Thursday 24 September 2020

ಮಹಾನಾಮ ಸುತ್ತ (55.37)

 ಮಹಾನಾಮ ಸುತ್ತ (55.37)



ಒಮ್ಮೆ ಭಗವಾನರು ಶಾಕ್ಯರ ನಗರವಾದ ಕಪಿಲವಸ್ತುವಿನ ನಿಗ್ರೋಧ ಆರಾಮ(ಉಧ್ಯಾನವನ)ದಲ್ಲಿ ನೆಲಸಿದ್ದರು. ಆ ಸಮಯದಲ್ಲಿ ಶಾಕ್ಯರ ಹಿರಿಯರಾದಂತಹ ಮಹಾನಾಮರು ಭಗವಾನರ ಬಳಿಗೆ ಬಂದು ವಂದಿಸಿ ಒಂದೆಡೆ ಕುಳಿತರು. ನಂತರ ಅವರು ಭಗವಾನರೊಂದಿಗೆ ಹೀಗೆ ಸಂಬೋದಿಸಿದರು : "ಭಂತೆ ಯಾವ ರೀತಿಯಲ್ಲಿ ಒಬ್ಬನು ಉಪಾಸಕನಾಗುತ್ತಾನೆ(ಬೌದ್ಧನಾಗುತ್ತಾನೆ)"

"ಇಲ್ಲಿ ಮಹಾನಾಮ ಒಬ್ಬನು ಬುದ್ಧರ ಶರಣು ಹೋದಾಗ, ಧಮ್ಮದ ಶರಣು ಹೋದಾಗ, ಸಂಘದ ಶರಣು ಹೋದಾಗ ಆತನು ಈ ರೀತಿಯಲ್ಲಿ ಉಪಾಸಕ(ಬೌದ್ಧ)ನಾಗುತ್ತಾನೆ."


"ಮತ್ತೆ ಭಂತೆ ಯಾವ ರೀತಿಯಲ್ಲಿ ಉಪಾಸಕನು ಶೀಲಸಂಪನ್ನನು ಆಗುತ್ತಾನೆ. (ಶೀಲಯುತ ಬೌದ್ಧನೆನಸಿಕೊಳ್ಳುತ್ತಾನೆ)."

"ಇಲ್ಲಿ ಮಹಾನಾಮ ಪ್ರಾಣಗಳನ್ನು ತೆಗೆಯುವುದರಿಂದ ವಿರತನಾದರೆ, ಕೊಡದೆ ಇದ್ದುದ್ದನ್ನು ತೆಗೆದುಕೊಳ್ಳುವುದರಿಂದ ವಿರತನಾದರೆ, ಕಾಮುಕತೆಗಳ ಮಿಧ್ಯಾಚಾರಗಳಿಂದ(ಅನೈತಿಕ ಸಂಬಂಧಗಳಿಂದ, ಬಲತ್ಕಾರಗಳಿಂದ) ವಿರತನಾದರೆ, ಸುಳ್ಳು ಹೇಳುವುದರಿಂದ ವಿರತನಾದರೆ, ಮತ್ತು ಸುರ,ಮೆರೆಯ,ಇತರ ಪ್ರಮಾದ ತರುವ ಮಧ್ಯಪಾನ(ಮಾದಕ ವಸ್ತುಗಳಿಂದ)ಗಳಿಂದ ವಿರತನಾದಗ ಒಬ್ಬನು ಶೀಲ ಸಂಪನ್ನ ಬೌದ್ಧನಾಗುತ್ತಾನೆ." 


"ಮತ್ತೆ ಭಂತೆ ಯಾವ ರೀತಿಯಲ್ಲಿ ಉಪಾಸಕನು ಶ್ರದ್ಧಸಂಪನ್ನನು ಆಗುತ್ತಾನೆ. (ಶ್ರದ್ಧಯುತ ಬೌದ್ಧನೆನಸಿಕೊಳ್ಳುತ್ತಾನೆ)"

"ಇಲ್ಲಿ ಮಹಾರಾಜ ಈ ರೀತಿಯಲ್ಲಿ ಶ್ರದ್ಧಾಸಂಪನ್ನನು ಆಗುತ್ತಾನೆ, ಹೇಗೆಂದರೆ ಆತನಿಗೆ ತಥಾಗತರ ಬೋಧಿಯ(ಜ್ಞಾನ ಪ್ರಾಪ್ತಿಯ) ಮೇಲೆ ಅಚಲ ವಿಶ್ವಾಸವಿರುತ್ತದೆ, ಹೇಗೆಂದರೆ "ಭಗವಾನರು ಖಂಡಿತವಾಗಿಯು ಅರಹಂತರಾಗಿದ್ದಾರೆ(ಕಲ್ಮಶರಹಿತರು), ಸಮ್ಮಸಂಬುದ್ಧರಾಗಿದ್ದಾರೆ(ಸ್ವಯಂ ಆಗಿಯೇ ಸಂಪೂರ್ಣ ಸಂಬೋಧಿ ಪ್ರಾಪ್ತಿ ಮಾಡಿದ್ದಾರೆ), ವಿಜ್ಜಾಚರಣ ಸಂಪನ್ನರು(ವಿದ್ಯೆಯೆಂದರೆ ಸ್ಪಷ್ಟ ಜ್ಞಾನದರ್ಶನ ಹೊಂದಿರುವಿಕೆ ಹಾಗು ಚರಣವೆಂದರೆ ಶ್ರೇಷ್ಠ ಆಚರಣೆ ಉಳ್ಳವರು. ಒಟ್ಟಾರೆ ವಿದ್ಯೆ ಹಾಗು ಆಚರಣೆ ಸಂಪನ್ನರಾಗಿರುವುದರಿಂದಾಗಿ ವಿಜ್ಜಾಚರಣಸಂಪನ್ನರೆನ್ನುತ್ತಾರೆ), ಸುಗತರು(ಅವರು ಹೇಗೆ ಶೋಭಾಯಮಾನವಾಗಿ ಹೋಗಿ (ಗಮತ) ಸುಗತರಾಗಿದ್ದಾರೆ? ಗತ ಎಂದರೆ ಹೋಗಿದ್ದಾರೆ. ಭಗವಾನರಿಗೆ ಶೋಭನಾಮಯ (ಒಳಿತಿನಿಂದ ಕೂಡಿರುವವರು, ಒಳಿತನ್ನೇ ಮಾಡುವವರು) ಎನ್ನುತ್ತಾರೆ. ಅವರು ಹೇಗೆ, ಯಾವ ಮಾರ್ಗದಲ್ಲಿ ಹೋಗಿದ್ದಾರೆ? ಅವರು ಆರ್ಯ ಅಷ್ಠಾಂಗ ಮಾರ್ಗದಲ್ಲಿ, ಯಾವುದೇ ಅಂಟುವಿಕೆಯಿಲ್ಲದೆ ಕ್ಷೇಮಕರ ದ್ವಾರವಾದ ನಿಬ್ಬಾನ ತಲುಪಿದ್ದಾರೆ)ೆ., ಲೋಕವಿಧರು (ಅವರು ಲೋಕಗಳನ್ನು ಬಲ್ಲವರು. ಅವರು (ಭಗವಾನರು) ಅನುಭವಿಸಿದ್ದಾರೆ, ಲೋಕಗಳನ್ನು ಅತ್ಯಂತ ತೀಕ್ಷ್ಣವಾಗಿ ವೀಕ್ಷಿಸಿದ್ದಾರೆ. ಲೋಕಗಳ ಉದಯವನ್ನು, ಲೋಕಗಳ ನಿರೋಧವನ್ನು ನಿರೋಧದ ಉದ್ದೇಶವನ್ನು ಹೇಳಿದ್ದಾರೆ: ಅವರು ತಮ್ಮ ದಿವ್ಯಚಕ್ಷುವಿನಿಂದ ಸರ್ವಲೋಕಗಳನ್ನು ಅರಿತಿದ್ದಾರೆ. ಸಶರೀರರಾಗಿ ಲೋಕಗಳನ್ನು ಸಂಚರಿಸಿದ್ದಾರೆ. ಪಾಪಿಗಳ ದುರ್ಗತಿ, ಶೀಲವಂತರ ಸುಗತಿ, ದಾನಿಗಳ ಸ್ವರ್ಗ, ಧ್ಯಾನಿಗಳ ಬ್ರಹ್ಮಲೋಕ, ಜ್ಞಾನಿಗಳ ನಿಬ್ಬಾಣ ಎಲ್ಲವನ್ನು ಕಾರಣ ಪರಿಹಾರ ಸಮೇತ ವಿವರಿಸಿದ್ದಾರೆ. ಆದ್ದರಿಂದ ಅಂತಹ ನಿಬ್ಬಾಣ ಮಾರ್ಗದಶರ್ಿಗೆ ಲೋಕವಿದೂ ಎನ್ನುತ್ತಾರೆ.), ಅನುತ್ತರ ಪುರುಷ ಧಮ್ಮಸಾರಥಿಯು (ಅನುತ್ತರೋ ಎಂದರೆ ಸಾಟಿಯಿಲ್ಲದ, ಯಾರಿಗೂ ಹೋಲಿಸಲಾಗದ ಎಂದು ಅರ್ಥ. ಪುರಿಸ ಎಂದರೆ ಜೀವಿಗಳಲ್ಲಿ ಪುರುಷ (ವಿಶಾಲಾರ್ಥದಲ್ಲಿ ಎಲ್ಲಾ ಜೀವಿಗಳೆಂದು ಪರಿಗಣಿಸಲಾಗುತ್ತದೆ). ದಮ್ಮ ಎಂದರೆ (ದಮಿಸುವುದು); ಸಾರಥಿ ಎಂದರೆ ದಮಿಸುವವ ಅಥವಾ ನಾಯಕ ಎಂದರ್ಥ. ಅಂದರೆ ಒಟ್ಟಾರೆ ಜೀವಿಗಳನ್ನು ದಮಿಸುವಂತಹ ಹೋಲಿಸಲಾಗದಂತಹ ನಾಯಕ ಎಂದು ಅರ್ಥವಾಗಿದೆ.), ದೇವ-ಮನುಷ್ಯರಿಗೆ ಗುರುವು(ಭಗವಾನರು ಇಲ್ಲಿ ಈಗಲೇ ಲಾಭವಾಗುವ ಬೋಧನೆ ಮಾಡುತ್ತಿದ್ದರು. ಹಾಗೆಯೇ ಮುಂದಿನ ಜನ್ಮದಲ್ಲೂ ಒಳ್ಳೆಯದಾಗುವ ರೀತಿ ಬೋಧನೆ ಮಾಡುತ್ತಿದ್ದರು. ಅಷ್ಟೇ ಅಲ್ಲ, ಅಂತಿಮ ಗುರಿಯಾದ ನಿಬ್ಬಾಣ ಸಿಗುವಂತಹ ರೀತಿಯಲ್ಲಿ ಅವರು ಬೋಧನೆ ಮಾಡುತ್ತಿದ್ದರು. ಹೀಗೆ ವರ್ತಮಾನ ಹಾಗು ಭವಿಷ್ಯದಲ್ಲಿ ಮತ್ತು ಪರಮಾರ್ಥವಾದ ನಿಬ್ಬಾಣ ಗಳಿಸುವಿಕೆಯಲ್ಲೂ ಲಾಭವಾಗುವಂತಹ ಬೋಧನೆಯನ್ನು ಮಾನವರಿಗೆ ಮತ್ತು ದೇವತೆಗಳಿಗೆ ನೀಡುತ್ತಿದ್ದುದರಿಂದಾಗಿ ಅವರನ್ನು ದೇವತೆಗಳಿಗೆ ಹಾಗೂ ಮಾನವರಿಗೆ ಶಾಸ್ತರು ಎನ್ನುತ್ತಾರೆ.), ಬುದ್ಧರು (ವಿಮುಕ್ತಿ ಫಲವನ್ನು ಒಳಗೊಂಡ ಜ್ಞಾನದಿಂದ ಅವರು ಬುದ್ಧರಾಗಿದ್ದಾರೆ. ಅವರ ಅಗಾಧ ಜ್ಞಾನಸಂಪತ್ತು ಸ್ವತಃ ಅವರಿಂದಲೇ ಸಂಶೋಧಿಸಲ್ಪಟ್ಟಿದೆ; ಆದ್ದರಿಂದ ಅವರನ್ನು ಬುದ್ಧರೆನ್ನುತ್ತಾರೆ.) ಆಗಿದ್ಧಾರೆ ಹಾಗೂ ಭಗವಾನರಾಗಿದ್ದಾರೆ( 'ಭಗವಾನರು' ಎಂಬ ಪದ ಪದಗಳಲ್ಲೇ ಶ್ರೇಷ್ಠವಾದುದು, ಉತ್ಕೃಷ್ಟವಾದುದು, ಭಕ್ತಿಗೆ ಅರ್ಹವಾದುದು. ಆದ್ದರಿಂದಲೇ ಭಗವಾನರು ಎಂದೇ ಬಳಕೆಯಲ್ಲಿದೆ.) ಈ ರೀತಿಯಲ್ಲಿ ಮಹಾನಾಮ,  ಉಪಾಸಕನು ಶ್ರದ್ಧಾಸಂಪನ್ನನು ಆಗುತ್ತಾನೆ."


""ಮತ್ತೆ ಭಂತೆ ಯಾವ ರೀತಿಯಲ್ಲಿ ಉಪಾಸಕನು ತ್ಯಾಗ(ದಾನ)ಸಂಪನ್ನನು ಆಗುತ್ತಾನೆ."

"ಇಲ್ಲಿ ಮಹಾನಾಮ ಉಪಾಸಕನು ಸ್ವಾರ್ಥರಹಿತವಾದ ಮನೋಭಾವದಿಂದ ಕೂಡಿರುತ್ತಾನೆ(ಜೀವಿಸುತ್ತಾನೆ), ಉದಾರಿಯಾಗಿರುತ್ತಾನೆ, ಸದಾ ದಾನದಲ್ಲೆ ಆನಂದಿತನಾಗಿ ದಾನಹಸ್ತನಾಗಿರುತ್ತಾನೆ, ಯಾಚಕರಿಗೆ ಮುಕ್ತನಾಗಿರುತ್ತಾನೆ, ಹಂಚುವಿಕೆಯಲ್ಲೆ ಸುಖ ಕಾಣುತ್ತಾನೆ. ಹೀಗೆ ಬಿಟ್ಟುಬಿಡುವುದರಲ್ಲಿ ತ್ಯಾಗದಲ್ಲಿ ಆನಂದಿಸುವನು, ಈ ರೀತಿಯಲ್ಲಿ ಮಹಾನಾಮ,  ಉಪಾಸಕನು  ತ್ಯಾಗಸಂಪನ್ನನು ಆಗುತ್ತಾನೆ."


""ಮತ್ತೆ ಭಂತೆ ಯಾವ ರೀತಿಯಲ್ಲಿ ಉಪಾಸಕನು ಪ್ರಜ್ಞಾಸಂಪನ್ನನು ಆಗುತ್ತಾನೆ."

"ಇಲ್ಲಿ ಮಹಾನಾಮ ಉಪಾಸಕನು ಪ್ರಜ್ಞವಂತನಾಗಿರುತ್ತಾನೆ(ಪನ್ನಾವ), ಆತನು ಉದಯ ಹಾಗೂ ಅಳಿಯುವಿಕೆಯ(ಮೆರೆಯಾಗುವಿಕೆಯ/ನಾಷವಾಗುವಿಕೆಯ)ಲ್ಲಿ ಜ್ಞಾನಿಯಾಗುತ್ತಾನೆ, ಅವುಗಳ ಜ್ಞಾನ ಆತನಿಗೆ ಇರುತ್ತದೆ, ಆ ಜ್ಞಾನವು ಉದಾತ್ತವಾದುದು(ಆರ್ಯರದ್ದು), ಅದು ಪರಮ ಬೇಧಕನೀಯವಾದುದ್ದು(ನಿಭ್ಭೇಧಿಕಾಯ), ಮತ್ತು ಅದು ದುಃಖಗಳ ಕ್ಷಯ(ಅಂತ್ಯ)ದೆಡೆಗೆ ಕರೆದೊಯ್ಯುವುದು. ಹೀಗೆ ಈ ರೀತಿಯಲ್ಲಿ  ಪ್ರಜ್ಞಾಸಂಪನ್ನ ಉಪಾಸಕ ಎಂದು ಕರೆಸಿಕೊಳ್ಳುತ್ತಾನೆ.