Saturday 17 October 2015

upasiva manava pucca of suttanipata in kannada 6. ಉಪಸೀವ ಮಾಣವ ಪುಚ್ಚ (ಉಪಸೀವ ಮಾಣವನ ಪ್ರಶ್ನಾವಳಿ)

6. ಉಪಸೀವ ಮಾಣವ ಪುಚ್ಚ (ಉಪಸೀವ ಮಾಣವನ ಪ್ರಶ್ನಾವಳಿ)
1.            ಉಪಸೀವ- ಹೇ ಶ್ರೇಷ್ಠರೇ ! ನಾನು ಒಬ್ಬೊಂಟಿಯಾಗಿದ್ದೇನೆ. ಇದು ನಿಜಕ್ಕೂ ದೊಡ್ಡ ಪ್ರವಾಹವಾಗಿದೆ. ಸಹಾಯದ ಹೊರತು ಇದನ್ನು ನಾನು ದಾಟಲು ಸಾಮರ್ಥನಾಗಿಲ್ಲ. ಹೇ ಸರ್ವವನ್ನು ಅರಿಯುವಂತಹ ಸಮಂತ ಚಕ್ಷುವಂತರೇ, ಯಾವುದಾದರೂ ಅವಲಂಬನೆ ತಿಳಿಸಿ. ಅದರ ಸಹಾಯದಿಂದ ನಾನು ಈ ಪ್ರವಾಹದಿಂದ ಪಾರಾಗುವಂತಾಗಲಿ.
2.            ಭಗವಾನರು- ಅಕಿಂಚಾಯತನವನ್ನು (ಏನೂ ಇಲ್ಲ ಎಂಬ ಸ್ಥಿತಿಯನ್ನು) ನೋಡುತ್ತಾ, ಸ್ಮೃತಿವಂತನಾಗು. ಏನೂ ಇಲ್ಲ (ಶೂನ್ಯ) ಎಂಬುದನ್ನು ಅವಲಂಬನೆ ಮಾಡುತ್ತಾ ಈ ಸಂಸಾರದ ಪ್ರವಾಹವನ್ನು ದಾಟಿಹೋಗು. ಕಾಮಗಳನ್ನು ತ್ಯಾಗಮಾಡಿ, ಸಂಶಯಗಳಿಂದ (ಕಥನಗಳಿಂದ) ವಿರತನಾಗು. ಅಹೋರಾತ್ರಿ ತಣ್ಹಾ ಕ್ಷಯದಲ್ಲಿ ತೊಡಗುವಂತಾಗು.
3.            ಉಪಸೀವ- ಯಾವಾಗ ಒಬ್ಬನು ಕಾಮಗಳಿಂದ ವಿರಕ್ತನಾಗುತ್ತಾನೋ, ಯಾರು ಅಕಿಂಚಾಯತನದ ಸಹಾಯದಿಂದ ಅನ್ಯವೆಲ್ಲವನ್ನು ತ್ಯಾಗ ಮಾಡಿದ್ದಾನೋ, (7) ಸಂಜ್ಞಾ ವಿಮೋಕ್ಖಗಳಲ್ಲಿ ಪರಮ ವಿಮುಕ್ತವಾದ ಅಕಿಂಚಾಯತನದಲ್ಲಿ ವಿಮುಕ್ತನಾಗಿರುತ್ತಾನೋ ಅಂತಹವನು ಅಲ್ಲಿಗೆ ಹೋಗದೆಯೇ ಇರಬಲ್ಲನೇ?
4.            ಭಗವಾನರು- ಯಾರು ಸರ್ವ ಕಾಮನೆಗಳಿಂದ ವಿರಕ್ತನೋ, ಯಾರು ಅಕಿಂಚಾಯತನದ ಸಹಾಯದಿಂದ ಬೇರೆಲ್ಲವನ್ನು ತ್ಯಾಗ ಮಾಡಿರುವನೋ (7) ಸಂಜ್ಞಾ ವಿಮೋಕ್ಖಗಳಲ್ಲೇ ಪರಮೋತ್ತಮವಾದ ಅಕಿಂಚಾಯತನದಲ್ಲಿ ವಿಮುಕ್ತನಾಗಿರುವನೋ, ಅಂತಹವ ಅಲ್ಲಿಗೆ ಹೋಗದೆಯೂ ಇರಬಲ್ಲನು.
5.            ಉಪಸೀವ- ಹೇ ಸಮಂತ ಚಕ್ಷುವಂತರೇ, ಆತನು ಅಲ್ಲಿಗೆ ಹೋಗದೆಯೇ ಅನೇಕ ವರ್ಷಗಳವರೆಗೆ ಇರಬಲ್ಲವನಾದರೆ, ಅಂತಹವನ ವಿಞ್ಞಾನವು (ಅರಿವು) ನಿರೋಧವಾಗುವುದೇ? ಹಾಗು ಅಲ್ಲಿಯೇ ಆತನು ವಿಮುಕ್ತನಾಗುವನೇ?
6.            ಭಗವಾನರು- ಹೇಗೆ ಮಿನುಗುತ್ತಿರುವ ಜ್ವಾಲೆಯು ವಾಯು ವೇಗದಿಂದ ಆರಿಹೋಗುವುದೋ, ಪುನಃ ಕಾಣುವುದಿಲ್ಲವೋ, ಅದೇರೀತಿಯಲ್ಲಿ ಮುನಿಯು ನಾಮಕಾಯ (ಮನಸ್ಸಿನಿಂದ) ದಿಂದ ವಿಮುಕ್ತನಾಗಿ ಆರಿಹೋಗುತ್ತಾನೆ. ಪುನಃ ಯಾವುದೇ ರೀತಿಯಲ್ಲೂ ಕಾಣುವುದಿಲ್ಲ.
7.            ಉಪಸೀವ- ಈ ರೀತಿಯಲ್ಲಿ ಆರಿಹೋಗಿರುವವನು ಪುನಃ ಉದಯಿಸುವುದಿಲ್ಲವೇ ಅಥವಾ ಉದಯಿಸಿ ಶಾಶ್ವತನಾಗುವನೇ, ನಿತ್ಯ ಆರೋಗ್ಯವಾಗಿರುವನೇ ಅಥವಾ ಇಲ್ಲದೆಯೇ ಹೋಗುವನೇ? ಹೇ ಮುನಿಗಳೇ, ತಾವೇ ಧಮ್ಮವನ್ನು ಸಾಕ್ಷಾತ್ಕರಿಸಿರುವುದರಿಂದಾಗಿ ತಾವೇ ವಿವರಿಸಿ, ನನಗೆ ಸ್ಪಷ್ಟಪಡಿಸುವಂತಾಗಲಿ.
8.            ಭಗವಾನರು- ಆರಿಹೋಗಿರುವುದರ ಬಗ್ಗೆ ಯಾವುದೇ ಪ್ರಮಾಣವಿಲ್ಲ (ಅಳೆಯಲಾಗುವುದಿಲ್ಲ), ಯಾವುದರಿಂದ (ದೇಹ-ಮನಸ್ಸು) ಆತನನ್ನು ತಿಳಿಸಲಾಗುತ್ತಿತ್ತೋ, ಅದ್ಯಾವುದೂ ಅಲ್ಲಿಲ್ಲ. ಸರ್ವ ಧಮ್ಮಗಳು ಶಾಂತವಾದ ಮೇಲೆ ವಾದಪಥವೂ (ವಿವರಣೆ) ಶಾಂತವಾಗುತ್ತದೆ.

ಉಪಸೀವ ಮಾಣವ ಪ್ರಶ್ನಾವಳಿ ಮುಗಿಯಿತು.

No comments:

Post a Comment