Thursday 14 June 2018

Eight-fold path of Lord Buddha ಬುದ್ಧಭಗವಾನರ ಆರ್ಯ ಆಷ್ಟಾಂಗ ಮಾರ್ಗ (ಮಗ್ಗ ವಿಭಂಗ ಸುತ್ತ)

       ಬುದ್ಧಭಗವಾನರ ಆರ್ಯ ಆಷ್ಟಾಂಗ ಮಾರ್ಗ   

                (ಮಗ್ಗ ವಿಭಂಗ ಸುತ್ತ)


ಒಮ್ಮೆ ಭಗವಾನರು ಶ್ರಾವಸ್ತಿಯ ಜೇತವನದ ಅನಾಥಪಿಂಡಿಕನ ಆರಾಮದಲ್ಲಿ ನೆಲಸಿದ್ದರು. ಆಗ ಅವರು ಭಿಕ್ಷುಗಳೊಂದಿಗೆ ಹೀಗೆ ಸಂಬೋಧಿಸಿದರು, ಭಿಕ್ಷುಗಳೇ
 ಭಗವಾನ್ ಎಂದು ಪ್ರತಿ ಉತ್ತರಿಸಿದರು.
ಆಗ ಭಗವಾನರು ಹೀಗೆ ನುಡಿದರು, ನಾನು ನಿಮಗಾಗಿ ಆರ್ಯಆಷ್ಟಾಂಗ ಮಾರ್ಗವನ್ನು ಬೋದಿಸುತ್ತಿದ್ದೇನೆ ಹಾಗೂ ವಿಶ್ಲೇಷಿಸುತ್ತಿದ್ದೇನೆ, ಗಮನವಿಟ್ಟು ಆಲಿಸಿರಿ.
 ಹಾಗೆ ಆಗಲಿ ಭಂತೆ.
ಆಗ ಭಗವಾನರು ಹೀಗೆ ಮುಂದುವರೆಸಿದರು, ಈಗ ಭಿಕ್ಖಗಳೇ ಯಾವುದು ಆರ್ಯಆಷ್ಟಾಂಗ ಮಾರ್ಗ ?
ಅದೇಂದರೆ
1 ಸಮ್ಮ ದೃಷ್ಟಿಕೋನ,
2 ಸಮ್ಮಸಂಕಲ್ಪ,
3 ಸಮ್ಮ ವಾಚ,
4 ಸಮ್ಮ ಕಮ್ಮ,
5 ಸಮ್ಮ ಜೀವನೋಪಾಯ,
6 ಸಮ್ಮವ್ಯಾಯಮ,
7 ಸಮ್ಮಸ್ಮೃತಿ, ಮತ್ತು
8 ಸಮ್ಮಸಮಾಧಿ.

                      ಸಮ್ಮ ದೃಷ್ಟಿಕೋನ

    ಮತ್ತೆ ಭಿಕ್ಖುಗಳೇ ಯಾವುದು ಸಮ್ಮದೃಷ್ಟಿಕೋನ ?
 ಭಿಕ್ಖುಗಳೇ ದುಃಖಗಳ ಜ್ಞಾನ, ದುಃಖಗಳ ಉದಯದ ಬಗೆಗಿನ ಜ್ಞಾನ, ದುಃಖಗಳ ನಿರೋಧ ಜ್ಞಾನ, ಮತ್ತು ದುಃಖಗಳ ನಿರೋಧಕ್ಕೆ ತಲುಪಿಸುವ ಮಾರ್ಗದ ಜ್ಞಾನ. ಇವನ್ನೇ ಸಮ್ಮ ದೃಷ್ಟಿಕೋನ ಎನ್ನುತ್ತೇವೆ. .

                        ಸಮ್ಮಸಂಕಲ್ಪ

   ಮತ್ತೇ ಯಾವುದು ಭಿಕ್ಖುಗಳೇ ಸಮ್ಮ ಸಂಕಲ್ಪ ?
 ಭಿಕ್ಖುಗಳೇ ತ್ಯಾಗಗಳ ಸಂಕಲ್ಪ,  ದ್ವೇಷರಹಿತತೆಯ ಸಂಕಲ್ಪ, ಮತ್ತು ಹಿಂಸೆರಹಿತತೆಯ ಸಂಕಲ್ಪ. ಇವನ್ನೇ ಸಮ್ಮ ಸಂಕಲ್ಪ ಎನ್ನುತ್ತೇವೆ.
                           

                        ಸಮ್ಮ ವಾಚ


   ಮತ್ತೇ ಯಾವುದು ಭಿಕ್ಖುಗಳೇ ಸಮ್ಮ ವಾಚ ?
 ಭಿಕ್ಖುಗಳೇ ಸುಳ್ಳಿನಿಂದ ವಿರತನಾಗುವಿಕೆ, ಚಾಡಿಯಿಂದ ವಿರತನಾಗುವಿಕೆ, ಕಠೋರ ನಿಂದಾಮಯ ವಾಚಗಳಿಂದ ವಿರತನಾಗುವಿಕೆ ಮತ್ತು ವ್ಯರ್ಥಹರಟೆಗಳಿಂದ ವಿರತನಾಗುವಿಕೆ. ಇವನ್ನೇ ಸಮ್ಮವಾಚ ಎನ್ನುತ್ತೇವೆ.

                          ಸಮ್ಮ ಕಮ್ಮ 

    ಮತ್ತೇ ಯಾವುದು ಭಿಕ್ಖುಗಳೇ ಸಮ್ಮ ಕಮ್ಮ ?
 ಭಿಕ್ಖುಗಳೇ ಪ್ರಾಣಹತ್ಯೆಗಳಿಂದ ವಿರತನಾಗುವಿಕೆ, ಕೊಡದೆ ಇರುವುದನ್ನು ತಗೆದುಕೊಳ್ಳದಿರುವಿಕೆ, ಅಬ್ರಹ್ಮಚಾರ್ಯದಿಂದ (ಗೃಹಸ್ಥರಾಗಿದ್ದರೆ ಅನೈತಿಕ ಕಾಮುಕತೆಯಿಂದ) ವಿರತನಾಗುವಿಕೆ. ಇವನ್ನೇ ಸಮ್ಮಕಮ್ಮ ಎನ್ನುತ್ತೇವೆ.   
               

                  ಸಮ್ಮ ಜೀವನೋಪಾಯ



        ಮತ್ತೆ ಭಿಕ್ಖುಗಳೇ ಯಾವುದು ಸಮ್ಮ ಜೀವನೋಪಾಯ ?
           ಇಲ್ಲಿ ಭಿಕ್ಖುಗಳೇ ಆರ್ಯಶ್ರಾವಕನು ಅಪ್ರಮಾಣಿಕವಾದಂತಹ ಮಿಥ್ಯಜೀವನೋಪಾಯಗಳನ್ನು ತೋರೆಯಬೇಕು, ಸಮ್ಮ ಮಾರ್ಗಗಳಿಂದಲೇ ಜೀವನೋಪಾಯ ಮಾಡಿಕೋಳ್ಳಬೇಕು. ಇದನ್ನೇ ಭಿಕ್ಖುಗಳೇ ಸಮ್ಮಜೀವನೋಪಾಯ ಎನ್ನುವರು.
     ( ಭಿಕ್ಖುಗಳೇ ಉಪಾಸಕನು 5 ವಿಧವಾದ ವೃತ್ತಿಗಳಲ್ಲಿ ತೋಡಗಬಾರದು, ಯಾವುದದು 5 ?
ಅವೇಂದರೇ ಶಸ್ತ್ರಗಳ ವಾಣಿಜ್ಯ, ಜೀವಿಗಳ ವಾಣಿಜ್ಯ, ಮಾಂಸದ ವಾಣಿಜ್ಯ, ಮಧ್ಯಪಾನದ ವಾಣಿಜ್ಯ ಮತ್ತು ವಿಷಗಳ ವಾಣಿಜ್ಯ/ವ್ಯಾಪಾರ )

                       ಸಮ್ಮವ್ಯಾಯಮ


             ಮತ್ತೇ ಭಿಕ್ಖುಗಳೇ ಯಾವುದು ಸಮ್ಮ ವ್ಯಾಯಾಮ ?
1. ಇಲ್ಲಿ ಭಿಕ್ಖುಗಳೇ, ಭಿಕ್ಖುವು ಅನುತ್ಪನ್ನವಾದ ಪಾಪಯುತವಾದ, ಅಕುಶಲವಾದ ಯೋಚನೆಗಳನ್ನು(ಮಾನಸಿಕ ವಿಷಯ/ಧಮ್ಮ) ಉದಯಿಸದಂತೆ ಆತನು ಇಚ್ಚಶಕ್ತಿಯನ್ನು, ಪ್ರಯತ್ನವನ್ನು ಪಡುತ್ತಾನೆ,
2. ಮತ್ತೇ ಇಲ್ಲಿ ಭಿಕ್ಖುವು ಉತ್ಪನ್ನವಾದ ಪಾಪಯುತವಾದ ಹಾಗೂ ಅಕುಶಲಯುತ ಯೋಚನೆಗಳನ್ನು ತೋರೆಯಲು ಇಚ್ಚಿಸುತ್ತಾನೆ ಹಾಗೂ ಅವನ್ನು ತೋರೆಯಲು ಪ್ರಯತ್ನವನ್ನು ಪಡುತ್ತಾನೆ.
3. ಮತ್ತೇ ಇಲ್ಲಿ ಭಿಕ್ಖುವು ಅನುತ್ಪನ್ನವಾದ ಪುಣ್ಯಕಾರಿಯಾದ, ಕುಶಲವಾದ ಯೋಚನೆಗಳನ್ನು ಉದಯಿಸುವಂತೆ ಆತನು ಇಚ್ಚಶಕ್ತಿಯನ್ನು ಹಾಗೂ ಧೃಡವಾದ ಪ್ರಯತ್ನವನ್ನು ಪಡುತ್ತಾನೆ,
4.   ಮತ್ತೇ ಇಲ್ಲಿ ಭಿಕ್ಖುವು ಉತ್ಪನ್ನವಾದ ಪುಣ್ಯಕಾರಿಯಾದ, ಕುಶಲವಾದ ಯೋಚನೆಗಳನ್ನು ಉಳಿಯುವಂತೆ, ವಿಕಾಸವಾಗುವಂತೆ,  ವ್ಯವಸ್ಥಿತವಾಗಿರುವಂತೆ, ಆತನು ಇಚ್ಚಶಕ್ತಿಯನ್ನು ಹಾಗೂ ಧೃಡವಾದ ಪ್ರಯತ್ನವನ್ನು ಪಡುತ್ತಾನೆ,
               ಇದನ್ನೇ ಭಿಕ್ಖುಗಳೇ ಸಮ್ಮವ್ಯಾಯಾಮ ಎನ್ನುವರು.


                         ಸಮ್ಮಸ್ಮೃತಿ

 ಮತ್ತೇ ಯಾವುದು ಭಿಕ್ಖುಗಳೇ ಸಮ್ಮ ಸ್ಮೃತಿಯು ?
  ಇಲ್ಲಿ ಭಿಕ್ಖುಗಳೇ, ಭಿಕ್ಖುವು ಕಾಯದಲ್ಲಿ ಕಾಯಾನುಪಸ್ಸಿಯಾಗಿ ವಿಹರಿಸುತ್ತಾನೆ ಹೇಗೆಂದರೆ, ಎಚ್ಚರಿಕೆಯಿಂದ, ಉತ್ಸಾಹದಿಂದ, ಜಾಗ್ರತಯಿಂದ, ಅರಿವಿನಿಂದ ಕೂಡಿದ್ದು ಲೋಕದ ಬಗೆಗಿನ ಲೋಭ ಹಾಗು ದೋಮನಸ್ಸುನ್ನು ದೂರಿಕರಿಸುತ್ತಾನೆ.

ಇಲ್ಲಿ ಭಿಕ್ಖುಗಳೇ, ಭಿಕ್ಖುವು ಚಿತ್ತಗಳಲ್ಲಿ ಚಿತ್ತಾನುಪಸ್ಸಿಯಾಗಿ ಸಮಚಿತ್ತತೆಯಿಂದ ವಿಹರಿಸುತ್ತಾನೆ ಹೇಗೆಂದರೆ, ಎಚ್ಚರಿಕೆಯಿಂದ, ಉತ್ಸಾಹದಿಂದ, ಜಾಗ್ರತಯಿಂದ, ಅರಿವಿನಿಂದ ಕೂಡಿದ್ದು ಲೋಕದ ಬಗೆಗಿನ ಲೋಭ ಹಾಗು ದೋಮನಸ್ಸುನ್ನು ದೂರಿಕರಿಸುತ್ತಾನೆ.
ಇಲ್ಲಿ ಭಿಕ್ಖುಗಳೇ, ಭಿಕ್ಖುವು ವೇದನೆಗಳಲ್ಲಿ ವೇದಾನುನುಪಸ್ಸಿಯಾಗಿ ಸಮಚಿತ್ತತೆಯಿಂದ ವಿಹರಿಸುತ್ತಾನೆ ಹೇಗೆಂದರೆ, ಎಚ್ಚರಿಕೆಯಿಂದ, ಉತ್ಸಾಹದಿಂದ, ಜಾಗ್ರತಯಿಂದ, ಅರಿವಿನಿಂದ ಕೂಡಿದ್ದು ಲೋಕದ ಬಗೆಗಿನ ಲೋಭ ಹಾಗು ದೋಮನಸ್ಸುನ್ನು ದೂರಿಕರಿಸುತ್ತಾನೆ.
ಇಲ್ಲಿ ಭಿಕ್ಖುಗಳೇ, ಭಿಕ್ಖುವು ಧಮ್ಮಗಳಲ್ಲಿ(ಮಾನಸಿಕ ವಿಷಯಗಳಲ್ಲಿ) ಧಮ್ಮಾನುಪಸ್ಸಿಯಾಗಿ ಸಮಚಿತ್ತತೆಯಿಂದವಿಹರಿಸುತ್ತಾನೆ ಹೇಗೆಂದರೆ, ಎಚ್ಚರಿಕೆಯಿಂದ, ಉತ್ಸಾಹದಿಂದ, ಜಾಗ್ರತಯಿಂದ, ಅರಿವಿನಿಂದ ಕೂಡಿದ್ದು ಲೋಕದ ಬಗೆಗಿನ ಲೋಭ ಹಾಗು 
ದೋಮನಸ್ಸುನ್ನು ದೂರಿಕರಿಸುತ್ತಾನೆ.   
ಇದನ್ನೇ ಭಿಕ್ಖುಗಳೇ ಸಮ್ಮಸತಿ ಎನ್ನುವರು.
             

                      ಸಮ್ಮಸಮಾದಿ

       ಮತ್ತೇ ಯಾವುದು ಭಿಕ್ಖುಗಳೇ ಸಮ್ಮ ಸಮಾಧಿಯು?
                              ಪ್ರಥಮ ಸಮಾಧಿ
ಇಲ್ಲಿ ಭಿಕ್ಖುಗಳೇ ಭಿಕ್ಖುವು ಎಲ್ಲಾ ಬಗೆಯ ಕಾಮಗಳಿಂದ(ಆಸೆ) ಹಾಗೂ ಅಕುಶಲ ಮಾನಸಿಕ ವಿಷಯಗಳಿಂದ ದೂರವಾಗಿ ಸುವಿತರ್ಕ ಹಾಗೂ ಸುವಿಚಾರಗಳನ್ನು ಹೊಂದಿರುವ ಮತ್ತು  ಆದರಿಂದ ಉದಯಿಸುವ ಆನಂದ ಹಾಗೂ ಸುಖಯುತದ ಪ್ರಥಮ ಸಮಾಧಿ ಪ್ರವೇಶಿಸಿ ಅದರಲ್ಲಿ ನೆಲೆಸುತ್ತಾನೆ.
                   
                        ದ್ವಿತೀಯ ಸಮಾಧಿ
   ನಂತರ ಇಲ್ಲಿ ಭಿಕ್ಖುಗಳೇ ಭಿಕ್ಖುವು  ಸುವಿತರ್ಕ ಹಾಗೂ ಸುವಿಚಾರಗಳನ್ನು ದೂರಿಕರಿಸಿ ಆದರಿಂದ ಉದಯಿಸುವ ಆನಂದ ಹಾಗೂ ಸುಖಯುತದ ಅಂತರಿಕದ ಶ್ರದ್ಧಾಯುತ ಏಕೋಭಾವದ ದ್ವಿತೀಯ ಸಮಾಧಿ ಪ್ರವೇಶಿಸಿ ಅದರಲ್ಲಿ ನೆಲೆಸುತ್ತಾನೆ.
                           
                               ತ್ರಿತೀಯ ಸಮಾಧಿ
ನಂತರ ಇಲ್ಲಿ ಭಿಕ್ಖುಗಳೇ ಭಿಕ್ಖುವು ಆನಂದದಲ್ಲಿ ವಿರಾಗವನ್ನು ಹೊಂದಿ, ಆನಂದವನ್ನು ಮೀರಿಹೋಗಿ ದಾಟಿ, ಸದಾ ಉಪೇಕ್ಖಯುತ(ಸಮಚಿತ್ತತೆಯುತ), ಎಚ್ಚರಿಕೆಯಿಂದ, ಅರಿವಿನಿಂದ ಕೂಡಿದ ಆ ಸುಖಯುತದ ತ್ರಿತೀಯ ಸಮಾಧಿ ಪ್ರವೇಶೀಸಿ ಅದರಲ್ಲಿ ನೆಲೆಸುತ್ತಾನೆ. ಸುಖದಿಂದ ಇಡಿ ಕಾಯವು ದಿವ್ಯಾನುಭವವನ್ನು ಹೊಂದಿ ಅಂತಹ ವಿಶೇಷ ಧ್ಯಾನವನ್ನು ಆರ್ಯರು ಜಾಗರೂಕತೆ ಹಾಗೂ ಸಮಚಿತ್ತತೆಯುತ ಸುಖದ ಸ್ಥಿತಿಯಲ್ಲಿ ನೆಲೆಗೊಂಡವ ಎನ್ನುವರು.

                                ಚತುರ್ಥ ಸಮಾಧಿ
ನಂತರ ಇಲ್ಲಿ ಭಿಕ್ಷುಗಳೇ ಭಿಕ್ಖುವು ಸುಖದ ಅನುಭವಗಳನ್ನು ಮೀರಿ, ದುಃಖದ ಅನುಭವಗಳನ್ನು ಮೀರಿ ಹಿಂದಿನ ಸೋಮನಸ್ಸು ಹಾಗೂ ದೋಮನಸ್ಸುಗಳನ್ನು ದಾಟಿ ಅದುಃಖಅಸುಖಯುತ ಸಮಚಿತ್ತತೆಯ ಸ್ಮೃತಿಯುತ ಪರಿಶುದ್ಧವಾದ ಚತುರ್ಥ ಝಾನದಲ್ಲಿ(ಧ್ಯಾನ) ಪ್ರವೇಶಿಸಿ ನೆಲೆಸುತ್ತಾನೆ.
ಇದನ್ನೇ ಭಿಕ್ಖುಗಳೇ ಸಮ್ಮಸಮಾಧಿ ಎನ್ನುವರು.
   
  ಭಗವಾನರ ಈ ಸುತ್ತದಿಂದ ಭಿಕ್ಖುಗಳು ಆನಂದಿತರಾದರು.