Sunday 8 January 2023

ತಿರೋಕುಟ್ಟ ಸುತ್ತ tirokutta sutta in kannada

 ತಿರೋಕುಟ್ಟ ಸುತ್ತ

 ಗೋಡೆಯಾಚೆಗಿನ ಪ್ರೇತಗಳ ಘಟನೆ



ಬಿಂಬಸಾರ ರಾಜನು ಮಲಗಿರುವಾಗ ಅತ್ಯಂತ ಭೀಕರವಾದ ಶಬ್ದಗಳನ್ನು ಕೇಳಿದನು. ಅದರಿಂದ ಭಯಭೀತನಾಗಿ ಭಗವಾನರ ಬಳಿಗೆ ಬಂದು ವಿಷಯವನ್ನು ತಿಳಿಸಿದನು.: ಭಗವಾನ್ ನೀವು ಏನಾದರೂ ಅಂತಹ ಶಬ್ದಗಳನ್ನು ಕೇಳಿದಿರಾ , ಅದರಿಂದಾಗಿ ನನಗೆ ಏನಾದರೂ ಸಂಭವಿಸುವುದೇ ಎಂದು ನಾನು ಭಯಭೀತನಾಗಿರುವೆನು..

ಆಗ ಭಗವಾನರು ಹೀಗೆ ಉತ್ತರಿಸಿದರು: ಭಯ ಬೇಡ ಮಹಾರಾಜ, ನಿನಗೆ ಯಾವ ಹಾನಿಯೂ ಜರುಗದು, ಬದಲಾಗಿ ಉನ್ನತಿಯು ನಿನ್ನ ಹಾದಿಯಲಿ ಬರುವುದು, ಈ ಶಬ್ಧಗಳು ಪ್ರೇತಗಳದ್ದಾಗಿದೆ ಇವರು ನಿನ್ನ ಪೂರ್ವಜನ್ಮದ ಬಂಧುಗಳಾಗಿದ್ದಾರೆ, ಇವರು ಹಿಂದಿನ ಬುದ್ಧರ ಕಾಲದವರು, ತಮ್ಮ ಈ ಪ್ರೇತ ಜನ್ಮದ ವಿಮೋಕ್ಷಕ್ಕಾಗಿ ಆಗಿನಿಂದ ಕಾಯುತ್ತಿದ್ದಾರೆ. ಅವರ ಬಯಕೆ ಏನೆಂದರೇ ಈತನು ಬುದ್ಧರಿಗೆ ದಾನವನ್ನು ಅಪರ್ಿಸಿ ಅದರ ಪುಣ್ಯಫಲವನ್ನು ನಮಗೆ ನೀಡುವನು ಅಲ್ಲದೆ ನೆನ್ನೆ ನೀನು ದಾನವನ್ನು ನೀಡಿಯೂ ಪುಣ್ಯವನ್ನು ಹಂಚಲಿಲ್ಲ. ಹೀಗಾಗಿ ಅವರು ಹತಾಶರಾಗಿ ಹೀಗೆ ಪ್ರಲಾಪದ ಕೂಗುಗಳನ್ನು ಮಾಡಿದ್ದಾರೆ. 

ಆಗ ರಾಜನು ಹೀಗೆ ಕೇಳಿದನು ಹಾಗಾದರೇ ಭಗವಾನ್ ಅವರು ದಾನದ ಫಲವನ್ನು ಸ್ವೀಕರಿಸುವರೇ?

ಹೌದು

ಭಗವಾನ್, ಹಾಗಾದರೇ ದಯೆಯಿಟ್ಟು ನಾಳೆ ನನ್ನ ಅರೆಮನೆಯಲ್ಲಿ ದಾನವನ್ನು ಸ್ವೀಕರಿಸಿ ಧನ್ಯನನ್ನಾಗಿಸಿ, ಅವರಿಗೆ ದಾನ ಫಲವನ್ನು ಹಂಚುವೆನು.

ಆಗ ಮಹಾದಾನಿಯಾದ ಅರಸನು ಅತ್ಯಂತ ಸ್ವಾದಿಷ್ಟಮಯವಾದ ಆಹಾರಗಳನ್ನು ಸಿದ್ದಪಡಿಸಿದನು. ಇವನೆಲ್ಲಾ ಗಮನಿಸುತ್ತಿದ್ದಂತಹ ಪ್ರೇತಗಳು ಆನಂದಗೊಂಡವು. ಹಾಗೂ ಗೋಡೆಯಾಚೆ ನಿಂತವು. ಭಗವಾನರ ಸಂಕಲ್ಪದಿಂದಾಗಿ ಬಿಂಬಸಾರನಿಗೂ ಅವರೆಲ್ಲ ಕಾಣಿಸತೊಡಗಿದರು. 

ಯಾವಾಗ ರಾಜನು ಕೈತೊಳೆಯಲು ನೀರು ನೀಡುತ್ತಿದ್ದಂತೆ ಹೀಗೆ ಸಂಕಲ್ಪಿಸಿದನು ಇವೆಲ್ಲಾ ನನ್ನ ಜ್ಞಾತಿ(ಬಂಧು)ಗಳಿಗೆ ಸೇರಲಿ ತಕ್ಷಣ ಅವರು ಕಮಲಗಳುಳ್ಳ ಸರೋವರಕ್ಕೆ ಬಂದಿಳಿದರು, ಅವರೆಲ್ಲ ಅಲ್ಲಿ ಸ್ನಾನ ಮಾಡಿ, ತೃಪ್ತರಾಗಿ ನೀರನ್ನು ಸೇವಿಸಿದವು, ಅದಕ್ಕೆ ಮುಂಚೆ ಅವಕ್ಕೆ ನೀರು ಸೇವಿಸಲು ಸಾಧ್ಯವಾಗುತ್ತಿರಲಿಲ್ಲ, ಅವು ನೀರು ಸೇವಿಸುತ್ತಿದಂತೆ ಅವುಗಳ ಬಾಯಾರಿಕೆ, ದಣಿವು, ಖಿನ್ನತೆ ದೂರವಾಗಿ ಹೊಂಬಣ್ಣದವರಾದವು, ರಾಜನು ಸ್ವಾದಿಷ್ಟಮಯ ಬಗೆಬಗೆಯ ಆಹಾರಗಳನ್ನು ಬಡಿಸುತ್ತಿದ್ದಂತೆಯೇ, ಈ ಹಿಂದೆ ತಿನ್ನಲಾಗದಂತಹ ಸ್ಥಿತಿಯಲ್ಲಿದ್ದ ಅವುಗಳು ದೇವಲೋಕದಂತಹ ಆಹಾರವನ್ನು ಆನಂದದಿಂದ ಸೇವಿಸತೊಡಗಿದವು. ಹಾಗೆಯೆ ರಾಜನು ಭಿಕ್ಖುಗಳಿಗೆ ವಸ್ತ್ರದಾನಗಳನ್ನು ನೀಡುತ್ತಿದ್ದಂತೆಯೇ ಅವುಗಳು ದೇವ ವಸ್ತ್ರಗಳನ್ನು ಪಡೆದವು. ವಿಹಾರ ದಾನ ನೀಡುತ್ತಿದ್ದಂತೆಯೇ ದೇವ ಮಹಲುಗಳನ್ನು ಪಡೆದವು, ಹೀಗೆ ಬಗೆಬಗೆಯ ಸೌಲಭ್ಯಗಳನ್ನು ಅವು ಪಡೆದವು. ಆಗ ಭಗವಾನರು ಸಹಾ ಅವರು ಪಡೆಯುತ್ತಿದ್ದಂತಹ ಆನಂದವು ರಾಜನಿಗೂ ಲಭಿಸಲಿ ಎಂದು ಸಂಕಲ್ಪಿಸಿದರು. ಇದರಿಂದಾಗಿ ರಾಜನು ಸಹಾ ಆನಂದಭರಿತನಾದನು. ಆಗ ಭಗವಾನರು ರಾಜ ಹಾಗೂ ರಾಜ ಪರಿವಾರಕ್ಕೆ ತಿರೋಕುಟ್ಟ ಸುತ್ತವನ್ನು ಬೋಧಿಸಿದರು.

ತಿರೋಕುಟ್ಟ ಸುತ್ತ

1.  ಅವರು ಗೋಡೆಯಾಚೆ,  ತೆರೆದ ಸ್ಥಳಗಳಲ್ಲಿ ಮತ್ತು ರಸ್ತೆಗಳು ಸೇರುವ ಸ್ಥಳಗಳಲ್ಲಿ ದ್ವಾರಗಳ ಬಳಿ, ತಮ್ಮ ಹಿಂದಿನ ಮನೆಗಳ ಬಳಿ ಬಂದು ನಿಲ್ಲುವವು.

2. ಅದರೆ ಹೇರಳವಾದ ಸ್ವಾದಿಷ್ಟ ಬೋಜ್ಯಗಳು ಹಾಗೂ ಪಾನಿಯಗಳು ಸಿದ್ಧವಾಗಿದ್ದರೂ ಸಹಾ ಆ ಜೀವಿಗಳ ಪಾಪಯುತ ಅಕುಶಲ ಕಮ್ಮದಿಂದಾಗಿ ಯಾರೂ ಅವರನ್ನು ನೆನೆಯಲಾರರು.

3. ಹೀಗಾಗಿ ಯಾರು ಅನುಕಂಪಶೀಲರೋ ಅವರು ಯೋಗ್ಯ ಕಾಲದಲ್ಲಿ, ಪರಿಶುದ್ಧವಾದ, ಉತ್ಕೃಷ್ಟವಾದ, ಯೋಗ್ಯವಾದ ಭೋಜ್ಯಗಳನ್ನು ಹಾಗೂ ಪಾನಿಯಗಳನ್ನು ಪ್ರೇತಗಳಿಗೆ ನೀಡುವರು. ಹಾಗೂ ಹೀಗೆ ಸಂಕಲ್ಪಿಸುವರು : 

ಇವು ನಮ್ಮ ಜ್ಞಾತಿಗಳಿಗೆ(ಬಂಧುಗಳಿಗೆ) ಸೇರಲಿ, ನಮ್ಮ ಜ್ಞಾತಿಗಳೂ ಧನ್ಯರಾಗಲಿ ಸುಖಿಯಾಗಿರಲಿ.

4. ಆಗ ಯಾವೆಲ್ಲಾ ಪ್ರೇತಗಳು ಗುಂಪು ಸೇರಿ ಆಹಾರಗಳಿಂದ ಹಾಗೂ ಪಾನಿಯಗಳಿಂದ ಧನ್ಯರಾಗುವವೋ ಅವು ಗೌರವಪೂರ್ವಕವಾಗಿ ಹೀಗೆ ಕೃತಜ್ಞತೆ ಅಪರ್ಿಸುವವು. ಹಾಗೂ ಹೀಗೆ ಹೇಳುವವು 

5. ನಮ್ಮ ಜ್ಞಾತಿಯು ಚಿರವಾಗಿ ಜೀವಿಸಲಿ, ಆತನಿಂದಾಗಿ ಈ ಲಾಭವನ್ನು ಪಡೆದು, ಗೌರವಿಸಲ್ಟಟ್ಟಿದ್ದೇವೆ, ಋಣಿಯಾಗಿದ್ದೇವೆ, ನಮಗೆ ನೀಡಿದಂತಹ ಆತನೂ ಸಹಾ ಪ್ರತಿಫಲವನ್ನು ಪಡೆಯುವಂತಾಗಲಿ.

6. ಅಲ್ಲಿ (ಪ್ರೇತಲೋಕದಲ್ಲಿ) ಯಾವ ವ್ಯವಸಾಯವೂ ಇಲ್ಲ, ಯಾವ ಪಶುಪಾಲನೆಯು ಇಲ್ಲ, ಹಾಗೆಯೇ ಯಾವ ವ್ಯಾಪಾರವೂ ಇಲ್ಲ, ಹಾಗೇಯೆ ಸ್ವರ್ಣದಿಂದಾಗುವಂತಹ ಯಾವ ವಿನಿಮಯವೂ ಇಲ್ಲ.

7. ಹೇಗೆ ಮಳೆಯ ನೀರು ಮೇಲಿನಿಂದ ಕೆಳಕ್ಕೆ ಧುಮಿಕ್ಕಿ, ಹರಿಯುವುದೋ ಹಾಗೇಯೇ ಪ್ರೇತಗಳು ದಾನದಿಂದ ಅವಲಂಬಿತವಾಗಿವೆ. ಹೀಗಾಗಿ ಇಲ್ಲಿ ಏನೆಲ್ಲಾ ದಾನವಾಗಿ ನೀಡುವೆವೋ ಅದು ಅಲ್ಲಿ ಪ್ರೇತಗಳಿಗೆ ಲಾಭವಾಗುವುದು.

8. ಹೇಗೆ ನದಿಗಳು ತುಂಬಿದಾಗ ಅವು ಹಾಗೇಯೆ ಸಾಗಿ ಸಾಗರವನ್ನು ಸೇರುವಂತೆ, ಹಾಗೆಯೇ ಯಾವುದೆಲ್ಲವೂ ಇಲ್ಲಿ ನೀಡಿದ್ದೇವೆಯೋ ಅವು ಪ್ರೇತಗಳಿಗೆ ದೊರೆತು ಲಾಭವನ್ನುಂಟು ಮಾಡುತ್ತವೆ.

9. ಈತನು ನನಗೆ ನೀಡಿದ್ದಾನೆ, ನನಗಾಗಿ ಕೆಲಸಗಳನ್ನು ಮಾಡಿದ್ದಾನೆ, ನನಗೆ ಈತನು ಬಂಧುವು, ಮಿತ್ರನು ಹಾಗೂ ಸಖನು ಆಗಿದ್ದನು, ಈ ರೀತಿಯಲ್ಲಿ ಅವರು ಈ ಹಿಂದೆ ಮಾಡಿದಂತಹ ಸಹಾಯಗಳನ್ನು ನೆನೆದು ಪ್ರೇತಗಳಿಗೆ ದಾನಗಳನ್ನು ಸಮಪರ್ಿಸಬೇಕು.

10. ಯಾವುದೇ ಆಶ್ರುಗಳಿಂದಾಗಲಿ, ಅಥವಾ ಶೋಕಗಳಿಂದಾಗಲಿ ಅಥವಾ ಯಾವುದೇ ಪ್ರಲಾಪಗಳಿಂದಾಗಲಿ ಎಲ್ಲಿಯವರೆಗೆ ಬಂಧುಗಳು ಈ ರೀತಿಗಳಲ್ಲಿ ದುಃಖಿಸುವರೋ ಇದರಿಂದಾಗಿ ಪ್ರೇತಗಳಿಗೆ ಯಾವುದೇ ಪ್ರಯೋಜನವಾಗದು.

11. ಅದರೆ ಅವರಿಗೆ ತಲುಪುವಂತೆ ಸಂಘಕ್ಕೆ ಸುಪ್ರತಿಷ್ಟಿತವಾಗಿ ನೀಡಿದಂತಹ ದಾನವು ಮಾತ್ರ ಅವರಿಗೆ ದೀರ್ಘಕಾಲ ಹಿತವನ್ನು ಲಾಭವನ್ನು ನೀಡುತ್ತದೆ. ಕಾಲವಿಳಂಬವಿಲ್ಲದೆ ತಕ್ಷಣವೇ ಅವರಿಗೆ ಫಲವನ್ನು ನೀಡುವುದು.

12. ಇದು ಬಂಧುಗಳಿಗೆ ನಾವು ಮಾಡುವಂತಹ ನಿಜ ಕರ್ತವ್ಯವೂ ಸಹಾ, ಹಾಗೆಯೇ ಅಗಲಿದವರಿಗೆ ನಾವು ನೀಡುವಂತಹ ಶ್ರೇಷ್ಟ ಗೌರವವೂ ಸಹಾ, ಭೋಜ್ಯ ಪಾನಿಯಗಳಿಂದ ಭಿಕ್ಖುಗಳಿಗೆ ದಾನ ನೀಡುವುದರಿಂದ ಅವರಿಗೆ ಶಕ್ತಿಯು ದೊರೆಯುವುದು, ಮತ್ತು ಇದು ನಿಮ್ಮಿಂದ ಉತ್ಪನ್ನವಾದ ಸಣ್ಣ ಪುಣ್ಯವೇನಲ್ಲ.


- ಂ0ಂ  

No comments:

Post a Comment