Wednesday, 16 July 2014

vyaggapajja sutta in kannada


ವ್ಯಾಗ್ಗಪಜ್ಜ ಸುತ್ತ 

ನಾನು (ಆನಂದ ಮಹಾಥೇರ) ಹೀಗೆ ಕೇಳಿದ್ದೇನೆ. ಒಮ್ಮೆ ಬುದ್ಧ ಭಗವಾನರು ಕೋಲಿಯ ರಾಜರ ಪ್ರಾಂತ್ಯವಾದ ಹಕ್ಕರಪತ್ತಂ ಹಳ್ಳಿಯಲ್ಲಿ ವಾಸವಾಗಿದ್ದರು. 

ಆ ಸಮಯದಲ್ಲಿ ದೀಘಜಾನು ಎಂಬ ಕೋಲಿಯನು ಭಗವಾನರು ಇದ್ದಕಡೆ ಹೋಗಿ ಅವರಿಗೆ ಶ್ರದ್ಧೆಯಿಂದ ವಂದಿಸಿ ಒಂದುಕಡೆ ಕುಳಿತನು. ಹಾಗೆ ಕುಳಿತ ದೀಘಜಾನು ಕೋಲಿಯನು ಭಗವಾನರಿಗೆ ಹೀಗೆ ಹೇಳಿದನು:

ಪರಮಪೂಜ್ಯ ಭಂತೆ, ಗೃಹಸ್ಥರಾದ ನಾವು ಇಂದ್ರೀಯ ಸುಖಗಳಲ್ಲೇ ದಿನಗಳನ್ನು ಕಳೆಯುವೆವು. ನಾವು ನಮ್ಮ ಪತ್ನಿ ಹಾಗು ಪುತ್ರರ ಪಾಲನೆಯಲ್ಲೇ ಇರುವುದರಿಂದ ನಮಗೆ ಪುಣ್ಯದ ಕಾಯರ್ಾಚರಣೆಗೆ ಸಾಕಷ್ಟು ಸಮಯವಿರುವುದಿಲ್ಲ. ನಾವು ನಮ್ಮ ಶರೀರಗಳಿಗೆ ಕಾಶಿಯ ಗಂಧದ ಸುಂಗಂಧದ್ರವ್ಯ ಹಚ್ಚುವೆವು ಹಾಗು ಇನ್ನಿತರ ಸುಗಂಧವನ್ನು ಹಚ್ಚುವೆವು. ನಾವು ನಮ್ಮ ಶರೀರಗಳಿಗೆ ಸುಂದರವಾದ ಹಾಗು ಸುಗಂಧಿತವಾದ ಹೂವಿನ ಹಾರಗಳನ್ನು ಹಾಕಿಕೊಳ್ಳುವೆವು. ನಾವು ಚಿನ್ನ ಹಾಗು ಬೆಳ್ಳಿಯಿಂದ ಅಲಂಕೃತವಾದ ರತ್ನಾಭರಣಗಳನ್ನು ಹಾಕಿಕೊಳ್ಳುವೆವು. ಆದ್ದರಿಂದ ಪರಮಪೂಜ್ಯ ಭಗವಾನ್, ನಮಗೆ ಸಹಾಯಕವಾಗಿರುವಂತಹ ಗೃಹಸ್ಥರಿಗೆ ಇಹಲೋಕದಲ್ಲಿ ಸುಖವನ್ನು ನೀಡುವ ಹಾಗು ಪರಲೋಕದಲ್ಲಿ ಕ್ಷೇಮ ಹಾಗು ಸುಖ ನೀಡುವ ಬೋಧನೆ ಇದ್ದರೆ ಅದನ್ನು ನಮಗೆ ಬೋಧಿಸುವಂತಾಗಬೇಕು.

ಆಗ ವಿಜ್ಜಾಚರಣಸಂಪನ್ನರು ಬೋಧನೆಯನ್ನು ಪ್ರಾರಂಭಿಸಿದರು: ವ್ಯಾಗ್ಗಪಜ್ಜ, ಈ ನಾಲ್ಕು ಧಮ್ಮವನ್ನು (ನಿಯಮವನ್ನು) ಆತನು ಅನುಸರಿಸಿದರೆ, ಆತನು ಶೀಲವಂತನಾಗಿ, ಇರುವ ಹಾಗು ಪರಲೋಕದ ಸುಖ ಕ್ಷೇಮವನ್ನು ಉಳ್ಳವನಾಗುತ್ತಾನೆ ಯಾವುದು ನಾಲ್ಕು?

1. ಪ್ರಯತ್ನಶೀಲತೆ

2. ಐಶ್ವರ್ಯದ ರಕ್ಷಣೆ

3. ಶ್ರೇಷ್ಠ ಮಿತ್ರತ್ವ

4. ಬಳಸುವಿಕೆ (ಮಿತವ್ಯಯ)

ಓ ವ್ಯಾಗ್ಗಪಜ್ಜ, ಪ್ರಯತ್ನಶೀಲತೆ ಎಂದರೇನು? ವ್ಯಾಗ್ಗಪಜ್ಜ, ಇಲ್ಲಿ ಗೃಹಸ್ಥನು ಅನೇಕ ರೀತಿಯ ವೃತ್ತಿಯನ್ನು ತನ್ನ ಪಾಲನೆಗೆ ಅವಲಂಬಿಸುತ್ತಾನೆ. ಅವು ವ್ಯವಸಾಯ ವಾಗಿರಬಹುದು ಅಥವಾ ವ್ಯಾಪಾರವಾಗಿರಬಹುದು ಅಥವಾ ಪಶುಪಾಲನೆ ಅಥವಾ ಕ್ಷತ್ರಿಯತೆ ಅಥವ ರಾಜನೀತಿ ನಿಪುಣತೆ ಅಥವಾ ಇನ್ನಾವುದೇ ವೃತ್ತಿಯಾಗಿರಬಹುದು. ಯಾವುವೆಂದರೆ: ಕಮ್ಮಾರ, ಕುಂಬಾರ ಇತ್ಯಾದಿ... ಯಾವುದೇ ಪ್ರಾಪಂಚಿಕ ವೃತ್ತಿಯಲ್ಲಿ ಕುಶಲನಾಗಿರಬೇಕು. ನಿರಂತರ ಪ್ರಯತ್ನಶೀಲನಾಗಿರಬೇಕು ಮತ್ತು ಸರಿಯಾದ ಕಾಲದಲ್ಲಿ, ಕರ್ತವ್ಯದ ವೇಳೆಯಲ್ಲಿ ವಿಳಂಬನ ಮಾಡದೆ ಆಲಸ್ಯ ತೋರಿಸದೆ ಶ್ರಮನಿರತನಾಗಿಬೇಕು. ಆತನ ಶ್ರಮವು ಯೋಗ್ಯ ತೀಮರ್ಾನ ಹಾಗು ಬುದ್ಧಿ ಕೌಶಲ್ಯದಿಂದ ಕೂಡಿರಬೇಕು. ಓ ವ್ಯಾಗ್ಗಪಜ್ಜ ಐಶ್ವರ್ಯ ಸಂಗ್ರಹಣೆಗೆ ಅಥವಾ ಪೂರ್ಣ ಸಫಲತೆಯ ಪ್ರಾಪ್ತಿಗೆ ನಿರಂತರ ಶ್ರಮಶೀಲತೆ ಹಾಗು ದೃಢವಾದ ಕ್ರಿಯಾತ್ಮಕತೆ ಅತ್ಯವಶ್ಯಕ ಇದನ್ನೇ ಪ್ರಯತ್ನಶೀಲತೆ ಎನ್ನುತ್ತಾರೆ.

ಓ ವ್ಯಾಗ್ಗಪಜ್ಜ, ಐಶ್ವರ್ಯ ರಕ್ಷಣೆ ಎಂದರೇನು? ವ್ಯಾಗ್ಗಪಜ್ಜ ಗೃಹಸ್ಥನು ತನ್ನ ನಿರಂತರ ಪ್ರಯತ್ನಶೀಲತೆಯಿಂದ ಐಶ್ವರ್ಯ ಸಂಪಾದಿಸುತ್ತಾನೆ. ಅದಕ್ಕಾಗಿ ಆತನು ತನ್ನ ಅಂಗಾಂಗಗಳ ಶಕ್ತಿಯನ್ನು ಬಳಸಿರುತ್ತಾನೆ. ಹಣೆಯಲ್ಲಿ ಬೆವರು ಸುರಿಸುತ್ತಾನೆ, ಅದಕ್ಕಾಗಿ ಉತ್ತಮೋತ್ತಮ ಉಪಾಯಗಳನ್ನು ಹಾಕಿರುತ್ತಾನೆ ಮತ್ತು ಯೊಗ್ಯವಾದ ಜೀವನದಿಂದ ಸಂಪಾದಿಸಿರುತ್ತಾನೆ. ಆಗ ಗೃಹಸ್ಥನು ಈ ರೀತಿ ಚಿಂತಿಸಬೇಕು: ಈ ಐಶ್ವರ್ಯ ನನ್ನಿಂದ ಸಂಪಾದಿಸಲಾಗಿದೆ. ನಾನು ಇದನ್ನು ಕಳ್ಳರಿಂದ ರಕ್ಷಿಸಬೇಕು, ಬೆಂಕಿಯಿಂದ ರಕ್ಷಿಸಬೇಕು. ಅಧಿಕಾರದವರಿಂದ ರಕ್ಷಿಸಬೇಕು ಮತ್ತು ಅಸಮ್ಮತಿ ಸೂಚಿಸುವ ಹಾಗು ಈಷರ್ೆಯುಳ್ಳ ಬಾಂಧವರಿಂದ ರಕ್ಷಿಸಬೇಕು. ಈ ರೀತಿಯಾಗಿ ಮುನ್ನೆಚ್ಚರಿಕೆಯಿಂದ, ದೂರದೃಷ್ಟಿಯಿಂದ ಯೋಚಿಸಿ ಸಂಪಾದಿಸಿದ ಐಶ್ವರ್ಯ ರಕ್ಷಿಸುವುದೇ ಐಶ್ವರ್ಯದ ರಕ್ಷಣೆಯಾಗುತ್ತದೆ. 

ಓ ವ್ಯಾಗ್ಗಪಜ್ಜ, ನಿಜವಾದ ಶ್ರೇಷ್ಠ ಮಿತ್ರತ್ವ ಎಂದರೇನು? ಈ ಜಗತ್ತಿನಲ್ಲಿ ವ್ಯಾಗ್ಗಪಜ್ಜ ಹಳ್ಳಿಯಲ್ಲೇ ವಾಸಿಸಲಿ ಅಥವಾ ಪಟ್ಟಣದಲ್ಲೇ ವಾಸಿಸಲಿ, ಒಬ್ಬ ಉಪಾಸಕನನ್ನು ಅಥವಾ ಉಪಾಸಕ ಪುತ್ರನನ್ನು ಹುಡುಕಬೇಕು. ಆತನು ಹೇಗಿರಬೇಕೆಂದರೆ ಶೀಲಗಳನ್ನು ಪಾಲಿಸುವಂತಹವನು, ಧಮ್ಮಜ್ಞಾತಜ್ಞನು, ಧಾಮರ್ಿಕತೆಯಲ್ಲಿ ಮುಂದುವರೆದವನು, ಶ್ರದ್ಧೆಯಲ್ಲಿ ದೃಢವಂತನು, ಗೃಹಸ್ಥ ನಿಯಮಗಳನ್ನು ಪಾಲಿಸಿದವನು, ಪರರಲ್ಲಿ ಸೇವಾಮನೋಭಾವ ಉಳ್ಳವನು, ಅನೇಕ ಶಾಸ್ತ್ರಗಳಲ್ಲಿ ನಿಪುಣನು ಅಂತಹವನ ಜೊತೆಗೂಡಬೇಕು. ಆತನಲ್ಲಿ ಚಚರ್ಿಸಬೇಕು, ಅರಿಯಬೇಕು. ಆಗ ಈ ಗೃಹಸ್ಥನು ಸಹಾ ಆತನಂತೆಯೇ ಶೀಲ ಪಾಲನಾಬದ್ಧನು, ಪ್ರಜ್ಞಾ ಅಭ್ಯುದಯನು, ಆಳವಾದ ಧಾಮರ್ಿಕನು, ಶ್ರದ್ಧಾ ದೃಢವಂತನು, ಗೃಹಸ್ಥ ಸುಕಮರ್ಿಯು, ಪರಹಿತ ಆಚರಣೆಯುಳ್ಳವನು ಹಾಗು ಸರ್ವಶಾಸ್ತ್ರ ಬಲ್ಲವನು ಆಗುತ್ತಾನೆ. ಆತನು ಒಳ್ಳೆಯದನ್ನು ಮಾಡುತ್ತಾನೆ ಹಾಗು ಕೆಟ್ಟದರಿಂದ ದೂರವಿರುತ್ತಾನೆ. ಇದನ್ನು ವ್ಯಾಗ್ಗಪಜ್ಜ ಶ್ರೇಷ್ಠ (ನಿಜವಾದ) ಮಿತ್ರತ್ವ ಎನ್ನುತ್ತಾರೆ.

ಬಳಸುವಿಕೆ : ಓ! ವ್ಯಾಗ್ಗಪಜ್ಜ ಮಿತವ್ಯಯದಿಂದ ಈ ಜಗತ್ತಿನಲ್ಲಿರಬೇಕು. ವ್ಯಾಗ್ಗಪಜ್ಜ ಗೃಹಸ್ಥನು ಪೂರ್ಣ ಬುದ್ಧಿಯಿಂದ ಅರಿಯಬೇಕು. ಏನೆಂದರೆ ಐಶ್ವರ್ಯವನ್ನು ಅತಿ ಶ್ರಮಪಟ್ಟು ಸಂಪಾದಿಸಬೇಕಾಗುತ್ತದೆ. ಹಾಗು ಅದರ ಬಳಕೆಯನ್ನು ಸಹಾ ಮಿತವಾಗಿ ಬಳಸಬೇಕಾಗುತ್ತದೆ. ಹೇಗೆಂದರೆ ಖಚರ್ು ಮಾಡುವ ಎರಡರಷ್ಟು ಸಂಪಾದಿಸಬೇಕಾಗುತ್ತದೆ ಮತ್ತು ದಿನವನ್ನು ಕಳೆಯಬೇಕಾಗುತ್ತದೆ. ಅತಿ ಹೆಚ್ಚು ಖಚರ್ು ಮಾಡಬಾರದು, ಅತಿ ಜಿಪುಣತನದ ರೀತಿ ಅತ್ಯಲ್ಪವೂ ಬಳಸಬಾರದು. ಆಗ ಸಂಪಾದಿಸಿದ ಐಶ್ವರ್ಯ ನಷ್ಟವಾಗುವುದಿಲ್ಲ. ವ್ಯಾಗ್ಗಪಜ್ಜ ವ್ಯಾಪಾರಿಯೇ ಅಗಿರಲಿ ಅಥವಾ ಪರಾಧಿನ ಉದ್ಯೋಗಸ್ಥನೇ ಆಗಿರಲಿ, ಸಮತೂಕವಾಗಿ ಬಳಸಬೇಕು ಹಾಗು ರಕ್ಷಿಸಬೇಕು. ತಕ್ಕಡಿಯಲ್ಲಿ ತೂಕವನ್ನು ಹಾಕಿದರೆ ಬಾರವಿರುವುದು ಕೆಳಗೆ ಬರುತ್ತದೆ ಮತ್ತೊಂದು ಭಾಗ ಕೊರತೆಯಿಂದ ಮೇಲಕ್ಕೆ ಹೋಗುತ್ತದೆ. ಆದ್ದರಿಂದ ಸಮವಾಗಿರಬೇಕು. ಇದೇ ರೀತಿಯಿಂದ ಗೃಹಸ್ಥನು ಅರಿಯಬೇಕು ಹೇಗೆಂದರೆ, ತನ್ನ ಲಾಭವನ್ನು ಗಮನಿಸಿ ಖರ್ಚನ್ನು ಹೊಂದಿಸಿಕೊಳ್ಳಬೇಕು. ಐಶ್ವರ್ಯ ದೊರೆಯುವುದು ಅತಿ ಕಷ್ಟಪಟ್ಟ ಮೇಲೆಯೇ ಮತ್ತು ಶೋಕಿನ ದುಂದುವೆಚ್ಚ ಮಾಡಿದರೆ ಹಾನಿಯೇ ಸರಿ. ಆತನು ಅತಿ ಬುದ್ಧಿಯಿಂದ ತನ್ನ ಅವಶ್ಯಕತೆಗೆ ಪಾಲನೆಗೆ ತಕ್ಕಂತೆ ಬಳಸಬೇಕು. ಈ ರೀತಿಯಾಗಿ ಬಳಕೆ ಮಾಡಿದರೆ ಆತನು ದುಂದುವೆಚ್ಚಗಾರನಾಗುವುದಿಲ್ಲ. ಆತನ ಐಶ್ವರ್ಯವು ಕ್ಷೀಣಿಸುವುದಿಲ್ಲ, ಬದಲಾಗಿ ಸುರಕ್ಷಿತವಾಗಿರುತ್ತದೆ. 

ವ್ಯಾಗ್ಗಪಜ್ಜ, ಯಾವ ಗೃಹಸ್ಥ ಅಲ್ಪ ಸಂಪಾದಿಸಿ ಅಧಿಕವಾಗಿ ಖಚರ್ು ಮಾಡುತ್ತಾನೆಯೋ, ಅದರಂತೆ ಜೀವಿಸುತ್ತಾನೆಯೋ ಅವನು ಹೇಗಿರುತ್ತಾನೆಂದರೆ ಕಾಡುಸೇಬು ತಿನ್ನುವ ಮನುಷ್ಯನು ಮರಹತ್ತಿ ಕಾಯಿಯನ್ನು ಹಾಗು ಹಣ್ಣುಗಳನ್ನು ಎಲ್ಲವನ್ನು ಕೊಂಬೆ ಅಲ್ಲಾಡಿಸಿ ಬೀಳಿಸುತ್ತಾನೆ. ನಂತರ ಹಣ್ಣುಗಳನ್ನು ತಿಂದು ಕಾಯಿಗಳನ್ನು ಬಿಸಾಡಿ ಹೋಗುತ್ತಾನೆ. ಜನರು ಅಂತಹ ನಷ್ಟವನ್ನು ವಿರೋಧಿಸುತ್ತಾರೆ.

ವ್ಯಾಗ್ಗಪಜ್ಜ, ಯಾವುದಾದರೂ ಗೃಹಸ್ಥ ಜಿಪುಣತನದಿಂದ ತನ್ನ ಸುಖಕ್ಕೆ ಅತಿ ಅಲ್ಪವಾಗಿ ಬಳಸಿ ಸತ್ತರೆ, ಆತನು ನಿಂದೆಗೆ ಪ್ರಾಪ್ತಿಯಾಗುತ್ತಾನೆ. ಏಕೆಂದರೆ ಯಾವ ಪ್ರಾಪಂಚಿಕ ಸುಖಕ್ಕಾಗಿ ಹಣ ಪ್ರಾಪ್ತಿ ಮಾಡಿದನೋ ಅದಕ್ಕೆ ಬಳಸದೆ ಹೋಗುತ್ತಾನೆ. 

ವ್ಯಾಗ್ಗಪಜ್ಜ, ಆದ್ದರಿಂದ ಗೃಹಸ್ಥನು ಬುದ್ಧಿವಂತಿಕೆಯಿಂದ ಐಶ್ವರ್ಯ ಐಶ್ವರ್ಯ ಸಂಪಾದನೆ ಆಗುವ ಕಷ್ಟ ಅರಿತು, ಅದಕ್ಕಾಗಿ ದುಂದುವೆಚ್ಚ ಮಾಡದೆ, ಜಿಪುಣನು ಆಗದೆ ಬಳಸಬೇಕು. ಆತನು ಈ ರೀತಿ ವಿವೇಕಿಯಾಗಿ ವತರ್ಿಸಬೇಕು. ಈ ಐಶ್ವರ್ಯ ನನ್ನಿಂದ ಸಂಪಾದಿಸಲ್ಪಟ್ಟಿದೆ. ನಾನು ಇದನ್ನು ಅತಿಯಾಗಿ ಖಚರ್ು ಮಾಡಲಾರೆ, ಬದಲಾಗಿ ಮಿತವ್ಯಯದಿಂದ ನನ್ನ ಅಗತ್ಯತೆಗೆ ತಕ್ಕಂತೆ ಬಳಸುತ್ತೇನೆ ಈ ರೀತಿಯ ಬಳಕೆಯನ್ನು ಮಿತವ್ಯಯ ಎನ್ನುತ್ತಾರೆ.

ವಾಗ್ಗಪಜ್ಜ, ಈ ನಾಲ್ಕು ದಾರಿಯಿಂದ ನೀತಿಯಿಂದ ನಿರಂತರ ಪರಿಶ್ರಮದಿಂದ ಗಳಿಸಿದ ಐಶ್ವರ್ಯವು ನಾಶವಾಗುತ್ತದೆ. ಯಾವುದು ನಾಲ್ಕು ? ಅವೆಂದರೆ :

1. ಅನೀತಿಯುತ ಕಾಮುಕತೆಯಲ್ಲಿ ತಲ್ಲೀನನಾಗುವುದು

2. ಮಾದಕ ಪಾನೀಯಗಳಲ್ಲಿ ನಿರತನಾಗುವುದು

3. ಜೂಜಿನಲ್ಲಿ ರತನಾಗುವುದು

4. ಅನೀತಿಯುತ ಮಿತ್ರರ ಸಂಗಡ ಬೆರೆಯುವುದು.

ವ್ಯಾಗ್ಗಪಜ್ಜ, ಒಂದು ಸರೋವರಕ್ಕೆ ಅತಿ ಶ್ರಮದಿಂದ ಕಟ್ಟೆಯನ್ನು ಭದ್ರಪಡಿಸುತ್ತಾರೆ. ಅದಕ್ಕೆ ನಾಲ್ಕುಕಡೆಯಿಂದ ನೀರು ಒಳಗೆ ಬರುವ ಹಾದಿಯಿರುತ್ತದೆ. ಹಾಗೆಯೇ ನಾಲ್ಕುಕಡೆ  ನೀರು ಹೊರಹೋಗುವ ದಾರಿ ತೆರೆಯಬಿಟ್ಟರೆ, ಅಲ್ಲಿ ಗಾಳಿಯ ಪ್ರವೇಶ ಇಲ್ಲದೆಯೇ ಸರೋವರ ಹರಿದು ಬರಿದಾಗಿಬಿಡುತ್ತದೆ. ಇದೇ ರೀತಿಯಾಗಿ ವ್ಯಾಗ್ಗಪಜ್ಜ, ಮಾನವ ಸಂಪಾದಿಸಿದ ಐಶ್ವರ್ಯವೂ ಸಹಾ ಹಾನಿಯಾಗುತ್ತದೆ. 

ವ್ಯಾಗ್ಗಪಜ್ಜ, ನಾಲ್ಕು ದಾರಿಯಿಂದ ಪರಿಶ್ರಮಪಟ್ಟು ಗಳಿಸಿದ ಐಶ್ವರ್ಯ ಸುರಕ್ಷಿತವಾಗಿರುತ್ತದೆ ಹಾಗು ಅಭಿವೃದ್ಧಿ ಹೊಂದುತ್ತದೆ. ಅವು ಯಾವುವು? ಅದೆಂದರೆ:

1. ಅನೀತಿಯುತ ಕಾಮುಕತನದಿಂದ ವಿರತನಾಗುವುದು.

2. ಮಾದಕ ಪಾನೀಯಗಳಿಂದ ದೂರವಿರುವುದು.

3. ಜೂಜಾಡುವುದನ್ನು ತೊರೆಯುವುದು

4. ಶ್ರೇಷ್ಠ ಮಿತ್ರರನ್ನು ಹೊಂದಿರುವುದು. 

ಇದರಿಂದ ಆತನ ಐಶ್ವರ್ಯವು ಅಭಿವೃದ್ಧಿಯಾಗತ್ತದೆ.

ವ್ಯಾಗ್ಗಪಜ್ಜ ಸರೋವರವೊಂದಕ್ಕೆ ನಾಲ್ಕು ಕಡೆಗಳಿಂದಲೂ ಕಟ್ಟೆ ಕಟ್ಟಿರುತ್ತಾರೆ, ಭದ್ರಪಡಿಸಿರುತ್ತಾರೆ. ಅದರ ಹೊರಹೋಗುವ ಮಾರ್ಗ ಎಲ್ಲಾ ರೀತಿಯಲ್ಲಿ ಮುಚ್ಚಿದ್ದು ನೀರು ಒಳಹೋಗುವ ಹಾದಿ ತೆರೆದಿದ್ದು ನೀನು ಒಳಗೆ ಹರಿದರೆ ಮತ್ತು ಒಳಹೋಗುವ ಹಾದಿಗೆ ಗಾಳಿಯ ತಡೆಯು ಇಲ್ಲದಿದ್ದರೆ ಸರೋವರದ ನೀರು ಕ್ಷೀಣಿಸುವುದಿಲ್ಲ, ಬದಲಾಗಿ ವೃದ್ಧಿಸುತ್ತದೆ. ಹಾಗೆಯೇ ಸರೋವರವು ತುಂಬುತ್ತದೆ.

ಇದೇರೀತಿಯಾಗಿ ವ್ಯಾಗ್ಗಪಜ್ಜ, ಯಾವ ಮನುಷ್ಯನು ಅನೀತಿಯುತ ಕಾಮವನ್ನು ತ್ಯಜಿಸಿರುವನು, ಮದ್ಯಪಾನವನ್ನು ಬಿಟ್ಟಿರುವನೋ, ಜೂಜಿನಿಂದ ವಿರತನೋ ಮತ್ತು ಕೆಟ್ಟ ಸ್ನೇಹಿತರನ್ನು ತೊರೆದಿರುವನೋ ವ್ಯಾಗಪಜ್ಜ, ಅಂತಹ ನಾಲ್ಕು ನಿಯಮಗಳಿಂದ ಕೂಡಿದ ಗೃಹಸ್ಥನು ಈ ಜೀವನದಲ್ಲಿ ಶೀಲವಂತನಾಗಿದ್ದು, ಮುಂದಿನ ಜನ್ಮದಲ್ಲಿ ಸುಖವನ್ನು ಪಡೆಯುತ್ತಾನೆ.

ವ್ಯಾಗ್ಗಪಜ್ಜ ಮುಂದಿನ ನಾಲ್ಕು ನಿಯಮಗಳಿಗೆ ಬದ್ಧನಾದರೆ ಅತನು ಮುಂದೆ ಉತ್ತಮ ಜನ್ಮ ಪಡೆಯುತ್ತಾನೆ. ಸುಗತಿಯ ಸುಖವನ್ನು ಪಡೆಯುತ್ತಾನೆ. ಯಾವುವು ನಾಲ್ಕು? ಅವೆಂದರೆ: 1) ಶ್ರದ್ಧೆ  2) ಶೀಲ  3) ದಾನ  4) ಪ್ರಜ್ಞಾಶೀಲತೆ.

ಓ ವ್ಯಾಗ್ಗಪಜ್ಜ, ಶ್ರದ್ಧೆ ಎಂದರೇನು? ಈ ಜಗತ್ತಿನಲ್ಲಿ ವ್ಯಾಗ್ಗಪಜ್ಜ ಗೃಹಸ್ಥನು ಶ್ರದ್ಧೆಯುಳ್ಳವನಾಗುತ್ತಾನೆ. ಆತನು ಬುದ್ಧರಲ್ಲಿ ಹಾಗು ಅವರ ಅಸಮಾನ್ಯ ಜ್ಞಾನದಲ್ಲಿ ಪ್ರಬಲ ಶ್ರದ್ಧೆಯಿಡುತ್ತಾನೆ. ಆತನು ಈ ರೀತಿ ಚಿಂತಿಸಿ ಶ್ರದ್ಧೆಯನ್ನು ಅಭಿವೃದ್ಧಿಗೊಳಿಸುತ್ತಾನೆ. 

ಬುದ್ಧ ಭಗವಾನರು ಎಲ್ಲಾ ಪಾಪಗಳನ್ನು ದಾಟಿ ಹೋಗಿದ್ದಾರೆ (ಮುಕ್ತರು) ಅವರು ಸ್ವಯಂ ಪರಿಶ್ರಮದಿಂದ ಸರ್ವ ವಿಷಯಗಳ ಕಾರಣವನ್ನು ಹಾಗು ಅದರ ನಿವಾರಣೆಯನ್ನು ಅರಿತಿದ್ದಾರೆ. ಅವರು ಸರ್ವರಿಗೂ ಕರುಣೆಯ ನುಡಿಗಳನ್ನು ಆಡುತ್ತಾರೆ ಮತ್ತು ಅವರ ಅನಂತ ಅತೀ ಮೈತ್ತಿಯಿಂದ (ಶುದ್ಧ ಪ್ರೀತಿ) ಕೂಡಿದ ಆಚರಣೆಯಲ್ಲಿರುತ್ತಾರೆ. ಅವರು ತಮ್ಮ ದಿವ್ಯಚಕ್ಷುವಿನಿಂದ ಸರ್ವ ಲೋಕಗಳನ್ನು ಅರಿತಿದ್ದಾರೆ. ಅವರು ಮಾನವರೆಲ್ಲಾ ಪಾಪದಿಂದ ವಿಮುಕ್ತರಾಗಲು ಹಾಗು ಶ್ರೇಷ್ಠ ಋಜು ಮಾರ್ಗ ಹಿಡಿಯಲು ಕಾರಣಕರ್ತರಾಗಿದ್ದಾರೆ. ಅವರು ಸರ್ವದೇವ ಹಾಗು ಮಾನವರ ಮಾರ್ಗದಶರ್ಿಯಾಗಿದ್ದಾರೆ. ಅವರು ಸ್ವಯಂ ಪರಮಶ್ರೇಷ್ಠವಾದ ನಾಲ್ಕು ಸತ್ಯಗಳನ್ನು ಕಂಡುಹಿಡಿದಿದ್ದಾರೆ. ಹಾಗು ಪರರ ಪರಮ ಉನ್ನತಿಗೆ ಅದನ್ನು ಪ್ರಕಾಶಿಸುತ್ತಾರೆ. ಈ ರೀತಿಯಾಗಿ ಬುದ್ಧರಲ್ಲಿ ಶ್ರದ್ಧೆಯುಳ್ಳವನಾಗುತ್ತಾನೆ. 

ಓ ವ್ಯಾಗ್ಗಪಜ್ಜ, ಶೀಲಗಳ ಪಾಲನೆ ಎಂದರೇನು? ಈ ಜಗತ್ತಿನಲ್ಲಿ ವ್ಯಾಗ್ಗಪಜ್ಜ ಗೃಹಸ್ಥನು ಜೀವಹತ್ಯೆಯಿಂದ ವಿರತನಾಗುವುದು, ತನ್ನದಲ್ಲದ್ದನ್ನು ತೆಗೆದುಕೊಳ್ಳುವ, ಕಳ್ಳತನದಿಂದ ವಿರತನಾಗುವುದು, ಅನೀತಿಯುತ ಕಾಮುಕತೆಯಿಂದ ವಿರತನಾಗುವುದು, ಯಾವುದೇ ರೀತಿಯ ಅಸತ್ಯವನ್ನು ಹೇಳುವುದರಲ್ಲಿ ವಿರತನಾಗುವುದು ಮತ್ತು ಮಾದಕ ಪಾನೀಯಗಳ ಸೇವನೆಯಲ್ಲಿ ವಿರತನಾಗುವುದು. ಇದನ್ನೇ ಶೀಲಗಳ ಪಾಲನೆ ಎನ್ನುವರು.

ಓ ವ್ಯಾಗ್ಗಪಜ್ಜ, ದಾನವೆಂದರೇನು? ಈ ಜಗದಲ್ಲಿ ಗೃಹಸ್ಥನು ತೃಪ್ತಿಹೊಂದದ ಬಯಕೆಗಳಿಂದ ಕೂಡಿ, ಪರರ ಐಶ್ವರ್ಯದಲ್ಲಿ ಈಷರ್ೆಪಟ್ಟು ಈ ರೀತಿ ನಿರ್ಧರಿಸುತ್ತಾನೆ: ನನ್ನ ಈ ಐಶ್ವರ್ಯ ಪರರಲ್ಲಿ ಅಲ್ಪವೂ ಹೋಗದಿರಲಿ ಎಂದು. ಆದರೆ ದಾನ ಇದಲ್ಲ, ಬದಲಾಗಿ ಪರರಲ್ಲಿ ಅತ್ಯಂತ ದಯೆಯುಳ್ಳವರಾಗಿ ಪರರಿಗೆ ಪಾಲನ್ನು ನೀಡುವುದು ಮತ್ತು ಪರರಿಗೆ ಅವರ ಅಗತ್ಯ ಬಂದಾಗ ನೀಡುವುದು ಮತ್ತು ತನ್ನ ಐಶ್ವರ್ಯದಲ್ಲಿ ಪರರಿಗೂ ಪಾಲು ನೀಡುವುದು. ವ್ಯಾಗ್ಗಪಜ್ಜ ಇದನ್ನೇ ದಾನ ಎನ್ನುವರು.

ಮತ್ತೆ ಓ ವ್ಯಾಗ್ಗಪಜ್ಜ, ಪ್ರಜ್ಞಾಶೀಲತೆ ಎಂದರೇನು? ವ್ಯಾಗ್ಗಪಜ್ಜ, ಈ ಜಗತ್ತಿನಲ್ಲಿ  ಗೃಹಸ್ಥನು ತನ್ನ ಧಾಮರ್ಿಕ ಜೀವನಕ್ಕೆ ಪ್ರಬಲವಾಗಿ ಅಡ್ಡಿಯಾಗಿರುವ ಅಜ್ಞಾನವನ್ನು ದೂರೀಕರಿಸುವುದು ಅಥವಾ ಈ ಜಗತ್ತಿನಲ್ಲಿ ಸಫಲತೆಯನ್ನು ಸಾಧಿಸಿ ಸಂಬೋಧಿಯನ್ನು ಪ್ರಾಪ್ತಿಮಾಡುವುದು ಮತ್ತು ಖಂಧಗಳ (ದೇಹ ಮತ್ತು ಮನಸ್ಸಿನ ರಾಶಿಯನ್ನು) ಉತ್ಪತ್ತಿ ಹಾಗು ಅದರ ಪರಿವರ್ತನೆ, ಅದರ ಲಯವನ್ನು ಆಳವಾಗಿ, ಸೂಕ್ಷ್ಮವಾಗಿ ಅರಿಯುವಿಕೆ ಹಾಗು ಇದರ ಫಲವಾಗಿ ಯಾವುದು ಅಸ್ತಿತ್ವದಲ್ಲಿದೆಯೋ ಅದೆಲ್ಲವನ್ನು ಪರಿವರ್ತನಶೀಲ ಅನಿತ್ಯವಾದುದು ಎಂದು ಅರಿಯುವುದು ವ್ಯಾಗ್ಗಪಜ್ಜ, ಇದನ್ನೇ ಪ್ರಜ್ಞಾಶೀಲತೆ ಎನ್ನುತ್ತಾರೆ.

ವ್ಯಾಗ್ಗಪಜ್ಜ, ಈ ನಾಲ್ಕು ನಿಯಮಗಳನ್ನು ಪಾಲಿಸುವುದರಿಂದ ಗೃಹಸ್ಥನು ಈ ಜೀವನದಲ್ಲಿನ ಅತ್ಯಂತ ಆನಂದಕರ ಜೀವನ ನಡೆಸುತ್ತಾನೆ ಹಾಗು ಮರಣದ ನಂತರ ಸುಗತಿಗೆ ಹೋಗುತ್ತಾನೆ. 

ಈ ರೀತಿಯಾಗಿ ಹೇಳಿದ ಮೇಲೆ ಭಗವಾನರು ಇದನ್ನೇ ಸಂಕ್ಷಿಪ್ತವಾಗಿ ಗಾಥೆಯಲ್ಲಿ ಹೇಳಿದರು: ಯಾವ ಗೃಹಸ್ಥನು ಸೋಮಾರಿಯಾಗಿದೆ, ತನ್ನ ಅನೇಕ ಕರ್ತವ್ಯಗಳನ್ನು, ಪುಣ್ಯಗಳನ್ನು ಭಂಗಮಾಡದೆ ಆಚರಿಸುತ್ತಿರುವನೋ, ಪ್ರಯತ್ನಶೀಲತೆಯನ್ನೇ ರಕ್ಷಿಸುತ್ತಿರುವನೋ, ಐಶ್ವರ್ಯದ ರಕ್ಷಣೆಯೊಂದಿಗೆ ಮಿತವ್ಯಯದಿಂದಿರುವನೋ, ಶ್ರದ್ಧೆಯಿಂದ ಶೀಲದ ಪಾಲನೆಯಲ್ಲಿರುವನೊ, ದಾನಿಯಾಗಿಯು ಮತ್ತು ಪ್ರಜ್ಞಾಶೀಲತೆಯಿಂದ ಕೂಡಿರುವನೋ ಅಂತಹ ಉತ್ತಮೋತ್ತಮನಲ್ಲಿ ಪಾಪಯುತ ಯೋಚನೆ ಉತ್ಪತ್ತಿ ಆಗುವುದಿಲ್ಲ.

ಬುದ್ಧ ಭಗವಾನರು ಈ ಬೋಧನೆಯನ್ನು ಗೃಹಸ್ಥರಿಗಾಗಿಯೇ ನೀಡಿದರು. ಯಾರು ತಾವು ಇಂದ್ರಿಯ ಸುಖಗಳಲ್ಲೇ ಕಾಲಕಳೆಯುತ್ತಾ ಪುಣ್ಯಕಾರ್ಯ ಮಾಡಲು ಸಾಕಷ್ಟು ಸಮಯವಿಲ್ಲವೋ, ಯಾರು ಪತ್ನಿ-ಪುತ್ರರ ಪಾಲನೆಯಲ್ಲೇ ಇರುವರೋ ಅಂತಹ ಗೃಹಸ್ಥರಿಗೆ ಈ ಜ್ಞಾನ ಅನರ್ಘ ಐಶ್ವರ್ಯವಾಗಿದೆ. ಇದನ್ನು ವ್ಯಾಗ್ಗಪಜ್ಜರಿಗೆ ಭಗವಾನರು ಹೇಳಿದ್ದರು. ಇದು ಸುತ್ತಪಿಟಕದ ಅಂಗುತ್ತರನಿಕಾಯದಲ್ಲಿ ಸಿಗುತ್ತದೆ. ಇದನ್ನು ಪಾಲಿಸುವ ಗೃಹಸ್ಥರ ಜೀವನವು ಇಹದಲ್ಲೂ ಹಾಗು ಪರಲೋಕದಲ್ಲೂ ಸುದೀರ್ಘ ಸುಖ ಹಿತವನ್ನು ನೀಡುತ್ತದೆ.


- ಂ0ಂ - ಂ0ಂ - ಂ0ಂ  

No comments:

Post a Comment