Wednesday 30 October 2019

ಸತ್ಪುರುಷನನ್ನು ಹೇಗೆ ಅರಿಯಬಹುದು? (ಚೂಲ ಪುಣ್ಣಮ ಸುತ್ತ): cula purnima sutta in kannada

ಸತ್ಪುರುಷನನ್ನು ಹೇಗೆ ಅರಿಯಬಹುದು? (ಚೂಲ ಪುಣ್ಣಮ ಸುತ್ತ):


ಹೀಗೆ ನಾನು ಕೇಳಿದ್ದೇನೆ - ಒಂದು ಸಮಯದಲ್ಲಿ ಭಗವಾನರು ಸಾವತ್ಥಿಯಲ್ಲಿ ಮಿಗಾರಮಾತೆಯ ಪೂರ್ವ ಆರಾಮ (ವಿಹಾರ)ದಲ್ಲಿ ವಿಹರಿಸುತ್ತಿದ್ದರು. ಅಂದು ಪೂಣರ್ಿಮೆಯಾದ್ದರಿಂದ ಉಪೂಸಥ ದಿನವಾಗಿತ್ತು. ಆಗ ಭಗವಾನರು ಹೊರಗೆ ಗಾಳಿಯಲ್ಲಿ ಕುಳಿತಿದ್ದರು. ಅವರ ಸುತ್ತಲು ಭಿಕ್ಷುಗಣವಿತ್ತು. ಭಗವಾನರು ಶಾಂತವಾಗಿದ್ದ ಭಿಕ್ಷು ಸಮೂಹಕ್ಕೆ ಹೀಗೆ ಕೇಳಿದರು:

"ಈಗ ಭಿಕ್ಷುಗಳೇ, ಅಸತ್ಪುರುಷನಿಗೆ ಅಸತ್ಪುರುಷನು ಅರಿಯಲ್ಪಡುವನೇ, ಹೇಗೆಂದರೆ ಈ ವ್ಯಕ್ತಿಯು ಅಸತ್ಪುರುಷನೇ?"

"ಇಲ್ಲ ಭಂತೆ."

"ಒಳ್ಳೆಯದು ಭಿಕ್ಷುಗಳೇ, ಅಸತ್ಪುರುಷನಿಗೆ ಈತನು ಅಸತ್ಪುರುಷ ಎಂದು ತಿಳಿಯಲ್ಪಡುವುದಿಲ್ಲ. ಹಾಗೆಯೇ ಭಿಕ್ಷುಗಳೇ, ಅಸತ್ಪುರುಷನಿಗೆ ಸತ್ಪುರುಷನು ತಿಳಿಯಲ್ಪಡುವನೇ? ಹೇಗೆಂದರೆ ಈ ವ್ಯಕ್ತಿಯು ಸತ್ಪುರುಷನಿರಬಹುದೇ?"
"ಇಲ್ಲ ಭಂತೆ."

"ಒಳ್ಳೆಯದು ಭಿಕ್ಷುಗಳೇ, ಖಂಡಿತವಾಗಿಯು ಅಸತ್ಪುರುಷನಿಗೆ ಈ ವ್ಯಕ್ತಿಯು ಸತ್ಪುರುಷ ಎಂದು ತಿಳಿಯಲಾಗುವುದಿಲ್ಲ. ಆತನಿಗೆ ಅದು ಅಸಾಧ್ಯವಾಗಿದೆ. ಓ ಭಿಕ್ಷುಗಳೇ, ಅಸತ್ಪುರುಷನು ಅಕುಶಲ ಚಿತ್ತಸ್ಥಿತಿಗಳನ್ನು ಹೊಂದಿರುತ್ತಾನೆ. ಆತನು ಕೆಟ್ಟ ಸ್ನೇಹಿತರನ್ನು ಹೊಂದಿರುತ್ತಾನೆ. ಪಾಪಿಗಳಂತೆ ಯೋಚಿಸುತ್ತಾನೆ. ಆತನು ಪಾಪಿಗಳಂತೆಯೇ ಸಲಹೆ ಬುದ್ಧಿವಾದ ನೀಡುತ್ತಾನೆ, ಪಾಪಿಗಳಂತೆ ಮಾತನಾಡುತ್ತಾನೆ, ಪಾಪಿಗಳಂತೆ ಕಾರ್ಯವನ್ನು ಮಾಡುತ್ತಾನೆ. ಅಷ್ಟೇ ಅಲ್ಲ, ಆತನು ಅಸತ್ಪುರುಷರಂತೆಯೇ ದೃಷ್ಟಿಕೋನಗಳನ್ನು ಹೊಂದಿರುತ್ತಾನೆ ಮತ್ತು ಆತನು ಅಸತ್ಪುರುಷರಂತೆಯೇ ದಾನವನ್ನು ಮಾಡುತ್ತಾನೆ."

"ಮತ್ತು ಭಿಕ್ಷುಗಳೇ, ಆತನು ಯಾವ ಅಕುಶಲ ಚಿತ್ತಸ್ಥಿತಿಗಳಿಂದ (ಅಸ್ಸಧಮ್ಮ ಸಮಾನಾಗತೋ) ಕೂಡಿರುತ್ತಾನೆ?" "ಭಿಕ್ಷುಗಳೇ, ಆತನು ಶ್ರದ್ಧಾರಹಿತನಾಗಿರುತ್ತಾನೆ. ಪಾಪಲಜ್ಜೆಯಿಂದ ಕೂಡಿರುವುದಿಲ್ಲ, ಪಾಪಭಯದಿಂದಲೂ ಕೂಡಿರುವುದಿಲ್ಲ. ಆತನು ಅಲ್ಪಶೃತ (ಕಡಿಮೆ ಜ್ಞಾನವನ್ನು ಕೇಳಿರುತ್ತಾನೆ) ನಾಗಿರುತ್ತಾನೆ. ಆತನು ಸೋಮಾರಿ ಆಗಿರುತ್ತಾನೆ. ಸ್ಮೃತಿಹೀನ (ಅಜಾಗರೂಕನು)ನು ಆಗಿರುತ್ತಾನೆ. ಕೆಟ್ಟ ಪ್ರಜ್ಞೆಯುಳ್ಳವ ನಾಗಿರುತ್ತಾನೆ (ಅಲ್ಪಪ್ರಜ್ಞನು). ಭಿಕ್ಷುಗಳೇ, ಈ ರೀತಿಯಲ್ಲಿ ಅಸತ್ಪುರುಷನ ಚಿತ್ತಸ್ಥಿತಿಗಳು ಇರುತ್ತದೆ."

"ಮತ್ತೆ ಭಿಕ್ಷುಗಳೇ, ಆತನು ಯಾರೊಂದಿಗೆ ಸ್ನೇಹದಿಂದಿರುತ್ತಾನೆ?"
"ಭಿಕ್ಷುಗಳೇ, ಯಾರಲ್ಲಿ ಶ್ರದ್ಧೆಯಿಲ್ಲವೋ, ಪಾಪಲಜ್ಜೆಯಿಲ್ಲವೊ, ಪಾಪಭೀತಿಯಿಲ್ಲವೊ, ಯಾರು ಅಲ್ಪಶೃತರೋ, ಯಾರು ಸೋಮಾರಿಗಳೋ, ಅಜಾಗರೂಕರೋ, ಅಲ್ಪ ಪ್ರಜ್ಞರೋ ಅವರೊಂದಿಗೆಯೇ ಆತನು ಬೆರೆಯುತ್ತಾನೆ. ಅವರೊಂದಿಗೆ ಆತನು ಸ್ನೇಹದಿಂದಿರುತ್ತಾನೆ."

"ಮತ್ತೆ ಭಿಕ್ಷುಗಳೇ, ಆತನು ಅಸತ್ಪುರುಷರ ರೀತಿ ಹೇಗೆ ಯೋಚಿಸುತ್ತಾನೆ? ಆತನು ತನಗೆ ಅಹಿತವಾಗುವಂತೆ, ಬಾಧೆಯಾಗುವಂತೆ ಚಿಂತನೆ ಮಾಡುತ್ತಾನೆ. ಹಾಗು ಆತನು ಪರರಿಗೆ ಅಹಿತವಾಗುವಂತೆ ಬಾಧೆಯಾಗುವಂತೆ ಚಿಂತನೆ ಮಾಡುತ್ತಾನೆ. ಆತನು ಉಭಯರಿಗೂ ಬಾಧೆಯಾಗುವಂತೆ ಯೋಚಿಸುತ್ತಾನೆ."

"ಮತ್ತೆ ಭಿಕ್ಷುಗಳೇ, ಆತನ ಅಸತ್ಪುರುಷರ ರೀತಿ ಹೇಗೆ ಬುದ್ಧಿವಾದ ನೀಡುತ್ತಾನೆ? ಆತನು ತನಗೆ ಅಹಿತವಾಗುವಂತೆ, ಬಾಧೆಯಾಗುವಂತೆ ಬುದ್ಧಿವಾದ ಹೇಳಿಕೊಳ್ಳುತ್ತಾನೆ. ಆತನು ಪರರಿಗೆ ಅಹಿತವಾಗುವಂತೆ, ಬಾಧೆಯಾಗುವಂತೆ ಬುದ್ಧಿವಾದ ಹೇಳುತ್ತಾನೆ".

"ಮತ್ತೆ ಭಿಕ್ಷುಗಳೇ, ಆತನು ಅಸತ್ಪುರುಷರ ರೀತಿಯಲ್ಲಿ ಹೇಗೆ ಮಾತನಾಡುತ್ತಾನೆ?"
"ಭಿಕ್ಷುಗಳೇ, ಆತನು ಸುಳ್ಳು ಹೇಳುತ್ತಾನೆ, ಚಾಡಿ ಹೇಳುತ್ತಾನೆ, ನಿಂದಾಯುತ ಕಟುಭಾಷೆ ಮಾತನಾಡುತ್ತಾನೆ, ವ್ಯರ್ಥವಾದ ಹಾನಿಯುತ ಹರಟೆ ಮಾಡುತ್ತಾನೆ."

"ಮತ್ತೆ ಭಿಕ್ಷುಗಳೇ, ಆತನು ಅಸತ್ಪುರುಷರ ರೀತಿಯಲ್ಲಿ ಹೇಗೆ ಕರ್ಮ ಮಾಡುತ್ತಾನೆ?"
"ಇಲ್ಲಿ ಭಿಕ್ಷುಗಳೇ, ಆತನು ಜೀವಹತ್ಯೆಗಳನ್ನು ಮಾಡುತ್ತಾನೆ, ಕಳ್ಳತನ ಮಾಡುತ್ತಾನೆ, ವ್ಯಭಿಚಾರದಲ್ಲಿ ತೊಡಗುತ್ತಾನೆ. ಹೀಗೆ ಭಿಕ್ಷುಗಳೇ, ಆತನು ಅಸತ್ಪುರುಷರ ಕರ್ಮ ಮಾಡುತ್ತಾನೆ".

"ಮತ್ತೆ ಭಿಕ್ಷುಗಳೇ, ಆತನು ಅಸತ್ಪುರುಷ ರೀತಿ ಹೇಗೆ ದೃಷ್ಟಿಗಳನ್ನು ಹೊಂದಿರುತ್ತಾನೆ?"
ಇಲ್ಲಿ ಭಿಕ್ಷುಗಳೇ, ಆತನು ಹೀಗೆ ಹಲವು ದೃಷ್ಟಿಗಳನ್ನು ಹೊಂದಿರುತ್ತಾನೆ. ಅವೆಂದರೆ:
 (1) ದಾನಕ್ಕೆ ಫಲವಿಲ್ಲ, ಅರ್ಪಣೆಗೆ ಫಲವಿಲ್ಲ, ತ್ಯಾಗ ಸತ್ಕಾರಗಳಿಗೆ ಫಲವಿಲ್ಲ.
(2) ಸುಕಾರ್ಯಗಳಿಗೆ ಆಗಲಿ ಅಥವಾ ದುಷ್ಕಾರ್ಯಗಳಿಗಾಗಲಿ ಅಂತಹ ಕರ್ಮಗಳಿಗೆ ಫಲವಿಲ್ಲ
 (3) ಈ ಲೋಕವೂ ಇಲ್ಲ, ಪರಲೋಕವೂ ಇಲ್ಲ.
 (4) ತಾಯ್ತಂದೆಗಳ ಸಲಹುವಿಕೆಯಿಂದ ಯಾವ ಲಾಭವೂ ಇಲ್ಲ
. (5) ತಾಯ್ತಂದೆಗಳಿಲ್ಲದೆಯೇ ತಮಗೆ ತಾವೇ ಹುಟ್ಟುವ (ಓಪಪಾತಿಕ) ಜೀವಿಗಳಿಲ್ಲ.
(6) ಯೋಗ್ಯವಾಗಿ ಜೀವಿಸಿ, ಯೋಗ್ಯವಾಗಿ ಸಾಕ್ಷಾತ್ಕರಿಸಿ, ಅಭಿಜ್ಞಾ ಸಾಕ್ಷಾತ್ಕರಿಸಿ (ಅತೀಂದ್ರಿಯ ಬಲಗಳನ್ನು ಪಡೆದು) ಈ ಲೋಕ ಮತ್ತು ಪರಲೋಕವಿದೆ ಎಂದು ಹೇಳುವ ಸಮಣ ಬ್ರಾಹ್ಮಣರು ಇಲ್ಲ, ಅಂತಹವರು ಇಲ್ಲವೇ ಇಲ್ಲ. ಹೀಗೆ ಭಿಕ್ಷುಗಳೇ, ಅಸತ್ಪುರುಷನು ದೃಷ್ಟಿಕೋನಗಳನ್ನು ಹೊಂದಿರುತ್ತಾನೆ."


"ಮತ್ತೆ ಭಿಕ್ಷುಗಳೇ, ಅಸತ್ಪುರುಷನು ಹೇಗೆ ದಾನವನ್ನು ಮಾಡುತ್ತಾನೆ?"
"ಭಿಕ್ಷುಗಳೇ, ಅಸತ್ಪುರುಷನು ಗೌರವ ಭಕ್ತಿ ಯಾವುದೂ ಇಲ್ಲದೆ ದಾನ ಮಾಡುತ್ತಾನೆ. ಆತನು ತನ್ನ ಕೈಯಿಂದ ದಾನ ಮಾಡುವುದಿಲ್ಲ, ಆತನು ಬಿಸಾಡುವಂತಹದ್ದನ್ನು ದಾನ ಮಾಡುತ್ತಾನೆ. ಆತನು ಅಗತ್ಯವಿಲ್ಲದ್ದನ್ನು, ಅಪೇಕ್ಷೆಪಡದಿದ್ದುದನ್ನು ದಾನ ಮಾಡುತ್ತಾನೆ. ಆತನು ಭವಿಷ್ಯವನ್ನು ಗಣನೆಗೆ ತೆಗೆದುಕೊಳ್ಳದೆ ದಾನ ಮಾಡುತ್ತಾನೆ. ಹೀಗೆ ಭಿಕ್ಷುಗಳೇ, ಅಸತ್ಪುರುಷನು ದಾನ ಮಾಡುತ್ತಾನೆ."

"ಭಿಕ್ಷುಗಳೇ, ಯಾವ ಅಸತ್ಪುರುಷನು ಪಾಪಚಿತ್ತ ಸ್ಥಿತಿಗಳನ್ನು, ಪಾಪಿ ಮಿತ್ರರನ್ನು, ಪಾಪ ಯೋಚನೆಗಳನ್ನು, ಪಾಪ ಸಲಹೆಗಳನ್ನು, ಪಾಪಯುತ ಮಾತುಗಳನ್ನು, ಪಾಪಯುತ ಕರ್ಮಗಳನ್ನು ಮತ್ತು ಪಾಪಯುತ ದೃಷ್ಟಿಕೋನಗಳನ್ನು ಹೊಂದಿರುತ್ತಾನೋ, ಆತನು ಮರಣದ ನಂತರ ಅಸತ್ಪುರುಷರೆ ಇರುವಂತಹ ಗತಿಯಲ್ಲಿ ಹುಟ್ಟುತ್ತಾನೆ. ಯಾವುದು ಆ ಗತಿ? ನಿರಯ ಇಲ್ಲವೆ ತಿರಚ್ಚನಯೋನಿ (ಪ್ರಾಣಿಗಳ ಲೋಕ)ಯಲ್ಲಿ ಜನ್ಮಿಸುತ್ತಾನೆ."

"ಈಗ ಭಿಕ್ಷುಗಳೇ, ಸತ್ಪುರುಷನಿಗೆ ಇಂಥಹ ವ್ಯಕ್ತಿಯು ಸತ್ಪುರುಷನು ಎಂದು ಗೊತ್ತಾಗುತ್ತದೆಯೇ?"
"ಹೌದು ಭಂತೆ."

"ಒಳ್ಳೆಯದು ಭಿಕ್ಷುಗಳೇ, ಕೆಲವು ಸನ್ನಿವೇಶಗಳು ಬರುತ್ತವೆ. ಆಗ ಈತನು ಸತ್ಪುರುಷ ಎಂದು ಸತ್ಪುರುಷನಿಗೆ ಗೊತ್ತಾಗುವುದು. ಆದರೆ ಭಿಕ್ಷುಗಳೇ, ಸತ್ಪುರುಷನು ಅಸತ್ಪುರುಷನಿಗೆ ನೋಡಿದಾಗ ಇವನು ಅಸತ್ಪುರುಷ ಎಂದು ಗೊತ್ತಾಗುವುದೇ?"
"ಹೌದು ಭಂತೆ ಗೊತ್ತಾಗುವುದು."

"ಒಳ್ಳೆಯದು ಭಿಕ್ಷುಗಳೇ, ಸನ್ನಿವೇಶಗಳು ಬಂದಾಗ ಸತ್ಪುರುಷನಿಗೆ ಇವನು ಸತ್ಪುರುಷ ಎಂದು ಗೊತ್ತಾಗುತ್ತದೆ. ಭಿಕ್ಷುಗಳೇ, ಸತ್ಪುರುಷನು ಕುಶಲ ಚಿತ್ತ ಸ್ಥಿತಿಗಳನ್ನು ಹೊಂದಿರುತ್ತಾನೆ. ಸತ್ಪುರುಷರ ಜೊತೆಯಲ್ಲಿ ರಮಿಸುತ್ತಾನೆ, ಸತ್ಪುರುಷರ ರೀತಿಯಲ್ಲಿ ಚಿಂತನೆ ಮಾಡುತ್ತಾನೆ. ಸತ್ಪುರುಷ ರೀತಿ ಬೋಧನೆ (ಬುದ್ಧಿವಾದ) ನೀಡುತ್ತಾನೆ. ಸತ್ಪುರುಷರ ರೀತಿ ಮಾತನಾಡುತ್ತಾನೆ. ಸತ್ಪುರುಷರ ರೀತಿ ಕರ್ಮ ಮಾಡುತ್ತಾನೆ, ಸತ್ಪುರುಷರ ರೀತಿಯಲ್ಲಿ ದೃಷ್ಟಿಕೋನಗಳನ್ನು ಹೊಂದಿರುತ್ತಾನೆ. ಸತ್ಪುರುಷ ರೀತಿಯಲ್ಲಿ ದಾನ ಮಾಡುತ್ತಾನೆ ಮತ್ತು ಭಿಕ್ಷುಗಳೇ, ಹೇಗೆ ಸತ್ಪುರುಷನು ಕುಶಲ ಚಿತ್ತಸ್ಥಿತಿಗಳನ್ನು ಹೊಂದಿರುತ್ತಾನೆ? ಇಲ್ಲಿ ಭಿಕ್ಷುಗಳೇ, ಸತ್ಪುರುಷನು ಶ್ರದ್ಧೆಯನ್ನು ಹೊಂದಿರುತ್ತಾನೆ, ಸತ್ಪುರುಷನು ಪಾಪಲಜ್ಜೆ ಹಾಗು ಪಾಪ ಭಯವನ್ನು ಹೊಂದಿರುತ್ತಾನೆ. ಸತ್ಪುರುಷನು ಬಹಳಷ್ಟು ಜ್ಞಾನವನ್ನು ಕೇಳಿರುತ್ತಾನೆ. ಸತ್ಪುರುಷನು ಪ್ರಯತ್ನಶಾಲಿಯಾಗಿರುತ್ತಾನೆ, ಆತನಲ್ಲಿ ಸ್ಮೃತಿಯು ಜಾಗರೂಕತೆಯು ಸ್ಥಾಪಿತವಾಗಿರುತ್ತದೆ. ಸತ್ಪುರುಷನು ಪ್ರಜ್ಞಾವಂತನಾಗಿರುತ್ತಾನೆ. ಈ ರೀತಿಯಾಗಿ ಭಿಕ್ಷುಗಳೇ, ಸತ್ಪುರುಷನು ಕುಶಲ ಸ್ಥಿತಿಗಳನ್ನು ಹೊಂದಿರುತ್ತಾನೆ".

"ಮತ್ತು ಭಿಕ್ಷುಗಳೇ, ಹೇಗೆ ಸತ್ಪುರುಷನು ಸತ್ಪುರುಷರೊಡನೆ ಜೊತೆಯಲ್ಲಿರುತ್ತಾನೆ?"
"ಭಿಕ್ಷುಗಳೇ, ಯಾರಲ್ಲಿ ಶ್ರದ್ಧೆಯಿರುವುದೋ, ಪಾಪಲಜ್ಜೆ, ಪಾಪಭೀತಿಯಿರುವದೋ, ಯಾರು ಬಹುಶೃತರೋ, ಪ್ರಯತ್ನಶಾಲಿಗಳೋ, ಜಾಗೃತರೋ ಮತ್ತು ಪ್ರಜ್ಞಾವಂತರೋ ಅಂತಹವರೊಡನೆ ಸತ್ಪುರುಷನು ಸ್ನೇಹ ಬೆಳೆಸಿ ಅವರೊಂದಿಗಿರುತ್ತಾನೆ."

"ಮತ್ತೆ ಭಿಕ್ಷುಗಳೇ, ಸತ್ಪುರುಷನು ಹೇಗೆ ಸತ್ಪುರುಷರಂತೆ ಚಿಂತನೆ ಮಾಡುತ್ತಾನೆ, ಇಲ್ಲಿ ಭಿಕ್ಷುಗಳೇ, ಸತ್ಪುರುಷನು ತನಗೆ ಬಾಧೆಯನ್ನು ನೀಡುವುದಿಲ್ಲ, ಹಾಗೆಯೇ ಪರರಿಗೂ ಬಾಧೆಯನ್ನು ನೀಡುವುದಿಲ್ಲ. ತನಗೆ ಮತ್ತು ಪರರಿಗೂ ಬಾಧೆ ನೀಡುವುದಿಲ್ಲ. ಹೀಗೆ ಭಿಕ್ಷುಗಳೇ, ಆತನು ಸತ್ಪುರುಷರಂತೆ ಚಿಂತಿಸುತ್ತಾನೆ."

"ಮತ್ತೆ ಭಿಕ್ಷುಗಳೇ, ಹೇಗೆ ಆತನು ಸತ್ಪುರುಷರಂತೆ ಬುದ್ಧಿವಾದ ನೀಡುವನು? ಇಲ್ಲಿ ಭಿಕ್ಷುಗಳೇ, ಸತ್ಪುರುಷನು ತನಗೆ ಹಾನಿಯಾಗುವಂತೆ ಅಥವಾ ಪರರಿಗೆ ಹಾನಿಯಾಗುವಂತೆ ಆಗಲಿ ಅಥವಾ ಈರ್ವರಿಗೂ ಹಾನಿಯಾಗುವಂತೆ ಬುದ್ಧಿವಾದ ನೀಡುವುದಿಲ್ಲ. ಹೀಗೆ ಭಿಕ್ಷುಗಳೇ, ಆತನು ಸತ್ಪುರುಷರಂತೆ ಬುದ್ಧಿವಾದ ನೀಡುತ್ತಾನೆ."

"ಮತ್ತೆ ಭಿಕ್ಷುಗಳೇ, ಹೇಗೆ ಆತನು ಸತ್ಪುರುಷರಂತೆ ಮಾತನಾಡುತ್ತಾನೆ? ಇಲ್ಲಿ ಭಿಕ್ಷುಗಳೇ, ಆತನು ಸುಳ್ಳಿನಿಂದ ದೂರವಾಗುತ್ತಾನೆ, ಚಾಡಿಯಿಂದ, ಕಟುವಾಕ್ಯದಿಂದ, ವ್ಯರ್ಥ ಹರಟೆಯಿಂದ ದೂರವಾಗುತ್ತಾನೆ. ಹೀಗೆ ಭಿಕ್ಷುಗಳೇ, ಸತ್ಪುರುಷನು ಮಾತನಾಡುತ್ತಾನೆ."

"ಮತ್ತೆ ಭಿಕ್ಷುಗಳೇ, ಹೇಗೆ ಆತನು ಸತ್ಪುರುಷರಂತೆ ಕರ್ಮ ಮಾಡುತ್ತಾನೆ? ಇಲ್ಲಿ ಭಿಕ್ಷುಗಳೇ, ಆತನು ಎಲ್ಲಾ ಜೀವಿಗಳ ಜೀವಹತ್ಯೆಯಿಂದ ದೂರನಾಗಿರುತ್ತಾನೆ, ಕಳ್ಳತನದಿಂದ, ವ್ಯಭಿಚಾರದಿಂದ ದೂರವಾಗುತ್ತಾನೆ. ಹೀಗೆ ಭಿಕ್ಷುಗಳೇ, ಸತ್ಪುರುಷನು ಕರ್ಮ ಮಾಡುತ್ತಾನೆ."

"ಮತ್ತೆ ಭಿಕ್ಷುಗಳೇ, ಹೇಗೆ ಆತನು ಸತ್ಪುರುಷರಂತೆ ದೃಷ್ಟಿಕೋನಗಳನ್ನು ಹೊಂದಿರುತ್ತಾನೆ? ಭಿಕ್ಷುಗಳೇ, ಸತ್ಪುರುಷನು ಈ ಕೆಳಕಂಡಂತೆ ಸಮ್ಮಾ ದೃಷ್ಟಿಕೋನಗಳನ್ನು ಹೊಂದಿರುತ್ತಾನೆ: ದಾನಕ್ಕೆ ಫಲವಿದೆ, ಅರ್ಪಣೆಗೆ ಫಲವಿದೆ, ತ್ಯಾಗ ಸತ್ಕಾರಗಳಿಗೆ ಫಲವಿದೆ, ಕುಶಲ ಕರ್ಮಗಳಿಗೆ ಹಾಗು ಪಾಪ ಕರ್ಮಗಳಿಗೆ ಫಲವಿದೆ. ಹೀಗಾಗಿ ಈ ಲೋಕವು ಇದು ಹಾಗೆಯೆ ಪರಲೋಕವೂ ಇದೆ. ತಾಯ್ತಂದೆಯರಿಗೆ ಸೇವೆ ಮಾಡುವುದರಿಂದಾಗಿ ಲಾಭವಿದೆ, ತಾಯಿ-ತಂದೆಯರಿಲ್ಲದೆಯೇ ತಾವಾಗಿಯೇ ಹುಟ್ಟುವಂತಹ ಓಪಪಾತಿಕ ಜೀವಿಗಳೂ ಇದ್ದಾರೆ. ಯೋಗ್ಯವಾಗಿ, ಸರಿಯಾಗಿ ಜೀವಿಸುವ ಸಮಣ ಬ್ರಾಹ್ಮಣರೂ ಇದ್ದಾರೆ. ತಮ್ಮ ಅಭಿಜ್ಞ ಬಲದಿಂದಾಗಿ ಈ ಲೋಕದ ಬಗ್ಗೆ, ಪರಲೋಕದ ಬಗ್ಗೆ ಹೇಳುವಂತಹ ಮಹಾನುಭಾವರು ಲೋಕದಲ್ಲಿರುವರು. ಹೀಗೆ ಭಿಕ್ಷುಗಳೇ, ಸತ್ಪುರುಷರು ಸಮ್ಮಾದೃಷ್ಟಿಗಳನ್ನು ಹೊಂದಿತ್ತಾರೆ."

"ಮತ್ತೆ ಭಿಕ್ಷುಗಳೇ, ಹೇಗೆ ಸತ್ಪುರುಷರು ದಾನವನ್ನು ಮಾಡುತ್ತಾರೆ? ಇಲ್ಲಿ ಭಿಕ್ಷುಗಳೇ, ಸತ್ಪುರುಷರು ಗೌರವಾರ್ಪಣೆಯಿಂದ ದಾನ ಮಾಡುತ್ತಾರೆ. ತಮ್ಮ ಕೈಯಿಂದಲೇ ದಾನವನ್ನು ಮಾಡುತ್ತಾರೆ. ಪ್ರಜ್ಞಾಯುತವಾಗಿ ಶ್ರೇಷ್ಟವಾದುದನ್ನು ದಾನ ಮಾಡುತ್ತಾರೆ. ಪರಿಶುದ್ಧವಾದುದನ್ನೇ ದಾನ ಮಾಡುತ್ತಾರೆ. ಭವಿಷ್ಯವನ್ನು ಗಣನೆಗೆ ತೆಗೆದುಕೊಂಡು ದಾನ ಮಾಡುತ್ತಾರೆ. ಹೀಗೆ ಭಿಕ್ಷುಗಳೇ, ಸತ್ಪುರುಷರು ದಾನ ಮಾಡುತ್ತಾರೆ."

"ಭಿಕ್ಷುಗಳೇ, ಹೀಗೆ ಸತ್ಪುರುಷನು ಕುಶಲಚಿತ್ತ ಸ್ಥಿತಿಗಳನ್ನು ಹೊಂದಿರುತ್ತಾನೆ, ಸತ್ಪುರುಷರ ಜೊತೆಯಲ್ಲಿರುತ್ತಾನೆ, ಸತ್ಪುರುಷರಂತೆ ಚಿಂತಿಸುತ್ತಾನೆ, ಸತ್ಪುರುಷರಂತೆ ಬುದ್ಧಿವಾದನೀಡುತ್ತಾನೆ, ಸತ್ಪುರುಷರಂತೆಯೇ ಮಾತನಾಡುತ್ತಾನೆ, ಸತ್ಪುರುಷರಂತೆಯೇ ಕರ್ಮ ಮಾಡುತ್ತಾನೆ, ಸತ್ಪರುಷರಂತೆಯೇ ದೃಷ್ಟಿಕೋನಗಳನ್ನು ಹೊಂದಿರುತ್ತಾನೆ. ಸತ್ಪುರುಷರಂತೆ ದಾನವನ್ನು ಮಾಡುತ್ತಾನೆ. ಇಂತಹ ಸತ್ಪುರುಷನು ಮರಣದ ನಂತರವೂ ಸತ್ಪುರುಷರು ಇರುವಲ್ಲಿಯೇ ಜನ್ಮ ತಾಳುವನು ಅಂತಹ ಸ್ಥಿತಿ ಯಾವುದು? ಅದೇ ಮಹತ್ತರವಾದ ಸುಗತಿ ಅಥವಾ ಮಾನವರಲ್ಲಿ ಶ್ರೇಷ್ಠ ಸ್ಥಿತಿಯನ್ನು ಹೊಂದುತ್ತಾನೆ."

ಹೀಗೆ ಭಗವಾನರು ಹೇಳಿದಾಗ, ಭಿಕ್ಷುಗಳು ಆನಂದದಿಂದ ಅನುಮೋದನೆ ಮಾಡಿದರು.

Tuesday 22 October 2019

ಅವಿಜ್ಜ ಸುತ್ತ (ಅವಿದ್ಯೆ/ಅಜ್ಞಾನದ ಸೂತ್ರ)

ಅವಿಜ್ಜ ಸುತ್ತ (ಅವಿದ್ಯೆ/ಅಜ್ಞಾನದ ಸೂತ್ರ)



ಒಬ್ಬ ಭಿಕ್ಷುವು ಭಗವಾನರಲ್ಲಿಗೆ ಹೋಗಿ ವಂದಿಸಿದನು, ನಂತರ ಒಂದು ಪಕ್ಕದಲ್ಲಿ ಕುಳಿತನು ಮತ್ತು ಹೀಗೆ ಹೇಳಿದನು: ಭಗವಾನ್ ಯಾವ ಒಂದು ವಿಷಯವನ್ನು ಭಿಕ್ಷುವು ವಜರ್ಿಸಿದಾಗ, ಆತನಲ್ಲಿನ ಅಜ್ಞಾನವು ಪರಿತ್ಯಜಿಸಲ್ಪಟ್ಟು ಆತನಲ್ಲಿ ಸ್ಪಷ್ಟ ಜ್ಞಾನವು ಉದಯಿಸುತ್ತದೆ?
ಹೌದು ಭಿಕ್ಷು, ಅಂತಹ ವಿಷಯವೊಂದಿದೆ. ಅದನ್ನು ಭಿಕ್ಷುವು ವಜರ್ಿಸಿದಾಗ ಆತನಲ್ಲಿನ ಅಜ್ಞಾನವು ಪರಿತ್ಯಜಿಸಲ್ಪಟ್ಟು ಆತನಲ್ಲಿ ಸ್ಪಷ್ಟ ಜ್ಞಾನವು ಉದಯಿಸುತ್ತದೆ.
ಆ ಒಂದು ವಿಷಯ ಯಾವುದು?
ಅಜ್ಞಾನವೇ ಭಿಕ್ಷುವೆ, ಇದನ್ನು ಭಿಕ್ಷುವು ವಜರ್ಿಸಿದಾಗ ಆತನ ಅಜ್ಞಾನವು ಪರಿತ್ಯಜಿಸಲ್ಪಟ್ಟು, ಆತನಲ್ಲಿ ಸ್ಪಷ್ಟ ಜ್ಞಾನವು ಉದಯಿಸುತ್ತದೆ.
ಆದರೆ ಅಜ್ಞಾನವು ಪರಿತ್ಯಜವಾಯಿತು ಮತ್ತು ಸ್ಪಷ್ಟ ಜ್ಞಾನವು ಉದಯಿಸುತ್ತದೆ ಎಂದು ಭಿಕ್ಷುವು ಹೇಗೆ ಅರಿಯುತ್ತಾನೆ ಮತ್ತು ಕಾಣುತ್ತಾನೆ?
ಒಮ್ಮೆ ಭಿಕ್ಷುವು ಹೀಗೆ ಕೇಳಿರುತ್ತಾನೆ: ಎಲ್ಲಾ ವಿಷಯಗಳು ಅಂಟುವಿಕೆಗೆ ಅನರ್ಹವಾಗಿದೆ. ಆಗ ಆತನಿಗೆ ನೇರವಾಗಿ ಪ್ರತಿಯೊಂದು ಅರಿವಿಗೆ ಬಂದಿರುತ್ತದೆ. ಆತನು ಎಲ್ಲವನ್ನು ಸೂಕ್ಷ್ಮವಾಗಿಯೇ ಗ್ರಹಿಸಿರುತ್ತಾನೆ. ಆತನು ಎಲ್ಲಾ ವಿಷಯಗಳನ್ನು ಯಾವುದೋ ರೀತಿಯಲ್ಲಿ ಪ್ರತ್ಯೇಕವಾಗಿ ಕಾಣುತ್ತಾನೆ.
ಆತನು ಕಣ್ಣನ್ನು ಬೇರೆಯಾಗಿ ಕಾಣುತ್ತಾನೆ, ಹಾಗೆಯೇ ದೃಶ್ಯಗಳನ್ನು ಬೇರೆಯಾಗಿ (ಪ್ರತ್ಯೇಕವಾಗಿ) ಕಾಣುತ್ತಾನೆ, ಅವೆರಡರಿಂದ ಉತ್ಪನ್ನವಾಗುವ ಕಣ್ಣಿನಿಂದಾದ ಅರಿವನ್ನು (ಚಕ್ಷು ವಿಞ್ಞಾನ) ಬೇರೆಯಾಗಿಯೇ ಕಾಣುತ್ತಾನೆ. ಹಾಗೆಯೇ ಕಣ್ಣು ಮತ್ತು ದೃಶ್ಯಗಳ ನಡುವಿನ ಸಂಪರ್ಕವನ್ನು (ಪಸ್ಸ/ಸ್ಪರ್ಶ) ಬೇರೆಯಾಗಿಯೇ ಕಾಣುತ್ತಾನೆ ಮತ್ತು ಯಾವುದೆಲ್ಲವು ಕಣ್ಣಿನ ಸಂಪರ್ಕದಿಂದಾಗಿ ಉದಯಿಸಿತೋ ಹೇಳುವುದಾದರೆ ಸುಖ, ದುಃಖ ಅಥವಾ ಸುಖವು-ದುಃಖವೂ ಅಲ್ಲದ, ಅವೆಲ್ಲವನ್ನು ಪ್ರತ್ಯೇಕವಾಗಿ ಕಾಣುತ್ತಾನೆ.
ಹಾಗೆಯೇ ಕಿವಿಯನ್ನು... ಮೂಗನ್ನು... ನಾಲಿಗೆಯನ್ನು... ದೇಹವನ್ನು ಪ್ರತ್ಯೇಕವಾಗಿ ಕಾಣುತ್ತಾನೆ. ಆತನು ಮನಸ್ಸನ್ನು ಪ್ರತ್ಯೇಕವಾಗಿ ಕಾಣುತ್ತಾನೆ, ಹಾಗೆಯೇ ಚಿತ್ತ ವಿಷಯಗಳನ್ನು ಪ್ರತ್ಯೇಕವಾಗಿ ಕಾಣುತ್ತಾನೆ, ಹಾಗೆಯೇ ಮನೋ ವಿಞ್ಞಾನವನ್ನು (ಮನಸ್ಸಿನಿಂದ ಅರಿಯುವಿಕೆಯನ್ನು) ಬೇರೆಯಾಗಿ ಕಾಣುತ್ತಾನೆ. ಮನಸ್ಸಿನ ಮತ್ತು ಮನೋ ವಿಷಯಗಳ ನಡುವಿನ ಸಂಪರ್ಕವನ್ನು ಬೇರೆಯಾಗಿ ಕಾಣುತ್ತಾನೆ. ಹಾಗೆಯೇ ಅಲ್ಲಿಂದ ಉತ್ಪನ್ನವಾದ ಸುಖ-ದುಃಖ, ಸುಖವು ಅಲ್ಲದ, ದುಃಖವು ಅಲ್ಲದ ವೇದನೆಗಳನ್ನು ಬೇರೆಯಾಗಿ ಕಾಣುತ್ತಾನೆ.
ಹೀಗೆ ಓ ಭಿಕ್ಷುವೇ, ಭಿಕ್ಷುವು ಅಜ್ಞಾನವು ಪರಿತ್ಯಜಿತವಾಗಿ, ಸ್ಪಷ್ಟ ಜ್ಞಾನವು ಉದಯಿಸುವುದನ್ನು ಭಿಕ್ಷು ಕಾಣುತ್ತಾನೆ.