Friday, 12 September 2014

Ratana sutta in kannada( the great ratana sutta for protection )

. ಚೂಳ ವಗ್ಗ
1. ರತನ ಸುತ್ತ
                (ಈ ಸುತ್ತವನ್ನು ಉಪದೇಶವನ್ನು ಭಗವಾನರು ವೈಶಾಲಿಯಲ್ಲಿ ಬೋಧಿಸಿದರು. ಆ ಸಮಯದಲ್ಲಿ ವೈಶಾಲಿಯಲ್ಲಿ ಜನರು ದುಭರ್ಿಕ್ಷ, ರೋಗ ಹಾಗು ಅಮನುಷ್ಯರಿಂದ ಪೀಡಿತರಾಗಿದ್ದರು. ಇದರಲ್ಲಿ ಬುದ್ಧ, ಧಮ್ಮ ಹಾಗು ಸಂಘದ ಗುಣ ವರ್ಣನೆಯಿದೆ.)

1.            ಈ ಪೃಥ್ವಿಯಲ್ಲಿರುವ ಹಾಗು ಆಕಾಶದಲ್ಲಿ ಸೇರಿರುವ ಎಲ್ಲಾ ಜೀವಿಗಳು ಪ್ರಸನ್ನರಾಗಲಿ ಹಾಗು ನಮ್ಮ ಈ ಸುಕಥನವನ್ನು (ಸುವಾಣಿ) ಆದರಪೂರ್ವಕವಾಗಿ ಕೇಳಲಿ.
2.            ಇದನ್ನು ಸರ್ವ ಜೀವಿಗಳು ಕೇಳಲಿ ಹಾಗು ಮಾನವರ ಮೇಲೆ ಮೈತ್ರಿ ತೋರಿಸಲಿ. ಅವರು ಸಹಾ ನಿಮಗೆ ಹಗಲು-ರಾತ್ರಿ ದಾನವನ್ನು ನೀಡುತ್ತಾರೆ. ಅದಕ್ಕಾಗಿ ನೀವು ಅಪ್ರಮತ್ತ (ಜಾಗರೂಕತೆ) ರಾಗಿ ರಕ್ಷಿಸಿರಿ.
3.            ಈ ಲೋಕದ ಅಥವಾ ಪರಲೋಕದ ಯಾವುದೇ ಧನವಿರಲಿ ಅಥವಾ ಸ್ವರ್ಗದ ಯಾವುದೇ ಉತ್ತಮ ರತ್ನಗಳಿರಲಿ ಅವ್ಯಾವುದು ಸಹಾ ಬುದ್ಧರ ಸಮಾನವಾಗಿ ಶ್ರೇಷ್ಠವಾಗಿಲ್ಲ. ಇದು ಬುದ್ಧರಲ್ಲಿರುವ ಅತ್ಯುತ್ತಮ ರತ್ನವಾಗಿದೆ (ಬುದ್ಧರ ಶ್ರೇಷ್ಠ ಅತ್ಯುತ್ತಮ ರತ್ನವಾಗಿದೆ). ಈ ಸತ್ಯ ವಚನದಿಂದ ಸ್ವಸ್ತಿಯಾಗಲಿ.
4.            ಯಾವ ಅತ್ಯುತ್ತಮ ಅಮೃತ, ವಿರಾಗಪದವಾದ ನಿಬ್ಬಾಣವನ್ನು ಸಮಾಹಿತದಿಂದ ಶಾಕ್ಯ ಮುನಿಯು ಅರಿತರೊ, ಆ ಶ್ರೇಷ್ಠ ಧರ್ಮದ ಸಮಾನವಾಗಿ ಬೇರೆ ಯಾವುದೂ ಶ್ರೇಷ್ಠವಲ್ಲ. ಆ ಧರ್ಮವು ಅತ್ಯುತ್ತಮ ರತ್ನವಾಗಿದೆ. ಈ ಸತ್ಯವಚನದಿಂದ ಸರ್ವರಿಗೂ ಸ್ವಸ್ತಿಯಾಗಲಿ.
5.            ಪರಮಶ್ರೇಷ್ಠ ಭಗವಾನ್ ಬುದ್ಧರು ಯಾವ ಸಮಾಧಿಯನ್ನು (ವಿಪಶ್ಶನ) ತತ್ಕಾಲದಿಂದ ಫಲಪ್ರದ ಎಂದು ಹೇಳಿದರೊ, ಆ ಸಮಾಧಿಯ ಸಮಾನವಾಗಿ ಬೇರಾವುದೂ ಇಲ್ಲ. ಇದು ಧಮ್ಮದ ಅತಿ ಉತ್ತಮ ರತ್ನವಾಗಿದೆ. ಈ ಸತ್ಯವಚನದಿಂದ ಸರ್ವರಿಗೂ ಸ್ವಸ್ತಿಯಾಗಲಿ.
6.            ಬುದ್ಧ ಭಗವಾನರಿಂದ ಪ್ರಶಂಸಿತರಾದ ಎಂಟು ಪ್ರಕಾರದ ವ್ಯಕ್ತಿಗಳು ಇದ್ದಾರೆ. ಇವರು ನಾಲ್ಕು ಜೊತೆ ಇರುವರು. ಆ ಬುದ್ಧರ ಶಿಷ್ಯರು ದಕ್ಷಿಣೆಗೆ, ದಾನಕ್ಕೆ ಯೋಗ್ಯರಾಗಿದ್ದಾರೆ. ಹಾಗೆ ಅವರಿಗೆ ದಾನ ನೀಡಿದ್ದು ಮಹಾಫಲವನ್ನು ಪ್ರಾಪ್ತಿಯಾಗಿಸುತ್ತದೆ. ಇದು ಸಂಘದ ಅತಿ ಉತ್ತಮ ರತ್ನವಾಗಿದೆ. ಈ ಸತ್ಯವಚನದಿಂದ ಸ್ವಸ್ತಿಯಾಗಲಿ.
7.            ಯಾವ ಗೋತಮ ಬುದ್ಧ ಭಗವಾನರ ಶಾಸನದಿಂದ ಸ್ಫೂತರ್ಿಹೊಂದಿ ತೃಷ್ಣಾರಹಿತರಾಗಿ, ದೃಢಮನಸ್ಕರಾಗಿ, ಪ್ರಾಪ್ತಿಮಾಡಲು ಕಡುಕಷ್ಟ ಸಾಧ್ಯವಾಗಿರುವುದನ್ನು ಪ್ರಾಪ್ತಿಮಾಡಿ, ಅಮರತ್ವ ಗಳಿಸಿ ವಿಮುಕ್ತಿ ರಸವನ್ನು ಅಸ್ವಾದಿಸಿದ್ದಾರೆ. ಇದು ಸಂಘದ ಅತ್ಯುತ್ತಮ ರತ್ನವಾಗಿದೆ. ಈ ಸತ್ಯವಚನದಿಂದ ಸರ್ವರಿಗೂ ಸ್ವಸ್ತಿಯಾಗಲಿ.
8.            ಯಾವ ಭೂಮಿಯು ಇಂದ್ರಕೀಲದಂತೆ ಅತಿ ದೃಢವಾಗಿ ಸ್ಥಾಪಿತವಾಗಿದೆಯೋ, ವಾಯುವಿನ ವೇಗಕ್ಕೆ ಕಂಪನಮಯವಾಗುವುದಿಲ್ಲವೊ, ಹಾಗೆಯೇ ಸತ್ಪುರುಷನು ಸಹಾ ನಾಲ್ಕು ಮಹಾನ್ ಸತ್ಯಗಳನ್ನು ಆಳವಾಗಿ ಅರಿತು ಜ್ಞಾನದರ್ಶನ ಮಾಡುತ್ತಾನೋ ಆತನು ಸಹಾ ಸಂಘದ ಉತ್ತಮರತ್ನ - ಈ ಸತ್ಯವಚನದಿಂದ ಸರ್ವರಿಗೂ ಸ್ತಸ್ತಿಯಾಗಲಿ.
9.            ಯಾರು ಪರಮ ಗಂಭೀರ ಪ್ರಜ್ಞಾವಾನ್ ಬುದ್ಧರಿಂದ ಪ್ರಕಾಶಿಸಲ್ಪಟ್ಟ ಆರ್ಯ ಸತ್ಯಗಳನ್ನು ಮನನ ಮಾಡಿದ್ದಾರೋ ಅವರು ತೀರಾ ಎಚ್ಚರತಪ್ಪಿದ್ದರೂ ಎಂಟನೆಯ ಜನ್ಮ ಪಡೆಯುವುದಿಲ್ಲ. ಇದು ಸಂಘದ ಉತ್ತಮ ರತ್ನವಾಗಿದೆ. ಈ ಸತ್ಯವಚನದಿಂದ ಸರ್ವರಿಗೂ ಸ್ವಸ್ತಿಯಾಗಲಿ.
10-11. ವಿಶುದ್ಧಿ ಜ್ಞಾನ ಪ್ರಾಪ್ತಿಯ ಜೊತೆಗೆ ಆತನ ಮೂರು ಬಂಧನಗಳಾದ ತನ್ನ ಆತ್ಮ (ಅಸ್ತಿತ್ವ) ವೆಂಬ ಮಿಥ್ಯಾದೃಷ್ಟಿ, ಸಂದೇಹ ಮತ್ತು ಮೂಢಾಚರಣೆಗಳು ಕತ್ತರಿಸಿ ಹೋಗುತ್ತವೆ. ಹಾಗು ನಾಲ್ಕು ಅಪಾಯಗಳಿಂದ (ದುರ್ಗತಿ) ಮುಕ್ತನಾಗುತ್ತಾನೆ. ಹಾಗು ಆರು ಘೋರ ಪಾಪಕರ್ಮಗಳನ್ನು ಎಂದಿಗೂ ಆಚರಣೆ ಮಾಡುವುದಿಲ್ಲ. ಇದು ಸಹಾ ಸಂಘದ ಉತ್ತಮರತ್ನವಾಗಿದೆ. ಈ ಸತ್ಯವಚನದಿಂದ ಸರ್ವರಿಗೂ ಸ್ವಸ್ತಿಯಾಗಲಿ.
12.          ಆತನು ಶರೀರದಿಂದ, ವಚನದಿಂದ, ಅಥವಾ ಚಿತ್ತದಿಂದ ಪಾಪ ಮಾಡಿದರೂ ಆತನು ಅದನ್ನು ಮರೆಮಾಡಲು ಸಾಧ್ಯವಿಲ್ಲ. ಏಕೆಂದರೆ ನಿಬ್ಬಾಣದಶರ್ಿಯು ಬಚ್ಚಿಡಲು ಅಸಮರ್ಥನಾಗುತ್ತಾನೆ. ಇದು ಸಹಾ ಸಂಘದ ಉತ್ತಮ ರತ್ನವಾಗಿದೆ. ಈ ಸತ್ಯವಚನದಿಂದ ಸರ್ವರಿಗೂ ಸ್ವಸ್ತಿಯಾಗಲಿ.
13.          ವಸಂತ ಋತುವಿನ ಪ್ರಾರಂಭದಲ್ಲಿ ಹೇಗೆ ವನವು ಹಾಗು ವೃಕ್ಷಗಳು ಪುಷ್ಠಿಯಾಗುವವೋ, ಹಾಗೆಯೇ ಬುದ್ಧ ಭಗವಾನರು ಶ್ರೇಷ್ಠ ಧರ್ಮದ ಉಪದೇಶ ನೀಡಿದ್ದಾರೆ. ಇದು ಸಹಾ ಸಂಘದಲ್ಲಿ ಉತ್ತಮ ರತ್ನವಾಗಿದೆ. ಈ ಸತ್ಯವಚನದಿಂದ ಸರ್ವರಿಗೂ ಸ್ವಸ್ತಿಯಾಗಲಿ.
14.          ಪರಮಶ್ರೇಷ್ಠ ನಿಬ್ಬಾಣದ ದಾನಿಗಳು, ಸುಶ್ರೇಷ್ಠ ಧರ್ಮದ ಜ್ಞಾನಿಗಳು ಮಹಾ ಮಾರ್ಗದ ನಿದರ್ೆಶಕರು, ಶ್ರೇಷ್ಠ ಲೋಕೋತ್ತರ ಬುದ್ಧರು ಅತ್ಯುತ್ತಮ ಧರ್ಮದ ಉಪದೇಶ ನೀಡಿದ್ದಾರೆ. ಇದು ಸಹಾ ಸಂಘದ ಅತ್ಯುತ್ತಮ ರತ್ನವಾಗಿದೆ. ಈ ಸತ್ಯವಚನದಿಂದ ಸರ್ವರಿಗೂ ಸ್ವಸ್ತಿಯಾಗಲಿ.
15.          ಹಿಂದಿನದು (ಹಳೆಯ) ಕರ್ಮ (ಚಿತ್ತ) ಕ್ಷೀಣವಾಯಿತು. ಹೊಸದು ಎಂದಿಗೂ ಉದಯವಾಗುವುದಿಲ್ಲ. ಆತನ ಚಿತ್ತವು ಪುನರ್ಜನ್ಮದಿಂದ ಮುಕ್ತಿ ಪಡೆಯಿತು. ಆತನು ಕ್ಷಯಬೀಜನಾದನು, ಆತನ ತೃಷ್ಣೆಯು ಅಂತ್ಯಗೊಂಡಿತು. ಅವನು ಈ ಪ್ರದೀಪದಂತೆ ನಿಬ್ಬಾಣ ಪ್ರಾಪ್ತಿಮಾಡುವನು. ಇದು ಸಹಾ ಸಂಘದ ಅತ್ಯುತ್ತಮ ರತ್ನವಾಗಿದೆ. ಈ ಸತ್ಯವಚನದಿಂದ ಸರ್ವರಿಗೂ ಸ್ವಸ್ತಿಯಾಗಲಿ.
16.          ಈ ಸಮಯದಲ್ಲಿ ಪೃಥ್ವಿಯ ಅಥವಾ ಅಂತರಿಕ್ಷದ ಯಾವುದೇ  ಜೀವಿಗಳು ಇಲ್ಲಿ ನೆರೆದಿರಲಿ, ತಥಾಗತರು ಆ ಎಲ್ಲಾ ದೇವ ಮನುಷ್ಯರಿಂದ ಪೂಜಿತರಾಗಿದ್ದಾರೆ. ನಾವು ಬುದ್ಧರಿಗೆ ವಂದಿಸುತ್ತೇವೆ, ಸರ್ವರಿಗೂ ಸ್ವಸ್ತಿಯಾಗಲಿ.
17.          ಈ ಸಮಯದಲ್ಲಿ ಪೃಥ್ವಿಯ ಅಥವಾ ಅಂತರಿಕ್ಷದ ಯಾವುದೇ  ಜೀವಿಗಳು ಇಲ್ಲಿ ನೆರೆದಿರಲಿ, ತಥಾಗತರು ಆ ಎಲ್ಲಾ ದೇವ ಮನುಷ್ಯರಿಂದ ಪೂಜಿತರಾಗಿದ್ದಾರೆ. ನಾವು ಧಮ್ಮಕ್ಕೆ ವಂದಿಸುತ್ತೇವೆ, ಸರ್ವರಿಗೂ ಸ್ವಸ್ತಿಯಾಗಲಿ.
18.          ಈ ಸಮಯದಲ್ಲಿ ಪೃಥ್ವಿಯ ಅಥವಾ ಅಂತರಿಕ್ಷದ ಯಾವುದೇ  ಜೀವಿಗಳು ಇಲ್ಲಿ ನೆರೆದಿರಲಿ, ತಥಾಗತರು ಆ ಎಲ್ಲಾ ದೇವ ಮನುಷ್ಯರಿಂದ ಪೂಜಿತರಾಗಿದ್ದಾರೆ. ನಾವು ಸಂಘಕ್ಕೆ ವಂದಿಸುತ್ತೇವೆ, ಸರ್ವರಿಗೂ ಸ್ವಸ್ತಿಯಾಗಲಿ.

ಇಲ್ಲಿಗೆ ರತನ ಸುತ್ತ ಮುಗಿಯಿತು.

Friday, 5 September 2014

kalama sutta in kannada( famous sutta for rational)

ಕಾಲಾಮ (ವಿಚಾರಶೀಲತೆಯ ಕುರಿತು) ಸುತ್ತ
                ನಾನು ಹೀಗೆ ಕೇಳಿರುವೆ, ಭಗವಾನರು ಒಮ್ಮೆ ಕೋಶಲ ರಾಜ್ಯದ ಕೇಸಪುತ್ತ ಜಿಲ್ಲೆಗೆ ಬೃಹತ್ ಸಮೂಹದೊಂದಿಗೆ ಬಂದರು. ಕೇಸಪುತ್ತರು ಕಾಲಾಮರಿಗೆ ಭಗವಾನರು ಅಲ್ಲಿಗೆ ಬಂದಿರುವುದು ತಿಳಿಯಿತು. ಭಗವಾನರ ಖ್ಯಾತಿ ಆಲಿಸಿ ಎಲ್ಲರೂ ಭಗವಾನರಲ್ಲಿಗೆ ಬಂದು ವಂದಿಸಿ, ಕುಶಲಕ್ಷೇಮವನ್ನು ವಿಚಾರಿಸಿ, ಗೌರವಾರ್ಪಣೆ ಮಾಡಿ ಕುಳಿತರು. ಆಗ ಕಾಲಾಮರು ಭಗವಾನರಲ್ಲಿ ಹೀಗೆ ಪ್ರಶ್ನಿಸಿದರು:

                ಭಂತೆ ಇಲ್ಲಿಗೆ ಕೆಲವು ಸಮಣ ಬ್ರಾಹ್ಮಣರು ಬರುತ್ತಾರೆ, ತಮ್ಮ ಸಿದ್ದಾಂತವನ್ನು ವಿವರಿಸುತ್ತಾರೆ, ಬಣ್ಣಿಸುತ್ತಾರೆ. ಆದರೆ ಹಾಗೆಯೇ ಪರರ ಸಿದ್ಧಾಂತಗಳನ್ನು ಖಂಡಿಸುತ್ತಾರೆ, ನಿಂದಿಸುತ್ತಾರೆ, ನಿರಾಕರಿಸುತ್ತಾರೆ. ಅದೇರೀತಿಯಲ್ಲೇ ಬೇರೆ ಕೆಲವು ಸಮಣ ಬ್ರಾಹ್ಮಣರು ಸಹಾ ಬಂದು ಹಾಗೇ ಅದೇರೀತಿ ಮಾಡುತ್ತಾರೆ. ಹೀಗೆ ವಿಭಿನ್ನವಾದ ಸಿದ್ಧಾಂತಗಳಿಂದಾಗಿ ನಮ್ಮಲ್ಲಿ ಧ್ವಂದ್ವ ಉಂಟಾಗಿದೆ, ಸಂಶಯ ಉಂಟಾಗಿದೆ, ನಮಗೆ ಅವರಲ್ಲಿ ಸತ್ಯ ಹೇಳುತ್ತಿರುವವರು ಯಾರು? ಮಿಥ್ಯ ನುಡಿಯುತ್ತಿರುವವರು ಯಾರು ತಿಳಿಯದಾಗಿದೆ. ಇದನ್ನು ನೀವೇ ನಮಗೆ ಪರಿಹರಿಸಬೇಕು ಭಂತೆ.
                ಓ ಕಾಲಾಮರೇ, ನೀವು ಸಂಶಯಸ್ತ ವಿಷಯಗಳಲ್ಲಿಯೇ ಸಂಶಯಪಡುತ್ತಿರುವಿರಿ, ದ್ವ್ವಂದ್ವವುಳ್ಳ ವಿಷಯದಲ್ಲೇ ಧ್ವಂದ್ವಪಡುತ್ತಿರುವಿರಿ. ಸಂಶಯಸ್ತ ವಿಷಯಗಳಲ್ಲಿ ದ್ವಂದ್ವತೆ ಆಗುವುದು.
                ಈಗ ನೋಡಿ ಕಾಲಾಮರೇ, ಸುದ್ದಿಗಳಿಗಾಗಲಿ ಅಥವಾ ಸಂಪ್ರದಾಯಕ್ಕಾಗಲಿ ಅಥವಾ ಅಸಂಪ್ರದಾಯ ಸಿದ್ಧಾಂತಕ್ಕಾಗಲಿ ನಂಬದಿರಿ. ಅದರಲ್ಲೇ ದಾರಿ ತಪ್ಪಬೇಡಿ. ಧಮ್ಮಗ್ರಂಥಗಳಲ್ಲಿದೆ ಎಂದಾಗಲಿ, ಅಥವಾ ತರ್ಕ ಸಮ್ಮತ ಎಂದಾಗಲಿ, ಊಹೆಗೆ ನಿಲುಕುತ್ತದೆ ಎಂದಾಗಲಿ, ಪಯರ್ಾಯಾಲೋಚಿಸಿ ಸಿದ್ಧವಾದುದೆಂದಾಗಲಿ, ಚಿಂತನೆ ಮಾಡಿ ಸಿದ್ಧವಾದ ಸಿದ್ಧಾಂತ ಎಂದಾಗಲಿ, ಚೆನ್ನಾಗಿ ಕಾಣಿಸುತ್ತದೆ ಎಂದಾಗಲಿ, ಇದು ಗೌರವಾರ್ಹ ಗುರುವಿನಿಂದ ಬಂದಿದೆ ಎಂದಾಗಲಿ ನಂಬಬೇಡಿ. ಆದರೆ ಕಾಲಾಮರೇ, ಯಾವಾಗ ನೀವೇ ಚಿಂತನೆ ಮಾಡಿದಾಗ, ನಿಮಗೆ ಇವು ಅನರ್ಥಕಾರಿ, ನಿಂದನೀಯ, ಜ್ಞಾನಿಗಳಿಂದ ನಿಷೇಧಿಸಲ್ಪಡುತ್ತದೆ ಎಂದು ಗೊತ್ತಾದಾಗ, ಇವುಗಳ ಪಾಲನೆಯಿಂದ ದುಃಖವಾಗುತ್ತದೆ ಎಂದು ಅರಿವಾದಾಗ ಅದನ್ನು ತಿರಸ್ಕರಿಸಿ.
                ಈಗ ಕಾಲಾಮರೇ, ಒಬ್ಬನಲ್ಲಿ ಲೋಭ ಉಂಟಾದಾಗ (ಅಥವಾ ದ್ವೇಷ ಉಂಟಾದಾಗ... ಅಥವಾ ಮೋಹ ಉಂಟಾದಾಗ) ಅದು ಆತನಿಗೆ ಲಾಭ ತರುತ್ತದೆಯೋ ಅಥವಾ ನಷ್ಟವನ್ನು ಉಂಟುಮಾಡುತ್ತದೆಯೋ?
                ಅದು ನಷ್ಟವನ್ನು, ಹಾನಿಯನ್ನು ತರುತ್ತದೆ ಭಗವಾನರೇ.
                ಕಾಲಾಮರೇ, ಈಗ ಆತನು ಲೋಭಿಯಾದಾಗ (ದ್ವೇಷಿಯಾದಾಗ/ಮೋಹಿಯಾದಾಗ) ಆತನ ಚಿತ್ತವು ನಿಯಂತ್ರಣ ತಪ್ಪುತ್ತದೆ, ಆಗ ಆತನು ಜೀವಹತ್ಯೆ, ಕಳ್ಳತನ, ವ್ಯಭಿಚಾರ, ಸುಳ್ಳು, ಮದ್ಯಪಾನವೆಲ್ಲಾ ಮಾಡುತ್ತಾನೆ. ಹಾಗೆಯೇ ಪರರಿಗೂ ಪ್ರೋತ್ಸಾಹ ನೀಡುತ್ತಾನೆ. ಈ ರೀತಿಯಾಗಿ ಭವಿಷ್ಯದ ದೀರ್ಘ ದುಃಖ ಉಂಟಾಗಲು ಕಾರಣಕರ್ತನಾಗುತ್ತಾನೆ ಅಲ್ಲವೇ?
                ಹೌದು ಭಗವಾನರೇ.
                ಈಗ ನಿಮಗೆ ಹೇಗೆ ಅನಿಸುತ್ತದೆ ಕಾಲಾಮರೇ, ಇವು ಲಾಭಕಾರಿಯೋ ಅಥವಾ ನಷ್ಟಕಾರಿಯೋ?
                ಇವು ನಷ್ಟಕಾರಿ ಭಗವಾನ್.
                ಇವು ನಿಂದನೀಯವೋ ಅಥವಾ ಅಲ್ಲವೋ.
                ನಿಂದನೀಯವಾದುದು ಭಗವಾನ್.
                ಇವು ಜ್ಞಾನಿಗಳಿಂದಲೇ ನಿಷೇಧಿಸಲ್ಪಡುವುದು ಅಲ್ಲವೇ?
                ಹೌದು ಭಗವಾನ್.
                ಇವುಗಳನ್ನು ಪರಿಪಾಲಿಸಿದಾಗ ದೀರ್ಘಕಾಲ ದುಃಖ, ನಷ್ಟ ಉಂಟಾಗುತ್ತದೆ ಅಲ್ಲವೇ?
                ಹೌದು ಭಂತೆ.
                ಈಗ ಕಾಲಾಮರೇ, ಈ ಲೋಭದಿಂದ (ದ್ವೇಷದಿಂದ ಅಥವಾ ಮೋಹದಿಂದ) ಮುಕ್ತನಾದರೆ ಆತನಿಗೆ ಲಾಭವಾಗುತ್ತದೋ ಅಥವಾ ನಷ್ಟವಾಗುತ್ತದೋ?
                ಲಾಭವಾಗುತ್ತದೆ ಭಂತೆ.
                ಈಗ ಇಂತಹ ಮನುಷ್ಯನು ಲೋಭದಿಂದ, ದ್ವೇಷದಿಂದ ಮತ್ತು ಮೋಹದಿಂದ ಮುಕ್ತನಾದಾಗ, ಆತನು ಜೀವಹತ್ಯೆಯಾಗಲಿ, ಕಳ್ಳತನವಾಗಲಿ, ವ್ಯಭಿಚಾರವಾಗಲಿ, ಸುಳ್ಳಾಗಲಿ, ನುಡಿಯಲಾರನು, ಮದ್ಯ ಸೇವಿಸಲಾರನು. ಹಾಗೆಯೇ ಪರರಿಗೂ ಆತನು ದಾರಿ ತಪ್ಪಿಸಲಾರನು. ಹೀಗಿರುವಾಗ ಆತನಿಗೆ ದುಃಖವಿಲ್ಲದೆ, ನಷ್ಟವಿಲ್ಲದೆ ಸುಖಿಯಾಗಿ ಇರುತ್ತಾನೆ ಅಲ್ಲವೆ.
                ಹೌದು ಭಂತೆ.
                ಈಗ ಕಾಲಾಮರೇ, ನೀವೇನು ಯೋಚಿಸುವಿರಿ? ಲೋಭದಿಂದ, ದ್ವೇಷದಿಂದ ಮತ್ತು ಮೋಹದಿಂದ ಮುಕ್ತನಾಗುವುದು ಲಾಭಕಾರಿಯೋ ಅಥವಾ ನಷ್ಟಕಾರಿಯೋ?
                ಲಾಭಕಾರಿ ಭಂತೆ.
                ಇವು ನಿಂದನೀಯವೋ ಅಥವಾ ಅಲ್ಲವೋ?
                ಇವು ನಿಂದನೀಯವಲ್ಲ.
                ಜ್ಞಾನಿಗಳಿಂದ ನಿರಾಕರಿಸಲ್ಪಡುತ್ತದೋ ಅಥವಾ ಪ್ರಶಂಸಿಸಲ್ಪಡುತ್ತದೋ?
                ಪ್ರಶಂಸಿಲ್ಪಡುತ್ತದೆ ಭಂತೆ.
                ಹೀಗೆ ಪರಿಪಾಲಿತವಾದಾಗ ಅವು ಸುಖಕಾರಿಯೋ ಅಥವಾ ಅಲ್ಲವೋ.
                ಸುಖಕಾರಿ ಭಂತೆ, ಸುಖವನ್ನು ತರುತ್ತದೆ.
                ಈಗ ಕಾಲಾಮರೇ, ಯಾವ ಆರ್ಯ ಶ್ರಾವಕನು ಹೀಗೆ ಲೋಭದಿಂದ, ದ್ವೇಷದಿಂದ ಮತ್ತು ಮೋಹದಿಂದ ಮುಕ್ತನಾದಾಗ ಆತನು ದಿಗ್ಭ್ರಮೆಪಡುವುದಿಲ್ಲ. ಬದಲಾಗಿ ಸ್ವನಿಯಂತ್ರಣವುಳ್ಳವನಾಗುತ್ತಾನೆ ಮತ್ತು ಸ್ಮೃತಿವಂತನಾಗುತ್ತಾನೆ ಮತ್ತು ಚಿತ್ತದಲ್ಲಿ ಮೈತ್ರಿಯಿಂದ ಕೂಡಿರುತ್ತಾನೆ, ಕರುಣೆಯಿಂದ ಕೂಡಿರುತ್ತಾನೆ, ಮುದಿತಾದಿಂದ ಕೂಡಿರುತ್ತಾನೆ, ಸಮಚಿತ್ತತೆಯಿಂದ ಕೂಡಿರುತ್ತಾನೆ. ಇದೇರೀತಿಯ ಭಾವನೆಯಿಂದ ಆತನು ಒಂದು ದಿಕ್ಕಿಗೆ ಹರಡುತ್ತಾನೆ. ಹಾಗೆಯೇ ಎಲ್ಲಾ ದಿಕ್ಕುಗಳಿಗೂ ಹರಡುತ್ತಾನೆ. ಈ ರೀತಿಯಾಗಿ ಆರ್ಯಶ್ರಾವಕನು ಚಿತ್ತದಿಂದ, ದ್ವೇಷ, ವಿರೋಧ, ಚಿತ್ತಕ್ಲೇಶಗಳಿಂದ ಮುಕ್ತನಾಗಿ, ಪರಿಶುದ್ಧನಾಗುತ್ತಾನೆ. ಅಂತಹುದರಿಂದ ಈ ಜನ್ಮದಲ್ಲೇ ನಾಲ್ಕು ಸಮಾಧಾನವನ್ನು ಕಾಣಬಹುದು.
1.            ಪರಲೋಕವಿದ್ದರೆ ಕರ್ಮಫಲವು ಸಿಗುವುದಿದ್ದರೆ ನಮ್ಮ ಒಳ್ಳೆಯ ಕಾರ್ಯಗಳನ್ನು ಮಾಡಿರುವೆ, ನನಗೆ ಸುಗತಿಯೇ ಸಿಗುವುದು.
2.            ಪರಲೋಕವಿಲ್ಲದಿದ್ದರೆ, ಕರ್ಮಫಲ ಸಿಗದಿದ್ದರೆ ಈ ಜನ್ಮದಲ್ಲೇ ದ್ವೇಷರಹಿತನಾಗಿ, ದುಃಖರಹಿತನಾಗಿ, ಕ್ಲೇಷರಹಿತನಾಗಿ ಸುಖಿಯಾಗಿ ಇರುತ್ತೇನೆ.
3.            ಕರ್ಮಫಲ ಇರುವುದಾದರೆ, ನಾನು ಹಿಂದೆ ಪಾಪ ಮಾಡಿದ್ದರೂ, ಈಗ ನಾನು ಯಾರ ಅಹಿತವನ್ನು ಬಯಸುತ್ತಿಲ್ಲ. ಹೀಗಿರುವಾಗ ದುಃಖವು ನನಗೆ ಹೇಗೆತಾನೆ ತಟ್ಟಿತು.
4.            ಕರ್ಮಫಲ ಸಿಗುವುದಾದರೆ, ನನ್ನಿಂದ ಯಾವ ಪಾಪವು ನಡೆದಿಲ್ಲ, ಹೀಗೆ ಎರಡು ರೀತಿಯಲ್ಲಿ ಪರಿಶುದ್ಧನಾಗಿಯೇ ಇರುವೆನು.
                ಹೀಗೆ ಕಾಲಾಮರೆ, ಆ ಆರ್ಯಶ್ರಾವಕನು ಚಿತ್ತಕ್ಲೇಷಗಳಿಂದ, ದ್ವೇಷದಿಂದ, ವಿಮುಕ್ತನಾಗಿ ನಿರ್ಮಲನಾಗಿ ಈ ಜೀವಿತದಲ್ಲೇ ಈ ನಾಲ್ಕು ಸಮಾಧಾನ ಪಡೆಯುತ್ತಾನೆ.
                ಅದ್ಭುತ ಭಂತೆ, ನಾವು ಇಂದಿನಿಂದ ತಮಗೆ, ಧಮ್ಮಕ್ಕೆ ಮತ್ತು ಸಂಘಕ್ಕೆ ಶರಣು ಹೋಗುವೆವು. ಭಗವಾನರು ನಮ್ಮನ್ನು ತಮ್ಮ ಉಪಾಸಕರೆಂದು ಸ್ವೀಕರಿಸಲಿ. ನಾವು ಜೀವಿತ ಪರ್ಯಂತ ತ್ರಿಶರಣು ಹೋಗುವೆವು.
                ಕಾಲಾಮ ಸುತ್ತದಲ್ಲಿ ನಾವು ಅರಿಯುವಂತಹುದು ಏನೆಂದರೆ ಸಿದ್ಧಾಂತಗಳಿಗೆ, ಸಂಪ್ರದಾಯಕ್ಕೆ, ಅಸಂಪ್ರದಾಯಕ್ಕೆ, ತರ್ಕ, ಊಹೆ, ಸುದ್ದಿಗಳಿಗೆ, ಪೂಜ್ಯ ಗ್ರಂಥಗಳಿಗೆ, ಪೂಜ್ಯ ಗುರುಗಳಿಗೂ ನಂಬಬಾರದು. ಏಕೆಂದರೆ ನಾವು ಕಂಡಂತೆ ಇವುಗಳಲ್ಲಿ ಎಷ್ಟೋ ತಪ್ಪಿರುತ್ತದೆ, ಅಹಿತ ತರುವಂತಹುದು ಇರುತ್ತದೆ. ಆದ್ದರಿಂದ ನಾವು ವಿಚಾರಶೀಲರಾಗಿ ಸತ್ಯವನ್ನೇ ಸ್ವೀಕರಿಸಬೇಕು.
                ಎರಡನೆಯ ವಿಷಯ ಏನೆಂದರೆ ಭಗವಾನರ ಬೋಧನೆಯಲ್ಲಿ ಇಲ್ಲಿ ಲೋಭರಹಿತ, ದ್ವೇಷರಹಿತ ಮತ್ತು ಮೋಹರಹಿತರಾಗಿರುವುದು ಮತ್ತು ಮೈತ್ರಿ, ಕರುಣೆ, ಮುದಿತಾ ಮತ್ತು ಸಮಚಿತ್ತತೆಯಿಂದ ಕೂಡಿರುವುದು.

                ನಿಜಕ್ಕೂ ಈ ರೀತಿಯ ಶ್ರೇಷ್ಠ ಜೀವನದಿಂದಾಗಿ ಇಹ ಮತ್ತು ಪರರಲ್ಲಿಯೂ ಸಹಾ ಸುಖ ಪ್ರಾಪ್ತಿಯೇ ಆಗುವುದು.

Saturday, 30 August 2014

muni sutta in kannada (who is muni or monk ? )

.

12. ಮುನಿ ಸುತ್ತ
(ಮುನಿ ಯಾರು ?)
1. ಪ್ರೀತಿ ಸಂಬಂಧಗಳ ಸಲಿಗೆಯಿಂದ ಭಯ ಉತ್ಪನ್ನವಾಗುತ್ತದೆ. ಗೃಹಸ್ಥ ಜೀವನದಿಂದ ರಜ (ರಾಗ, ದ್ವೇಷ, ಮೋಹ) ಉತ್ಪನ್ನವಾಗುತ್ತದೆ. ಆದ್ದರಿಂದ ಬೆರೆಯುವಿಕೆಯನ್ನು (ಪ್ರೇಮ-ಸ್ನೇಹ) ಮಾಡದೆ ಹಾಗು ಗೃಹಸ್ಥ ಜೀವನದಲ್ಲಿ ಇರದೆ ಇರುವುದೇ ಉತ್ತಮವಾಗಿದೆ. ಇದನ್ನು ಮುನಿಗಳು ದಶರ್ಿಸಿದ್ದಾರೆ.
2. ಯಾರು ಉತ್ಪನ್ನವಾದ ಪಾಪವನ್ನು ಕತ್ತರಿಸಿ ಮತ್ತೆ ಅದರಲ್ಲಿ ಅಂಟುವುದಿಲ್ಲವೊ, ಹಾಗು ಅದರ ಉತ್ಪನ್ನವನ್ನು ಬೆಳೆಸುವುದಿಲ್ಲವೊ, ಆತನನ್ನು ಏಕಾಂಗಿ ಮುನಿ ಎನ್ನುತ್ತಾರೆ. ಆ ಮಹಾ ಋಷಿಯು ಶಾಂತಿಪಥ (ನಿಬ್ಬಾಣ)ವನ್ನು ನೋಡಿದ್ದಾನೆ.
3. ವಸ್ತುಸ್ಥಿತಿಯನ್ನು ಚೆನ್ನಾಗಿ ಅರಿತು ಲೋಕದಲ್ಲಿ ಉತ್ಪನ್ನ ಮಾಡುವ ಬೀಜವನ್ನು (ಅಜ್ಞಾನ) ನಷ್ಟಮಾಡಿ, ಅದಕ್ಕೆ ಸ್ನೇಹ (ಅಂಟದೆ) ಮಾಡದೆ ಇರುವನೋ, ತರ್ಕವನ್ನು ಮೀರಿ ಅಲೌಕಿಕನಾಗಿದ್ದಾನೆಯೋ ಅಂತಹ ಜನ್ಮಕ್ಷಯಿ ದರ್ಶನವುಳ್ಳವನೇ ಮುನಿ ಎಂದು ಹೇಳಲ್ಪಡುತ್ತಾನೆ.
4. ಸರ್ವ ಕಾಮಲೋಕ ಇತ್ಯಾದಿಯನ್ನು ಅರಿತು, ಅವ್ಯಾವುದರಲ್ಲೂ ಇರುವ ಇಚ್ಛೆ ವ್ಯಕ್ತಪಡಿಸದೆ, ರಾಗರಹಿತನೂ, ಆಸಕ್ತರಹಿತನೂ ಆದ ಅವನೇ ಮುನಿಯಾಗಿರುವನು. ಆತನು ಪಾಪ-ಪುಣ್ಯದ ಸಂಗ್ರಹ ಮಾಡುವುದಿಲ್ಲ. ಆತನಂತೂ ಪಾರಂಗತನಾಗಿದ್ದಾನೆ.
5. ಯಾರು ಸರ್ವವನ್ನೂ ಜಯಿಸಿದವನೋ, ಸರ್ವವನ್ನು ಅರಿತಿರುವನೋ, ಸುಮೇಧನೋ, ಯಾರು ಸರ್ವ ಧರ್ಮ (ಚಿತ್ತವೃತ್ತಿ) ಗಳಲ್ಲೂ ಲಿಪ್ತನಾಗುವುದಿಲ್ಲವೋ, ಸರ್ವತ್ಯಾಗಿಯೋ, ತೃಷ್ಣೆ ಕ್ಷಯದಿಂದ ವಿಮುಕ್ತನೊ ಆತನನ್ನು ಜ್ಞಾನಿಗಳು ಮುನಿ ಎನ್ನುವರು.
6. ಯಾರು ಪ್ರಜ್ಞಾ ಬಲದಿಂದ ಇರುವನೋ, ಶೀಲಸಂಪನ್ನನೋ, ಏಕಾಗ್ರಚಿತ್ತನೋ, ಧ್ಯಾನದಲ್ಲಿ ಲೀನನೋ, ಸ್ಮೃತಿವಂತನೋ, ಬಂಧನಮುಕ್ತನೋ ಹಾಗು ಪೂರ್ಣವಾಗಿ ಆಸವರಹಿತನೋ ಆತನನ್ನು ಜ್ಞಾನಿಗಳು ಮುನಿ ಎನ್ನುತ್ತಾರೆ.
7. ಏಕಾಂಗಿಯಾಗಿ ಸಂಚರಿಸುವ ಅಪ್ರಮಾದಿಯನು, ನಿಂದೆ ಹಾಗು ಪ್ರಶಂಸೆಗಳಿಂದ ವಿಚಲಿತನಾಗದಿರುವವನು, ಸಿಂಹದ ಸಮಾನವಾದ ಶಬ್ದಗಳಿಂದ ಹೆದರದವನೊ, ಬಲೆಗೆ ಸಿಲುಕದ ವಾಯುವಿನಂತೆ ಇರುವವನೊ, ಜಲದಲ್ಲಿ ಲಿಪ್ತವಾಗದ ಕಮಲ ಸದೃಶನೊ, ಪರರಿಗೆ ಮಾರ್ಗದಶರ್ಿಯು ಹಾಗು ಪರರ ಅನುಯಾಯಿ ಆಗದವನು ಆದ ಅವನನ್ನು ಜ್ಞಾನಿಗಳು ಮುನಿ ಎನ್ನುತ್ತಾರೆ.
8. ಸ್ನಾನ ಮಾಡುವ ತೀರದಲ್ಲಿರುವ ಕಂಬದ ಹಾಗೆ ಸ್ಥಿರವಾಗಿರುವವನನ್ನು, ಪರರ ಮಾತುಗಳ ಪ್ರಭಾವ ಅಲ್ಪವೂ ಆಗದಿರುವವನನ್ನು ಅಂತಹ ವೀತರಾಗ, ಇಂದ್ರಿಯ ಸಂಯಮಿಯನ್ನು ಜ್ಞಾನಿಗಳು ಮುನಿ ಎನ್ನುತ್ತಾರೆ.
9. ಯಾರು ಲಾಳಿಯ ಹಾಗೆ ಋಜು ಹಾಗು ಸ್ಥಿರ ಚಿತ್ತವುಳ್ಳವನೊ, ಪಾಪಕರ್ಮಗಳಿಗೆ ಅಸಹ್ಯಿಸುವವನೊ, ಕುಶಲ-ಅಕುಶಲ ಕರ್ಮಗಳ ಅರಿವುಳ್ಳವನೋ, ವಿಷಯ ಸ್ಥಿತಿಗಳಲ್ಲಿ ಶಾಂತನೋ, ಆತನನ್ನು ಜ್ಞಾನಿಗಳು ಮುನಿ ಎನ್ನುತ್ತಾರೆ.
10. ಯಾರು ಸಂಯಮಿಯೋ, ಪಾಪಕರ್ಮ ಮಾಡನೋ, ಯಾರು ಬಾಲ್ಯ ಹಾಗು ಮಧ್ಯ ವಯಸ್ಸಿನಲ್ಲೂ ಸಂಯಮದಿಂದಿರುವನೋ, ಯಾರು ಪರರಿಂದ ಕ್ರೋಧಿತರಾಗುವುದಿಲ್ಲವೊ, ಪರರಿಗೂ ಕ್ರೋಧವುಂಟು ಮಾಡುವುದಿಲ್ಲವೋ, ಅಂತಹವನಿಗೆ ಜ್ಞಾನಿಗಳು ಮುನಿ ಎನ್ನುತ್ತಾರೆ.
11. ಯಾರು ಅಗ್ರ ಭಾಗದಿಂದ ಮಧ್ಯ ಭಾಗದಿಂದ ಹಾಗು ಅವಶೇಷ ಭಾಗದಿಂದ ಭಿಕ್ಷೆ ತೆಗೆದುಕೊಳ್ಳುವರೋ, ಯಾರ ಜೀವನವು ಪರರ ದಾನದಿಂದ ಅವಲಂಬಿತವಾಗಿದೆಯೋ (ಆಹಾರ), ಯಾರು ದಾನ ನೀಡಿದವನಿಗೆ ಪ್ರಶಂಸೆ ಅಥವಾ ನಿಂದನೆ ಮಾಡುವುದಿಲ್ಲವೋ ಆತನಿಗೆ ಜ್ಞಾನಿಗಳು ಮುನಿ ಎನ್ನುತ್ತಾರೆ.
12. ಯಾವ ಮುನಿಯು ಮೈಥುನದಿಂದ ವಿರತನಾಗಿ, ಏಕಾಂಗಿಯಾಗಿ ಸಂಚರಿಸುವನೋ, ಯಾರು ಯೌವ್ವನದಲ್ಲಿಯೂ ಅನಾಸಕ್ತನಾಗಿದ್ದಾನೋ, ಯಾರು ಮದದಿಂದ ಎಚ್ಚರ ತಪ್ಪಿಲ್ಲವೋ ಆತನನ್ನು ಜ್ಞಾನಿಗಳು ಮುನಿ ಎನ್ನುವರು.
13. ತನ್ನ ಜ್ಞಾನದಿಂದ ಲೋಕವನ್ನು ಅರಿತಿರುವನೋ, ಯಾರು ಲೋಕದ ಪ್ರವಾಹ ಹಾಗು ಭವಸಾಗರವನ್ನು ದಾಟಿ ಸ್ಥಿರನಾಗಿರುವನೋ, ಅಂತಹ ಬಂಧನಹೀನ ಹಾಗು ಅನಾಸವನನ್ನು ಜ್ಞಾನಿಗಳು ಮುನಿ ಎನ್ನುತ್ತಾರೆ.
14. ಸ್ತ್ರೀಯ ಪಾಲನೆಯಲ್ಲಿ ಲೀನವಾದ ಗೃಹಸ್ಥನಿಗೂ ಹಾಗು ಕಾಷಾಯವಸ್ತ್ರಧಾರಿ ಭಿಕ್ಷುವಿಗೂ ಯಾವ ಸಮಾನತೆಯೂ ಇಲ್ಲ, ಇಬ್ಬರಿಗೂ ಬಹಳ ಅಂತರ (ವ್ಯತ್ಯಾಸ) ವಿರುವ ಸ್ವಭಾವವಿದೆ. ಏಕೆಂದರೆ ಗೃಹಸ್ಥನೂ ಅಸಂಯಮಿಯೂ ಹಾಗು ಹಿಂಸೆಯಲ್ಲಿ ಆನಂದಿಸುವವನೂ (ರತನೂ), ಆದರೆ ಮುನಿಯು ನಿತ್ಯ ಸಂಯಮದ ರಕ್ಷಣೆ ಮಾಡುತ್ತಾನೆ.
15. ಹೇಗೆ ಆಕಾಶದಲ್ಲಿ ಸಂಚರಿಸುವ ನೀಲಿ ವರ್ಣದ ಕುತ್ತಿಗೆಯುಳ್ಳ ನವಿಲು ಹಾರುವಿಕೆಯಲ್ಲಿ ಹಂಸದ ಸಮಾನ ಆಗುವುದಿಲ್ಲವೋ, ಅದೇರೀತಿ ಗೃಹಸ್ಥನು ಭಿಕ್ಷುವಿನ ಸಮಾನ ಆಗುವುದಿಲ್ಲ. ಮುನಿಯಂತೂ ಏಕಾಂತತೆಯಲ್ಲಿದ್ದು ಧ್ಯಾನದಲ್ಲಿ ಲೀನವಾಗುತ್ತಾನೆ.
ಇಲ್ಲಿಗೆ ಮುನಿ ಸುತ್ತ ಮುಗಿಯಿತು.

vijaya sutta in kannada (victory for monks by contemplating this sutta)

11. ವಿಜಯ ಸುತ್ತ
(ದೇಹದ ಅನಿತ್ಯತೆಯ ಮನನ)
1. ಚಲಿಸುತ್ತಾ ಅಥವಾ ನಿಂತಿರುವ, ಕುಳಿತುಕೊಳ್ಳುತ್ತಾ ಅಥವಾ ಮಲಗುತ್ತಾ ಯಾವ ಶರೀರವನ್ನು ಮಡಚುತ್ತಾ ಅಥವಾ ವಿಸ್ತರಿಸುತ್ತಾ ಇರುವನೊ, ಇದೇ ಕಾಯದ ಅವಸ್ಥೆ (ಗತಿ) ಯಾಗಿದೆ.
2. ಮೂಳೆ ಹಾಗು ಸ್ಮಾಯುಗಳಿಂದ ಕೂಡಿ ಚರ್ಮ ಹಾಗು ಮಾಂಸದಿಂದ ಕೂಡಿರುವ, ತೆಳುವಾದ ಚರ್ಮದಿಂದ ಮುಚ್ಚಿರುವ ಈ ಶರೀರದ ಯತಾರ್ಥ ಸ್ವರೂಪ ಹಾಗೆಯೇ ಕಾಣಿಸುವುದಿಲ್ಲ.
3-4. ಈ ಶರೀರವು ಒಳಗೆ ತುಂಬಿಹೋಗಿದೆ. ಹೊಟ್ಟೆಯು ತುಂಬಿದೆ, ಯಕೃತ್, ವಸ್ತಿ, ಹೃದಯ, ವುಪ್ಪಸ, ವೃಕ್ಕ, ಪ್ಲೀಹಾ, ಎಂಜಲು, ಬೆವರು, ಮೇದಸ್ಸು, ರಕ್ತ, ಕೀವು, ಪಿತ್ತಾ ಹಾಗು ಕೊಬ್ಬಿನಿಂದ ಕೂಡಿದೆ
5. ನವರಂಧ್ರಗಳಿಂದ ಸದಾ ಮಲಿನತೆಯು ಸುರಿಯುತ್ತಿರುತ್ತದೆ. ಕಣ್ಣಿನಿಂದ ಪಿಸರು, ಕಿವಿಯಿಂದ ಕೊಳೆ...
6. ಮೂಗಿನಿಂದ ಸಿಂಬಳ, ಕೆಲವೊಮ್ಮೆ ಬಾಯಿಂದ ವಾಂತಿ, ಪಿತ್ತ ಹಾಗು ಕಫದ ವಿಸರ್ಜನೆ, ಶರೀರದಿಂದ ಬೆವರು ಹಾಗು ಮಲವು ವಿಸಜರ್ಿತವಾಗುತ್ತದೆ.
7. ಇದರ ಬರಿದಾದ ತುದಿಯು ಮಲದಿಂದ ತುಂಬಿದೆ, ಅವಿದ್ಯೆಯ ಕಾರಣದಿಂದ ಮೂರ್ಖನು ಇದರಲ್ಲಿ ಸೌಂದರ್ಯ ಕಾಣುತ್ತಾನೆ.
8. ಎಂದು ಆತನು ಸತ್ತು ಹೋಗುವನೊ, ಆಗ ಕಟ್ಟಿಗೆಯಂತೆ ಬಿದ್ದಿರುತ್ತಾನೆ, ಕಡುಬಣ್ಣಕ್ಕೆ ಶರೀರ ತಿರುಗುತ್ತದೆ. ಸ್ಮಶಾನದಲ್ಲಿ ಆತನನ್ನು ಎಸೆಯುತ್ತಾರೆ ಹಾಗು ಸೋದರ-ಬಂಧುಗಳಿಂದ ಅಪೇಕ್ಷಾರಹಿತನಾಗುತ್ತಾನೆ.
9. ಆತನನ್ನು ನಾಯಿಗಳು, ನರಿಗಳು, ಗೆದ್ದಲು, ಕೀಟಗಳು, ಕಾಗೆಗಳು, ಹದ್ದುಗಳು ಹಾಗು ಅನ್ಯ ಪ್ರಾಣಿಗಳು ತಿನ್ನುತ್ತವೆ.
10. ಪ್ರಜ್ಞಾವಂತ ಭಿಕ್ಷುವು ಬುದ್ಧ ವಚನವನ್ನು ಕೇಳಿ, ಶರೀರದ ಸ್ವಭಾವವನ್ನು ಸರಿಯಾಗಿ ಅರಿಯುತ್ತಾನೆ ಹಾಗು ಅದರ ಯತಾರ್ಥ ಸ್ವರೂಪ ನೋಡುತ್ತಾನೆ.
11. ಈ ಶರೀರ ಹೇಗಿದೆಯೋ ಅದು ಹಾಗೆಯೆ. ಇದು (ಈ ಶರೀರ) ಹೇಗಿದೆಯೊ, ಹಾಗೆಯೇ ಅದು (ಪರರ ಶರೀರ) ಸಹಾ. ಆದ್ದರಿಂದ ತನ್ನ ಅಥವಾ ಪರರ ಶರೀರದ ಬಗ್ಗೆ ರಾಗವನ್ನು ತ್ಯಜಿಸಲಿ.
12. ಯಾವ ಭಿಕ್ಷು ಪ್ರಜ್ಞಾವಂತಿಕೆಯಿಂದ ಇಚ್ಛೆ ಹಾಗು ರಾಗದಿಂದ ರಹಿತನೊ, ಆತನು ಅಮರತ್ವ, ಶಾಂತಿ, ಅತ್ಯುನ್ನತವಾದ ನಿಬ್ಬಾಣವನ್ನು ಪ್ರಾಪ್ತಿಮಾಡುತ್ತಾನೆ.
13. ಅಪವಿತ್ರವಾದ, ನಾನಾ ಮಲಗಳಿಂದ ಪೂರ್ಣತೆ ಹೊಂದಿದ ಶರೀರ ಹಾಗು ಎರಡು ಕಾಲುಗಳ ಅವನು ದುರ್ಗಂಧವನ್ನು ಹೊತ್ತಿರುತ್ತಾನೆ ಮತ್ತು ಸ್ಥಳದಿಂದ ಸ್ಥಳಕ್ಕೆ ದುರ್ಗಂಧ ಹಬ್ಬಿಸುತ್ತಾ ತಿರುಗುತ್ತಾನೆ.
14. ಈ ರೀತಿಯ ಶರೀರದಿಂದ ಯಾವಾತನು ಅಹಂಕಾರಪಡುತ್ತಾನೋ, ಅಥವಾ ಪರರ ಅನಾಧರಣೆ ಮಾಡುವನೊ, ಅಂತಹವನು ಅಜ್ಞಾನದ ವಿನಃ ಮತ್ತಾವ ಕಾರಣನಾಗಿದ್ದಾನೆ?
ಇಲ್ಲಿಗೆ ವಿಜಯ ಸುತ್ತ ಮುಗಿಯಿತು.

AaLavaka sutta in kannada ( the Buddha tamed the powerful yakkha )


10. ಆಳವಕ ಸುತ್ತ
(ಬುದ್ಧರ ಮಹಿಮೆ)
ಹೀಗೆ ನಾನು ಕೇಳಿದ್ದೇನೆ. ಒಮ್ಮೆ ಭಗವಾನರು ಅಳವಿಯಲ್ಲಿ ಆಳವಕ ಯಕ್ಷನ ಭವನದಲ್ಲಿ ವಿಹರಿಸುತ್ತಿದ್ದರು. ಆಗ ಆಳವಕ ಯಕ್ಷನು ಎಲ್ಲಿ ಭಗವಾನರು ಇದ್ದರೋ ಅಲ್ಲಿಗೆ ಬಂದನು. ಬಂದು ಭಗವಾನರಿಗೆ ಹೀಗೆ ಹೇಳಿದನು- ಶ್ರಮಣ! ಹೊರಗೆ ಹೋಗು. ಒಳ್ಳೆಯದು ಆಯುಷ್ಮಂತನೇ ಎಂದು ಹೇಳಿ ಭಗವಾರು ಹೊರಗೆ ಬಂದರು. ಶ್ರಮಣ ಒಳಗೆ ಬಾ. ಒಳ್ಳೆಯದು ಆಯುಷ್ಮಂತನೇ ಎಂದು ಹೇಳಿ ಭಗವಾನರು ಒಳಬಂದರು.
ಎರಡನೆಯಬಾರಿ ಆಳವಕನು ಭಗವಾನರಿಗೆ ಮತ್ತೆ ಶ್ರಮಣ ಹೊರಗೆ ಹೋಗು ಎಂದನು. ಒಳ್ಳೆಯದು ಆಯುಷ್ಮಂತನೇ ಎಂದು ಹೇಳಿ ಭಗವಾರು ಹೊರಗೆ ಬಂದರು. ಶ್ರಮಣ ಒಳಗೆ ಬಾ. ಒಳ್ಳೆಯದು ಆಯುಷ್ಮಂತನೇ ಎಂದು ಹೇಳಿ ಭಗವಾನರು ಒಳಬಂದರು.
ಮೂರನೆಯಬಾರಿ ಆಳವಕನು ಭಗವಾನರಿಗೆ ಮತ್ತೆ ಶ್ರಮಣ ಹೊರಗೆ ಹೋಗು ಎಂದನು. ಒಳ್ಳೆಯದು ಆಯುಷ್ಮಂತನೇ ಎಂದು ಹೇಳಿ ಭಗವಾರು ಹೊರಗೆ ಬಂದರು. ಶ್ರಮಣ ಒಳಗೆ ಬಾ. ಒಳ್ಳೆಯದು ಆಯುಷ್ಮಂತನೇ ಎಂದು ಹೇಳಿ ಭಗವಾನರು ಒಳಬಂದರು.
ನಾಲ್ಕನೆಯಬಾರಿ ಆಳವಕನು ಭಗವಾನರಿಗೆ ಮತ್ತೆ ಶ್ರಮಣ ಹೊರಗೆ ಹೋಗು ಎಂದನು. ಆಗ ಭಗವಾನರು ಇಂತೆಂದರು : ಆಯುಷ್ಮಂತ ನಾನು ಹೊರಗೆ ಹೋಗುವುದಿಲ್ಲ, ನೀನು ಏನು ಮಾಡುತ್ತೀಯೋ ಮಾಡು.
ಆಳವಕನು ಶ್ರಮಣ ನಾನು ಪ್ರಶ್ನೆ ಕೇಳುತ್ತೇನೆ, ನೀನು ಉತ್ತರ ಹೇಳದಿದ್ದರೆ ನಿನ್ನ ಚಿತ್ತವನ್ನು ವಿಕ್ಷಿಪ್ತವನ್ನಾಗಿ ಮಾಡುವೆನು. ನಿನ್ನ ಹೃದಯವನ್ನು ಹರಿದು ಹಾಕುವೆನು. ಅಥವಾ ಕಾಲುಗಳನ್ನು ಹಿಡಿದು ಗಂಗಾತೀರಕ್ಕೆ ಎಸೆದುಬಿಡುವೆನು.
ಭಗವಾನರು ಆಯುಷ್ಮಂತನೇ ನಾನು ದೇವತಾ, ಮಾರ, ಬ್ರಹ್ಮ, ಶ್ರಮಣ ಹಾಗು ಬ್ರಾಹ್ಮಣ ಸಹಿತ, ದೇವ-ಮನುಷ್ಯರು ಇಡೀ ಲೋಕಗಳಲ್ಲಿ ಇಂಥಹ ಯಾರನ್ನೂ ನಾನು ಕಾಣುತ್ತಿಲ್ಲ, ಆತನಿಂದ ನನ್ನ ಚಿತ್ತವು ವಿಕ್ಷಿಪ್ತವಾಗುವಂತಹ, ಹೃದಯವನ್ನು ಸೀಳುವಂತಹ ಅಥವಾ ಕಾಲುಗಳನ್ನು ಹಿಡಿದು ಗಂಗಾತೀರಕ್ಕೆ ಎಸೆದುಬಿಡುವಂತಹ ಯಾರನ್ನೂ ಕಾಣುತ್ತಿಲ್ಲ. ಅಂತಹವರಾರು ಇಲ್ಲ. ಆದರೂ ನೀನು ಏನನ್ನು ಕೇಳಬಯಸುವೆಯೋ ಅದನ್ನು ಕೇಳು.
ಆಗ ಆಳವಕನು ಗಾಥೆಗಳಲ್ಲಿ ಈ ರೀತಿ ಕೇಳಿದನು-
1. ಆಳವಕ ಯಕ್ಷ - ಈ ಸಂಸಾರದಲ್ಲಿ ಪುರುಷನ ಯಾವ ಧನವು ಶ್ರೇಷ್ಠ? ಯಾವ ಅಭ್ಯಾಸವು ಸುಖದಾಯಕ ವಾಗಿರುತ್ತದೆ? ರಸಗಳಲ್ಲಿ ಯಾವ ರಸವು ಸ್ವಾದಿಷ್ಟಕರವಾಗಿರುತ್ತದೆ? ಯಾರ ಜೀವನವು ಶ್ರೇಷ್ಠವೆಂದು ಹೇಳಲ್ಪಡುತ್ತದೆ?
2. ಭಗವಾನರು - ಈ ಲೋಕದಲ್ಲಿ ಪುರುಷನ ಶ್ರದ್ಧಾ ಧನವೇ ಶ್ರೇಷ್ಠ. ಬಹಳ ವಿಧದಿಂದ ಅಭ್ಯಾಸ ಮಾಡಿದ ಧರ್ಮಪಾಲನೆಯೇ ಸುಖದಾಯಕ, ಸತ್ಯವೇ ರಸಗಳಲ್ಲಿ ಸ್ವಾದಿಷ್ಟಕರ. ಪ್ರಜ್ಞಾ ಜೀವಿಯ ಜೀವನವೇ ಶ್ರೇಷ್ಠವೆಂದು ಹೇಳಲ್ಪಡುತ್ತದೆ.
3. ಆಳವಕ ಯಕ್ಷ - ಮಾನವನು ಹೇಗೆ ಸಂಸಾರದ ಪ್ರವಾಹವನ್ನು ದಾಟುತ್ತಾನೆ? ಹೇಗೆ ಭವಸಾಗರವನ್ನು ಹಾರುತ್ತಾನೆ? ದುಃಖವನ್ನು ಮುಕ್ತಾಯ ಹೇಗೆ ಮಾಡುತ್ತಾನೆ? ಹಾಗು ಪರಿಶುದ್ಧ ಹೇಗೆ ಆಗುತ್ತಾನೆ?
4. ಭಗವಾನರು - ಮಾನವನು ಶ್ರದ್ಧೆಯಿಂದ ಸಂಸಾರದ ಪ್ರವಾಹ ದಾಟುತ್ತಾನೆ. (ಸಮ್ಯಸ್ಮೃತಿ) ಜಾಗರೂಕತೆಯಿಂದ ಭವಸಾಗರವನ್ನು ಹಾರುತ್ತಾನೆ. ಪ್ರಯತ್ನದಿಂದ ದುಃಖದ ಮುಕ್ತಾಯ ಮಾಡುತ್ತಾನೆ ಹಾಗು ಪ್ರಜ್ಞೆಯಿಂದ ಪುರುಷ ಪರಿಶುದ್ಧನಾಗುತ್ತಾನೆ.
5. ಆಳವಕ ಯಕ್ಷ - ಮಾನವ ಪ್ರಜ್ಞೆಯನ್ನು ಹೇಗೆ ಪ್ರಾಪ್ತಿಮಾಡುತ್ತಾನೆ? ಹೇಗೆ ಧನವನ್ನು ಗಳಿಸುತ್ತಾನೆ, ಯಶಸ್ಸನ್ನು ಹೇಗೆ ಪ್ರಾಪ್ತಿ ಮಾಡುತ್ತಾನೆ. ಮಿತ್ರರನ್ನು ಹೇಗೆ ಒಂದುಗೂಡಿಸಿ ಇಟ್ಟಿರುತ್ತಾನೆ? ಹೇಗೆ ಈ ಲೋಕದಿಂದ ಪರಲೋಕಕ್ಕೆ ಹೋದಮೇಲೆ ಶೋಕಪಡುವುದಿಲ್ಲ.
6. ಭಗವಾನರು - ನಿಬ್ಬಾಣ ಪ್ರಾಪ್ತಿಗಾಗಿ ಅರಹಂತರ ಧಮ್ಮದಲ್ಲಿ ಶ್ರದ್ಧೆಯಿಡುವ ಅಪ್ರಮಾದಿ ಹಾಗು ಚತುರ ವ್ಯಕ್ತಿ ಶ್ರದ್ಧಾಪೂರ್ವಕವಾಗಿ ಧಮ್ಮವನ್ನು ಕೇಳಿ ಪ್ರಜ್ಞೆ ಗಳಿಸುತ್ತಾನೆ.
7. ಉಚಿತ ಕಾರ್ಯಗಳನ್ನು ಮಾಡುವವನು, ಧೈರ್ಯವಂತನೂ ಹಾಗು ಪರಿಶ್ರಮವುಳ್ಳವನು ಧನ ಗಳಿಸುತ್ತಾನೆ. ಸತ್ಯದಿಂದ ಯಶಸ್ಸನ್ನು ಪ್ರಾಪ್ತಿಮಾಡುತ್ತಾನೆ ಹಾಗು ದಾನದಿಂದ ಮಿತ್ರರನ್ನೆಲ್ಲಾ ಒಂದುಗೂಡಿಸಿ ಇಟ್ಟಿರುತ್ತಾನೆ.
8. ಹೇಗೆ ಶ್ರದ್ಧೆಯುಳ್ಳ ಗೃಹಸ್ಥನಲ್ಲಿ ಸತ್ಯ, ಧರ್ಮ, ಧೈರ್ಯ ಹಾಗು ತ್ಯಾಗ ಈ ನಾಲ್ಕು ಇರುವವೋ ಆತನು ಈ ಲೋಕದಿಂದ ಪರಲೋಕಕ್ಕೆ ಹೋದಮೇಲೆ ಶೋಕಪಡುವುದಿಲ್ಲ.
9. ನೀನೇ ಅನ್ಯ ಶ್ರಮಣರಲ್ಲಿ ಹೋಗಿ ಕೇಳು. ಸತ್ಯ, ಧರ್ಮ, ತ್ಯಾಗ ಹಾಗು ಕ್ಷಾಂತಿಗಿಂತ (ಕ್ಷಮಾಯುತ ಸಹನೆ) ಹೆಚ್ಚಾಗಿ ಇನ್ನೂ ಯಾವುದಾದರೂ ಇದೆಯೇ ಎಂದು.
10. ಆಳವಕ ಯಕ್ಷ - ನಾನು ಈಗ ಆರ್ಯ ಶ್ರಮಣ ಬ್ರಾಹ್ಮಣರಲ್ಲಿ ಏಕೆ ಕೇಳಲಿ? ಇಂದು ನಾನು ಸ್ವಯಂ ತಮ್ಮಿಂದ ಪರಲೋಕದ ಅರ್ಥವನ್ನು ಅರಿತಿದ್ದೇನೆ.
11. ಅಹೋ! ನನ್ನ ಒಳ್ಳೆಯದಕ್ಕಾಗಿಯೇ ಬುದ್ಧ ಭಗವಾನರು ಆಳವಿಯಲ್ಲಿ ನನ್ನ ನಿವಾಸ ಸ್ಥಾನಕ್ಕೆ ಬಂದಿರುವನು. ನಾನು ಇಂದು ಇಲ್ಲಿ ತಮಗೆ ನೀಡುವುದರಿಂದ ಮಹಾ ಫಲವಿದೆ ಎಂದು ಅರಿತಿದ್ದೇನೆ.
12. ಇಂದಿನಿಂದ ನಾನು ಗ್ರಾಮದಿಂದ ಗ್ರಾಮಕ್ಕೆ ನಗರದಿಂದ ನಗರಕ್ಕೆ ಸಂಚರಿಸಿ, ಸಮ್ಯಕ್ ಸಂಬುದ್ಧರಿಗೆ ಹಾಗು ಧಮ್ಮದ ಸುಧರ್ಮತೆಗೆ ವಂದಿಸುತ್ತಾ ಸಂಚರಿಸುವೆನು.
ಹೀಗೆ ನುಡಿದ ನಂತರ ಆಳವಕನು ಭಗವಾನರೊಂದಿಗೆ ಹೀಗೆ ಹೇಳಿದನು- ನಿಜಕ್ಕೂ ಆಶ್ಚರ್ಯ ಗೋತಮರೆ ! ಆಶ್ಚರ್ಯವಾಯಿತು ! ಹೇಗೆಂದರೆ ತಲೆಕೆಳಗಿರುವ ಪಾತ್ರೆಯನ್ನು ಸರಿಯಾಗಿಸುವಂತೆ, ಮುಚ್ಚಿರುವುದನ್ನು ತೆಗೆದು ತೋರಿಸುವಂತೆ, ದಾರಿ ತಪ್ಪಿರುವವರಿಗೆ ದಾರಿ ತೋರಿಸುವಂತೆ, ಅಂಧಕಾರದಲ್ಲಿರುವವರಿಗೆ ದೀಪ ಪ್ರಕಾಶಿಸುವಂತೆ, ಯಾವುದರಿಂದ ಚಕ್ಷುಧಾರಿಗಳು ರೂಪಗಳನ್ನು (ವಸ್ತು) ನೋಡುವರೋ ಹಾಗೆಯೇ ಭಗವಾನ್ ಬುದ್ಧರಿಂದ ಅನೇಕ ರೀತಿಯಿಂದ ಧಮ್ಮವು ಪ್ರಕಾಶಿತವಾಯಿತು. ನಾನು ಇಂದಿನಿಂದ ಬುದ್ಧರ ಶರಣು ಹೋಗುತ್ತೇನೆ, ಧಮ್ಮ ಹಾಗು ಸಂಘಕ್ಕೂ ಶರಣು ಹೋಗುತ್ತೇನೆ. ನನಗೆ ಜೀವನಪರ್ಯಂತ ಉಪಾಸಕನಾಗಿ ಮಾಡಿಕೊಳ್ಳಿ ಭಗವಾನ್.
ಇಲ್ಲಿಗೆ ಆಳವಕ ಸುತ್ತ ಮುಗಿಯಿತು

hemavata sutta in kannada (the discussion between lord Buddha and yakkhas.)

.
9. ಹೇಮವತ ಸುತ್ತ
(ಬುದ್ಧರ ಮಹಿಮೆ)
1. ಸಾತಾಗಿರ ಯಕ್ಷ - ಇಂದು ಪೂಣರ್ಿಮೆಯ ಉಪೋಸಥವಾಗಿದೆ, ದಿವ್ಯವಾದ ರಾತ್ರಿಯು ಉಪಸ್ಥಿತವಾಗಿದೆ, ಪರಮಶ್ರೇಷ್ಠ ಖ್ಯಾತಿಯುಳ್ಳ ಶಾಸ್ತರನ್ನು ನಾವು ದಶರ್ಿಸೋಣ.
2. ಹೇಮವತ ಯಕ್ಷ - ಏನು, ಅವರ ಮನಸ್ಸು ಸದಾ ಏಕಾಗ್ರವಾಗಿರುವುದೇ? ಏನು, ಅವರು ಸರ್ವಜೀವಿಗಳ ಬಗ್ಗೆ ಸಮಾನ ಮನೋಭಾವನೆ ಉಳ್ಳವರಾಗಿದ್ದಾರೆಯೇ? ಅವರು ಪ್ರಿಯ ಅಥವಾ ಅಪ್ರಿಯ ವಿಷಯಗಳಲ್ಲಿ ತಮ್ಮ ಚಿತ್ತವನ್ನು ವಶಮಾಡಿಕೊಂಡಿರುವರೇ?
3. ಸಾತಾಗಿರ ಯಕ್ಷ - ಅವರ ಮನಸ್ಸು ಏಕಾಗ್ರತೆಯಿಂದ ಸದಾ ಇರುತ್ತದೆ. ಅವರು ಸರ್ವಜೀವಿಗಳ ಬಗ್ಗೆ ಸಮಾನ ಭಾವನೆಯಿಂದಿರುವರು ಮತ್ತು ಅವರು ಪ್ರಿಯ ಹಾಗು ಅಪ್ರಿಯ ವಿಷಯಗಳಲ್ಲಿ ತಮ್ಮ ಚಿತ್ತ (ಮನಸ್ಸು)ವನ್ನು ವಶಮಾಡಿಕೊಂಡಿರುವರು.
4. ಹೇಮವತ ಯಕ್ಷ - ಅವರು ಕಳ್ಳತನ ಮಾಡುವುದಿಲ್ಲವೇ? ಸರ್ವಜೀವಿಗಳ ಬಗ್ಗೆ ಅವರು ಸಂಯಮದಿಂದಿರುವರೇ? ಅವರು ಅಲಕ್ಷದ (ಎಚ್ಚರಿಕೆ ಇಲ್ಲದಿರುವುದು) ಬಗ್ಗೆ ದೂರವಿರುವರೆ? ಅವರು ಧ್ಯಾನದಿಂದ ಹೊರತಾಗಿ ಇರುತ್ತಾರೆಯೇ?
5. ಸಾತಾಗಿರ ಯಕ್ಷ - ಅವರು ಕಳ್ಳತನ ಮಾಡುವುದಿಲ್ಲ. ಅವರು ಸರ್ವಜೀವಿಗಳ ಬಗ್ಗೆ ಸಂಯಮದಿಂದಿರುವರು. ಅವರು ಅಲಕ್ಷದಿಂದ ದೂರವಾಗಿ ಜಾಗರೂಕತೆಯಿಂದಿರುವರು. ಅವರು ಧ್ಯಾನದಿಂದ ಹೊರತಾಗಿ ಇರುವುದಿಲ್ಲ.
6. ಹೇಮವತ ಯಕ್ಷ - ಅವರು ಸುಳ್ಳು ಹೇಳುವುದಿಲ್ಲವೆ? ಅವರು ಕಟುವಚನ ಆಡುವುದಿಲ್ಲವೆ? ಅವರು ಚಾಡಿ ಹೇಳುವುದಿಲ್ಲವೆ? ಅವರು ಅತಿಯಾಗಿ ಮಾತನಾಡುವ ವಾಚಾಳಿಯೇ?
7. ಸಾತಾಗಿರ ಯಕ್ಷ - ಅವರು ಸುಳ್ಳು ಹೇಳುವುದಿಲ್ಲ. ಅವರು ಕಟುನುಡಿ ಆಡುವುದಿಲ್ಲ. ಅವರು ಚಾಡಿ ಹೇಳುವುದಿಲ್ಲ ಹಾಗು ಅವರು ಅತಿಯಾಗಿ ಮಾತನಾಡುವ ವಾಚಾಳಿಯು ಅಲ್ಲ.
8. ಹೇಮವತ ಯಕ್ಷ - ಅವರು ಕಾಮಭೋಗದಲ್ಲಿ ಆಸಕ್ತಿ ತಾಳುವುದಿಲ್ಲವೆ? ಅವರ ಚಿತ್ತವು ನಿರ್ಮಲವಾಗಿದೆಯೇ? ಅವರು ಮೋಹವನ್ನು ತ್ಯಜಿಸಿರುವರೇ? ಅವರು ಧಮ್ಮಗಳಲ್ಲಿ ಚಕ್ಷುವಂತರೆ?
9. ಸಾತಾಗಿರ ಯಕ್ಷ - ಅವರು ಕಾಮಭೋಗಗಳಲ್ಲಿ ಆಸಕ್ತಿ ತಾಳುವುದಿಲ್ಲ. ಅವರ ಚಿತ್ತವು ನಿರ್ಮಲವಾಗಿದೆ. ಅವರು ಮೋಹವನ್ನು ತ್ಯಜಿಸಿದ್ದಾರೆ. ಬುದ್ಧರು ಧಮ್ಮಗಳಲ್ಲಿ ಚಕ್ಷುವಂತರಾಗಿದ್ದಾರೆ.
10. ಹೇಮವತ ಯಕ್ಷ - ಅವರು ವಿದ್ಯಾಸಂಪನ್ನರೇ? ಅವರು ವಿಶುದ್ಧ ಆಚರಣೆಯುಳ್ಳವರೆ? ಅವರ ಆಸವಗಳು ಕ್ಷೀಣವಾಗಿದೆಯೆ? ಅವರು ಪುನರ್ಜನ್ಮವನ್ನು ಪಡೆಯುವುದಿಲ್ಲವೆ?
11. ಸಾತಾಗಿರ ಯಕ್ಷ - ಅವರು ವಿದ್ಯಾಸಂಪನ್ನರಾಗಿದ್ದಾರೆ. ಅವರು ವಿಶುದ್ಧ ಆಚರಣೆಯುಳ್ಳವರಾಗಿದ್ದಾರೆ. ಅವರ ಆಸವಗಳು ಕ್ಷೀಣವಾಗಿದೆ. ಅವರಿಗೆ ಪುನರ್ಜನ್ಮ ಸಂಭವಿಸುವುದಿಲ್ಲ.
12. ಮುನಿಗಳ ಚಿತ್ತವು ಸಂಪನ್ನವಾಗಿದೆ, ಪ್ರಶಂಸಾರ್ಹರೂ, ವಿಜ್ಜಾಚರಣಸಂಪನ್ನರಾಗಿದ್ದಾರೆ.
13. ಮುನಿಗಳ ಚಿತ್ತ, ಕರ್ಮ ಹಾಗು ವಾಣಿಯು ಸಂಪನ್ನವಾಗಿವೆ. ನಾವು ಅವರ ವಿದ್ಯಾ ಆಚರಣೆ ಸಂಪನ್ನತೆಗೆ ಪ್ರಶಂಸಿಸುತ್ತೇವೆ.
14. ಹೇಮವತ ಯಕ್ಷ - ಮುನಿಯ ಚಿತ್ತವು, ಕ್ರಿಯೆಗಳು ಹಾಗು ವಾಣಿಯು ಸುಸಂಪನ್ನವಾಗಿದೆ. ವಿದ್ಯೆ ಹಾಗು ಆಚರಣೆಯಿಂದ ಕೂಡಿರುವರು. ನಡೆಯಿರಿ, ಅಂತಹ ಶ್ರೇಷ್ಠ ಗೋತಮರ ದರ್ಶನ ಭಾಗ್ಯ ಮಾಡೋಣ.
15. ಚಿಗರೆಯಂಥ ತೊಡೆಗಳುಳ್ಳ, ಕೃಶರೂ, ಧೀರರು, ಅಲ್ಪಹಾರಿಯೂ, ಚಂಚಲರಹಿತರೂ, ವನದಲ್ಲಿ ಧ್ಯಾನದಲ್ಲಿ ಲೀನರೂ ಆಗಿರುವಂತಹ ಗೋತಮ ಮುನಿಯನ್ನು ನಾವು ದಶರ್ಿಸೋಣ.
16. ಅರಣ್ಯದಲ್ಲಿ ಏಕಾಂಗಿಯಾಗಿ ಸಂಚರಿಸುವ ಸಿಂಹ ಅಥವಾ ಆನೆಯ ರೀತಿ ಹಾಗು ಕಾಯಗಳಲ್ಲಿ ಕಾಮನೆಯಿಲ್ಲದ ಗೋತಮರ ಬಳಿ ಹೋಗಿ ಮೃತ್ಯುಪಾಶದ ಮುಕ್ತಿಯ ಮಾರ್ಗ ಕೇಳೋಣ.
17. ಧಮ್ಮವನ್ನು ಬೋಧಿಸುವ, ಧಮ್ಮದ ಪವತ್ತನವನ್ನು ಮಾಡುವ, ಸರ್ವಧರ್ಮ ಪರಾಂಗತರಾದ, ವೈರರಹಿತ ಹಾಗು ಭಯರಹಿತರಾದ ಗೋತಮರನ್ನು ನಾವು ಕೇಳೋಣ.
ಭಗವಾನರಲ್ಲಿಗೆ ಬಂದು ಪ್ರಶ್ನಿಸುತ್ತಾನೆ -
18. ಹೇಮವತ ಯಕ್ಷ - ಲೋಕವು ಯಾವುದರಿಂದ ಉತ್ಪತ್ತಿಯಾಗಿದೆ? ಅದು ಯಾವುದರೊಂದಿಗೆ ಬೆರೆಯುತ್ತದೆ? ಲೋಕದ ಉಪಾದಾನ (ಆಸಕ್ತಿ) ಯಾವುದು? ಲೋಕವು ಯಾವುದರಿಂದ ಪೀಡಿತವಾಗಿದೆ?
19. ಬುದ್ಧ ಭಗವಾನರು - ಆರು ಕಾರಣ (ಇಂದ್ರಿಯ) ಗಳಿಂದ ಲೋಕದ ಉತ್ಪನ್ನವಾಗಿದೆ. ಅದರಿಂದ (ವಿಷಯ) ಬೆರೆಯುತ್ತದೆ. ಆರು ಪ್ರಕಾರದ ಉಪದಾನವಿದೆ, ಅದರಿಂದಲೇ ಲೋಕವು ಪೀಡಿತವಾಗಿದೆ.
20. ಹೇಮವತ ಯಕ್ಷ - ಅದು ಯಾವ ಉಪದಾನ? ಅದರಿಂದ ಲೋಕವು ಪೀಡಿತವಾಗುತ್ತದೆ. ನಮ್ಮ ಪ್ರಶ್ನೆಗೆ ಉತ್ತರಿಸಿ. ಹಾಗು ಅದರಿಂದ ಬಿಡುಗಡೆ ಹೇಗೆ? ಮತ್ತು ದುಃಖದಿಂದ ಮುಕ್ತಿ ಹೇಗೆ ಸಿಗುತ್ತದೆ?
21. ಬುದ್ಧ ಭಗವಾನರು - ಲೋಕದ ಐದು ಕಾಮಭೋಗಗಳಲ್ಲಿ ಹಾಗು ಆರನೆಯದಾದ ಚಿತ್ತದಲ್ಲಿ ಆಸಕ್ತಿ ತೊರೆದರೆ ದುಃಖದಿಂದ ಮುಕ್ತಿ ದೊರೆಯುತ್ತದೆ.
22. ಇದೇ ಲೋಕದ ನಿಸ್ಸಾರತೆಯಾಗಿದೆ. ನಾನು ನಿನಗೆ ಯತಾರ್ಥ ಸ್ವರೂಪದಿಂದ ತಿಳಿಸಿರುವೆನು. ನಾನು ಇದನ್ನೇ ನಿನಗೆ ಹೇಳುವೆನು, ಹೀಗೆಯೇ ದುಃಖದಿಂದ ಮುಕ್ತಿ ದೊರೆಯುವುದು.
23. ಹೇಮವತ ಯಕ್ಷ - ಇಲ್ಲಿ ಲೋಕ ಸ್ವರೂಪಿಯಾದ ಪ್ರವಾಹವನ್ನು ಯಾರು ದಾಟುತ್ತಾರೆ? ಯಾರು ಭವಸಾಗರವನ್ನು ದಾಟುತ್ತಾರೆ? ಆಧಾರವಿಲ್ಲದೆ ಹಾಗು ಅವಲಂಬನೆಯ ಆಳ ಸಮುದ್ರದಲ್ಲಿ ಯಾರು ಮುಳುಗುವುದಿಲ್ಲ.
24. ಬುದ್ಧ ಭಗವಾನರು - ಸದಾ ಶೀಲಭರಿತನಾಗಿ, ಪ್ರಜ್ಞಾವಂತನೂ, ಏಕಾಗ್ರಚಿತ್ತನೂ, ಚಿಂತನೆಯಲ್ಲಿ (ಧಾಮರ್ಿಕ) ಲೀನನೂ, ಸ್ಮೃತಿವಂತನೂ, ದುಷ್ಕರವಾದ ಪ್ರವಾಹವನ್ನು ದಾಟುತ್ತಾನೆ.
25. ಯಾರು ಕಾಮಭೋಗಗಳ ವಿಚಾರದಲ್ಲಿ ವಿರಕ್ತನೋ, ಸರ್ವ ಸಂಸಾರದ ಸಂಕೋಲೆಗಳಿಂದ ಪಾರಾಗಿರುವನೋ, ಯಾರಲ್ಲಿ ಭವದ ತೃಷ್ಣೆಯು ಕ್ಷೀಣವಾಗಿದೆಯೋ, ಆತನು ಮಾತ್ರ ಆಳವಾದ ಸಮುದ್ರದಲ್ಲಿ ಮುಳುಗುವುದಿಲ್ಲ.
26. ಹೇಮವತ ಯಕ್ಷ - ಗಂಭೀರವಾದ ಪ್ರಜ್ಞಾಸಂಪನ್ನರು, ನಿಬ್ಬಾಣದಶರ್ಿಗಳು, ಅಕಿಂಚನರೂ, ಕಾಮನೆಗಳಲ್ಲಿ ಅನಾಸಕ್ತರೂ, ಸರ್ವ ವಾಸನಾಮುಕ್ತರೂ, ದಿವ್ಯ ದಾರಿಯಲ್ಲಿ ಚಲಿಸುವವರು ಆದಂತಹ ಈ ಮಹಾ ಋಷಿಯನ್ನು ನೋಡಿ...
27. ಪರಮಶ್ರೇಷ್ಠ ಖ್ಯಾತಿಯುಳ್ಳವರು, ನಿಬ್ಬಾಣದಶರ್ಿಗಳು, ಪ್ರಜ್ಞಾ ಪ್ರಸಾದಕರೂ, ಕಾಮಭೋಗಗಳಲ್ಲಿ ಅನಾಸಕ್ತರೂ, ಸರ್ವಜ್ಞರೂ, ಪರಮ ಪ್ರಜ್ಞಾವಂತರೂ, ಆರ್ಯ ಪಥದಲ್ಲಿ ಪಥರಾಗಿರುವ ಈ ಮಹಾ ಋಷಿಯನ್ನು ನೋಡಿ...
28. ನಾವು ಇಂದು ಸರ್ವ ಉತ್ಕೃಷ್ಟವಾಗಿರುವುದನ್ನು ಕಂಡೆವು. ಇಂದು ಸುಪ್ರಭಾತದ ಉದಯವಾಯಿತು. ಏಕೆಂದರೆ ನಾವು ಇಂದು ಸಂಸಾರ ಸಾಗರವನ್ನು ದಾಟಿದ ಆಶ್ರವರಹಿತ ಸಮ್ಮಾಸಂಬುದ್ಧರ ದಿವ್ಯ ದರ್ಶನವನ್ನು ಮಾಡಿದ್ದೇವೆ.
29. ನಾನು ಸಾವಿರ ಋದ್ಧಿವಂತ ಯಶಸ್ವಿ ಯಕ್ಷನೂ ತಮ್ಮಲ್ಲಿ ಶರಣು ಹೋಗುತ್ತಿದ್ದೇನೆ. ತಾವು ನಮ್ಮ ಶಾಸ್ತರಾಗಿರುವಿರಿ.
30. ನಾವು ಇಂದಿನಿಂದ ಗ್ರಾಮದಿಂದ ಗ್ರಾಮಕ್ಕೆ, ಬೆಟ್ಟದಿಂದ ಬೆಟ್ಟಕ್ಕೆ ಸಂಚರಿಸುತ್ತಾ ಸಮ್ಯಕ್ ಸಂಬುದ್ಧರ ಹಾಗು ಅವರ ಸುಬೋಧನೆಯನ್ನು ಮಂಡಿಸುತ್ತಾ ಇರುವೆವು.
ಇಲ್ಲಿಗೆ ಹೇಮವತ ಸುತ್ತ ಮುಗಿಯಿತು.

metta sutta in kastnnada (the great sutta about purest universal love and meditation )


8. ಮೆತ್ತಾ ಸುತ್ತ
(ಸರ್ವ ಜೀವಿಗಳ ಬಗ್ಗೆ ಮೈತ್ರಿ ಅಭಿವೃದ್ಧಿಯು ಬ್ರಹ್ಮವಿಹಾರ ಎಂದೆನಿಸುತ್ತದೆ)
1. ಯಾರು ಕುಶಲ ಕಾರ್ಯಗಳಲ್ಲಿ ನಿಪುಣನೋ ಹಾಗು ಪರಮ ಶಾಂತಿಪದವನ್ನು ಅಪಾರ ಇಚ್ಛಿಸುವನೋ, ಆತನು ಸಮರ್ಥನೂ, ಋಜುವಂತನೂ, ಪರಮ ಪರಿಶುದ್ಧನೂ ಆಗಲಿ. ಆತನ ಮಾತು ಶ್ರೇಷ್ಠ ಸುಂದರವಾಗಲಿ. ಆತನು ಮೃದುವೂ, ವಿನೀತನೂ, ಗಾಂಭೀರ್ಯನೂ ಆಗಲಿ
.
2. ಆತನು ಸಂತೃಪ್ತಿ ಸಂತೋಷಿಯು, ಸುಲಭವಾಗಿ ಸಾಕಲ್ಪಡುವವನೂ ಆಗಲಿ, ಲೌಕಿಕತೆಯ ಅಲ್ಪ ಕಾರ್ಯವುಳ್ಳವನೂ, ಸರಳ ಜೀವಿಯೂ ಆಗಲಿ. ಶಾಂತೇಂದ್ರಿಯನೂ, ವಿಚಾರಶೀಲನೂ, ಲಜ್ಜೆಯುಳ್ಳವನೂ, ಕುಲಗಳಲ್ಲಿ ಅನಾಸಕ್ತನೂ ಆಗಲಿ.
3. ಅತಿ ಚಿಕ್ಕದಾದ ಕಾರ್ಯವೇ ಆಗಲಿ, ಜ್ಞಾನಿಗಳು ದೂಷಿಸುವಂತಹದ್ದಾಗಿದ್ದರೆ ಅದನ್ನು ಮಾಡದಿರಲಿ (ಈ ರೀತಿ ಮಹತ್ತಾಗಿ ಭಾವಿಸಲಿ). ಸುಖಿಯಾಗಿರಲಿ ಹಾಗು ಕ್ಷೇಮವಾಗಿರಲಿ ಸರ್ವಜೀವಿಗಳು, ಸರ್ವಜೀವಿಗಳು ಸುಖಕರವಾದ ಚಿತ್ತದಿಂದಿರಲಿ.
4-5. ಯಾವುದೇ ಪ್ರಕಾರದ ಜೀವಿಗಳು ಅವು ದುರ್ಬಲವಾಗಿರಲಿ ಅಥವಾ ಬಲಿಷ್ಠವಾಗಿರಲಿ, ಉದ್ದವಾಗಿಯೇ ಇರಲಿ, ಮಧ್ಯಮವಾಗಿರಲಿ ಅಥವಾ ಚಿಕ್ಕದಾಗಿಯೇ ಇರಲಿ, ಪುಟ್ಟದಾಗಿರಲಿ ಅಥವಾ ವಿಶಾಲವಾಗಿರಲಿ (ಅಣುವಾಗಿರಲಿ ಅಥವಾ ಸ್ಥೂಲವಾಗಿರಲಿ) ಕಾಣಿಸುವಂತಿರಲಿ ಅಥವಾ ಅದೃಶ್ಯವಾಗಿರಲಿ, ಹತ್ತಿರವೇ ವಾಸಿಸಲಿ ಅಥವಾ ದೂರವೇ ವಾಸಿಸಲಿ, ಹುಟ್ಟಿರುವುದಾಗಲಿ, ಮುಂದೆ ಹುಟ್ಟುವಂತದ್ದು ಆಗಿರಲಿ, ಸರ್ವ ಜೀವಿಗಳು ಸುಖಿಯಾಗಿರಲಿ.
6. ಯಾರೂ ಪರರಿಗೆ ವಂಚಿಸದಿರಲಿ ಯಾರೂ ಪರರನ್ನು ಕೀಳಾಗಿ ಕಾಣದಿರಲಿ (ಅಪಮಾನಿಸದಿರಲಿ), ಕೋಪದಿಂದಾಗಲಿ, ದ್ವೇಷದಿಂದಾಗಲಿ ಪರರ ದುಃಖವನ್ನು ಇಚ್ಛಿಸದಿರಲಿ.
7. ಮಹಾಮಾತೆಯೊಬ್ಬಳು ಯಾವರೀತಿ ತನ್ನ ಪ್ರಾಣವನ್ನು ಲೆಕ್ಕಿಸದೆ ತನ್ನ ಏಕೈಕ ಮಗುವನ್ನು (ಪುತ್ರನನ್ನು) ರಕ್ಷಿಸುವಳೋ, ಅದೇರೀತಿಯಾಗಿ ಸರ್ವ ಜೀವಿಗಳೂ ಅಪರಿಮಿತವಾದ, ಅಸೀಮವಾದ, ಅಗಾಧ ಹೃದಯದಿಂದ (ಕರುಣೆ) ಕೂಡಿರಲಿ.
8. ಎಲ್ಲಾ ತಡೆಗಳನ್ನು ಮೀರಿ, ದ್ವೇಷರಹಿತವಾಗಿ, ವಿರೋಧರಹಿತವಾಗಿ ತನ್ನ ಮಹಾನ್ ಮೈತ್ರಿಯ ಸಹೃದಯದಿಂದ ಮೇಲೆ, ಕೆಳಗೆ, ಸುತ್ತಲೂ ಇಡೀ ವಿಶ್ವಕ್ಕೆ ಕ್ಷೇಮ ಸುಖ ಭಾವವನ್ನು ಪ್ರಬಲವಾಗಿ ಪ್ರಸರಿಸಲಿ.
9. ಒಬ್ಬನು ನಿಂತಿರುವಾಗ, ನಡೆಯುತ್ತಿರುವಾಗ, ಕುಳಿತಿರುವಾಗ ಅಥವಾ ಮಲಗಿರುವಾಗ ಇದೇ ಪ್ರಕಾರದ ಶ್ರೇಷ್ಠ ಎಚ್ಚರಿಕೆಯಲ್ಲಿರಲಿ, ಇದನ್ನೇ ಬ್ರಹ್ಮವಿಹಾರ ಎನ್ನುತ್ತಾರೆ.
10. ಇಂತಹವನು ಮಿಥ್ಯಾದೃಷ್ಟಿಯನ್ನು ಮೀರಿ, ಶೀಲವಂತನಾಗಲಿ, ವಿಶುದ್ಧ ದರ್ಶನವುಳ್ಳವನಾಗಲಿ, ಹಾಗೆಯೇ ಕಾಮಗಳಲ್ಲಿ ಆಸಕ್ತಿರಹಿತನಾಗಿರುವವನು ಮತ್ತೆ ಗರ್ಭದಲ್ಲಿ ಜನ್ಮಿಸಲಾರ, ಮುಕ್ತನಾಗುತ್ತಾನೆ.
ಇಲ್ಲಿಗೆ ಮೆತ್ತಾ ಸುತ್ತ ಮುಗಿಯಿತು