Thursday 28 March 2019

dakkhina vibhanga sutta in kannada ದಕ್ಖಿಣಾ ವಿಭಂಗ ಸುತ್ತ (ದಾನದ ವಿಶ್ಲೇಷಣೆಯ ಸುತ್ತ)

                                         ದಕ್ಖಿಣಾ ವಿಭಂಗ ಸುತ್ತ
                                    (ದಾನದ ವಿಶ್ಲೇಷಣೆಯ ಸುತ್ತ)



  

(ಸಂಘಕ್ಕೆ ನೀಡುವ ದಾನವೂ ವೈಯಕ್ತಿಕ ದಾನಕ್ಕಿಂತಲೂ ಅತಿ ಹೆಚ್ಚು ಫಲಯುತ)


ನಾನು ಹೀಗೆ ಕೇಳಿದ್ದೇನೆ, ಆ ಸಮಯದಲ್ಲಿ ಬುದ್ಧ ಭಗವಾನರು ಶಾಕ್ಯರ ನಾಡಿನ ಕಪಿಲವಸ್ತುವಿನ ಆಲದ ಮರಗಳ(ನಿಗ್ರೋಧರಾಮ) ವಿಹಾರದಲ್ಲಿದ್ದರು,  ಆಗ ಮಾತೆಯಾದ ಮಹಾಪಜಾಪತಿ ಗೋತಮಿಯು ಭಗವಾನರ ಬಳಿಗೆ ಒಂದು ಜೋತೆ ವಸ್ತ್ರಗಳೊಂದಿಗೆ ಬಂದರು. ಆಕೆಯು ವಂದಿಸಿ ಒಂದೆಡೆ ಕುಳಿತುಕೊಂಡರು ನಂತರ ಭಗವಾನರೊಂದಿಗೆ ಹೀಗೆ ನುಡಿದರು :
 ಭಂತೆ ಇವನ್ನು ನಾನೇ ಸ್ವತಃ ನೆಯ್ದು ಹಾಗೂ ಹೆಣೆದು ಈ ವಸ್ತ್ರಗಳನ್ನು ಭಗವಾನರಿಗೆಂದೇ ತಂದಿರುವೆ ಭಗವಾನರು ದಯೆಯಿಂದ ಇವನ್ನು ಸ್ವೀಕರಿಸಬೇಕು, ಹೀಗೆ ಆಕೆಯು ನುಡಿದಾಗ ಭಗವಾನರು ಆಕೆಗೆ ಹೀಗೆ ನುಡಿದರು :
   ಸಂಘಕ್ಕೆ ದಾನವ ನೀಡು ಮಾತೆ ಗೋತಮಿ, ಯಾವಾಗ ನೀವು ಸಂಘಕ್ಕೆ ನೀಡುವಿರೊ ಆಗ ಸಂಘ ಹಾಗೂ ನಾನು ಜೋತೆಯಾಗಿಯೇ ಗೌರವಕ್ಕೆ ಪಾತ್ರರಾಗುವೆವು.
 ಆಗ ಆಕೆಯು ಎರಡನೆಯ ಬಾರಿ ಹೀಗೆ ನುಡಿದರು :  ಭಂತೆ ಇವನ್ನು ನಾನೇ ಸ್ವತಃ ನೆಯ್ದು ಹಾಗೂ ಹೆಣೆದು ಈ ವಸ್ತ್ರಗಳನ್ನು ಭಗವಾನರಿಗೆಂದೇ ತಂದಿರುವೆ ಭಗವಾನರು ದಯೆಯಿಂದ ಇವನ್ನು ಸ್ವೀಕರಿಸಬೇಕು, ಹೀಗೆ ಆಕೆಯು ನುಡಿದಾಗ ಭಗವಾನರು ಎರಡನೆಯ ಬಾರಿ ಆಕೆಗೆ ಹೀಗೆ ನುಡಿದರು :
   ಸಂಘಕ್ಕೆ ದಾನವ ನೀಡು ಮಾತೆ ಗೋತಮಿ, ಯಾವಾಗ ನೀವು ಸಂಘಕ್ಕೆ ನೀಡುವಿರೊ ಆಗ ಸಂಘ ಹಾಗೂ ನಾನು ಜೋತೆಯಾಗಿಯೇ ಗೌರವಕ್ಕೆ ಪಾತ್ರರಾಗುವೆವು.
  ಆಗ ಆಕೆಯು ಮೂರನೆೆಯ ಬಾರಿ ಹೀಗೆ ನುಡಿದರು :  ಭಂತೆ ಇವನ್ನು ನಾನೇ ಸ್ವತಃ ನೆಯ್ದು ಹಾಗೂ ಹೆಣೆದು ಈ ವಸ್ತ್ರಗಳನ್ನು ಭಗವಾನರಿಗೆಂದೇ ತಂದಿರುವೆ ಭಗವಾನರು ದಯೆಯಿಂದ ಇವನ್ನು ಸ್ವೀಕರಿಸಬೇಕು, ಹೀಗೆ ಆಕೆಯು ನುಡಿದಾಗ ಭಗವಾನರು ಮೂರನೆಯ ಬಾರಿ ಆಕೆಗೆ ಹೀಗೆ ನುಡಿದರು :
   ಸಂಘಕ್ಕೆ ದಾನವ ನೀಡು ಮಾತೆ ಗೋತಮಿ, ಯಾವಾಗ ನೀವು ಸಂಘಕ್ಕೆ ನೀಡುವಿರೊ ಆಗ ಸಂಘ ಹಾಗೂ ನಾನು ಜೋತೆಯಾಗಿಯೇ ಗೌರವಕ್ಕೆ ಪಾತ್ರರಾಗುವೆವು. ಯಾವಾಗ ಭಗವಾನರು ಹೀಗೆ ನುಡಿದರೋ ಆಗ ಪೂಜ್ಯ ಆನಂದರವರು ಮಧ್ಯೆ ಪ್ರವೇಶಿಸಿ ಹೀಗೆ ನುಡಿದರು :
ಭಗವಾನ್,  ಮಾತೆಯವರಾದ ಮಹಾಪಜಾಪತಿ ಗೋತಮಿಯವರ ಈ ವಸ್ತ್ರಗಳನ್ನು ದಯವಿಟ್ಟು ಸ್ವೀಕರಿಸಿರಿ, ಮಹಾಪಜಾಪತಿ ಗೋತಮಿಯು ತಮಗೆ ಆಪಾರ ಸಹಾಯಗಳನ್ನು ಮಾಡಿರುವರು, ಚಿಕ್ಕಮ್ಮರಾಗಿ ತಮಗೆ ಪೋಷಿಸಿದ್ದಾರೆ, ಲಾಲನೆಪಾಲನೆ ಮಾಡಿದ್ದಾರೆ, ತಮಗೆ ಹಾಲನ್ನು ಉಣಿಸಿದ್ದಾರೆ, ಯಾವಾಗ ಬೋದಿಸತ್ವರ ಮಾತೆಯು ಈ ಲೋಕದಿಂದ ಮೃತ್ಯುವಶರಾದರೋ ಆಗ ಈಕೆಯೇ ತನ್ನ ಸ್ವಪುತ್ರನಂತೆಯೇ ಎಲ್ಲಾ ರೀತಿಯಲ್ಲಿಯು ತಮಗೆ ಪೋಷಿಸಿಹಳು (ಮತ್ತು ಹೀಗಾಗಿ ಬುದ್ಧರು ಸಹಾ ಆಕೆಗೆ ಸಹಾಯ ಮಾಡಲೇಬೇಕು.)

 ಮತ್ತು ಭಗವಾನರೂ ಸಹಾ ಆಕೆಗೆ ತುಂಬ ಸಹಾಯ ಮಾಡುತ್ತಲೇ ಬಂದಿರುವರು, ಭಗವಾನರಿಂದಲೇ ಆಕೆಯು ಬುದ್ಧರಿಗೆ, ಧಮ್ಮಕ್ಕೆ, ಮತ್ತು ಸಂಘಕ್ಕೆ ಶರಣು ಹೋಗಿರುವರು, ಭಗವಾನರಿಂದಲೇ ಆಕೆಯು ಪ್ರಾಣಿಹತ್ಯೆಗಳನ್ನು ಮಾಡುವುದನ್ನು ತೋರೆದಿರುವರು, ಕೋಡದೆ ಇದ್ದುದ್ದನ್ನು ಸ್ವೀಕರಿಸುವುದಿಲ್ಲ, ಬ್ರಹ್ಮಚಾರ್ಯೆಯ ಜೀವನ ನಡೆಸುತಿಹರು, ಸುಳ್ಳು ಹೇಳಲಾರರು, ಮಾದಕ ಪಾನಿಯಗಳನ್ನು ಸ್ವೀಕರಿಸಲಾರರು,

 ತಿರತನಗಳಾದ ತಮಗೆ, ಧಮ್ಮಕ್ಕೆ, ಮತ್ತು ಸಂಘಕ್ಕೆ ಅಪಾರ ಶ್ರದ್ಧೆಯನ್ನು ಇಟ್ಟಿರುವರು, ಹಾಗೂ ಆರ್ಯರ ಶೀಲಗಳನ್ನು ಇಷ್ಟಪಟ್ಟು ಪಾಲಿಸುತಿಹರು. ಭಗವಾನರಿಂದಲೇ ಆಕೆಯು ಆರಿಯ ಸತ್ಯಗಳಾದ ದುಃಖ, ದುಃಖಸಮುದಯ, ದುಃಖನಿರೋಧ, ಮತ್ತು ಆರಿಯ ಅಷ್ಟಾಂಗ ಮಾರ್ಗದ ಬಗೆಗಿನ ಸಂಶಯಗಳನ್ನು ದಾಟಿರುವರು, ಹೀಗಾಗಿ ಭಗವಾನರು ಸಹಾ ಆಕೆಗೆ ಆಪಾರ ಸಹಾಯ ಮಾಡಿರುವರು.

ಇದು ಸತ್ಯ, ಆನಂದ. ಯಾವಾಗ ಒಬ್ಬನು ತಿಸರಣುವಿಗೆ ಶರಣು ಹೋಗಲು ಸಹಾಯ ಮಾಡಿರುವನೊ, ಅಂತಹವನಿಗೆ ಋಣ ತೀರಿಸುವುದು ಅಷ್ಟು ಸುಲಭವಲ್ಲ. ತಲೆಬಾಗಿ ವಂದಿಸುವುದರಿಂದಾಗಲಿ, ಮೇಲೇದ್ದು ಗೌರವಿಸುವುದರಿಂದಾಗಲಿ, ಕೈಜೋಡಿಸಿ ನಮಸ್ಕರಿಸುವುದರಿಂದಾಗಲಿ, ಮತ್ತು ವಿನಯವಿಧೇಯತೆಯಿಂದಾಗಲಿ, ಅಂತಹವರಿಗೆ ಚಿವರ ವಸ್ತ್ರಾದಿಗಳಿಂದ ದಾನಮಾಡುವುದರಿಂದಾಗಲಿ, ಆಹಾರ ಪಾನಿಯಗಳ ದಾನದಿಂದಾಗಲಿ, ವಸತಿ ನೀಡುವುದರಿಂದಾಗಲಿ, ರೋಗಿಯಾಗಿದ್ದಾಗ ಔಷಧಿಗಳನ್ನು ನೀಡುವುದರಿಂದಾಗಲಿ, ಅಂತಹವರಿಗೆ ಒಬ್ಬನು ಋಣವನ್ನು ತೀರಿಸಲಾರನು,
   ಮತ್ತೆ ಯಾವಾಗ ಒಬ್ಬನಿಂದಾಗಿ ಪಂಚಶೀಲಗಳಾದ ಪ್ರಾಣಿಹತ್ಯೆಗಳನ್ನು ಮಾಡುವುದನ್ನು ತೋರೆದಿರುವುದು, ಕೋಡದೆ ಇದ್ದುದ್ದನ್ನು ಸ್ವೀಕರಿಸದಿರುವುದು, ಬ್ರಹ್ಮಚಾರ್ಯೆಯ ಜೀವನ ನಡೆಸುವುದು, ಸುಳ್ಳು ಹೇಳದಿರುವುದು, ಮಾದಕ ಪಾನಿಯಗಳನ್ನು ಸ್ವೀಕರಿಸದಿರುವುದು,  ಅಂತಹ ಸಹಾಯ ಮಾಡಿದವರಿಗೆ ಋಣ ತೀರಿಸುವುದು ಅಷ್ಟು ಸುಲಭವಲ್ಲ, ತಲೆಬಾಗಿ ವಂದಿಸುವುದರಿಂದಾಗಲಿ, ಮೇಲೇದ್ದು ಗೌರವಿಸುವುದರಿಂದಾಗಲಿ, ಕೈಜೋಡಿಸಿ ನಮಸ್ಕರಿಸುವುದರಿಂದಾಗಲಿ, ಮತ್ತು ವಿನಯವಿಧೇಯತೆಯಿಂದಾಗಲಿ, ಅಂತಹವರಿಗೆ ಚಿವರ ವಸ್ತ್ರಾದಿಗಳಿಂದ ದಾನಮಾಡುವುದರಿಂದಾಗಲಿ, ಆಹಾರ ಪಾನಿಯಗಳ ದಾನದಿಂದಾಗಲಿ, ವಸತಿ ನೀಡುವುದರಿಂದಾಗಲಿ, ರೋಗಿಯಾಗಿದ್ದಾಗ ಔಷಧಿಗಳನ್ನು ನೀಡುವುದರಿಂದಾಗಲಿ, ಒಬ್ಬನು ಅಂತಹವರಿಗೆ ಋಣವನ್ನು ತೀರಿಸಲಾರನು.

    ಯಾವಾಗ ಒಬ್ಬನಿಂದಾಗಿ ತಿರತನಗಳಾದ ಬುದ್ಧರಿಗೆ, ಧಮ್ಮಕ್ಕೆ, ಮತ್ತು ಸಂಘಕ್ಕೆ ಅಪಾರ ಶ್ರದ್ಧೆಯನ್ನು ಇಟ್ಟಿರುವಂತಾಗುವರೋ, ಹಾಗೂ ಆರ್ಯರ ಶೀಲಗಳನ್ನು ಇಷ್ಟಪಟ್ಟು ಪಾಲಿಸುವಂತವರಾಗಿದ್ದಾರೋ ಅಂತಹ ಸಹಾಯ ಮಾಡಿದವರಿಗೆ ಋಣ ತೀರಿಸುವುದು ಅಷ್ಟು ಸುಲಭವಲ್ಲ, ತಲೆಬಾಗಿ ವಂದಿಸುವುದರಿಂದಾಗಲಿ, ಮೇಲೇದ್ದು ಗೌರವಿಸುವುದರಿಂದಾಗಲಿ, ಕೈಜೋಡಿಸಿ ನಮಸ್ಕರಿಸುವುದರಿಂದಾಗಲಿ, ಮತ್ತು ವಿನಯವಿಧೇಯತೆಯಿಂದಾಗಲಿ, ಅಂತಹವರಿಗೆ ಚಿವರ ವಸ್ತ್ರಾದಿಗಳಿಂದ ದಾನಮಾಡುವುದರಿಂದಾಗಲಿ, ಆಹಾರ ಪಾನಿಯಗಳ ದಾನದಿಂದಾಗಲಿ, ವಸತಿ ನೀಡುವುದರಿಂದಾಗಲಿ, ರೋಗಿಯಾಗಿದ್ದಾಗ ಔಷಧಿಗಳನ್ನು ನೀಡುವುದರಿಂದಾಗಲಿ, ಒಬ್ಬನು ಅಂತಹವರಿಗೆ ಋಣವನ್ನು ತೀರಿಸಲಾರನು.

     ಮತ್ತು ಯಾರಿಂದಾಗಿ ಆರಿಯ ಸತ್ಯಗಳಾದ ದುಃಖ, ದುಃಖಸಮುದಯ, ದುಃಖನಿರೋಧ, ಮತ್ತು ದುಃಖ ನಿರೋಧದ ಮಾರ್ಗವಾದ ಆರಿಯ ಅಷ್ಟಾಂಗ ಮಾರ್ಗದ ಬಗೆಗಿನ ಮಾಹಿತಿಗಳನ್ನು ತಿಳಿದು ಅವುಗಳ ಬಗೆಗಿನ ಸಂಶಯಗಳನ್ನು ದಾಟಿರುವರೋ ಅಂತಹ ಸಹಾಯ ಮಾಡಿದವರಿಗೆ ಋಣ ತೀರಿಸುವುದು ಅಷ್ಟು ಸುಲಭವಲ್ಲ, ತಲೆಬಾಗಿ ವಂದಿಸುವುದರಿಂದಾಗಲಿ, ಮೇಲೇದ್ದು ಗೌರವಿಸುವುದರಿಂದಾಗಲಿ, ಕೈಜೋಡಿಸಿ ನಮಸ್ಕರಿಸುವುದರಿಂದಾಗಲಿ, ಮತ್ತು ವಿನಯವಿಧೇಯತೆಯಿಂದಾಗಲಿ, ಅಂತಹವರಿಗೆ ಚಿವರ ವಸ್ತ್ರಾದಿಗಳಿಂದ ದಾನಮಾಡುವುದರಿಂದಾಗಲಿ, ಆಹಾರ ಪಾನಿಯಗಳ ದಾನದಿಂದಾಗಲಿ, ವಸತಿ ನೀಡುವುದರಿಂದಾಗಲಿ, ರೋಗಿಯಾಗಿದ್ದಾಗ ಔಷಧಿಗಳನ್ನು ನೀಡುವುದರಿಂದಾಗಲಿ, ಒಬ್ಬನು ಅಂತಹವರಿಗೆ ಋಣವನ್ನು ತೀರಿಸಲಾರನು.

   ಆನಂದ ಹದಿನಾಲ್ಕು ಬಗೆಯ ವೈಯಕ್ತಿಕದಾನಗಳಿವೆ. ಯಾವುವವು 14 ? ಅವೆಂದರೇ ಒಬ್ಬನು ತಥಾಗತರು, ಅರಹಂತರು ಆದ ಸಮ್ಮಸಂಬುದ್ಧರಿಗೆ ದಾನವನ್ನು ನೀಡುತ್ತಾನೆ. ಇದು ಮೊದಲನೆಯ ವೈಯಕ್ತಿಕ ದಾನವಾಗಿದೆ. ಒಬ್ಬನು ಪಚ್ಚೆಕ ಬುದ್ಧರಿಗೆ ದಾನವನ್ನು ನೀಡುತ್ತಾನೆ, ಇದು ಎರಡನೆಯ ವೈಯಕ್ತಿಕದಾನವಾಗಿದೆ. ಒಬ್ಬನು ತಥಾಗತರ ಶ್ರಾವಕರಾದ ಅರಹಂತರಿಗೆ ದಾನವನ್ನು ಮಾಡುತ್ತಾನೆ. ಇದು ಮೂರನೆಯ ವೈಯಕ್ತಿಕ ದಾನವಾಗಿದೆ. ಒಬ್ಬನು ಅರಹಂತ ಫಲವನ್ನು ಸಾಕ್ಷತ್ಕರಿಸುವ ಮಾರ್ಗದಲ್ಲಿರುವವನಿಗೆ ದಾನ ನೀಡುತ್ತಾನೆ. ಇದು ನಾಲ್ಕನೆಯ ವೈಯಕ್ತಿಕದಾನವಾಗಿದೆ.. ಒಬ್ಬನು ಅನಾಗಾಮಿಗೆ ದಾನವನ್ನು ನೀಡುತ್ತಾನೆ, ಇದು ಐದನೆಯ ವೈಯಕ್ತಿಕದಾನವಾಗಿದೆ.. ಒಬ್ಬನು ಅನಾಗಾಮಿ ಪಫಲವನ್ನು ಸಾಕ್ಷಾತ್ಕರಿಸುವ ಮಾರ್ಗದಲ್ಲಿರುವವನಿಗೆ ದಾನ ನೀಡುತ್ತಾನೆ , ಇದು ಆರನೆಯ ವೈಯಕ್ತಿಕ ದಾನವಾಗಿದೆ, ಒಬ್ಬನು ಸಕದಾಗಾಮಿಗೆ ದಾನವನ್ನು ನೀಡುತ್ತಾನೆ, ಇದು ಏಳನೆಯ ವೈಯಕ್ತಿಕದಾನವಾಗಿದೆ.. ಒಬ್ಬನು ಸಕದಾಗಾಮಿ ಫಲವನ್ನು ಸಾಕ್ಷಾತ್ಕರಿಸುವ ಮಾರ್ಗದಲ್ಲಿರುವವನಿಗೆ ದಾನ ನೀಡುತ್ತಾನೆ , ಇದು ಎಂಟನೆಯ ವೈಯಕ್ತಿಕ ದಾನವಾಗಿದೆ, ಒಬ್ಬನು ಸೋತಪನ್ನನಿಗೆ ದಾನವನ್ನು ನೀಡುತ್ತಾನೆ, ಇದು ಒಂಬತ್ತನೆೆಯ ವೈಯಕ್ತಿಕ ದಾನವಾಗಿದೆ.. ಒಬ್ಬನು ಸೋತಪನ್ನ ಫಲವನ್ನು ಸಾಕ್ಷಾತ್ಕರಿಸುವ ಮಾರ್ಗದಲ್ಲಿರುವವನಿಗೆ ದಾನ ನೀಡುತ್ತಾನೆ , ಇದು ಹತ್ತನೆಯ ವೈಯಕ್ತಿಕ ದಾನವಾಗಿದೆ, ಒಬ್ಬನು ಬುದ್ಧ ದಮ್ಮದ ಬಾಹ್ಯದಲ್ಲಿರುವ ನಿಷ್ಕಾಮ ವೀತರಾಗಿಗೆ ದಾನ ನೀಡುತ್ತಾನೆ, ಇದು ಹನ್ನೊಂದನೆಯ ವೈಯಕ್ತಿಕ ದಾನವಾಗಿದೆ, ಒಬ್ಬನು ಶೀಲವಂತ ಸಾಧಾರಣ ಮಾನವನಿಗೆ ದಾನ ನೀಡುತ್ತಾನೆ, ಇದು ಹನ್ನೆರಡನೆಯ ವೈಯಕ್ತಿಕ ದಾನವಾಗಿದೆ, ಒಬ್ಬನು ದುಶ್ಯೀಲ ಮಾನವನಿಗೆ ದಾನ ನೀಡುತ್ತಾನೆ, ಇದು ಹದಿಮೂರನೆಯ ವೈಯಕ್ತಿಕ ದಾನವಾಗಿದೆ, ಒಬ್ಬನು ತಿರಚ್ಛನಗತಿಯುಳ್ಳ ಪ್ರಾಣಿಗಳಿಗೆ ದಾನವನ್ನು ನೀಡುತ್ತಾನೆ, ಇದು ಹದಿನಾಲ್ಕನೆಯ ವೈಯಕ್ತಿಕ ದಾನವಾಗಿದೆ,
      ಈಗ ಆನಂದ , ಈ ಮೇಲಿನ ವ್ಯಕ್ತಿಗಳಿಗೆ ನೀಡಿರುವ ದಾನದಿಂದ ಈ ರೀತಿಯ ಫಲಿತಾಂಶಗಳನ್ನು ನಿರೀಕ್ಷಿಸಬಹುದು. ಪ್ರಾಣಿಗಳಿಗೆ ದಾನ ನೀಡಿದರೆ ನೂರು ಪಟ್ಟು ಫಲ ಸಿಗುತ್ತದೆ.
      ದುಶ್ಯೀಲ ಮಾನವನಿಗೆ ದಾನ ನೀಡಿದರೆ ಸಾವಿರ ಪಟ್ಟು ಫಲ ಹಿಂದಿರುಗಿ ಸಿಗುತ್ತದೆ.
      ಶೀಲವಂತ ಮಾನವನಿಗೆ ದಾನ ನೀಡಿದರೆ ಲಕ್ಷ ಪಟ್ಟು ಫಲ ಹಿಂದಿರುಗಿ ಸಿಗುತ್ತದೆ.
  ಬುದ್ಧ ದಮ್ಮದ ಬಾಹ್ಯದಲ್ಲಿರುವ ನಿಷ್ಕಾಮ ವಿತರಾಗಿಗೆ ದಾನ ನೀಡಿದರೆ 10000000000 ( ಸಾವಿರ ಕೋಟಿ) ಪಟ್ಟು  ಫಲ ಹಿಂದಿರುಗಿ ಸಿಗುತ್ತದೆ.   
      ಸೋತಪನ್ನ ಫಲವನ್ನು ಸಾಕ್ಷಾತ್ಕರಿಸುವ ಮಾರ್ಗದಲ್ಲಿರುವವನಿಗೆ ದಾನ ನೀಡಿದರೆ  ಲೆಕ್ಖಕ್ಕೆ ನಿಲುಕದಂತಹುದು, ಅಳೆಯಲಾಗದಷ್ಟು ಪಟ್ಟು ಫಲ ಹಿಂದಿರುಗಿ ಸಿಗುತ್ತದೆ. ಹೀಗಿರುವಾಗ ಸೋತಪನ್ನರಿಗೆ ದಾನ ನೀಡಿದರೆ ಎಷ್ಟೊಂದು ಪಟ್ಟು ಫಲ ಹಿಂತಿರುಗಿ ಮರಳಬಹುದು,? ಹಾಗೂ ಸಕದಾಗಾಮಿ ಫಲವನ್ನು ಸಾಕ್ಷಾತ್ಕರಿಸುವ ಮಾರ್ಗದಲ್ಲಿರುವವನಿಗೆ, ಸಕದಾಗಾಮಿಗೆ ,ಅನಾಗಾಮಿ ಫಲವನ್ನು ಸಾಕ್ಷಾತ್ಕರಿಸುವ ಮಾರ್ಗದಲ್ಲಿರುವವನಿಗೆ, ಅನಾಗಾಮಿಗೆ ,ಅರಹಂತ ಫಲವನ್ನು ಸಾಕ್ಷಾತ್ಕರಿಸುವ ಮಾರ್ಗದಲ್ಲಿರುವವನಿಗೆ, ಅರಹಂತರಿಗೆ , ಮತ್ತು ಪಚ್ಚೆಕ ಬುದ್ಧರಿಗೆ ದಾನ ನೀಡಿದರೆ ಎಷ್ಟೊಂದು ಪಟ್ಟು ಫಲ ಹಿಂತಿರುಗಿ ಮರಳಬಹುದು,? ಇನ್ನೂ ಸಮ್ಮ ಸಂಬುದ್ಧರಿಗೆ ದಾನ ನೀಡಿದರೇ ಎಷ್ಟೊಂದು ಪಟ್ಟು ಫಲ ಹಿಂತಿರುಗಿ ಮರಳಬಹುದು,?

   ಅದರೆ ಆನಂದ ಏಳು ಬಗೆಯ ದಾನಗಳನ್ನು ಸಂಘಕ್ಕೆ ಸಮಪರ್ಿಸಲಾಗುತ್ತದೆ. ಯಾವುವವು ಏಳು ?

1. ಬುದ್ಧಭಗವಾನರ ಸಹಿತ ಭಿಕ್ಖುಗಳು ಹಾಗು ಭಿಕ್ಖುಣಿಯರ ಸಮೂಹಕ್ಕೆ ಒಬ್ಬನು ದಾನ ನೀಡುವಿಕೆ. ಇದು ಸಂಘಕ್ಕೆ ಸಮಪರ್ಿಸಲಾಗುವ ಮೊದಲನೆಯ ದಾನ.

2.  ಬುದ್ಧಭಗವಾನರು ಮಹಾಪರಿನಿಬ್ಬಾಣ ಪಡೆದ ಬಳಿಕ ಭಿಕ್ಖುಗಳು ಹಾಗು ಭಿಕ್ಖುಣಿಯರ ಸಮೂಹಕ್ಕೆ ಒಬ್ಬನು ದಾನ ನೀಡುವಿಕೆ. ಇದು ಸಂಘಕ್ಕೆ ಸಮಪರ್ಿಸಲಾಗುವ ಎರಡನೆಯ ದಾನ.

3. ಭಿಕ್ಖುಗಳು ಸಮೂಹಕ್ಕೆ ಒಬ್ಬನು ದಾನ ನೀಡುವಿಕೆ. ಇದು ಸಂಘಕ್ಕೆ ಸಮಪರ್ಿಸಲಾಗುವ ಮೂರನೆಯ ದಾನ.

4. ಭಿಕ್ಖುಣಿಯರ ಸಮೂಹಕ್ಕೆ ಒಬ್ಬನು ದಾನ ನೀಡುವಿಕೆ. ಇದು ಸಂಘಕ್ಕೆ ಸಮಪರ್ಿಸಲಾಗುವ ನಾಲ್ಕನೆಯ ದಾನ.

5.  ನನಗಾಗಿ ಸಂಘವು ಅನೇಕ ಭಿಕ್ಖುಗಳು ಹಾಗು ಭಿಕ್ಖುಣಿಯರನ್ನು ದಾನಕ್ಕಾಗಿ ನೇಮಕಮಾಡಬಹುದು ಎಂದು ಯೋಚಿಸಿ ಒಬ್ಬನು ದಾನ ಮಾಡಬಹುದು. ಇದು ಸಂಘಕ್ಕೆ ಸಮಪರ್ಿಸಲಾಗುವ ಐದನೆಯ ದಾನ.

6. ನನಗಾಗಿ ಸಂಘವು ಅನೇಕ ಭಿಕ್ಖುಗಳನ್ನು ದಾನಕ್ಕಾಗಿ ನೇಮಕಮಾಡಬಹುದು ಎಂದು ಯೋಚಿಸಿ ಒಬ್ಬನು ದಾನ ಮಾಡಬಹುದು. ಇದು ಸಂಘಕ್ಕೆ ಸಮಪರ್ಿಸಲಾಗುವ ಆರನೆಯ ದಾನ.

7. ನನಗಾಗಿ ಸಂಘವು ಅನೇಕ ಭಿಕ್ಖುಣಿಯರನ್ನು ದಾನಕ್ಕಾಗಿ ನೇಮಕಮಾಡಬಹುದು ಎಂದು ಯೋಚಿಸಿ ಒಬ್ಬನು ದಾನ ಮಾಡಬಹುದು. ಇದು ಸಂಘಕ್ಕೆ ಸಮಪರ್ಿಸಲಾಗುವ  ಏಳನೆಯ ದಾನ.

  ಮುಂದೊಂದು ಕಾಲ ಬರುವುದು ಆಗ ಸಂಘದ ಸದಸ್ಯರು ಕೇವಲ ಕಾವಿಯ ವಸ್ತ್ರವನ್ನು ತಮ್ಮ ಕುತ್ತಿಗೆಯ ಸುತ್ತಲೂ ಮಾತ್ರ ಧರಿಸುವರು, ಅದರೆ ಅವರು ದುಶ್ಶಿಲರು ಹಾಗೂ ಹೀನಚಾರಿತ್ರ್ಯರು ಆಗಿರುತ್ತಾರೆ, ಅದರೆ ಜನರು ಅವರಿಗೆ ಸಂಘದ ಹೆಸರಿನಲ್ಲಿ ದಾನವನ್ನು ಮಾಡುತ್ತಾರೆ, ಆಗಲೂ ಸಹಾ ನಾನೂ ಹೇಳುತ್ತಿದೇನೆ ಸಂಘಕ್ಕೇ ನೀಡುವ ದಾನವು ಲೆಕ್ಖಕ್ಕೆ ನಿಲುಕದಂತಹುದು ಹಾಗೂ ಅಳೆಯಲಾಗದಂತಹುದು. ಹೀಗಾಗಿ ನಾನೂ ಹೇಳುವುದು ಏನೆಂದರೆ ಸಂಘಕ್ಕೆ ನೀಡುವ ದಾನವೂ ವೈಯಕ್ತಿಕ ದಾನಕ್ಕಿಂತಲೂ ಅತಿ ಹೆಚ್ಚು ಫಲಯುತವಾದದ್ದು.

    ಆನಂದ ದಾನಗಳಿಂದ ನಾಲ್ಕು ವಿಧವಾಗಿ ಪರಿಶುದ್ಧರಾಗುವರು. ಯಾವುವವು ನಾಲ್ಕು ?

1. ಇಲ್ಲಿ ದಾನದಿಂದ ದಾನಿಯು ಪರಿಶುದ್ಧನಾಗುತ್ತಾನೆ ಅದರೆ ಅತಿಥಿಯು(ಸ್ವೀಕರಿಸುವವನು) ಅಲ್ಲ.

2. ಇಲ್ಲಿ ದಾನದಿಂದ ಅತಿಥಿಯು ಪರಿಶುದ್ಧನಾಗುತ್ತಾನೆ ಅದರೆ ದಾನಿಯು ಅಲ್ಲ.

3. ಇಲ್ಲಿ ದಾನದಿಂದ ದಾನಿಯಾಗಲಿ ಅಥವಾ ಅತಿಥಿಯಾಗಲಿ ಈರ್ವರೂ ಪರಿಶುದ್ಧರಾಗುವುದಿಲ್ಲ.

4. ಇಲ್ಲಿ ದಾನದಿಂದ ದಾನಿಯು ಹಾಗೂ ಅತಿಥಿಯು ಈರ್ವರೂ ಪರಿಶುದ್ಧರಾಗುವರು.

 ಮತ್ತು ಇಲ್ಲಿ ಹೇಗೆ ದಾನದಿಂದ ದಾನಿಯು ಪರಿಶುದ್ಧನಾಗುತ್ತಾನೆ ಅದರೆ ಅತಿಥಿಯು(ಸ್ವೀಕರಿಸುವವನು) ಅಲ್ಲ.? ಹೇಗೆಂದರೆ ಇಲ್ಲಿ ದಾನಿಯು ಶೀಲವಂತನಾಗಿರುತ್ತಾನೆ ಸುಚಾರಿತ್ಯವಂತನಾಗಿರುತ್ತಾನೆ ಅದರೆ ಅತಿಥಿಯು ದುಶ್ಶಿಲನು ಹಾಗೂ ಹೀನಚಾರಿತ್ರ್ಯನು ಆಗಿರುತ್ತಾರೆ,

   ಮತ್ತು ಇಲ್ಲಿ ಹೇಗೆ ಇಲ್ಲಿ ದಾನದಿಂದ ಅತಿಥಿಯು ಪರಿಶುದ್ಧನಾಗುತ್ತಾನೆ ಅದರೆ ದಾನಿಯು ಅಲ್ಲ. ? ಹೇಗೆಂದರೆ ಇಲ್ಲಿ ಅತಿಥಿಯು ಶೀಲವಂತನಾಗಿರುತ್ತಾನೆ ಸುಚಾರಿತ್ಯವಂತನಾಗಿರುತ್ತಾನೆ ಅದರೆ ದಾನಿಯು ದುಶ್ಶಿಲನು ಹಾಗೂ ಹೀನಚಾರಿತ್ರ್ಯನು ಆಗಿರುತ್ತಾರೆ,
   ಮತ್ತು ಇಲ್ಲಿ ಹೇಗೆ ದಾನದಿಂದ ದಾನಿಯಾಗಲಿ ಅಥವಾ ಅತಿಥಿಯಾಗಲಿ ಈರ್ವರೂ ಪರಿಶುದ್ಧರಾಗುವುದಿಲ್ಲ. ? ಹೇಗೆಂದರೆ ಇಲ್ಲಿ ದಾನಿಯು ಹಾಗೂ ಅತಿಥಿಯು ಈರ್ವರೂ ದುಶ್ಶಿಲರು ಹಾಗೂ ಹೀನಚಾರಿತ್ರ್ಯರು ಆಗಿರುತ್ತಾರೆ,

   ಮತ್ತು ಇಲ್ಲಿ ಹೇಗೆ ಇಲ್ಲಿ ದಾನದಿಂದ ದಾನಿಯು ಹಾಗೂ ಅತಿಥಿಯು ಈರ್ವರೂ ಪರಿಶುದ್ಧರಾಗುವರು. ? ಹೇಗೆಂದರೆ ಇಲ್ಲಿ ದಾನಿಯು ಹಾಗೂ ಅತಿಥಿಯು ಈರ್ವರೂ ಶೀಲವಂತನಾಗಿರುತ್ತಾರೆ ಮತ್ತು ಸುಚಾರಿತ್ಯವಂತನಾಗಿರುತ್ತಾರೆ.

  ಹೀಗೆ ದಾನದಕ್ಷಣೆಗಳಿಂದ ನಾಲ್ಕು ವಿಧವಾಗಿ ವಿಶುದ್ಧರಾಗುವರು.

ಹೀಗೆ ನುಡಿದ ಭಗವಾನರು ನಂತರ ಸುಗತರು ಆದ ಶಾಸ್ತರು ಹೀಗೆ ನುಡಿದರು:

    ಯಾವಾಗ ಸುಶೀಲನು ಶ್ರದ್ಧಾಯುತ ಪ್ರಸನ್ನಚಿತ್ತದಿಂದ 
  ದುಶ್ಶಿಲನಿಗೆ ಯೋಗ್ಯವಾದ ಉಡುಗೋರೆ ಅಥವಾ ದಾನವನ್ನು 
  ವಿಶಾಲ ವಿಫುಲವಾದ ಭರವಸೆಗಳಿಂದ ನೀಡುವನೋ ಅಂತಹ 
   ದಾನವು ದಾಯಕನ್ನು ವಿಶುದ್ಧಗೊಳಿಸುವುದು.

   ಯಾವಾಗ ದುಶ್ಶಿಲನು ಸಂಶಯ ಚಿತ್ತದಿಂದ 
   ಶೀಲವಂತ ಅತಿಥಿಗೆ ಅಯೋಗ್ಯವಾದಂತಹ ದಾನವನ್ನು
  ಯಾವುದೇ ಫಲಗಳ ಭರವಸೆಗಳಿಲ್ಲದೆ ನೀಡುವನೋ ಅಂತಹ 
   ದಾನವು ಅತಿಥಿಯನ್ನು ವಿಶುದ್ಧಗೊಳಿಸುವುದು.

    ಯಾವಾಗ ದುಶ್ಶಿಲನು ಸಂಶಯ ಚಿತ್ತದಿಂದ 
   ದುಶ್ಶೀಲ ಅತಿಥಿಗೆ ಅಯೋಗ್ಯವಾದಂತಹ ದಾನವನ್ನು
  ಯಾವುದೇ ಫಲಗಳ ಭರವಸೆಗಳಿಲ್ಲದೆ ನೀಡುವನೋ ಅಂತಹ 
   ದಾನವು ಅತ್ಯಂತ ಅಲ್ಪ ಫಲಕಾರಿ ಎಂದು ಘೋಷಿಸುತ್ತೇನೆ.

    ಯಾವಾಗ ಸುಶೀಲನು ಶ್ರದ್ಧಾಯುತ ಪ್ರಸನ್ನಚಿತ್ತದಿಂದ 
  ಶೀಲವಂತನಿಗೆ ಯೋಗ್ಯವಾದ ಉಡುಗೋರೆ ಅಥವಾ ದಾನವನ್ನು 
  ವಿಶಾಲ ವಿಫುಲವಾದ ಭರವಸೆಗಳಿಂದ ನೀಡುವನೋ ಅಂತಹ 
   ದಾನವು ಮಹತ್ಫಲವೆಂದು ಘೋಷಿಸುತ್ತೇನೆ.

   

    ಯಾವಾಗ ವೀತರಾಗಿಯು ವೀತರಾಗಿಗೆ 
    ಪ್ರಸನ್ನಚಿತ್ತದಿಂದ ಯೋಗ್ಯವಾದ ದಾನವನ್ನು 
   ಕಮ್ಮಫಲದ ದೃಷ್ಟಿಕೋನದಿಂದ ನೀಡುವನೋ 
   ಅಂತಹ ದಾನವು  ನಿಜಕ್ಕೂ ಆಮಿಷ ದಾನಗಳಲ್ಲೇ 
         ಶ್ರೇಷ್ಟಕರವಾಗಿರುತ್ತದೆ.


   ಇಲ್ಲಿಗೆ ದಕ್ಖಿಣಾ ವಿಭಂಗ ಸುತ್ತವು ಮುಗಿಯಿತು.
( ಈ ಸುತ್ತದ ಪ್ರವಚನದ ನಂತರ ಎಲ್ಲರಿಗೂ ಭಗವಾನರು ಏತಕ್ಕಾಗಿ ಸಂಘದಾನಕ್ಕೆ ಒತ್ತು ನೀಡಿದರು ಎಂದು ತಿಳಿಯಿತು.)


 
 

 
    

Tuesday 26 March 2019

sacca vibhanga sutta in kannada ಸಚ್ಚ ವಿಭಂಗ ಸುತ್ತ(ಸತ್ಯಗಳ ವಿಶ್ಲೇಷಣೆಯ ಸುತ್ತ)

 
    ಸಚ್ಚ ವಿಭಂಗ ಸುತ್ತ(ಸತ್ಯಗಳ ವಿಶ್ಲೇಷಣೆಯ ಸುತ್ತ)


ನಾನು ಹೀಗೆ ಕೇಳಿದ್ದೇನೆ, ಒಮ್ಮೆ ಭಗವಾನರು ವಾರಣಾಸಿಯ ಇಸಿಪಟ್ಟಣದ ಜಿಂಕೆಗಳ ಉಧ್ಯಾನ(ಮಿಗದಾಯ)ದಲ್ಲಿ ತಂಗಿದ್ದರು, ಆಗ ಭಗವಾನರು ಭಿಕ್ಖುಗಳೊಂದಿಗೆ ಹೀಗೆ ಸಂಬೋಧಿಸಿದರು. :ಭಿಕ್ಖುಗಳೇ
       ಭಗವಾನ್
ಆಗ ಭಗವಾನರು ಹೀಗೆ ನುಡಿದರು : ಭಿಕ್ಖುಗಳೇ ತಥಾಗತರು ಅರಹಂತರು ಹಾಗೂ  ಸಮ್ಮಸಂಬುದ್ಧರಿಂದ ವಾರಣಾಸಿಯ ಋಷಿಪಟ್ಟಣದ ಮಿಗದಾಯದಲ್ಲಿ ಅನುತ್ತರವಾದ ಧಮ್ಮಚಕ್ರವು ಪ್ರವರ್ತನ(ಚಾಲಿತ)ವಾಯಿತು. ಮತ್ತು ಆ ಚಕ್ರವು ಯಾವುದೇ ಸಮಣನಿಂದಾಗಲಿ, ಅಥವಾ ಯಾವುದೇ ಬ್ರಾಹ್ಮಣನಿಂದಾಗಲಿ, ಅಥವಾ ಯಾವುದೇ ದೇವನಿಂದಾಗಲಿ, ಅಥವಾ ಯಾವುದೇ ಮಾರನಿಂದಾಗಲಿ, ಯಾವುದೇ ಬ್ರಹ್ಮನಿಂದಾಗಲಿ, ಅಥವಾ ಲೋಕಗಳಲ್ಲಿ ಯಾರಿಂದಲೇ ಆಗಲಿ ಅಪ್ರವರ್ತನ(ಅಚಾಲಿತ ಅಥವಾ ಹಿಂತಿರುಗಿ ಹೋಗುವಿಕೆ ಅಥವಾ ಸುಳ್ಳೆಂದು ಸಾಬಿತಾಗುವಿಕೆ)ವಾಗುವುದಿಲ್ಲ, ಇದು ಆರ್ಯಸತ್ಯಗಳ ಬೋದನೆಯಾಗಿದೆ, ಪ್ರತಿಪಾದನೆಯಾಗಿದೆ, ಸ್ಥಾಪನೆಯಾಗಿದೆ, ಸ್ಪಷ್ಟತೆಯಾಗಿದೆ, ವಿಶ್ಲೇಷಣೆಯಾಗಿದೆ,
 
    ಯಾವುವವು 4 ಆರ್ಯಸತ್ಯಗಳು ?

ಅವೆಂದರೆ
        1. ದುಃಖ ಆರ್ಯಸತ್ಯ
        2. ದುಃಖದ ಉದಯ(ಕಾರಣ) ಆರ್ಯಸತ್ಯ
        3. ದುಃಖದ ನಿರೋಧ ಆರ್ಯಸತ್ಯ ಮತ್ತು
        4. ದುಃಖದ ನಿರೋಧಕ್ಕೆ ಕೊಂಡೊಯ್ಯುವ ಮಾರ್ಗದ ಆರ್ಯಸತ್ಯ

ಭಿಕ್ಖುಗಳೇ ತಥಾಗತರು ಅರಹಂತರು ಹಾಗೂ  ಸಮ್ಮಸಂಬುದ್ಧರಿಂದ ವಾರಣಾಸಿಯ ಋಷಿಪಟ್ಟಣದ ಮಿಗದಾಯದಲ್ಲಿ ಅನುತ್ತರವಾದ ಧಮ್ಮಚಕ್ರವು ಪ್ರವರ್ತನ(ಚಾಲಿತ)ವಾಯಿತು. ಮತ್ತು ಆ ಚಕ್ರವು ಯಾವುದೇ ಸಮಣನಿಂದಾಗಲಿ, ಅಥವಾ ಯಾವುದೇ ಬ್ರಾಹ್ಮಣನಿಂದಾಗಲಿ, ಅಥವಾ ಯಾವುದೇ ದೇವನಿಂದಾಗಲಿ, ಅಥವಾ ಯಾವುದೇ ಮಾರನಿಂದಾಗಲಿ, ಯಾವುದೇ ಬ್ರಹ್ಮನಿಂದಾಗಲಿ, ಅಥವಾ ಲೋಕಗಳಲ್ಲಿ ಯಾರಿಂದಲೇ ಆಗಲಿ ಅಪ್ರವರ್ತನ(ಅಚಾಲಿತ ಅಥವಾ ಹಿಂತಿರುಗಿ ಹೋಗುವಿಕೆ ಅಥವಾ ಸುಳ್ಳೆಂದು ಸಾಬಿತಾಗುವಿಕೆ)ವಾಗುವುದಿಲ್ಲ, ಇದು ಆರ್ಯಸತ್ಯಗಳ ಬೋದನೆಯಾಗಿದೆ, ಪ್ರತಿಪಾದನೆಯಾಗಿದೆ, ಸ್ಥಾಪನೆಯಾಗಿದೆ, ಸ್ಪಷ್ಟತೆಯಾಗಿದೆ, ವಿಶ್ಲೇಷಣೆಯಾಗಿದೆ,


  ಭಿಕ್ಖುಗಳೇ ನೀವುಗಳು ಸಾರಿಪುತ್ರ ಹಾಗೂ ಮೊಗ್ಗಲಾನರ  ಸೇವನೆ(ಮಿತ್ರತ್ವ)ೆ  ಮಾಡಿರಿ, ಅವರ ಒಡನಾಟದಿಂದ ಬೆರೆಯಿರಿ, ಅವರು ಪಂಡಿತ(ಜ್ಞಾನಿ) ಭಿಕ್ಖುಗಳಾಗಿದ್ದಾರೆ, ಅವರು ಬ್ರಹ್ಮಚರಿಯದ ಶ್ರೇಷ್ಟ ಜೀವನಕ್ಕೆ ಅನುಗ್ರಹ ತೋರುತ್ತಾರೆ, ಅದರಲ್ಲಿ ಸಾರಿಪುತ್ತರು  ಜನ್ಮನೀಡಿದ ಮಾತೆಯ ತರಹ, ಹಾಗೆಯೇ ಮೋಗ್ಗಲಾನರು ಮಗುವನ್ನು ಸಲಹುವಂತಹವರ ತರಹ, ಸಾರಿಪುತ್ತರು ಎಲ್ಲರನ್ನು ಸೋತಪತ್ತಿ ಫಲವನ್ನು ಪಡೆಯುವ ಹಾಗೇ ಮಾರ್ಗದಶರ್ಿತರಾಗುವರು. ಮತ್ತು ಮೊಗ್ಗಲಾನರು ಉನ್ನತ ಗುರಿಯೆಡೆಗೆ ಸಾಗಿಸುವಂತಹವರು. ಸಾರಿಪುತ್ರರು ಆರ್ಯಸತ್ಯಗಳನ್ನು ಬೋದಿಸುವಲ್ಲಿ ಸಮರ್ಥರು ಅವರು ಆರ್ಯಸತ್ಯಗಳನ್ನು ವಿವರಿಸುತ್ತಾರೆ, ಒತ್ತಿಹೇಳುತ್ತಾರೆ, ಸ್ಥಾಪಿಸುತ್ತಾರೆ, ಸ್ಪಷ್ಟಿಕರಿಸುತ್ತಾರೆ, ವಿಶ್ಲೇಷಿಸುತ್ತಾರೆ, ಮತ್ತು ಪ್ರಕಟಪಡಿಸುತ್ತಾರೆ. ಹೀಗೆ ನುಡಿದ ಭಗವಾನರು ತಮ್ಮ ಆಸನದಿಂದ ಎದ್ದು ತಮ್ಮ ವಿಹಾರದೆಡೆಗೆ ವಿಶ್ರಮಿಸಲು ಹೋರಟರು.

     ಅವರು ಹೋರಟ ನಂತರ ಸಾರಿಪುತ್ತರು ಎದ್ದು ಭಿಕ್ಖುಗಳೊಂದಿಗೆ ಹೀಗೆ ಸಂಬೋದಿಸಿದರು : ಅಯುಷ್ಮಂತ ಭಿಕ್ಖುಗಳೇ,
ಆಗ ಪ್ರತಿಯಾಗಿ ಭಿಕ್ಖುಗಳು ಸಹಾ ಆಯುಷ್ಮಂತರೇ ಎಂದರು. ಆಗ ಸಾರಿಪುತ್ತರು ಹೀಗೆ ನುಡಿದರು : ಭಿಕ್ಖುಗಳೇ ತಥಾಗತರು ಅರಹಂತರು ಹಾಗೂ  ಸಮ್ಮಸಂಬುದ್ಧರುರಿಂದ ವಾರಣಾಸಿಯ ಋಷಿಪಟ್ಟಣದ ಮಿಗದಾಯದಲ್ಲಿ ಅನುತ್ತರವಾದ ಧಮ್ಮಚಕ್ರವು ಪ್ರವರ್ತನ(ಚಾಲಿತ)ವಾಯಿತು. ಮತ್ತು ಆ ಚಕ್ರವು ಯಾವುದೇ ಸಮಣನಿಂದಾಗಲಿ, ಅಥವಾ ಯಾವುದೇ ಬ್ರಾಹ್ಮಣನಿಂದಾಗಲಿ, ಅಥವಾ ಯಾವುದೇ ದೇವನಿಂದಾಗಲಿ, ಅಥವಾ ಯಾವುದೇ ಮಾರನಿಂದಾಗಲಿ, ಯಾವುದೇ ಬ್ರಹ್ಮನಿಂದಾಗಲಿ, ಅಥವಾ ಲೋಕಗಳಲ್ಲಿ ಯಾರಿಂದಲೇ ಆಗಲಿ ಅಪ್ರವರ್ತನ(ಅಚಾಲಿತ ಅಥವಾ ಹಿಂತಿರುಗಿ ಹೋಗುವಿಕೆ ಅಥವಾ ಸುಳ್ಳೆಂದು ಸಾಬಿತಾಗುವಿಕೆ)ವಾಗುವುದಿಲ್ಲ, ಇದು ಆರ್ಯಸತ್ಯಗಳ ಬೋದನೆಯಾಗಿದೆ, ಪ್ರತಿಪಾದನೆಯಾಗಿದೆ, ಸ್ಥಾಪನೆಯಾಗಿದೆ, ಸ್ಪಷ್ಟತೆಯಾಗಿದೆ, ವಿಶ್ಲೇಷಣೆಯಾಗಿದೆ,
 
    ಯಾವುವವು 4 ಆರ್ಯಸತ್ಯಗಳು ?




       ಅವೆಂದರೆ
        1. ದುಃಖ ಆರ್ಯಸತ್ಯ
        2. ದುಃಖದ ಉದಯ(ಕಾರಣ) ಆರ್ಯಸತ್ಯ
        3. ದುಃಖದ ನಿರೋಧ ಆರ್ಯಸತ್ಯ ಮತ್ತು
        4. ದುಃಖದ ನಿರೋಧಕ್ಕೆ ಕೊಂಡೊಯ್ಯುವ ಮಾರ್ಗದ ಆರ್ಯಸತ್ಯ

      ಮತ್ತೆ ಯಾವುದು ದುಃಖ ಆರ್ಯ ಸತ್ಯ ?
   ಜನ್ಮವು ದುಃಖ, ಜರಾವು ದುಃಖ, ಮರಣವು ದುಃಖ, ಶೋಕ ಪ್ರಲಾಪವು ದುಃಖ, ನೋವು ದುಃಖ, ಚಿಂತೆ ಯಾತನೆಗಳು ದುಃಖ, ಅಪ್ರಿಯವಾದುದರ ಸಮಾಗಮ ದುಃಖ, ಪ್ರಿಯವಾದುದರ ವಿಯೋಗ ದುಃಖ, ಇಷ್ಟ(ಇಚ್ಚೆ)ಪಟ್ಟಿದ್ದು ದೊರೆಯದಿದ್ದಾಗ ದುಃಖ, ಒಟ್ಟಾರೆ ಸಂಕ್ಷಿಪ್ತವಾಗಿ ಹೇಳುವುದಾದರೆ ಪಂಚ ಉಪಾದಾನ ಖಂದಗಳು( 5 ರಾಶಿಗಳಿಗೆ(ದೇಹ ಮತ್ತು ಮನಸ್ಸಿಗೆ) ಅಂಟುವಿಕೆಯೇ) ದುಃಖಕರ.

  ಮತ್ತು ಜನ್ಮ ಎಂದರೇನು?
     ಆಯುಷ್ಮಂತರೇ, ಎಲ್ಲಾ ಜೀವಿಗಳ ವರ್ಗಗಳಲ್ಲಿ ಜೀವಿಗಳ ಜನ್ಮ, ಆರಂಭ, ಪುನರ್ಜನ್ಮ, ಖಂದಗಳ ಸ್ಥಾಪನೆ, ಮತ್ತು ಇಂದ್ರೀಯಗಳ ಪಡೆಯುವಿಕೆಯನ್ನು ಜನ್ಮ ಎನ್ನುತ್ತಾರೆ.

   ಮತ್ತು ಜರಾ ಎಂದರೇನು ?
     ಆಯುಷ್ಮಂತರೇ, ಎಲ್ಲಾ ಜೀವಿಗಳ ವರ್ಗಗಳಲ್ಲಿ ಜೀವಿಗಳ ವೃದ್ಧಾಪ್ಯ, ವಯಸ್ಸಿನಿಂದ ದುರ್ಬಲವಾಗುವಿಕೆ, ಮುರಿದ ಹಲ್ಲುಗಳು, ನೆರತಕೂದಲು, ಸುಕ್ಕುಗಟ್ಟಿದ ಚರ್ಮ, ಶಕ್ತಿಗುಂದುವಿಕೆ, ಇಂದ್ರೀಯಗಳ ಶಿಥಿಲತೆಯನ್ನು ಜರಾ ಎನ್ನುತ್ತಾರೆ.

   ಮತ್ತು ಮರಣ ಎಂದರೇನು ?
     ಆಯುಷ್ಮಂತರೇ, ಎಲ್ಲಾ ಜೀವಿಗಳ ವರ್ಗಗಳಲ್ಲಿ ಮರಣಿಸುವಿಕೆ, ನಾಷವಾಗುವಿಕೆ, ವಿಯೋಗ, ಅಂತ್ಯವಾಗುವಿಕೆ, ಮೃತ್ಯುವಶವಾಗುವಿಕೆ, ಸಾವು,  ಖಂದಗಳ ಬೇರ್ಪಡೆಯಾಗುವಿಕೆ, ಶವವಾಗುವಿಕೆ, ಜೀವಿಂದ್ರೀಯದ ಕತ್ತರಿಸುವಿಕೆಯನ್ನು ಮರಣ ಎನ್ನುವರು.

     ಮತ್ತು ಶೋಕ ಎಂದರೇನು?
   ಆಯುಷ್ಮಂತರೇ, ಶೋಕ, ಶೋಕಿಸುವಿಕೆ, ಶೋಕಸ್ಥಿತಿ, ಅಂತರ್ಯದ ದುಃಖ, ದೌಭರ್ಾಗ್ಯ ಅಥವಾ ದುರ್ಘಟನೆಗೆ ಈಡಾಗಿರುವವರಲ್ಲಿನ ಆಂತರ್ಯದ ಆಳ ನೋವು, ಶೋಕವನ್ನು ಅನುಭವಿಸುತ್ತಿರುವಿಕೆ, ಇವನೆಲ್ಲಾ ಶೋಕ ಎನ್ನುವರು.

     ಮತ್ತು ಪ್ರಲಾಪ ಎಂದರೇನು ?
 ಆಯುಷ್ಮಂತರೇ ಅಳುವಿಕೆ, ಪ್ರಲಾಪಿಸುವಿಕೆ, ಯಾರದರೂ ದುಃಖಭರಿತ ಸನ್ನಿವೇಶದಲ್ಲಿದ್ದಾಗ ಅಥವಾ ತಾವೇ ಅಂತಹ ಸನ್ನಿವೇಶದಲ್ಲಿದ್ದಾಗ ಅತ್ತು ಪ್ರಲಾಪಿಸುವುದನ್ನು ಪ್ರಲಾಪವೆನ್ನುತ್ತೇವೆ.

       ಮತ್ತು ನೋವು(ಕಾಯದ ದುಃಖ) ಎಂದರೇನು ?
 ಅಯುಷ್ಮಂತರೇ ಶಾರೀರಿಕ ನೋವು, ಶಾರೀರಿಕ ಅಸಂತೋಷ, ಶರೀರಕ್ಕೆ ಸಂಪರ್ಕವಾಗಿ ಉಂಟಾಗುವ ನೋವುಭರಿತ, ಅಪ್ರೀಯ ವೇದನೆಗಳನ್ನು ನೋವು(ಕಾಯದ ದುಃಖ) ಎನ್ನುತ್ತಾರೆ.

        ಮತ್ತು ದೋಮನಸ್ಸು ಎಂದರೇನು ?
     ಆಯುಷ್ಮಂತರೇ, ಮಾನಸಿಕ ದುಃಖ, ಮಾನಸಿಕ ಅಸಂತುಷ್ಟತೆ, ಮನಸ್ಸಿಗೆ ಮಾನಸಿಕ ವಿಷಯಗಳಾದ ಚೇತಸಿಕಗಳು ಸಂಪರ್ಕವಾದಾಗ ಉಂಟಾಗುವ ಅಪ್ರಿಯ ವೇದನೆಗಳನ್ನು ದೋಮನಸ್ಸು ಎನ್ನುತ್ತೇವೆ.

         ಮತ್ತು ಉಪಯಾಸೋ(ಖಿನ್ನತೆ/ಚಿಂತೆ) ಎಂದರೇನು ?
   ಆಯುಷ್ಮಂತರೇ, ಒತ್ತಡ, ಯಾತನೆ, ಯಾವಾಗ ಒಬ್ಬನು ದುಃಖಭರಿತ ಅಥವಾ ನಷ್ಟಭರಿತ ಸನ್ನಿವéೇಷದಲ್ಲಿದ್ದಾಗ ಆತನು ಅನುಭವಿಸುವ ದುಃಖವನ್ನು ಉಪಯಾಸೋ ಎನ್ನುತ್ತೇವೆ.

          ಮತ್ತು ಇಷ್ಟ(ಇಚ್ಚೆ)ಪಟ್ಟಿದ್ದು ದೊರೆಯದಿರುವುದೇ ದುಃಖ ಎಂದರೇನು ?
    ಇಲ್ಲಿ ಅಯುಷ್ಮಂತರೇ, ಇದಕ್ಕೆ ಉದಾಹರಿಸುವುದಾದರೆ ಯಾವ ಜೀವಿಗಳು ಪುನರ್ಜನ್ಮಿಸುವ ಖಚಿತತೆ ಹೊಂದಿವೆಯೊ ಅವರಲ್ಲಿ ಇಂತಹ ಇಚ್ಚೆ ಉಂಟಾಗಬಹುದು ಎನೆಂದರೇ ಒಹ್ ನಾವು ಮಾತ್ರ ಪುನರ್ಜನ್ಮ ತಾಳದಿದ್ದರೆ ಹೇಗೆ !, ನಮಗೆ ಮಾತ್ರ ಪುನರ್ಜನ್ಮವಾಗದಿರಲಿ! ಅದರೆ ಹಾಗೇ ಬಯಸಿದ ಮಾತ್ರಕ್ಕೆ ಒಬ್ಬರಿಗೆ ಪುನರ್ಜನ್ಮ ಸಿಗದೇ ಹೋಗುವುದಿಲ್ಲ. ಬಯಸಿದ ಮಾತ್ರಕ್ಕೆ ಹಾಗಾವುದಿಲ್ಲ. ಆಗ ಆತನು ಹಾಗೇ ಆಗಲಿಲ್ಲವಲ್ಲ ಎಂದು ದುಃಖಿಸುವನು, ಇದನ್ನೇ ಇಚ್ಚಿಸಿದ ಮಾತ್ರಕ್ಕೆ ಹಾಗೇ ಆಗದಿದ್ದಾಗ ಸಿಗುವ ದುಃಖ ಎನ್ನುವರು. ಜೀವಿಗಳಲ್ಲಿ ಯಾರೆಲ್ಲಾ ವೃದ್ಧಾವಸ್ಥೆಗೆ.....ರೋಗಕ್ಕೆ........ಮರಣಕ್ಕೆ.........ಶೋಕಕ್ಕೆ......ಪ್ರಲಾಪಕ್ಕೆ......ನೋವಿಗೆ.......ದೋಮನಸ್ಸಿಗೆ......ಮತ್ತು, ಚಿಂತೆಗೆ ಗುರಿಯಾಗಬಾರದು ಎಂದು ಇಚ್ಚಿಸುತ್ತೇವೆ, ಅದರೆ ಕೇವಲ ಇಚ್ಚಿಸಿದ ಮಾತ್ರಕ್ಕೆ ನೀವು ಅವೆಲ್ಲಾವನ್ನು ತಡೆಯಲು ಸಾಧ್ಯವೇ ?.ಇದನ್ನೇ ಇಚ್ಚಿಸಿದ ಮಾತ್ರಕ್ಕೆ ಹಾಗೇ ಆಗದಿದ್ದಾಗ ಸಿಗುವ ದುಃಖ ಎನ್ನುವರು.
   
        ಮತ್ತು ಆಯುಷ್ಮಂತರೇ ಪಂಚ ಉಪಾದಾನಖಂದಗಳು ದುಃಖ ಎಂದರೇನು?
  ಇಲ್ಲಿ  5 ರೀತಿಯ ಅಂಟುವಿಕೆಗಳಿವೆ ಅವೆಂದರೆ ದೇಹಕ್ಕೆ, ವೇದನೆಗಳಿಗೆ, ಗ್ರಹಿಕೆಗಳಿಗೆ, ಸಂಖಾರಗಳಿಗೆ, ಮತ್ತು ವಿಞ್ಞಆನಗಳಿಗೆ ಅಂಟಿಕೊಂಡಿರುವುದು. ಇದನ್ನು ಸಂಕ್ಷಿಪ್ತವಾಗಿ 5 ಖಂದಗಳಿಗೆ ಅಂಟಿರುವುದೇ ದುಃಖ ಎಂದು ಹೇಳಲಾಗಿದೆ, ಇದೇ ಆರ್ಯರ ದುಃಖ ಸತ್ಯವಾಗಿದೆ. 

      ಮತ್ತು ಆಯುಷ್ಮಂತರೇ ಆರ್ಯರ ದುಃಖದ ಸಮುದಯ(ಕಾರಣ/ಉದಯ) ಸತ್ಯ ಎಂದರೇನು ?
   ಇಲ್ಲಿ ತೃಷ್ಣೆಯೇ ಪುನರ್ಜನ್ಮಗಳ ಕಡೆಗೆ ಕರೆದೊಯ್ಯುತ್ತದೆ, ಇದು ಆನಂದ ಹಾಗೂ ರಾಗದಿಂದ ಕೂಡಿದ್ದು, ಸದಾ ವಿವಿಧ ವಲಯಗಳಲ್ಲಿ, ಕ್ಷೇತ್ರಗಳಲ್ಲಿ ಸುಖಭೋಗಗಳನ್ನು ಹುಡುಕುತ್ತಿರುತ್ತದೆ. ಅವೆಂದರೆ ಕಾಮತನ್ಹಾ(ಇಂದ್ರೀಯಸುಖಗಳ ಬೋಗಾಸಕ್ತಿ), ಭವತನ್ಹಾ(ಶಾಶ್ವತವಾಗಿ ಇರಬೇಕು ಎನ್ನುವ ತೀವ್ರಬಯಕೆ), ಮತ್ತು ವಿಭವ ತನ್ಹಾ(ಇರಲೇಬಾರದು ಎಂಬ ತೀವ್ರ ಬಯಕೆ). ಇದನ್ನೇ ಆರ್ಯರ ದುಃಖದ ಸಮುದಯ(ಕಾರಣ/ಉದಯ) ಸತ್ಯ ಎನ್ನುತ್ತಾರೆ.


      ಮತ್ತು ಆಯುಷ್ಮಂತರೇ ಆರ್ಯರ ದುಃಖ ನಿರೋಧ(ಅಂತ್ಯ/ಸಮಾಪ್ತಿ/ಇಲ್ಲವಾಗುವಿಕೆ) ಎಂದರೇನು ?
  ದುಃಖಕ್ಕೆ ಕಾರಣವಾದ ತನ್ಹಾವನ್ನು (ತೀವ್ರಬಯಕೆಗಳನ್ನು) ನಿಶ್ಶೇಷವಾಗಿ ವಿರಾಗತೋರುವುದು(ಮರೆಮಾಡುವುದು/ವಿಕರ್ಷಣವಾಗುವುದು), ನಿರೋಧಗೊಳಿಸುವುದು(ಅಂತ್ಯ), ತ್ಯಾಗಮಾಡುವುದು, ಪಟಿನಿಸ್ಸ(ಬಿಟ್ಟುಬಿಡುವುದು)ಮಾಡುವುದು, ಮುಕ್ತವಾಗುವುದು, ಅನಾಲಯಗೊಳ್ಳುವುದು(ಅಂಟದೆ ಇರುವುದು), ಇದನ್ನೇ ಆಯುಷ್ಮಂತರೇ ಆರ್ಯರ ದುಃಖನಿರೋಧ ಎನ್ನುತ್ತಾರೆ.

   
     ಮತ್ತು ಆಯುಷ್ಮಂತರೇ ಆರ್ಯರ ದುಃಖ ನಿರೋಧಕ್ಕೆ ಕೊಂಡೊಯ್ಯುವ ಮಾರ್ಗಸತ್ಯ ಎಂದರೇನು ?
ಅದೇ ಆರ್ಯ ಆಷ್ಟಾಂಗ ಮಾರ್ಗ ಅಂದರೆ

ಸಮ್ಮಾ ದಿಟ್ಟಿ
ಸಮ್ಮಾ ಸಂಕಲ್ಪ
ಸಮ್ಮಾ ವಾಚಾ
ಸಮ್ಮಾ ಕಮ್ಮ
ಸಮ್ಮಾ ಜೀವನೋಪಾಯ
ಸಮ್ಮಾ ವ್ಯಾಯಾಮ
ಸಮ್ಮಾ ಸ್ಮೃತಿ
ಸಮ್ಮಾ ಸಮಾಧಿ

ಮತ್ತು ಆಯುಷ್ಮಂತರೇ ಸಮ್ಮಾ ದಿಟ್ಟಿ(ದೃಷ್ಟಿಕೋನ) ಎಂದರೇನು?
  ದುಃಖ ಆರ್ಯ ಸತ್ಯ, ದುಃಖ ಸಮುದಯ ಆರ್ಯ ಸತ್ಯ, ದುಃಖ ನಿರೋಧ ಆರ್ಯ ಸತ್ಯ, ಮತ್ತು ದುಃಖ ನಿರೋಧಕ್ಕೆ ಕೊಂಡೊಯ್ಯುನ ಮಾರ್ಗ. ಇವುಗಳನ್ನು ಯಾತಾರ್ಥವಾಗಿ ಅರಿಯುವುದೇ ಸಮ್ಮಾ ದಿಟ್ಟಿಯಾಗಿದೆ.


ಮತ್ತು ಆಯುಷ್ಮಂತರೇ ಸಮ್ಮಾಸಂಕಲ್ಪ ಎಂದರೇನು?
  ತ್ಯಾಗದ ಸಂಕಲ್ಪಗಳು, ಅದ್ವೇಷದ ಸಂಕಲ್ಪಗಳು, ಅಹಿಂಸೆಯ ಸಂಕಲ್ಪಗಳು ಇಂಥವುಗಳನ್ನು ಆಯುಷ್ಮಂತರೇ ಸಮ್ಮಾ ಸಂಕಲ್ಪ ಎನ್ನುವರು.

ಮತ್ತು ಆಯುಷ್ಮಂತರೇ ಸಮ್ಮಾವಾಚಾ ಎಂದರೇನು?
  ಸುಳ್ಳುಮಾತುಗಳಿಂದ ವಿರತನಾಗುವಿಕೆ , ಚಾಡಿತನಗಳಿಂದ ವಿರತನಾಗುವಿಕೆ, ಕಠೋರ ಮಾತುಗಳಿಂದ ವಿರತನಾಗುವಿಕೆ , ಮತ್ತು ಅಸಂಬದ್ಧಮಾತುಗಳಿಂದ ವಿರತನಾಗುವಿಕೆ ಇಂಥವುಗಳನ್ನು ಆಯುಷ್ಮಂತರೇ ಸಮ್ಮಾವಾಚಾ ಎನ್ನುವರು.


      ಮತ್ತು ಆಯುಷ್ಮಂತರೇ ಸಮ್ಮಾಕಮ್ಮ ಎಂದರೇನು?
  ಪ್ರಾಣಿಹತ್ಯೆಗಳಿಂದ ವಿರತನಾಗುವಿಕೆ, ಕಳ್ಳತನಗಳಿಂದ ವಿರತನಾಗುವಿಕೆ, ಮತ್ತು ಅನೈತಿಕ ಕಾಮುಕತೆಯಿಂದ ವಿರತನಾಗುವಿಕೆ ಇಂಥವುಗಳನ್ನು ಆಯುಷ್ಮಂತರೇ ಸಮ್ಮಾಕಮ್ಮ ಎನ್ನುವರು.

       ಮತ್ತು ಆಯುಷ್ಮಂತರೇ ಸಮ್ಮಾಜೀವನೊಪಾಯ ಎಂದರೇನು?
   ಇಲ್ಲಿ ಆರ್ಯಶ್ರಾವಕನು ಮಿಥ್ಯಜೀವನೋಪಯಗಳನ್ನು ತೊರೆದು ಸಮ್ಮಜೀವನೊಪಾಯದಿಂದ ಜೀವಿಸಿದರೆ ಇಂಥವುಗಳನ್ನು ಆಯುಷ್ಮಂತರೇ ಸಮ್ಮಾಕಮ್ಮ ಎನ್ನುವರು.

       ಮತ್ತು ಆಯುಷ್ಮಂತರೇ ಸಮ್ಮಾವ್ಯಾಯಮವು ಯಾವುದು ?
   ಇಲ್ಲಿ ಆರ್ಯಶ್ರಾವಕನು ಇನ್ನು ಉತ್ಪನ್ನವಾಗದಿರುವ ಪಾಪಯುತವಾದ ಮತ್ತು ಅಕುಶಲವಾದ ಮಾನಸಿಕ ಸ್ಥಿತಿ(ಯೋಚನೆ)ಗಳನ್ನು ಉದಯಿಸದಂತೆ ಮಾಡಲು ಇಚ್ಚೆಯುಳ್ಳವನಾಗುತ್ತಾನೆ, ಉತ್ಸಾಹಿತನಾಗುತ್ತಾನೆ, ಪ್ರಯತ್ನಿಸುತ್ತಾನೆ, ಮತ್ತು ಅದರಲ್ಲಿ ಯಶಸ್ವಿಯಾಗುತ್ತಾನೆ.  ಹಾಗೇಯೇ ಇಲ್ಲಿ ಆರ್ಯಶ್ರಾವಕನು ಉತ್ಪನ್ನವಾಗಿರುವ ಪಾಪಯುತವಾದ ಮತ್ತು ಅಕುಶಲವಾದ ಮಾನಸಿಕ ಸ್ಥಿತಿ(ಯೋಚನೆ)ಗಳನ್ನು ಇನ್ನಿಲ್ಲದಂತೆ ಮಾಡಲು ಇಚ್ಚೆಯುಳ್ಳವನಾಗುತ್ತಾನೆ, ಉತ್ಸಾಹಿತನಾಗುತ್ತಾನೆ, ಪ್ರಯತ್ನಿಸುತ್ತಾನೆ, ಮತ್ತು ಅದರಲ್ಲಿ ಯಶಸ್ವಿಯಾಗುತ್ತಾನೆ. ಹಾಗೇಯೆ ಇಲ್ಲಿ ಆರ್ಯಶ್ರಾವಕನು ಇನ್ನು ಉತ್ಪನ್ನವಾಗದಿರುವ ಪುಣ್ಯಭರಿತವಾದ ಮತ್ತು ಕುಶಲವಾದ ಮಾನಸಿಕ ಸ್ಥಿತಿ(ಯೋಚನೆ)ಗಳನ್ನು ಉದಯಿಸುವಂತೆ ಮಾಡಲು ಇಚ್ಚೆಯುಳ್ಳವನಾಗುತ್ತಾನೆ, ಉತ್ಸಾಹಿತನಾಗುತ್ತಾನೆ, ಪ್ರಯತ್ನಿಸುತ್ತಾನೆ, ಮತ್ತು ಅದರಲ್ಲಿ ಯಶಸ್ವಿಯಾಗುತ್ತಾನೆ. ಹಾಗೆಯೇ ಇಲ್ಲಿ ಆರ್ಯಶ್ರಾವಕನು ಉತ್ಪನ್ನವಾಗಿರುವ ಪುಣ್ಯಭರಿತವಾದ ಮತ್ತು ಕುಶಲವಾದ ಮಾನಸಿಕ ಸ್ಥಿತಿ(ಯೋಚನೆ)ಗಳನ್ನು ಕಳೆದುಹೋಗದಂತೆ, ವೃದ್ಧಿಸುವಂತೆ, ವಿಕಸಿಸುವಂತೆ, ಮಾಡಲು ಇಚ್ಚೆಯುಳ್ಳವನಾಗುತ್ತಾನೆ, ಉತ್ಸಾಹಿತನಾಗುತ್ತಾನೆ, ಪ್ರಯತ್ನಿಸುತ್ತಾನೆ, ಮತ್ತು ಅದರಲ್ಲಿ ಯಶಸ್ವಿಯಾಗುತ್ತಾನೆ. ಇಂಥವುಗಳನ್ನು ಆಯುಷ್ಮಂತರೇ ಸಮ್ಮಾವ್ಯಾಯಾಮ ಎನ್ನುವರು. 

        ಮತ್ತು ಆಯುಷ್ಮಂತರೇ ಸಮ್ಮಾ ಸ್ಮೃತಿಯು ಯಾವುದು ? 
  ಇಲ್ಲಿ ಆಯುಷ್ಮಂತರೇ, ಭಿಕ್ಖುವು ಕಾಯದಲ್ಲಿ ಕಾಯಾನುಪಸ್ಸಿಯಾಗಿ ವಿಹರಿಸುತ್ತಾನೆ, ಉತ್ಸಾಹಿತನಾಗಿ ಎಚ್ಚರಿಕೆಯಿಂದ ಪೂರ್ಣಅರಿವಿನಿಂದ ಲೋಕದ ಯಾವುದಕ್ಕೂ ಆಸೆಯಾಗಲಿ, ದ್ವೇಷವಾಗಲಿ ತಾಳದೆ ವಿಕ್ಷಿಸುವವನಾಗುತ್ತಾನೆ. ಅದೇ ರೀತಿಯಲ್ಲಿ ವೇದನೆಗಳಲ್ಲಿ ವೇದನೂಪಸ್ಸಿಯಾಗಿ ವಿಹರಿಸುತ್ತಾನೆ. ಉತ್ಸಾಹಿತನಾಗಿ ಎಚ್ಚರಿಕೆಯಿಂದ ಪೂರ್ಣಅರಿವಿನಿಂದ ಲೋಕದ ಯಾವುದಕ್ಕೂ ಆಸೆಯಾಗಲಿ, ದ್ವೇಷವಾಗಲಿ ತಾಳದೆ ವಿಕ್ಷಿಸುವವನಾಗುತ್ತಾನೆ. ಹಾಗೆಯೇ ಚಿತ್ತಗಳಲ್ಲಿ ಚಿತ್ತಾನುಪಸ್ಸಿಯಾಗಿ ವಿಹರಿಸುತ್ತಾನೆ, ಉತ್ಸಾಹಿತನಾಗಿ ಎಚ್ಚರಿಕೆಯಿಂದ ಪೂರ್ಣಅರಿವಿನಿಂದ ಲೋಕದ ಯಾವುದಕ್ಕೂ ಆಸೆಯಾಗಲಿ, ದ್ವೇಷವಾಗಲಿ ತಾಳದೆ ವಿಕ್ಷಿಸುವವನಾಗುತ್ತಾನೆ. ಅದೇ ರೀತಿಯಲ್ಲಿ ಧಮ್ಮಗಳಲ್ಲಿ ಧಮ್ಮಾನುಪಸ್ಸಿಯಾಗಿ ವಿಹರಿಸುತ್ತಾನೆ, ಉತ್ಸಾಹಿತನಾಗಿ ಎಚ್ಚರಿಕೆಯಿಂದ ಪೂರ್ಣಅರಿವಿನಿಂದ ಲೋಕದ ಯಾವುದಕ್ಕೂ ಆಸೆಯಾಗಲಿ, ದ್ವೇಷವಾಗಲಿ ತಾಳದೆ ವಿಕ್ಷಿಸುವವನಾಗುತ್ತಾನೆ. ಇಂಥವುಗಳನ್ನು ಆಯುಷ್ಮಂತರೇ ಸಮ್ಮಾಸತಿ ಎನ್ನುವರು. 


          ಮತ್ತು ಆಯುಷ್ಮಂತರೇ ಸಮ್ಮಾ ಸ್ಮೃಮಾಧಿಯು ಯಾವುದು ?  

    ಇಲ್ಲಿ ಆಯುಷ್ಮಂತರೇ ಭಿಕ್ಖುವು ಇಂದ್ರೀಯಸುಖಗಳ ಯೋಚನೆಗಳಿಂದ ರಹಿತನಾಗಿ(ಬರಿದಾಗಿ) ಹಾಗೆಯೇ ಅಕುಶಲ ಮಾನಸಿಕ ಸ್ಥಿತಿಗಳಿಂದ ರಹಿತನಾಗಿ, ವಿತರ್ಕ(ಮನಸ್ಸನ್ನು ಕೇಂದ್ರಿಕರಿಸುವಿಕೆ), ವಿಚಾರ(ಆ ದಿಕ್ಕಿನಲ್ಲಿಯೇ ಮನಸ್ಸನ್ನು ಹರಿಸುವಿಕೆ),  ಹಾಗೂ ಏಕಾಗ್ರತೆಗಳಿಂದ ಹುಟ್ಟಿದ  ಆನಂದ ಮತ್ತು ಸುಖದಿಂದ ಕೂಡಿದ ಪ್ರಥಮ ಸಮಾದಿಯಲ್ಲಿ ನೆಲೆಸುತ್ತಾನೆ.

 ನಂತರ ವಿತರ್ಕ ಮತ್ತು ವಿಚಾರಗಳಿಂದ ರಹಿತನಾಗಿ, ಅವುಗಳಿಗೆ ಅತೀತನಾಗಿ  ದ್ವೀತೀಯ ಸಮಾಧಿಯಲ್ಲಿ ನೆಲೆಸುತ್ತಾನೆ, ಆ ಸಮಾಧಿಯು ವಿತರ್ಕ ಮತ್ತು ವಿಚಾರಗಳಿಂದ ರಹಿತವಾದ ಆನಂದ ಹಾಗೂ ಸುಖಗಳಿಂದ ಕೂಡಿರುತ್ತದೆ. ಜೋತೆಗೆ ಅಂತರಿಕ ಸ್ಪಷ್ಟತೆ ಹಾಗೂ ಶ್ರದ್ಧೆಯಿಂದ ಕೂಡಿದ್ದು ಚಿತ್ತದ ಏಕೋಭಾವದಿಂದ ಕೂಡಿರುತ್ತದೆ.

    ನಂತರ ಆನಂದವನ್ನು ಮೀರಿದ ತ್ರಿತೀಯ ಸಮಾಧಿಯಲ್ಲಿ ನೆಲೆಸುತ್ತಾನೆ. ಅಲ್ಲಿ ಅವರು ಸಮಚಿತ್ತತೆಯಿಂದ, ಸ್ಮೃತಿ ಹಾಗೂ ಎಚ್ಚರಿಕೆಯಿಂದ ಕೂಡಿದ ಸುಖದಲ್ಲಿ ನೆಲಸಿರುತ್ತಾರೆ, ಯಾವುದನ್ನು ಕುರಿತು ಆರ್ಯರು ಹೀಗೆ ನುಡಿದಿದ್ದಾರೊ : ಉಪೇಕ್ಖ(ಸಮಚಿತ್ತತೆ) ಹಾಗೂ ಸ್ಮೃತಿ(ಎಚ್ಚರಿಕೆ)ಯಿಂದ ಕೂಡಿದ ಸುಖಯುತ ಸಮಾಧಿಯಲ್ಲಿ ನೆಲಸುತ್ತಾನೆ. ಅದರಲ್ಲಿ ನೆಲಸುತ್ತಾನೆ.

    ನಂತರ ಸುಖಗಳನ್ನು ಹಾಗೂ ನೋವುಗಳನ್ನು ತ್ಯೇಜಿಸಿ, ಹಿಂದಿನ ಸುಖ ಹಾಗೂ ಶೋಕಗಳನ್ನು ಮೀರಿ, ಆತನು ಚತುರ್ಥ ಸಮಾಧಿಯಲ್ಲಿ ಪ್ರವೇಶಿಸಿ ನೆಲಸುತ್ತಾನೆ, ಅಲ್ಲಿ ಶುದ್ಧವಾದ ಸಮಚಿತ್ತತೆ ಹಾಗೂ ಸ್ಮೃತಿಯು ಇರುತ್ತದೆ. ಇದನ್ನೇ ಆಯುಷ್ಮಂತರೇ ಸಮ್ಮ ಸಮಾಧಿ ಎನ್ನುವರು. ಇದನ್ನೇ ಆಯುಷ್ಮಂತರೇ ದುಃಖನಿರೋಧಗಾಮಿನಿಯ ಮಾರ್ಗದ ಆರಿಯ ಸತ್ಯ ಎನ್ನುವರು.

    ಅಯುಷ್ಮಂತರೇ ತಥಾಗತರು ಅರಹಂತರು ಹಾಗೂ  ಸಮ್ಮಸಂಬುದ್ಧರಿಂದ ವಾರಣಾಸಿಯ ಋಷಿಪಟ್ಟಣದ ಮಿಗದಾಯದಲ್ಲಿ ಅನುತ್ತರವಾದ ಧಮ್ಮಚಕ್ರವು ಪ್ರವರ್ತನ(ಚಾಲಿತ)ವಾಯಿತು. ಮತ್ತು ಆ ಚಕ್ರವು ಯಾವುದೇ ಸಮಣನಿಂದಾಗಲಿ, ಅಥವಾ ಯಾವುದೇ ಬ್ರಾಹ್ಮಣನಿಂದಾಗಲಿ, ಅಥವಾ ಯಾವುದೇ ದೇವನಿಂದಾಗಲಿ, ಅಥವಾ ಯಾವುದೇ ಮಾರನಿಂದಾಗಲಿ, ಯಾವುದೇ ಬ್ರಹ್ಮನಿಂದಾಗಲಿ, ಅಥವಾ ಲೋಕಗಳಲ್ಲಿ ಯಾರಿಂದಲೇ ಆಗಲಿ ಅಪ್ರವರ್ತನ(ಅಚಾಲಿತ ಅಥವಾ ಹಿಂತಿರುಗಿ ಹೋಗುವಿಕೆ ಅಥವಾ ಸುಳ್ಳೆಂದು ಸಾಬಿತಾಗುವಿಕೆ)ವಾಗುವುದಿಲ್ಲ, ಇದು ಆರ್ಯಸತ್ಯಗಳ ಬೋದನೆಯಾಗಿದೆ, ಪ್ರತಿಪಾದನೆಯಾಗಿದೆ, ಸ್ಥಾಪನೆಯಾಗಿದೆ, ಸ್ಪಷ್ಟತೆಯಾಗಿದೆ, ವಿಶ್ಲೇಷಣೆಯಾಗಿದೆ,

  ಹೀಗೆ ಅಯುಷ್ಮಂತರಾದ ಸಾರಿಪುತ್ತರು ನುಡಿದರು. ಇದನ್ನು ಅಲಿಸಿ ಆನಂದಿತರಾಗಿದಂತಹ ಭಿಕ್ಕೂಗಳು ಸಾರಿಪುತ್ತರ ಬೊಧನೆಗೆ ಅಭಿನಂದನೆ ಮಾಡಿದರು.

   ಇಲ್ಲಿಗೆ ಹನ್ನೊಂದನೆಯ ಸಚ್ಚವಿಭಂಗ ಸುತ್ತವು ಮುಗಿಯಿತು.






   

 

 










































Thursday 21 March 2019

pathama mahanama sutta in kannada 7. ಪ್ರಥಮ ಮಹಾನಾಮ ಸುತ್ತ

                                  7. ಪ್ರಥಮ ಮಹಾನಾಮ ಸುತ್ತ



ಆ ಸಮಯದಲ್ಲಿ ಭಗವಾನರು ಶಾಕ್ಯರ ರಾಜ್ಯದಲ್ಲಿ ಇದ್ದರು. ಕಪಿಲವಸ್ತುವಿನ ಸಮೀಪದ ಆಲದಮರದ ವಿಹಾರದಲ್ಲಿ ನೆಲೆಸಿದ್ದರು. ಆ ಸಮಯದಲ್ಲಿ ಕೆಲ ಭಿಕ್ಹುಗಳು ಭಗವಾನರಿಗೆ ಚಿವರ(ಭಿಕ್ಖು ವಸ್ತ್ರ)ವನ್ನು ಸಿದ್ಧಪಡಿಸುತ್ತಿದ್ದರು ಏಕೆಂದರೆ ವಷರ್ಾವಾಸದ ನಂತರ ಭಗವಾನರು ಬೇರೆಡೆ ಸಂಚಾರಕ್ಕೆ ಹೊರಡುವ ಸಾಧ್ಯತೆ ಇತ್ತು.. ಈ ವಿಷಯವನ್ನು ಮಹಾನಾಮ ಶಾಕ್ಯರು ಕೇಳಿದರು.
ಅವರು ಬುದ್ಧರಲ್ಲಿಗೆ ಹೋಗಿ ವಂದಿಸಿದರು ನಂತರ ಒಂದೆಡೆ ಕುಳಿತರು ಮತ್ತು ಹೀಗೆ ಕೇಳಿದರು : ಭಗವಾನ್, ಕೆಲ ಭಿಕ್ಹುಗಳು ಭಗವಾನರಿಗೆ ಚಿವರವನ್ನು ಸಿದ್ಧಪಡಿಸುತ್ತಿದ್ದಾರೆ  ಏಕೆಂದರೆ ವಷರ್ಾವಾಸದ ನಂತರ ತಾವು ಬೇರೆಡೆ ಸಂಚಾರಕ್ಕೆ ಹೊರಡುವ ಸಾಧ್ಯತೆ ಇದೆ ಎಂದು. ಈಗ ನಾವು ನಮ್ಮ ಜೀವನವನ್ನು ಹಲವಾರು ವಿಧದಲ್ಲಿ ಕಳೆಯುತಿಹೆವು, ನಾವು ಯಾವ ರೀತಿಯ  ಸಾಧನೆಯಲ್ಲಿ ತೊಡಗಿದರೆ ನಮಗೆ ಒಳಿತಾಗಬಹುದು.
ಸಾಧು ಸಾಧು ಮಹಾನಾಮ, ತಮ್ಮಂತಹ ಗೌರವಾನ್ವಿತ ವ್ಯಕ್ತಿಗಳು ನನ್ನೊಂದಿಗೆ ಈ ರೀತಿಯಲ್ಲಿ ಬಂದು, ನಾವು ನಮ್ಮ ಜೀವನವನ್ನು ಹಲವಾರು ವಿಧದಲ್ಲಿ ಕಳೆಯುತಿಹೆವು, ನಾವು ಯಾವ ರೀತಿಯ  ಸಾಧನೆಯಲ್ಲಿ ತೊಡಗಿದರೆ ನಮಗೆ ಒಳಿತಾಗಬಹುದು.  ಎಂದು ಕೇಳುವುದು ಅತ್ಯಂತ ಸಮಂಜಸವಾಗಿದೆ.
ಮಹಾನಾಮ, ಶ್ರದ್ಧಾವಂತನು ಯಶಸ್ವಿಯಾಗುತ್ತಾನೆ ಹೊರತು ಅಶ್ರದ್ಧಾವಂತನಲ್ಲ,
ಧೃಡಯತ್ನಶೀಲನು ಯಶಸ್ವಿಯಾಗುತ್ತಾನೆ ಹೊರತು ಸೋಮಾರಿಯಲ್ಲ, 
ಸ್ಮೃತಿವಂತನು ಯಶಸ್ವಿಯಾಗುತ್ತಾನೆ ಹೊರತು ಸ್ಮೃತಿಹೀನನಲ್ಲ,
ಸಮಾಹಿತನು ಯಶಸ್ವಿಯಾಗುತ್ತಾನೆ ಹೊರತು ಅಸಮಾಹಿತನಲ್ಲ, 
ಪ್ರಜ್ಞಾವಂತನು ಯಶಸ್ವಿಯಾಗುತ್ತಾನೆ ಹೊರತು ದುಪ್ರಜ್ಞನಲ್ಲ, 
ಯಾವಾಗ ನೀವು ಈ ರೀತಿಯಲ್ಲಿ ಈ ಐದು ವಿಷಯಗಳಲ್ಲಿ ನೆಲೆಗೊಂಡಾಗ, ನೀವು ನಂತರ ಆರು ಉನ್ನತ ವಿಷಯಗಳಲ್ಲಿ ಅಭಿವೃದ್ಧಿ ತಾಳಬೇಕು. ಮೊದಲು ನೀವು ತಥಾಗತರ ಅನುಸ್ಮರಣೆ ಹೀಗೆ ಮಾಡಬೇಕು:
     ಭಗವಾನರು ಅರಹಂತರು, ಸಮ್ಮಾಸಂಬುದ್ಧರು, ವಿಧ್ಯಾಚರಣೆಯ ಸಂಪನ್ನರು, ಸುಗತರು, ಲೋಕವಿದರು, ಅನುತ್ತರರು, ಪುರುಷದಮ್ಯ ಸಾರಥಿಯು, ದೇವತೆಗಳಿಗೆ ಮತ್ತು ಮಾನವರಿಗೆ ಶಾಸ್ತರು, ಬುದ್ಧರು ಹಾಗೂ ಭಗವಾನರು ಆಗಿದ್ದಾರೆ.    ಯಾವಾಗ ಹೀಗೆ ಆರ್ಯ ಶಿಷ್ಯನು ತಥಾಗತರನ್ನು ಅನುಸ್ಮೃರಣೆ ಮಾಡುವನೊ ಆಗ ಆತನ ಮನಸ್ಸು ರಾಗಯುತವಾಗಿರುವುದಿಲ್ಲ, ದ್ವೇಷಯುತವಾಗಿರುವುದಿಲ್ಲ ಹಾಗೂ ಮೋಹಯುತವಾಗಿರುವುದಿಲ್ಲ, ಆ ಸಮಯದಲ್ಲಿ ಅವರ ಮನಸ್ಸು ಬುದ್ಧಾನುಸ್ಸತಿಯಲ್ಲಿಯೇ ಅವಿಚಲವಾಗಿರುತ್ತದೆ, ಹೀಗೆ ಅವಿಚಲ ಚಿತ್ತವು ಅರ್ಥಸಹಿತ, ಧಮ್ಮಸಹಿತ  ಆನಂದವಾಗಿರುತ್ತದೆ, ಹೀಗೆ ಧಮ್ಮುಪಸಂಹಿತವಾದ ಚಿತ್ತವು ಪ್ರಮೋದವನ್ನು ತಾಳುತ್ತದೆ, ಪ್ರಮೋದದಿಂದಾಗಿ ಪೀತಿ(ಆನಂದ)ವು ಉಂಟಾಗುತ್ತದೆ, ಆನಂದದಿಂದ ಕಾಯವು ಪ್ರಸನ್ನವಾಗುತ್ತದೆ, ಪ್ರಸನ್ನ ಕಾಯದಿಂದ ಸುಖವು ಉಂಟಾಗುವುದು, ಸುಖಯುತ ಚಿತ್ತದಿಂದ ಸಮಾಧಿಯುಂಟಾಗುವುದು.. ಹೀಗೆ ನೆಲೆಸುವ ಆರ್ಯಶ್ರಾವಕನು ಅವ್ಯವಸ್ಥತೆಯ ಜನರ ಮಧ್ಯೆ ಸಮತೋಲನವಾಗಿರುತ್ತಾನೆ, ಕ್ಷೊಭೆಯುಳ್ಳ ಜನರ ಮಧ್ಯೆ ಅಕ್ಷೊಭನಾಗಿರುತ್ತಾನೆ. ಅವರು ಧಮ್ಮದ ಶ್ರೋತದಲ್ಲಿ ಪ್ರವೇಶಿಸುತ್ತಾರೆ, ಮತ್ತು ಧಮ್ಮದ ಅನುಸ್ಸತಿಯಲ್ಲಿ ಅಭಿವೃದ್ಧಿ ಹೊಂದುತ್ತಾರೆ.
ಅಲ್ಲದೆ ನೀವು ಧಮ್ಮಾನುಸ್ಸತಿಯಲ್ಲಿ ತೊಡಗಬೇಕು ಹೇಗೆಂದರೆ :
ಧಮ್ಮವು (ಬೋಧನೆ) ಭಗವಾನರಿಂದ ತುಂಬ ಚೆನ್ನಾಗಿ ವಿವರಿಸಲ್ಪಟ್ಟಿದೆ (ಸ್ವಾಖ್ವಾತೋ), ಧಮ್ಮವು ಇಲ್ಲಿಯೇ ಈಗಲೇ ದಶರ್ಿಸಲ್ಪಟ್ಟಿದೆ(ಸಂದಿಟ್ಟಿಕೊ), ಕಾಲವಿಳಂಬವಿಲ್ಲದೆ ಫಲಕಾರಿಯು ಮತ್ತು ಸವರ್ಾಕಾಲಿಕವಾದುದು (ಅಕಾಲಿಕೊ), ಬನ್ನಿ ಪರಿಕ್ಷಿಸಿ (ಏಹಿಪಸ್ಸಿಕೊ) ನಂತರ ಸ್ವೀಕರಿಸಿ ಎಂದು ಆಹ್ವಾನಿಸುತ್ತದೆ. ಉನ್ನತಿಯೆಡೆಗೆ (ಓಪನಯಿಕೋ) ಸಾಗಿಸುವಂತಹುದು, ಜ್ಞಾನಿಗಳಾದ ಪ್ರತಿಯೊಬ್ಬರಿಂದಲೂ ಅರಿಯಬಹುದಾಗಿದೆ (ಪಚ್ಚತ್ತಂ ವೇದಿತಬ್ಬೊ ವಿಞ್ಞೋಹಿ ತಿ).
ಯಾವಾಗ ಹೀಗೆ ಆರ್ಯ ಶಿಷ್ಯನು ಧಮ್ಮವನ್ನು ಅನುಸ್ಮೃರಣೆ ಮಾಡುವನೊ ಆಗ ಆತನ ಮನಸ್ಸು ರಾಗಯುತವಾಗಿರುವುದಿಲ್ಲ, ದ್ವೇಷಯುತವಾಗಿರುವುದಿಲ್ಲ ಹಾಗೂ ಮೋಹಯುತವಾಗಿರುವುದಿಲ್ಲ, ಆ ಸಮಯದಲ್ಲಿ ಅವರ ಮನಸ್ಸು ಧಮ್ಮಾನುಸ್ಸತಿಯಲ್ಲಿಯೇ ಅವಿಚಲವಾಗಿರುತ್ತದೆ, ಹೀಗೆ ಅವಿಚಲ ಚಿತ್ತವು ಅರ್ಥಸಹಿತ, ಧಮ್ಮಸಹಿತ  ಆನಂದವಾಗಿರುತ್ತದೆ, ಹೀಗೆ ಧಮ್ಮುಪಸಂಹಿತವಾದ ಚಿತ್ತವು ಪ್ರಮೋದವನ್ನು ತಾಳುತ್ತದೆ, ಪ್ರಮೋದದಿಂದಾಗಿ ಪೀತಿ(ಆನಂದ)ವು ಉಂಟಾಗುತ್ತದೆ, ಆನಂದದಿಂದ ಕಾಯವು ಪ್ರಸನ್ನವಾಗುತ್ತದೆ, ಪ್ರಸನ್ನ ಕಾಯದಿಂದ ಸುಖವು ಉಂಟಾಗುವುದು, ಸುಖಯುತ ಚಿತ್ತದಿಂದ ಸಮಾಧಿಯುಂಟಾಗುವುದು.. ಹೀಗೆ ನೆಲೆಸುವ ಆರ್ಯಶ್ರಾವಕನು ಅವ್ಯವಸ್ಥಿತೆಯ ಜನರ ಮಧ್ಯೆ ಸಮತೋಲನವಾಗಿರುತ್ತಾನೆ, ಕ್ಷೊಭೆಯುಳ್ಳ ಜನರ ಮಧ್ಯೆ ಅಕ್ಷೊಭನಾಗಿರುತ್ತಾನೆ. ಅವರು ಧಮ್ಮದ ಶ್ರೋತದಲ್ಲಿ ಪ್ರವೇಶಿಸುತ್ತಾರೆ, ಮತ್ತು ಧಮ್ಮದ ಅನುಸ್ಸತಿಯಲ್ಲಿ ಅಭಿವೃದ್ಧಿ ಹೊಂದುತ್ತಾರೆ.
ಭಗವಾನರ ಶ್ರಾವಕ ಸಂಘವು ಒಳ್ಳೆಯ ದಾರಿಯಲ್ಲಿ ಹೋಗುತ್ತಿದೆ
ಭಗವಾನರ ಶ್ರಾವಕ ಸಂಘವು ಋಜುವಿನ (ನೇರವಾದ) ದಾರಿಯಲ್ಲಿ. ಹೋಗುತ್ತಿದೆ.
ಭಗವಾನರ ಶ್ರಾವಕ ಸಂಘವು ನ್ಯಾಯವಾದ (ನಿಜ/ಸತ್ಯ) ದಾರಿಯಲ್ಲಿ ಹೋಗುತ್ತಿದೆ.
ಭಗವಾನರ ಶ್ರಾವಕ ಸಂಘವು ಸಮಂಜಸವಾದ ದಾರಿಯಲ್ಲಿ ಹೋಗುತ್ತಿದೆ. ನಾಲ್ಕು ವ್ಯಕ್ತಿಗಳ ಜೋಡಿಗಳಿಂದ ಮತ್ತು ಅಷ್ಟ ವ್ಯಕ್ತಿಗಳಿಂದ ಕೂಡಿರುವುದೇ ಭಗವಾನರ ಶ್ರಾವಕ ಸಂಘವಾಗಿದೆ. ಈ ಪವಿತ್ರವಾದ ಸಂಘವು ದಾನಕ್ಕೆ ಅರ್ಹವಾಗಿದೆ, ಆತಿಥ್ಯಕ್ಕೆ ಅರ್ಹವಾಗಿದೆ, ದಕ್ಷಣೆಗೆ (ಸಮರ್ಪಣೆ) ಅರ್ಹವಾಗಿದೆ. ಅಂಜಲಿಬದ್ಧರಾಗಿ ಅನುತ್ತರವಾದ ಪುಣ್ಯಕ್ಷೇತ್ರವಾಗಿದೆ.
ಯಾವಾಗ ಹೀಗೆ ಆರ್ಯ ಶಿಷ್ಯನು ಸಂಘವನ್ನು ಅನುಸ್ಮೃರಣೆ ಮಾಡುವನೊ ಆಗ ಆತನ ಮನಸ್ಸು ರಾಗಯುತವಾಗಿರುವುದಿಲ್ಲ, ದ್ವೇಷಯುತವಾಗಿರುವುದಿಲ್ಲ ಹಾಗೂ ಮೋಹಯುತವಾಗಿರುವುದಿಲ್ಲ, ಆ ಸಮಯದಲ್ಲಿ ಅವರ ಮನಸ್ಸು ಸಂಘಾನುಸ್ಸತಿಯಲ್ಲಿಯೇ ಅವಿಚಲವಾಗಿರುತ್ತದೆ, ಹೀಗೆ ಅವಿಚಲ ಚಿತ್ತವು ಅರ್ಥಸಹಿತ, ಧಮ್ಮಸಹಿತ  ಆನಂದವಾಗಿರುತ್ತದೆ, ಹೀಗೆ ಧಮ್ಮುಪಸಂಹಿತವಾದ ಚಿತ್ತವು ಪ್ರಮೋದವನ್ನು ತಾಳುತ್ತದೆ, ಪ್ರಮೋದದಿಂದಾಗಿ ಪೀತಿ(ಆನಂದ)ವು ಉಂಟಾಗುತ್ತದೆ, ಆನಂದದಿಂದ ಕಾಯವು ಪ್ರಸನ್ನವಾಗುತ್ತದೆ, ಪ್ರಸನ್ನ ಕಾಯದಿಂದ ಸುಖವು ಉಂಟಾಗುವುದು, ಸುಖಯುತ ಚಿತ್ತದಿಂದ ಸಮಾಧಿಯುಂಟಾಗುವುದು.. ಹೀಗೆ ನೆಲೆಸುವ ಆರ್ಯಶ್ರಾವಕನು ಅವ್ಯವಸ್ಥಿತೆಯ ಜನರ ಮಧ್ಯೆ ಸಮತೋಲನವಾಗಿರುತ್ತಾನೆ, ಕ್ಷೊಭೆಯುಳ್ಳ ಜನರ ಮಧ್ಯೆ ಅಕ್ಷೊಭನಾಗಿರುತ್ತಾನೆ. ಅವರು ಧಮ್ಮದ ಶ್ರೋತದಲ್ಲಿ ಪ್ರವೇಶಿಸುತ್ತಾರೆ, ಮತ್ತು ಧಮ್ಮದ ಅನುಸ್ಸತಿಯಲ್ಲಿ ಅಭಿವೃದ್ಧಿ ಹೊಂದುತ್ತಾರೆ.
ಅಲ್ಲದೆ ನೀವು ಶೀಲಾನುನುಸ್ಸತಿಯಲ್ಲಿ ತೊಡಗಬೇಕು ಹೇಗೆಂದರೆ ?:
ನಾನು ಶೀಲಗಳನ್ನು ಅಭಂಗವಾಗಿ ಪಾಲಿಸಿದ್ದೇನೆ
ನಾನು ಶೀಲಗಳನ್ನು ಅಛಿದ್ರವಾಗಿ ಪಾಲಿಸಿದ್ದೇನೆ
ನಾನು ಶೀಲಗಳನ್ನು ಕಲೆರಹಿತವಾಗಿ ಪಾಲಿಸಿದ್ದೇನೆ
ನಾನು ಶೀಲಗಳನ್ನು ಅಮಲಿನವಾಗಿ ಪಾಲಿಸಿದ್ದೇನೆ
ನಾನು ಶೀಲಗಳನ್ನು ಅಖಂಡವಾಗಿ ಪಾಲಿಸಿದ್ದೇನೆ 
ನಾನು ಸೀಲಗಳನ್ನು ಸ್ವತಂತ್ರಗಳಿಸುವ ರೀತಿಯಲ್ಲಿ ಪಾಲಿಸಿದ್ದೆನೆ,
ನಾನು ಶೀಲಗಳನ್ನು ಜ್ಞಾನಿಗಳೂ ಸಹಾ ಪ್ರಶಂಶಿಸುವ ರೀತಿಯಲಿ ಪಾಲಿಸಿದ್ದೇನೆ,
ನಾನು  ಶೀಲಗಳನ್ನು ಸಮಾಧಿಯು ಗಳಿಸುವ ರೀತಿಯಲ್ಲಿ ಪಾಲಿಸಿದ್ದೇನೆ. ಎಂದು ಆನಂದಿಸುತ್ತಾನೆ.
ಯಾವಾಗ ಹೀಗೆ ಆರ್ಯ ಶಿಷ್ಯನು ಶೀಲವನ್ನು ಅನುಸ್ಮೃರಣೆ ಮಾಡುವನೊ ಆಗ ಆತನ ಮನಸ್ಸು ರಾಗಯುತವಾಗಿರುವುದಿಲ್ಲ, ದ್ವೇಷಯುತವಾಗಿರುವುದಿಲ್ಲ ಹಾಗೂ ಮೋಹಯುತವಾಗಿರುವುದಿಲ್ಲ, ಆ ಸಮಯದಲ್ಲಿ ಅವರ ಮನಸ್ಸು  ಶೀಲಾನುಸ್ಸತಿಯಲ್ಲಿಯೇ ಅವಿಚಲವಾಗಿರುತ್ತದೆ, ಹೀಗೆ ಅವಿಚಲ ಚಿತ್ತವು ಅರ್ಥಸಹಿತ, ಧಮ್ಮಸಹಿತ  ಆನಂದವಾಗಿರುತ್ತದೆ, ಹೀಗೆ ಧಮ್ಮುಪಸಂಹಿತವಾದ ಚಿತ್ತವು ಪ್ರಮೋದವನ್ನು ತಾಳುತ್ತದೆ, ಪ್ರಮೋದದಿಂದಾಗಿ ಪೀತಿ(ಆನಂದ)ವು ಉಂಟಾಗುತ್ತದೆ, ಆನಂದದಿಂದ ಕಾಯವು ಪ್ರಸನ್ನವಾಗುತ್ತದೆ, ಪ್ರಸನ್ನ ಕಾಯದಿಂದ ಸುಖವು ಉಂಟಾಗುವುದು, ಸುಖಯುತ ಚಿತ್ತದಿಂದ ಸಮಾಧಿಯುಂಟಾಗುವುದು.. ಹೀಗೆ ನೆಲೆಸುವ ಆರ್ಯಶ್ರಾವಕನು ಅವ್ಯವಸ್ಥಿತೆಯ ಜನರ ಮಧ್ಯೆ ಸಮತೋಲನವಾಗಿರುತ್ತಾನೆ, ಕ್ಷೊಭೆಯುಳ್ಳ ಜನರ ಮಧ್ಯೆ ಅಕ್ಷೊಭನಾಗಿರುತ್ತಾನೆ. ಅವರು ಧಮ್ಮದ ಶ್ರೋತದಲ್ಲಿ ಪ್ರವೇಶಿಸುತ್ತಾರೆ, ಮತ್ತು ಧಮ್ಮದ ಅನುಸ್ಸತಿಯಲ್ಲಿ ಅಭಿವೃದ್ಧಿ ಹೊಂದುತ್ತಾರೆ.
ಅಲ್ಲದೆ ನೀವು ಚಾಗಾ(ತ್ಯಾಗಾ)ನುನುಸ್ಸತಿಯಲ್ಲಿ ತೊಡಗಬೇಕು ಹೇಗೆಂದರೆ:
ನಾನು ಅತ್ಯಂತ ಲಾಭವಂತ, ಭಾಗ್ಯಶಾಲಿ, ಪುಣ್ಯವಂತನಾಗಿದ್ದೇನೆ, ಏಕೆಂದರೆ ಸ್ವಾರ್ಥಮಲ ಹೊಂದಿರುವ ಜನರ ನಡುವೆ ನಿಃಸ್ವಾರ್ಥತತೆಯಿಂದ ಸ್ವತಂತ್ರವಾಗಿ, ದಾನಿಯಾಗಿ, ತೆರೆದಹಸ್ತವುಳ್ಳವವಾಗಿ, ತ್ಯಾಗದಲ್ಲಿ ಪ್ರೀತಿಸುವವನಾಗಿ, ದಾನಶೀಲತೆಯಲ್ಲಿ ಬದ್ಧನಾಗಿ, ನೀಡುವುದರಲ್ಲಿ , ಹಂಚುವುದರಲ್ಲ್ಲಿ ಆನಂದಿಸುವವನಾಗಿದ್ದೇನೆ
ಯಾವಾಗ ಹೀಗೆ ಆರ್ಯ ಶಿಷ್ಯನು ತ್ಯಾಗವನ್ನು ಅನುಸ್ಮೃರಣೆ ಮಾಡುವನೊ ಆಗ ಆತನ ಮನಸ್ಸು ರಾಗಯುತವಾಗಿರುವುದಿಲ್ಲ, ದ್ವೇಷಯುತವಾಗಿರುವುದಿಲ್ಲ ಹಾಗೂ ಮೋಹಯುತವಾಗಿರುವುದಿಲ್ಲ, ಆ ಸಮಯದಲ್ಲಿ ಅವರ ಮನಸ್ಸು  ತ್ಯಾಗಾನುಸ್ಸತಿಯಲ್ಲಿಯೇ ಅವಿಚಲವಾಗಿರುತ್ತದೆ, ಹೀಗೆ ಅವಿಚಲ ಚಿತ್ತವು ಅರ್ಥಸಹಿತ, ಧಮ್ಮಸಹಿತ  ಆನಂದವಾಗಿರುತ್ತದೆ, ಹೀಗೆ ಧಮ್ಮುಪಸಂಹಿತವಾದ ಚಿತ್ತವು ಪ್ರಮೋದವನ್ನು ತಾಳುತ್ತದೆ, ಪ್ರಮೋದದಿಂದಾಗಿ ಪೀತಿ(ಆನಂದ)ವು ಉಂಟಾಗುತ್ತದೆ, ಆನಂದದಿಂದ ಕಾಯವು ಪ್ರಸನ್ನವಾಗುತ್ತದೆ, ಪ್ರಸನ್ನ ಕಾಯದಿಂದ ಸುಖವು ಉಂಟಾಗುವುದು, ಸುಖಯುತ ಚಿತ್ತದಿಂದ ಸಮಾಧಿಯುಂಟಾಗುವುದು.. ಹೀಗೆ ನೆಲೆಸುವ ಆರ್ಯಶ್ರಾವಕನು ಅವವ್ಯಸ್ಥಿತೆಯ ಜನರ ಮಧ್ಯೆ ಸಮತೋಲನವಾಗಿರುತ್ತಾನೆ, ಕ್ಷೊಭೆಯುಳ್ಳ ಜನರ ಮಧ್ಯೆ ಅಕ್ಷೊಭನಾಗಿರುತ್ತಾನೆ. ಅವರು ಧಮ್ಮದ ಶ್ರೋತದಲ್ಲಿ ಪ್ರವೇಶಿಸುತ್ತಾರೆ, ಮತ್ತು ಧಮ್ಮದ ಅನುಸ್ಸತಿಯಲ್ಲಿ ಅಭಿವೃದ್ಧಿ ಹೊಂದುತ್ತಾರೆ.
 ಅಲ್ಲದೆ ನೀವು ದೇವತಾನುನುಸ್ಸತಿಯಲ್ಲಿ ತೊಡಗಬೇಕು. ಹೇಗೆಂದರೆ?  :ಚತುರ್ ಮಹಾರಾಜಿಕ ದೇವತೆಗಳಿದ್ದಾರೆ, ತಾವತಿಂಸ ದೇವತೆಗಳಿದ್ದಾರೆ, ತುಸಿತಾ ದೇವತೆಗಳಿದ್ದಾರೆ, ನಿಮರ್ಾಣರತಿ ದೇವತೆಗಳಿದ್ದಾರೆ, ಪರನಿಮರ್ಾಣರತಿ ದೇವತೆಗಳಿದ್ದಾರೆ, ಬ್ರಹ್ಮ ದೇವತೆಗಳಿದ್ದಾರೆ ಮತ್ತು ಬೇರೆಯ ಉನ್ನತ ರೀತಿಯ ದೇವತೆಗಳಿದ್ದಾರೆ. ಯಾವಾಗ ಈ ದೇವತೆಗಳು ಇಲ್ಲಿಂದ ಚ್ಯುತಿ ಹೊಂದುವವು ಆಗ ಅವು ಇಲ್ಲಿಂದ ಬೇರೆಡೆ ದೇವ ಪುನರ್ಜನ್ಮ ತಾಳುವವು, ಇವರೆಲ್ಲರ ಬಳಿ ಶ್ರದ್ಧೆ, ದಾನ, ಶೀಲ, ಧ್ಯಾನ, ಕಲಿಯುವಿಕೆ, ಪ್ರಜ್ಞಾ ಗುಣವು ಇದ್ದು ಈಗ ಅವುಗಳ ಫಲದಿಂದ ದೇವತೆಗಳಾಗಿದ್ದಾರೆ. ನನ್ನಲ್ಲೂ ಸಹಾ ಆ ಗುಣಗಳಿವೆ. ನಾನು ಆ ಗುಣಗಳನ್ನು ವೃದ್ಧಿಸುವೆ.
ಯಾವಾಗ ಹೀಗೆ ಆರ್ಯ ಶಿಷ್ಯನು ದೇವತಾನುಸತಿಯನ್ನು ಅನುಸ್ಮೃರಣೆ ಮಾಡುವನೊ ಆಗ ಆತನ ಮನಸ್ಸು ರಾಗಯುತವಾಗಿರುವುದಿಲ್ಲ, ದ್ವೇಷಯುತವಾಗಿರುವುದಿಲ್ಲ ಹಾಗೂ ಮೋಹಯುತವಾಗಿರುವುದಿಲ್ಲ, ಆ ಸಮಯದಲ್ಲಿ ಅವರ ಮನಸ್ಸು  ದೇವತಾನುಸ್ಸತಿಯಲ್ಲಿಯೇ ಅವಿಚಲವಾಗಿರುತ್ತದೆ, ಹೀಗೆ ಅವಿಚಲ ಚಿತ್ತವು ಅರ್ಥಸಹಿತ, ಧಮ್ಮಸಹಿತ  ಆನಂದವಾಗಿರುತ್ತದೆ, ಹೀಗೆ ಧಮ್ಮುಪಸಂಹಿತವಾದ ಚಿತ್ತವು ಪ್ರಮೋದವನ್ನು ತಾಳುತ್ತದೆ, ಪ್ರಮೋದದಿಂದಾಗಿ ಪೀತಿ(ಆನಂದ)ವು ಉಂಟಾಗುತ್ತದೆ, ಆನಂದದಿಂದ ಕಾಯವು ಪ್ರಸನ್ನವಾಗುತ್ತದೆ, ಪ್ರಸನ್ನ ಕಾಯದಿಂದ ಸುಖವು ಉಂಟಾಗುವುದು, ಸುಖಯುತ ಚಿತ್ತದಿಂದ ಸಮಾಧಿಯುಂಟಾಗುವುದು..
ಹೀಗೆ ನೆಲೆಸುವ ಆರ್ಯಶ್ರಾವಕನು ಅವ್ಯವಸ್ಥಿತೆಯ ಜನರ ಮಧ್ಯೆ ಸಮತೋಲನವಾಗಿರುತ್ತಾನೆ, ಕ್ಷೊಭೆಯುಳ್ಳ ಜನರ ಮಧ್ಯೆ ಅಕ್ಷೊಭನಾಗಿರುತ್ತಾನೆ. ಅವರು ಧಮ್ಮದ ಶ್ರೋತದಲ್ಲಿ ಪ್ರವೇಶಿಸುತ್ತಾರೆ, ಮತ್ತು ಧಮ್ಮದ ಅನುಸ್ಸತಿಯಲ್ಲಿ ಅಭಿವೃದ್ಧಿ ಹೊಂದುತ್ತಾರೆ.

                                                         ಇಲ್ಲಿಗೆ ಪ್ರಥಮ ಮಹಾನಾಮ ಮುಗಿಯಿತು 

velama sutta in kannada ವೇಲಾಮ ಸುತ್ತ

                                          2. ವೇಲಾಮ ಸುತ್ತ


ಆ ಸಮಯದಲ್ಲಿ ಭಗವಾನರು ಶ್ರಾವಸ್ಥಿಯ ಜೇತವನದ ಆನಾಥಪಿಂಡಿಕನ ವಿಹಾರದಲ್ಲಿ ನೆಲೆಸಿದ್ದರು. ಆಗ ಮಹಾಉಪಾಸಕ ಅನಾಥಪಿಂಡಿಕರು ಭಗವಾನರ ಬಳಿಗೆ ಬಂದರು, ಶ್ರದ್ಧಾಪೂರ್ವಕವಾಗಿ ವಂದಿಸಿದರು, ನಂತರ ಒಂದೆಡೆ ಕುಳಿತರು. ಆಗ ಭಗವಾನರು ಆತನಿಗೆ ಹೀಗೆ ಕೇಳಿದರು:
   ಗೃಹಪತಿಯೇ, ನಿಮ್ಮ ಕುಲವು ಈಗಲೂ ದಾನಗಳನ್ನು ನೀಡುತ್ತಿದೆಯೇ?
  ನೀಡುತ್ತಿದೆ ಭಗವಾನ್, ಅದರೆ ಕೇವಲ ಒರಟಾದ ಅಂಬಲಿ ಹಾಗೂ ಉಪ್ಪಿನಕಾಯಿಗಳನ್ನು ನೀಡುತ್ತಿದ್ದೇವೆ.
 ಗೃಹಪತಿಯೇ ದಾನಿಯು ನೀಡುವಂತಹ ಆಹಾರವು ಒರಟಾಗಿರಬಹುದು ಅಥವಾ ಶ್ರೇಷ್ಟವಾಗಿರುವುದೇ ಆಗಿರಬಹುದು, ಅದರೆ ಅವರು ಅಲಕ್ಷವಾಗಿ ನೀಡಿದರೆ, ಮನಸ್ಸಿಡದೇ ನೀಡಿದರೆ, ತಮ್ಮ ಕೈಯಾರೆ ನೀಡದಿದ್ದರೇ, ಉಳಿದಿದ್ದು ನೀಡಿದರೆ, ಕಮ್ಮವಿಪಾಕದ ಅರಿವಿಲ್ಲದೆ ನೀಡಿದರೆ, ಅಂತಹ ದಾನದ ಪರಿಣಾಮದಿಂದಾಗಿ ಸಿಗುವಂತಹ ಫಲಗಳಾದ ಉತ್ತಮ ಆಹಾರವಾಗಿರ ಬಹುದು, ಉತ್ತಮ ವಸ್ತ್ರಗಳಾಗಬಹುದು, ವಾಹನಗಳಾಗಿರಬಹುದು, ಅಥವಾ ಪಂಚವಿಧದ ಕಾಮಸುಖಗಳಾಗಿರಬಹುದು ಅವ್ಯಾವುದರಲ್ಲೂ ಆತನು ಆನಂದಿಸಲಾರನು ಆತನ ಮನಸ್ಸು ಅದರಲ್ಲಿ ಹರಿಯಲಾರದು, ಮತ್ತು ಆತನ ಪತ್ನಿಯಾಗಲಿ ಅಥವಾ ಪುತ್ರರಾಗಲಿ, ಅಥವಾ ಸೇವಕರಾಗಲಿ, ಗುಲಾಮನಾಗಲಿ, ಕೆಲಸಗಾರನಾಗಲಿ, ಯಾರು ಸಹಾ ಆತನ ಮಾತನ್ನು ಕೇಳಲಾರರು, ಅವರ್ಯಾರು ಸಹಾ ಅತನ ಮಾತುಗಳಿಗೆ ಗಮನವೂ ಸಹ ನೀಡುವುದಿಲ್ಲ ಹಾಗೇಯೆ ಅರ್ಥವನ್ನು ಮಾಡಿಕೊಳ್ಳಲು ಸಹಾ ಹೋಗುವುದಿಲ್ಲ. ಏಕೆ ಹೀಗೆ ? ಏಕೆಂದರೆ ಅವರು ದಾನವನ್ನು ನಿರ್ಲಕ್ಷವಾಗಿ ನೀಡಿದ್ದಾರೆ.
ಇಲ್ಲಿ ಹಲವರು ದಾನದಲ್ಲಿ ನೀಡುವಂತಹ ಆಹಾರವು ಒರಟಾಗಿಯೇ ಇರಲಿ ಅಥವಾ ಶ್ರೇಷ್ಟವಾಗಿಯೇ ಇರಲಿ ಅದರೆ ಅವರು ಜಾಗರೂಕವಾಗಿ ಶ್ರದ್ಧೆಯಿಂದ ನೀಡಿದರೆ, ಮನಸ್ಸಿಟ್ಟು ನೀಡಿದರೆ, ತಮ್ಮ ಕೈಯಾರೆ ನೀಡಿದ್ದರೇ, ಉಳಿದಿದ್ದು ನೀಡದಿದ್ದರೆ, ಕಮ್ಮವಿಪಾಕದ ಅರಿವಿದ್ದು ನೀಡಿದರೆ, ಅಂತಹ ದಾನದ ಪರಿಣಾಮದಿಂದಾಗಿ ಸಿಗುವಂತಹ ಫಲಗಳಾದ ಉತ್ತಮ ಆಹಾರ ವಾಗಿರಬಹುದು, ಉತ್ತಮ ವಸ್ತ್ರಗಳಾಗಬಹುದು, ವಾಹನಗಳಾಗಿರಬಹುದು, ಅಥವಾ ಪಂಚವಿಧದ ಕಾಮಸುಖಗಳಾಗಿರಬಹುದು ಆ ಎಲ್ಲದರಲ್ಲು ಆತನು ಆನಂದಿಸುವನು ಆತನ ಮನಸ್ಸು ಅದರಲ್ಲಿ ಬಾಗುವುದು ಮತ್ತು ಆತನ ಪತ್ನಿಯಾಗಲಿ ಅಥವಾ ಪುತ್ರರಾಗಲಿ, ಅಥವಾ ಸೇವಕರಾಗಲಿ, ಗುಲಾಮನಾಗಲಿ, ಕೆಲಸಗಾರನಾಗಲಿ, ಎಲ್ಲರೂ ಸಹಾ ಆತನ ಮಾತನ್ನು ಕೇಳುವರು. ಎಲ್ಲರೂ ಸಹಾ ಅತನ ಮಾತುಗಳಿಗೆ ಗಮನವೂ ನೀಡುತ್ತಾರೆ ಹಾಗೇಯೆ ಅರ್ಥವನ್ನು ಮಾಡಿಕೊಳ್ಳುತ್ತಾರೆ ಏಕೆ ಹೀಗೆ ? ಏಕೆಂದರೆ ಅವರು ದಾನವನ್ನು ಜಾಗರೂಕವಾಗಿ, ಶ್ರದ್ಧಾಪೂರ್ವಕವಾಗಿ ನೀಡಿದ್ದಾರೆ ಅದರ ಕಮ್ಮಫಲದಿಂದಾಗಿ ಹೀಗಾಗಿದೆ.
ಗೃಹಪತಿಯೇ ಒಂದು ಕಾಲದಲ್ಲಿ ವೇಲಾಮ ಎಂಬ ಹೆಸರಿನ ಬ್ರಾಹ್ಮಣನಿದ್ದನು, ಆತನು ಹೀಗೆ ದಾನವನ್ನು ಮಾಡುತ್ತಿದ್ದನು ಹೇಗೆಂದರೆ 84000 ಸಾವಿರ ಚಿನ್ನದ ಪಾತ್ರೆಗಳು ಬೆಳ್ಳಿಯಿಂದ ತುಂಬಿರುತ್ತಿದ್ದವು, 84000 ಸಾವಿರ ಬೆಳ್ಳಿಪಾತ್ರೆಗಳು ಚಿನ್ನದಿಂದ ತುಂಬಿರುತ್ತಿತ್ತು, 84000 ಕಂಚಿನ ಪಾತ್ರೆಗಳು ಚಿನ್ನದ ನಾಣ್ಯಗಳಿಂದ ತುಂಬಿರುತ್ತ್ತಿತ್ತು. 84000 ಆನೆಗಳು ಚಿನ್ನಾಭರಣಗಳಿಂದ, ಧ್ವಜಗಳಿಂದ ಕೂಡಿರುತ್ತಿತ್ತು, 84000 ರಥಗಳು ಸಿಂಹಗಳ, ಹುಲಿಗಳ, ಚಿರತೆಗಳ ಚರ್ಮಗಳಿಂದ ಮತ್ತು ನಯವಾದ ರತ್ನಕಂಬಳಿಗಳಿಂದ, ಚಿನ್ನವಸ್ತ್ರಗಳಿಂದ, ಚಿನ್ನದ ಧ್ವಜಗಳಿಂದ ಅಲಂಕೃತವಾಗಿರುತ್ತಿದ್ದವು, ಚಿನ್ನದ ಬಲೆಗಳಿಂದ ಕೂಡಿರುತ್ತಿದ್ದವು. ಹಾಗೇಯೆ  ಹಾಲನ್ನು ನೀಡುವಂತಹ 84000 ಹಸುಗಳಿಗೆ ರೇಷ್ಮೆಯ ಮೂಗುದಾರವು ಹಾಗೂ ಹತೋಟಿಯ ರೇಷ್ಮೆಯ ಹಗ್ಗವು ಇರುತ್ತಿತ್ತು, ಹಾಗೇಯೇ 84000 ಕನ್ಯೆಯರು ರತ್ನಾಭರಣಗಳಿಂದ ಅಭೂಷಿತರಾಗಿದ್ದರು, 84000 ಪಲ್ಲಕ್ಕಿಗಳು ರತ್ನಗಂಬಳಿಗಳಿಂದ, ಹೂವು ಇತ್ಯಾದಿಗಳಿಂದ ಜಿಂಕೆಯ ಚರ್ಮಗಳಿಂದ ಅಲಂಕೃತವಾಗಿ ಅವರಿಸಿದ್ದವು, ಅದರಲ್ಲಿ ಕೆಂಪು ದಿಂಬುಗಳು ಸಹಾ ಇದ್ದವು, ಹಾಗೆಯೇ 84000000000 ಗಳಷ್ಟು ಲಿನೀನ್ನ, ರೇಷ್ಮೇಯ, ಉಣ್ಣೆಯ, ಮತ್ತು ಹತ್ತಿಯ ಉಡುಗೆಗಳು ಸಹಾ ಇದ್ದವು. ಮತ್ತು ಇನ್ನು ಊಟ, ಪಾನಿಯ, ತಿಂಡಿ, ಆಹಾರಗಳು, ಭೋಜನಗಳು ಇತ್ಯಾದಿಗಳ ಬಗ್ಗೆ ಹೇಳಲೇ ಬೇಕಾಗಿಲ್ಲ, ಏಕೆಂದರೆ , ಅವೆಲ್ಲಾ ನದಿಯಂತೆ ಹರಿಯುತ್ತಿದ್ದವು.
ಗೃಹಪತಿಯೇ ನೀನು ಹೀಗೆ ಯೋಚಿಸಬಹುದು: ಖಂಡಿತವಾಗಿ ಈ ಬ್ರಾಹ್ಮಣ ಆ ಕಾಲದಲ್ಲಿ ಬೇರೆ ಯಾರೋ ಇದ್ದಿರಬಹುದು! ಎಂದು. ಅದರೆ ಹಾಗೇ ಭಾವಿಸದಿರಿ. ನಾನೇ ಆ ಕಾಲದಲ್ಲಿ ವೇಲಾಮ ಬ್ರಾಹ್ಮಣ ನಾಗಿದ್ದೇನು. ನಾನೇ ಆಗ ಆ ಮಟ್ಟದ ದಾನಗಳನ್ನು ಮಾಡಿದ್ದೆನು!, ಅದರೆ ಆ ಕಾಲದಲ್ಲಿ ಯಾರು ಸಹಾ ಅಂತಹ ದಾನ ಸ್ವೀಕಾರಕ್ಕೆ ಅರ್ಹರು ಇರಲಿಲ್ಲ. ಹೀಗಾಗಿ ಅಂತಹ ದಾನದಿಂದ ಯಾರು ಸಹಾ ಪರಿಶುದ್ಧರಾಗಲಿಲ್ಲ.
ಗೃಹಪತಿಯೇ ವೇಲಾಮ ಬ್ರಾಹ್ಮಣ ಮಹಾದಾನವನ್ನೇ ಮಾಡಿರ ಬಹುದು, ಅದರೆ ಒಬ್ಬ ದೃಷ್ಟಿಸಂಪನ್ನನಿಗೆ (ಸೋತಪನ್ನ) ಬೋಜನದಾನ ಮಾಡಿಸಿದರೆ ಅದು ಈ ಹಿಂದೆ ವೇಲಾಮ ಮಾಡಿದ ಅಷ್ಟು ಮಹಾದಾನಕ್ಕಿಂತಲೂ ಮಹತ್ಫಲವಾಗುತ್ತದೆ.
ಹಾಗೆಯೇ ಗೃಹಪತಿಯೇ ,  ಒಬ್ಬ ಸಕದಾಗಾಮಿ(ಜ್ಞಾನೋದಯದ 2ನೇಯ ಹಂತದವನಿ)ಗೆ ಭೋಜನದಾನ ಮಾಡಿಸಿದರೆ ಅದು ನೂರು  ದೃಷ್ಟಿಸಂಪನ್ನರಿಗೆ ಮಾಡಿದ ಮಹಾದಾನಕ್ಕಿಂತಲೂ ಮಹತ್ಫಲವಾಗುತ್ತದೆ.
ಹಾಗೆಯೇ ಗೃಹಪತಿಯೇ,  ಒಬ್ಬ ಅನಾಗಾಮಿ(ಜ್ಞಾನೋದಯದ 3ನೇಯ ಹಂತದವನಿ)ಗೆ ಭೋಜನದಾನ ಮಾಡಿಸಿದರೆ ಅದು ನೂರು  ಸಕದಾಗಾಮಿಯರಿಗೆ ಮಾಡಿದ ಮಹಾದಾನಕ್ಕಿಂತಲೂ ಮಹತ್ಫಲವಾಗುತ್ತದೆ.
ಹಾಗೆಯೇ ಗೃಹಪತಿಯೇ,  ಒಬ್ಬ ಅರಹಂತಗೆ(ಜ್ಞಾನೋದಯ ಪೂರ್ಣ)  ಭೋಜನದಾನ ಮಾಡಿಸಿದರೆ ಅದು ನೂರು ಅನಾಗಾಮಿಯರಿಗೆ ಮಾಡಿದ ಮಹಾದಾನಕ್ಕಿಂತಲೂ ಮಹತ್ಫಲವಾಗುತ್ತದೆ. 
ಹಾಗೆಯೇ ಗೃಹಪತಿಯೇ,  ಒಬ್ಬ ಪಚ್ಚೇಕಬುದ್ಧರಿಗೆ ಭೋಜನದಾನ ಮಾಡಿಸಿದರೆ ಅದು ನೂರು ಅರಹಂತರಿಗೆ ಮಾಡಿದ ಮಹಾದಾನಕ್ಕಿಂತಲೂ ಮಹತ್ಫಲವಾಗುತ್ತದೆ. 
ಹಾಗೆಯೇ ಗೃಹಪತಿಯೇ, ಒಬ್ಬ ತಥಾಗತರು, ಅರಹಂತರು ಹಾಗೂ ಸಮ್ಮಸಂಬುದ್ಧರು ಆಗಿರುವ ಅವರಿಗೆ ಭೋಜನದಾನ ಮಾಡಿದರೆ ಅದು ನೂರು ಪಚ್ಚೇಕಬುದ್ಧರಿಗೆ ಮಾಡಿದ ಮಹಾದಾನಕ್ಕಿಂತಲೂ ಮಹತ್ಫಲವಾಗುತ್ತದೆ.
ಹಾಗೆಯೇ ಗೃಹಪತಿಯೇ ಭಿಕ್ಖುಸಂಘಸಹಿತ ,ಒಬ್ಬ ತಥಾಗತರು, ಅರಹಂತರು ಹಾಗೂ ಸಮ್ಮಸಂಬುದ್ಧರು ಆಗಿರುವ ಅವರಿಗೆ ಬೋಜನದಾನ ಮಾಡಿದರೆ ಅದು ಒಬ್ಬ ತಥಾಗತರು, ಅರಹಂತರು ಹಾಗೂ ಸಮ್ಮಸಂಬುದ್ಧರು ಮಾಡಿದ ಮಹಾದಾನಕ್ಕಿಂತಲೂ ಮಹತ್ಫಲವಾಗುತ್ತದೆ.
ಹಾಗೇಯೇ ನಾಲ್ಕು ದಿಕ್ಕುಗಳಲ್ಲಿರುವ ಸಂಘಕ್ಕೇ ವಿಹಾರವನ್ನು(ವಾಸ ಸ್ಥಳ) ಕಟ್ಟಿಸುವುದು  ಭಿಕ್ಖುಸಂಘಸಹಿತ ಒಬ್ಬ ತಥಾಗತರು, ಅರಹಂತರು ಹಾಗೂ ಸಮ್ಮಸಂಬುದ್ಧರು ಆಗಿರುವ ಅವರಿಗೆ ಬೋಜನದಾನ ಮಾಡಿಸುವುದಕ್ಕಿಂತಲೂ ಮಹತ್ಫಲವಾಗಿರುತ್ತದೆ.
ಹಾಗೇಯೇ ಶ್ರದ್ಧಾಯುತ ಹೃದಯದಿಂದ ಬುದ್ಧರಿಗೆ, ಧಮ್ಮಕ್ಕೇ, ಮತ್ತು ಸಂಘಕ್ಕೇ ಶರಣು ಹೋಗುವುದು ನಾಲ್ಕು ದಿಕ್ಕುಗಳಲ್ಲಿರುವ ಸಂಘಕ್ಕೇ ವಿಹಾರವನ್ನು(ವಾಸ ಸ್ಥಳ) ಕಟ್ಟಿಸುವುದಕ್ಕಿಂತಲೂ ಹೆಚ್ಚು ಮಹತ್ಪಲವನ್ನು ನೀಡುತ್ತದೆ.
ಹಾಗೆಯೇ ಪಂಚಶೀಲಗಳಾದ (- ಜೀವಹತ್ಯೆ ಮಾಡದಿರುವುದು, ಕಳ್ಳತನ ಮಾಡದಿರುವುದು, ಅನೈತಿಕ ಕಾಮುಕತೆಯಲ್ಲಿ ತೊಡಗದಿರುವುದು, ಸುಳ್ಳು ಹೇಳದಿರುವುದು ಮತ್ತು ಮತ್ತನ್ನುಂಟುಮಾಡುವ ಮಾದಕ ದ್ರವ್ಯಗಳನ್ನು ಸೇವಿಸದಿರುವುದು -ಇವುಗಳ) ಪಾಲನೆಯು ಶ್ರದ್ಧಾಯುತ ಹೃದಯದಿಂದ ಬುದ್ಧರಿಗೆ, ಧಮ್ಮಕ್ಕೇ, ಮತ್ತು ಸಂಘಕ್ಕೇ ಶರಣು ಹೋಗುವುದಕ್ಕಿಂತಲೂ ಹೆಚ್ಚು ಮಹತ್ಪಲವನ್ನು ನೀಡುತ್ತದೆ.
ಹಾಗೇಯೇ ಹಸುವಿನಿಂದ ಹಾಲು ಕರೆಯುವ ಕಾಲದಷ್ಟು ಮೆತ್ತಾ (ಸರ್ವರ ಮೇಲಿನ ಪರಿಶುದ್ಧ ಪ್ರೀತಿ) ಧ್ಯಾನವು ಮಾಡಿದರೆ ಅದು ಪಂಚಶೀಲಗಳಾದ (ಜೀವಹತ್ಯೆ ಮಾಡದಿರುವುದು, ಕಳ್ಳತನ ಮಾಡದಿರುವುದು, ಅನೈತಿಕ ಕಾಮುಕತೆಯಲ್ಲಿ ತೋಡಗದಿರುವುದು, ಸುಳ್ಳು ಹೇಳದಿರುವುದು ಮತ್ತು ಮತ್ತನ್ನುಂಟುಮಾಡುವ ಮಾದಕ ದ್ರವ್ಯಗಳನ್ನು ಸೇವಿಸದಿರುವುದು -ಇವುಗಳ) ಪಾಲನೆಗಿಂತಲೂ ಹೆಚ್ಚು ಮಹತ್ಫಲವನ್ನು ನೀಡುತ್ತದೆ.   
ಹಾಗೇಯೇ ನಿಮಿಷಗಳ ಕಾಲದ ಅನಿತ್ಯತೆಯ ಸಂಜ್ಞೇಯ ಧ್ಯಾನವನ್ನು ಮಾಡಿದರೆ ಅದು  ಹಸುವಿನಿಂದ ಹಾಲು ಕರೆಯುವ ಕಾಲದಷ್ಟು ಮೆತ್ತಾ (ಸರ್ವರ ಮೇಲಿನ ಪರಿಶುದ್ಧ ಪ್ರೀತಿ) ಭಾವನ (ಧ್ಯಾನ)ವು ಮಾಡಿದುದಕ್ಕಿಂತಲೂ ಹೆಚ್ಚು ಮಹತ್ಫಲ ನೀಡುತ್ತದೆ .ಇದು ಇವೆಲ್ಲಕ್ಕೂ ಹೆಚ್ಚು ಮಹತ್ಫಲವಾಗಿದೆ .

                                             ಇಲ್ಲಿಗೆ ವೇಲಾಮ ಸುತ್ತವು ಮುಗಿಯಿತು 

kalama sutta in kannada ಕಾಲಾಮ ಸುತ್ತ

1. ಕೇಸಮುಟ್ಟಿ (ಕೇಸಪುತ್ತಿಯ/ಕಾಲಾಮ ಸುತ್ತ) (ವಿಚಾರಶೀಲತೆಯ ಸೂತ್ರ) ಸುತ್ತ


ನಾನು ಹೀಗೆ ಕೇಳಿರುವೆ. ಭಗವಾನರು ಒಮ್ಮೆ ಕೋಸಲ ರಾಜ್ಯದ ಕೇಸಪುತ್ತ ಜಿಲ್ಲೆಗೆ ಬೃಹತ್ ಸಮೂಹದೊಂದಿಗೆ ಬಂದರು. ಕೇಸಪುತ್ತರು ಕಾಲಾಮರಿಗೆ ಭಗವಾನರು ಅಲ್ಲಿಗೆ ಬಂದಿರುವುದು ತಿಳಿಯಿತು. ಕೇಸಪುತ್ತದ ಕಾಲಾಮರು ಹೀಗೆ ಭಗವಾನರ ಖ್ಯಾತಿ ಆಲಿಸಿದ್ದರು. ಏನೆಂದರೆ ಶಾಕ್ಯಪುತ್ರರಾದ ಸಮಣಗೋತಮರು ಕೇಸಪುತ್ತಕ್ಕೆ ಆಗಮಿಸಿದ್ದಾರೆ ಅವರ ಬಗ್ಗೆ ಈ ರೀತಿಯ ಖ್ಯಾತಿಯು ಹಬ್ಬಿದೆ:
ಭಗವಾನರು ಅರಹಂತರು, ಸಮ್ಮಾಸಂಬುದ್ಧರು, ವಿದ್ಯಾಚರಣೆಯ ಸಂಪನ್ನರು, ಸುಗತರು, ಲೋಕವಿದರು, ಅನುತ್ತರರು, ಪುರುಷಧಮ್ಮ ಸಾರಥಿಯು, ದೇವತೆಗಳಿಗೆ ಮತ್ತು ಮಾನವರಿಗೆ ಶಾಸ್ತರು, ಬುದ್ಧರು ಹಾಗೂ ಭಗವಾನರು ಆಗಿದ್ದಾರೆ. ಹೀಗಾಗಿ ಅಂತಹ ಅರಹಂತರನ್ನು ದಶರ್ಿಸುವುದು ಒಳ್ಳೆಯದು ಎಂದು ತಿಮರ್ಾನಿಸಿದರು.
ಹೀಗೆ ಕೇಸಪುತ್ತದ ಕಾಲಾಮರು ಭಗವಾನರಲ್ಲಿಗೆ ಬಂದು ವಂದಿಸಿ, ಕುಶಲಕ್ಷೇಮವನ್ನು ವಿಚಾರಿಸಿ, ಗೌರವಾರ್ಪಣೆ ಮಾಡಿ ಕುಳಿತರು....ಕೆಲವರು ನಿಶ್ಯಬ್ದವಾಗಿ ಕುಳಿತರು.... ಆಗ ಕಾಲಾಮರು ಭಗವಾನರಲ್ಲಿ ಹೀಗೆ ಪ್ರಶ್ನಿಸಿದರು:
ಭಂತೆ ಇಲ್ಲಿಗೆ ಕೆಲವು ಸಮಣ ಬ್ರಾಹ್ಮಣರು ಬರುತ್ತಾರೆ, ತಮ್ಮ ಸಿದ್ಧಾಂತವನ್ನು ವಿವರಿಸುತ್ತಾರೆ, ಬಣ್ಣಿಸುತ್ತಾರೆ. ಆದರೆ ಹಾಗೆಯೇ ಪರರ ಸಿದ್ಧಾಂತಗಳನ್ನು ಖಂಡಿಸುತ್ತಾರೆ, ನಿಂದಿಸುತ್ತಾರೆ, ನಿರಾಕರಿಸುತ್ತಾರೆ. ಅದೇರೀತಿಯಲ್ಲೇ ಬೇರೆ ಕೆಲವು ಸಮಣ ಬ್ರಾಹ್ಮಣರು ಸಹಾ ಬಂದು ಹಾಗೇ ಅದೇರೀತಿ ಮಾಡುತ್ತಾರೆ. ಹೀಗೆ ವಿಭಿನ್ನವಾದ ಸಿದ್ಧಾಂತಗಳಿಂದಾಗಿ ನಮ್ಮಲ್ಲಿ ಧ್ವಂದ್ವ ಉಂಟಾಗಿದೆ, ಸಂಶಯ ಉಂಟಾಗಿದೆ, ನಮಗೆ ಅವರಲ್ಲಿ ಸತ್ಯ ಹೇಳುತ್ತಿರುವವರು ಯಾರು? ಮಿಥ್ಯ ನುಡಿಯುತ್ತಿರುವವರು ಯಾರು? ತಿಳಿಯದಾಗಿದೆ. ಇದನ್ನು ನೀವೇ ನಮಗೆ ಪರಿಹರಿಸಬೇಕು ಭಂತೆ.
ಓ ಕಾಲಾಮರೇ, ನೀವು ಸಂಶಯಸ್ತ ವಿಷಯಗಳಲ್ಲಿಯೇ ಸಂಶಯ ಪಡುತ್ತಿರುವಿರಿ, ದ್ವ್ವಂದ್ವವುಳ್ಳ ವಿಷಯದಲ್ಲೇ ಧ್ವಂದ್ವಪಡುತ್ತಿರುವಿರಿ. ಸಂಶಯಸ್ತ ವಿಷಯಗಳಲ್ಲಿ ದ್ವಂದ್ವತೆ ಆಗುವುದು.
ಬನ್ನಿ ಕಾಲಾಮರೇ,
1. ಬಹಳಷ್ಟು ಕೇಳಿದ್ದೇವೇ ಎಂದು  ನಂಬದಿರಿ (ಅನುಸ್ಸವವೇನ) 
2. ಸಂಪ್ರದಾಯವೆಂದು (ಪರಂಪರಾ) ನಂಬದಿರಿ 
3. ವದಂತಿಗಳನ್ನು (ಇತಿಕಿರಾಯ) ನಂಬದಿರಿ,  
4. ಧರ್ಮಗ್ರಂಥಗಳಲ್ಲಿದೆ (ಪಿಟಿಕ ಸಂಪಾದನೇನ) ಎಂದು ನಂಬದಿರಿ, 
5. ತರ್ಕ ಸಮ್ಮತ (ತರ್ಕಹೇತು) ಎಂದಾಗಲಿ ನಂಬದಿರಿ, 
6. ಯೋಜನಬದ್ಧವಾಗಿದೆ (ನಯಹೇತು) ಎಂದು ನಂಬದಿರಿ,  
7. ತೋರಿಕೆಯ ತರ್ಕದಿಂದ (ಚೆನ್ನಾಗಿ ಕಾಣುತ್ತಿದೆ) ಸ್ವೀಕಾರಾರ್ಹವಾಗಿದೆ (ಆಕಾರಪರಿವಿತಕ್ಕೇನ) ಎಂದಾಗಲಿ ನಂಬದಿರಿ,
8. ಪಕ್ಷಪಾತ ಅಥವಾ ಪೂವರ್ಾಗ್ರಹ ಪೀಡಿತತೆಯಿಂದಾಗಿ ನಮ್ಮ ಚಿಂತನೆಯಂತಿದೆ ಎಂದು (ದಿಟ್ಠನಿಜ್ಝಾನಕ್ಖನ್ತಿಯಾ)  ನಂಬದಿರಿ, 
9. ಭವ್ಯ ನುರಿತ ತಜ್ಞರಿಂದ ಬಂದಿದೆ (ಭಬ್ಬರೂಪತಾಯ) ಎಂದಾಗಲಿ ನಂಬದಿರಿ, 
10. ಅಥವಾ ಇವರು ನಮ್ಮ ಗೌರವಾರ್ಹ ಸಮಣ ಗುರುವು ಅವರಿಂದ ಬಂದಿದೆ (ಸಮಣೊ ನೊ ಗರೂತಿ) ಎಂದಾಗಲಿ ನಂಬಬೇಡಿ. 
ಆದರೆ ಕಾಲಾಮರೇ, ಯಾವಾಗ ನೀವೇ ಚಿಂತನೆ ಮಾಡಿದಾಗ, ಇವು ಅಕುಶಲವಾದವು, ಇವು ನಿಂದನಾರ್ಹವಾದವು, ಇವು ಅನರ್ಥಕಾರಿ, ನಿಂದನೀಯ, ಜ್ಞಾನಿಗಳಿಂದ ನಿಷೇಧಿಸಲ್ಪಡುತ್ತದೆ ಎಂದು ಗೊತ್ತಾದಾಗ, ಇವುಗಳ ಪಾಲನೆಯಿಂದ ದುಃಖವಾಗುತ್ತದೆ ಎಂದು ಅರಿವಾದಾಗ ಅದನ್ನು ತಿರಸ್ಕರಿಸಿ.
ಈಗ ಕಾಲಾಮರೇ, ಇದರ ಬಗ್ಗೆ ಹೇಗೆ ಯೋಚಿಸುವಿರಿ,? ಒಬ್ಬನಲ್ಲಿ ಲೋಭ ಉಂಟಾದಾಗ ಅದು ಆತನಿಗೆ ಲಾಭಕ್ಷೇಮ ತರುತ್ತದೆಯೋ ಅಥವಾ ಹಾನಿಯನ್ನು ಉಂಟುಮಾಡುತ್ತದೆಯೋ?
ಅದು ಹಾನಿಯನ್ನು ತರುತ್ತದೆ ಭಗವಾನರೇ.
ಕಾಲಾಮರೇ, ಈಗ ಆತನು ಲೋಭಿಯಾದಾಗ, ಲೋಭದಿಂದ ಸೋತಿರುವಾಗ, ಲೋಭದ ಗೀಳನ್ನು ಹೊಂದಿರುವಾಗ,  ಆತನ ಚಿತ್ತವು ನಿಯಂತ್ರಣ ತಪ್ಪುತ್ತದೆ, ಆಗ ಆತನು ಜೀವಹತ್ಯೆ, ಕಳ್ಳತನ, ವ್ಯಭಿಚಾರ, ಸುಳ್ಳು ಹೇಳುವಿಕೆ ಮಾಡುತ್ತಾನೆ, ಹಾಗೆಯೇ ಪರರಿಗೂ ಅದೇ ರೀತಿ ಮಾಡಲು ಪ್ರೋತ್ಸಾಹ ನೀಡುತ್ತಾನೆ. ಅದರಿಂದಾಗಿ ಆತನಿಗೆ ಭವಿಷ್ಯದಲ್ಲಿ ದೀರ್ಘ ದುಃಖ ಮತ್ತು ಹಾನಿ ಉಂಟಾಗುತ್ತದೆ ಅಲ್ಲವೇ?
ಹೌದು ಭಂತೆ
ಕಾಲಾಮರೇ, ಈಗ ಆತನು ದ್ವೇಷಿಯಾದಾಗ, ದ್ವೇಷದಿಂದ ಸೋತಿರುವಾಗ, ದ್ವೇಷದ ಗೀಳನ್ನು ಹೊಂದಿರುವಾಗ,  ಆತನ ಚಿತ್ತವು ನಿಯಂತ್ರಣ ತಪ್ಪುತ್ತದೆ, ಆಗ ಆತನು ಜೀವಹತ್ಯೆ, ಕಳ್ಳತನ, ವ್ಯಭಿಚಾರ, ಸುಳ್ಳು ಹೇಳುವಿಕೆ ಮಾಡುತ್ತಾನೆ, ಹಾಗೆಯೇ ಪರರಿಗೂ ಅದೇರೀತಿ ಮಾಡಲು ಪ್ರೋತ್ಸಾಹ ನೀಡುತ್ತಾನೆ. ಅದರಿಂದಾಗಿ ಆತನಿಗೆ ಭವಿಷ್ಯದಲ್ಲಿ ದೀರ್ಘ ದುಃಖ ಮತ್ತು ಹಾನಿ ಉಂಟಾಗುತ್ತದೆ ಅಲ್ಲವೇ?
ಹೌದು ಭಂತೆ
ಕಾಲಾಮರೇ, ಈಗ ಆತನು ಮೋಹಿಯಾದಾಗ, ಮೋಹದಿಂದ ಸೋತಿರುವಾಗ, ಮೋಹದ ಗೀಳನ್ನು ಹೊಂದಿರುವಾಗ,  ಆತನ ಚಿತ್ತವು ನಿಯಂತ್ರಣ ತಪ್ಪುತ್ತದೆ, ಆಗ ಆತನು ಜೀವಹತ್ಯೆ, ಕಳ್ಳತನ, ವ್ಯಭಿಚಾರ, ಸುಳ್ಳು ಹೇಳುವಿಕೆ ಮಾಡುತ್ತಾನೆ, ಹಾಗೆಯೇ ಪರರಿಗೂ ಅದೇರೀತಿ ಮಾಡಲು ಪ್ರೋತ್ಸಾಹ ನೀಡುತ್ತಾನೆ. ಅದರಿಂದಾಗಿ ಆತನಿಗೆ ಭವಿಷ್ಯದಲ್ಲಿ ದೀರ್ಘ ದುಃಖ ಮತ್ತು ಹಾನಿ ಉಂಟಾಗುತ್ತದೆ ಅಲ್ಲವೇ?
ಹೌದು ಭಂತೆ
ಈಗ ಕಾಲಾಮರೇ, ಇದರ ಬಗ್ಗೆ ಹೇಗೆ ಯೋಚಿಸುವಿರಿ,? ಈ ವಿಷಯಗಳು ಕುಶಲವೋ ಅಥವಾ ಅಕುಶಲವೋ?
ಅಕುಶಲ ಭಂತೆ
ಇವು ನಿಂದನೀಯವೋ ಅಥವಾ ನಿಂದನಾತೀತವೋ?
ನಿಂದನೀಯವಾದುದು ಭಗವಾನ್.
ಇವು ಜ್ಞಾನಿಗಳಿಂದ ನಿಷೇಧಿಸಲ್ಪಡುವುದೋ ಅಥವಾ ಪ್ರಶಂಸನೀಯವೋ ?
ನಿಷೇಧಿಸಲ್ಪಡುವುದು ಭಗವಾನ್.
ಇವುಗಳನ್ನು ಸ್ವೀಕರಿಸಿ, ಪರಿಪಾಲಿಸಿದಾಗ ದೀರ್ಘಕಾಲ ಹಾನಿ, ದುಃಖ, ಉಂಟಾಗುತ್ತದೆ ಅಲ್ಲವೇ? ಇದನ್ನು ಹೇಗೆ ತೆಗೆದುಕೊಳ್ಳುವಿರಿ?
ಇವುಗಳನ್ನು ಸ್ವೀಕರಿಸಿ, ಪರಿಪಾಲಿಸಿದಾಗ ದೀರ್ಘಕಾಲ ಹಾನಿ, ದುಃಖ, ಉಂಟಾಗುತ್ತದೆ. ಇದನ್ನು ನಾವು ಹೀಗೆ ತೆಗೆದುಕೊಳ್ಳುವೆವು.
ಓ ಕಾಲಾಮರೇ, ಹೀಗಾಗಿ
ಬನ್ನಿ ಕಾಲಾಮರೇ,
1. ಬಹಳಷ್ಟು ಕೇಳಿದ್ದೇವೇ ಎಂದು  ನಂಬದಿರಿ (ಅನುಸ್ಸವವೇನ)
2. ಸಂಪ್ರದಾಯವೆಂದು (ಪರಂಪರಾ) ನಂಬದಿರಿ
3. ವದಂತಿಗಳನ್ನು (ಇತಿಕಿರಾಯ) ನಂಬದಿರಿ, 
4. ಧರ್ಮಗ್ರಂಥಗಳಲ್ಲಿದೆ (ಪಿಟಿಕ ಸಂಪಾದನೇನ) ಎಂದು ನಂಬದಿರಿ,
5. ತರ್ಕ ಸಮ್ಮತ (ತರ್ಕಹೇತು) ಎಂದಾಗಲಿ ನಂಬದಿರಿ,
6. ಯೋಜನಬದ್ಧವಾಗಿದೆ (ನಯಹೇತು) ಎಂದು ನಂಬದಿರಿ, 
7. ತೋರಿಕೆಯ ತರ್ಕದಿಂದ (ಚೆನ್ನಾಗಿ ಕಾಣುತ್ತಿದೆ) ಸ್ವೀಕಾರಾರ್ಹವಾಗಿದೆ (ಆಕಾರಪರಿವಿತಕ್ಕೇನ) ಎಂದಾಗಲಿ ನಂಬದಿರಿ,
8. ಪಕ್ಷಪಾತ ಅಥವಾ ಪೂವರ್ಾಗ್ರಹಪೀಡಿತತೆಯಿಂದಾಗಿ ನಮ್ಮ ಚಿಂತನೆಯಂತಿದೆ ಎಂದು (ದಿಟ್ಠನಿಜ್ಝಾನಕ್ಖನ್ತಿಯಾ)  ನಂಬದಿರಿ,
9. ಭವ್ಯನುರಿತ ತಜ್ಞರಿಂದ ಬಂದಿದೆ (ಭಬ್ಬರೂಪತಾಯ) ಎಂದಾಗಲಿ ನಂಬದಿರಿ,
10. ಅಥವಾ ಇವರು ನಮ್ಮ ಗೌರವಾರ್ಹ ಸಮಣ ಗುರುವು ಅವರಿಂದ ಬಂದಿದೆ (ಸಮಣೊ ನೊ ಗರೂತಿ) ಎಂದಾಗಲಿ ನಂಬಬೇಡಿ. 
ಆದರೆ ಕಾಲಾಮರೇ, ಯಾವಾಗ ನೀವೇ ಚಿಂತನೆ ಮಾಡಿದಾಗ, ಇವು ಅಕುಶಲವಾದವು, ಇವು ನಿಂದನಾರ್ಹವಾದವು ,ಇವು ಅನರ್ಥಕಾರಿ, ನಿಂದನೀಯ, ಜ್ಞಾನಿಗಳಿಂದ ನಿಷೇಧಿಸಲ್ಪಡುತ್ತದೆ ಎಂದು ಗೊತ್ತಾದಾಗ, ಇವುಗಳ ಪಾಲನೆಯಿಂದ ದುಃಖವಾಗುತ್ತದೆ ಎಂದು ಅರಿವಾದಾಗ ಅದನ್ನು ತಿರಸ್ಕರಿಸಿ ,ಅದಕ್ಕಾಗಿಯೇ ಹೀಗೆ ಹೇಳಿದ್ದೇನೆ.
ಬನ್ನಿ ಕಾಲಾಮರೇ,
1. ಬಹಳಷ್ಟು ಕೇಳಿದ್ದೇವೇ ಎಂದು  ನಂಬದಿರಿ (ಅನುಸ್ಸವವೇನ)
2. ಸಂಪ್ರದಾಯವೆಂದು (ಪರಂಪರಾ) ನಂಬದಿರಿ
3. ವದಂತಿಗಳನ್ನು (ಇತಿಕಿರಾಯ) ನಂಬದಿರಿ, 
4. ಧರ್ಮಗ್ರಂಥಗಳಲ್ಲಿದೆ (ಪಿಟಿಕ ಸಂಪಾದನೇನ) ಎಂದು ನಂಬದಿರಿ,
5. ತರ್ಕ ಸಮ್ಮತ (ತರ್ಕಹೇತು) ಎಂದಾಗಲಿ ನಂಬದಿರಿ,
6. ಯೋಜನಬದ್ಧವಾಗಿದೆ (ನಯಹೇತು) ಎಂದು ನಂಬದಿರಿ, 
7. ತೋರಿಕೆಯ ತರ್ಕದಿಂದ (ಚೆನ್ನಾಗಿ ಕಾಣುತ್ತಿದೆ) ಸ್ವೀಕಾರಾರ್ಹವಾಗಿದೆ (ಆಕಾರಪರಿವಿತಕ್ಕೇನ) ಎಂದಾಗಲಿ ನಂಬದಿರಿ,
8. ಪಕ್ಷಪಾತ ಅಥವಾ ಪೂವರ್ಾಗ್ರಹಪೀಡಿತತೆಯಿಂದಾಗಿ ನಮ್ಮ ಚಿಂತನೆಯಂತಿದೆ ಎಂದು (ದಿಟ್ಠನಿಜ್ಝಾನಕ್ಖನ್ತಿಯಾ)  ನಂಬದಿರಿ,
9. ಭವ್ಯನುರಿತ ತಜ್ಞರಿಂದ ಬಂದಿದೆ (ಭಬ್ಬರೂಪತಾಯ) ಎಂದಾಗಲಿ ನಂಬದಿರಿ,
10. ಅಥವಾ ಇವರು ನಮ್ಮ ಗೌರವಾರ್ಹ ಸಮಣ ಗುರುವು ಅವರಿಂದ ಬಂದಿದೆ (ಸಮಣೊ ನೊ ಗರೂತಿ) ಎಂದಾಗಲಿ ನಂಬಬೇಡಿ.
ಆದರೆ ಕಾಲಾಮರೇ, ಯಾವಾಗ ನೀವೇ ಚಿಂತನೆ ಮಾಡಿದಾಗ, ಇವು ಕುಶಲವಾದವು, ಇವು ನಿಂದಾತೀತವಾದವು ,ಇವು ಅರ್ಥಕಾರಿ, ನಿಂದತೀತವಾದವು ಜ್ಞಾನಿಗಳಿಂದ ಪ್ರಶಂಶಿಲ್ಪಡುತ್ತದೆ ಎಂದು ಗೊತ್ತಾದಾಗ, ಇವುಗಳ ಪಾಲನೆಯಿಂದ ಸುಖವಾಗುತ್ತದೆ ಮತ್ತು ಕ್ಷೇಮವಾಗುತ್ತದೆ ಎಂದು ಅರಿವಾದಾಗ ಅವನ್ನು ಸ್ವೀಕರಿಸಿರಿ, ಪಾಲಿಸಿರಿ, ಜೀವಿಸಿರಿ.
ಈಗ ಕಾಲಾಮರೇ, ಇದರ ಬಗ್ಗೆ ಹೇಗೆ ಯೋಚಿಸುವಿರಿ?,  ಅಲೋಭವು ವ್ಯಕ್ತಿಯಲ್ಲಿ ಉದಯಿಸಿದರೆ ಆತನಿಗೆ ಕ್ಷೇಮವಾಗುತ್ತದೋ ಅಥವಾ ಹಾನಿಯಾಗುತ್ತದೋ?
ಕ್ಷೇಮವಾಗುತ್ತದೆ ಭಂತೆ.
ಈಗ ಮನುಷ್ಯನು ಲೋಭಮುುಕ್ತನಾದಾಗ, ಲೋಭದಿಂದ ಸೋಲದಿದ್ದಾಗ, ಲೋಭದಿಂದ ಆವೃತವಾಗದೇ ಇದ್ದಾಗ, ಆತನು ಜೀವಹತ್ಯೆ ಮಾಡಲಾರನು, ಕಳ್ಳತನವಾಗಲಿ, ವ್ಯಭಿಚಾರವಾಗಲಿ ಮಾಡಲಾರನು ಸುಳ್ಳಾಗಲಿ ನುಡಿಯಲಾರನು,  ಹಾಗೆಯೇ ಪರರಿಗೂ ಇದನ್ನೇ ಪ್ರೋತ್ಸಾಹಿಸಿ ಆತನು ಅವರಿಗೆ ದಾರಿ ತಪ್ಪಿಸಲಾರನು. ಇದರಿಂದಾಗಿ  ಆತನಿಗೆ ಕ್ಷೇಮವು ಮತ್ತು ಸುಖವು ದೀರ್ಘಕಾಲ ಇರುತ್ತದೆಯಲ್ಲವೇ ?
ಹೌದು ಭಂತೆ.
ಈಗ ಕಾಲಾಮರೇ, ಇದರ ಬಗ್ಗೆ ಹೇಗೆ ಯೋಚಿಸುವಿರಿ,  ಅದ್ವೇಷವು ವ್ಯಕ್ತಿಯಲ್ಲಿ ಉದಯಿಸಿದರೆ ಆತನಿಗೆ ಕ್ಷೇಮವಾಗುತ್ತದೋ ಅಥವಾ ಹಾನಿಯಾಗುತ್ತದೋ?
ಕ್ಷೇಮವಾಗುತ್ತದೆ ಭಂತೆ.
ಈಗ ಮನುಷ್ಯನು ದ್ವೇಷಮುಕ್ತನಾದಾಗ,  ದ್ವೇಷದಿಂದ ಸೋಲದಿದ್ದಾಗ, ದ್ವೇಷದಿಂದ ಆವೃತವಾಗದೇ ಇದ್ದಾಗ, ಆತನು ಜೀವಹತ್ಯೆ ಮಾಡಲಾರನು, ಕಳ್ಳತನವಾಗಲಿ, ವ್ಯಭಿಚಾರವಾಗಲಿ ಮಾಡಲಾರನು ಸುಳ್ಳಾಗಲಿ ನುಡಿಯಲಾರನು,  ಹಾಗೆಯೇ ಪರರಿಗೂ ಪ್ರೋತ್ಸಾಹಿಸಿ ಆತನು ಅವರಿಗೆ ದಾರಿ ತಪ್ಪಿಸಲಾರನು. ಇದರಿಂದಾಗಿ ಆತನಿಗೆ ಕ್ಷೇಮವು ಮತ್ತು ಸುಖವು ದೀರ್ಘಕಾಲ ಇರುತ್ತದೆಯಲ್ಲವೇ ?
    ಹೌದು ಭಂತೆ.
ಈಗ ಕಾಲಾಮರೇ, ಇದರ ಬಗ್ಗೆ ಹೇಗೆ ಯೋಚಿಸುವಿರಿ,  ಅಮೋಹವು ವ್ಯಕ್ತಿಯಲ್ಲಿ ಉದಯಿಸಿದರೆ ಆತನಿಗೆ ಕ್ಷೇಮವಾಗುತ್ತದೋ ಅಥವಾ ಹಾನಿಯಾಗುತ್ತದೋ?
ಕ್ಷೇಮವಾಗುತ್ತದೆ ಭಂತೆ.
ಈಗ ಮನುಷ್ಯನು ಮೋಹಮುಕ್ತನಾದಾಗ,  ಮೋಹದಿಂದ ಸೋಲದಿದ್ದಾಗ, ಮೋಹದಿಂದ ಆವೃತವಾಗದೇ ಇದ್ದಾಗ, ಆತನು ಜೀವಹತ್ಯೆ ಮಾಡಲಾರನು, ಕಳ್ಳತನವಾಗಲಿ, ವ್ಯಭಿಚಾರವಾಗಲಿ ಮಾಡಲಾರನು ಸುಳ್ಳಾಗಲಿ ನುಡಿಯಲಾರನು,  ಹಾಗೆಯೇ ಪರರಿಗೂ ಪ್ರೋತ್ಸಾಹಿಸಿ ಆತನು ಅವರಿಗೆ ದಾರಿ ತಪ್ಪಿಸಲಾರನು. ಇದರಿಂದಾಗಿ ಆತನಿಗೆ ಕ್ಷೇಮವು ಮತ್ತು ಸುಖವು ದೀರ್ಘಕಾಲ ಇರುತ್ತದೆಯಲ್ಲವೇ ?
    ಹೌದು ಭಂತೆ.
ಈಗ ಕಾಲಾಮರೇ, ಇದರ ಬಗ್ಗೆ ಹೇಗೆ ಯೋಚಿಸುವಿರಿ, ಈ ವಿಷಯಗಳು ಕುಶಲವೋ ಅಥವಾ ಅಕುಶಲವೋ,?
ಕುಶಲ ಭಂತೆ
ಇವು ನಿಂದನೀಯವೋ ಅಥವಾ ನಿಂದನತೀತವೋ ?.
ನಿಂದನಾತೀತವಾದುದು ಭಗವಾನ್.
ಇವು ಜ್ಞಾನಿಗಳಿಂದ ನಿಷೇಧಿಸಲ್ಪಡುವುದೋ ಅಥವಾ ಪ್ರಶಂಸನೀಯವೋ ?
ಪ್ರಶಂಸಿಸಲ್ಪಡುವುದು ಭಗವಾನ್.
ಇವುಗಳನ್ನು ಸ್ವೀಕರಿಸಿ, ಪರಿಪಾಲಿಸಿದಾಗ ದೀರ್ಘಕಾಲ ಸುಖ, ಕ್ಷೇಮ ಉಂಟಾಗುತ್ತದೆ ಅಥವಾ ಅಲ್ಲವೇ ಇದನ್ನು ಹೇಗೆ ತೆಗೆದುಕೊಳ್ಳುವಿರಿ ?
ಇವುಗಳನ್ನು ಸ್ವೀಕರಿಸಿ, ಪರಿಪಾಲಿಸಿದಾಗ ದೀರ್ಘಕಾಲ ಸುಖ, ಕ್ಷೇಮ ಉಂಟಾಗುತ್ತದೆ. ಇದನ್ನು ನಾವು ಹೀಗೆ ತೆಗೆದುಕೊಳ್ಳುವೆವು.
ಬನ್ನಿ ಕಾಲಾಮರೇ,
1. ಬಹಳಷ್ಟು ಕೇಳಿದ್ದೇವೇ ಎಂದು  ನಂಬದಿರಿ (ಅನುಸ್ಸವವೇನ)
2. ಸಂಪ್ರದಾಯವೆಂದು (ಪರಂಪರಾ) ನಂಬದಿರಿ
3. ವದಂತಿಗಳನ್ನು (ಇತಿಕಿರಾಯ) ನಂಬದಿರಿ, 
4. ಧರ್ಮಗ್ರಂಥಗಳಲ್ಲಿದೆ (ಪಿಟಿಕ ಸಂಪಾದನೇನ) ಎಂದು ನಂಬದಿರಿ,
5. ತರ್ಕ ಸಮ್ಮತ (ತರ್ಕಹೇತು) ಎಂದಾಗಲಿ ನಂಬದಿರಿ,
6. ಯೋಜನಬದ್ಧವಾಗಿದೆ (ನಯಹೇತು) ಎಂದು ನಂಬದಿರಿ, 
7. ತೋರಿಕೆಯ ತರ್ಕದಿಂದ (ಚೆನ್ನಾಗಿ ಕಾಣುತ್ತಿದೆ) ಸ್ವೀಕಾರಾರ್ಹವಾಗಿದೆ (ಆಕಾರಪರಿವಿತಕ್ಕೇನ) ಎಂದಾಗಲಿ ನಂಬದಿರಿ,
8. ಪಕ್ಷಪಾತ ಅಥವಾ ಪೂವರ್ಾಗಹ್ರಪೀಡಿತತೆಯಿಂದಾಗಿ ನಮ್ಮ ಚಿಂತನೆಯಂತಿದೆ ಎಂದು (ದಿಟ್ಠನಿಜ್ಝಾನಕ್ಖನ್ತಿಯಾ)  ನಂಬದಿರಿ,
9. ಭವ್ಯನುರಿತ ತಜ್ಞರಿಂದ ಬಂದಿದೆ (ಭಬ್ಬರೂಪತಾಯ) ಎಂದಾಗಲಿ ನಂಬದಿರಿ,
10. ಅಥವಾ ಇವರು ನಮ್ಮ ಗೌರವಾರ್ಹ ಸಮಣ ಗುರುವು ಅವರಿಂದ ಬಂದಿದೆ (ಸಮಣೊ ನೊ ಗರೂತಿ) ಎಂದಾಗಲಿ ನಂಬಬೇಡಿ.
ಆದರೆ ಕಾಲಾಮರೇ, ಯಾವಾಗ ನೀವೇ ಚಿಂತನೆ ಮಾಡಿದಾಗ, ಇವು ಕುಶಲವಾದವು, ಇವು ನಿಂದನಾತೀತವಾದವು ,ಇವು ಅರ್ಥಕಾರಿ,  ಜ್ಞಾನಿಗಳಿಂದ ಪ್ರಶಂಶಿಸಲ್ಪಡುತ್ತದೆ ಎಂದು ಗೊತ್ತಾದಾಗ, ಇವುಗಳ ಸ್ವೀಕಾರ ಹಾಗು ಪಾಲನೆಯಿಂದ ದೀರ್ಘಕಾಲಸುಖವಾಗುತ್ತದೆ ಎಂದು ಅರಿವಾದಾಗ ಅದನ್ನು ಪುರಸ್ಕರಿಸಿ, ಪಾಲಿಸಿರಿ ಮತ್ತು ಜೀವಿಸಿರಿ ಅದಕ್ಕಾಗಿಯೇ ಹೀಗೆ ಹೇಳಲಾಗಿದೆ.
ಈಗ ಕಾಲಾಮರೇ, ಯಾವ ಆರ್ಯ ಶ್ರಾವಕನು ಹೀಗೆ ಲೋಭದಿಂದ, ದ್ವೇಷದಿಂದ ಮತ್ತು ಮೋಹದಿಂದ ಮುಕ್ತನಾದಾಗ ಆತನು ದಿಗ್ಭ್ರಮೆಪಡುವುದಿಲ್ಲ. ಸ್ಪಷ್ಟವಾಗಿ ಅರಿಯುವವನಾಗುತ್ತಾನೆ,  ಮತ್ತು ಸ್ಮೃತಿವಂತನಾಗುತ್ತಾನೆ ಮತ್ತು ಚಿತ್ತದಲ್ಲಿ ಮೈತ್ರಿಯಿಂದ ಕೂಡಿರುತ್ತಾನೆ, ಹೀಗೇ ಸ್ಥಾಪಿತವಾದ ಮೆತ್ತಾಯುತವಾದ ಚಿತ್ತದಿಂದ ಒಂದು ದಿಕ್ಕಿನತ್ತ ಮೆತ್ತವನ್ನು ಪ್ರಸರಿಸುತ್ತಾನೆ.......... ಕರುಣೆಯಿಂದ ಕೂಡಿರುತ್ತಾನೆ.......... ಮುದಿತಾದಿಂದ ಕೂಡಿರುತ್ತಾನೆ......... ಸಮಚಿತ್ತತೆಯಿಂದ ಕೂಡಿರುತ್ತಾನೆ. ಇದೇರೀತಿಯ ಭಾವನೆಯಿಂದ ಆತನು ಒಂದು ದಿಕ್ಕಿಗೆ ಹರಡುತ್ತಾನೆ. ಹಾಗೆಯೇ ಎರಡನೇಯ ದಿಕ್ಕಿಗೂ, ಮೂರನೆಯ ದಿಕ್ಕಿಗೂ, ನಾಲ್ಕನೇಯ ದಿಕ್ಕಿಗೂ, ಹೀಗೆಯೇ ಮೇಲೆ, ಕೆಳಗೆ, ಸುತ್ತಲೂ, ಎಲ್ಲಾ ದಿಕ್ಕುಗಳಿಗೂ ಸಮಚಿತ್ತತೆಯನ್ನು ಹರಡುತ್ತ ನೆಲೆಸುತ್ತಾನೆ. ಹೀಗೆ ಆತನು ವ್ಯಾಪಕವಾದ, ಉನ್ನತವಾದ, ಅಪರಿಮಿತವಾದ,  ದ್ವೇಷರಹಿತವಾದ, ಚಿತ್ತದಿಂದ ಕೂಡಿರುತ್ತಾನೆ.
ಕಾಲಾಮರೇ ಈ ರೀತಿಯಾಗಿ ಆರ್ಯಶ್ರಾವಕನು ಚಿತ್ತದಿಂದ, ದ್ವೇಷ, ವಿರೋಧ, ಚಿತ್ತಕ್ಲೇಶಗಳಿಂದ ಮುಕ್ತನಾಗಿ, ಪರಿಶುದ್ಧನಾಗುತ್ತಾನೆ. ಅಂತಹುದರಿಂದ ಈ ಜನ್ಮದಲ್ಲೇ ನಾಲ್ಕು ಸಮಾಧಾನವನ್ನು ಭರವಸೆಗಳನ್ನು ಕಾಣಬಹುದು.
1. ಮೊದಲ ಭರವಸೆ ಏನೆಂದರೆ, ಒಂದು ವೇಳೆ ಪರಲೋಕವಿದ್ದರೆ ಒಳ್ಳೆಯ ಹಾಗೂ ಕೆಟ್ಟ ಕರ್ಮಗಳಿಗೆ ಕರ್ಮಫಲವು ಸಿಗುವುದಿದ್ದರೆ  ನಮ್ಮ ಒಳ್ಳೆಯ ಕಾರ್ಯಗಳನ್ನು ಮಾಡಿರುವೆ, ನನಗೆ ಸಾವಿನ ನಂತರ ಸುಗತಿಯೇ ಸಿಗುವುದು.
2. ಎರಡನೆಯ ಭರವಸೆ ಏನೆಂದರ,ೆ ಪರಲೋಕವಿಲ್ಲದಿದ್ದರೆ, ಒಳ್ಳೆಯ ಹಾಗೂ ಕೆಟ್ಟ ಕರ್ಮಗಳಿಗೆ ಕರ್ಮಫಲ ಸಿಗದಿದ್ದರೆ, ಅದರೂ ಈ ಜನ್ಮದಲ್ಲೇ ದ್ವೇಷರಹಿತನಾಗಿ, ದುಃಖರಹಿತನಾಗಿ, ಕ್ಲೇಷರಹಿತನಾಗಿ ಸುಖಿಯಾಗಿ ಇರುತ್ತೇನೆ.
3. ಮೂರನೆಯ ಭರವಸೆ ಏನೆಂದರೆ, ಕರ್ಮಫಲ ಇರುವುದಾದರೆ, ಪಾಪಿಗೇ ಮಾತ್ರ ಕೆಡಕಾಗುತ್ತದೆ,  ನಾನು ಯಾವುದೇ ಕೆಟ್ಟ ಇಚ್ಚೆಗಳನ್ನು ಯಾರ ಮೇಲೆಯೂ ಹೊಂದಿಲ್ಲ,  ಹೀಗೆ ಯಾವ ಪಾಪವೂ ಮಾಡದ  ನನಗೆ ಹೇಗೆತಾನೆ  ದುಃಖವು ತಟ್ಟಿತು?.
4. ನಾಲ್ಕನೆಯ ಭರವಸೆ ಏನೆಂದರೆ, ಕೆಟ್ಟಕಮ್ಮ ಮಾಡುವವನಿಗೂ ಕರ್ಮಫಲ ಸಿಗುವುದಿಲ್ಲ ಎನ್ನುವುವಾದರೆ, ನನ್ನಿಂದ ಯಾವ ಪಾಪವು ನಡೆದಿಲ್ಲ, ಹೀಗೆ ಎರಡು ರೀತಿಯಲ್ಲಿಯೂ ಪರಿಶುದ್ಧನಾಗಿಯೇ ಇರುವೆನು.
ಹೀಗೆ ಕಾಲಾಮರೆ, ಆ ಆರ್ಯಶ್ರಾವಕನು ಚಿತ್ತಕ್ಲೇಷಗಳಿಂದ, ದ್ವೇಷದಿಂದ, ವಿಮುಕ್ತನಾಗಿ ನಿರ್ಮಲನಾಗಿ ಈ ಜೀವಿತದಲ್ಲೇ ಈ ನಾಲ್ಕು ಸಮಾಧಾನ ಪಡೆಯುತ್ತಾನೆ.
ಇದು ಹೀಗೆಯೇ ಭಗವಾನ್ ಇದು ಸರಿಯಾಗಿಯೇ ಇದೆ, ಸುಗತರೇ, ಆ ಆರ್ಯಶ್ರಾವಕನು ಚಿತ್ತಕ್ಲೇಷಗಳಿಂದ, ದ್ವೇಷದಿಂದ, ವಿಮುಕ್ತನಾಗಿ ನಿರ್ಮಲನಾಗಿ ಈ ಜೀವಿತದಲ್ಲೇ ಈ ನಾಲ್ಕು ಸಮಾಧಾನ ಪಡೆಯುತ್ತಾನೆ.
ಮೊದಲ ಭರವಸೆ ಏನೆಂದರೆ ಒಂದು ವೇಳೆ ಪರಲೋಕವಿದ್ದರೆ ಒಳ್ಳೆಯ ಹಾಗೂ ಕೆಟ್ಟ ಕರ್ಮಗಳಿಗೆ ಕರ್ಮಫಲವು ಸಿಗುವುದಿದ್ದರೆ  ನಾನು ಒಳ್ಳೆಯ ಕಾರ್ಯಗಳನ್ನು ಮಾಡಿರುವೆ, ನನಗೆ ಸಾವಿನ ನಂತರ ಸುಗತಿಯೇ ಸಿಗುವುದು.............. ನಾಲ್ಕನೆಯ ಭರವಸೆ ಏನೆಂದರೆ ಕೆಟ್ಟಕಮ್ಮ ಮಾಡುವವನಿಗೂ ಕರ್ಮಫಲ ಸಿಗುವುದಿಲ್ಲ ಎಂದರೂ ನನ್ನಿಂದ ಯಾವ ಪಾಪವು ನಡೆದಿಲ್ಲ, ಹೀಗೆ ಎರಡು ರೀತಿಯಲ್ಲಿಯೂ ಪರಿಶುದ್ಧನಾಗಿಯೇ ಇರುವೆನು. ಇದು ಹೀಗೆಯೇ ಭಗವಾನ್ ಇದು ಸರಿಯಾಗಿಯೇ ಇದೆ, ಸುಗತರೇ, ಆ ಆರ್ಯಶ್ರಾವಕನು ಚಿತ್ತಕ್ಲೇಷಗಳಿಂದ, ದ್ವೇಷದಿಂದ, ವಿಮುಕ್ತನಾಗಿ ನಿರ್ಮಲನಾಗಿ ಈ ಜೀವಿತದಲ್ಲೇ ಈ ನಾಲ್ಕು ಸಮಾಧಾನ ಪಡೆಯುತ್ತಾನೆ.
ಅದ್ಭುತ ಭಂತೆ! ......... ನಾವು ಭಗವಾನರಿಗೆ ಶರಣು ಹೋಗುವೆವು, ಧಮ್ಮಕ್ಕೂ ಶರಣು ಹೋಗುವೆವು, ಸಂಘಕ್ಕೂ ಶರಣು ಹೋಗುವೆವು. ನಮ್ಮನ್ನು ಭಗವಾನರು ಇಂದಿನಿಂದ ಜೀವನ ಪರ್ಯಂತ ಉಪಾಸಕರೆಂದು ಪರಿಗಣಿಸಲಿ.
                                                              - ಂ0ಂ