Tuesday 24 March 2020

ಅಸ್ಸಲಾಯನ ಸುತ್ತ Assalayana sutta in kannada

  ಅಸ್ಸಲಾಯನ ಸುತ್ತ(ಸಂಕ್ಷಿಪ್ತ)



ಒಮ್ಮೆ ಬ್ರಾಹ್ಮಣರು ಅಸ್ಸಲಾಯನ ಎಂಬ ಬ್ರಾಹ್ಮಣ ಯುವಕನ ನಾಯಕತ್ವದಲ್ಲಿ ಬಂದು ಹೀಗೆ ಕೇಳಿದರು:

“ಭಗವಾನ್ ಬ್ರಾಹ್ಮಣರು ಹೀಗೆ ಹೇಳುತ್ತಾರೆ: ‘ಬ್ರಾಹ್ಮಣರದ್ದೇ ಶ್ರೇಷ್ಠ ಜಾತಿ, ಬೇರೆ ಜಾತಿಗಳು ತುಚ್ಛವಾದುದು. ಬ್ರಾಹ್ಮಣರದ್ದೇ ಸುವರ್ಣದ ಜಾತಿ, ಪರರದ್ದು ದುರ್ವಣವಾಗಿದ್ದು, ಬ್ರಾಹ್ಮಣರು ಮಾತ್ರ ಪರಿಶುದ್ಧರು, ಬೇರೆಯವರಲ್ಲ, ಬ್ರಾಹ್ಮಣರು ಮಾತ್ರ ಬ್ರಹ್ಮನಿಂದ ಹುಟ್ಟಿದವರು. ಆತನ ಮುಖದಿಂದ ಜನಿಸಿದವರು, ಬ್ರಹ್ಮನ ವಂಶಸ್ಥರು ಆಗಿದ್ದಾರೆ.”

ಆಗ ಭಗವಾನರು ಈ ಎಲ್ಲಾ ಕಾರಣಗಳನ್ನು ನೀಡಿ ಅವರ ವಾದಗಳನ್ನು ಭಂಗ ಮಾಡುತ್ತಾರೆ.

1. ಬ್ರಾಹ್ಮಣರ ಪತ್ನಿಯರು ಸಹಾ ಎಲ್ಲರಂತೆಯೇ ಜನ್ಮ ನೀಡುತ್ತಾರೆ.

2. ಪಾಶ್ಚಿಮಾತ್ಯ ರಾಷ್ಟ್ರಗಳಾದ ಯೋನ ಮತ್ತು ಕಾಂಬೋಜಗಳಲ್ಲಿ 2 ಜಾತಿಯಿದೆ. ಯಜಮಾನ ಮತ್ತು ಸೇವಕ ಅವರಲ್ಲಿಯು ಅದು ನಿತ್ಯವಲ್ಲ, ಸ್ವಾಮಿಯು ಸೇವಕನಾಗಬಹುದು, ಸೇವಕನು ಸ್ವಾಮಿಯಾಗಬಹುದು.

3. ಯಾರೇ ಪಾಪ ಮಾಡಿದರೂ ಸಹಾ ದುರ್ಗತಿಗೆ ಬೀಳುವರು, ಇದಕ್ಕೆ ಯಾರೂ ಹೊರತಲ್ಲ.

4. ಪ್ರತಿಯೊಬ್ಬರು ಪುಣ್ಯ ಆಚರಿಸಬಹುದು, ಮೈತ್ರಿ ಧ್ಯಾನಗಳಲ್ಲಿ ಪ್ರವೀಣರಾಗಬಹುದು.

5. ಪ್ರತಿಯೊಬ್ಬರು ಸ್ನಾನ ಮಾಡಿ ಶುದ್ಧರಾಗಬಹುದು.

6. ಪ್ರತಿಯೊಬ್ಬರು ಹಚ್ಚಿದರೂ ಬೆಂಕಿ ಬರುವುದು, ಅದರಿಂದ ಅದರ ಪ್ರಯೋಜನ ಪಡೆಯಬಹುದು.

“ಹೀಗಿರುವಾಗ ಬ್ರಾಹ್ಮಣರೇ ಶ್ರೇಷ್ಠರೆನ್ನುವುದಕ್ಕೆ ಆಧಾರವೇನು?” ಆದರೂ ಸಹಾ ಅವರು ಪಟ್ಟು ಹಿಡಿಯುತ್ತಾರೆ.

ಆಗ ಭಗವಾನರು ಅವರನ್ನು ಬೇರೊಂದು ಹಾದಿಯಲ್ಲಿ ಚರ್ಚೆಗೆ ಆರಂಭಿಸುತ್ತಾರೆ: “ಅಸ್ಸಾಲಾಯನ ಇದರ ಬಗ್ಗೆ ಹೇಗೆ ಯೋಚಿಸುವೆ? ಇಬ್ಬರು ಬ್ರಾಹ್ಮಣ ಯುವಕರಿರುತ್ತಾರೆ, ಒಬ್ಬ ವೇದ ಜ್ಞಾನಗಳಲ್ಲಿ ಪರಿಣಿತ ಮತ್ತೊಬ್ಬ ಅವಿದ್ಯಾವಂತ. ಇಲ್ಲಿ ಯಾರಿಗೆ ಹೆಚ್ಚು ಗೌರವ, ಆತಿಥ್ಯ ನೀಡುತ್ತಾರೆ.”

“ವಿದ್ಯಾವಂತನಿಗೆ, ಅವಿದ್ಯಾವಂತನಿಗಲ್ಲ.”

“ಅಸ್ಸಲಾಯನ, ಈಗ ಇಬ್ಬರು ಬ್ರಾಹ್ಮಣರಿರುತ್ತಾರೆ, ಒಬ್ಬ ವೇದ ಜ್ಞಾನದಲ್ಲಿ ಪರಿಣಿತ ಆದರೆ ದುರಾಚಾರಿ, ದುಶ್ಶೀಲನಾಗಿರುತ್ತಾನೆ ಮತ್ತು ಇನ್ನೊಬ್ಬ ಅವಿದ್ಯಾವಂತ, ಆದರೆ ಸುಶೀಲ ಚಾರಿತ್ರ್ಯವಂತನಾಗಿರುತ್ತಾನೆ. ಇವರಲ್ಲಿ ಯಾರಿಗೆ ಗೌರವ ಆತಿಥ್ಯ ಸಿಗುತ್ತದೆ?” “ಅವಿದ್ಯಾವಂತನಾಗಿದ್ದರೂ ಶೀಲವಂತನಾದವನಿಗೆ ಗೌರವ ಆತಿಥ್ಯ ಸಿಗುತ್ತದೆ.”

“ಓ ಅಸ್ಸಲಾಯನ ಮೊದಲು ಜನ್ಮದ ಬಗ್ಗೆ ಮಾತನಾಡಿದೆವು, ನಂತರ ವೇದಜ್ಞಾನ (ಮಂತ್ರಗಳ) ಬಗ್ಗೆ ಮಾತನಾಡಿದೆವು, ಕೊನೆಗೆ ಪರಿಶುದ್ಧತೆಯಿಂದಲೇ (ಶೀಲದಿಂದ) ಗೌರವ ಆತಿಥ್ಯ ಸಿಗುತ್ತದೆ ಎಂದು ನೀವು ಒಪ್ಪಿರುವಿರಿ. ನಾನು ಸಹಾ ಅದನ್ನೇ ಬೋಧಿಸುತ್ತಿರುವೆ. ನಾಲ್ಕು ವರ್ಣಗಳಲ್ಲಿ ಶೀಲವಂತರೇ ಗೌರವಕ್ಕೆ ಪಾತ್ರರು. ಯಾರು ಸಹಾ ಜನ್ಮದಿಂದ ಶ್ರೇಷ್ಠನಾಗುವುದಿಲ್ಲ, ಕರ‍್ಮದಿಂದ (ಶೀಲ)ದಿಂದ ಶ್ರೇಷ್ಠನಾಗುತ್ತಾನೆ.”

ಇದನ್ನು ಕೇಳಿದ ಅಸ್ಸಲಾಯನು ತಲೆತಗ್ಗಿಸಿದನು.