Friday 29 May 2015

maagandiya sutta in kannada 9. ಮಾಗಂದಿಯ ಸುತ್ತ

9. ಮಾಗಂದಿಯ ಸುತ್ತ

                (ಮಾಗಂದಿಯ ಬ್ರಾಹ್ಮಣನು ಭಗವಾನರೊಂದಿಗೆ ತನ್ನ ಪುತ್ರಿಯ ವಿವಾಹದ ಪ್ರಸ್ತಾಪ ಮಾಡಿದನು. ಭಗವಾನರು ಆಕೆಯನ್ನು ಅಸ್ವೀಕಾರ ಮಾಡಿದ ನಂತರ ದೃಷ್ಟಿವಾದದ ಸಂಬಂಧವಾಗಿ ಭಗವಾನರೊಂದಿಗೆ ಪ್ರಶ್ನೆಗಳನ್ನು ಕೇಳಿದನು. ಭಗವಾನರು ದೃಷ್ಟಿವಾದದ ಖಂಡನೆ ಮಾಡಿ ನಿಬ್ಬಾಣ ಪ್ರಾಪ್ತಿಯ ಮಾರ್ಗವನ್ನು ತಿಳಿಸಿದರು.)
1.            ಭಗವಾನರು - ತೃಷ್ಣಾ, ಅರತಿ ಮತ್ತು ರಾಗವನ್ನು ನೋಡಿಯೂ ನನ್ನಲ್ಲಿ ಮೈಥುನದ ಇಚ್ಛೆ ಉಂಟಾಗಲಿಲ್ಲ. ಹಾಗಿರುವಾಗ ಮಲಮೂತ್ರದಿಂದಲೇ ಪೂರ್ಣವಾಗಿರುವ ಇದು ಏನು? (ನಿನ್ನ ಕನ್ಯೆಯ ಬಗ್ಗೆ ಏನು ಹೇಳಲಿ).
2.            ಮಾಗಂಧಿಯ - ಈಕೆಯಂತಹ ಸ್ತ್ರೀರತ್ನವನ್ನು ಬಹಳ ರಾಜರು ಪಡೆಯಲು ಇಚ್ಛಿಸುತ್ತಾರೆ. ತಾವು ಬಯಸುವುದಿಲ್ಲವಾದರೆ ನನಗೆ ದೃಷ್ಟಿಯ ಬಗ್ಗೆ, ಶೀಲವ್ರತದ ಬಗ್ಗೆ, ಜೀವನ ಹಾಗು ಪುನರ್ಜನ್ಮದಲ್ಲಿ ತಮ್ಮ ವಿಚಾರವೇನು ತಿಳಿಸಿ.
3.            ಭಗವಾನರು- ಧರ್ಮವನ್ನು ಚೆನ್ನಾಗಿ ಅರಿತು ನಾನು ಯಾವುದೇ ಮತವನ್ನು ಸ್ವೀಕರಿಸುವುದಿಲ್ಲ. ದೃಷ್ಟಿಗಳ ದುಷ್ಪರಿಣಾಮಗಳನ್ನು ನೋಡಿ, ಅದರಲ್ಲಿ ಆಸಕ್ತನಾಗದೆ ನಾನು ಪರಮ ಶಾಂತಿಯನ್ನು ಅನ್ವೇಷಿಸಿದೆ ಮತ್ತು ಅದನ್ನು ಪಡೆದೆ.
4.            ಮಾಗಂಧಿಯ - ಹೇ ಮುನಿ! ತಾವು ಅನುಗ್ರಹಪೂರ್ವಕವಾಗಿ ಕಲ್ಪಿತ ಮತಗಳ ಸಂಬಂಧವಾಗಿ ತಮ್ಮ ನಿರ್ಣಯವನ್ನು ತಿಳಿಸಿ. ಧೀರನಾದ ತಮ್ಮಿಂದ ಯಾವ ಪರಮಶಾಂತಿ ಪ್ರಾಪ್ತವಾಗಿದೆಯೋ ಅದನ್ನು ತಾವು ಹೇಗೆ ತಿಳಿಸುವಿರಿ.
5.            ಭಗವಾನರು - ದೃಷ್ಟಿಯಿಂದಾಗಲಿ, ಶ್ರುತಿಯಿಂದಾಗಲಿ, ಜ್ಞಾನದಿಂದಾಗಲಿ, ಶೀಲವ್ರತದಿಂದಾಗಲಿ ಮತ್ತು ಅಶ್ರುತಿಯಿಂದಾಗಲಿ, ಅಜ್ಞಾನದಿಂದಾಗಲಿ ಮತ್ತು ಅಶೀಲವ್ರತದಿಂದಾಗಲಿ, ಶುದ್ಧಿ ಆಗುವುದಿಲ್ಲ. ಇವುಗಳನ್ನು ತೊರೆದು ಇದರಲ್ಲಿ ಆಸಕ್ತನಾಗದೆ, ಶಾಂತ ಪುರುಷನು ಎಲ್ಲಿಯೂ ಲಿಪ್ತನಾಗದೆ, ಪುನರ್ಜನ್ಮದ ಇಚ್ಛೆ ಮಾಡದಿರಲಿ.
6.            ಮಾಗಂಧಿಯ - ಒಂದುವೇಳೆ, ದೃಷ್ಟಿ, ಶ್ರುತಿ, ಶೀಲವ್ರತದಿಂದ ಅಥವ ಆಶ್ರುತಿ, ಅಜ್ಞಾನ ಮತ್ತು ಅಶೀಲವ್ರತದಿಂದ ಶುದ್ಧಿ ಇಲ್ಲವಾದರೆ ನಾನು ಇಂತಹ (ತಮ್ಮ) ಧಮ್ಮವನ್ನು ಭ್ರಮಾತ್ಮಕ ಎಂದು ನಂಬುತ್ತೇನೆ. ಏಕೆಂದರೆ ಕೆಲವರು ದೃಷ್ಟಿಯಿಂದ ಶುದ್ಧಿ ಹೇಳುವರು.
7.            ಭಗವಾನರು - ದೃಷ್ಟಿಯಲ್ಲಿ ಆಶ್ರಿತನಾಗಿ, ಆಸಕ್ತನಾಗಿ ಮತ್ತು ಮೋಹಿತನಾಗಿ ನೀನು ಪ್ರಶ್ನಿಸುತ್ತಿರುವೆ. ನಿನಗೆ ಪರಮಶಾಂತಿಯ ಅಣು ಮಾತ್ರವೂ ಜ್ಞಾನವಿಲ್ಲ. ಆದ್ದರಿಂದಲೇ ನೀನು ಧಮ್ಮವನ್ನು ಭ್ರಮಾತ್ಮಕವೆಂದು ಅರಿಯುತ್ತೀಯೆ.
8.            ಯಾರು ತನ್ನನ್ನು ಪರರಿಗೆ ಸಮಾನವಾಗಿ ಅವರಿಗಿಂತ ಶ್ರೇಷ್ಠ ಅಥವಾ ನೀಚನೆಂದು ಅರಿಯುವನೋ ಅದರ ಕಾರಣದಿಂದಲೇ ವಿವಾದದಲ್ಲಿ ಬೀಳುತ್ತಾನೆ. ಯಾರು ಈ ಮೂರು ಅವಸ್ಥೆಯಲ್ಲೂ ಅವಿಚಲಿತರಾಗಿರುತ್ತಾರೋ, ಆತನಿಗೆ ಸಮಾನತೆಯ ಅಥವಾ ಉತ್ತಮತೆಯ ಯೋಚನೆಯೂ ಸಹಾ ಇರುವುದಿಲ್ಲ.
9.            ಯಾರಲ್ಲಿ ಸಮಾನತೆಯ ಅಥವಾ ವಿಷಮತೆಯ ಯೋಚನೆ ಇರುವುದಿಲ್ಲವೋ, ಆ ಬ್ರಾಹ್ಮಣನು ಯಾರಿಗಾಗಿ ಸತ್ಯ ಅಥವಾ ಅಸತ್ಯವನ್ನು ಪ್ರತಿಪಾದಿಸಲು ಹರಟೆ ಮಾಡಬೇಕು? ಆತನು ಯಾರೊಂದಿಗೆ ವಿವಾದವನ್ನು ಮಾಡುತ್ತಾನೆ?
10.          ಗೃಹವನ್ನು ತ್ಯಜಿಸಿ ಗೃಹತ್ಯಾಗಿಯಾಗಿ ಸಂಚರಿಸುತ್ತಿರುವವನಾದ ಮುನಿಯು ಗ್ರಾಮದಲ್ಲಿ ಬೆರೆಯದೆ ಕಾಮಭೋಗರಹಿತನಾಗಿ, ಪುನರ್ಜನ್ಮದ ಇಚ್ಛೆ ಮಾಡದವನು, ಜನರೊಂದಿಗೆ ವಿವಾದದ ಮಾತು ಆಡದಿರಲಿ.
11.          ಉತ್ತಮ ಪುರುಷನು ಯಾವ ದೃಷ್ಟಿಗಳಿಂದ ಬೇರೆಯಾಗಿ ವಾಸಿಸುತ್ತಿರುವನೋ, ಆತನು ಅದನ್ನೇ ಹಿಡಿದು ವಿವಾದವನ್ನು ಮಾಡದಿರಲಿ. ಯಾವರೀತಿ ಜಲದಲ್ಲಿ ಉತ್ಪನ್ನವಾಗುವ ಕಂಟಕಮಯ ಕಮಲವು ಜಲ ಹಾಗು ಕೆಸರಿನಿಂದ ಅಲಿಪ್ತವಾಗಿರುವುದೋ ಅದೇರೀತಿ ಶಾಂತಿವಾದಿಯು, ತೃಷ್ಣಾರಹಿತ ಮುನಿಯು ಕಾಮಭೋಗಗಳಿಂದ ಹಾಗು ಸಂಸಾರದಿಂದ ಲಿಪ್ತನಾಗುವುದಿಲ್ಲ.
12.          ಜ್ಞಾನಿ ಪುರುಷನು ಯಾವ ದೃಷ್ಟಿ ಅಥವಾ ವಿಚಾರತೆಯ ಕಾರಣದಿಂದ ಅಭಿಮಾನ ಪಡುವುದಿಲ್ಲವೋ ಮತ್ತು ಆತನು ಅದರಿಂದ ಲಿಪ್ತನಾಗುವುದಿಲ್ಲವೋ, ಆತನು ಯಾವುದೇ ಕರ್ಮವಿಶೇಷ ಅಥವಾ ಶ್ರುತಿಯ ಜಾಲದಲ್ಲಿ ಬೀಳುವುದಿಲ್ಲ. ಏಕೆಂದರೆ ಆತನು ದೃಷ್ಟಿಯ ಅಧೀನನಲ್ಲ.
13.          ಕಾಮಭೋಗದಿಂದ ವಿಮುಕ್ತನಾದ ಮನುಷ್ಯನಿಗೆ ಬಂಧನವೂ ಇಲ್ಲ, ಪ್ರಜ್ಞಾದ್ವಾರ ವಿಮುಕ್ತನಾದವನಿಗೆ ಮೋಹವಿಲ್ಲ. ಯಾರೂ ಕಾಮಭೋಗಗಳಿಂದ ಮತ್ತು ದೃಷ್ಟಿಯಿಂದ ಲಿಪ್ತನೋ ಆತನು ಸಂಘರ್ಷ ಮಾಡುತ್ತಾ ಲೋಕದಲ್ಲಿ ಸಂಚರಿಸುತ್ತಾನೆ.

ಇಲ್ಲಿಗೆ ಮಾಗಂಧಿಯ ಸುತ್ತ ಮುಗಿಯಿತು.

No comments:

Post a Comment