Sunday 26 April 2015

guhatthaka sutta in kannada 2. ಗುಹಟ್ಠಕ ಸುತ್ತ (ಸಂಸಾರದ ಅಸಾರತೆ)

2. ಗುಹಟ್ಠಕ ಸುತ್ತ
(ಸಂಸಾರದ ಅಸಾರತೆ)

1.            ಶರೀರದಲ್ಲಿ ಆಸಕ್ತನಾದ, ಅನೇಕ ಕಾಮನೆಗಳಲ್ಲಿ ಆಚ್ಚಾದಿತನಾದ, ಮೋಹದಲ್ಲಿ ಸಂಲಗ್ನನಾದ ವ್ಯಕ್ತಿಯು ಏಕಾಂತ ಚಿಂತನೆಯಿಂದ ದೂರವೇ ಉಳಿಯುತ್ತಾನೆ. ಸಂಸಾರದಲ್ಲಿ ಕಾಮ-ಭೋಗಗಳನ್ನು ತ್ಯಜಿಸುವುದು ಬಹು ಕಠಿಣವಾಗಿದೆ.
2.            ಯಾರು ಇಚ್ಛೆಗಳಿಗೆ ವಶೀಭೂತರೋ, ಸಾಂಸಾರಿಕ ಸುಖಗಳಲ್ಲಿ ಬಂಧಿತರೋ, ಅವರ ಮುಕ್ತಿ ಅತಿ ಕಠಿಣವಾಗಿದೆ. ಏಕೆಂದರೆ ಅವರು ಬೇರೆಯವರಿಂದ ಮುಕ್ತಿ ಹೊಂದಲಾರರು. ಅವರು ಭೂತ ಹಾಗು ಭವಿಷ್ಯದ ಮಾತುಗಳಿಗೆ ಉಪೇಕ್ಷೆ ಮಾಡುತ್ತಾರೆ. ವರ್ತಮಾನದ ಕಾಮನೆಗಳಿಗೆ ಹಾತೊರೆಯುತ್ತಾರೆ.
3.            ಯಾರು ಕಾಮಗಳ ಕಾಮನೆ ಮಾಡುವರೋ, ಅದರಲ್ಲೇ ಸಂಲಗ್ನವಾಗುವರೋ ಮತ್ತು ಅದರಲ್ಲಿ ಮೋಹಿತರೋ, ಯಾರು ಜಿಪುಣರೋ, ವಿಷಮತೆಯಲ್ಲಿ ತಲ್ಲೀನರೋ ಅವರು ದುಃಖದಲ್ಲಿ ಬಿದ್ದು ಒದ್ದಾಡುವರು. ಹಾಗು ಮೃತ್ಯುವಿನ ನಂತರ ತಮ್ಮ ಗತಿ ಏನು ಎಂದು ವಿಲಾಪಿಸುವರು.
4.            ಆದ್ದರಿಂದ ಮನುಷ್ಯರಿಗೆ ಬೇಕಾಗಿರುವುದು ಏನೆಂದರೆ ಲೋಕದಲ್ಲಿರುವ ವಿಷಮತೆಯನ್ನು ಅರಿಯುವುದು ಹಾಗು ವಿಷಮತೆಯ ಆಚರಣೆ ಮಾಡದಿರುವುದು ಏಕೆಂದರೆ ಧೀರರು ಜೀವನವನ್ನು ಅಲ್ಪವೆಂದು ಹೇಳಿದ್ದಾರೆ.
5.            ಲೋಕದಲ್ಲಿ ತೃಷ್ಣೆಯಿಂದ ಸಿಕ್ಕಿ ಒದ್ದಾಡುತ್ತಿರುವವರನ್ನು ನಾನು ನೋಡುತ್ತಿರುವೆನು. ಸಾಂಸಾರಿಕ ತೃಷ್ಣೆಯಲ್ಲಿ ಸಿಕ್ಕ ಹೀನರು ಮೃತ್ಯುವಿನ ಮುಖದಲ್ಲಿ ಬಿದ್ದು ವಿಲಾಪಿಸುತ್ತಾರೆ.
6.            ಅಲ್ಪಜಲದ ಜಲಾಶಯದಲ್ಲಿ ಮತ್ಸ್ಯಗಳು ಒದ್ದಾಡುವ ಹಾಗೆ ತೃಷ್ಣೆಗೆ ವಶೀಭೂತರಾಗಿ ಒದ್ದಾಡುವುದನ್ನು ನೋಡಿ ಅವರನ್ನು ನೋಡಿಯಾದರೂ ಇಂದ್ರಿಯ ವಿಷಯಗಳಲ್ಲಿ ಆಸಕ್ತಿರಹಿತರಾಗಿ, ತೃಷ್ಣಾರಹಿತರಾಗಿ ಸಂಚರಿಸಲಿ.
7.            ಅತಿರೇಕಗಳ ಎರಡು ಹಂತಗಳ ಇಚ್ಛೆಯನ್ನು ದೂರೀಕರಿಸಿ, ಇಂದ್ರಿಯಗಳ ಸ್ಪರ್ಶವನ್ನು ಚೆನ್ನಾಗಿ ಅರಿತು, ವಿಷಯ ಲೋಲುಪತನಾಗದೆ, ಸ್ವ-ನಿಂದೆಯ ಮಾತು ಆಡದೆ, ಆ ಧೀರನು ದೃಷ್ಟಿಗಳಲ್ಲಿ ಹಾಗು ಶ್ರುತಿಗಳಲ್ಲಿ ಲಿಪ್ತನಾಗುವುದಿಲ್ಲ.
8.            ಮುನಿಯು ಸಂಗ್ರಹದಲ್ಲಿ ಲಿಪ್ತನಾಗದಿರಲಿ, ಗ್ರಹಿಕೆಗಳನ್ನು ಚೆನ್ನಾಗಿ ಅರಿಯಲಿ, ಭವಸಾಗರವನ್ನು ದಾಟಿ ಹೋಗಲಿ. ಕಾಮನ ರೂಪವಾದ ಬಾಣವನ್ನು ತೆಗೆಯಲಿ, ಅಪ್ರಮತ್ತನಾಗಿ ಸಂಚರಿಸುವವನು ಈ ಲೋಕ ಅಥವಾ ಪರಲೋಕದ ಇಚ್ಛೆ ಮಾಡುವುದಿಲ್ಲ.

ಇಲ್ಲಿಗೆ ಗೃಹಟ್ಠಕ ಸುತ್ತ ಮುಗಿಯಿತು.

No comments:

Post a Comment