Friday 5 September 2014

kalama sutta in kannada( famous sutta for rational)

ಕಾಲಾಮ (ವಿಚಾರಶೀಲತೆಯ ಕುರಿತು) ಸುತ್ತ
                ನಾನು ಹೀಗೆ ಕೇಳಿರುವೆ, ಭಗವಾನರು ಒಮ್ಮೆ ಕೋಶಲ ರಾಜ್ಯದ ಕೇಸಪುತ್ತ ಜಿಲ್ಲೆಗೆ ಬೃಹತ್ ಸಮೂಹದೊಂದಿಗೆ ಬಂದರು. ಕೇಸಪುತ್ತರು ಕಾಲಾಮರಿಗೆ ಭಗವಾನರು ಅಲ್ಲಿಗೆ ಬಂದಿರುವುದು ತಿಳಿಯಿತು. ಭಗವಾನರ ಖ್ಯಾತಿ ಆಲಿಸಿ ಎಲ್ಲರೂ ಭಗವಾನರಲ್ಲಿಗೆ ಬಂದು ವಂದಿಸಿ, ಕುಶಲಕ್ಷೇಮವನ್ನು ವಿಚಾರಿಸಿ, ಗೌರವಾರ್ಪಣೆ ಮಾಡಿ ಕುಳಿತರು. ಆಗ ಕಾಲಾಮರು ಭಗವಾನರಲ್ಲಿ ಹೀಗೆ ಪ್ರಶ್ನಿಸಿದರು:

                ಭಂತೆ ಇಲ್ಲಿಗೆ ಕೆಲವು ಸಮಣ ಬ್ರಾಹ್ಮಣರು ಬರುತ್ತಾರೆ, ತಮ್ಮ ಸಿದ್ದಾಂತವನ್ನು ವಿವರಿಸುತ್ತಾರೆ, ಬಣ್ಣಿಸುತ್ತಾರೆ. ಆದರೆ ಹಾಗೆಯೇ ಪರರ ಸಿದ್ಧಾಂತಗಳನ್ನು ಖಂಡಿಸುತ್ತಾರೆ, ನಿಂದಿಸುತ್ತಾರೆ, ನಿರಾಕರಿಸುತ್ತಾರೆ. ಅದೇರೀತಿಯಲ್ಲೇ ಬೇರೆ ಕೆಲವು ಸಮಣ ಬ್ರಾಹ್ಮಣರು ಸಹಾ ಬಂದು ಹಾಗೇ ಅದೇರೀತಿ ಮಾಡುತ್ತಾರೆ. ಹೀಗೆ ವಿಭಿನ್ನವಾದ ಸಿದ್ಧಾಂತಗಳಿಂದಾಗಿ ನಮ್ಮಲ್ಲಿ ಧ್ವಂದ್ವ ಉಂಟಾಗಿದೆ, ಸಂಶಯ ಉಂಟಾಗಿದೆ, ನಮಗೆ ಅವರಲ್ಲಿ ಸತ್ಯ ಹೇಳುತ್ತಿರುವವರು ಯಾರು? ಮಿಥ್ಯ ನುಡಿಯುತ್ತಿರುವವರು ಯಾರು ತಿಳಿಯದಾಗಿದೆ. ಇದನ್ನು ನೀವೇ ನಮಗೆ ಪರಿಹರಿಸಬೇಕು ಭಂತೆ.
                ಓ ಕಾಲಾಮರೇ, ನೀವು ಸಂಶಯಸ್ತ ವಿಷಯಗಳಲ್ಲಿಯೇ ಸಂಶಯಪಡುತ್ತಿರುವಿರಿ, ದ್ವ್ವಂದ್ವವುಳ್ಳ ವಿಷಯದಲ್ಲೇ ಧ್ವಂದ್ವಪಡುತ್ತಿರುವಿರಿ. ಸಂಶಯಸ್ತ ವಿಷಯಗಳಲ್ಲಿ ದ್ವಂದ್ವತೆ ಆಗುವುದು.
                ಈಗ ನೋಡಿ ಕಾಲಾಮರೇ, ಸುದ್ದಿಗಳಿಗಾಗಲಿ ಅಥವಾ ಸಂಪ್ರದಾಯಕ್ಕಾಗಲಿ ಅಥವಾ ಅಸಂಪ್ರದಾಯ ಸಿದ್ಧಾಂತಕ್ಕಾಗಲಿ ನಂಬದಿರಿ. ಅದರಲ್ಲೇ ದಾರಿ ತಪ್ಪಬೇಡಿ. ಧಮ್ಮಗ್ರಂಥಗಳಲ್ಲಿದೆ ಎಂದಾಗಲಿ, ಅಥವಾ ತರ್ಕ ಸಮ್ಮತ ಎಂದಾಗಲಿ, ಊಹೆಗೆ ನಿಲುಕುತ್ತದೆ ಎಂದಾಗಲಿ, ಪಯರ್ಾಯಾಲೋಚಿಸಿ ಸಿದ್ಧವಾದುದೆಂದಾಗಲಿ, ಚಿಂತನೆ ಮಾಡಿ ಸಿದ್ಧವಾದ ಸಿದ್ಧಾಂತ ಎಂದಾಗಲಿ, ಚೆನ್ನಾಗಿ ಕಾಣಿಸುತ್ತದೆ ಎಂದಾಗಲಿ, ಇದು ಗೌರವಾರ್ಹ ಗುರುವಿನಿಂದ ಬಂದಿದೆ ಎಂದಾಗಲಿ ನಂಬಬೇಡಿ. ಆದರೆ ಕಾಲಾಮರೇ, ಯಾವಾಗ ನೀವೇ ಚಿಂತನೆ ಮಾಡಿದಾಗ, ನಿಮಗೆ ಇವು ಅನರ್ಥಕಾರಿ, ನಿಂದನೀಯ, ಜ್ಞಾನಿಗಳಿಂದ ನಿಷೇಧಿಸಲ್ಪಡುತ್ತದೆ ಎಂದು ಗೊತ್ತಾದಾಗ, ಇವುಗಳ ಪಾಲನೆಯಿಂದ ದುಃಖವಾಗುತ್ತದೆ ಎಂದು ಅರಿವಾದಾಗ ಅದನ್ನು ತಿರಸ್ಕರಿಸಿ.
                ಈಗ ಕಾಲಾಮರೇ, ಒಬ್ಬನಲ್ಲಿ ಲೋಭ ಉಂಟಾದಾಗ (ಅಥವಾ ದ್ವೇಷ ಉಂಟಾದಾಗ... ಅಥವಾ ಮೋಹ ಉಂಟಾದಾಗ) ಅದು ಆತನಿಗೆ ಲಾಭ ತರುತ್ತದೆಯೋ ಅಥವಾ ನಷ್ಟವನ್ನು ಉಂಟುಮಾಡುತ್ತದೆಯೋ?
                ಅದು ನಷ್ಟವನ್ನು, ಹಾನಿಯನ್ನು ತರುತ್ತದೆ ಭಗವಾನರೇ.
                ಕಾಲಾಮರೇ, ಈಗ ಆತನು ಲೋಭಿಯಾದಾಗ (ದ್ವೇಷಿಯಾದಾಗ/ಮೋಹಿಯಾದಾಗ) ಆತನ ಚಿತ್ತವು ನಿಯಂತ್ರಣ ತಪ್ಪುತ್ತದೆ, ಆಗ ಆತನು ಜೀವಹತ್ಯೆ, ಕಳ್ಳತನ, ವ್ಯಭಿಚಾರ, ಸುಳ್ಳು, ಮದ್ಯಪಾನವೆಲ್ಲಾ ಮಾಡುತ್ತಾನೆ. ಹಾಗೆಯೇ ಪರರಿಗೂ ಪ್ರೋತ್ಸಾಹ ನೀಡುತ್ತಾನೆ. ಈ ರೀತಿಯಾಗಿ ಭವಿಷ್ಯದ ದೀರ್ಘ ದುಃಖ ಉಂಟಾಗಲು ಕಾರಣಕರ್ತನಾಗುತ್ತಾನೆ ಅಲ್ಲವೇ?
                ಹೌದು ಭಗವಾನರೇ.
                ಈಗ ನಿಮಗೆ ಹೇಗೆ ಅನಿಸುತ್ತದೆ ಕಾಲಾಮರೇ, ಇವು ಲಾಭಕಾರಿಯೋ ಅಥವಾ ನಷ್ಟಕಾರಿಯೋ?
                ಇವು ನಷ್ಟಕಾರಿ ಭಗವಾನ್.
                ಇವು ನಿಂದನೀಯವೋ ಅಥವಾ ಅಲ್ಲವೋ.
                ನಿಂದನೀಯವಾದುದು ಭಗವಾನ್.
                ಇವು ಜ್ಞಾನಿಗಳಿಂದಲೇ ನಿಷೇಧಿಸಲ್ಪಡುವುದು ಅಲ್ಲವೇ?
                ಹೌದು ಭಗವಾನ್.
                ಇವುಗಳನ್ನು ಪರಿಪಾಲಿಸಿದಾಗ ದೀರ್ಘಕಾಲ ದುಃಖ, ನಷ್ಟ ಉಂಟಾಗುತ್ತದೆ ಅಲ್ಲವೇ?
                ಹೌದು ಭಂತೆ.
                ಈಗ ಕಾಲಾಮರೇ, ಈ ಲೋಭದಿಂದ (ದ್ವೇಷದಿಂದ ಅಥವಾ ಮೋಹದಿಂದ) ಮುಕ್ತನಾದರೆ ಆತನಿಗೆ ಲಾಭವಾಗುತ್ತದೋ ಅಥವಾ ನಷ್ಟವಾಗುತ್ತದೋ?
                ಲಾಭವಾಗುತ್ತದೆ ಭಂತೆ.
                ಈಗ ಇಂತಹ ಮನುಷ್ಯನು ಲೋಭದಿಂದ, ದ್ವೇಷದಿಂದ ಮತ್ತು ಮೋಹದಿಂದ ಮುಕ್ತನಾದಾಗ, ಆತನು ಜೀವಹತ್ಯೆಯಾಗಲಿ, ಕಳ್ಳತನವಾಗಲಿ, ವ್ಯಭಿಚಾರವಾಗಲಿ, ಸುಳ್ಳಾಗಲಿ, ನುಡಿಯಲಾರನು, ಮದ್ಯ ಸೇವಿಸಲಾರನು. ಹಾಗೆಯೇ ಪರರಿಗೂ ಆತನು ದಾರಿ ತಪ್ಪಿಸಲಾರನು. ಹೀಗಿರುವಾಗ ಆತನಿಗೆ ದುಃಖವಿಲ್ಲದೆ, ನಷ್ಟವಿಲ್ಲದೆ ಸುಖಿಯಾಗಿ ಇರುತ್ತಾನೆ ಅಲ್ಲವೆ.
                ಹೌದು ಭಂತೆ.
                ಈಗ ಕಾಲಾಮರೇ, ನೀವೇನು ಯೋಚಿಸುವಿರಿ? ಲೋಭದಿಂದ, ದ್ವೇಷದಿಂದ ಮತ್ತು ಮೋಹದಿಂದ ಮುಕ್ತನಾಗುವುದು ಲಾಭಕಾರಿಯೋ ಅಥವಾ ನಷ್ಟಕಾರಿಯೋ?
                ಲಾಭಕಾರಿ ಭಂತೆ.
                ಇವು ನಿಂದನೀಯವೋ ಅಥವಾ ಅಲ್ಲವೋ?
                ಇವು ನಿಂದನೀಯವಲ್ಲ.
                ಜ್ಞಾನಿಗಳಿಂದ ನಿರಾಕರಿಸಲ್ಪಡುತ್ತದೋ ಅಥವಾ ಪ್ರಶಂಸಿಸಲ್ಪಡುತ್ತದೋ?
                ಪ್ರಶಂಸಿಲ್ಪಡುತ್ತದೆ ಭಂತೆ.
                ಹೀಗೆ ಪರಿಪಾಲಿತವಾದಾಗ ಅವು ಸುಖಕಾರಿಯೋ ಅಥವಾ ಅಲ್ಲವೋ.
                ಸುಖಕಾರಿ ಭಂತೆ, ಸುಖವನ್ನು ತರುತ್ತದೆ.
                ಈಗ ಕಾಲಾಮರೇ, ಯಾವ ಆರ್ಯ ಶ್ರಾವಕನು ಹೀಗೆ ಲೋಭದಿಂದ, ದ್ವೇಷದಿಂದ ಮತ್ತು ಮೋಹದಿಂದ ಮುಕ್ತನಾದಾಗ ಆತನು ದಿಗ್ಭ್ರಮೆಪಡುವುದಿಲ್ಲ. ಬದಲಾಗಿ ಸ್ವನಿಯಂತ್ರಣವುಳ್ಳವನಾಗುತ್ತಾನೆ ಮತ್ತು ಸ್ಮೃತಿವಂತನಾಗುತ್ತಾನೆ ಮತ್ತು ಚಿತ್ತದಲ್ಲಿ ಮೈತ್ರಿಯಿಂದ ಕೂಡಿರುತ್ತಾನೆ, ಕರುಣೆಯಿಂದ ಕೂಡಿರುತ್ತಾನೆ, ಮುದಿತಾದಿಂದ ಕೂಡಿರುತ್ತಾನೆ, ಸಮಚಿತ್ತತೆಯಿಂದ ಕೂಡಿರುತ್ತಾನೆ. ಇದೇರೀತಿಯ ಭಾವನೆಯಿಂದ ಆತನು ಒಂದು ದಿಕ್ಕಿಗೆ ಹರಡುತ್ತಾನೆ. ಹಾಗೆಯೇ ಎಲ್ಲಾ ದಿಕ್ಕುಗಳಿಗೂ ಹರಡುತ್ತಾನೆ. ಈ ರೀತಿಯಾಗಿ ಆರ್ಯಶ್ರಾವಕನು ಚಿತ್ತದಿಂದ, ದ್ವೇಷ, ವಿರೋಧ, ಚಿತ್ತಕ್ಲೇಶಗಳಿಂದ ಮುಕ್ತನಾಗಿ, ಪರಿಶುದ್ಧನಾಗುತ್ತಾನೆ. ಅಂತಹುದರಿಂದ ಈ ಜನ್ಮದಲ್ಲೇ ನಾಲ್ಕು ಸಮಾಧಾನವನ್ನು ಕಾಣಬಹುದು.
1.            ಪರಲೋಕವಿದ್ದರೆ ಕರ್ಮಫಲವು ಸಿಗುವುದಿದ್ದರೆ ನಮ್ಮ ಒಳ್ಳೆಯ ಕಾರ್ಯಗಳನ್ನು ಮಾಡಿರುವೆ, ನನಗೆ ಸುಗತಿಯೇ ಸಿಗುವುದು.
2.            ಪರಲೋಕವಿಲ್ಲದಿದ್ದರೆ, ಕರ್ಮಫಲ ಸಿಗದಿದ್ದರೆ ಈ ಜನ್ಮದಲ್ಲೇ ದ್ವೇಷರಹಿತನಾಗಿ, ದುಃಖರಹಿತನಾಗಿ, ಕ್ಲೇಷರಹಿತನಾಗಿ ಸುಖಿಯಾಗಿ ಇರುತ್ತೇನೆ.
3.            ಕರ್ಮಫಲ ಇರುವುದಾದರೆ, ನಾನು ಹಿಂದೆ ಪಾಪ ಮಾಡಿದ್ದರೂ, ಈಗ ನಾನು ಯಾರ ಅಹಿತವನ್ನು ಬಯಸುತ್ತಿಲ್ಲ. ಹೀಗಿರುವಾಗ ದುಃಖವು ನನಗೆ ಹೇಗೆತಾನೆ ತಟ್ಟಿತು.
4.            ಕರ್ಮಫಲ ಸಿಗುವುದಾದರೆ, ನನ್ನಿಂದ ಯಾವ ಪಾಪವು ನಡೆದಿಲ್ಲ, ಹೀಗೆ ಎರಡು ರೀತಿಯಲ್ಲಿ ಪರಿಶುದ್ಧನಾಗಿಯೇ ಇರುವೆನು.
                ಹೀಗೆ ಕಾಲಾಮರೆ, ಆ ಆರ್ಯಶ್ರಾವಕನು ಚಿತ್ತಕ್ಲೇಷಗಳಿಂದ, ದ್ವೇಷದಿಂದ, ವಿಮುಕ್ತನಾಗಿ ನಿರ್ಮಲನಾಗಿ ಈ ಜೀವಿತದಲ್ಲೇ ಈ ನಾಲ್ಕು ಸಮಾಧಾನ ಪಡೆಯುತ್ತಾನೆ.
                ಅದ್ಭುತ ಭಂತೆ, ನಾವು ಇಂದಿನಿಂದ ತಮಗೆ, ಧಮ್ಮಕ್ಕೆ ಮತ್ತು ಸಂಘಕ್ಕೆ ಶರಣು ಹೋಗುವೆವು. ಭಗವಾನರು ನಮ್ಮನ್ನು ತಮ್ಮ ಉಪಾಸಕರೆಂದು ಸ್ವೀಕರಿಸಲಿ. ನಾವು ಜೀವಿತ ಪರ್ಯಂತ ತ್ರಿಶರಣು ಹೋಗುವೆವು.
                ಕಾಲಾಮ ಸುತ್ತದಲ್ಲಿ ನಾವು ಅರಿಯುವಂತಹುದು ಏನೆಂದರೆ ಸಿದ್ಧಾಂತಗಳಿಗೆ, ಸಂಪ್ರದಾಯಕ್ಕೆ, ಅಸಂಪ್ರದಾಯಕ್ಕೆ, ತರ್ಕ, ಊಹೆ, ಸುದ್ದಿಗಳಿಗೆ, ಪೂಜ್ಯ ಗ್ರಂಥಗಳಿಗೆ, ಪೂಜ್ಯ ಗುರುಗಳಿಗೂ ನಂಬಬಾರದು. ಏಕೆಂದರೆ ನಾವು ಕಂಡಂತೆ ಇವುಗಳಲ್ಲಿ ಎಷ್ಟೋ ತಪ್ಪಿರುತ್ತದೆ, ಅಹಿತ ತರುವಂತಹುದು ಇರುತ್ತದೆ. ಆದ್ದರಿಂದ ನಾವು ವಿಚಾರಶೀಲರಾಗಿ ಸತ್ಯವನ್ನೇ ಸ್ವೀಕರಿಸಬೇಕು.
                ಎರಡನೆಯ ವಿಷಯ ಏನೆಂದರೆ ಭಗವಾನರ ಬೋಧನೆಯಲ್ಲಿ ಇಲ್ಲಿ ಲೋಭರಹಿತ, ದ್ವೇಷರಹಿತ ಮತ್ತು ಮೋಹರಹಿತರಾಗಿರುವುದು ಮತ್ತು ಮೈತ್ರಿ, ಕರುಣೆ, ಮುದಿತಾ ಮತ್ತು ಸಮಚಿತ್ತತೆಯಿಂದ ಕೂಡಿರುವುದು.

                ನಿಜಕ್ಕೂ ಈ ರೀತಿಯ ಶ್ರೇಷ್ಠ ಜೀವನದಿಂದಾಗಿ ಇಹ ಮತ್ತು ಪರರಲ್ಲಿಯೂ ಸಹಾ ಸುಖ ಪ್ರಾಪ್ತಿಯೇ ಆಗುವುದು.

No comments:

Post a Comment