಷದಲ್ಲಿ ಬೀಳುವುದಿಲ್ಲ)

3. ದುಟ್ಠಟ್ಠಕ ಸುತ್ತ
(ಮುನಿಯು ಯಾವುದೇ ದೃಷ್ಟಿ ವಿಶೇಷದಲ್ಲಿ ಬೀಳುವುದಿಲ್ಲ)

1.            ಕೆಲವರು ದುಷ್ಟಮನದಿಂದ ನಿಂದಿಸುತ್ತಾರೆ ಮತ್ತು ಕೆಲವರು ಸತ್ಯಮನದಿಂದ ನಿಂದಿಸುತ್ತಾರೆ. ಮುನಿಯು ಈ ಉಪವಾದಗಳಲ್ಲಿ ಬೀಳುವುದಿಲ್ಲ. ಆದ್ದರಿಂದಲೇ ಮುನಿಗೆ ಲೋಕದಲ್ಲಿ ರಾಗಾದಿಗಳ ಮುಳ್ಳು ಇಲ್ಲವಾಗಿದೆ.
2.            ರಾಗಾದಿಗಳಲ್ಲಿ ಬಿದ್ದಿರುವ, ಮನಸ್ಸಿನಲ್ಲಿ ಅತಿ ಪ್ರಿಯವಾಗಿ ಹಚ್ಚಿಕೊಂಡಿರುವ ವ್ಯಕ್ತಿ ತನ್ನ ದೃಷ್ಠಿಯನ್ನು ಹೇಗೆತಾನೇ ತ್ಯಜಿಸುತ್ತಾನೆ? ಸ್ವಯಂ ಗ್ರಹಣೆಯಿಂದ ದೃಷ್ಟಿಗೆ ಅನುಸಾರವಾಗಿ ಕಾರ್ಯ ಮಾಡುವ ಆತನು ಹೇಗೆ ಅರಿಯುತ್ತಾನೋ ಹಾಗೆಯೇ ಹೇಳುತ್ತಾನೆ.
3.            ಯಾವ ವ್ಯಕ್ತಿಯು ತನ್ನ ಶೀಲವ್ರತಗಳ ಬಗ್ಗೆ ಕೇಳಿದಾಗ, ಬೇರೆಯವರದನ್ನು ಹೇಳುತ್ತಾನೋ, ಅದನ್ನು ಕುಶಲ ವ್ಯಕ್ತಿಗಳು ಅನಾರ್ಯ ಧರ್ಮವೆಂದು ಹೇಳುತ್ತಾರೆ. ಏಕೆಂದರೆ ಆತನು ತನ್ನ ಸಂಬಂಧವಾಗಿ ಸ್ವಯಂ ಹೇಳಿಕೊಳ್ಳುತ್ತಾನೆ.
4.            ಯಾವ ಭಿಕ್ಷು ಶಾಂತನೋ, ಉಪಶಾಂತನೋ ಮತ್ತು ತನ್ನ ಶೀಲಗಳು ಹೇಳುವುದಿಲ್ಲವೋ, ಯಾರಿಗೆ ಸಂಸಾರದಲ್ಲಿ ಎಲ್ಲಿಯೂ ರಾಗವಿಲ್ಲವೋ, ಅದನ್ನು ಕುಶಲ ವ್ಯಕ್ತಿಗಳು ಆರ್ಯ ಧರ್ಮ ಎನ್ನುತ್ತಾರೆ.
5.            ಯಾರ ಧರ್ಮವು ಕೃತಕವೋ ಮತ್ತು ಕಲ್ಪಿತವೋ, ಯಾರು ತೃಷ್ಣೆಯಿಂದ ಉತ್ಪನ್ನನೋ, ಆತನು ತನ್ನ ಯಾವ ಗುಣವನ್ನು ಕಾಣುತ್ತಾನೋ ಅದರ ಆಸರೆಯಿಂದಲೇ, ಅದರ ಕಾರಣದಿಂದಲೇ ಆತನು ಹೇಳುವನು.
6.            ದೃಷ್ಠಿಗಳ (ಸಿದ್ಧಾಂತಗಳ) ಗ್ರಹಣವನ್ನು ಸುಲಭವಾಗಿ ಬಿಡಲಾಗುವುದಿಲ್ಲ. ಏಕೆಂದರೆ ನಿರ್ಣಯ ಮಾಡಿಯೇ ಯಾವುದೇ ದೃಷ್ಟಿಯನ್ನು ಗ್ರಹಿಸಲಾಗುತ್ತದೆ. ಆದ್ದರಿಂದಲೇ ಆ ವ್ಯಕ್ತಿಯು ಆ ದೃಷ್ಟಿಗಳಲ್ಲಿ ಇರುತ್ತಾ ಧರ್ಮವನ್ನು ಅನೇಕಬಾರಿ ಬಿಡುತ್ತಾ ಹಾಗು ಹಿಡಿಯುತ್ತಾ (ಗ್ರಹಣ ಮಾಡುತ್ತಾ) ಇರುತ್ತಾನೆ.
7.            ಶುದ್ಧ ವ್ಯಕ್ತಿಯು ಲೋಕದಲ್ಲಿ ಎಲ್ಲಿಯೂ ಕಲ್ಪಿತ ದೃಷ್ಠಿ ಹೊಂದಿರಲಾರನು. ಆ ಶುದ್ಧ ವ್ಯಕ್ತಿಯು ಮಾಯಾ ಮತ್ತು ಅಭಿಮಾನವನ್ನು ತ್ಯಜಿಸಿ ಅನಾಸಕ್ತನಾಗಿ ಮತ್ತೆ ಯಾವ ಕಾರಣಕ್ಕಾಗಿ ವಿವಾದದಲ್ಲಿ ಬೀಳಬೇಕು?
8.            ಆಸಕ್ತನಾದ ವ್ಯಕ್ತಿಯೇ ಧರ್ಮಸಂಬಂಧಿ ವಿವಾದಗಳಲ್ಲಿ ಬೀಳುತ್ತಾನೆ. ಯಾರು ಆಸಕ್ತಿರಹಿತನೋ, ಆತನು ಯಾವ ಕಾರಣದಿಂದ ಮತ್ತು ಹೇಗೆ ವಿವಾದದಲ್ಲಿ ಬೀಳುವನು? ಆತನಲ್ಲಿ ಆತ್ಮದೃಷ್ಠಿಯಾಗಲಿ ಹಾಗು ಉಚ್ಛದ (ಲೋಕಾಯುತ) ದೃಷ್ಟಿಯಾಗಲಿ ಇರುವುದಿಲ್ಲ. ಆತನು ಇಲ್ಲಿಯೇ ಸರ್ವ ದೃಷ್ಟಿಗಳನ್ನು ನಷ್ಟಪಡಿಸಿರುವನು.

ಇಲ್ಲಿಗೆ ದುಟ್ಠಟ್ಠ ಸುತ್ತ ಮುಗಿಯಿತು.

guhatthaka sutta in kannada 2. ಗುಹಟ್ಠಕ ಸುತ್ತ (ಸಂಸಾರದ ಅಸಾರತೆ)

2. ಗುಹಟ್ಠಕ ಸುತ್ತ
(ಸಂಸಾರದ ಅಸಾರತೆ)

1.            ಶರೀರದಲ್ಲಿ ಆಸಕ್ತನಾದ, ಅನೇಕ ಕಾಮನೆಗಳಲ್ಲಿ ಆಚ್ಚಾದಿತನಾದ, ಮೋಹದಲ್ಲಿ ಸಂಲಗ್ನನಾದ ವ್ಯಕ್ತಿಯು ಏಕಾಂತ ಚಿಂತನೆಯಿಂದ ದೂರವೇ ಉಳಿಯುತ್ತಾನೆ. ಸಂಸಾರದಲ್ಲಿ ಕಾಮ-ಭೋಗಗಳನ್ನು ತ್ಯಜಿಸುವುದು ಬಹು ಕಠಿಣವಾಗಿದೆ.
2.            ಯಾರು ಇಚ್ಛೆಗಳಿಗೆ ವಶೀಭೂತರೋ, ಸಾಂಸಾರಿಕ ಸುಖಗಳಲ್ಲಿ ಬಂಧಿತರೋ, ಅವರ ಮುಕ್ತಿ ಅತಿ ಕಠಿಣವಾಗಿದೆ. ಏಕೆಂದರೆ ಅವರು ಬೇರೆಯವರಿಂದ ಮುಕ್ತಿ ಹೊಂದಲಾರರು. ಅವರು ಭೂತ ಹಾಗು ಭವಿಷ್ಯದ ಮಾತುಗಳಿಗೆ ಉಪೇಕ್ಷೆ ಮಾಡುತ್ತಾರೆ. ವರ್ತಮಾನದ ಕಾಮನೆಗಳಿಗೆ ಹಾತೊರೆಯುತ್ತಾರೆ.
3.            ಯಾರು ಕಾಮಗಳ ಕಾಮನೆ ಮಾಡುವರೋ, ಅದರಲ್ಲೇ ಸಂಲಗ್ನವಾಗುವರೋ ಮತ್ತು ಅದರಲ್ಲಿ ಮೋಹಿತರೋ, ಯಾರು ಜಿಪುಣರೋ, ವಿಷಮತೆಯಲ್ಲಿ ತಲ್ಲೀನರೋ ಅವರು ದುಃಖದಲ್ಲಿ ಬಿದ್ದು ಒದ್ದಾಡುವರು. ಹಾಗು ಮೃತ್ಯುವಿನ ನಂತರ ತಮ್ಮ ಗತಿ ಏನು ಎಂದು ವಿಲಾಪಿಸುವರು.
4.            ಆದ್ದರಿಂದ ಮನುಷ್ಯರಿಗೆ ಬೇಕಾಗಿರುವುದು ಏನೆಂದರೆ ಲೋಕದಲ್ಲಿರುವ ವಿಷಮತೆಯನ್ನು ಅರಿಯುವುದು ಹಾಗು ವಿಷಮತೆಯ ಆಚರಣೆ ಮಾಡದಿರುವುದು ಏಕೆಂದರೆ ಧೀರರು ಜೀವನವನ್ನು ಅಲ್ಪವೆಂದು ಹೇಳಿದ್ದಾರೆ.
5.            ಲೋಕದಲ್ಲಿ ತೃಷ್ಣೆಯಿಂದ ಸಿಕ್ಕಿ ಒದ್ದಾಡುತ್ತಿರುವವರನ್ನು ನಾನು ನೋಡುತ್ತಿರುವೆನು. ಸಾಂಸಾರಿಕ ತೃಷ್ಣೆಯಲ್ಲಿ ಸಿಕ್ಕ ಹೀನರು ಮೃತ್ಯುವಿನ ಮುಖದಲ್ಲಿ ಬಿದ್ದು ವಿಲಾಪಿಸುತ್ತಾರೆ.
6.            ಅಲ್ಪಜಲದ ಜಲಾಶಯದಲ್ಲಿ ಮತ್ಸ್ಯಗಳು ಒದ್ದಾಡುವ ಹಾಗೆ ತೃಷ್ಣೆಗೆ ವಶೀಭೂತರಾಗಿ ಒದ್ದಾಡುವುದನ್ನು ನೋಡಿ ಅವರನ್ನು ನೋಡಿಯಾದರೂ ಇಂದ್ರಿಯ ವಿಷಯಗಳಲ್ಲಿ ಆಸಕ್ತಿರಹಿತರಾಗಿ, ತೃಷ್ಣಾರಹಿತರಾಗಿ ಸಂಚರಿಸಲಿ.
7.            ಅತಿರೇಕಗಳ ಎರಡು ಹಂತಗಳ ಇಚ್ಛೆಯನ್ನು ದೂರೀಕರಿಸಿ, ಇಂದ್ರಿಯಗಳ ಸ್ಪರ್ಶವನ್ನು ಚೆನ್ನಾಗಿ ಅರಿತು, ವಿಷಯ ಲೋಲುಪತನಾಗದೆ, ಸ್ವ-ನಿಂದೆಯ ಮಾತು ಆಡದೆ, ಆ ಧೀರನು ದೃಷ್ಟಿಗಳಲ್ಲಿ ಹಾಗು ಶ್ರುತಿಗಳಲ್ಲಿ ಲಿಪ್ತನಾಗುವುದಿಲ್ಲ.
8.            ಮುನಿಯು ಸಂಗ್ರಹದಲ್ಲಿ ಲಿಪ್ತನಾಗದಿರಲಿ, ಗ್ರಹಿಕೆಗಳನ್ನು ಚೆನ್ನಾಗಿ ಅರಿಯಲಿ, ಭವಸಾಗರವನ್ನು ದಾಟಿ ಹೋಗಲಿ. ಕಾಮನ ರೂಪವಾದ ಬಾಣವನ್ನು ತೆಗೆಯಲಿ, ಅಪ್ರಮತ್ತನಾಗಿ ಸಂಚರಿಸುವವನು ಈ ಲೋಕ ಅಥವಾ ಪರಲೋಕದ ಇಚ್ಛೆ ಮಾಡುವುದಿಲ್ಲ.

ಇಲ್ಲಿಗೆ ಗೃಹಟ್ಠಕ ಸುತ್ತ ಮುಗಿಯಿತು.

atthaka vagga -kama sutta in kannada ಅಟ್ಠಕ ವಗ್ಗ 1. ಕಾಮ ಸುತ್ತ

ಅಟ್ಠಕ ವಗ್ಗ
1. ಕಾಮ ಸುತ್ತ
(ಕಾಮಭೋಗಗಳ ದುಷ್ಪರಿಣಾಮಗಳು)

1.            ಒಂದುವೇಳೆ ಭೋಗವಿಲಾಸ ಇಚ್ಛೆವುಳ್ಳವನ ಇಚ್ಛೆಗಳು ಪೂರ್ಣವಾದರೆ ಆ ವ್ಯಕ್ತಿಯು ಅವಶ್ಯಕವಾಗಿ ತನ್ನ ಇಚ್ಛೆಗಳು ಪೂರ್ಣವಾದುದನ್ನು ಕಂಡು ಪ್ರಸನ್ನ ಮನದವನಾಗುತ್ತಿದ್ದನು.
2.            ಒಂದುವೇಳೆ ಇಚ್ಛಿಸುವವನು, ತೃಷ್ಣೆಗೆ ವಶೀಭೂತನು ಆದ ಅವನ ಕಾಮಭೋಗಗಳು ವಸ್ತುಗಳು (ವ್ಯಕ್ತಿ) ನಷ್ಟವಾದರೆ ಆತನು ಬಾಣವು ಚುಚ್ಚಿದಂತೆ ಪೀಡಿತನಾಗುತ್ತಾನೆ.
3.            ಸರ್ಪದ ಹೆಡೆಯಿಂದ ಕಾಲುಗಳನ್ನು ರಕ್ಷಿಸುವ ಹಾಗೆ ಯಾರು ಕಾಮಭೋಗಗಳನ್ನು ತ್ಯಜಿಸುವನೋ, ಆತನು ಈ ಸಂಸಾರದಲ್ಲಿ ಸ್ಮೃತಿಯಿಂದ (ಎಚ್ಚರಿಕೆಯಿಂದ) ವಿಷಪೂರಿತದಂತಿರುವ ಬಯಕೆಯನ್ನು ತ್ಯಜಿಸುವನು.
4.            ಮನುಷ್ಯನು ಹೊಲಗದ್ದೆ, ಹೊನ್ನು, ಗೋವುಗಳು, ಕುದುರೆ, ಧನ, ಸ್ತ್ರೀಯರು ಅಥವಾ ಬಂಧು ಸಂಬಂಧಿ ಹೀಗೆ ಅನೇಕ ರೀತಿಯಲ್ಲಿ ಭೋಗಭಿಲಾಷೆಯಲ್ಲಿ ಸಿಕ್ಕಿಕೊಳ್ಳುತ್ತಾನೆ.
5.            ಆಗ ಆತನಿಗೆ ವಾಸನೆಗಳು ಅಧುಮುತ್ತವೆ ಮತ್ತು ತೊಂದರೆಗಳು ಮದರ್ಿಸುತ್ತವೆ. ಹೇಗೆ ಒಡೆದ ನೌಕೆಯಲ್ಲಿ ನೀರು ನುಗ್ಗುವುದೋ ಹಾಗೆಯೇ ಅದರ ಹಿಂದೆ ದುಃಖವನ್ನು ಪಡೆಯುತ್ತಾನೆ.
6.            ಆದ್ದರಿಂದ ವ್ಯಕ್ತಿಯು ಸದಾ ಸ್ಮೃತಿವಂತನಾಗಿ ಕಾಮಭೋಗಗಳನ್ನು ಪರಿತ್ಯಜಿಸಬೇಕು. ಅವುಗಳನ್ನು ತ್ಯಜಿಸಲಿ, ನಾವೆಯಿಂದ ನೀರನ್ನು ಬರಿದುಮಾಡಿ ಭವಸಾಗರವನ್ನು ದಾಟಿಹೋಗುತ್ತಾನೆ.

ಇಲ್ಲಿಗೆ ಕಾಮ ಸುತ್ತ ಮುಗಿಯಿತು.