Friday, 29 May 2015

tuvataka sutta in kannada 14. ತುವಟಕ ಸುತ್ತ

14. ತುವಟಕ ಸುತ್ತ
(ಭಿಕ್ಷು ಚರ್ಯಾ)

1.            ದೇವತಾ - ಆದಿತ್ಯಬಂಧು! ಮಹಾಋಷಿ! ನಾನು ತಮ್ಮಲ್ಲಿ ವಿವೇಕ ಹಾಗು ಶಾಂತಿಪದದ ವಿಷಯದಲ್ಲಿ ಕೇಳುತ್ತೇನೆ. ಭಿಕ್ಷು ಹೀಗೆ ಲೋಕದಲ್ಲಿ ಯಾವುದರಲ್ಲಿಯೂ ಆಸಕ್ತಿ ತಾಳದೆ ಹೇಗೆ ನೋಡುತ್ತಾ ಶಾಂತನಾಗುತ್ತಾನೆ.
2.            ಭಗವಾನರು - ಸರ್ವ ಪ್ರಪಂಚದ ಬೇರು ಅಹಂಕಾರ ಎಂದು ಅರಿತು ಅದರ ಅಂತ್ಯಮಾಡಿ, ಯಾವುದೆಲ್ಲವೂ ತೃಷ್ಣೆಗಳು ಆಂತರ್ಯದಲ್ಲಿದೆಯೋ, ಅದರಲ್ಲಿ ರಹಿತನಾಗಲು ಸದಾ ಜಾಗರೂಕನಾಗಿರುವಂತೆ ಅಭ್ಯಾಸಿಸು.
3.            ಆಂತರ್ಯದಲ್ಲಾಗಲಿ ಅಥವಾ ಬಾಹ್ಯದಲ್ಲಾಗಲಿ ಯಾವ ಧರ್ಮವನ್ನು ಅರಿತಿರುವಿಯೋ, ಅದರಿಂದ ಅಭಿಮಾನ ಮೂಡದಿರಲಿ. ಸಂತರು ಅಂತಹದಕ್ಕೆ ಶಾಂತಿ ಎನ್ನಲಾರರು.
4.            ಆ ಕಾರಣದಿಂದ ಬೇರೆಯವರನ್ನು ಹೋಲಿಸಿ ತನ್ನನ್ನು ಶ್ರೇಷ್ಠನೆಂದು ಆಗಲಿ, ಸಮಾನ ಅಥವಾ ನೀಚನೆಂದು ಆಗಲಿ ಪರಿಗಣಿಸದಿರು. ಅನೇಕ ಪ್ರಕಾರದ ಸ್ಪರ್ಶವನ್ನು ಅನುಭವಿಸಿದರೂ ತನ್ನನ್ನು ವಿಕಲ್ಪಗಳಿಗೆ ಹಾಕದಿರಲಿ.
5.            ತನ್ನ ಆಂತರ್ಯದಲ್ಲಿ ಶಾಂತನಾಗಿರಲಿ, ಭಿಕ್ಷು ಬೇರೆಯ ಉಪಾಯದಿಂದ ಶಾಂತಿಯನ್ನು (ಬ್ರಹ್ಮಚರ್ಯ) ಅನ್ವೇಷಿಸದಿರಲಿ. ಯಾರು ಆಂತರ್ಯದಲ್ಲಿ ಶಾಂತನಾಗಿರುವನೋ, ಆತನಲ್ಲಿ ತನ್ನತನವೇ ಇಲ್ಲ ಎಂದ ಬಳಿಕ ಪರತ್ವವೆಲ್ಲಿ?
6.            ಹೇಗೆ ಸಮುದ್ರ ಮಧ್ಯೆಯಲ್ಲಿ ಅಲೆಯು ಏಳಲಾರದೋ, ಸ್ಥಿರತೆ ಸ್ಥಾಪಿತವಾಗಿರುತ್ತದೆಯೋ, ಹಾಗೆಯೇ ಸ್ಥಿರತೆ, ಚಂಚಲರಹಿತತೆಯುಳ್ಳ ಭಿಕ್ಷು ತೃಷ್ಣೆಯನ್ನು ಮಾಡದಿರಲಿ.
7.            ದೇವತಾ - ತೆರೆದ ನಯನವುಳ್ಳವರೇ, ತಾವು ಬಂಧನಗಳನ್ನು ದೂರೀಕರಿಸಲು ಸಾಕ್ಷಾತ್ ಧಮ್ಮವನ್ನು ತಿಳಿಸಿದ್ದೀರಿ. ತಮ್ಮ ಭದ್ರ ಪ್ರತಿಪದವನ್ನು ತಿಳಿಸಿ, ಅದರಲ್ಲಿ ಪಾತಿಮೋಕ್ಖ ಮತ್ತು ಸಮಾಧಿಯಿದೆ.
8.            ಭಗವಾನರು - ಚಕ್ಷುವಿನ ವಿಷಯದಲ್ಲಿ ಲೋಲುಪನಾಗದಿರು, ಗ್ರಾಮ್ಯ ಕಥನಗಳಿಂದ ಕಿವಿಯನ್ನು ಮುಚ್ಚಿಕೋ, ಸ್ವಾದದಲ್ಲಿ ಲೋಲುಪನಾಗದಿರು ಮತ್ತು ಲೋಕದಲ್ಲಿ ಯಾವುದನ್ನೂ ಸ್ವೀಕರಿಸಬೇಡ.
9.            ದುಃಖದ ಸ್ಪರ್ಶ ಆದಾಗಲೂ ಸಹಾ ಭಿಕ್ಷು ವಿಲಾಪಿಸದಿರಲಿ, ಭವದ, ತೃಷ್ಣೆ ಮಾಡದಿರಲಿ ಮತ್ತು ಭಯಾನಕತೆಯಿಂದ ಕಂಪಿತನಾಗದಿರಲಿ.
10.          ಅನ್ನ ಅಥವಾ ಪೇಯ, ಖಾದ್ಯ ಅಥವಾ ವಸ್ತ್ರಗಳು ಸಿಕ್ಕಿದಾಗ ಅದರ ಸಂಗ್ರಹ ಮಾಡದಿರಲಿ. ಅದೆಲ್ಲವೂ ಸಿಗದೆ ಇದ್ದಾಗ ಚಿಂತೆ ಮಾಡದಿರಲಿ.
11.          ಧ್ಯಾನಿಯಾಗಲಿ, ತಿರುಗಾಡುವವನು ಆಗದಿರಲಿ, ಸಂದೇಹ ದೂರೀಕರಿಸಲಿ, ಜಾಗರೂಕತೆ ತಪ್ಪದಿರಲಿ, ಭಿಕ್ಷುವು ಶಬ್ದ ಉಂಟುಮಾಡದ ಆಸನಗಳನ್ನು ಮತ್ತು ಶಯ್ಯಗಳನ್ನು ಬಳಸಲಿ.
12.          ಅತಿ ನಿಷ್ಠಾವಂತನಾಗಿರಲಿ, ಪ್ರಯತ್ನಶೀಲನಾಗಲಿ ಹಾಗು ಜಾಗರೂಕನಾಗಲಿ, ತೂಕಡಿಕೆ, ಮಾಯಾವಿತನ, ನಗು, ಹಾಸ್ಯ, ಆಟ, ಮೈಥುನ ಮತ್ತು ಶೃಂಗಾರವನ್ನು ತ್ಯಜಿಸಲಿ.
13.          ತಂತ್ರ-ಮಂತ್ರ ಸ್ವಪ್ನವಿಚಾರ, ಲಕ್ಷಣ ನೋಡುವಿಕೆ ಮತ್ತು ನಕ್ಷತ್ರಗಳ ವಿಶ್ವಾಸವನ್ನು ತ್ಯಜಿಸಲಿ, ಪಶುಪಕ್ಷಿಗಳ ಧ್ವನಿ ನೋಡಿ ಅರ್ಥ ಹೇಳುವಿಕೆ, ಗರ್ಭಧಾರಣೆ ಮಾಡಿಸುವಿಕೆ, ಚಿಕಿತ್ಸೆ ಮಾಡಿಸುವಿಕೆ - ಶ್ರದ್ಧೆಯುಳ್ಳ ಭಿಕ್ಷುವು ಇವುಗಳ ಅಭ್ಯಾಸ ಮಾಡದಿರಲಿ.
14.          ಭಿಕ್ಷುವು ನಿಂದೆಯಿಂದ ವಿಚಲಿತನಾಗದಿರಲಿ, ಪ್ರಶಂಸೆಯಲ್ಲಿ ಪ್ರಫುಲ್ಲಿತನಾಗದಿರಲಿ ಮತ್ತು ಲೋಭ, ಸ್ವಾರ್ಥ, ಕ್ರೋಧ ಹಾಗು ಚಾಡಿತನವನ್ನು ತ್ಯಜಿಸಲಿ.
15.          ಭಿಕ್ಷುವು ಕ್ರಯವಿಕ್ರಯಗಳಲ್ಲಿ ತೊಡಗದಿರಲಿ, ಎಲ್ಲಿಯೂ ಯಾರಿಗೂ ದೂಷಿಸದಿರಲಿ, ಗ್ರಾಮದಲ್ಲಿ ಯಾರಿಗೂ ಬಯ್ಯದಿರಲಿ ಮತ್ತು ಲಾಭದ ಇಚ್ಛೆಯಿಂದ ಜನರನ್ನು ಆಕಷರ್ಿಸದಿರಲಿ (ಮಾತನಾಡದಿರಲಿ).
16.          ಭಿಕ್ಷು ಸ್ವ-ಪ್ರಶಂಸೆಯುಳ್ಳವನಾಗದಿರಲಿ, ಸ್ವಾರ್ಥದ ಮಾತು ಆಡದಿರಲಿ, ಉದ್ದಂಡನಾಗದಿರಲಿ (ಹಠಮಾರಿ) ಮತ್ತು ಜಗಳಗಳ ಮಾತು ಆಡದಿರಲಿ.
17.          ಅಸತ್ಯ ಭಾಷಣ ಮಾಡದಿರಲಿ, ಅರಿತು ಸಹಾ ಮೋಸ ಮಾಡದಿರಲಿ ಮತ್ತು ಜೀವಿಸುವಿಕೆಯಲ್ಲಾಗಲಿ, ಪ್ರಜ್ಞೆಯಲ್ಲಿ ಆಗಲಿ, ಶೀಲವ್ರತಗಳಲ್ಲಿ ಆಗಲಿ, ಪರರಿಗೆ ಅನಾಧರಣೆ ಮಾಡದಿರಲಿ.
18.          ಬಹುಭಾಷಿ ಶ್ರಮಣರ ದೋಷಯುಕ್ತ ಮಾತುಗಳನ್ನು ಕೇಳಿ ಅದಕ್ಕೆ ಕಠೋರವಾದ ಪ್ರತಿನುಡಿ ಆಡದಿರಲಿ, ಸಂತರು ಪ್ರತಿ ಹಿಂಸಕರಾಗಿರುವುದಿಲ್ಲ.
19.          ಈ ಧಮ್ಮವನ್ನು ಅರಿತು ವಿವೇಕಿ ಭಿಕ್ಷು ಸದಾ ಜಾಗರೂಕನಾಗಿರಲು ಅಭ್ಯಾಸಿಸಲಿ, ನಿಬ್ಬಾಣವನ್ನೇ ಶಾಂತಿ ಎಂದರಿತು ಗೌತಮರ ಶಿಕ್ಷಣದಲ್ಲಿ ಜಾಗರೂಕತೆ ತಪ್ಪದಿರಲಿ.
20.          ಆ ವಿಜಯಿಯು ಅಜೇಯವಾದ ಧಮ್ಮವನ್ನು ಸಾಕ್ಷಾತ್ ಅರಿತಿರುವರು. ಆದ್ದರಿಂದ ಜಾಗರೂಕನಾಗಿ ಆ ಭಗವಾನರ ಶಿಕ್ಷಣವನ್ನು ಸಮ್ಮಾನಪೂರ್ವಕ ಅಭ್ಯಾಸ ಮಾಡಲಿ.
ಇಲ್ಲಿಗೆ ತುವಟಕ ಸುತ್ತ ಮುಗಿಯಿತು.


mahaaviyooha sutta in kannada 13. ಮಹಾವಿಯೂಹ ಸುತ್ತ

13. ಮಹಾವಿಯೂಹ ಸುತ್ತ
(ದೃಷ್ಟಿವಾದದಿಂದ ಶುದ್ದಿಯಿಲ್ಲ)

1.            ದೇವತಾ - ಯಾರಾದರೂ ದೃಷ್ಟಿಗಳನ್ನು ಗ್ರಹಣೆ ಮಾಡಿ ಇದೇ ಸತ್ಯ ಎಂದು ವಿವಾದ ಮಾಡುವರೋ ಅವರೆಲ್ಲರೂ ನಿಂದಿತರಾಗುತ್ತಾರೆಯೇ ಅಥವಾ ಅವರಲ್ಲಿ ಕೆಲವರು ಪ್ರಶಂಸತೆಯನ್ನು ಸಹಾ ಗಳಿಸುತ್ತಾರೆಯೇ?
2.            ಭಗವಾನ್ - ಇದು ಅಲ್ಪವಾಗಿದೆ, ಶಾಂತಿಗಾಗಿ ಪರ್ಯಪ್ತವಾಗಿಲ್ಲ. ನಾನು ವಿವಾದದಲ್ಲಿ ಎರಡೇ ಫಲ ಎಂದು ಹೇಳುತ್ತೇನೆ (ನಿಂದೆ, ಸ್ತುತಿ). ಆದರೆ ನಿಬ್ಬಾಣವನ್ನು ನಿವರ್ಿವಾದ ಭೂಮಿ ಮತ್ತು ಕಲ್ಯಾಣಕರ ಎಂದು ಅರಿತು ವಿವಾದದಲ್ಲಿ ಬೀಳದಿರಲಿ.
3.            ಯಾವ ಸಾಮಾನ್ಯ ಜನರು ನೀಡುವಂತಹ ಮಾನ್ಯತೆಗಳಿವೆಯೋ ಅದರಲ್ಲಿ ಬುದ್ಧಿವಂತ ಬೀಳುವುದಿಲ್ಲ. ದೃಷ್ಟಿ ಹಾಗು ಶ್ರುತಿಯನ್ನು ಗ್ರಹಣ ಮಾಡದವನ ಆಸಕ್ತರಹಿತನಾದ ಆತನು ಏನನ್ನುತ್ತಾನೆ, ಯಾವ ಗ್ರಹಣ ಮಾಡಬಲ್ಲ?
4.            ಶೀಲಗಳನ್ನು ಉತ್ತಮವೆಂದು ಭಾವಿಸುವವರು ಸಂಯಮದಿಂದ ಶುದ್ಧಿ ಎಂದು ಹೇಳುವರು. ಅವರು ವ್ರತಗಳನ್ನು ಗ್ರಹಣ ಮಾಡಿ ತಿಳಿಸುವುದೇನೆಂದರೆ ಆತನ ಶುದ್ಧಿಯನ್ನು ಇಲ್ಲಿಯೇ ಕಲಿಯಲಿ, ಭವದಲ್ಲಿ ಬಿದ್ದಿರುವ ಜನರು ತಮ್ಮನ್ನು ಕುಶಲರೆಂದು ಹೇಳುವರು.
5.            ಒಂದುವೇಳೆ ಆತನು ಶೀಲವ್ರತದಿಂದ ಚ್ಯುತಿ ಹೊಂದಿದರೆ ತನ್ನ ಕರ್ಮವು ಹಾಳಾಯಿತಲ್ಲ ಎಂದು ಕಂಪಿತನಾಗುತ್ತಾನೆ. ಅರ್ಥದಿಂದ ಬೇರೆ ಹೊಂದಿದ ಅಥವಾ ಮನೆಯಿಂದ ಪ್ರವಾಸ ಹೊರಟಿರುವವನ ರೀತಿ ಶೋಕಪಡುತ್ತಾನೆ ಮತ್ತು ಇಲ್ಲಿ ಶುದ್ಧಿ ಬಯಸುವನು.
6.            ಸರ್ವಶೀಲವ್ರತ ಹಾಗು ಸದೋಷ-ನಿದರ್ೊಷ ಕರ್ಮಗಳನ್ನು ತ್ಯಜಿಸಿ, ಶುದ್ಧಿ ಮತ್ತು ಅಶುದ್ಧಿಯ ಕಾಮನೆ ಮಾಡದೆ ಶಾಂತಿಗಾಗಿ ವಿರಕ್ತನಾಗಿ ವಾಸಿಸಲಿ.
7.            ಕೆಲವರಂತು ತಪದಿಂದ ಅಥವಾ ಅಸಹ್ಯ ಕರ್ಮದಿಂದ ಅಥವಾ ದೃಷ್ಟಿಯಿಂದ, ಶ್ರುತಿಯಿಂದ, ಅಥವಾ ವಿಚಾರತೆಯಿಂದ ಶುದ್ಧಿ ಎನ್ನುತ್ತಾ ಪುನರ್ಜನ್ಮಕ್ಕೆ ಕಾರಣವಾದ ತೃಷ್ಣೆಯನ್ನು ತ್ಯಜಿಸದೆಯೇ ತಮ್ಮನ್ನು ಉಚ್ಛಸ್ತರದಿಂದ ಶುದ್ಧರೆಂದು ಹೇಳಿಕೊಳ್ಳುವರು.
8.            ಯಾರು ಕಾಮನೆಯನ್ನು ಮಾಡುವರೋ, ಅವರಲ್ಲಿಯೇ ತೃಷ್ಣೆಯಿರುತ್ತದೆ. ಯಾರು ಉಪಾಯವನ್ನು ಮಾಡುವನೋ ಆತನೇ ಕಂಪಿಸುತ್ತಾನೆ. ಯಾರಿಗೆ ಮೃತ್ಯು ಮತ್ತು ಜನ್ಮವಿಲ್ಲವೋ ಆತನು ಯಾತಕ್ಕಾಗಿ ಮತ್ತು ಎಲ್ಲಿ ಕಂಪಿತನಾಗುತ್ತಾನೆ ಮತ್ತು ಯಾವ ತೃಷ್ಣೆಯನ್ನು ಪಡುತ್ತಾನೆ?
9.            ದೇವತಾ - ಯಾವುದನ್ನು ಕೆಲವರು ಉತ್ತಮ ಧರ್ಮವೆಂದು ಹೇಳುವರೋ ಅದನ್ನೇ ಪರರು ಹೀನವೆಂದು ಹೇಳುವರು. ಇದರಲ್ಲಿ ಯಾವುದು ಸತ್ಯವಾಗಿದೆ? ಇವರೆಲ್ಲರೂ ತಮ್ಮನ್ನು ಕುಶಲರೆಂದು ಹೇಳಿಕೊಳ್ಳುವರು.
10.          ಭಗವಾನರು - ತನ್ನ ಧಮ್ಮವನ್ನು ಪರಿಪೂರ್ಣ ಎಂದೆನ್ನುತ್ತಾ ಮತ್ತು ಪರರ ಧರ್ಮವನ್ನು ಹೀನವೆನ್ನುತ್ತಾರೆ. ಈ ಪ್ರಕಾರದ ಭಿನ್ನಮತದವರು ವಿವಾದ ಮಾಡುತ್ತಾರೆ ಮತ್ತು ತಮ್ಮ ಧಾರಣೆಯನ್ನು ಸತ್ಯವೆನ್ನುತ್ತಾರೆ.
11.          ಒಂದುವೇಳೆ ಪರರ ನಿಂದೆಯಿಂದಲೇ ಹೀನನಾಗುವ ಹಾಗಿದ್ದರೆ, ಧರ್ಮದಲ್ಲಿ ಯಾರು ಶ್ರೇಷ್ಠರಾಗುತ್ತಿರಲಿಲ್ಲ. ಎಲ್ಲರೂ ಪರರನ್ನು ಹೀನ ಎಂದು ಹೇಳುತ್ತಾನೆ ಮತ್ತು ತನ್ನನ್ನು ಹೀನನಲ್ಲ ಎಂದು ಹೇಳುತ್ತಾರೆ.
12.          ಜನರು ಯಾವರೀತಿ ತನ್ನ ಧಮ್ಮ ಮಾರ್ಗವನ್ನು ಪ್ರಶಂಸೆ ಮಾಡುವರೋ, ಅದೇರೀತಿ ಅದರ ಪೂಜೆ ಸಹಾ ಮಾಡುವರು. ಒಂದುವೇಳೆ ಸರ್ವರ ಕಥನ ಹಾಗೇ ಇದ್ದರೆ ಅವರ ಶುದ್ಧಿಯು ತಮ್ಮ ತಮ್ಮಲ್ಲೇ (ಬೇರೆ ಬೇರೆಯಾಗಿ) ಆಗುತ್ತಿತ್ತು.
13.          ಬ್ರಾಹ್ಮಣನು ಬೇರೆಯ ಆಶ್ರಯದಲ್ಲಿರಲಾರ, ಆತನು ಧಾಮರ್ಿಕ ದೃಷ್ಟಿಯಲ್ಲಿ ದೃಢಗ್ರಾಹಿ ಇರುವುದಿಲ್ಲ. ಅದರಿಂದಲೇ ವಿವಾದದಿಂದ ದಾಟಿದ್ದಾನೆ. ಆತನು ಪರರ ಧರ್ಮವನ್ನು ಶ್ರೇಷ್ಠ ಎಂದು ಒಪ್ಪಲಾರ.
14.          ನಾನು ಹಾಗೆಯೇ ಅರಿಯುತ್ತಿದ್ದೇನೆ ಮತ್ತು ನೋಡುತ್ತಿದ್ದೇನೆ ಈ ರೀತಿಯಾಗಿ ಕೆಲವರು ದೃಷ್ಟಿಯಿಂದ ಶುದ್ಧಿ ಹೇಳುವರು. ಒಂದುವೇಳೆ ಅವರು ನೋಡಿದ್ದಾದರೂ ಏನು? ಅವರು ಯಥಾರ್ಥ ಕ್ರಮವನ್ನು ಬಿಟ್ಟು ಬೇರೆ ಕ್ರಮದಿಂದ ಶುದ್ಧಿ ಹೇಳುವರು.
15.          ನೋಡುವ ಮನುಷ್ಯ ದೇಹ-ಮನಸ್ಸನ್ನೇ ನೋಡುತ್ತಾನೆ. ನೋಡುತ್ತಾ ಅದನ್ನು ಒಪ್ಪುತ್ತಾನೆ. ಆತನು ಸಾಕಷ್ಟು ಹೆಚ್ಚು ಅಥವ ಕಡಿಮೆಯೇ ನೋಡಲಿ, ಕುಶಲರು ಇದರಿಂದಲೇ (ಇಷ್ಟರಿಂದಲೇ) ಶುದ್ಧಿ ಎಂದು ಹೇಳಲಾರರು.
16.          ಯಾರು ಯಾವುದಾದರು ವಿಷಯದಲ್ಲಿ ಆಸಕ್ತನೋ, ಆತನು ಶುದ್ಧಿಪ್ರಾಪ್ತಿ ಆಗಲಾರ. ಏಕೆಂದರೆ ಆತನು ಯಾವುದೇ ದೃಷ್ಟಿಗೆ ಒಪ್ಪುತ್ತಾನೆ. ಮನುಷ್ಯ ಯಾವುದರಲ್ಲಿ ಆಸಕ್ತನಾಗುವನೋ ಅದನ್ನೇ ಶುಭ ಎಂದು ಹೇಳುತ್ತಾನೆ, ಅದನ್ನೇ ಶುದ್ಧಿ ಎಂದು ಹೇಳುತ್ತಾನೆ ಮತ್ತು ಅದನ್ನೇ ಸತ್ಯವೆಂದು ನಂಬುತ್ತಾನೆ.
17.          ಬ್ರಾಹ್ಮಣನು ವಿವೇಕಿಯಾಗಿ ತೃಷ್ಣಾದೃಷ್ಟಿಯಲ್ಲಿ ಬೀಳಲಾರ. ಆತನು ದೃಷ್ಟಿಯ ಅನುಸರಣೆ ಮಾಡಲಾರ ಮತ್ತು ಜ್ಞಾನಬಂಧು (ಪ್ರಾಪಂಚಿಕ) ಆಗಲಾರ. ಆತನು ಸಾಮಾನ್ಯ ಜನರ ಧಾರಣೆಯನ್ನು ಮತ್ತು ಯಾವುದನ್ನು ಪರವ್ಯಕ್ತಿಗಳಲ್ಲಿ ಗ್ರಹಣ ಮಾಡಿರುವರೋ ಅದನ್ನೆಲ್ಲಾ ಅರಿತು ಅದರಿಂದ ಉಪೇಕ್ಷೆ (ತ್ಯಜಿಸಿ ಶಾಂತನಾಗುತ್ತಾನೆ) ಯಿಂದ ಇರುತ್ತಾನೆ.
18.          ಮುನಿಯು ಈ ಸಂಸಾರದಲ್ಲಿ ಬಂಧನಗಳನ್ನು ಕತ್ತರಿಸಿ ವಿವಾದ ಮಾಡುವವರ ಪಕ್ಷಧರನಾಗುವುದಿಲ್ಲ. ಆತನು ಅಶಾಂತರಲ್ಲಿ ಶಾಂತನಾಗಿ ಅನ್ಯರು ಯಾವುದನ್ನು ಗ್ರಹಣ ಮಾಡುವರೋ ಅದರ ಉಪೇಕ್ಷೆ ಮಾಡುತ್ತಾನೆ.
19.          ಯಾರು ಹಿಂದಿನ (ಆಸವ) ಕಶ್ಮಲಗಳನ್ನು ತೊರೆದು, ಹೊಸ ಕಶ್ಮಲ (ಆಸವ) ಗಳನ್ನು ಉತ್ಪತ್ತಿ ಮಾಡಲಾರನೋ, ಇಚ್ಛೆರಹಿತನೊ, ವಾದದಲ್ಲಿ ಅನಾಸಕ್ತನೋ ದೃಷ್ಟಿಗಳಲ್ಲಿ ಪೂರ್ಣವಾಗಿ ಮುಕ್ತನಾದ ಆ ಧೀರನು ಸಂಸಾರದಲ್ಲಿ ಲಿಪ್ತನಾಗಲಾರ ಮತ್ತು ಆತನು ತನ್ನ ನಿಂದೆಯನ್ನು ಮಾಡಿಕೊಳ್ಳಲಾರ.
20.          ಯಾವುದೆಲ್ಲವೂ ದೃಷ್ಟಿ, ಶ್ರುತಿ ಅಥವಾ ವಿಚಾರತೆಯಿದೆಯೋ, ಅದೆಲ್ಲದರಿಂದ ಆತನು ವಿಜಯಿಯಾಗಿದ್ದಾನೆ. ಆತನು ಪೂರ್ಣ ರೂಪದಿಂದ ಮುಕ್ತನು, ಭಾರಯುಕ್ತ ಪ್ರಜ್ಞಾವಂತನು ಹಾಗು ಉಪರತಿ ಹಾಗು ತೃಷ್ಣೆಯಿಂದ ರಹಿತನಾಗಿದ್ದಾನೆ.

ಇಲ್ಲಿಗೆ ಮಹಾವಿಯೂಹ ಸುತ್ತ ಮುಗಿಯಿತು.

choolaviyooha sutta in kannada 12. ಚೂಳವಿಯೂಹ ಸುತ್ತ

12. ಚೂಳವಿಯೂಹ ಸುತ್ತ
(ಸತ್ಯ ಒಂದೇ ಆಗಿದೆ. ವಿವಾದದಲ್ಲಿ ಬೀಳುವುದು ವ್ಯರ್ಥವಾಗಿದೆ)

1.            ದೇವತಾ - ಜನರು ತಮ್ಮ ತಮ್ಮ ದೃಷ್ಟಿಯಲ್ಲಿ ದೃಢವಾಗಿ ಗ್ರಹಣ ಮಾಡಿ ನಾವು ಕುಶಲರು ಎಂದು ಹೇಳಿ ವಿವಾದ ಮಾಡುವರು ಮತ್ತು ಹೀಗೂ ಹೇಳುವರು. ಏನೆಂದರೆ ಯಾರು ಹೀಗೆ ಅರಿತಿರುವರೋ, ಆತನೇ ಜ್ಞಾನಿ ಹಾಗು ಧರ್ಮದ ಜ್ಞಾತ ಮತ್ತು ಯಾರು ಇದರ ವಿರೋಧ ಮಾಡುವನೋ ಆತನು ಜ್ಞಾನಿಯೇ ಅಲ್ಲ.
2.            ಹೀಗೆಯೇ ಹಠದಲ್ಲಿ ಬಿದ್ದು ವಿವಾದ ಮಾಡುವರು ಮತ್ತು ಪರರು ಮೂರ್ಖರೆಂದು ಮತ್ತು ಅಕುಶಲರೆಂದು ಹೇಳುವರು. ಇದರಲ್ಲಿ ಸತ್ಯವಾದ ಮತ (ಧರ್ಮ) ಯಾವುದು? ಸರ್ವರೂ ತಮ್ಮನ್ನು ಕುಶಲರೆಂದು ಹೇಳುವರು.
3.            ಭಗವಾನರು - ಯಾರು ಪರರ ಧರ್ಮಕ್ಕೆ ಸ್ಥಾನ ನೀಡುವುದಿಲ್ಲವೋ ಆತನು ಮೂರ್ಖ, ಪಶು ಮತ್ತು ಪ್ರಜ್ಞಾವಿಹೀನನಾಗುತ್ತಾನೆ. ಸರ್ವರೂ ಮೂರ್ಖರು ಮತ್ತು ಪ್ರಜ್ಞಾವಿಹೀನರಾಗಿದ್ದಾರೆ. ಹೀಗೆ ಹೇಳುವ ಇವರೆಲ್ಲರೂ ದೃಷ್ಟಿಗಳ ಜಾಲದಲ್ಲಿ ಬಿದ್ದಿರುವರು.
4.            ಒಂದುವೇಳೆ ಜನರ ದೃಷ್ಟಿಯು ಪವಿತ್ರವಾಗಿದ್ದರೆ ಅವರು ಶುದ್ಧರು, ಪ್ರಜ್ಞಾವಂತರು, ಕುಶಲರು ಮತ್ತು ಮತಿವಂತರಾಗುತ್ತಿದ್ದರು. ಅವರಲ್ಲಿ ಯಾರು ಪ್ರಜ್ಞಾವಿಹೀನನಾಗುತ್ತಿರಲಿಲ್ಲ. ಅವರ ದೃಷ್ಟಿಯು ಪರಿಪೂರ್ಣವಾಗಿರುತ್ತದೆ.
5.            ನಾನು ಇದೇ ಸತ್ಯ ಎಂದು ಹೇಳುವುದಿಲ್ಲ. ಅಂತಹ ವಿಷಯ ಎತ್ತಿ ಜನರು ಪರರನ್ನು ಮೂರ್ಖರೆನ್ನುವರು. ಅವರು ತಮ್ಮ ತಮ್ಮ ದೃಷ್ಟಿಯನ್ನು ಸತ್ಯ ಸಿದ್ಧ ಮಾಡುವರು ಮತ್ತು ಪರರನ್ನು ಮೂರ್ಖರೆನ್ನುವರು.
6.            ದೇವತಾ - ಕೆಲವರು ಯಾವುದನ್ನು ಸತ್ಯ ಎನ್ನುವರೋ, ಪರರು ಅದನ್ನೇ ಪ್ರಲಾಪ ಮತ್ತು ಅಸತ್ಯವೆನ್ನುವರು.  ಈ ರೀತಿಯಿಂದಲೂ ಹಠ ಹಿಡಿದು ವಿವಾದ ಮಾಡುವರು. ಸಮಣರು ಒಂದೇ ರೀತಿಯಾದ ವಿಷಯವನ್ನು ಏಕೆ ತಿಳಿಸುವುದಿಲ್ಲ?
7.            ಭಗವಾನರು - ಸತ್ಯವು ಒಂದೇ ಆಗಿದೆ, ಬೇರೆಯದಲ್ಲ (ದ್ವಿತೀಯವಲ್ಲ) ಯಾವ ವಿಷಯದಲ್ಲಿ ವ್ಯಕ್ತಿ ವ್ಯಕ್ತಿಗಳು ವಿವಾದಿತರಾಗಿರುತ್ತಾರೋ ಅವರೆಲ್ಲರೂ ಸ್ವಯಂ ನಾನಾ ಸತ್ಯಗಳ ಪ್ರಶಂಸೆ ಮಾಡುತ್ತಾರೆ. ಆದ್ದರಿಂದಲೇ ಸಮಣರು ಒಂದೇ ವಿಷಯ ತಿಳಿಸುವುದಿಲ್ಲ.
8.            ದೇವತಾ - ಏತಕ್ಕಾಗಿ ಜನರು ನಾನಾ ಸತ್ಯಗಳನ್ನು ತಿಳಿಸುವರು? ಅವರು ತಮ್ಮನ್ನು ಕುಶಲರೆಂದು ಹೇಳಿ ವಿವಾದ ಮಾಡುವರು. ಏನು ಕೇಳಿರುವ ಸತ್ಯ ನಾನಾ ಪ್ರಕಾರವುಳ್ಳದ್ದು ಹಾಗು ಬಹುವಿದೆಯೋ? ಅಥವಾ ಅವರು ತರ್ಕದ ಅನುಸಾರವಾಗಿ ಹೇಳುವರೋ?
9.            ಭಗವಾನರು - ಸಂಜ್ಞೆಯ ಅತಿರಿಕ್ತವಾಗಿ ಲೋಕದಲ್ಲಿ ಬಹಳ ಹಾಗು ವಿಭಿನ್ನ ಪ್ರಕಾರದ ಸತ್ಯಗಳಿವೆ ಹಾಗು ನಿತ್ಯವಾಗಿಲ್ಲ. ದೃಷ್ಟಿಗಳಲ್ಲಿ ತರ್ಕವು ಸೇರಿಸಿ ಸತ್ಯ ಹಾಗು ಅಸತ್ಯ ಈ ಎರಡು ಧರ್ಮಗಳು ಹೇಳುವರು.
10.          ದೃಷ್ಟಿ, ಶೃತಿ, ಶೀಲವ್ರತ, ವಿಚಾರತೆ - ಇವುಗಳ ಕಾರಣ ಬೇರೆಯವರ ಅನಾದರ ಮಾಡುತ್ತಾ ಪ್ರಸನ್ನತೆಯಿಂದ ಯಾವುದೋ ನಿರ್ಣಯದಲ್ಲಿ ಸ್ಥಿತರಾಗಿ ಜನರು ಬೇರೆಯವರನ್ನು ಮುರ್ಖರೆಂದು ಮತ್ತು ಅಕುಶಲರೆಂದು ಹೇಳುವರು.
11.          ವ್ಯಕ್ತಿ ಯಾವ ಕಾರಣದಿಂದ ಪರರನ್ನು ಮೂರ್ಖ ಎಂದು ಹೇಳುವನೋ ಅದರಿಂದಲೇ ತನ್ನನ್ನು ಕುಶಲ ಎಂದು ತೋರಿಸಿಕೊಳ್ಳುವನು. ತನ್ನನ್ನು ಕುಶಲ ಎಂದು ತೋರಿಸುತ್ತಲೇ ಆತನು ಪರರನ್ನು ಅನಾಧರಣೆ ಮಾಡುತ್ತಾನೆ.
12.          ಆ ವ್ಯಕ್ತಿಯು ತನ್ನ ಆ ದೃಷ್ಟಿಯನ್ನು ಪೂರ್ಣ ಎಂದು ನಂಬುತ್ತಾನೆ ಮತ್ತು ಆತನು ಅಹಂಕಾರದಿಂದ ಪರಿಪೂರ್ಣ ಅಭಿಮಾನಿಯಾಗುತ್ತಾನೆ. ಆತನು ತನ್ನನ್ನು ಜ್ಞಾನಿ ಎಂದು ಭಾವಿಸುವನು. ಏಕೆಂದರೆ ಆತನ ದೃಷ್ಟಿಯೇ ಆ ರೀತಿ ಇರುತ್ತದೆ.
13.          ಒಂದುವೇಳೆ ಹೇಳುವುದರಿಂದಲೇ ಪರರನ್ನು ಹೀನರನ್ನಾಗಿ ಮಾಡುವುದು ಸಾಧ್ಯವಾಗಿದ್ದರೆ ಆತನು ಸ್ವಯಂ ಸಹಾ ಪ್ರಜ್ಞಾವಿಹೀನನಾಗುತ್ತಿದ್ದನು. ಒಂದುವೇಳೆ ತಾನು ಹೇಳುವುದರಿಂದಲೇ ಯಾರಾದರೂ ಜ್ಞಾನಿ ಹಾಗು ಧೀರರು ಆಗುವ ಹಾಗಿದ್ದರೆ, ಶ್ರಮಣರಲ್ಲಿ ಯಾರೂ ಸಹಾ ಮೂರ್ಖರಾಗುತ್ತಿರಲಿಲ್ಲ.
14.          ಯಾರು ಇದರ ವಿಪರೀತವಾಗಿ ಪರದೃಷ್ಟಿ ಹೇಳುವರೋ ಮತ್ತು ಯಾರು ಶುದ್ಧಿ ಮಾರ್ಗದಿಂದ ವಿಚಲಿತರಾಗಿದ್ದರೋ ಅವರು ಅಕೇವಲಿಗಳು (ಅಜ್ಞಾನಿ). ಹೀಗೆ ಪ್ರಾಯಶಃ ತಾಕರ್ಿಕ (ಅನ್ಯ ಮತದವರು) ಹೇಳುವರು. ಏಕೆಂದರೆ ಅವರು ತಮ್ಮ ದೃಷ್ಟಿರಾಗದಲ್ಲಿ ರತರಾಗಿದ್ದಾರೆ.
15.          ಶುದ್ಧಿ ಇಲ್ಲಿ ಮಾತ್ರವಿದೆ. ಪರಧರ್ಮದಲ್ಲಿ ಶುದ್ಧಿಯಿಲ್ಲ - ಹೀಗೆ ಪ್ರಾಯಶಃ ತೀರ್ಥಕರು ತಮ್ಮ ದೃಷ್ಟಿಯಲ್ಲಿ ಸ್ಥಿತರಾಗಲಿ ಮತ್ತು ದೃಢರಾಗಲೆಂದು ಹೇಳುವರು.
16.          ಯಾರು ತಮ್ಮ ದೃಷ್ಟಿಗೆ ದೃಢತಾಪೂರ್ವಕವಾಗಿ ಗ್ರಹಣ ಮಾಡಿ ಪರರನ್ನು ಮೂರ್ಖರನ್ನಾಗಿ ಹೇಳುವನೋ, ಪರಧರ್ಮವನ್ನು ಮೂರ್ಖ ಹಾಗು ಅಶುದ್ಧಿ ಮಾಡುವವ. ಆತನು ಸ್ವಯಂ ಕಲಹಕ್ಕೆ ಆಹ್ವಾನ ನೀಡುತ್ತಾನೆ.
                17.          ಆತನು ತನ್ನ ದೃಷ್ಟಿಯಲ್ಲಿ ಸ್ಥಿತನಾಗಿ, ಸ್ವಯಂ (ಪರರ ಶಾಸ್ತರಿಗೆ) ತುಲನೆ ಮಾಡಿ ಲೋಕದಲ್ಲಿ ವಿವಾದ ಮಾಡುವನು. ಆದರೆ ಜ್ಞಾನಿ ಪುರುಷರು ಸರ್ವ ದೃಷ್ಟಿಗಳನ್ನು ತ್ಯಜಿಸಿ ಲೋಕದಲ್ಲಿ ಕಲಹ ಉಂಟುಮಾಡುವುದಿಲ್ಲ.

ಇಲ್ಲಿಗೆ ಚೂಳವಿಯೂಹ ಸುತ್ತ ಮುಗಿಯಿತು.

kalahavivaada sutta in kannada 11. ಕಲಹ ವಿವಾದ ಸುತ್ತ

11. ಕಲಹ ವಿವಾದ ಸುತ್ತ

(ಕಲಹದ ಕಾರಣ)
1.            ದೇವತಾ - ನಮಗೆ ಇದನ್ನು ತಿಳಿಸಿರಿ. ಕಲಹ, ವಿವಾದ, ವಿಲಾಪ, ಶೋಕ, ಜಿಪುಣತನ, ಅಹಂ, ಅಭಿಮಾನ ಅಥವಾ ಚಾಡಿತನ ಎಲ್ಲಿ ಉತ್ಪನ್ನವಾಗುತ್ತದೆ.
2.            ಭಗವಾನರು - ಕಲಹ, ವಿವಾದ, ವಿಲಾಪ, ಶೋಕ, ಜಿಪುಣತನ, ಅಹಂ, ಅಭಿಮಾನ ಮತ್ತು ಚಾಡಿತನ ಪ್ರಿಯವಾದುದರಿಂದ ಉತ್ಪನ್ನವಾಗುತ್ತದೆ. ಕಲಹವು ಮತ್ತು ವಿವಾದ ಸ್ವಾರ್ಥದಿಂದ ಯುಕ್ತವಾಗಿದೆ ಮತ್ತು ವಿವಾದ ಉತ್ಪನ್ನದಿಂದ ಚಾಡಿತನವು ಆಗುತ್ತದೆ.
3.            ದೇವತಾ - ಲೋಕದಲ್ಲಿ ಪ್ರಿಯವಾದುದು ಎಲ್ಲಿ ಉತ್ಪನ್ನವಾಗುತ್ತದೆ? ಅಥವಾ ಲೋಭದ ಕಾರಣದಿಂದ ಲೋಕದಲ್ಲಿ ಸಂಚರಿಸುತ್ತಿರುವವರು ಎಲ್ಲಿಂದ ಉತ್ಪನ್ನರಾಗುತ್ತಾರೆ? ಯಾವುದು ಮನುಷ್ಯನ ಪುನರ್ಜನ್ಮದ ಹೇತುವಾಗಿದೆಯೋ ಅ ಇಚ್ಛೆಗಳೂ ಮತ್ತು ಅದರ ಪೂತರ್ಿ ಹೇಗೆ ಆಗುವುದು.
4.            ಭಗವಾನರು - ಪ್ರಿಯದ ಕಾರಣ ರಾಗವಾಗಿದೆ ಅಥವಾ ಲೋಭದ ಕಾರಣದಿಂದ ಜನರು ಲೋಕದಲ್ಲಿ ಸಂಚರಿಸುತ್ತಿರುವರು. ಇಚ್ಛೆಯ ಮತ್ತು ಅದರ ಪೂತರ್ಿಯ ಹೇತು (ಮೂಲ) ಇದೇ ಆಗಿದೆ. ಇದೇ ಮಾನವ ಪುನರ್ಜನ್ಮದ ಹೇತುವಾಗಿದೆ.
5.            ದೇವತಾ - ಮಹಾ ಸಮಣರು (ಬುದ್ಧರು) ಯಾವ ಧರ್ಮವನ್ನು ತಿಳಿಸಿರುವಿರೋ, ಅದರ ಅನುಸಾರವಾಗಿ ಇಚ್ಛೆಗಳು ಎಲ್ಲಿ ಉತ್ಪನ್ನವಾಗುತ್ತದೆ? ಅಥವಾ ವಿನಿಶ್ರಯ, ಕ್ರೋಧ, ಅಸತ್ಯ ಭಾಷಣ ಹಾಗು ಸಂದೇಹ ಎಲ್ಲಿ ಉತ್ಪನ್ನವಾಗುತ್ತದೆ?
6.            ಭಗವಾನರು - ಲೋಕದಲ್ಲಿ ಯಾವ ಪ್ರಿಯ ಮತ್ತು ಅಪ್ರಿಯ ವಸ್ತುಗಳಿವೆಯೋ, ಅದರ ಕಾರಣದಿಂದಲೇ ಇಚ್ಛೆಯು ಉತ್ಪನ್ನವಾಗುತ್ತದೆ. ದೇಹದ ವಿನಾಶ ಹಾಗು ಉತ್ಪತ್ತಿಯನ್ನು ಕಂಡು ಜನರು ಇಲ್ಲಿ ನಿಶ್ಚಯಕ್ಕೆ ಬರುತ್ತಾರೆ.
7.            ಸಮಣರು ಅರಿತು ಇದನ್ನು ಹೇಳುವುದು ಅದೇನೆಂದರೆ ಕ್ರೋಧ, ಅಸತ್ಯ ಭಾಷಣ ಮತ್ತು ಸಂದೇಹ - ಈ ಧರ್ಮಗಳು ಎರಡು ವಿಷಯದಿಂದ (ರಾಗ, ದ್ವೇಷ) ಉತ್ಪನ್ನವಾಗುತ್ತದೆ. ಸಂದೇಹದಿಂದ ಕೂಡಿದ ವ್ಯಕ್ತಿಯು ಜ್ಞಾನಪಥದ ಅಭ್ಯಾಸ ಮಾಡಬೇಕು.
8.            ದೇವತಾ - ನನಗೆ ಇವುಗಳ ಉತ್ಪತ್ತಿಯ ಕಾರಣ ತಿಳಿಸಿ, ಸುಖ ಹಾಗು ದುಃಖ ವೇದನೆಗಳು ಎಲ್ಲಿಂದ ಉತ್ಪನ್ನವಾಗುತ್ತದೆ? ಯಾವುದರ ಇಲ್ಲವಾಗಿಕೆಯಿಂದ ಇವು ಇರುವುದಿಲ್ಲ. ನಾಶ ಹಾಗು ಉತ್ಪತ್ತಿ ಯಾವುದನ್ನು ಹೇಳಿರುವಿರೋ ಅದರ ಕಾರಣವನ್ನು ತಿಳಿಸಿ.
9.            ಭಗವಾನರು - ಸ್ಪರ್ಶದ (ಇಂದ್ರಿಯ ವಿಷಯಗಳ) ಕಾರಣದಿಂದ ಸುಖ ಮತ್ತು ದುಃಖ ವೇದನೆಗಳು ಆಗುತ್ತದೆ. ಸ್ಪರ್ಶ ಇಲ್ಲದಿದ್ದರೆ ಇವು ಆಗುವುದಿಲ್ಲ. ಯಾವುದು ವಿನಾಶ ಮತ್ತು ಉತ್ಪತ್ತಿಯೆಂದು ಹೇಳಿದೆಯೋ, ಅವುಗಳ ಕಾರಣವನ್ನು ಇದೇ (ಸ್ಪರ್ಶ) ಎಂದು ಹೇಳುತ್ತೇನೆ.
10.          ದೇವತಾ - ಲೋಕದಲ್ಲಿ ಸ್ಪರ್ಶವು ಎಲ್ಲಿಂದ ಉತ್ಪನ್ನವಾಗುತ್ತದೆ? ಪರಿಗ್ರಹವು ಎಲ್ಲಿಂದ ಉತ್ಪನ್ನವಾಗುತ್ತದೆ? ಯಾವುದು ಇಲ್ಲದಿದ್ದರೆ ಮಮತ್ವವು ಇರುವುದಿಲ್ಲ? ಯಾವುದು ಇರದಿದ್ದರೆ ಸ್ಪರ್ಶ ಇರುವುದಿಲ್ಲ?
11.          ಭಗವಾನರು - ದೇಹ ಮತ್ತು ಮನಸ್ಸಿನಿಂದ ಸ್ಪರ್ಶವಾಗುತ್ತದೆ. ಇಚ್ಛೆಯಿಂದ ಪರಿಗ್ರಹವಾಗುತ್ತದೆ. ಇಚ್ಛೆಯಿಲ್ಲದಿದ್ದರೆ ಮಮತ್ವವೂ ಇರುವುದಿಲ್ಲ ಮತ್ತು ದೇಹ (ಹಾಗು ಮನಸ್ಸು) ಇಲ್ಲದಿದ್ದರೆ ಸ್ಪರ್ಶವೂ ಆಗಲಾರದು.
12.          ದೇವತಾ - ಹೇಗೆ ಕಾರ್ಯ ಮಾಡುವವನ ದೇಹವು ಇರುವುದಿಲ್ಲ ಅಥವಾ ಸುಖ ಮತ್ತು ದುಃಖವು ಹೇಗೆ ಇರುವುದಿಲ್ಲ? ಇವು ಹೇಗೆ ಇಲ್ಲವಾಗುವುವೋ ನನಗೆ ತಿಳಿಸಿ. ನಮ್ಮ ಇಚ್ಛೆ ಅದನ್ನು ಅರಿಯುವುದಾಗಿದೆ.
13.          ಭಗವಾನರು - ಯಾರು ಸಂಞ್ಞಾ (ಗ್ರಹಿಕೆ)ಗಳಲ್ಲಿ ಇಲ್ಲವೋ, ಯಾರು ಸಞ್ಞಾರಹಿತರಲ್ಲವೋ ಮತ್ತು ಯಾರು ಅಸಂಞ್ಞರು (ಅಗ್ರಹಿಕೆಯುಳ್ಳವರು) ಅಲ್ಲವೂ ಹಾಗು ಯಾರು (ಸಮಾಧಿಯ ಅಗ್ರ ಸ್ಥಿತಿಯಾದ) ಸಞ್ಞಾವನ್ನು ಅತಿಕ್ರಮಣ ಮಾಡಿರುವರೋ, ಹಾಗೆ ಆಗುವುದರಿಂದ ದೇಹ ಇರುವುದಿಲ್ಲ. ಸಂಞ್ಞಾ ಕಾರಣದಿಂದಲೇ ಸರ್ವಪ್ರಪಂಚ (ಅಸ್ತಿತ್ವ) ಉತ್ಪನ್ನವಾಗುತ್ತದೆ.
14.          ದೇವತಾ - ನಾವು ಏನನ್ನೆಲ್ಲಾ ಕೇಳಿದೆವೋ, ಅದೆಲ್ಲವನ್ನು ತಾವು ನಮಗೆ ತಿಳಿಸಿದಿರಿ. ಈಗ ನಾವು ಬೇರೆಯದನ್ನು ಕೇಳುತ್ತೇವೆ. ಅದನ್ನು ನಮಗೆ ತಿಳಿಸಿರಿ. ಕೆಲವು ಜ್ಞಾನಿಗಳು ಇದನ್ನೇ (ಗ್ರಹಿಕೆ ಇಲ್ಲ, ಗ್ರಹಿಕೆ ಇಲ್ಲದೆಯೂ ಇಲ್ಲ ಎಂಬ ಅಗ್ರ ಸಮಾಧಿ) ವ್ಯಕ್ತಿಯ ಶುದ್ಧಿಗಾಗಿ ಶ್ರೇಷ್ಠವೆನ್ನುವರು. ಅಥವಾ ಇದಕ್ಕಿಂತ ಬೇರೆಯದು ತಿಳಿಸುವಿರೇ?
15.          ಭಗವಾನರು - ಕೆಲವು ಜ್ಞಾನಿಗಳು (ಪಂಡಿತರು) ವ್ಯಕ್ತಿಯ ಶುದ್ಧತೆಯನ್ನು ಇಷ್ಟರಿಂದಲೇ ಎಂದು ಹೇಳುವರು. ಕೆಲವರು ಅವರ ಉಚ್ಚೇದ (ನಾಶ) ದ ಮಾತು ಆಡುವರು. ಆದರೆ ಕುಶಲ ವ್ಯಕ್ತಿಗಳು ನಿಬ್ಬಾಣವನ್ನು ಮಾತ್ರ ಶುದ್ಧಿ ಎಂದು ಹೇಳುವರು.
16.          ಈ ದೃಷ್ಟಿಗಳನ್ನು ಗ್ರಹಣ ಮಾಡಿ ಅದರಲ್ಲಿ (ಬಂಧಿತರಾಗಿ) ಸಿಕ್ಕಿರುವರು. ಹೀಗೆ ಮುನಿಯು (ಬುದ್ಧರು) ವಿವೇಕಾಪೂರ್ವಕವಾಗಿ ಅರಿತು ವಿಮುಕ್ತರಾಗಿರುವರು. ಅವರು ವಿವಾದದಲ್ಲಿ ಬೀಳುವುದಿಲ್ಲ ಮತ್ತು ಧೀರರು ಉತ್ಪತ್ತಿ ಮತ್ತು ವಿನಾಶದ ಜಾಲದಲ್ಲಿ ಬೀಳಲಾರರು.

ಇಲ್ಲಿಗೆ ಕಲಹ ವಿವಾದ ಸುತ್ತ ಮುಗಿಯಿತು.

puraabheda sutta in kannada 10. ಪುರಾಭೇದ ಸುತ್ತ

10. ಪುರಾಭೇದ ಸುತ್ತ
(ಶಾಂತಪುರುಷ ಯಾರು?)

1.            ದೇವತಾ - ಯಾವರೀತಿಯ ದರ್ಶನದವನು ಮತ್ತು ಯಾವರೀತಿಯ ಶೀಲವಂತನಾದ ವ್ಯಕ್ತಿ ಉಪಶಾಂತನೆಂದು ಕರೆಯಲ್ಪಡುತ್ತಾನೆ? ಹೇ ಗೋತಮರೇ! ನನ್ನ ಕೇಳುವಿಕೆಗೆ ಆ ಉತ್ತಮ ಪುರುಷನನ್ನು ತಿಳಿಸಿರಿ.
2.            ಭಗವಾನರು - ಯಾರು ಶರೀರ ತ್ಯಾಗದ ಮುಂಚೆಯೇ ತೃಷ್ಣಾರಹಿತನೋ ಮತ್ತು ಭೂತ ಹಾಗು ಭವಿಷ್ಯದ ಆಶ್ರಿತನಲ್ಲವೋ, ಯಾರು ವರ್ತಮಾನದಲ್ಲೂ ಆಶ್ರಿತನಲ್ಲವೊ, ಅವನಿಗೆ ಎಲ್ಲಿಯೂ ಆಸಕ್ತಿಯಿಲ್ಲ.
3.            ಯಾರು ಕ್ರೋಧ, ತ್ರಾಸ, ಸ್ವಪ್ರಶಂಸೆ ಮತ್ತು ಚಂಚಲತೆಗಳಿಂದ ರಹಿತನೋ, ಯಾರು ಚಿಂತಿಸಿ ಮಾತನಾಡುವವನೋ, ಅಭಿಮಾನರಹಿತನೋ ಮತ್ತು ವಚನದಲ್ಲಿ ಸಂಯಮಿಯೋ ಆತನು ಮುನಿಯಾಗಿರುವನು.
4.            ಯಾರು ಭವಿಷ್ಯದ ವಿಷಯದಲ್ಲಿ ಆಸಕ್ತಿ ಇರುವುದಿಲ್ಲವೋ ಮತ್ತು ಭೂತಕಾಲದ ಬಗ್ಗೆ ಪಶ್ಚಾತ್ತಾಪ ಪಡುವುದಿಲ್ಲವೋ, ಯಾರು ಸ್ಪರ್ಶಗಳಲ್ಲಿ ವಿವೇಕದಶರ್ಿಯೋ ಆತನು ದೃಷ್ಟಿಗಳ ಜಾಲದಲ್ಲಿ ಬೀಳುವುದಿಲ್ಲ.
5.            ಯಾರು ರಾಗ, ಡೊಂಗಿತನ, ಇಚ್ಛೆ, ಜಿಪುಣತನ, ಪ್ರಗಲ್ಲತಾ ಮತ್ತು ಅಸಹ್ಯತೆಯಿಂದ ರಹಿತನೋ ಮತ್ತು ಚಾಡಿತನದಲ್ಲದವನೋ...
6.            ಯಾರು ಕಾಮಭೋಗಗಳಲ್ಲಿ ರತನಾಗುವುದಿಲ್ಲವೋ, ಅಭಿಮಾನಪಡುವುದಿಲ್ಲವೋ, ಶಾಂತ ಮತ್ತು ಪಟಿಭಾನವನೋ ಆತನು ನಂಬಿಕೆಯವನಾಗಲಿ ಅಥವಾ ವಿರಕ್ತನಾಗಲಿ ಆಗುವುದಿಲ್ಲ.
7.            ಯಾರು ಲಾಭವನ್ನು ಬಯಸಿ ಪ್ರಯತ್ನಶೀಲನಾಗುವುದಿಲ್ಲವೋ (ಬೋಧಿಸುವುದಿಲ್ಲವೋ) ಲಾಭವಾಗದೆ ಇದ್ದಾಗ ಕುಪಿತನಾಗುವುದಿಲ್ಲವೋ, ತೃಷ್ಣೆಗಳಲ್ಲಿ ಅವಿರುದ್ಧನಾಗಿ (ಅನಾಸಕ್ತನಾಗಿ) ಅವುಗಳ ರಸದಲ್ಲಿ ಲಿಪ್ತನಾಗದೆಯೂ ಇರುತ್ತಾನೆ.
8.            ಯಾರು ಸಮಭಾವದ ಚಿತ್ತನೋ (ಉಪೇಕ್ಷಕ) ಸದಾ ಜಾಗರೂಕನೋ, ಲೋಕದಲ್ಲಿ ಯಾರಿಗೂ ಸಮಾನವೆಂದಾಗಲಿ, ಶ್ರೇಷ್ಠವೆಂದಾಗಲಿ ಅಳೆಯುವುದಿಲ್ಲವೋ, ಆತನಲ್ಲಿ ರಾಗವಿರುವುದಿಲ್ಲ.
9.            ಯಾರಲ್ಲಿ ತೃಷ್ಣೆಯಿಲ್ಲವೋ, ಯಾರು ಧರ್ಮವನ್ನು ಅರಿತು ಉತ್ಪತ್ತಿ ಮತ್ತು ವಿನಾಷದ ಬಗ್ಗೆ ತೃಷ್ಣಾರಹಿತನೋ, ಆತನಲ್ಲಿ ತೃಷ್ಣೆಯು ಇರುವುದಿಲ್ಲ.
10.          ಕಾಮಭೋಗಗಳ ಅಪೇಕ್ಷೆ ಪಡದ ಆ ವ್ಯಕ್ತಿಗೆ ಉಪಶಾಂತ ಎಂದು ಹೇಳುತ್ತೇನೆ. ಆತನಿಗೆ ಯಾವ ಸಾಂಸರಿಕ ಬಂಧನವೂ ಇಲ್ಲ. ಆತನು ತೃಷ್ಣೆಯನ್ನು ಮೀರಿ (ದಾಟಿ) ಹೋಗಿದ್ದಾನೆ.
11.          ಆತನಿಗೆ ಪುತ್ರರು, ಪಶುಗಳು, ಹೊಲಗಳು, ಅಥವಾ ಧನದ (ಆಸಕ್ತಿಗಳು) ಇಲ್ಲವಾಗಿದೆ ಮತ್ತು ಆತನಿಗೆ ತನ್ನ ಅಥವಾ ಪರರು ಎಂಬ ಬೇಧಭಾವವು ಇಲ್ಲವಾಗಿದೆ.
12.          ಯಾವ ವಿಷಯದಲ್ಲಿ ಆತನಿಗೆ ಸಾಮಾನ್ಯ ಜನರು ಮತ್ತು ಸಮಣ ಬ್ರಾಹ್ಮಣರು ದೋಷ ಆರೋಪಿಸುತ್ತಾರೋ, ಅಂತಹ ಯಾವುದೇ ದೋಷ ಆತನಲ್ಲಿರುವುದಿಲ್ಲ. ಆದ್ದರಿಂದ ಆತನು ತನ್ನ ನಿಂದೆಯಿಂದಲೂ ವಿಚಲಿತನಾಗುವುದಿಲ್ಲ.
13.          ರಾಗ ಹಾಗು ಜಿಪುಣತನದಿಂದ ರಹಿತನಾದ ಆ ಮುನಿಯು ತನ್ನನ್ನು ಶ್ರೇಷ್ಠ, ಸಮಾನ, ಅಥವಾ ನಿಮ್ನ (ನೀಚ) ಜನಗಳಿಗೆ ಹೋಲಿಸಿಕೊಳ್ಳುವುದಿಲ್ಲ. ಆತನು ಪುನರ್ಜನ್ಮದಲ್ಲಿ ಬೀಳುವುದಿಲ್ಲ. ಏಕೆಂದರೆ ಆತನು ಜನ್ಮದಿಂದ ಮೀರಿ (ದಾಟಿ) ಹೋಗಿದ್ದಾನೆ.
14.          ಆತನಿಗೆ ಲೋಕದಲ್ಲಿ ತನ್ನದು ಎನ್ನುವಂತಹ ಏನೂ ಇಲ್ಲ. ಯಾವ ಕೊರತೆಗಾಗಿಯೂ ಪಶ್ಚಾತ್ತಾಪ ಪಡುವುದಿಲ್ಲ ಮತ್ತು ಸರ್ವ ಧರ್ಮದಲ್ಲಿ ರಾಗಾದಿಗಳ ವಶಕ್ಕೆ ಬೀಳುವುದಿಲ್ಲ. ಆತನೇ ಶಾಂತನೆಂದು ಕರೆಯಲ್ಪಡುತ್ತಾನೆ.

ಇಲ್ಲಿಗೆ ಪುರಾಭೇದ ಸುತ್ತ ಮುಗಿಯಿತು.

maagandiya sutta in kannada 9. ಮಾಗಂದಿಯ ಸುತ್ತ

9. ಮಾಗಂದಿಯ ಸುತ್ತ

                (ಮಾಗಂದಿಯ ಬ್ರಾಹ್ಮಣನು ಭಗವಾನರೊಂದಿಗೆ ತನ್ನ ಪುತ್ರಿಯ ವಿವಾಹದ ಪ್ರಸ್ತಾಪ ಮಾಡಿದನು. ಭಗವಾನರು ಆಕೆಯನ್ನು ಅಸ್ವೀಕಾರ ಮಾಡಿದ ನಂತರ ದೃಷ್ಟಿವಾದದ ಸಂಬಂಧವಾಗಿ ಭಗವಾನರೊಂದಿಗೆ ಪ್ರಶ್ನೆಗಳನ್ನು ಕೇಳಿದನು. ಭಗವಾನರು ದೃಷ್ಟಿವಾದದ ಖಂಡನೆ ಮಾಡಿ ನಿಬ್ಬಾಣ ಪ್ರಾಪ್ತಿಯ ಮಾರ್ಗವನ್ನು ತಿಳಿಸಿದರು.)
1.            ಭಗವಾನರು - ತೃಷ್ಣಾ, ಅರತಿ ಮತ್ತು ರಾಗವನ್ನು ನೋಡಿಯೂ ನನ್ನಲ್ಲಿ ಮೈಥುನದ ಇಚ್ಛೆ ಉಂಟಾಗಲಿಲ್ಲ. ಹಾಗಿರುವಾಗ ಮಲಮೂತ್ರದಿಂದಲೇ ಪೂರ್ಣವಾಗಿರುವ ಇದು ಏನು? (ನಿನ್ನ ಕನ್ಯೆಯ ಬಗ್ಗೆ ಏನು ಹೇಳಲಿ).
2.            ಮಾಗಂಧಿಯ - ಈಕೆಯಂತಹ ಸ್ತ್ರೀರತ್ನವನ್ನು ಬಹಳ ರಾಜರು ಪಡೆಯಲು ಇಚ್ಛಿಸುತ್ತಾರೆ. ತಾವು ಬಯಸುವುದಿಲ್ಲವಾದರೆ ನನಗೆ ದೃಷ್ಟಿಯ ಬಗ್ಗೆ, ಶೀಲವ್ರತದ ಬಗ್ಗೆ, ಜೀವನ ಹಾಗು ಪುನರ್ಜನ್ಮದಲ್ಲಿ ತಮ್ಮ ವಿಚಾರವೇನು ತಿಳಿಸಿ.
3.            ಭಗವಾನರು- ಧರ್ಮವನ್ನು ಚೆನ್ನಾಗಿ ಅರಿತು ನಾನು ಯಾವುದೇ ಮತವನ್ನು ಸ್ವೀಕರಿಸುವುದಿಲ್ಲ. ದೃಷ್ಟಿಗಳ ದುಷ್ಪರಿಣಾಮಗಳನ್ನು ನೋಡಿ, ಅದರಲ್ಲಿ ಆಸಕ್ತನಾಗದೆ ನಾನು ಪರಮ ಶಾಂತಿಯನ್ನು ಅನ್ವೇಷಿಸಿದೆ ಮತ್ತು ಅದನ್ನು ಪಡೆದೆ.
4.            ಮಾಗಂಧಿಯ - ಹೇ ಮುನಿ! ತಾವು ಅನುಗ್ರಹಪೂರ್ವಕವಾಗಿ ಕಲ್ಪಿತ ಮತಗಳ ಸಂಬಂಧವಾಗಿ ತಮ್ಮ ನಿರ್ಣಯವನ್ನು ತಿಳಿಸಿ. ಧೀರನಾದ ತಮ್ಮಿಂದ ಯಾವ ಪರಮಶಾಂತಿ ಪ್ರಾಪ್ತವಾಗಿದೆಯೋ ಅದನ್ನು ತಾವು ಹೇಗೆ ತಿಳಿಸುವಿರಿ.
5.            ಭಗವಾನರು - ದೃಷ್ಟಿಯಿಂದಾಗಲಿ, ಶ್ರುತಿಯಿಂದಾಗಲಿ, ಜ್ಞಾನದಿಂದಾಗಲಿ, ಶೀಲವ್ರತದಿಂದಾಗಲಿ ಮತ್ತು ಅಶ್ರುತಿಯಿಂದಾಗಲಿ, ಅಜ್ಞಾನದಿಂದಾಗಲಿ ಮತ್ತು ಅಶೀಲವ್ರತದಿಂದಾಗಲಿ, ಶುದ್ಧಿ ಆಗುವುದಿಲ್ಲ. ಇವುಗಳನ್ನು ತೊರೆದು ಇದರಲ್ಲಿ ಆಸಕ್ತನಾಗದೆ, ಶಾಂತ ಪುರುಷನು ಎಲ್ಲಿಯೂ ಲಿಪ್ತನಾಗದೆ, ಪುನರ್ಜನ್ಮದ ಇಚ್ಛೆ ಮಾಡದಿರಲಿ.
6.            ಮಾಗಂಧಿಯ - ಒಂದುವೇಳೆ, ದೃಷ್ಟಿ, ಶ್ರುತಿ, ಶೀಲವ್ರತದಿಂದ ಅಥವ ಆಶ್ರುತಿ, ಅಜ್ಞಾನ ಮತ್ತು ಅಶೀಲವ್ರತದಿಂದ ಶುದ್ಧಿ ಇಲ್ಲವಾದರೆ ನಾನು ಇಂತಹ (ತಮ್ಮ) ಧಮ್ಮವನ್ನು ಭ್ರಮಾತ್ಮಕ ಎಂದು ನಂಬುತ್ತೇನೆ. ಏಕೆಂದರೆ ಕೆಲವರು ದೃಷ್ಟಿಯಿಂದ ಶುದ್ಧಿ ಹೇಳುವರು.
7.            ಭಗವಾನರು - ದೃಷ್ಟಿಯಲ್ಲಿ ಆಶ್ರಿತನಾಗಿ, ಆಸಕ್ತನಾಗಿ ಮತ್ತು ಮೋಹಿತನಾಗಿ ನೀನು ಪ್ರಶ್ನಿಸುತ್ತಿರುವೆ. ನಿನಗೆ ಪರಮಶಾಂತಿಯ ಅಣು ಮಾತ್ರವೂ ಜ್ಞಾನವಿಲ್ಲ. ಆದ್ದರಿಂದಲೇ ನೀನು ಧಮ್ಮವನ್ನು ಭ್ರಮಾತ್ಮಕವೆಂದು ಅರಿಯುತ್ತೀಯೆ.
8.            ಯಾರು ತನ್ನನ್ನು ಪರರಿಗೆ ಸಮಾನವಾಗಿ ಅವರಿಗಿಂತ ಶ್ರೇಷ್ಠ ಅಥವಾ ನೀಚನೆಂದು ಅರಿಯುವನೋ ಅದರ ಕಾರಣದಿಂದಲೇ ವಿವಾದದಲ್ಲಿ ಬೀಳುತ್ತಾನೆ. ಯಾರು ಈ ಮೂರು ಅವಸ್ಥೆಯಲ್ಲೂ ಅವಿಚಲಿತರಾಗಿರುತ್ತಾರೋ, ಆತನಿಗೆ ಸಮಾನತೆಯ ಅಥವಾ ಉತ್ತಮತೆಯ ಯೋಚನೆಯೂ ಸಹಾ ಇರುವುದಿಲ್ಲ.
9.            ಯಾರಲ್ಲಿ ಸಮಾನತೆಯ ಅಥವಾ ವಿಷಮತೆಯ ಯೋಚನೆ ಇರುವುದಿಲ್ಲವೋ, ಆ ಬ್ರಾಹ್ಮಣನು ಯಾರಿಗಾಗಿ ಸತ್ಯ ಅಥವಾ ಅಸತ್ಯವನ್ನು ಪ್ರತಿಪಾದಿಸಲು ಹರಟೆ ಮಾಡಬೇಕು? ಆತನು ಯಾರೊಂದಿಗೆ ವಿವಾದವನ್ನು ಮಾಡುತ್ತಾನೆ?
10.          ಗೃಹವನ್ನು ತ್ಯಜಿಸಿ ಗೃಹತ್ಯಾಗಿಯಾಗಿ ಸಂಚರಿಸುತ್ತಿರುವವನಾದ ಮುನಿಯು ಗ್ರಾಮದಲ್ಲಿ ಬೆರೆಯದೆ ಕಾಮಭೋಗರಹಿತನಾಗಿ, ಪುನರ್ಜನ್ಮದ ಇಚ್ಛೆ ಮಾಡದವನು, ಜನರೊಂದಿಗೆ ವಿವಾದದ ಮಾತು ಆಡದಿರಲಿ.
11.          ಉತ್ತಮ ಪುರುಷನು ಯಾವ ದೃಷ್ಟಿಗಳಿಂದ ಬೇರೆಯಾಗಿ ವಾಸಿಸುತ್ತಿರುವನೋ, ಆತನು ಅದನ್ನೇ ಹಿಡಿದು ವಿವಾದವನ್ನು ಮಾಡದಿರಲಿ. ಯಾವರೀತಿ ಜಲದಲ್ಲಿ ಉತ್ಪನ್ನವಾಗುವ ಕಂಟಕಮಯ ಕಮಲವು ಜಲ ಹಾಗು ಕೆಸರಿನಿಂದ ಅಲಿಪ್ತವಾಗಿರುವುದೋ ಅದೇರೀತಿ ಶಾಂತಿವಾದಿಯು, ತೃಷ್ಣಾರಹಿತ ಮುನಿಯು ಕಾಮಭೋಗಗಳಿಂದ ಹಾಗು ಸಂಸಾರದಿಂದ ಲಿಪ್ತನಾಗುವುದಿಲ್ಲ.
12.          ಜ್ಞಾನಿ ಪುರುಷನು ಯಾವ ದೃಷ್ಟಿ ಅಥವಾ ವಿಚಾರತೆಯ ಕಾರಣದಿಂದ ಅಭಿಮಾನ ಪಡುವುದಿಲ್ಲವೋ ಮತ್ತು ಆತನು ಅದರಿಂದ ಲಿಪ್ತನಾಗುವುದಿಲ್ಲವೋ, ಆತನು ಯಾವುದೇ ಕರ್ಮವಿಶೇಷ ಅಥವಾ ಶ್ರುತಿಯ ಜಾಲದಲ್ಲಿ ಬೀಳುವುದಿಲ್ಲ. ಏಕೆಂದರೆ ಆತನು ದೃಷ್ಟಿಯ ಅಧೀನನಲ್ಲ.
13.          ಕಾಮಭೋಗದಿಂದ ವಿಮುಕ್ತನಾದ ಮನುಷ್ಯನಿಗೆ ಬಂಧನವೂ ಇಲ್ಲ, ಪ್ರಜ್ಞಾದ್ವಾರ ವಿಮುಕ್ತನಾದವನಿಗೆ ಮೋಹವಿಲ್ಲ. ಯಾರೂ ಕಾಮಭೋಗಗಳಿಂದ ಮತ್ತು ದೃಷ್ಟಿಯಿಂದ ಲಿಪ್ತನೋ ಆತನು ಸಂಘರ್ಷ ಮಾಡುತ್ತಾ ಲೋಕದಲ್ಲಿ ಸಂಚರಿಸುತ್ತಾನೆ.

ಇಲ್ಲಿಗೆ ಮಾಗಂಧಿಯ ಸುತ್ತ ಮುಗಿಯಿತು.

pasoora sutta in kannada 8. ಪಸೂರ ಸುತ್ತ

8. ಪಸೂರ ಸುತ್ತ
(ಜ್ಞಾನಿ ಪುರುಷ ವಿವಾದಗಳಲ್ಲಿ ಬೀಳುವುದಿಲ್ಲ)

1.            ಇದೇ ಶುದ್ಧಿ ಮಾರ್ಗವಾಗಿದೆ ಎಂದು ಕೆಲವರು ವಿವಾದ ಮಾಡುವರು. ಹಾಗು ಪರಧರ್ಮದಲ್ಲಿ ಶುದ್ಧಿಯಿಲ್ಲ ಎನ್ನುವರು. ಅವರು ಯಾವುದನ್ನು ನಂಬುವರೋ ಅದನ್ನೇ ಶ್ರೇಷ್ಠ ಎನ್ನುವರು. ಜನರು ವಿಭಿನ್ನ ಧರ್ಮಗಳನ್ನು ನಂಬುವರು.
2.            ಅವರು ವಿವಾದ ಕಾಮನೆಯಿಂದ ಪರಿಷತ್ತಿಗೆ ಹೋಗಿ ಒಬ್ಬರು ಇನ್ನೊಬ್ಬರಿಗೆ ಮೂರ್ಖರೆನ್ನುತ್ತಾರೆ. ವಿಭಿನ್ನ ಗುರುಗಳನ್ನು ನಂಬುತ್ತಾ ಅವರ ಪ್ರಶಂಸೆ ಮಾಡುತ್ತಾರೆ ಮತ್ತು ತಮಗೆ ಕುಶಲರೆಂದು ಭಾವಿಸುತ್ತಾರೆ.
3.            ಪರಿಷತ್ತಿನ ಮಧ್ಯದಲ್ಲಿ ಮಾತುಗಳಲ್ಲಿ ಸಂಲಗ್ನನಾದ ಆತನು ತನ್ನ ಪ್ರಶಂಸೆ ಬಯಸುತ್ತಾ ಮೊದಲೇ ನಿರೂಪಿತನಾಗುತ್ತಾನೆ. ನಂತರ ಸೋತು ಮೌನವಾಗುತ್ತಾನೆ. ಆ ಛಿದ್ರವೇಶಿ ತನ್ನ ನಿಂದೆಯಿಂದ ಕ್ರೋಧಿತನಾಗುತ್ತಾನೆ.
4.            ಪ್ರಶ್ನೆ ಕೇಳಲ್ಪಟ್ಟಿರುವವರೊಂದಿಗೆ ಪರಾಜಿತನಾಗಿ, ಪರಾಜಯವನ್ನು ತೋರಿಸಿದಾಗ ಆ ನಿರಸ್ತ್ರ ಮನುಷ್ಯನು ವಿಲಾಪಿಸುತ್ತಾನೆ, ಶೋಕಪಡುತ್ತಾನೆ ಮತ್ತು ಪ್ರತಿವಾದಿಯು ತನ್ನನ್ನು ಸೋಲಿಸಿದನು ಎಂದು ಯೋಚಿಸಿ ಪಶ್ಚಾತ್ತಾಪಪಟ್ಟು ಶೋಕಿಸುತ್ತಾನೆ.
5.            ಈ ವಿವಾದವು ಶ್ರಮಣರಲ್ಲಿ ಉಂಟಾಗುತ್ತದೆ. ಅವರಲ್ಲಿ ಪ್ರಹಾರ ಹಾಗು ಪ್ರತಿ ಪ್ರಹಾರ ಆಗುತ್ತದೆ. ಈ ವಿಷಯವನ್ನು ಕಂಡು ವಿವಾದದಿಂದ ರಹಿತರಾಗಲಿ. ಇದರಿಂದ ಪ್ರಶಂಸೆಯ ವಿನಃ ಯಾವ ಲಾಭವೂ ಇಲ್ಲ.
6.            ಆತನು ಪರಿಷತ್ತಿನ ಮಧ್ಯದಲ್ಲಿ ತನ್ನ ಮತದ ಸಮರ್ಥನೆಗಾಗಿ ಪ್ರಶಂಸಿತನಾಗುತ್ತಾನೆ. ಆತನು ಮನಕ್ಕೆ ಅನುಸಾರವಾಗಿ ತನ್ನ ಇಚ್ಛೆ ಪೂರ್ಣಗೊಳಿಸಿ ನಗುತ್ತಾನೆ ಹಾಗು ಅಭಿಮಾನಪಡುತ್ತಾನೆ.
7.            ಆತನು ಅಭಿಮಾನವನ್ನು ವಿನಾಶದ ಕಾರಣ ಎಂದು ಅರಿಯದೆ ಅಭಿಮಾನದ ಹಾಗು ಅಹಂನ ಮಾತನಾಡುತ್ತಾನೆ. ಇದನ್ನು ಕಂಡು ಸಹಾ ವಿವಾದದಲ್ಲಿ ಬೀಳದಿರಲಿ. ಕುಶಲ ವ್ಯಕ್ತಿಗಳು ಅದನ್ನು ಶುದ್ಧಿ ಎಂದು ಹೇಳಲಾರರು.
8.            ಹೇಗೆ ರಾಜನಿಂದ ಪ್ರೇರಿತನಾದ ಮಲ್ಲನು ಹೋರಾಟಕ್ಕಾಗಿ ಪ್ರತಿದ್ವಂದಿ ಮಲ್ಲನಿಗೆ ಯುದ್ಧಾಹ್ವಾನ ನೀಡುವನೋ ಹಾಗೆಯೇ ಪ್ರಸ್ತುತ ನೀನು ಅದೇರೀತಿ ಜನರ ಬಳಿಗೆ ಹೋಗು, ಏಕೆಂದರೆ ನನ್ನ ಬಳಿ ಯುದ್ಧ (ವಾದ) ಕ್ಕಾಗಿ ಏನೂ ಶೇಷವಿಲ್ಲ (ಆಸಕ್ತಿಯಿಲ್ಲ).
9.            ಯಾವ ದೃಷ್ಟಿಯನ್ನು ಗ್ರಹಣ ಮಾಡಿ ವಿವಾದ ಮಾಡುವರೋ ಮತ್ತು ಇದೇ ಸತ್ಯವೆಂದು ಹೇಳಿ ವಿವಾದ ಮಾಡುವರೋ, ಅವರಿಗೆ ಹೇಳಬೇಕಾಗಿರುವುದು ಏನೆಂದರೆ ವಿವಾದಕ್ಕಾಗಿ ನಿಮ್ಮ ಜೊತೆ ಮಾತನಾಡಲು ಇಲ್ಲಿ ಯಾರೂ ಇಲ್ಲ.
10.          ಕೆಲವರು ಒಂದು ದೃಷ್ಟಿಯಿಂದ ಇನ್ನೊಂದು ದೃಷ್ಟಿಯ ವಿರೋಧ ಮಾಡದೆ ಪ್ರತಿದ್ವಂದಿರಹಿತರಾಗುತ್ತಾರೆ. ಏನು ಪಸೂರನೇ ಶಿಕ್ಷಣ ಸಮಾಪ್ತನಾದ ನೀನು ಅವರನ್ನು ವಿವಾದದಲ್ಲಿ ಕಾಣಬಲ್ಲೆಯಾ?
11.          ತನ್ನ ದೃಷ್ಟಿ ಸಮರ್ಥನೆಗೆ ಅನೇಕ ವಿಷಯ ಯೋಚಿಸಿ ನಂತರ ಶುದ್ಧ ಪುರುಷನ ಬಳಿ ಹೋದರೂ ವಿವಾದದಲ್ಲಿ ಆತನನ್ನು ನೀ ಕಾಣಲಾರೆ.

ಇಲ್ಲಿಗೆ ಪಸೂರ ಸುತ್ತ ಮುಗಿಯಿತು.