Saturday, 17 October 2015

parayana sutta of suttanipata in kannada ಪಾರಾಯಣ ಸುತ್ತ

ಪಾರಾಯಣ ಸುತ್ತ

                ಭಗವಾನರು ಮಗಧದಲ್ಲಿ ಪಾಸಾಣ ಚೈತ್ಯದಲ್ಲಿ ವಿಹರಿಸುತ್ತಿರುವ ಸಮಯದಲ್ಲಿ ಇದನ್ನು ಬೋಧಿಸಿದ್ದರು. ಬಾವರಿಯ ಹದಿನಾರು ಶಿಷ್ಯರಿಂದ ಕೇಳಲ್ಪಟ್ಟ ಪ್ರಶ್ನೆಗಳಿಗೆ ಉತ್ತರಿಸಿದ್ದರು. ಯಾವುದೇ ಒಂದೇ ಒಂದು ಪ್ರಶ್ನೆಯ ಅರ್ಥ ಹಾಗು ಅದಕ್ಕೆ ಪ್ರತಿಯಾಗಿ ನೀಡಿದ ಧಮ್ಮೋಪದೇಶದ ಉತ್ತರ ಅರಿತರೂ ಹಾಗು ಧಮ್ಮಾನುಧಮ್ಮವನ್ನು ಅರಿತು ಅದರಂತೆ ಜೀವಿಸಿದರೂ ಖಂಡಿತವಾಗಿಯೂ ಜನ್ಮ ಹಾಗು ಮುದಿತನದಿಂದ ಪಾರಾಗಿಬಿಡುತ್ತಾರೆ. ಇನ್ನು ಎಲ್ಲರ ಪ್ರಶ್ನೆಗೆ ಹೇಳುವುದೇನಿದೆ? ಇದು ಪಾರುಮಾಡುವಂತಹ ಧಮ್ಮವಾಗಿದೆ. ಈ ತೀರದಿಂದ ಆ ತೀರಕ್ಕೆ ಇರುವ ನಿಬ್ಬಾಣಕ್ಕೆ ಕೊಂಡೊಯ್ಯುವ ಧಮ್ಮವಾಗಿದೆ. ಆದ್ದರಿಂದಾಗಿ ಈ ಧಮ್ಮೋಪದೇಶಕ್ಕೆ ಪಾರಾಯಣ ಸುತ್ತ ಎಂಬ ಹೆಸರಿದೆ.
1-3. ಅಜೀತ, ತಿಸ್ಸಮೆತ್ತೆಯ್ಯ, ಪುಣ್ಣಕ, ಮೆತ್ತಗೂ, ದೋತಕ, ಉಪಸೀವ, ನಂದ, ಹೇಮಕ, ತೊದೆಯ್ಯ, ಕಪ್ಪ ಹಾಗು ಪಂಡಿತ ಜಾತುಕಣ್ಣಿ, ಭದ್ರಾವುಧ, ಉದಯ ಹಾಗು ಪೋಸಾಲ ಬ್ರಾಹ್ಮಣ ಬುದ್ಧಿವಂತ ಮೋಘರಾಜ ಹಾಗು ಮಹಷರ್ಿ ಪಿಂಗಿಯ - ಇವರೆಲ್ಲಾ ಋಷಿಗಳಲ್ಲೇ ಶ್ರೇಷ್ಠರಾದ ಸದಾಚಾರಿ ಋಷಿಯಾದ ಬುದ್ಧರ ಬಳಿಗೆ ಸಮೀಪಿಸುತ್ತಾರೆ. ನಿಪುಣವಾದ ಪ್ರಶ್ನೆಗಳಿಂದ ಶ್ರೇಷ್ಠರಾದ ಬುದ್ಧರಿಗೆ ಸಮೀಪವಾಗುತ್ತಾರೆ.
4.            ಬುದ್ಧ ಭಗವಾನರು ಸಹಾ ಅವರು ಕೇಳಿದ ಪ್ರಶ್ನೆಗಳಿಗೆ ಯತಾರ್ಥವಾಗಿ ಉತ್ತರಿಸಿದರು. ಮಹಾಮುನಿಯಾದ ಬುದ್ಧರು ಆ ಪ್ರಶ್ನೆಗಳಿಗೆ ಸಮರ್ಪಕವಾದ ಉತ್ತರ ನೀಡಿ, ಆ ಬ್ರಾಹ್ಮಣರಿಗೆ ಸಂತುಷ್ಟಗೊಳಿಸುತ್ತಾರೆ.
5.            ಆದಿತ್ಯಬಂಧು ಚಕ್ಷುವಂತರಾಗಿರುವ ಬುದ್ಧರಿಂದ ಸಂತುಷ್ಟರಾದ ಮೇಲೆ, ಅವರೆಲ್ಲಾ ಶ್ರೇಷ್ಠ ಪ್ರಾಜ್ಞರಾದ ಬುದ್ಧರ ಬಳಿ ಬ್ರಹ್ಮಚರ್ಯದ ಪಾಲನೆ ಮಾಡಿದರು.
6.            ಒಂದೊಂದು ಪ್ರಶ್ನೆಗೂ ಹೇಗೆ ಬುದ್ಧರು ಉತ್ತರಿಸಿದರೋ ಹಾಗೇ ಆಚರಿಸಿದವರೆಲ್ಲಾ ಈ ತೀರದಿಂದ ಆ ತೀರಕ್ಕೆ (ನಿಬ್ಬಾಣ) ಹೋಗಿಬಿಡುವರು.
7.            ಉತ್ತಮ ಮಾರ್ಗವನ್ನು ಅಭ್ಯಸಿಸುತ್ತಿರುವ ಆತನು ಈ ತೀರದಿಂದ ಆ ತೀರಕ್ಕೆ ಹೋಗಿಬಿಡುವನು. ಇದು ದಾಟಲು, ಪಾರಾಗುವಂತಹ ಮಾರ್ಗವಾಗಿದೆ. ಆದ್ದರಿಂದ ಇದಕ್ಕೆ ಪಾರಾಯಣ ಎಂದು ಹೆಸರಿಸಲಾಗಿದೆ.
8.            ಪಿಂಗಿಯ- ನಾನು ಈ ಪಾರಾಯಣದ (ದಾಟಲು ಸಮರ್ಥವಾದ) ಧಮ್ಮದ ವರ್ಣನೆ ಮಾಡುವೆನು. ಯಾವ ವಿಮಲವಾದ ಭೂರಿಮೇದಸ್ಸಿ (ಮಹಾಪ್ರಾಜ್ಞರು) ರವರು ಹೀಗೆ ವೀಕ್ಷಿಸಿದರೋ ಹಾಗೆಯೇ ಬೋಧಿಸಿದರು. ಮಹಾಮಹಿಮರಾದಂತಹ ಶಾಸ್ತರು ನಿಷ್ಕಾಮಿಗಳಾಗಿದ್ದಾರೆ, ತೃಷ್ಣಾರಹಿತರಾಗಿದ್ದಾರೆ, ಅಂತಹವರು ಅಸತ್ಯವನ್ನಾದರೂ ಹೇಗೆತಾನೆ ನುಡಿಯಲು ಸಾಧ್ಯ?
9.            ಮೋಹ ಮಲರಹಿತರಾದ, ಅಹಂಕಾರರಹಿತರೂ ಹಾಗು ಮಾಯಾವಿತನವಿಲ್ಲದವರೂ ಆದ ಭಗವಾನರ ಮಧುರ ಸ್ವರದ ವರ್ಣನೆಯನ್ನು ನಾನು ಮಾಡುವೆ.
10.          ಹೇ ಬ್ರಾಹ್ಮಣರೇ ! ಅಂಧಕಾರವನ್ನು ದೂರಮಾಡುವಂತಹ ಬುದ್ಧರು, ಸರ್ವವನ್ನು ವೀಕ್ಷಿಸುವಂತ ಸಮಂತ ಚಕ್ಷುವಂತರು, ಲೋಕದ ಅಂತ್ಯವನ್ನು ಅರಿತು ಸರ್ವ ಭವಗಳನ್ನು ದಾಟಿ ಹೋಗಿರುವರು, ಅನಾಸವರಾದಂತಹ, ಸರ್ವ ದುಃಖಗಳಿಗೆ ಪ್ರಹಾರ ಮಾಡುವಂತಹ, ಅಂತಹ ಸತ್ಯದ ನಾಮಧೇಯರಾದಂತಹ ಅವರು ನನ್ನಿಂದ ಆರಾಧಿಸಲ್ಪಟ್ಟಿದ್ದಾರೆ.
11.          ಹೇಗೆ ಪಕ್ಷಿಯು ಚಿಕ್ಕ ವನವನ್ನು ಬಿಟ್ಟು, ಅಪಾರ ಫಲಾವೃತವಾಗಿರುವ ಅರಣ್ಯದಲ್ಲಿ ನೆಲೆಸುವುದೋ, ಅದೇರೀತಿ ನಾನು ಅಲ್ಪ ದಾರ್ಶನಿಕರನ್ನು ಬಿಟ್ಟು ಮಹಾ ಜಲಾಶಯವಾದ ಸರೋವರದತ್ತ ಹೋಗುವ ಹಂಸದ ರೀತಿ ಬುದ್ಧರ ಬಳಿಗೆ ಬಂದೆನು.
12.          ಗೋತಮ ಬುದ್ಧರ ಶಾಸನ ಬಗ್ಗೆ ಹೊರಗೆ ಮೊದಲು ಹೀಗೆ ಹೇಳಲಾಗುತ್ತಿತ್ತು- ಹೀಗಿತ್ತು, ಹೀಗಾಗುವುದು. ಆದರೆ ಅವೆಲ್ಲಾ ದಾರ್ಶನಿಕತ್ವವು ಕಾಲ್ಪನಿಕವಾಗಿತ್ತು. ಅವೆಲ್ಲವೂ ತಕರ್ಾಧಾರಿತವಾಗಿತ್ತು.
13.          ಅಂಧಕಾರವನ್ನು ದೂರ ಮಾಡುವಂತಹ ಪರಮಶ್ರೇಷ್ಠರು ಅವರೊಬ್ಬರೇ ಆಗಿದ್ದರು. ಅವರು ಪ್ರಕಾಶ ನೀಡುವ ಪ್ರಚಾರಕರು. ಗೋತಮರು ಮಹಾ ಜ್ಞಾನಿಯಾಗಿದ್ದಾರೆ (ಭೂರಿಪನ್ಯಾನೋ). ಗೋತಮರು ಮಹಾ ಪ್ರಜ್ಞಾವಂತರಾಗಿದ್ದಾರೆ (ಭೂರಿಮೇಧನೋ).
14.          ಅವರು ನನಗೆ ಈಗಲೇ ಇಲ್ಲಿಯೇ ತಕ್ಷಣವೇ ಫಲ ನೀಡುವಂತಹ, ಪ್ರತ್ಯಕ್ಷವಾಗಿಯೇ ಮುಂದೆ ಇರುವಂತಹ, ತೃಷ್ಣಾದ ನಾಶ ಮಾಡುವಂತಹ ಹಾಗು ದುಃಖವನ್ನು ದೂರ ಮಾಡುವಂತಹ ಧಮ್ಮದ ಉಪದೇಶ ನೀಡಿದರು. ಅಂತಹುದರ ಉಪಮೆಯನ್ನು ಯಾವುದರಿಂದಲೂ ಹೋಲಿಸಲು ಆಗದು.
15.          ಬಾವರಿ- ಹೇ ಪಿಂಗಿಯಾ! ನೀನು ಅಂತಹ ಮಹಾಜ್ಞಾನಿ ಗೋತಮರ, ಮಹಾಪ್ರಜ್ಞಾವಂತರಾದ ಗೋತಮರಿಂದ ಕ್ಷಣಮಾತ್ರವೂ ದೂರ ಇರಬಲ್ಲೆಯಾ?
16.          ಯಾರು ನಿನಗೆ ಕಣ್ಣ ಮುಂದೆಯೇ, ತಕ್ಷಣವೇ ಫಲಕಾರಿಯಾದ, ತೃಷ್ಣೆಯನ್ನು ನಾಶಗೊಳಿಸುವಂತಹ, ದುಃಖವನ್ನು ದೂರಗೊಳಿಸುವಂತಹ ಉಪದೇಶವನ್ನು ನೀಡಿದ್ದಾರೆ. ಅಂತಹವರ ಸಾಮ್ಯತೆ ಎಲ್ಲಿಯೂ ಸಿಗದು. ಯಾವುದರಿಂದಲೂ ಹೋಲಿಸಲು ಆಗದು.
17.          ಪಿಂಗಿಯಾ- ಓ ಬ್ರಾಹ್ಮಣ, ನಾನು ಅಂತಹ ಮಹಾಪ್ರಾಜ್ಞ ಗೋತಮರ, ಅಂತಹ ಮಹಾಮೇಧಾವಿ ಗೋತಮರನ್ನು ಅಗಲಿ ಕ್ಷಣಮಾತ್ರವೂ ಇರಲಾರೆ.
18.          ಅವರು ನನ್ನ ಚಕ್ಷುಗಳ ಮುಂದೆಯೇ ಕಾಲವಿಳಂಬವಿಲ್ಲದೆ ಫಲ ನೀಡುವ, ತೃಷ್ಣಾ ನಾಶಕಾರಿಯಾದ, ದುಃಖ ನಿರೋಧಗೊಳಿಸುವ, ಧಮ್ಮೋಪದೇಶ ನೀಡಿದ್ದಾರೆ. ಅದರ ತುಲನೆಯನ್ನು ಯಾವುದರಿಂದಲೂ ಮಾಡಲಾಗದು.
19.          ಹೇ ಬ್ರಾಹ್ಮಣ! ನಾನು ಅಹೋರಾತ್ರಿ ಅಪ್ರಮತ್ತನಾಗಿ ಚಿತ್ತ ಚಕ್ಷುವಿನಿಂದಲೇ ಅವರನ್ನು ಕಾಣುತ್ತಿದ್ದೇನೆ. ನಾಮ ಸ್ಮರಿಸುತ್ತಲೇ ನಾನು ರಾತ್ರಿಯನ್ನು ಕಳೆಯುತ್ತಿದ್ದೇನೆ. ಹೀಗಾಗಿ ನಾನು ಅವರಿಂದ ಬೇರೆ ಇದ್ದೇನೆಂದು ತಿಳಿಯುತ್ತಿಲ್ಲ.
20.          ನನ್ನ ಶ್ರದ್ಧೆಯಾಗಲಿ, ಭಕ್ತಿಯಾಗಲಿ, ಆನಂದವಾಗಲಿ, ಮನಸ್ಸಾಗಲಿ, ಸ್ಮೃತಿಯೇ ಆಗಲಿ, ಗೋತಮರ ಶಿಕ್ಷಣದಿಂದ ಅಣುಮಾತ್ರವೂ ದೂರ ಹೋಗದು. ಎಲ್ಲಿ ಯಾವ ದಿಕ್ಕಿನೆಡೆಗೆ ಆ ಮಹಾಪ್ರಾಜ್ಞರು ಹೋಗುತ್ತಾರೋ, ಆ ದಿಕ್ಕಿನೆಡೆಗೆಲ್ಲಾ ಶಿರಬಾಗಿ ನಮಸ್ಕರಿಸುತ್ತೇನೆ.
21.          ಜೀರ್ಣಗೊಂಡಿರುವ, ಬಲಹೀನವಾದ ನನ್ನ ಶರೀರವು ಅವರಿರುವೆಡೆಯಲ್ಲಿ ಹೋಗಲಾರದು. ಆದರೂ ಮಾನಸಿಕವಾಗಿ ನಿತ್ಯವೂ ಅವರಿರುವೆಡೆಗೆ ಹೋಗುತ್ತೇನೆ. ಹೀಗಾಗಿ ಹೇ ಬ್ರಾಹ್ಮಣ, ನನ್ನ ಮನಸ್ಸು ಅವರ ಜೊತೆಯಲ್ಲೇ ಇದೆ.
22.          ಕಾಮ ಭೋಗಗಳ ಕೆಸರಿನಲ್ಲಿ ಹೊರಳಾಡುತ್ತಿದ್ದ ನಾನು ಒಂದು ದ್ವೀಪದಿಂದ ಇನ್ನೊಂದು ದ್ವೀಪದೆಡೆಗೆ ಗುರುವನ್ನು ಅರಸುತ್ತಾ ಹೋಗುತ್ತಿದ್ದೆನು. ಆಗ ನಾನು ಲೋಕದ ಬೃಹತ್ ಪ್ರವಾಹವನ್ನು ದಾಟಿರುವ, ಅನಾಸವರಾದ ಸಮ್ಮಾಸಂಬುದ್ಧರನ್ನು ಕಂಡೆನು.
23.          ಆಗ ಅಲ್ಲಿ ಪ್ರತ್ಯಕ್ಷರಾದ ಭಗವಾನರು ಹೀಗೆ ನುಡಿದರು- ಯಾವರೀತಿಯಲ್ಲಿ ವಕ್ಕಲಿ, ಭದ್ರಾವುಧ ಹಾಗು ಆಳವಿಯು ತಥಾಗತರ ಮೇಲಿನ ಶ್ರದ್ಧೆಯಿಂದಲೇ ಮುಕ್ತರಾದರೋ, ಅದೇರೀತಿಯಲ್ಲಿ ನೀನು ಸಹಾ ಶ್ರದ್ಧೆಯನ್ನು ವೃದ್ಧಿಗೊಳಿಸು ಪಿಂಗಿಯಾ! ಆಗ ನೀನು ಸಹ ಮೃತ್ಯುರಾಜನಿಂದ ದೂರವಾಗುವೆ.
24.          ಮುನಿಗಳ ಈ ವಚನವನ್ನು ಆಲಿಸಿ ನಾನು ಅತ್ಯಧಿಕವಾಗಿ ಪ್ರಸನ್ನಗೊಂಡೆನು. ಓ ತೆರೆದ ಜ್ಞಾನವಂತರೇ, ಸಮ್ಮಾಸಂಬುದ್ಧರೇ, ತಾವು ನಿಜಕ್ಕೂ ನಿರ್ಮಲಚಿತ್ತದವರಾಗಿದ್ದೀರಿ ಹಾಗು ಮಹಾಜ್ಞಾನಿಗಳಾಗಿದ್ದೀರಿ.
25.          ತಾವು ದೇವತೆಗಳಿಂದ ಅತೀತ ಶ್ರೇಷ್ಠ ಧಮ್ಮವನ್ನು ಸಾಕ್ಷಾತ್ಕರಿಸಿ ಯಾವುದನ್ನೂ ಬಿಡದೆ ಸರ್ವವನ್ನೂ, ಸರ್ವ ಲೋಕಗಳನ್ನು ಅರಿತಿರುವಿರಿ. ಸಂದೇಹಸ್ಥರ ಹಾಗು ಜ್ಞಾನಿಗಳ ಸರ್ವ ಪ್ರಶ್ನೆಗಳನ್ನು ತಮ್ಮ ಉತ್ತರದಿಂದ ಅಂತ್ಯ ಮಾಡುವವರಾಗಿದ್ದೀರಿ.
26.          ನಿಬ್ಬಾಣವು ಅಕಂಪನಮಯವೂ ಅಜೇಯವಾಗಿದೆ! ಸ್ಥಿರವಾಗಿದೆ, ಯಾವುದರಿಂದಲೂ ಅದರ ಉಪಮೆ ನೀಡಲಾಗದು. ನಾನು ಖಂಡಿತವಾಗಿ ಆ ಅಚಲತೆಯ ಪ್ರಾಪ್ತಿಮಾಡುವೆ. ಈ ವಿಷಯದಲ್ಲಿ ನನಗೆ ಯಾವ ಸಂದೇಹವೂ ಇಲ್ಲ. ಈ ರೀತಿಯಾಗಿ ನನ್ನನ್ನು ಧಾರಣೆ ಮಾಡಿಕೊಳ್ಳಿ, ಓ ಪೂರ್ಣ ಚಿತ್ತವಿಮುಕ್ತ ಭಗವಾನರೇ!
ಇಲ್ಲಿಗೆ ಪಾರಾಯಣ ಸುತ್ತ ಮುಗಿಯಿತು.
ಎಂಟು ಬಾಣವಾರಗಳಿಗೆ ಸಮನಾದ ಸುತ್ತನಿಪಾತವು ಮುಗಿಯಿತು.
ಐದು ವರ್ಗಗಳ, ಎಂಟು ಬಾಣವಾರಗಳ ಹಾಗು 72 ಸುತ್ತಗಳಲ್ಲಿ ಸಂಗ್ರಹಿತವಾದ

ಖುದ್ದಕನಿಕಾಯದಲ್ಲಿ ಅಂತರ್ಗತವಾಗಿರುವ ಸುತ್ತನಿಪಾತವು ಮುಗಿಯಿತು

No comments:

Post a Comment