Saturday 17 October 2015

dhotaka manava pucca of suttanipata in kannada 5. ಧೋತಕ ಮಾಣವ ಪುಚ್ಚ (ಧೋತಕ ಮಾಣವನ ಪ್ರಶ್ನಾವಳಿ)

5. ಧೋತಕ ಮಾಣವ ಪುಚ್ಚ (ಧೋತಕ ಮಾಣವನ ಪ್ರಶ್ನಾವಳಿ)

1.            ಧೋತಕ- ಹೇ ಭಗವಾನ್, ನಾನು ತಮ್ಮಲ್ಲಿ ಪ್ರಶ್ನಿಸುತ್ತಿದ್ದೇನೆ. ತಾವು ದಯವಿಟ್ಟು ತಿಳಿಸುವಂತಾಗಲಿ. ಹೇ ಮಹಷರ್ಿ! ನಾನು ತಮ್ಮ ನುಡಿಗಳನ್ನು ಕೇಳಲು ಅತ್ಯಂತ ಕಾತುರನಾಗಿದ್ದೇನೆ. ತಮ್ಮ ಧಮ್ಮವನ್ನು ಆಲಿಸಿ, ನನ್ನ ನಿಬ್ಬಾಣ ಪ್ರಾಪ್ತಿಗಾಗಿ ಅಭ್ಯಸಿಸಲು ಸಿದ್ಧನಾಗುವೆ.
2.            ಭಗವಾನರು- ಹಾಗಿದ್ದರೆ ಪ್ರಯತ್ನಶಾಲಿಯಾಗು, ಏಕಾಂತಗಾಮಿಯಾಗು ಹಾಗು ಜಾಗರೂಕನಾಗು. ಇಲ್ಲಿ ಧಮ್ಮವಾಣಿ ಆಲಿಸಿ, ನಿನ್ನ ನಿಬ್ಬಾಣ ಪ್ರಾಪ್ತಿಯ ಅಭ್ಯಾಸದಲ್ಲಿ ನಿರತನಾಗು.
3.            ಧೋತಕ- ಇಡೀ ದೇವ ಹಾಗು ಮಾನವರಲ್ಲಿ ಅಕಿಂಚನರಾಗಿ (ಶೂನ್ಯ ಸಂಪಾದಿಸಿದವರಾಗಿ) ವಾಸಿಸುವುದನ್ನು ನಿಮ್ಮಲ್ಲೇ ಕಂಡಿರುವೆ. ಆದ್ದರಿಂದ ಹೇ ಸಮಂತ ಚಕ್ಷುವೇ (ಸರ್ವವನ್ನು ನೋಡಿರುವಂತಹ) ನಾನು ತಮಗೆ ನಮಸ್ಕರಿಸುವೆ. ಹೇ ಶ್ರೇಷ್ಠರೇ, ನನ್ನ ಸಂಶಯಗಳನ್ನು ದೂರೀಕರಿಸಿ.
4.            ಭಗವಾನರು- ಓ ಧೋತಕ! ನಾನು ಲೋಕದಲ್ಲಿ ಯಾರನ್ನೂ ಸಂಶಯಗಳಿಂದ ಮುಕ್ತರನ್ನಾಗಿ ಮಾಡಲು ಹೋಗುವುದಿಲ್ಲ. ಆದರೂ ಸಹಾ ಯಾವಾಗ ನೀನು ಶ್ರೇಷ್ಠ ಧಮ್ಮವನ್ನು ಅರಿಯುವೆಯೋ ಆಗ ನೀನು ಸಂಸಾರದ ಪ್ರವಾಹವನ್ನು ದಾಟಲು ಸಮರ್ಥನಾಗಿ, ದಾಟಿಯೇಬಿಡುವೆ.
5.            ಧೋತಕ- ಹೇ ಬ್ರಹ್ಮರೇ (ಶ್ರೇಷ್ಠರೇ) ! ಕರುಣೆತೋರಿ ನನಗೆ ಉಪದೇಶಿಸಿ. ಅದರಿಂದಾಗಿ ನಾನು ಧಮ್ಮವನ್ನು ಅರಿಯುವಂತಾಗಲಿ ಹಾಗು ಆಕಾಶದ ರೀತಿ ನಿರ್ಮಲನಾಗಿ, ಇಲ್ಲಿಯೇ ಶಾಂತನಾಗಿ ಹಾಗೂ ಅನಾಸಕ್ತನಾಗಿ ವಿಹರಿಸುವಂತಾಗಲಿ.
6.            ಭಗವಾನ್- ನಾನು ನಿನಗೆ ಶಾಂತತೆಯನ್ನು ತಿಳಿಯಪಡಿಸುವೆ. ಅದು ಸುದ್ದಿಗಳಲ್ಲಿ ಸ್ಥಾಪಿತವಾಗಿಲ್ಲವೆಂದು ಅರಿತಾಗ ಇದೇ ಜನ್ಮದಲ್ಲಿ (ಇಲ್ಲಿಯೇ, ಈಗಲೇ) ಸಾಕ್ಷಾತ್ಕಾರಗೊಂಡು, ಸ್ಮೃತಿವಂತನಾಗಿ ವಿಹರಿಸುವೆ ಹಾಗು ಲೋಕದ ಬಗೆಗಿನ ಎಲ್ಲದರಲ್ಲೂ ಅನಾಸಕ್ತನಾಗುವೆ.
7.            ಧೋತಕ- ಹೇ ಮಹಷರ್ಿ ! ನಾನು ತಮ್ಮ ಉತ್ತಮ ಪರಮಶಾಂತತೆಗೂ, ಪ್ರಣಾಮ ಮಾಡುವೆನು. ಯಾವುದನ್ನು ಅರಿತು ಸ್ಮೃತಿವಂತನಾಗಿ ವಿಹರಿಸುವುದರಿಂದಾಗಿ ಲೋಕದಲ್ಲಿನ ಎಲ್ಲ ಅಂಟುವಿಕೆಗೆ ಅತೀತನಾಗುತ್ತೇನೆ.
8.            ಭಗವಾನರು- ಮೇಲೆ, ಕೆಳಗೆ, ಸುತ್ತಲೂ ಹಾಗು ಮಧ್ಯೆ ಏನೆಲ್ಲವನ್ನು ಅರಿತಿರುವೆಯೋ, ಅದೆಲ್ಲವೂ ಲೋಕದಲ್ಲಿ ಬಂಧನಕಾರಿ ಎಂದರಿತು, ಮರುಜನ್ಮದ ಲಾಲಸೆಯನ್ನು ಸಹಾ ಹೊಂದದಿರು.

ಇಲ್ಲಿಗೆ ಧೋತಕ ಮಾಣವ ಪ್ರಶ್ನಾವಳಿ ಮುಗಿಯಿತು.

No comments:

Post a Comment